ಬಾಡಿಗೆ ಮನೆಯನೆಂದೂ ಕಟ್ಟದಿರು..ಪ್ರಬಂಧ-ಜ್ಯೋತಿ , ಡಿ.ಬೊಮ್ಮ.

ಪ್ರಬಂಧ ಸಂಗಾತಿ

ಜ್ಯೋತಿ , ಡಿ.ಬೊಮ್ಮ.

ಬಾಡಿಗೆ ಮನೆಯನೆಂದೂ ಕಟ್ಟದಿರು..

ಈಗ ಎಲ್ಲಿ ನೋಡಿದರೂ ಬಹು ಮಹಡಿಯ ಕಟ್ಟಡಗಳು .ಒಂದೊಂದು ಕಟ್ಟಡದಲ್ಲೂ ಅನೇಕ ಕುಟುಂಬಗಳು . ಮೊದಲು ಮನೆ ಎಂದರೆ ಪ್ರತ್ಯಕ ಕಟ್ಟಡ ಅಲ್ಲಿ ಒಂದು ಕುಟುಂಬ ಮಾತ್ರ . ಅಕ್ಕ ಪಕ್ಕದನೆಗಳು , ಹಿಂದಿನ ಮನೆಗಳು ಮುಂದಿನ ಮನೆಗಳು ಹೀಗೆ ಸ್ವಲ್ಪ ದೂರದಲ್ಲಿ ಮನೆಗಳು ಕಟ್ಟಲ್ಪಡುತಿದ್ದವು.ಜನಸಂಖ್ಯೆ ಹೆಚ್ಚಾದಂತೆ ಜನರು ಕೆಲಸಗಳನ್ನರಸುತ್ತ ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ್ಯಹೂಡುವ ಪ್ರಸಂಗ ಬಂದಾಗ ಇರಲೊಂದು ಸೂರು ಬೇಕಾಗುವದರಿಂದ ಬಾಡಿಗೆ ಮನೆಗಳು ಅನಿವಾರ್ಯವಾದವು. ಮೊದಲೆಲ್ಲ ಮನೆ ಕಟ್ಟುವಾಗ ನೆಂಟರಿಷ್ಟರಿಗಾಗಿ ಒಂದೆರಟು ಕೋಣೆ ಹೆಚ್ಚುವರಿಯಾಗಿ ಕಟ್ಟುತ್ತಿದ್ದರು.ಈಗ ಬಾಡಿಗೆ ಕೊಡುವ ಸಲುವಾಗಿಯೇ ಕೋಣೆಗಳನ್ನು ನಿರ್ಮಿಸುತಿದ್ದಾರೆ.ಬಾಡಿಗೆ ಒಂದು ವ್ಯವಹಾರದ ರೀತಿ ಬದಲಾಗತೊಡಗಿತು .ಅದಕ್ಕೆ ಪಟ್ಟಣಗಳಲೆಲ್ಲ ಬಹುಮಹಡಿ ಕಟ್ಟಡಗಳು ವಿಜೃಂಭಿಸತೊಡಗಿವೆ .ಮಧ್ಯಮ ವರ್ಗದ ಯಾರೂ ಬಾಡಿಗೆ ಪೊರ್ಷನ್ ಗಳಿಲ್ಲದ ಮನೆ ಕಟ್ಟಲಾರರು.ಬಾಡಿಗೆಯು ಆದಾಯದ ಮೂಲವಾಗಿರುವದರಿಂದ ಕಟ್ಟುವಾಗ ಸ್ವಲ್ಪ ಸಾಲವಾದರೂ ಸರಿ ಬಾಡಿಗೆಗೆ ಕೊಡುವ ಸಲುವಾಗಿಯೇ ಮನೆ ಕಟ್ಟುತ್ತಾರೆ.

ಮನೆಗಳಲ್ಲಿ ಗಂಡಹೆಂಡತಿಯ ನಡುವೆ ಹೊಂದಾಣಿಕೆ ಕೊರತೆ ಇರುವ ಈ ಸಂದರ್ಭಗಳಲ್ಲಿ ಮನೆ ಮಾಲಿಕರು ಬಾಡಿಗೆದಾರರ ನಡುವೆ ಹೊಂದಾಣಿಕೆಯ ಸಾಮರಸ್ಯ ಹೊಂದುವದು ತಂತಿ ಮೇಲಣ ಹೆಜ್ಜೆಯಂತೆ ಜೋಪಾನವಾಗಿ ಸಾಗಬೇಕಾಗುತ್ತದೆ. ಬಹಳ ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿ ವಾಸವಿದ್ದು ಸ್ವಂತ ಮನೆ ಮಾಡಿಕೊಲ್ಳುವ ಕನಸು ನನಸಾದಾಗ ಸ್ವರ್ಗ ಮೂರೆ ಗೇಣು. ಅದರಲ್ಲೂ ಒಂದೆರಡು ಬಾಡಿಗೆ ಪೊರ್ಷನ್ ಕಟ್ಟಿ ಬಾಡಿಗೆಗೆ ಕೊಟ್ಟು ಮನೆಯ ಮಾಲಿಕರೆನಿಸಿಕೊಂಡರೆ ಆಯಿತು ಸ್ವರ್ಗಕ್ಕೆ ಕಿಚ್ಚು ಹಚ್ಚುವದೊಂದೆ ಬಾಕಿ.ಆದರೆ ಈ ಸ್ವರ್ಗ ಸುಖ ಕ್ಷಣಿಕ ಎಂದು ಅರಿವಾಗುವದು ತಲೆ ಮೇಲೆ ( ಮಹಡಿ ಮೇಲೆ ) ಬಾಡಿಗೆದಾರರ ವಾಸ ಶುರುವಾದಾಗ.ಅವರ ಮನೆಯಲ್ಲಿ ಮಾಡಿದ ಸದ್ದುಗಳು ಕೆಳಗಿನವರಿಗೆ ಭಯಂಕರ ಶಬ್ದವಾಗಿ ಪರಿಣಮಿಸುತ್ತವೆ.ಪಾಪ ಅವರಾದರೂ ಕಾಲು ತಲೆ ಮೇಲೆ ಹೊತ್ತು ತಿರುಗಲಾಗುತ್ತದೆಯೇ , ಮಕ್ಕಳಿದ್ದರಂತೂ ಸದಾ ತಲೆ ಮೇಲೆ ತಕಥೈ ಕುಣಿತದ ಸದ್ದು. ನಸುಕಿನ ಸವಿನಿದ್ದೆಯಲ್ಲಿರುವಾಗಲೇ ನಲ್ಲಿ ನೀರಿನ ಸದ್ದು. ಮೇಲಿನಿಂದ ಹರಿದು ಬರುವ ನೀರು ಬೆಡ್ರೂಂ ಪಕ್ಕದಲ್ಲಿರುವ ಪೈಪ್ಗಳ ಮೂಲಕ ಬಿಳುವ ಸದ್ದು. ಮೆಟ್ಟಿಲುಗಳ ಮೇಲೆ ಓಟದ ನಡಿಗೆಯ ಸದ್ದು. ಜಗವೆಲ್ಲ ಎದ್ದಿರುವಾಗ ನಾನೇಕೆ ಮಲಗುವದೆಂದು ಧಡಕ್ಕನೆ ಎದ್ದಾಗ ಎಲ್ಲಾ ಸದ್ದುಗಳು ಮಾಯವಾದಂತೆ ಕ್ಷಣ ಅನಿಸುತ್ತವೆ.  ಬಾಡಿಗೆದಾರರು ಮೇಲೆ ನಿಂತು ಗಾಳಿಯನ್ನನುಭವಿಸುತ್ತ ಬಾಚಿಕೊಂಡ ತಲೆಗೂದಲು ಗಾಳಿಯೊಂದಿಗೆ ನೇರವಾಗಿ ಕೆಳಗಿರುವ ನಮ್ಮ ಮನೆಯೊಳಗೆ ಪ್ರವೇಶಿಸುತ್ತವೆ. ಮೇಲಿನಿಂದ ಚಲ್ಲಿದ ಕಸಮುಸುರೆ ಕಾಂಪೌಂಡ್ ಸುತ್ತಲೂ ವಾಸನೆ ಎಬ್ಬಿಸುತ್ತವೆ. ಅದರಿಂದ ಉತ್ಪತ್ತಿಯಾದ ನೊಣ ಸೊಳ್ಳೆಗಳಿಗೆ ಕೆಳಗಿರುವ ನಮ್ಮ ಮನೆ ಸಮೀಪದ ತಂಗುದಾಣವಾಗುತ್ತದೆ.     ಎಲ್ಲಾ ಕೆಲಸ ಮುಗಿಸಿ ಮದ್ಯಾನ್ಹ ಒಂದಿಷ್ಟು ಮಗ್ಗುಲಾಗಬೇಕೆನ್ನುವಷ್ಟರಲ್ಲಿ ಮೇಲೆ ಬಾಡಿಗೆಗಿರುವವರ ಊಟದ ಸಮಯವಾಗಿರಬೇಕು , ರೊಟ್ಡಿ ತಟ್ಟುವ ಸದ್ದು ತಲೆಯಲ್ಲಿ ತಟ್ಟಿದಂತಾಗಿ ತಟ್ಟುವ ಶಬ್ದವನ್ನೆ ಧ್ಯಾನಸ್ಥ ಸ್ಥಿತಿಯಲ್ಲಿ ಅನುಭವಿಸದೆ ಬೇರೆ ವಿಧಿ ಇಲ್ಲ. ರಾತ್ರೀಯ ನೀರವತೆಯಲ್ಲಿ ಏಕಾಗ್ರತೆ ಯಿಂದ ಓದಲು ಬರೆಯಲು ಉತ್ಸುಕಳಾದಾಗ ಮತ್ತೆ ಮೇಲಿನಿಂದ ಬಂದ ಚಿಕ್ಕ ಸದ್ದು ದೊಡ್ಡದಾಗಿ ಕಿವಿಗೆ ಅಪ್ಪಳಿಸುತ್ತದೆ. ಶಬ್ದವಿಲ್ಲದೆ ಬದುಕುವದು ಅದೆಷ್ಟು ಅಸಾದ್ಯ ಎನ್ನುವದು ಮನೆ ಬಾಡಿಗೆಗೆ ಕೊಟ್ಟಾಗಲೇ ಅರಿವಾದದ್ದು.

ಬಾಡಿಗೆಯನ್ನಂತೂ ಕೊಟ್ಟಾಯಿತು.ಅವರಿಷ್ಟದಂತೆ ಇರಲು ಬಿಟ್ಟರೆ ನಮಗೆ ಕಷ್ಟ.ನಮ್ಮಿಷ್ಟದಂತೆ ಅವರಿರಬೇಕೆಂದರೆ ಅವರಿಗೆ ಬಲು ಕಷ್ಟ. ಮನೆಮಾಲಿಕರು ಬಾಡಿಗೆದಾರರ ನಡುವಿನ ಸಂಘರ್ಷ ಮುಸುಕಿನೊಳಗಿನ ಗುದ್ದಾಟದಂತೆ ಸಾಗುತ್ತಿರುತ್ತದೆ.ಮನೆ ಮಾಲಿಕರು ವೆಜಿಟೇರಿಯನ್ ರಾದರೆ ಬಾಡಿಗೆಯವರ ನಾನ್ವೆಜ್ ಊಟಕ್ಕೆ ತಕರಾರು. ಇನ್ನೂ ಓನರ್ ನಾನ್ವೆಜ್ಜಿನವರಾದರೆ ಬಾಡಿಗೆದಾರರು ಅವರೊಂದಿಗೆ ಮಡಿವಂತಿಕೆಯಿಂದ ವರ್ತಿಸಿದರೆ ಅವರ ಅಹಂ ಗೆ ಪೆಟ್ಟುಬಿದ್ದಂತೆ.
ತಮ್ಮೊಂದಿಗೆ ನಯವಾದ ವರ್ತನೆಯಿಂದ ಇರಬೇಕೆಂದು ಮನೆಮಾಲಿಕರು ಬಯಸಿದರೆ , ನಾವೇನು ಪುಕ್ಕಟ್ಟೆ ಅವರ ಮನೆಯಲ್ಲಿ ಇರೋದಾ ದುಡ್ಡು ಕೊಟ್ಟು ಇರುತ್ತೆವೆ ಎಂಬ ದೋರಣೆ ಬಾಡಿಗೆದಾರರದ್ದು. ಒಟ್ಟಿನಲ್ಲಿ ಮನೆಮಾಲಿಕರ ಬಾಡಿಗೆದಾರರ ಸಂಬಂಧ ಬಿಸಿ ತುಪ್ಪದಂತೆ ನುಂಗಲು ಆಗದು ಉಗಳಲು ಆಗದು ಎಂಬಂತೆ.

ಇನ್ನೂ ಬೆಳೆಸಿದ ಗಿಡದ ಹೂ ಹಣ್ಣುಗಳಲೆಲ್ಲ ಪಾಲುಕೊಡದೆ ಇರಲಾಗದು.ಹೂಗಳನ್ನು ಗಿಡದಿಂದ ಕೀಳದೆ ಹಾಗೆ ಬಿಡಬೆರಕೆನ್ನುವಳು ನಾನು. ಹೂಗಳು ಗಿಡದಲ್ಲಿದ್ದರೆ ಮಾತ್ರ ಸೌಂದರ್ಯ.ಆದರೆ ಹೂ ಕೀಳಿ ದೇವರಿಗೆ ಅರ್ಪಿಸಿದರೆ ಮಾತ್ರ ಹೂ ಸಾರ್ಥಕಹೊಂದತ್ತದೆಂಬ ಭಾವನೆಯ ಅವರು ಎಲ್ಲಾ ಹೂಗಳನ್ನು ಕೀಳಿ ದೇವರಿಗೆ ಏರಿಸುವದರಲ್ಲಿ
ಸಾರ್ಥಕ್ಯ ಪಡೆಯುತ್ತಾರೆ. ಗಿಡದಲ್ಲಿ ನಳನಳಿಸುವ ಹೂಗಳನ್ನೆಲ್ಲ ಬೆಳಗಾಗುವಷ್ಟರಲ್ಲಿ ಕೀಳುವದನ್ನು ವಿರೋಧಿಸಿದರೆ ಕೆಟ್ಟವಳೆನಿಸಿಕೊಳ್ಳಬೇಕು.ದೇವರಿಗೆ ಏರಿಸಲು ಹೂ ಕೂಡ ಕೊಡದ ಕೆಟ್ಟ ಮನೆಯ ಮಾಲಿಕಳೆಂಬ ಬಿರುದು ಪಡೆದುಕೊಳ್ಳಬೇಕಾಗುತ್ತದೆ. ಇಂತಹ ಸಂಕಟಗಳನ್ನೆದುರಿಸಲು ಅದಾವ ಕರ್ಮಕ್ಕೆ ಮನೆ ಬಾಡಿಗೆಗೆ ಕೊಡಬೇಕು ಎಂದು ಅಲವತ್ತುಕೊಂಡದ್ದಿದೆ.

ತಿಂಗಳು ತಿಂಗಳು ಬರುವ ಬಾಡಿಗೆ ಲೆಕ್ಕಹಾಕಿ ಬರಿ ಆದಾಯ ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆ.ಬಾಡಿಗೆ ಪೊರ್ಷನ್ ಗಳಲ್ಲಿ ಸದಾ ಒಂದಿಲ್ಲೊಂದು ರಿಪೇರಿ ಬರುತ್ತಲೆ ಇರುತ್ತವೆ.ಒಬ್ಬರ ಮನೆಯಲ್ಲಿ ನಲ್ಲಿ ಕೆಟ್ಟರೆ , ಮತ್ತೊಬ್ಬರ ಮನೆಯಲ್ಲಿ ಫ್ಯಾನ್ ತಿರುಗುವದಿಲ್ಲ .ಮತ್ತೊಂದು ಪೊರ್ಷನ್ ನಲ್ಲಿ ಲೈಟ್ ಕನೆಕ್ಷನ್ ಹಾಳಾಗಿರುತ್ತದೆ.ಸಿಂಕ್ ನಲ್ಲಿ ನೀರು ಸರಾಗವಾಗಿ ಹರಿಯುವದಿಲ್ಲ. ಬಾತ್ ರೂಂ ಪೈಪಗಳು ಬ್ಲಾಕ್ ಆಗಿರುತ್ತವೆ , ಹೀಗೆ ಹನುಮಂತನ ಬಾಲದಂತೆ ಒಂದಿಲ್ಲೊಂದು ರಿಪೇರಿ ಇದ್ದೆ ಇರುತ್ತವೆ. ಪ್ಲಂಬರ್ , ಎಲೆಕ್ಟ್ರಿಷಿಯನ್ , ಕಾರ್ಪೆಂಟರ್ , ಕೇಬಲ್ಮನ್ ,ಇವರೆಲ್ಲರ ಭೆಟಿ ದಿನಾಲೂ ಒಂದಿಲ್ಲೊಂದು ಪೊರ್ಷನ್ ನಲ್ಲಿ ದಿನಾ ಇದ್ದದ್ದೇ.
ಒಮ್ಮೆ ನಡುರಾತ್ರಿ ಮೇಲೆ ಬಾಡಿಗೆಗಿದ್ದ ವ್ಯಕ್ತಿ ಪೋನ್ ಮಾಡಿದಾಗ ಗಾಬರಿಯಿಂದ ಎನಾದರೂ ಆರೋಗ್ಯ ಸಮಸ್ಯೆ ಕಾಡಿರಬಹುದೆ ಎಂದು ಆತಂಕವಾಗಿತ್ತು.ಆದರೆ ಅವರು ಕಾಲ್ ಮಾಡಿದ್ದು ಅವರ ರೂಂ ನಲ್ಲಿರುವ ಪ್ಯಾನ್ ಇದ್ದಕ್ಕಿದ್ದಂತೆ ತಿರುಗುವದು ನಿಲ್ಲಿಸಿತಂತೆ. ಮದ್ಯ ರಾತ್ರಿ ನಲ್ವತ್ತು ಡಿಗ್ರಿ ಉಷ್ಣಾಂಶದಲ್ಲಿ ಹೊರಗೂ ಒಂದು ಹನಿ ಗಾಳಿ ಇರದೆ ಅವನಾದರೂ ಏನು ಮಾಡಬೇಕು.ಇಂತಹ ಸಂದರ್ಭದಲ್ಲಿ ಮನೆಮಾಲಿಕ ತನಗೆ ಪರಿಹಾರ ಸೂಚಿಸಬೇಕೆಂದು ಪೋನ್ ಮಾಡಿರಬೇಕು. ಈ ಸರಿಹೊತ್ತಲ್ಲಿ ರೀಪೇರಿ ಮಾಡುವರಾರು ಸಿಗುತ್ತಾರೆ..!
ಫ್ಯಾನ್ ಇರದೆ ಒಂದು ಕ್ಷಣವೂ ಕಳೆಯಲಾಗದ ಈ ಧಗೆಯಲ್ಲಿ ಅವರ ಕಷ್ಟ ಅರ್ಥಮಾಡಿಕೊಂಡು ನಮ್ಮ ಮನೆಯ ಹಾಲ್ ನಲ್ಲಿ ಅವರಿಗೆ ಬೆಳಗಾಗುವವರೆಗೂ ತಂಗಲು ಅವಕಾಶಮಾಡಿಕೊಡಲಾಯಿತು.ಒಮ್ಮೊಮ್ಮೆ ಇಂತಹ ಜವಾಬ್ದಾರಿಗಳು ಮನೆಮಾಲಿಕರ ಹೆಗಲೇರುತ್ತವೆ.ಆದರೂ ಎಕೋ ಸಮಾಜದ ಕಣ್ಣಿಗೆ ಮನೆಮಾಲಿಕರೆ ಯಾವಾಗಲೂ ಕೆಟ್ಟವರೆನಿಸಿಕೊಳ್ಳುವದು.

ಕೆಲವೊಮ್ಮೆ ಬಾಡಿಗೆದಾರರು ಮನೆಮಾಲಿಕರ ಸಂಭಂಧ ಅನೋನ್ಯವಾಗಿಯು ಇರುತ್ತದೆ.ಒಬ್ಬರ ಕಷ್ಟಗಳಿಗೊಬ್ಬರು ಸ್ಪಂದಿಸುವ ಮನೋಭಾವವಿರುತ್ತದೆ.ಎರಡು ಕಡೆ ಹೊಂದಾಣಿಕೆ ಇದ್ದರೆ ಮಾತ್ರ ಇದು ಸಾದ್ಯ. ಬಾಡಿಗೆ ಮನೆಗೂ ಬಸ್ ಗೂ ಹೆಚ್ಚು ವ್ಯತ್ಯಾಸವಿಲ್ಲ.ನಾವು ಬಸ್ನಲ್ಲಿ ನಮ್ಮ ಗಮ್ಯ ತಲುಪುವವರೆಗೆ ಪಯಣಿಸುತ್ತೆವೆ.ಅಷ್ಟು ಹೊತ್ತು ಅದು ನಮ್ಮ ಬಸ್ ಆಗಿರುತ್ತದೆ.ನಮ್ಮನ್ನು ನಮ್ಮ ಸ್ಥಳದಲ್ಲಿ ಇಳಿಸಿದಾಗ ಅದರೊಂದಿಗೆ ನಮ್ಮ ನಂಟು ಸಮಾಪ್ತಿಯಾಗುತ್ತಧ.ಬಾಡಿಗೆ ಮನೆಗಳು ಹಾಗೆ .ಅವರ ಗುರಿ ತಲುಪಿದಾಗ ಮನೆ ತೆರವುಗೊಳಿಸುತ್ತಾರೆ.  ಅನಾವಶ್ಯಕ ವಾಗಿ ಬಾಡಿಗೆ ದರ ಏರಿಸುವದು , ಮನೆ ಖಾಲಿ ಮಾಡಿಸುವದು ಮಾಡಿದರೆ ದಬ್ಬಾಳಿಕೆ ಮಾಡಿದಂತಾಗುವದು . ಬಾಡಿಗೆಗಿರುವವರು ಮನೆಮಾಲಿಕರನ್ನು ಗೌರವದಿಂದ ಕಾಣಬೇಕು. ಬಾಡಿಗೆ ಕೊಡುತ್ತೆವೆಂದು ದರ್ಪ ತೋರುವದಾಗಲಿ ಅಥವಾ ನಮಗೂ ಅವರಿಗೂ ಸಂಭಂಧವೆ ಇಲ್ಲದಂತೆ ನಿರ್ಲಕ್ಷ್ಯ ದಿಂದ   ಇರುವದಾಗಲಿ ಮಾಡಿದರೆ ಒಂದೇ ಮನೆಯಲ್ಲಿ ಇರುವದು ಕಷ್ಟವಾಗಬಹುದು. ಬಾಡಿಗೆಯ ಮನೆ ಎಂದರೆ ನಮ್ಮ ಸಂತದ್ದಲ್ಲ ಅದಕ್ಯಾಕಿಷ್ಟು ಸ್ವಚ್ಛ ಗುಳಿಸಬೇಕು ಎಂಬ ಧೋರಣೆ ಬಹಳ ಜನರಲ್ಲಿ ಇರುತ್ತದೆ. ಮನೆ ಸ್ವಚ್ಚವಾಗಿಟ್ಟಕೊಳ್ಳಿ ಎಂದು ಓನರ್ ಹೇಳಿದರೆ ಸಿಡಿಮಿಡಿಗುಟ್ಟುತಾರೆ.ಅವರು ಬಿಟ್ಟು ಹೋದ ಮೇಲೆ ಜಿಡ್ಡುಗಟ್ಟಿದ ಬಾತ್ರೂಂ ಗಳು ಸಿಂಕ್ಗಳು ದೇವರಿಗೆ ಪ್ರೀತಿ. ಯಾಕಾದರೂ ಬಾಡಿಗೆ ಕೊಟ್ಟೆವೋ ಎಂದು ಹಳಿದುಕೊಳ್ಳದೆ ವಿಧಿ ಇಲ್ಲ. ಕಟ್ಟಿಯಾಗಿದೆ ಖಾಲಿ ಇಟ್ಟು ಮಾಡುವದೇನು. ಮತ್ತೊಬ್ಬ ಬಾಡಿಗೆಯವರನ್ನು ಬರಮಾಡಿಕೊಳ್ಳಲೇಬೇಕು.
   ಮನೆ ಮಾಲಿಕರಾಗಲಿ ಬಾಡಿಗೆದಾರರಾಗಲಿ ಇಬ್ಬರಿಗೂ ಪೃಕೃತಿಯೆ ಮಾಲಿಕ.ನಾವೆಲ್ಲರೂ ಅದರ ಬಾಡಿಗೆದಾರರೇ.


ಜ್ಯೋತಿ , ಡಿ.ಬೊಮ್ಮ.

One thought on “ಬಾಡಿಗೆ ಮನೆಯನೆಂದೂ ಕಟ್ಟದಿರು..ಪ್ರಬಂಧ-ಜ್ಯೋತಿ , ಡಿ.ಬೊಮ್ಮ.

Leave a Reply

Back To Top