ಲೀಲಾ ಕುಮಾರಿ ತೊಡಿಕಾನರವರ ಕೃತಿ ‘ಹನಿ ಹನಿ ಇಬ್ಬನಿ’ವಿಶ್ಲೇಷಣೆ- ಸಂಗೀತ ರವಿರಾಜ್ ಚೆಂಬು

ಪುಸ್ತಕ ಸಂಗಾತಿ

ಲೀಲಾ ಕುಮಾರಿ ತೊಡಿಕಾನರವರ ಕೃತಿ

‘ಹನಿ ಹನಿ ಇಬ್ಬನಿ’

ವಿಶ್ಲೇಷಣೆ- ಸಂಗೀತ ರವಿರಾಜ್ ಚೆಂಬು

ಲೀಲಾ ಕುಮಾರಿ ತೊಡಿಕಾನ ಇವರ ‘ ಹನಿ ಹನಿ ಇಬ್ಬನಿ ‘ ಕೃತಿ ಹನಿ ಕವಿತೆಗಳ ಗುಚ್ಛ. ಇದರಲ್ಲಿ ಏನಿದೆ? ಏನಿಲ್ಲ ಎಂಬುದನ್ನು ಅವಲೋಕಿಸುವ ಹೊತ್ತಿಗೆ ಇದರಲ್ಲಿ ಎಲ್ಲವೂ ಇದೆ ಎಂಬ ಅರಿವು ಶುರುವಿಟ್ಟುಕೊಳ್ಳುತ್ತದೆ. ಪ್ರೀತಿ, ನೋವು , ನಲಿವು, ನ್ಯಾಯ, ಅನ್ಯಾಯ , ಎಲ್ಲದರ ಮಿಳಿತದೊಂದಿಗೆ ಗಂಭೀರ ಅರ್ಥ ಸ್ಫುರಿಸುವ ಸರಳ ನೀತಿವಂತ ಹನಿಗಳ ನಾಡಿಮಿಡಿತ ಇಲ್ಲಿ ತುಂಬಿದೆ.
ದಾಹ ತೀರದ ಮನುಷ್ಯ /ಮಣ್ಣನ್ನು ಬಗೆದು/ಸಿಕ್ಕಿ ಸಿಕ್ಕಿದ್ದನ್ನು ದೋಚಿದ / ಹಗೆ ಸಾಧಿಸಿದ ಮಣ್ಣು ತನ್ನೊಳಗೆ ಹೂತು ಹಾಕಿತು. ಎಷ್ಟೊಂದು ಅರ್ಥವತ್ತಾದ ಅಕ್ಷರಗಳ ಹನಿ ಪದಗಳು ಇದರಲ್ಲಿ ಅಡಗಿವೆ ಎಂಬುದು  ನಮ್ಮನ್ನು ಚಕಿತಗೊಳಿಸುತ್ತದೆ. ಪ್ರಕೃತಿಯನ್ನು ನಾಶ ಮಾಡಿದ ಮನುಜನಿಗೆ ಪ್ರಕೃತಿ ತಿರುಗೇಟು ಕೊಡುವುದರಲ್ಲಿ ತಪ್ಪಿಲ್ಲ ಎಂಬುದನ್ನು ಚಂದನೆಯ ಸಾಲಿನಲ್ಲಿ  ಹಿಡಿದಿಟ್ಟಿದ್ದಾರೆ. ಚಿಕ್ಕವರು , ದೊಡ್ಡವರೆನ್ನದೆ ಎಲ್ಲ ಜನರಿಗೂ ಸುಲಭದಲ್ಲಿ ಹಿಡಿಸುವಂತಹ , ಸುಲಲಿತವಾಗಿ ಅರ್ಥವಾಗುವಂತಹ ಇಲ್ಲಿನ ಚಿಕ್ಕ ಚಿಕ್ಕ ಪದ್ಯಗಳು ತುಂಬಾ ಸ್ವಾರಸ್ಯಕರವಾಗಿದೆ.  ಪ್ರತಿ ಪದ್ಯದಲ್ಲು ಸಾಮಾಜಿಕ ಕಳಕಳಿಯ, ಸಂಬಂಧಗಳ ಕಾಳಜಿಯ ದೃಷ್ಠಿ ಯಥೇಚ್ಛವಾಗಿದೆ.  ವಾಸ್ತವ ಮತ್ತು ಭ್ರಮೆ ಇವೆರಡರ ನಡುವಿನ ಪೊರೆಯನ್ನು ಹೆಚ್ಚಿನ ಹನಿ ಕವಿತೆಗಳು ಬಿಂಬಿಸಿ ಭೇದಿಸಿ ತೋರಿಸುತ್ತವೆ. ಅದೆಷ್ಟೋ  ಜೀವಗಳನ್ನು / ದಡದಿಂದ ದಡಕ್ಕೆ ಸೇರಿಸಿದ ದೋಣಿಯೊಂದು / ಕಡೆಗೂ ದಡ ಸೇರಲಾಗದೆ ಒಂಟಿಯಾಗಿದೆ.
        ಲಾಲಿತ್ಯವಾಗಿ ಹರವಿಕೊಂಡ ಇಲ್ಲಿನ ಪದ್ಯಗಳ ಪ್ರಾಸಪದಗಳು ನಮ್ಮನ್ನು ತೀವ್ರತರ ಆಕರ್ಷಿಸುತ್ತವೆ . ಬೆಂದ ನೆಲದಲ್ಲಿ ಹೆಚ್ಚು ಫಲವತ್ತತೆ / ನೊಂದು ಬೆಂದ ಹೃದಯದಲ್ಲಿ ಹೆಚ್ಚು ಪ್ರೀತಿಯೊರತೆ. ಹೀಗೆ ಬೆಸೆದಿರುವ ಪ್ರಾಸಪದಗಳು ಓದುವ ಆಸಕ್ತಿಯನ್ನು ಕೆರಳಿಸುತ್ತವೆ . ಚಿಕ್ಕ ಚುಟುಕುಗಳಂತಹ ಪದ್ಯ ಬರೆಯುವುದಕ್ಕೆ ಪ್ರಾಸವೆ ಶಕ್ತಿಶಾಲಿ ಎಂಬುದಿಲ್ಲಿ ಸಾಬೀತಾಗುತ್ತದೆ.  ಪ್ರಾಸವನ್ನು ಸೃಷ್ಟಿಸುವುದು ಒಂದು ಸೃಜನಶೀಲತೆ . ಲೀಲಾರವರಿಗೆ ಹನಿ ಪದ್ಯ ಬರೆಯುವಂತಹ ಹಿಡಿತವಿರುವುದು ಇದರಿಂದಲೇ ತಿಳಿದು ಬರುತ್ತದೆ.
” ಇಪ್ಪತೊಂದನೆ ಶತಮಾನ / ಎತ್ತಲಿಗೋ ನಮ್ಮ ಯಾನ / ಮರೆತಿದ್ದೇವೆ ಸಂಸ್ಕೃತಿ / ಮರೆಯುತ್ತಿದೆ ವಿಕೃತಿ/
ಮೈ ಕೊಡವಿದೆ ಪ್ರಕೃತಿ/ ಪರಿಣಾಮ ಅವನತಿ! ಹೀಗೆ ಪ್ರಾಸಪದ  ಪದ್ಯಗಳ ಸುರಿಮಳೆಯೇ ಇದರಲ್ಲಿದೆ.  ಇಲ್ಲಿನೆಲ್ಲ ಚಿಕ್ಕ ಚಿಕ್ಕ ಪದ್ಯಗಳು ಹೃದ್ಯವಾಗಿ ಹೃದಯಂಗಮವಾಗಿದೆ. ಕೊನೆಯ ಸಾಲು ಓದುವ ತವಕ ಪ್ರತಿ ಪದ್ಯದಲ್ಲು ಕಾಯುವಂತಿದೆ.   ಕೊನೆಯಲ್ಲಿ ಏನೋ ಒಂದು ತೀವ್ರವಾದ ಗಹನವಾದ ವಿಚಾರವನ್ನು ಅಡಗಿಸಿದ   ಪರಿ ಅಭೂತಪೂರ್ಣವಾಗಿದೆ. ” ಲಂಚ ಕೊಟ್ಟರು / ತಲೆ ಬಾಗದೊಂದೆ ಅದುವೇ ಸಾವು / ಅದಕ್ಕೆ ಆದು ರುಚಿಸದ ಕಹಿ ಬೇವು. ಇನ್ನೊಂದು ಚುಟುಕನ್ನು ಗಮನಿಸಿ . ಎಷ್ಟೊಂದು ನೋಟುಗಳು   ಮೌನವಾಗಿವೆ/ ನಮ್ಮ ಸುತ್ತ ಚಿಲ್ಲರೆಗಳ ಸದ್ದಿಗೆ ಬೆರಗಾಗಿ ! ಕವಿತೆಗಿಂತಲು ಇದು ಓದಲು ಮತ್ತು ಅರ್ಥೈಸಿಕೊಳ್ಳಲು ತುಂಬಾ ಸರಳ , ಅಲ್ಲದೆ ಹೆಚ್ಚು  ಅರ್ಥಗರ್ಭಿತ. ಓದಿದಂತೆ ಮನಸ್ಸು ಖುಷಿಗೊಳ್ಳುವ , ಹಿತವಾಗಿ ಮುದ ನೀಡುವ ಹನಿ ಕವಿತೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ. ಓದಿದ ನಂತರವೂ ನಮ್ಮನ್ನು ಭಾವನಾತ್ಮಕವಾಗಿ ಕಾಡುತ್ತಿರುತ್ತವೆ. “ಅದೆಷ್ಟೋ ಹೆಣ್ಣು ಮನಸ್ಸುಗಳ ಸ್ಥಿತಿ ಹೀಗೆಯೇ/ ಡಬ್ಬದಲ್ಲಿ ಬಂಧಿಯಾದ ಸಾಸಿವೆಯಂತೆ / ಒಗ್ಗರಣೆಯಲ್ಲಿ ಸಿಡಿದಾಗಲೆ ಮುಕ್ತಿ.
       ಹೀಗೆ ಕೇವಲ ನಾಲ್ಕೇ ಸಾಲಿನಲ್ಲಿ ಅಪಾರ ಅರ್ಥ ಭರಿಸುವುದು ಖಂಡಿತ ಸುಲಭವಲ್ಲ. ಎಲ್ಲ ಪ್ರಕಾರಗಳಿಗಿಂತಲು ಈ ಚುಟುಕು ಪದ್ಯ ವಿಭಿನ್ನವಾಗಿ ನಿಲ್ಲುತ್ತದೆ. ವಿಭಿನ್ನ ಚಿಂತನೆ , ಪ್ರಾಸ ಇವನ್ನೆಲ್ಲ ಕರಾರುವಕ್ಕಾಗಿ ಹಿಡಿದಿಡುವುದು ಒಂದು ಜಾಣ್ಮೆ. ಈ ಜಾಣ್ಮೆ ಲೀಲಾರವರಿಗೆ ಚಂದನೆ ಸಿದ್ಧಿಸಿದೆ . “ಎಷ್ಟೊಂದು ಮುಖಗಳಿಲ್ಲಿ / ಒಂದೇ ದೇಹಕ್ಕೆ / ಬಣ್ಣಗಳೆಲ್ಲ ಸ್ಪರ್ಧೆಗಿಳಿದಿದೆ ನಟನೆಗೆ.
ಎಲ್ಲ ಹೃದಯಂಗಮ ಪದ್ಯಗಳು ಜೀವನದ ಕಟು ಮತ್ತು ಸಿಹಿ ವಾಸ್ತವದ ಹೊಸ್ತಿಲಲ್ಲಿ ಇದೆ. ಕವಿತೆಯಲ್ಲಿ ಹೇಳಿದಂತೆ ಸಂಪೂರ್ಣ ವಿಷಯವನ್ನು  ಹೇಳಲಾಗದಿದ್ದರು , ಹೇಳಿದ್ದರಲ್ಲಿ ಪೂರ್ಣತೆ ಇರುವ ಸಾಲುಗಳಂತು ಹೌದು. ಚುಟುಕಾಗಿ ಹೇಳುವುದು ಒಂದು ಕಲೆ. ಓದಿದ ಮೇಲೆ ಅದು ವಿಷಾದವೋ, ವೈರುಧ್ಯವೋ , ನೀತಿಯೋ ಏನೋ ಒಂದು  ಅರಿವು ಮನಸ್ಸಿನೊಳಗೆ ಕುಳಿತುಬಿಡುತ್ತದೆ. ಉತ್ತಮ ನಾಗರಿಕರಾಗಿ ಬಾಳುವುದೇ ಗುರಿಯಾ ಗಲಿ ಎಂಬ ಆಶಯವೆ ಚುಟುಕು ಗಳ ಒಳಮನಸ್ಸು. ಕವಯತ್ರಿಯ ಮನಸ್ಸು ಹೇಗಿದೆಯೋ ಅದೇ ಬಿಂಬ ಪದ್ಯದ ಲ್ಲು ಕಾಣುವುದು ಸಹಜ. ಹೀಗೆ ಎಳೆದಷ್ಟು ಮಾರುದ್ಧ  ಹೋಗುವ ವಿಚಾರವನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಹಿರಿಮೆಯ ಕೃತಿ ” ಹನಿ ಹನಿ ಇಬ್ಬನಿ” ಗೆ ಭರಪೂರ ಓದುಗರು ಲಭಿಸಲಿ ಎಂಬುದಾಗಿ ಹಾರೈಸೋಣ.

——————————


 ಸಂಗೀತ ರವಿರಾಜ್ ಚೆಂಬು.

2 thoughts on “ಲೀಲಾ ಕುಮಾರಿ ತೊಡಿಕಾನರವರ ಕೃತಿ ‘ಹನಿ ಹನಿ ಇಬ್ಬನಿ’ವಿಶ್ಲೇಷಣೆ- ಸಂಗೀತ ರವಿರಾಜ್ ಚೆಂಬು

Leave a Reply

Back To Top