“ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು” ಡಾ.ಸುಮತಿ ಪಿ.ಅವರ ವಿಶೇಷ ಬರಹ-ಮಾತು-ಮೌನದ ಬಗ್ಗೆ

“ಮೌನಂ ಕಲಹಂ ನಾಸ್ತಿ” ಮೌನವಾಗಿದ್ದರೆ ಜಗಳವಿಲ್ಲ. ಮಾತಿಗೆ ಮಾತು ಬೆಳೆಯುವುದಿಲ್ಲ. ಸಂಘರ್ಷ ಉಂಟಾಗುವುದಿಲ್ಲ ಎಂದೆಲ್ಲ ಹೇಳುತ್ತಾರೆ .ಆದರೆ ಕೆಲವೊಂದು ಸಂದರ್ಭದಲ್ಲಿ “ಮೌನಂ ಸಮ್ಮತಿ ಲಕ್ಷಣಂ”
ಎಂಬಂತೆ ನಾವು ಮೌನವಾಗಿದ್ದರೆ ಎದುರಾಳಿ ಹೇಳಿದ್ದಕ್ಕೆಲ್ಲ ನಾವು ಸಮ್ಮತಿಯನ್ನು ಸೂಚಿಸಿದಂತೆ. ಅವರು ತಪ್ಪನ್ನು ಹೇಳಿದಾಗ ಅಥವಾ ಅವರಾಡಿದ ಮಾತು ನಮ್ಮ ಮನಸ್ಸಿಗೆ ಹಿಡಿಸದಾಗ ನಾವು ಮೌನ ವಹಿಸದೆ ಮಾತನಾಡಲೇಬೇಕಾಗುತ್ತದೆ ಇಲ್ಲವಾದರೆ ಅದಕ್ಕೆ ನಾವು ಒಪ್ಪಿಗೆ ಸೂಚಿಸಿದಂತೆ. “ನಮಗೇಕೆ ಉಸಾಬರಿ ?”ನಾವು ಸುಮ್ಮನಿದ್ದು ಬಿಡೋಣ ಎಂದುಕೊಂಡರೆ, ಅವರು ಅವರಿಚ್ಛೆಯಂತೆ ಬೆಳೆದುಬಿಡುತ್ತಾರೆ. ಇದಕ್ಕೆ ಪರೋಕ್ಷವಾಗಿ ನಾವೇ ಕಾರಣವಾಗುತ್ತೇವೆ. ಹಾಗಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಮೌನ ಕಾಯ್ದುಕೊಳ್ಳುವುದು ಕೆಟ್ಟದು.

ಮನುಷ್ಯ ಅತಿ ವಾಚಾಳಿಯಾಗಿದ್ದರೂ ಕಷ್ಟ ಮೌನವಾಗಿದ್ದರೂ ಕಷ್ಟ. “ಅತಿಯಾದರೆ ಅಮೃತವೂ ವಿಷ”ವೆಂಬಂತೆ ಮಾತು ಅತಿಯಾದರೆ ಜಗಳ ಉಂಟಾಗುವಂತೆ ಮೌನ ಅತಿಯಾದರೆ ಕೂಡ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಹಾಗಾಗಿ” ಅತಿ ವಿನಯಂ ಧೂರ್ತ ಲಕ್ಷಣಂ”ಎಂಬಂತೆ ಕೆಲವೊಮ್ಮೆ ಅತಿ ಮೌನವು ಕೂಡ ಧೂರ್ತ ಲಕ್ಷಣವಾಗಿ ಪರಿಣಮಿಸುತ್ತದೆ.”ಮಾತು ಬೆಳ್ಳಿ ಮೌನ ಬಂಗಾರ” ಎಂಬ ಮಾತನ್ನು ನಾವೆಲ್ಲರೂ ಕೇಳಿದ್ದೇವೆ. ಹೌದು, ಮಾತಿಗಿಂತಲೂ ಮೌನ ಹೆಚ್ಚು ಶಕ್ತಿಶಾಲಿ. ಮಾತನಾಡಬೇಕಾದ ಸಂದರ್ಭದಲ್ಲಿ ಮೌನವನ್ನು ವಹಿಸಿದರೆ ಆ ಮೌನಕ್ಕೆ ಕಪೋಲಕಲ್ಪಿತ ಅರ್ಥಗಳು ಸೃಷ್ಟಿಯಾಗಿ ಮತ್ತಿಷ್ಟು ಸಮಸ್ಯೆಗಳು ಉದ್ಭವಿಸುವ ಅವಕಾಶಗಳು ಇರುತ್ತವೆ.

ಮೌನವಾಗಿದ್ದು ಆದ ತೊಂದರೆಗಳಿಗಿಂತ, ಮಾತನಾಡಿ ಆದ ತೊಂದರೆಗಳೇ ಜಾಸ್ತಿ ಇರಬಹುದು. ಆದರೆ ಕೆಲವೊಮ್ಮೆ ಮೌನವನ್ನು ದುರ್ಬಲತೆ ಎಂದುಕೊಳ್ಳುತ್ತಾರೆ. ತಿರುಗಿ ಹೇಳಲಾಗದವರು ಸುಮ್ಮನಿರುತ್ತಾರೆಂದುಕೊಳ್ಳುತ್ತಾರೆ. ಮೌನವಾಗಿದ್ದಷ್ಟು ಮತ್ತಷ್ಟು ಕಿರಿಕಿರಿ ಮಾಡುವ ಜನರು ಇದ್ದೇ ಇರುತ್ತಾರೆ.”ಬಗ್ಗಿದವನಿಗೆ ಎರಡು ಗುದ್ದು ಜಾಸ್ತಿ ಎಂಬಂತೆ”ಏನು ಮಾತನಾಡಿದರೂ ಮೌನವಾಗಿರುವ ವ್ಯಕ್ತಿಗಳನ್ನು ಕಂಡರೆ ಮತ್ತೆ ಮತ್ತೆ ಅವರ ತಂಟೆಗೆ ಬರುವವರೇ ಜಾಸ್ತಿ. ಹಾಗಾಗಿ ಮಾತನಾಡಬೇಕಾದ ಸಂದರ್ಭದಲ್ಲಿ ಮೌನವಾಗಿರದೆ ಮಾತನಾಡಲೇ ಬೇಕಾಗುತ್ತದೆ.

ಮನುಷ್ಯನಾದವನು ನಾಲಿಗೆ ಚಪಲಕ್ಕೆ ಮಾತನಾಡಬಾರದು. “ಹೆಜ್ಜೆ ಇಡುವ ಮೊದಲು ಆಲೋಚಿಸಬೇಕು” ಎಂಬಂತೆ ಮಾತನಾಡುವ ಮೊದಲು ವಿಚಾರ ಮಾಡಬೇಕು. ಯಾವ ಸಂದರ್ಭದಲ್ಲಿ? ಯಾರ ಮುಂದೆ ?ಎಲ್ಲಿ ?ಎಷ್ಟು ಮಾತನಾಡಬೇಕು? ಹೇಗೆ ಮಾತನಾಡಬೇಕು? ಎಂಬುದನ್ನು ತಿಳಿದುಕೊಂಡು, ಎಷ್ಟು ಬೇಕಷ್ಟೇ ಮಾತನಾಡಿ ವ್ಯಕ್ತಿತ್ವದ ಮೌಲ್ಯವನ್ನು ಉಳಿಸಿಕೊಳ್ಳಬೇಕು. ನಾವು ಮಾತನಾಡದೆ ಇದ್ದಾಗ ಅದರಿಂದ ಕೆಡುಕಾಗುತ್ತದೆ ಎಂಬ ಸಂದರ್ಭದಲ್ಲಿ ನಾವು ಮಾತನಾಡದೆ ಮೌನ ವಹಿಸಿದರೆ ಅದು ತಪ್ಪಾಗುತ್ತದೆ.
ಸಮಯ ಸಂದರ್ಭವರಿತು ಮಿತಿಯಲ್ಲಿ ಮಾತನಾಡುವುದು ಬಹಳ ಅಗತ್ಯವೆಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

ಉದಾಹರಣೆಗೆ ಒಂದು ಸಂಸ್ಥೆಯಲ್ಲಿ ಯಾವುದಾದರೂ ನಿರ್ಧಾರವನ್ನು ತೆಗೆದುಕೊಳ್ಳುವಾಗ,ನಾವೂ ಅದರ ಸದಸ್ಯರಾಗಿದ್ದು, ತೆಗೆದುಕೊಳ್ಳುವ ನಿರ್ಧಾರ, ತಪ್ಪು ನಿರ್ಧಾರವಾಗಿದ್ದರೆ ನಾವು ಮೌನವಹಿಸಿದರೆ ಒಂದು ರೀತಿಯಲ್ಲಿ ನಾವು ಅದಕ್ಕೆ ಸಮ್ಮತಿ ನೀಡಿದಂತೆ ಅಲ್ಲವೇ? ಮುಂದೆ  ಇದೇ ರೀತಿಯಲ್ಲಿ ಮುಂದುವರಿಯುತ್ತಾ ಹೋಗುತ್ತದೆ. ಅಂತಹ ಸಂದರ್ಭದಲ್ಲಿ ಉಳಿದ ಸದಸ್ಯರು ಸಮ್ಮತಿಯನ್ನು ಸೂಚಿಸಿದರೂ, ನಮಗದು ಕಾನೂನುಬಾಹಿರವೆಂದು ಕಂಡರೆ ನಾವು ಮೌನವಾಗಿರದೆ,ಅದನ್ನು ಖಂಡಿಸಬೇಕು. ಖಂಡಿಸಿದಾಗ ಆ ನಿರ್ಧಾರದ ಬಗ್ಗೆ ಅವರು ಆಲೋಚನೆ ಮಾಡಿ ನಿರ್ಧಾರ ಬದಲಾಯಿಸಲೂಬಹುದು. ಹಾಗಾಗಿ ಎಲ್ಲಿಯೇ ಇರಲಿ. ಮಾತನಾಡಬೇಕಾದ ಸಂದರ್ಭದಲ್ಲಿ
ಮೌನ ಕಾಯ್ದುಕೊಳ್ಳುವುದು ಕೆಟ್ಟದು. ಮೌನವಾಗಿ ಇರಬೇಕಾದ ಸಂದರ್ಭದಲ್ಲಿ ಮಾತನಾಡದೆ ಮೌನವಾಗಿದ್ದು, ಮಾತನಾಡಬೇಕಾದ ಸಂದರ್ಭದಲ್ಲಿ ಮೌನವಾಗಿರದೆ ಮಾತನಾಡಿ ನಮ್ಮ ವ್ಯಕ್ತಿತ್ವದ ವರ್ಚಸ್ಸನ್ನು ಹೆಚ್ಚಿಸಬೇಕು. ಅಲ್ಲದೆ ಕೆಟ್ಟದು ನಡೆಯುವುದನ್ನು ತಪ್ಪಿಸಬೇಕು .ಆಗ ಮಾತ್ರ ನಮ್ಮ ಮಾತಿಗೆ ಹಾಗೂ ಮೌನಕ್ಕೆ ಬೆಲೆ ಬರುತ್ತದೆ.


Leave a Reply