ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಕಡದಿನ್ನಿಯವರ ಗಜಲ್ ಗಳಲ್ಲಿ
ಒಡಲ ಹಾಹಾಕಾರ..
ಎಲ್ಲರಿಗೂ ಮಲ್ಲಿಯ ಮಲ್ಲಿಗೆಯ ನಮಸ್ಕಾರಗಳು..
ಹೇಗಿದ್ದೀರಿ ತಾವೆಲ್ಲರು, ಚೆನ್ನಾಗಿದ್ದೀರಲ್ಲವೇ! ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಆ ಹೆಜ್ಜೆ ಗುರುತುಗಳೊಂದಿಗೆ ಗಜಲ್ ಜನ್ನತ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ.. ಬನ್ನಿ, ಮತ್ತೇಕೆ ಮೀನಾಮೇಷ ಎಣಿಸುವುದು..
“ಜೀವನ ತುಂಬಾ ಚಿಕ್ಕದಾಗಿದೆ, ಪ್ರತಿ ಕ್ಷಣವೂ ಜೀವಿಸಬೇಕು
ನುಡಿಗಳಿಗೂ ಬೆಲೆಯಿದೆ ಕಂಗಳಿಂದ ಮಾತಾಡಬೇಕು”
-ರೆಹಾನ್ ಕತ್ರಾವಾಲೆ
ಮನುಷ್ಯ ಸಮಾನತೆಯನ್ನು ಬಯಸುತ್ತನಾದರೂ ಅವನಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆ ತುಂಬಿ ತುಳುಕುತ್ತಿದೆ. ಒಂದಂತೂ ಸತ್ಯ, ನಾವೆಲ್ಲರೂ ವಿಭಿನ್ನರು ಎಂಬ ಅಂಶದಲ್ಲಿ ನಾವೆಲ್ಲರೂ ಸಮಾನರು. ಇದರೊಂದಿಗೆ ಇನ್ನೊಂದು ವಿಷಮವೂ ಇದೆ. ನಾವು ಎಂದಿಗೂ ಒಂದೇ ಆಗಿರುವುದಿಲ್ಲ ಎಂಬ ವಾಸ್ತವದಲ್ಲಿ ನಾವೆಲ್ಲರೂ ಒಂದೇ! ಮನುಷ್ಯನ ಜೀವನ ಸುಖ-ದುಃಖಗಳ ಹದವಾದ ಮಿಸ್ರಣ. ಆದರೆ ಭಾಗಶಃ ಮನುಷ್ಯ ಸುಖಕ್ಕಾಗಿ ಹಂಬಲಿಸುತ್ತಾನೆ, ಆದಾಗ್ಯೂ ದುಃಖ ಎನ್ನುವುದು ನೆರಳಂತೆ ಸದಾ ಹಿಂಬಾಲಿಸುತ್ತಲೆ ಇರುತ್ತದೆ. ಈ ಸುಖ-ದುಃಖಗಳ ನಡುವೆಯೆ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಇತರ ಜನರು ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂದು ಯೋಚಿಸುವಷ್ಟು ಜೀವನ ದೊಡ್ಡದಲ್ಲ, ಅದು ತುಂಬಾ ಚಿಕ್ಕದಾಗಿದೆ. ಈ ಜಗತ್ತಿನಲ್ಲಿ ಅತೃಪ್ತ ಜನರು ಮಾತ್ರ ಇತರ ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಸ್ನೇಹಿತರು ನಾವು ಆಯ್ಕೆ ಮಾಡುವ ಕುಟುಂಬವಿದ್ದಂತೆ. ವೈಯಕ್ತಿಕ ಸ್ಥಿರತೆ ಇಲ್ಲದೆ ಸಮಾಜದಲ್ಲಿ ಸ್ಥಿರತೆ ಇರಲು ಸಾಧ್ಯವಿಲ್ಲ. ಕಷ್ಟದ ಸಮಯಗಳು ಬಲವಾದ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ. ಬಲವಾದ ವ್ಯಕ್ತಿತ್ವ ಒಳ್ಳೆಯ ಸಮಯವನ್ನು ಸೃಷ್ಟಿಸುತ್ತದೆ. ಒಳ್ಳೆಯ ಸಮಯ ದುರ್ಬಲ ವ್ಯಕ್ತಿತ್ವವನ್ನು ಸೃಷ್ಟಿಸುತ್ತದೆ. ದುರ್ಬಲ ವ್ಯಕ್ತಿತ್ವ ಕಷ್ಟದ ಸಮಯವನ್ನು ಸೃಷ್ಟಿಸುತ್ತದೆ. ತನ್ನ ತತ್ವಗಳಿಗಿಂತ ಸವಲತ್ತುಗಳನ್ನು ಗೌರವಿಸುವ ವ್ಯಕ್ತಿ ಎರಡನ್ನೂ ಕಳೆದುಕೊಳ್ಳುತ್ತಾನೆ. ಪ್ರತಿಯೊಂದು ಆಂತರಿಕವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ. “ಹಣವು ಜನರು ಪೂಜಿಸುವ ದೇವರಾಗಿದ್ದರೆ, ನಾನು ಬದಲಿಗೆ ದೆವ್ವವನ್ನು ಆರಾಧಿಸಲು ಹೋಗುತ್ತೇನೆ” ಎಂಬ ಸಿಂಗಾಪುರದ ನಾಟಕಕಾರ್ತಿ ಜೆಸ್ ಸಿ. ಸ್ಕಾಟ್ ರವರ ಮಾತು ಹೆಚ್ಚು ಸಮಂಜಸವೆನಿಸುತ್ತದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಇತರರು ಅದನ್ನು ಕೇಳಬೇಕು ಎಂಬ ಭಾವವನ್ನು ಹೊಂದಿದ್ದಾರೆ. ಆದರೆ ಇಲ್ಲಿ ಒಂದನ್ನು ಗಮನಿಸಬೇಕು. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯದ ಹಕ್ಕನ್ನು ಹೊಂದಿದ್ದಾರೆ. ಆದರೆ ಆ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಬಹುದು ಇಲ್ಲವೇ ನಿರ್ಲಕ್ಷಿಸಬಹುದು. ಅನ್ಯಾಯ ತುಂಬಿದ ಸಮಾಜದಲ್ಲಿ ಶ್ರೀಮಂತ ಮತ್ತು ಗೌರವಾನ್ವಿತರಾಗಿರುವುದು ನಿಜಕ್ಕೂ ಅವಮಾನಕರ. ಇಂಥಹ ಸಾಮಾಜಿಕ ವ್ಯವಸ್ಥೆಯ ಸ್ಥಿತ್ಯಂತರವನ್ನು ಸಾಹಿತ್ಯವು ತನ್ನ ಒಡಲಲ್ಲಿ ಕಾಪಿಟ್ಟುಕೊಂಡು ಬಂದಿದೆ. ಪ್ರೀತಿ, ಪ್ರೇಮವನ್ನೇ ಉಸಿರಾಡುತ್ತ ಬಂದಿರುವ ಗಜಲ್ ಕಾಲದ ತಿರುವಿನಲ್ಲಿ ಸಮಾಜಮುಖಿಯಾಗಿ ನಿಂತಿದೆ. ಈ ದಿಸೆಯಲ್ಲಿ ಹಲವಾರು ಬರಹಗಾರರು ಗಜಲ್ ನಲ್ಲಿ ಸಾಮಾಜಿಕ ಚಿಂತನೆಯನ್ನು ದುಡಿಸಿಕೊಳ್ಳುತಿದ್ದಾರೆ. ಅವರಲ್ಲಿ ಶ್ರೀ ಶಿವಶಂಕರ ಕಡದಿನ್ನಿ ಅವರೂ ಒಬ್ಬರು.
ಶ್ರೀ ಶಿವಶಂಕರ ಕಡದಿನ್ನಿಯವರು ೧೯೯೭ ರ ಜೂನ್ ೧೨ ರಂದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕಡದಿನ್ನಿಯಲ್ಲಿ ಶ್ರೀ ಹಂಪಯ್ಯ ಮತ್ತು ಶ್ರೀಮತಿ ಅಮರಮ್ಮ ದಂಪತಿಗಳ ಮಗನಾಗಿ ಜನಿಸಿದರು. ರಾಯಚೂರಿನ ಎಲ್. ವ್ಹಿ.ಡಿ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಪಡೆದ ಇವರು ಗುಲ್ಬರ್ಗ ವಿಶ್ವವಿದ್ಯಾಲಯದ ಪಿ ಜಿ ಸೆಂಟರ್ ಯರಗೇರಾದಲ್ಲಿ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪೂರೈಸಿದ್ದಾರೆ. ಸಕಲೇಶಪುರದ ಜೆ.ಎಸ್.ಎಸ್ ಮಹಾವಿದ್ಯಾಲಯದಲ್ಲಿ ಬಿ.ಇಡಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಸಾಹಿತ್ಯದ ಅಭಿರುಚಿಯನ್ನು ಹೊಂದಿರುವ ಇವರು ಕಾವ್ಯ, ಶಿಶುಗೀತೆ, ಹನಿಗವನ, ಕಥೆ, ಹೈಕು, ಲೇಖನ, ಸಂಪಾದನೆ, ವಿಮರ್ಶೆ ಹಾಗೂ ಗಜಲ್ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ಮಳೆಬಿಲ್ಲು’ ಎಂಬ ಮಕ್ಕಳ ಕವನ ಸಂಕಲನ, ‘ನಸುಕು’ ಎಂಬ ಹೈಕು ಸಂಕಲನ, ‘ಬೆಳ್ಳಕ್ಕಿ ಸಾಲು’ ಎಂಬ ರಾಜ್ಯ ಮಟ್ಟದ ಪ್ರಾತಿನಿಧಿಕ ಕನ್ನಡ ಹೈಕು ಸಂಕಲನ ಸಂಪಾದನೆ ಹಾಗೂ ‘ಒಡಲು ಉರಿದಾಗ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ.
ನಾಡಿನಾದ್ಯಂತ ಹೊಸತು, ಕರ್ಮವೀರ, ವಿಶ್ವವಾಣಿ ಪತ್ರಿಕೆಗಳಲ್ಲಿ ಕಡದಿನ್ನಿಯವರ ಕಥೆ ಗಜಲ್ ಗಳು ಪ್ರಕಟವಾಗಿವೆ. ಜೊತೆಗೆ ಹಲವಾರು ಪುಸ್ತಕಗಳಲ್ಲೂ ಇವರ ಬರಹಗಳು ಪ್ಕರಕಟಗೊಂಡಿವೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ೫ ಭಾರಿ ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಇದರೊಂದಿಗೆ ಹಲವು ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಡಾ. ವಿಜಯಾದಬ್ಬೆ ಸ್ಮರಣಾರ್ಥ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ದ್ವೀತಿಯ ಬಹುಮಾನ ಪ್ರಮುಖವಾಗಿದೆ.
ಪ್ರೀತಿಯ ಮಳೆಬಿಲ್ಲು ಮೂಡದೆ ಯಾವ ಬರಹವೂ ಮುಖಮ್ಮಲ್ ಆಗುವುದಿಲ್ಲ. ಪ್ರೀತಿಯಿಲ್ಲದೆ ಉಸಿರಾಡಲು, ಬದುಕಲು ಕಷ್ಟವಾಗುತ್ತದೆ. ಈ ಪ್ರೀತಿ ಎನ್ನುವುದು ಯೋಜನೆಯ ಬ್ಲೂ ಪ್ರಿಂಟ್ ನಿಂದ ಆಗುವಂತದಲ್ಲ. ಅದು ಆಕಸ್ಮಿಕವಾಗಿ ಘಟಿಸುವಂತದ್ದು. ಅಂತೆಯೇ ‘ಪ್ರೀತಿ ಮಾಡಲಾಗುವುದಿಲ್ಲ, ಪ್ರೀತಿ ಆಗುತ್ತದೆ’ ಎನ್ನಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ರಚನೆಯೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ನಡೆಯುವ ಎಲ್ಲ ಚಟುವಟಿಕೆಗಳಿಗೂ ಪ್ರೀತಿಯೇ ಮೂಲ ಕಾರಣ. ಗಜಲ್ ಗೋ ಕಡದಿನ್ನಿಯವರ “ಒಡಲುರಿದಾಗ” ಗಜಲ್ ಸಂಕಲನವು ಹಲವಾರು ಸಮಾಜಮುಖಿ ಚಿಂತನೆಯ, ಹಸಿವಿನ ವಿಷಪ್ರಾಶನ, ಅನ್ನದ ಮಹತ್ವ, ಸಾಮಾಜಿಕ ವ್ಯವಸ್ಥೆಯ ಚಿತ್ರಣವನ್ನು ಸಾರುತ್ತ ಸಹೃದಯ ಓದುಗರ ಮನವನ್ನು ತಣಿಸುತ್ತದೆ. ಇಲ್ಲಿಯ ಗಜಲ್ ಗಳಲ್ಲಿನ ಹಸಿವು, ಬಡತನದ ಬೇಗೆ ಓದುಗರನ್ನೂ ಸಹ ತಟ್ಟುವಂತಿದೆ!! ಇವುಗಳೊಂದಿಗೆ ಅಲ್ಲಲ್ಲಿ ಪ್ರೀತಿ, ಪ್ರೇಮ, ಪ್ರಣಯದ ತುಂತುರು ಹನಿಗಳೂ ಇವೆ, ಸಾಮಾಜಿಕ ವ್ಯವಸ್ಥೆಯ ಚಿತ್ರಣ, ಸಮಾಜದ ಅಸಮಾನತೆ, ವಿಕೃತ ಮನಸುಗಳ ಚೀತ್ಕಾರವೂ ಇದೆ.
ಮನುಷ್ಯ ಇಂದು ಒಪ್ಪೊತ್ತಿನ ಕೂಳಿಗಾಗಿ ಹಗಲಿರುಳು ದುಡಿಯುತ್ತಿದ್ದಾನೆ. ಆದಾಗ್ಯೂ ಅವನ ಹೊಟ್ಟೆ ಮಾತ್ರ ತುಂಬುತ್ತಿಲ್ಲ. ಇಲ್ಲಿ ಅವನ ಒಡಲು ಹಸಿದುಕೊಂಡೆ ಇರುವಂತೆ ನೋಡಿಕೊಳ್ಳಲು ಬಂಡವಾಳ ಶಾಹಿ ಮನಸುಗಳು ಟೊಂಕ ಕಟ್ಟಿ ನಿಂತಿರುವುದನ್ನು ನಾವು ಕಾಣಬಹುದು. ಇಲ್ಲಿ ಗಜಲ್ ಗೋ ಅವರು ಸಿರಿವಂತಿಕೆಯ ಸೊಕ್ಕು ಹೇಗೆ ಹಸಿವನ್ನು ಬುಗುರಿಯಂತೆ ಆಡಿಸುತ್ತಿದೆ ಎಂಬುದನ್ನು ಈ ಕೆಳಗಿನ ಷೇರ್ ಮುಖಾಂತರ ಹೇಳಲು ಪ್ರಯತ್ನಿಸಿದ್ದಾರೆ. ಅನ್ನ ಕಸಿದುಕೊಳ್ಳುವ ಕೈಗಳನ್ನು ದಾಟಿ ಹಸಿದವರಿಗೆ ತುತ್ತು ಅನ್ನ ನೀಡಬೇಕು ಎಂಬ ಸಂದೇಶ ಇಲ್ಲಿದೆ. ಹಸಿದವರಿಗೆ ಅನ್ನ ನೀಡದ ಮನುಷ್ಯ ಎಷ್ಟೇ ದೊಡ್ಡವನಾದರೂ ಅವನು ತೃಣಕ್ಕೆ ಸಮಾನ ಎಂಬ ಆತ್ಮಾವಲೋಕನವನ್ನೂ ಇಲ್ಲಿ ಗಮನಿಸಬಹುದು. ಅಂತೆಯೇ ಗಜಲ್ ಗೋ ಅವರ ಮನಸು ಹಸಿದವರನ್ನು ಪ್ರೀತಿಸಿ, ಪೋಷಿಸಲು ಹಂಬಲಿಸುತ್ತಿದೆ. ಇದು ಪ್ರತಿ ಬರಹಗಾರರ ಮನಸು ಹೇಗಿರಬೇಕು ಎಂಬುದಕ್ಕೆ ಸಾಕ್ಷಿಯಾಗಿದೆ.
“ಹಸಿದ ಒಡಲು ಉರಿದು ಧಗಧಗಿಸುತ್ತಿದೆ ಆರಿಸಲು ಬನ್ನಿ
ಸುಡುವ ಒಡಲ ಉಗಿಯನ್ನು ತಣಿಸಲು ತಪ್ಪದೆ ಆರಿಸಲು ಬನ್ನಿ”
‘ಬಿಸ್ತಾರ’ ಎಂಬುದು ಜನ್ನತ್ ನ ದ್ವಾರ ಬಾಗಿಲು. ಅದು ಕನಸು, ಕನವರಿಕೆ, ಬಯಕೆ, ನಿರೀಕ್ಷೆಗಳಲ್ಲಿ ಮುದುಡಿ ಹೋಗಿರುತ್ತದೆ. ದಿಂಬಿನೊಂದಿಗೆ ಹಂಚಿಕೊಳ್ಳುವ ಕನಸುಗಳನ್ನು ಪ್ರೇಮಿಗಳು ಪರಸ್ಪರ ಹಂಚಿಕೊಳ್ಳುವ ಸಂದರ್ಭವನ್ನು ಈ ಕೆಳಗಿನ ಷೇರ್ ನಮ್ಮ ಕಣ್ಣ ಮುಂದೆ ತರುವ ಪ್ರಯತ್ನ ಮಾಡುತ್ತದೆ.
“ಬಿಸ್ತಾರದ ಮೇಲೆಯೂ ನೂರಾರು ಅರೀಕ್ಷೆಗಳು
ಬೀಳುವ ಕನಸುಗಳ್ಹೇಗೆ ನೆನಪಿಸಲಿ ನಿನ್ನ ಮುಂದೆ”
“ಸಾರ್ವಜನಿಕವಾಗಿ ಪ್ರೀತಿ ತೋರುವುದು ನ್ಯಾಯ ಎಂಬುದನ್ನು ಎಂದಿಗೂ ಮರೆಯಬಾರದು” ಎಂಬ ಅಮೇರಿಕನ್ ತತ್ವಜ್ಞಾನಿ ಕಾರ್ನೆಲ್ ವೆಸ್ಟ್ ರವರ ಈ ಮಾತು ಪ್ರೀತಿಯ ಮಹತ್ವ, ಸಾರ್ವತ್ರಿಕತೆಯನ್ನು ಬಿಂಬಿಸುತ್ತದೆ. ಈ ಹಿನ್ನೆಲೆಯಲ್ಲಿ ಗಜಲ್ ಗಳು ರಚನೆಯಾಗಲಿ ಎಂದು ಆಶಿಸುತ್ತ ಸುಖನವರ್ ಶ್ರೀ ಶಿವಶಂಕರ ಕಡದಿನ್ನಿ ಅವರ ಗಜಲ್ ಲೋಕ ಮತ್ತಷ್ಟು ಮೊಗೆದಷ್ಟೂ ಸಮೃದ್ಧವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.
“ಪ್ರೀತಿಯಲ್ಲಿ ಕಲಬೆರಕೆ ಇಷ್ಟವಾಗುವುದಿಲ್ಲ ನನಗೆ
ನಾನು ನಿನ್ನವನಾದರೆ ಕನಸುಗಳೂ ನನ್ನವೇ ಇರಲಿ”
-ಸಾಹಿರ್ ಲುಧಿಯಾನ್ವಿ
ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಓದುತ್ತಿದ್ದರೆ, ಮಾತಾಡುತಿದ್ದರೆ ; ಬರೆಯುತಿದ್ದರೆ ಸಮಯದ ಪರಿವೇ ಇರುವುದಿಲ್ಲ. ಆದಾಗ್ಯೂ ಸಮಯದ ಮುಂದೆ ಮಂಡಿಯೂರಲೆಬೇಕಲ್ಲವೇ. ಅದಕ್ಕಾಗಿಯೇ ಪರಿಚಯದ ಈ ಲೇಖನಿಗೆ, ಲೇಖನಕ್ಕೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಬಾಯ್, ಸಿ-ಯುವ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ