ಎಂ. ಆರ್ ಅನಸೂಯ- ಸರಳ ಜೀವನದ ಸಂಕೀರ್ಣತೆ

ಲೇಖನ ಸಂಗಾತಿ

ಸರಳ ಜೀವನದ ಸಂಕೀರ್ಣತೆ

ಎಂ. ಆರ್ ಅನಸೂಯ

ಸರಳ ಜೀವನ ಉನ್ನತ ಚಿಂತನ ‘ ಅನ್ನುವ ಉಕ್ತಿಯೊಂದು ಅದ್ಭುತವಾದ ಕಲ್ಪನೆಯೇ ಸರಿ ಈ ಮಾತನ್ನು ನಾವು ಕೇಳಿದ ಕೂಡಲೇ ಮತ್ತು ಓದಿದ ತಕ್ಷಣ ನಮಗೆಲ್ಲರಿಗೂ ಗಾಂಧೀಜಿಯ ನೆನಪಾಗಲೇ ಬೇಕು. ಕಾರಣ ಅವರು ಸರಳತೆಯ ಸಾಕಾರ ಮೂರ್ತಿಯೇ ಆಗಿದ್ದರು.ಇಲ್ಲದವರಿಗೆ ಅನಿವಾರ್ಯವೇ ಅದ ಸರಳ ಜೀವನವು ಉಳ್ಳವರಿಗೆ ಮಾತ್ರಅದೊಂದು ಬದ್ಧತೆಯೇ ಆದರೂ ಅದಕ್ಕೊಂದು ರೀತಿಯ ಮಾನಸಿಕ ಸಿದ್ಧತೆ ಅಗತ್ಯ. ಸರಳ ಜೀವನ ನಡೆಸುವ ಸಿರಿವಂತರನ್ನು ‘ ಜುಗ್ಗ , ಜಿಪುಣ ‘ ಎಂದು ಅಪಹಾಸ್ಯ ಮಾಡಿಕೊಂಡು ಮಾತನಾಡುವವರನ್ನು ನಾವೆಲ್ಲ ನೋಡಿದ್ದೇವೆ

ಬಡವನು ನಾನು ಸರಳ ಜೀವನ ನಡೆಸಲು ಇಷ್ಟಪಡುತ್ತೇನೆ ಎಂದರೆ ಕೇಳಿದವರು ಲೇವಡಿ ಮಾಡುತ್ತಾರೆ. ಏಕೆಂದರೆ ಅಲ್ಲಿ ಅವನಿಗೆ ಅದನ್ನು ಬಿಟ್ಟರೆ ಗತ್ಯಂತರವಿಲ್ಲವೆಂಬ ತಿಳಿವಳಿಕೆ. ಇದು ಬಹುಮಟ್ಟಿಗೆ ನಿಜವೇ ಆದರೂ ಕೆಲವರಾದರೂ ಸರಳ ಜೀವನದಲ್ಲಿ ಸ್ವರ್ಗ ಕಾಣುವವರು ಇದ್ದಾರೆಂದರೆ ಇದ್ದದ್ದರಲ್ಲೇ ತೃಪ್ತಿಯಾಗಿ ಬದುಕುವಂಥ ಅವರ ಮನಸ್ಥಿತಿಯೇ ಕಾರಣ ದುರಾಸೆಯಿಲ್ಲದ ಅಲ್ಪತೃಪ್ತರೆಂದರೆ ಅವರೇ .ಸರಳತೆಯ ಮಾತುಗಳನ್ನಾಡುವುದು ಬಹು ಸುಲಭವೇ ಆದರೂ ಅದರ ಅನುಷ್ಟಾನದಲ್ಲಿ ಜಟಿಲತೆಯಿದೆ. ಗಾಂಧೀಜಿಯವರ ಸರಳ ಜೀವನವನ್ನು ಮೆಚ್ಚಿದರೂ ಅದನ್ನು ಅನುಸರಿಸುವಲ್ಲಿ ನಾವು ವಿಫಲರಾಗಿದ್ದೇವೆ ಕಾರಣ ಸರಳ ಜೀವನದ ಸಂಕೀರ್ಣತೆ ಈ ಸರಳ ಜೀವನವೆನ್ನುವುದು ಅಂತರ್ಗತವಾಗಿ ಸಹಜವಾಗಿರ ಬೇಕೇ ಹೊರತು ತೋರಿಕೆಯ ಚಟವಾಗಬಾರದು . ಇಂತಹ ಸರಳ ಜೀವನಕ್ಕೆ ಅದೆಷ್ಟು ಆಯಾಮಗಳಿವೆ.

ಸರಳ ಜೀವನದ ಅನುಷ್ಠಾನದಲ್ಲಿ ಸಮಷ್ಟಿಯ ಒಳಿತಿದೆ. ಸರಳ ಜೀವನದಲ್ಲಿ ಅನಗತ್ಯವಾದ , ಮಿತಿ ಮೀರಿದ ಹಾಗೂ ಆಡಂಬರವೆನಿಸುವ ಯಾವುದರ ಬಳಕೆಯೂ ಇರುವುದಿಲ್ಲ ಏಕೆಂದರೆ ಪ್ರಕೃತಿ ನಮ್ಮೆಲ್ಲ ಅಗತ್ಯಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ ಈಗ ನಮ್ಮೆಲ್ಲರ ನಿತ್ಯ ಜೀವನದ ಶೈಲಿಯನ್ನೇ ಗಮನಿಸಿ ಹೇಳ ಬೇಕೆಂದರೆ ನಾವು ಚಿಕ್ಕವರಿದ್ದಾಗ ಇಡೀ ಮನೆಗೆ ಹಿತ್ತಲ ಕಡೆ ಪಾತ್ರೆ ತೊಳೆಯುವ ಕಟ್ಟೆಯ ಬಳಿ ಇರುತ್ತಿದ್ದುದು ಒಂದೇ ಒಂದು ನಲ್ಲಿ ಮಾತ್ರ. ನಾನು ಕಂಡಂತೆ ಬಹುತೇಕ ಮನೆಗಳಲ್ಲಿ ಸಾಕಷ್ಟು ಸಿರಿವಂತರಿದ್ದರೂ ಸಹಾ ಇದೇ ರೀತಿಯೇ ಇರುತ್ತಿತ್ತು .ಈಗ ಬಹುತೇಕ ಎಲ್ಲ ಮನೆಗಳಲ್ಲಿ ಅಡುಗೆಮನೆ, ಬಚ್ಚಲು. ಶೌಚ , ಹಿತ್ತಲ ಕಡೆ ಎಲ್ಲ ಕಡೆಯಲ್ಲೂ ನಲ್ಲಿಗಳು ಇರುತ್ತವೆ. ನಮ್ಮ ಭೋಗ ಜೀವನಕ್ಕಾಗಿ ಅದೆಷ್ಟೋ ಜೀವ ಜಲವನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಎಂಬದರ ಪರಿವೆಯೇ ಇಲ್ಲ ! ನಾವು ನಲ್ಲಿಯ ನೀರನ್ನು ಜೋರಾಗಿ ಬಿಟ್ಟು ಕೊಂಡರೆ ನೀರನ್ನು ಸಣ್ಣಗೆ ಬಿಡಬೇಕೆಂದು ಎಂದು ಪ್ರತಿಬಾರಿ ಎಚ್ಚರಿಸುತ್ತಿದ್ದ ಅನಕ್ಷರಸ್ಥರಾಗಿದ್ದ ನಮ್ಮ ಅಜ್ಜಿಯವರಿಗೆ ಜಲ ಕೊಯ್ಲು ,ಜಲ ಸಾಕ್ಷರತೆ ಇವ್ಯಾವುದರ ಗಂಧ ಗಾಳಿ ಗೊತ್ತಿಲ್ಲದೆ ಇದ್ದರೂ ಜೀವಜಲದ ಮಹತ್ವವನ್ನರಿತು ಬದುಕಿ ಬಾಳಿದರು. ಆಗೆಲ್ಲಾ ಇಡೀ ಮನೆಗೇ ಒಂದೇ ಬಚ್ಚಲುಮನೆ, ಒಂದೇ ಶೌಚ. ಮನೆ ಮಂದಿಗೆಲ್ಲ ಒಂದೇ ಸೋಪ್, ಒಂದೇ ಪೇಸ್ಟ್, ಆದರೆ ಈಗ ಎಲ್ಲವೂ ಎಲ್ಲರಿಗೂ ಪ್ರತ್ರೇಕ ! ಮನೆಯಲ್ಲಿನ ಹಿರಿಯ ಸದಸ್ಯರಿಗೆ ಮಾತ್ರ ಪ್ರತ್ಯೇಕ ಕೊಠಡಿಗಳಿದ್ದು ,ಮನೆ ಮಕ್ಕಳೆಲ್ಲ ನಡುಮನೆಯಲ್ಲಿ ಸಾಲಾಗಿ ಹಾಸಿಗೆಗಳನ್ನು ಹಾಕಿಕೊಂಡು ಮಲಗುವ ಪರಿಪಾಠ ಇತ್ತು. ಈಗ ಒಟ್ಟು ಕುಟುಂಬದ ಮಾತೇ ಇಲ್ಲ ! ಈಗಿರುವಂಥ ನ್ಯೂಕ್ಲಿಯರ್ ಕುಟುಂಬಗಳಲ್ಲೂ ಸಹಾ ಮಕ್ಕಳಿಗೂ ಪ್ರತ್ಯೇಕ ಕೊಠಡಿಗಳಿರುವ ಕಾಲವಿದು. ನನ್ನನ್ನು ಒಳಗೊಂಡು ನಾವ್ಯಾರು ಈಗ ಮನೆಗೊಂದು ನಲ್ಲಿಯಿದ್ದರೆ ಸಾಕು ಎಂದು ಹೇಳುವುದಿಲ್ಲ. ಇಲ್ಲೇ ಇರುವುದು ನೋಡಿರಿ ಸರಳ ಜೀವನದ ಕಷ್ಟಕಷ್ಟ ! ನನಗೆ ತಿಳಿದಂತೆ ನನ್ನ ಬಾಲ್ಯದ ದಿನಗಳಲ್ಲಿ ಮನೆಯ ಅಗತ್ಯಗಳನ್ನು ಪೂರೈಸಲು ಯಾರೂ ( ಸಿರಿವಂತರು ಸಹಾ ) ಸ್ಥಂತಕ್ಕೆ ಕೊಳವೆಬಾವಿಯನ್ನು‌ ಹಾಕಿಸಿ ಕೊಂಡಿದ್ದನ್ನು ನೋಡಿಲ್ಲ. ದೊಡ್ಡ ಊರುಗಳ ಪ್ರತಿ ಮನೆಗೂ ಸಹಾ ನಗರಸಭೆಯಿಂದಲೇ ನೀರು ಸರಬರಾಜು ಆಗುತ್ತಿತ್ತು. ಇನ್ನು ಗ್ರಾಮಗಳಲ್ಲಾದರೆ ಇಡೀ ಹಳ್ಳಿಗೆಲ್ಲ ಎರಡು ಮೂರು ಬಾವಿಗಳಿರುತ್ತಿದ್ದವು. ಅಲ್ಲಿ ಸಮಾನತೆಯಿತ್ತು ಆದರೆ ಈಗೆಲ್ಲ ನಗರಗಳಲ್ಲಿ ಬಹುತೇಕ ಸ್ವಂತ ಮನೆ ಹೊಂದಿದವರು ತಮ್ಮ ಮನೆಯ ಅಗತ್ಯಗಳಿಗೆ ತಮ್ಮದೇ ಆದ ಪ್ರತ್ರೇಕ ಕೊಳವೆ ಬಾವಿ ಯನ್ನು ಹೊಂದಿರುತ್ತಾರೆ. ಅಂತರ್ಜಲದ ಕೊರತೆಯು ಅತಿ ಹೆಚ್ಚಾಗಲು ಇದೇ ಮುಖ್ಯಕಾರಣವೆಂದು ಬೇರೆ ಹೇಳಬೇಕಿಲ್ಲ ಅಸಮಾನತೆಯೊಂದಿಗೆ ನೈಸರ್ಗಿಕ ಸಂಪನ್ಮೂಲಗಳು ಪೋಲು ಆಗಲು ಕಾರಣವಾಗಿದೆ .

ಸರಳ ಜೀವನವು ಸ್ವಲ್ಪವಾದರೂ ದೈಹಿಕ ಶ್ರಮವನ್ನು ಕೇಳುವ ಕಾರಣ ನಮ್ಮ ಹಿರಿಯರಿಗೆ ವೃದ್ಧಾಪ್ಯದಲ್ಲೂ ಆರೋಗ್ಯದ ಸಮಸ್ಯೆಗಳು ಕಾಡುತ್ತಿರಲಿಲ್ಲ. ಸರಳ ಜೀವನದ ಜೊತೆಗೆ ದಿನ ನಿತ್ಯದ ಕೆಲಸಗಳ ಮೂಲಕವೇ ನಮ್ಮ ಹಿರಿಯರು ಅವರಿಗೆ ಅರಿವಿಲ್ಲದೆಯೇ ಸಾಕಷ್ಟು ವ್ಯಾಯಾಮ ಮಾಡುತ್ತಿದ್ದುದರಿಂದ ಈಗಿನಂತೆ ಜಿಮ್, ಫಿಟ್ನೆಸ್ ಸೆಂಟರ್ ಗಳಿಗೆ ಹೋಗಿ ದುಡ್ಡು ಕೊಟ್ಟು ಆರೋಗ್ಯವನ್ನು ಕೊಳ್ಳುವ ಸಂದರ್ಭವೇ ಇರಲಿಲ್ಲ. ಗಾಂಧೀಜಿಯವರು ಶ್ರಮ ದುಡಿಮೆಯ ಮಹತ್ವವನ್ನು ತಿಳಿದ ಕಾರಣ ಅವರು ದೈಹಿಕ ಶ್ರಮಕ್ಕೆ ಪ್ರಾಮುಖ್ಯತೆ ನೀಡಿದ್ದರು
ಸರಳ ಜೀವನವು ಕೊಳ್ಳುಬಾಕತನಕ್ಕೆ ವಿರುದ್ಧವಾಗಿದೆ. ಆಗೆಲ್ಲ ಒಂದು ಜತೆ ಚಪ್ಪಲಿ , ಒಂದು ಪರ್ಸ್., ಒಂದು ಬ್ಯಾಗ್ ಇದ್ದರೆ ಸಾಕು ಅದು ಹಾಳಾಗುವ ತನಕ ಬೇರೆ ಹೊಸತನ್ನು ಕೊಳ್ಳುವ ಮಾತೇ ಇಲ್ಲ .ಈಗ ಪ್ರತಿಯೊಬ್ಬರ ಬಳಿಯೂ ಮೂರ್ನಾಲ್ಕು ಜತೆ ಚಪ್ಪಲಿಗಳಿರುತ್ತವೆ . ಭೋಗ ಜೀವನದ ಚಟಕ್ಕೆ ಬಿದ್ದಂಥ ನಾವು ವ್ಯರ್ಥ ಮಾಡುತ್ತಿರುವ ಜೀವಜಲ , ವಿದ್ಯುತ್ ಹಾಗೂ ಅರಣ್ಯ ಇನ್ನಿತರ ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಕಾರಣ ವಾಗಿದ್ದೇವೆ ಎಂದು ಗೊತ್ತಿದ್ದರೂ ಬಿಡಲಾರೆವು. ಹೀಗೆ ಸರಳ ಜೀವನವು ಸಮಷ್ಟಿ ಪ್ರಜ್ಞೆಯನ್ನು ಹೊಂದಿ ಪರಿಸರ ಸಂರಕ್ಷಣೆ ಮಾಡಿದರೆ ಭೋಗಜೀವನವು ಸ್ವಾರ್ಥದೃಷ್ಟಿಯುಳ್ಳದ್ದಾಗಿ , ಸಮಾನತೆ ಹಾಗೂ ಆರೋಗ್ಯಕ್ಕೆ ವಿರುದ್ದವಾದ ದೃಷ್ಟಿಕೋನ ಉಳ್ಳದ್ದಾಗಿದೆ

ಸರಳಜೀವನವು ಅಲ್ಪತೃಪ್ತಿಯನ್ನು ಹೊಂದಿದ್ದು ಭ್ರಷ್ಟಾಚಾರಕ್ಕೆ ಪೂರಕವಾಗಿರುವುದಿಲ್ಲ ಐಷಾರಾಮಿ ಜೀವನದ ಸೆಳೆತವೇ ಭ್ರಷ್ಟಾಚಾರಕ್ಕೆ ಅತಿ ದೊಡ್ಡ ಕಾರಣವೆಂಬುದನ್ನು ಯಾರೂ ಅಲ್ಲಗೆಳೆಯುವಂತಿಲ್ಲ .ಭೋಗ ಜೀವನದ ಆಕಾಂಕ್ಷಿಗಳಾದ ಅಧಿಕಾರಸ್ಥರು ಲಂಚಗುಳಿಗಳಾಗಿದ್ದಾರೆ.ನಾಗರೀಕರು ಇಂತಹ ವ್ಯವಸ್ಥೆಯಿಂದ ಸಾಕಷ್ಟು ತೊಂದರೆಗೊಳಗಾಗಿದ್ದಾರೆ. ಹೀಗೇ ಸರಳ ಜೀವನವು ಅನ್ಯರಿಗೆ ತೊಂದರೆ ಕೊಡದೆ ನಿರುಪದ್ರವಿ ಜೀವನಕ್ಕೆ ದಾರಿಮಾಡಿಕೊಡುತ್ತದೆ.

ಇನ್ನು ಕೊನೆಯದಾಗಿ ಹೇಳುವ ಮಾತೆಂದರೆ ಅದು ಅಸಂಭವ ಮತ್ತು ನನಸಾಗದ ಕನಸೆಂದು ( ಅದೂ ನಮ್ಮ ಭಾರತದಲ್ಲಿ ) ತಿಳಿದರೂ ಸಹ ಕನಸಾಗೆ ಉಳಿಯುವ ಬಹು ಸುಂದರವಾದ ಕಲ್ಪನೆಯಿದೆ. ಅದೇನೆಂದರೆ ನಾವು ಆರಿಸಿ ಕಳುಹಿಸಿರುವ ಶಾಸಕರು ತಮ್ಮ ತಮ್ಮ ವಾಹನಗಳಲ್ಲಿ ( ಸರ್ಕಾರಿ ವಾಹನ ) ಸಂಚರಿಸುವುದನ್ನು ಬಿಟ್ಟು ಸರ್ಕಾರಿ ಬಸ್ಸುಗಳಲ್ಲಿ ( ಬೇಕಾದರೆ ಅದರಲ್ಲೇ ವಿಶೇಷ ಆಸನಗಳಲಿ ) ಸಂಚರಿಸಿದರೆ ಅದೆಷ್ಟು ನೈಸರ್ಗಿಕ ಸಂಪನ್ಮೂಲಗಳ ಉಳಿಕೆಯಾಗಬಹುದು. ಈಗಿಲ್ಲಿ ಸುಮಾರು ವರ್ಷಗಳ ಹಿಂದೆ ನಾನೇ ಪ್ರತ್ಯಕ್ಷದರ್ಶಿಯಾಗಿದ್ದ ಘಟನೆಯೊಂದು ನೆನಪಿಗೆ ಬರುತ್ತಿದೆ. ಒಮ್ಮೆ ನಾನು ನಮ್ಮ ಊರಿಂದ ಬೆಂಗಳೂರಿಗೆ ಬಸ್ಸಲ್ಲಿ ಪಯಣಿಸುವಾಗ ಮಾಜಿ ಸಚಿವೆಯಾಗಿದ್ದ ನಾಗಮ್ಮ ಕೇಶವ ಮೂರ್ತಿಯವರು ಸಹಾ ಅದೇ ಬಸ್ಸಿನಲ್ಲಿ ಪಯಣಿಸುತ್ತಿದ್ದರು.ಅವರ ಪಕ್ಕದ ಸೀಟ್ ನನಗೆ ಸಿಕ್ಕಿತ್ತು.ಆಗ ಅವರು ಯಾವುದೇ ಹಮ್ಮುಬಿಮ್ಮುಗಳು ಇಲ್ಲದೆ ಮಾತನಾಡಿದ ನೆನಪು ಹಸಿರಾಗಿದೆ.ಅಧಿಕಾರದಲ್ಲಿ ಇರುವ ವ್ಯಕ್ತಿಗಳು ಹೀಗೆ ಸರಳ ಜೀವನ ನಡೆಸಿದರೆ ಅವರದು ಅನುಕರಣೀಯ ವ್ಯಕ್ತಿತ್ವವಾಗಬಲ್ಲದು. ಅನನ್ಯ ರಾಜಕಾರಣಿ ಗಳಾದ ಕಡಿದಾಳ್ ಮಂಜಪ್ಪ , ಶಾಂತವೇರಿ ಗೋಪಾಲಗೌಡ, ನಿಜಲಿಂಗಪ್ಪ , ಈಗಿನ ಯಶಸ್ವಿ ಉದ್ಯಮಿಯಾದ ರತನ್ ಲಾಲ್ ಟಾಟಾ ಹಾಗೂ ಇನ್ಫೋಸಿಸ್ ಸ್ಥಾಪಕರಾದ ಸುಧಾ ನಾರಾಯಣ ಮೂರ್ತಿ ಅವರ ಕುಟುಂಬ ಇವರುಗಳ ವ್ಯಕ್ತಿತ್ವ ನಮಗೆ ಸರಳ ಜೀವನದ ಮಾದರಿಯಾಗಿದೆ

ಜಟಿಲತೆಯ ಸರಳ ಜೀವನದೊಂದಿಗೆ ಉನ್ನತ ಚಿಂತನೆಗಳಾದ ಮನವನ್ನು ವಿಕಾಸಗೊಳಿಸುವ ಉತ್ತಮ ಸಾಹಿತ್ಯದ ಓದು ಕೈಲಾದಷ್ಟು ಸಕಾರಾತ್ಮಕ ಸಮಾಜಮುಖಿ ಕೆಲಸಗಳನ್ನು ಮಾಡುವುದು, ಒಳ್ಳೆಯ ಸ್ನೇಹಿತರ ಒಡನಾಟ , ಕಾಯಕವೇ ಕೈಲಾಸವೆಂಬಂತೆ ವೃತ್ತಿಯಲ್ಲಿ ಪ್ರಾಮಾಣಿಕ ದುಡಿಮೆಯಲ್ಲಿ ತೊಡಗಿಸಿಕೊಂಡು ಜೀವಪರ ನಿಲುವುಗಳೊಂದಿಗೆ ಬದುಕಿ ಬಾಳಿದರೆ ಸಾಕು ಸಾರ್ಥಕ ಜೀವನ ನಮ್ಮದಾಗಬ ಲ್ಲದು.

ಒಟ್ಟಾರೆ ಸರಳ ಜೀವನದೊಂದಿಗೆ ಉನ್ನತ ಚಿಂತನೆಯಲ್ಲಿ ತೊಡಗಲು ಒಂದು ರೀತಿಯ ಸ್ಥಿರವಾದ ಸಂಯಮ ಪೂರ್ಣ ಮಾನಸಿಕ ಬದ್ಧತೆ ಅತ್ಯಗತ್ಯ. ಇದೊಂದು ರೀತಿಯಲ್ಲಿ ಅಚಲ ತಪೋನಿಷ್ಟೆ ಎಂದರೂ ತಪ್ಪಿಲ್ಲ


ಎಂ. ಆರ್ ಅನಸೂಯ



Leave a Reply

Back To Top