ಕೆ.ಬಿ.ಸಿದ್ದಯ್ಯ
ನಮ್ಮನ್ನು ಅಗಲಿದ ಕವಿ ಮತ್ತು ಅದ್ಭುತ ಸಂಘಟನಾಕಾರರಾದ ಹಿರಿಯ ಚೇತನ ಶ್ರೀ ಕೆ.ಬಿ.ಸಿದ್ದಯ್ಯನವರಿಗೆ ಸಂಗಾತಿ ಬಳಗ ಶ್ರದ್ದಾಂಜಲಿ ಸಲ್ಲಿಸುತ್ತಿದೆ
ಕವಿಮಿತ್ರ ಶ್ರೀಬಿದಲೋಟಿರಂಗನಾಥ್ ಅವರ ಕವಿತೆಯ ನುಡಿ ನಮನ
ಹೊಳೆದು ಉರುಳಿದ ನಕ್ಷತ್ರ ಕೆ ಬಿ ಸಿದ್ದಯ್ಯ
ಕತ್ತಲೊಡನೆ ಮಾತಾಡುತ್ತ
ದಕ್ಲದೇವಿ ಕಥೆಗಳನ್ನು ಹೇಳುತ್ತ
ಗಲ್ಲೆಬಾನಿಯಲಿ ನೆನಪುಗಳ ಕಲೆಸಿದ
ಬಕಾಲ ಮುನಿಯೇ…
ನಿಮ್ಮದು ಚಿಟ್ಟೆಗೆ ಜೀವ ತುಂಬಿದ ಜೀವ.
ಮೌನದಲಿದ್ದು ನಲುಗಿ
ಒಂದು ಮಾತೂ ಹೇಳದೆ ಎದ್ದೋದ ಕರುಳು ಬಂಧುವೇ…
ಇಷ್ಟು ಬೇಗ ಹೋಗಬೇಕಿತ್ತೆ ?
ನಿಮ್ಮ ಖಾಲಿಯಾದ ಪೆನ್ನಿಗೆ ಇಂಕನ್ನು ತುಂಬದೇ..
ಅನಾಥವಾಗಿ ಮಾಡಿ..
ನಿಮ್ಮ ಕರುಳು ಕಲೆತ ಮಾತುಗಳಲ್ಲಿ
ಎಷ್ಟೊಂದು ಆತ್ಮೀಯ ಭಾವ ತುಂಬಿತ್ತು
ಕಣ್ಣುಗಳಲ್ಲಿ ಎಷ್ಟೊಂದು ಕವಿತೆಗಳು ಮರಿಹಾಕಿ
ಹೊಳಪಿನ ಕನ್ನಡಿಯಾಗಿತ್ತು
ನನ್ನ ಸಂಕಲನಕ್ಕೆ ಮುನ್ನುಡಿ ಗೀಚುತ್ತೇನೆಂದು
ಹೇಳುತ್ತಲೇ
ಖಾಲಿ ಉಳಿದವು ನೀವು ಬರೆಯಬೇಕಿದ್ದ ಆ ಪುಟಗಳು !
ಆತ್ಮ ಅನಾತ್ಮದೊಡನೆ ಸೆಣಸಾಡಿ
ದುಃಖಾತ್ಮದ ನಂಜು ನಸಿರಾಡಿ
ನೆಲದ ಬೆವರಿಗೆ ಕವಿಯಾದೆ
ಕರುಳ ನೋವಿಗೆ ಧ್ವನಿಯಾದೆ..
ನುಡಿವ ತಮಟೆಯ ಸದ್ದಿಗೆ ಕಿವಿಯಾಗುತ
ಊರೂರು ಸುತ್ತಿ
ಜಾತಿಯೆಂಬ ಬೆನ್ನಮೂಳೆಯ
ಕಾವ್ಯಬಿತ್ತುತ ಮುರಿದೆ
ದಹನದ ಕಥೆಗೆ ಕರುಳ ನುಡಿಗಳ ನುಡಿದು
ಈ ನಾಡ ಮಣ್ಣಿನಲಿ …
ಮಣ್ಣಾದವರ ಕಥೆ ಹೇಳುತ್ತಲೇ..
ಮಣ್ಣಾಗಿ ಹೋದಿರಿ …
ಹೊಳೆದು ಉದುರಿದ ನಕ್ಷತ್ರದಂತೆ
ಸಾಹಿತ್ಯದ ಬಾನಿನಲಿ ಕತ್ತಲು ತುಂಬಿ
ನೆಲದ ಬಾಯಲ್ಲಿ ಬಿರುಕು ಮೂಡಿ
ಜನಾಂಗದ ಕಣ್ಣಲ್ಲಿ ಹಾರಿದ ಬೆಳಕು
ಹೋಗಿ ಬನ್ನಿ …
ನೀವೆ ಬಿತ್ತಿದ ಅಕ್ಷರ ಬೀಜದ ಮೊಳಕೆಗಳು
ಇಣುಕುತ್ತಿವೆ
ನೆಲದ ತುಂಬಾ..
===========================
ಬಿದಲೋಟಿ ರಂಗನಾಥ್
ಕೆ.ಬಿ.ಸಿದ್ದಯ್ಯ ರವರ ಬಗ್ಗೆ ಅದ್ಬುತ ಅರ್ಥಗರ್ಭಿತ ಸಾಲುಗಳೊಂದಿಗೆ ಕಾವ್ಯ ನಮನ ಸಲ್ಲಿಸಿದ ತಮಗೆ ಅಭಿನಂದನೆಗಳು, ಸಂಗಾತಿ ಪತ್ರಿಕೆ ಗೆ ಹ್ಯಾಟ್ಸಾಪ್