ಶ್ರಮಜೀವಿ ಜೇನ್ನೊಣಗಳು
ನಾಗರಾಜ ಮಸೂತಿ
ಶ್ರಮಜೀವಿಗಳಲ್ಲಿ ಒಂದಾದ ಜೇನುಹುಳು ಶ್ರಮದಿಂದಲೇ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುವಂತೆ ಶ್ರಮವಹಿಸಿ ದುಡಿಮೆ ಮಾಡುತ್ತದೆ. ಇದರ ಆಯಸ್ಸು ಸುಮಾರು ಒಂದು ತಿಂಗಳು ಅಥವಾ ಮೂವತ್ತು ದಿನಗಳು ಮಾತ್ರ. ಚಗಳಿ ಇರುವೆಯ ಜೀವನ ಶೈಲಿಯನ್ನು ಹೋಲುವ ಜೇನುಹುಳು ಎಲ್ಲರ ಕೋಪಕ್ಕೆ ತುತ್ತಾದರೆ ಅದರ ಶ್ರಮದ ಫಲ ಜೇನು ಹನಿ ಮಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಬಹುಶಃ ಜೇನುತುಪ್ಪ ಇಷ್ಟ ಪಡದ ವ್ಯಕ್ತಿ ಭೂಮಿಯ ಮೇಲೆ ಇರಲಿಕ್ಕಿಲ್ಲ.
ಈ ಜೇನುಹನಿಯನ್ನ ಪೇರಿಸಲು ಅದು ಪಡುವ ಕಷ್ಟ ಅಷ್ಟಿಷ್ಟಲ್ಲ. ತರಹೆವಾರಿ ಗಿಡಗಳು ಮೊಗ್ಗು ಬಿಟ್ಟು ಹೂವಾಗಿ ಮೈದಳಿದು ಅರಳಿ ನಾಕವೇ ಧರೆಗಿಳಿದಂತೆ ಶೃಂಗಾರಗೊಳ್ಳುವ ಸಮಯಕ್ಕಾಗಿ ಹುಳುಗಳು ಹಾತೊರೆದು ಕಾಯ್ದು ಕೂಳಿತಿರುತ್ತವೆ. ಮಕರಂದವನ್ನು ಹೀರಲು ಹೂಗಳಿಗೆ ಮುತ್ತಿಗೆ ಹಾಕಿ ಕಾರ್ಯಾರಂಭ ಮಾಡುತ್ತವೆ.
ಆದರೆ ಎಲ್ಲವೂ ಇದೇ ಕೆಲಸಕ್ಕೆ ಇಳಿಯದೆ ಚಗಳಿ ಇರುವೆಯಂತೆ ಕೆಲಸದ ಹಂಚಿಕೆ ಮಾಡಿಕೊಳ್ಳುವ ಬುದ್ಧಿವಂತಿಕೆಗೆ ಮುಂದಾಗುತ್ತವೆ. ಒಂದೇ ಕುಟುಂಬದ ಒಂದೇ ಗೂಡಿನ ಲಕ್ಷಾಂತರ ಹುಳುಗಳಲ್ಲಿ ಒಂದು ಮಾತ್ರ ರಾಣಿಜೇನು ಗೂಡು ಕಟ್ಟುವ ಸ್ಥಳವನ್ನು ಗುರುತಿಸುತ್ತದೆ. ಸಾವಿರಾರು ಕಿರಿಯ ಜೇನುಗಳು ಮನೆಯ ಶುಚಿತ್ವ ಕಾಯ್ದುಕೊಳ್ಳುವ ಹಾಗೂ ಸರಾಗವಾದ ಗಾಳಿಯ ಚಲನವಲನ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತವೆ. ಇನ್ನೂ ಬಾಕಿ ಇರುವ ಹಿರಿಯ ಹಾಗು ಅನುಭವಿ ಹುಳುಗಳು ಪುಷ್ಪಗಳನ್ನು ಅರಸಿಕೊಂಡು ಕಿಲೋಮೀಟರ್ ಗಟ್ಟಲೆ ಸಂಚರಿಸಿ ಹುಡುಕಿ ಹೂಗಳ ಮಕರಂದ ಹೀರುವ ಕೆಲಸವನ್ನು ಮಾಡುತ್ತವೆ.
ಜೇನು ನೊಣಗಳು ತಮ್ಮ ಟ್ಯೂಬ್ ಆಕಾರದ ಅಥವಾ ಸೀರಂಜ್ ರೀತಿಯಲ್ಲಿರುವ ತಮ್ಮ ಕೊಂಡಿಯಿಂದ, ಆಡು ಭಾಷೆಯಲ್ಲಿ ಹೇಳುವುದಾದರೆ ಅದು ತನ್ನ ಮುಳ್ಳಿನಿಂದ ಮಕರಂದವನ್ನು ಹೀರಿಕೊಂಡು ಜಠರದಲ್ಲಿ ಶೇಖರಿಸಿಕೊಳ್ಳುತ್ತದೆ. ಶೇಖರಿಸಿಕೊಂಡ ಮಕರಂದದಲ್ಲಿ ಶೇಕಡಾ ೮೦ % ರಷ್ಟು ನೀರಿನಂಶ ಇರುತ್ತದೆ. ಹಾರುವಾಗ ಫ್ಯಾನ್ ನಂತೆ ರಭಸವಾಗಿ ರೆಕ್ಕೆ ಬೀಸುವುದು ಉದ್ದೇಶ ಭರಿತವಾಗಿದೆ. ಹೀಗೆ ವೇಗವಾಗಿ ರೆಕ್ಕೆ ಬಡಿದು ತಾನು ಹೀರಿದ ಮಕರಂದದಲ್ಲಿನ ನೀರಿನಂಶವನ್ನು ಶೇಕಡ ೬೨% ರಿಂದ ೬೬% ರಷ್ಟು ಆವಿಯಾಗುವಂತೆ ಮಾಡುತ್ತದೆ. ಹೀಗೆ ನೀರಿನಂಶ ಕಡಿಮೆ ಆದ ಮಕರಂದ ಗಟ್ಟಿಯಾದ ದ್ರವ ಪದಾರ್ಥ(liquid) ಆಗಿ ಪರಿವರ್ತನೆ ಮಾಡುವುದರ ಜೊತೆ ಜೊತೆಯಲ್ಲಿ ತನ್ನ ದೇಹದಿಂದ ಸಕ್ಕರೆ(sugar), ಕಬ್ಬಿಣಾಂಶ(Iron content) ಹಾಗೂ ಪ್ರೋಟಿನ್ (protein) ಅಂಶಗಳನ್ನು ಸೇರ್ಪಡೆ ಮಾಡುತ್ತದೆ. ಈ ಕಾರ್ಯಕ್ಕೆ ಅದಕ್ಕೆ ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಹೀಗೆ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರಿಕೊಂಡು ಜೇನುಗೂಡಿಗೆ ಮರಳುತ್ತವೆ. ತನ್ನ ಜಠರದಲ್ಲಿ ಪೇರಿಸಿದ ಮಕರಂದವನ್ನು ಜೇನುತುಪ್ಪವಾಗಿ ಪರಿವರ್ತಿಸಿ ಜೇನುಗೂಡಿನ ಸಾವಿರಾರು ಮಣಿಗಳನ್ನು ಹನಿ ಹನಿಯಾಗಿ ತುಪ್ಪದಿಂದ ಭರ್ತಿಯಾಗಿಸುವ ಕೆಲಸ ಭರದಿಂದ ಬಿಡುವಿಲ್ಲದಂತೆ ಶ್ರಮವಹಿಸಿ ದುಡಿಮೆ ಮಾಡಿ ಪ್ರಾಣ ತ್ಯಾಗ ಮಾಡುತ್ತವೆ. ಇವುಗಳ ಮಧ್ಯೆ ಇರುವ ರಾಣಿಜೇನು ಮಾತ್ರ ಮೊಟ್ಟೆಯನ್ನು ಇಡುತ್ತ ಸಂತಾನೋತ್ಪತ್ತಿ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತದೆ. ಈ ಜೀವನ ಶೈಲಿಯನ್ನು ಚಗಳಿ ಇರುವೆಗಳಲ್ಲಿ ಕಾಣಸಿಗುತ್ತದೆ. ರಾಣಿ ಇರುವೆ ಕೂಡ ಸಂತಾನೋತ್ಪತ್ತಿ ಕೆಲಸ ಮಾಡುತ್ತದೆ. ಆದರೆ ಚಗಳಿ ಇರುವೆಗಳ ಗೂಡುಗಳಲ್ಲಿ ಇರುವೆಗಳ ಸಂಖ್ಯೆ ಜೇನಿಗಿಂತ ಕಡಿಮೆ ಇರುತ್ತದೆ. ಹಾಗೂ ಇವಗಳ ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಕಾಣುತ್ತೇವೆ. ಜೇನು ಸಸ್ಯ ಆಹಾರಿ ಆದರೆ ಇರುವೆ ಸಸ್ಯ ಮತ್ತು ಮಾಂಸಹಾರಿ, ಇದನ್ನು ಹೊರತು ಪಡಿಸಿದರೆ ಉಳಿದಂತೆ ರಕ್ಷಣೆ ಕಾರ್ಯ, ಕಾರ್ಯ ಹಂಚಿಕೆ, ಮತ್ತು ನಿರ್ವಹಣೆ ನೂರಕ್ಕೆ ತೊಂಭತ್ತೊಂಭತ್ತರಷ್ಟು ಹೋಲಿಕೆ ಆಗುತ್ತದೆ.
ಜೇನುಗೂಡು ಕಟ್ಟುವ ಲಕ್ಷಾಂತರ ಹುಳುಗಳು ಮಧ್ಯೆ ನಡೆಯುವ ದಿನನಿತ್ಯದ ಕೆಲಸದಲ್ಲಿ ದಿನಕ್ಕೆ ಸುಮಾರು ಎರಡು ಸಾವಿರದಷ್ಟು ಜೇನ್ನೊಣಗಳು ಅಸುನೀಗುತ್ತವೆ. ಹಿಂದೆ ರಾಜರ ಕಾಲದಲ್ಲಿ ತಾಜಮಹಲ್, ಗೋಲ ಗುಂಬಜ್ ನಂತಹ ಐತಿಹಾಸಿಕ ಸ್ಥಳಗಳನ್ನು ನಿರ್ಮಿಸುವಾಗ ದಶಾನುದಶ ವರ್ಷಗಳ ಕಾಲ ನಡೆಯುವ ಕೆಲಸದಲ್ಲಿ ಕೆಲಸಗಾರರು ಅಸುನೀಗಿದಂತೆ. ಹೀಗೆ ಒಂದು ಜೇನುಗೂಡು ಕಟ್ಟಿ ಜೇನುತುಪ್ಪವನ್ನು ಪೇರಿಸುವ ಈ ಕೆಲಸದಲ್ಲಿ ಲಕ್ಷಾಂತರ ಹುಳುಗಳು ಯೋಧರಂತೆ ವೀರಮರಣವಪ್ಪಿ ಸಾವಿರಾರು ಜನರಿಗೆ ಅಚ್ಚು ಮೆಚ್ಚಿನ ಜೇನುತುಪ್ಪವನ್ನು ನೀಡುತ್ತವೆ. ಇಂತಹ ನಿಸ್ವಾರ್ಥ ಸೇವೆಯನ್ನು ಮನುಷ್ಯನನ್ನು ಹೊರತುಪಡಿಸಿ ಅನೇಕ ಜೀವಿಗಳಲ್ಲಿ ಕಾಣಬಹುದು…
ನಾಗರಾಜ ಮಸೂತಿ
ಲೇಖಕರ ಪರಿಚಯ:
ಶಿಕ್ಷಕರಾಗಿರುವ ಶ್ರೀಯುತರು ಕಥೆ,ಕವಿತೆ,ಲೇಖನ, ಪ್ರಬಂದಗಳನ್ನು ಬರೆಯುತ್ತಾ ಬರುತ್ತಿದ್ದಾರೆ. ಇವರ ಹಲವು ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
Well written,, ಜೇನುನೊಣಗಳ ಕಾರ್ಯವೈಖರಿಯ ಬಗ್ಗೆ ಬಹಳ ಚೆನ್ನಾಗಿದೆ ತಿಳಿಸಿದ್ದೀರಿ. ಮಾನವನಿಗೆ ಅವುಗಳ ಕೆಲಸ ಅದ್ಭುತ ವೇ ಸರಿ