ನೆನಪು
ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ
ಆಧುನಿಕ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಚೆನ್ನವೀರ ಕಣವಿಯವರು ಒಬ್ಬರು. ಐವತ್ತು ವರ್ಷಗಳ ತಮ್ಮ ಸುದೀರ್ಘ ಕಾವ್ಯ ಜೀವನದಲ್ಲಿ ಓದುಗರ ಪ್ರೀತಿ, ವಿಮರ್ಶಕರ ಮೆಚ್ಚುಗೆ ಮತ್ತು ಸಾಂಸ್ಥಿಕ ಮನ್ನಣೆಗಳನ್ನು ಬಹಳಷ್ಟು ಸಂಪಾದಿಸಿದ ಮೇರು ಕವಿ.
ಜನನ: ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ 1928 ಜೂನ್ 28 ರಂದು.
ತಂದೆ: ಸಕ್ರೆಪ್ಪ ಕಣವಿ. ಪ್ರಾಥಮಿಕ ಶಾಲಾ ಶಿಕ್ಷಕರು.
ತಾಯಿ: ಪಾರ್ವತೆವ್ವ ಕಣವಿ. ಗೃಹಿಣಿ.
ಶಿಕ್ಷಣ: ಮಾಧ್ಯಮಿಕ ಮತ್ತು ಕಾಲೇಜು ಶಿಕ್ಷಣ ಧಾರವಾಡದಲ್ಲಿ.
1952 ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ.ಪದವಿ.
ವೃತ್ತಿ: ಕರ್ನಾಟಕ ವಿಶ್ವ ವಿದ್ಯಾಲಯದ ಪ್ರಸಾರಾಂಗದಲ್ಲಿ ಕಾರ್ಯದರ್ಶಿಯಾಗಿ.
1956 ರಲ್ಲಿ ಅದೇ ವಿಭಾಗದ ನಿರ್ದೇಶಕರಾಗಿ 1983 ರವರೆಗೆ ಸೇವೆ ಸಲ್ಲಿಸಿದರು.
ವೈವಾಹಿಕ: ಸಾಹಿತ್ಯ ಸಂಸ್ಕೃತಿಯ ದೊಡ್ಡ ಮನೆತನದ ಹುಕ್ಕೇರಿ ತಾಲೂಕಿನ ಯಮಕನಮರಡಿ ಊರಿನ ಗಿಡ್ನವರ ಮನೆತನದ ಮಗಳು ಶಾಂತಾದೇವಿ ಇವರ ಧರ್ಮ ಪತ್ನಿ. ಅವರೂ ಕೂಡ ಖ್ಯಾತ ಸಾಹಿತಿಗಳು.
ಕಾವ್ಯ ಜೀವನ
ಕಣವಿಯವರ ಕಾವ್ಯ ಜೀವನದ ಎದ್ದು ಕಾಣುವ ವೈಶಿಷ್ಟ್ಯ ಎಂದರೆ ಎಲ್ಲ ಸಮಕಾಲೀನ ಚಳವಳಿಗೆ ಪ್ರತಿಸ್ಪಂದಿಸಿಯೂ, ಯಾವುದಕ್ಕೂ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳದೆ ಇರುವುದು. ಅವರನ್ನು ‘ ಸಮನ್ವಯ ‘ ಕವಿಯೆಂದು ಗುರುತಿಸಲು ಯಾವ ಔಚಿತ್ಯವೂ ಕಾಣುವದಿಲ್ಲ. ನವೋದಯ, ನವ್ಯ, ನವ್ಯೋತ್ತರ ಮಾರ್ಗಗಳನ್ನು ಕಣವಿಯವರು ತುಳಿದಿದ್ದಾರೆ ಎನ್ನುವುದುನಿಜ.ಆದರೆ ಅವುಗಳ ಸಮನ್ವಯಕ್ಕೆ ಅವರು ಪ್ರಯತ್ನಿಸಿಲ್ಲ. ಆದರೆ ತಮ್ಮ ಅನನ್ಯತೆಯನ್ನು ಮತ್ತು ವೈಶಿಷ್ಟ್ಯತೆಯನ್ನು ಕಾಯ್ದುಕೊಂಡು ಬಂದಿರಲು ಮುಖ್ಯ ಕಾರಣ, ಆಯ್ಕೆಯ ವಿಷಯದಲ್ಲಿ ತೋರಿರುವ ಧೈರ್ಯ, ಸ್ವಾತಂತ್ರ್ಯ ಮತ್ತು ಪ್ರಾಮಾಣಿಕತೆಗಳು.
ಕಣವಿಯವರ ಕಾವ್ಯ ಮನೋಧರ್ಮವನ್ನು ‘ ರೋಮ್ಯಾಂಟಿಕ್ ‘ ಎಂದು ಗುರುತಿಸುವುದುಂಟು. ಆದರೆ ಅದು ಇದಕ್ಕಿಂತಲೂ ಹೆಚ್ಚು ಸಂಕೀರ್ಣವಾದ ಮನೋಧರ್ಮ ಎಂದು ಹೇಳಬಹುದು. ಉದಾ: ಆದರ್ಶ ವಾದ, ನಿಸರ್ಗ ಪ್ರೇಮ, ಭಾವನಿಷ್ಠೆ, ಸಮದರ್ಶನ, ಸಮಭಾವ, ಸ್ವೀಕೃತಿಗಳಂಥ ಮೌಲ್ಯಗಳು. ಅವರ ‘ ನಂಬಿಕೆ ‘ ಕವನದ ಸಾಲುಗಳನ್ನು ಅವಲೋಕಿಸಿದಾಗ ಇದರ ಅರಿವಾಗುತ್ತದೆ.
ನನ್ನ ನಂಬಿಕೆಯೊಂದು ಆಕಾಶ;
ನಿಜ, ಅದಕ್ಕೆ ತಳಬುಡವಿಲ್ಲ, ನಾನೆಷ್ಟು ಬೆಳೆದರೂ ನನಗೆ ನಿಲುಕುವದಿಲ್ಲ,
ದೂರದಿಂದಲ್ಲದೆ ನಾನದನು
ಮುಟ್ಟಿ ಮುಟ್ಟಿ ಅನುಭವಿಸಿಲ್ಲ…..
ಕಣವಿಯವರ ಪ್ರಕೃತಿ ಗೀತಗಳ ಮುಖ್ಯ ಸಾಧನೆ ಎಂದರೆ, ತಮ್ಮ ಸಾಮರ್ಥ್ಯದ ಕ್ಷೇತ್ರದಲ್ಲಿ ಅವು ದೊರಕಿಸುವ ಯಶಸ್ಸು. ಶ್ರೇಷ್ಠ ದರ್ಜೆಯ ಅನೇಕ ಶಬ್ದ ಚಿತ್ರಗಳನ್ನು ಅವರು ಸೃಷ್ಟಿಸಿದ್ಧಾರೆ.
ಉದಾ–
ಉಣ್ಣೆಯಾಗಿ ಮಿದು ಬೆಣ್ಣೆಯಾಗಿ ಹಿಂಜಿರುವ ಅರಳೆಯಾಗಿ
ತೊಟ್ಟಿಲಾಗಿ ತೂಗುವವು ಮೋಡಪಡೆ ನಡೆವ ಬೆಟ್ಟವಾಗಿ
( ಮೇಘೋಪಾಸನೆ )
ಬಾನ ಸಾಣಿಗೆ ಹಿಟ್ಟು ಸಣ್ಣಿಸಿ-
-ದಂತೆ ಜಿನುಗಿದೆ ಸೋನೆಯು
( ಶ್ರಾವಣದ ಲಾವಣ್ಯ)
ಸಾಲಾಗಿ ನವಿಲು ಗರಿಗೆದರಿ ನರ್ತಿಸಿದಂತೆ
ಮುಂಜಾವದಲಿ ಬೇಲಿ ತುಂಬ ನೀಲಿಯ ಹೂವು
(ಬೇಲಿಯ ಮೇಲಿನ ನೀಲಿಯ ಹೂಗಳು)
ಗೆಳೆತನದ ಬಗ್ಗೆ ಕಣವಿಯವರ ಒಂದು ಕವಿತೆ ಸ್ನೇಹ ಸೂಕ್ತವಾಗಿ ದೆ.
ಅಲ್ಲೊಬ್ಬರು
ಇಲ್ಲೊಬ್ಬರು
ಬಾಳ ಕವಲು ದಾರಿಯಲ್ಲಿ
ಸಾಗಿದತಿಥಿ ಗೆಳೆಯರು;
ನೋವಿನೊಡನೆ ಬರುವರು .
( ಚಿಂತನ- ಕವನ )
ಕಣವಿಯವರು ಸುಂದರವಾದ ‘ ಸುನೀತ ‘ ಗಳನ್ನು ರಚಿಸಿ ಕನ್ನಡ ಕಾವ್ಯಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಕವಿತೆಗಳು ಜನತೆಗೆ ತಲುಪುವುದು ಅಗತ್ಯ ಎಂಬ ಅವರ ಜನಪರ ಕಾಳಜಿ ಶ್ಲಾಘನೀಯ. ಅವರು ರಚಿಸಿರುವ ಕೆಲ ಕವಿತೆಗಳು ತುಂಬ ಜನಪ್ರಿಯವಾದವು.
1 ವಿಶ್ವ ಭಾರತಿಗೆ ಕನ್ನಡದಾರತಿ
2 ಮುಂಜಾವದಲಿ ಹಸಿರು ಮಕಮಲ್ಲಿನಲಿ
3 ಹೂವು ಹೊರಳುವವು ಸೂರ್ಯನ ಕಡೆಗೆ
4 ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಇಂಥ ರಚನೆಗಳನ್ನು ಪು.ತಿ.ನ.ಅವರು ‘ ಸಾಪೇಕ್ಷ ಕಾವ್ಯ ‘ ಎಂದು ಕರೆಯುತ್ತಾರೆ.
ಸರಳ ಸಜ್ಜನಿಕೆಯ, ಮಕಮಲ್ಲಿನಂಥ ಮೃದು ಸ್ವಭಾವದ ಕಣವಿಯವರ ಕಾವ್ಯಗಳು, ಇನ್ನಿತರ ಕೃತಿಗಳು ಎಂದೆಂದೂ ಮನದಲ್ಲಿ ಚಿರಸ್ಥಾಯಿ.
ಇಂಥ ಪ್ರತಿಭಾನ್ವಿತ ಕವಿ ನಾಡೋಜ ಚೆನ್ನವೀರ ಕಣವಿಯವರು ತಮ್ಮ 93 ನೆಯ ವಯಸ್ಸಿನಲ್ಲಿ 16 ಫೆಬ್ರವರಿ 2022 ರಂದು ಎಸ್ ಡಿ ಎಂ ಕಾಲೇಜ್ ಆಫ್ ಮೆಡಿಕಲ್ ನಲ್ಲಿ ಮಲ್ಟಿಪಲ್ ಆರ್ಗನ್ ಡಿಸ್ಫಂಕ್ಶನ್ ಸಿಂಡ್ರೋಮ್ ದಿಂದ ಇಹಲೋಕ ತ್ಯಜಿಸಿದರು. ಅವರಿಲ್ಲದಿದ್ದರೂ ಅವರ ಕೃತಿಗಳು ಅಜರಾಮರ. ಅವರ ಅತ್ಯಂತ ಜನಪ್ರಿಯ ಕವನದ ಸಾಲುಗಳನ್ನು ಸ್ಮರಿಸಿಕೊಳ್ಳುತ್ತ….
ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ;
ಮೌನಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಸುತಿರಲಿ.
( ಮಾತು- ಕವನ )
ಕಾವ್ಯ ಸಂಕಲನ
1 ಕಾವ್ಯಾಕ್ಷಿ
2 ಭಾವಜೀವಿ
3 ಆಕಾಶ ಬುಟ್ಟಿ
4 ಮಧುಚಂದ್ರ
5 ಮಣ್ಣಿನ ಮೆರವಣಿಗೆ
6 ದಾರಿದೀಪ
7 ನೆಲಮುಗಿಲು
8 ಎರಡು ದಡ
9 ನಗರದಲ್ಲಿ ನೆರಳು
10 ಜೀವಧ್ವನಿ
11 ಕಾರ್ತಿಕದ ಮೋಡ.
12 ಜೀನಿಯಾ
13 ಹೊಂಬೆಳಕು
14 ಶಿಶಿರದಲ್ಲಿ ಬಂದ ಸ್ನೇಹಿತ
15 ಚಿರಂತನ ದಾಹ ( ಆಯ್ದ ಕವಿತೆಗಳು )
16 ಹೂವು ಹೊರಳುವವು ಸೂರ್ಯನ ಕಡೆಗೆ
17 ನೀವೇ ಪ್ರಮಾಣು
ವಿಮರ್ಶೆ ಮತ್ತು ಪ್ರಬಂಧ ಸಂಕಲನಗಳು
1 ಸಾಹಿತ್ಯ ಚಿಂತನ
2 ಕಾವ್ಯಾನುಸಂಧಾನ
3 ಸಮಾಹಿತ
4 ಮಧುರ ಚೆನ್ನ
5 ಸಮತೋಲನ.
ಮಕ್ಕಳ ಕವಿತೆ
1 ಹಕ್ಕಿ ಪುಕ್ಕ
2 ಚಿಣ್ಣರ ಲೋಕದ ಹೈಕು
ಸಂಪಾದನೆ
1 ಕನ್ನಡದ ಕಾಲು ಶತಮಾನ
2 ಸಿದ್ಧಿ ವಿನಾಯಕ ಮೋದಕ
3 ಕವಿತೆಗಳು.
ಸಂಪಾದನೆ ( ಇತರರೊಂದಿಗೆ )
1 ನವಿಲೂರು ಮನೆಯಿಂದ
2 ನವ್ಯ ಧ್ವನಿ
3 ನೈವೇದ್ಯ
4 ನಮ್ಮೆಲ್ಲರ ನೆಹರೂ
5 ಜೀವನ ಸಿದ್ಧಿ
6 ಆಧುನಿಕ ಕನ್ನಡ ಕಾವ್ಯ
7 Modern Kannada Poetry.
8 ಸುವರ್ಣ ಸಂಪುಟ
9 ರತ್ನ ಸಂಪುಟ
10 ಬಾಬಾ ಫರೀದ.
ಕಣವಿಯರೊಂದಿಗೆ ಲೇಖಕಿ
ಪ್ರಶಸ್ತಿ ಪುರಸ್ಕಾರಗಳು
1 ಜೀವಧ್ವನಿ ಕೃತಿಗೆ 1981 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.
2 ರಾಜ್ಯೋತ್ಸವ ಪ್ರಶಸ್ತಿ
3 ಪಂಪ ಪ್ರಶಸ್ತಿ
4 ಬಸವ ಗುರು ಕಾರುಣ್ಯ ಪ್ರಶಸ್ತಿ
5 ನಾಡೋಜ ಪ್ರಶಸ್ತಿ.
6 ಕರ್ನಾಟಕ ಕವಿ ರತ್ನ ಪ್ರಶಸ್ತಿ
7 ಅ ನ.ಕೃ. ನಿರ್ಮಾಣ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಕಣವಿಯವರ ಸಾಧನೆಗೆ ಸಿಕ್ಕ ಗೌರವಗಳು.
8 2020 ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್.
9 1996 ರಲ್ಲಿ ಹಾಸನದಲ್ಲಿ ನಡೆದ 65 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
10 ಆಳ್ವಾಸ್ ನುಡಿ ಸಿರಿ- 2008 ರ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಹಮೀದಾ ಬೇಗಂ ದೇಸಾಯಿ
ಸುಂದರ ಲೇಖನ ಮೇಡಂ
ಸ್ಪಂದನೆಗೆ ಧನ್ಯವಾದಗಳು ಮೇಡಂ.
ಹಮೀದಾ ಬೇಗಂ. ಸಂಕೇಶ್ವರ.
ಲೇಖನ ತುಂಬಾ ಚೆನ್ನಾಗಿದೆ ಅಕ್ಕ