‘ಇದು ಶುಗರ್ ಕಾಲ’ ಪ್ರೊ.ಸಿದ್ದು ಸಾವಳಸಂಗ,

ವಿಶೇಷ ಲೇಖನ

ಪ್ರೊ.ಸಿದ್ದು ಸಾವಳಸಂಗ

ಇದು ಶುಗರ್ ಕಾಲ

ಮೊನ್ನೆ ನಾನು ರಕ್ತ ತಪಾಸಣೆಗೆಂದು ಲಾಬ್ ಗೆ ಹೋಗಿದ್ದೆ.ಜನ ತುಂಬಿದ್ದರು.ಈ ವೈದ್ಯರಿಗಿಂತಲೂ ಲಾಬ್ ನವರಿಗೆ ಅಧಿಕ ಲಾಭ.ಏಕೆಂದರೆ ಒಂದೊಂದು ರಕ್ತ ತಪಾಸಣೆಯು ಅತ್ಯಂತ ದುಬಾರಿ.ಅಲ್ಲಿ ಎಂಟು ವರ್ಷದ ಮಗುವಿನ ರಕ್ತ ತೆಗೆಯುತ್ತಿದ್ದರು.ನಾನು ಏನಾಯಿತೆಂದು ಕೇಳಿದೆ.ಇವನಿಗೆ ಶುಗರ್ ಇದೆ ಎಂದು ಹೇಳಿದರು.ಕೇಳಿ ಗಾಬರಿಯಾಯಿತು.ಆ ಮಗುವಿನ ಭವಿಷ್ಯ ನೆನೆದು ಆತಂಕವೆನಿಸಿತು.ಮುಂದೆ ಬಾಳಿ ಬದುಕಬೇಕಾದ ಮಗು. ಸ್ವಲ್ಪ ಸಮಯದ ನಂತರ ನನ್ನ ಹಳೆಯ ಸ್ನೇಹಿತನೊಬ್ಬ ಬಂದ.ಅವನ ವಯಸ್ಸು ನಲವತ್ತೈದು ಇರಬಹುದು.ನಾನು ಇಲ್ಲಿಗೇಕೆ ಎಂದೆ.ಅವನು ಹತ್ತು ವರ್ಷದಿಂದ ಶುಗರ್ ಇದೆ ಎಂದು ಹೇಳಿದ.ರಕ್ತ ತಪಾಸಣೆಗೆ ಬಂದಿದ್ದೇನೆ ಎಂದ.ಅಂದರೆ ಶುಗರ್ ಈಗ ಸರ್ವವ್ಯಾಪಿಯಾಗಿದೆ.ಹುಟ್ಟಿದ ಮಗುವಿನಿಂದ ಹಿಡಿದು ಚಟ್ಟಕ್ಕೆ ಹೋಗುವ ವೃದ್ಧರವರೆಗೂ ಯಾರನ್ನೂ ಬಿಟ್ಟಿಲ್ಲ.ಮಾನವನ ದೇಹದ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವುದು ಇದರ ಲಕ್ಷಣ.ಈ ಶುಗರ್ ಗೆ ಕನ್ನಡದಲ್ಲಿ ಸಕ್ಕರೆ ರೋಗ,ಸಿಹಿಮೂತ್ರ ರೋಗ,ಸಿಹಿ ಮೈರೋಗ ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ.
ಈ ಸಕ್ಕರೆ ರೋಗ ಬರಲು ಕಾರಣವೇನೆಂದು ಹುಡುಕಿದರೆ ನಮಗೆ ಹಲವಾರು ಕಾರಣಗಳು ತಿಳಿದು ಬರುತ್ತವೆ.ನಾನು ವೈದ್ಯನಲ್ಲ.ಆದರೂ ಅನೇಕ ರೋಗಗಳ ಬಗ್ಗೆ ನನಗೆ ಮಾಹಿತಿಯಿದೆ.ಮೊದಲನೆಯದಾಗಿ ಹೇಳುವುದಾದರೆ ಸಕ್ಕರೆ ರೋಗ ಬರಲು ಪ್ರಮುಖ ಕಾರಣ ವ್ಯಾಯಾಮವಿಲ್ಲದ, ಶ್ರಮವಿಲ್ಲದ ಆರಾಮದಾಯಕ ಜೀವನ.ಈಗ ಯಾರೂ ಶ್ರಮ ಜೀವನವನ್ನು ನಡೆಸುವುದಿಲ್ಲ.ಎಲ್ಲರದೂ ಕುಳಿತು ಮಾಡುವ ಕೆಲಸ.ಸ್ವಲ್ಪ ದೂರ ಹೋಗಲು ವೆಹಿಕಲ್ ಬಳಸುತ್ತಾರೆ.ನಡೆಯುವುದು ಜನ ಮರೆತಿದ್ದಾರೆ.ಹೀಗಾಗಿ ರೋಗ ಬೇಗನೆ ಬಂದು

ಬಿಡುತ್ತದೆ.ವಂಶಪಾರಂಪರ್ಯವಾಗಿಯೂ ಇದು ಬರಬಹುದು.ತಂದೆಯಿಂದ ಮಗನಿಗೆ ಬರಬಹುದು.ಇದು ವೈದ್ಯರ ಅನಿಸಿಕೆ.ಮನೆತನದಲ್ಲಿ ಯಾರಿಗಾದರೂ ಈ ರೋಗವಿದ್ದರೆ ಅವರು ಸ್ವಲ್ಪ ಎಚ್ಚರ ವಹಿಸಬೇಕು.ಅತೀ ಮಹಾತ್ವಾಕಾಂಕ್ಷೆಯು ಸಕ್ಕರೆ ರೋಗ ಬರಲು ಕಾರಣವಾಗಬಹುದು.ಯಾರೂ ಸಾಧಿಸಲಾರದ ದೊಡ್ಡದನ್ನು ನಾನು ಸಾಧಿಸಬೇಕೆನ್ನುವವರು ಆರೋಗ್ಯದ ಕಡೆಗೆ ಲಕ್ಷ ಕೊಡದೆ ಇದ್ದಾಗ ಈ ರೋಗ ಗೊತ್ತಿಲ್ಲದೆ ದೇಹದಲ್ಲಿ ಬಂದು ಸೇರುತ್ತದೆ.
ಅತೀ ಒತ್ತಡದ ಜೀವನ,ಮತ್ಸರ ಪಡುವುದು,ಸದಾ ಸಿಟ್ಟಿಗೇಳುವುದು,ಜೋರಾಗಿ ಚೀರಾಡುವುದು,ಅತಿಯಾದ ಜಿಡ್ಡು ಹಾಗೂ ಮಾಂಸಾಹಾರ ಸೇವನೆ,ಕ್ರಮವಲ್ಲದ ಜೀವನ ಪದ್ದತಿ,ರಾತ್ರಿ ತಡವಾಗಿ ಮಲಗುವುದು,ಪಾಸ್ಟ್ ಪುಡ್ ಸೇವನೆ ಹಾಗೂ ಹೊರಗಿನ ಆಹಾರವನ್ನು ಹೆಚ್ಚಾಗಿ ಸೇವಿಸುವುದು.ಹೀಗೆ ಹಲವಾರು ಕಾರಣಗಳಿಂದ ಸಕ್ಕರೆ ರೋಗ ಬರಬಹುದೆಂದು ವೈದ್ಯರ ಅಭಿಪ್ರಾಯ.
ಸಕ್ಕರೆ ಖಾಯಿಲೆ ಬಂದಾಗ ಎಚ್ಚರ ವಹಿಸುವುದಕ್ಕಿಂತಲೂ ಬರದಂತೆ ಜಾಗೃತೆ ವಹಿಸುವುದು ಬಹಳ ಮುಖ್ಯ.ಇದನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯುತ್ತಾರೆ.ಕೆಲವೊಮ್ಮೆ ಇದು ಬಂದದ್ದು ಬಹಳ ದಿನಗಳವರೆಗೆ ಗೊತ್ತಾಗುವುದೇಯಿಲ್ಲ.ಆಗ ದೇಹದ ಒಂದೊಂದೆ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ.ಕೊನೆಯದಾಗಿ ಬಹು ಅಂಗ ವೈಫಲ್ಯದಿಂದಾಗಿ ಅನೇಕರು ಸಾಯುತ್ತಾರೆ.ಹೀಗಾಗಿ ಎಚ್ಚರ ಬಹಳ ಮುಖ್ಯ.
ರೋಗವನ್ನು ತಡೆಗಟ್ಟಲು ದಿನನಿತ್ಯ ನಿಯಮಿತವಾಗಿ ಒಂದು ಗಂಟೆ ವಾಕಿಂಗ್ ಮಾಡುವುದು ಸೂಕ್ತ.ಎಲ್ಲ ವ್ಯಾಯಾಮಗಳಲ್ಲಿ ವಾಕಿಂಗ್ ಒಳ್ಳೆಯದೆಂದು ವೈದ್ಯರು ಹೇಳುತ್ತಾರೆ.
ಶಾಂತ ಜೀವನ ನಡೆಸುವುದು ಬಹಳ ಉತ್ತಮ.ಕರಿದ ಪದಾರ್ಥ ಹಾಗೂ ಮಾಂಸಾಹಾರವನ್ನು ಹಿತಮಿತವಾಗಿ ಬಳಸಬೇಕು.ಊಟವನ್ನೂ ಸಹ ಮಿತವಾಗಿ ಮಾಡಬೇಕು.ಅತಿಯಾದ ಭೋಜನದಿಂದ ಕೊಬ್ಬು ಶೇಖರಣೆಯಾಗುತ್ತದೆ.ಇದರಿಂದಾಗಿ ರೋಗಗಳಿಗೆ ಆಹ್ವಾನ ನೀಡಿದಂತೆ.ನಿಯಮಿತವಾದ ವಿಶ್ರಾಂತಿ,ನಿದ್ದೆ ಅತಿ ಮಹತ್ವದ್ದು.ನಲವತ್ತು ವರ್ಷ ಮೇಲ್ಪಟ್ಟವರು ಆರು ತಿಂಗಳಿಗೊಮ್ಮೆ ವೈದ್ಯರ ತಪಾಸಣೆ ಮಾಡಿಸುವುದು ಒಳ್ಳೆಯದು.ಎಲ್ಲಾ ಕಾಳಜಿ ವಹಿಸಿದರೂ ಈ ರೋಗ ಬಂದರೆ ಹೆದರದೆ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು.ಸರಿಯಾಗಿ ಗುಳಿಗೆಗಳನ್ನು ತೆಗೆದುಕೊಳ್ಳಬೇಕು.ಒಮ್ಮೆ ಗುಳಿಗೆ ಪ್ರಾರಂಭಿಸಿದರೆ ಜೀವನ ಪರ್ಯಂತ ತೆಗೆದುಕೊಳ್ಳಬೇಕಾಗುತ್ತದೆ.ಹಾಗೆಯೇ ಮೂರು ತಿಂಗಳಿಗೊಮ್ಮೆ ಸುಗರ್ ತಪಾಸಣೆ ಮಾಡಿ ಆರೋಗ್ಯ ಕಾಯ್ದುಕೊಳ್ಳಬೇಕು.ಏನಾದರೂ ತೊಂದರೆ ಎನಿಸಿದರೆ ವೈದ್ಯರನ್ನು ಕಾಣಬೇಕು.ಏಕೆಂದರೆ ಆರೋಗ್ಯವೆ ಭಾಗ್ಯ.


ಪ್ರೊ.ಸಿದ್ದು ಸಾವಳಸಂಗ

Leave a Reply

Back To Top