ನೆನಪು

ವಿ.ಕೆ.ಮೂರ್ತಿ

ದಾದಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ

  ಬೆಳಕು ನೆರಳುಗಳ ಚಮತ್ಕಾರಕ್ಕಾಗಿ ದಾದಸಾಹೇಬ್ ಫಾಲ್ಕೆ ಪ್ರಶಸ್ತಿ  _   ವಿ.ಕೆ.ಮೂರ್ತಿ    

 

  ಪ್ಯಾಸಾ, ಕಾಗಜ್ ಕೆ ಫೂಲ್, ಸಾಹಿಬ್ ಬೀಬಿ ಔರ್ ಗುಲಾಮ್, ಜುಗ್ನು, ಸೂರಜ್, ಲವ್ ಇನ್ ಟೋಕಿಯೊ, ಜಿದ್ದಿ, ಇನ್ನೂ ಅನೇಕ ಹಿಂದಿ ಚಲನಚಿತ್ರಗಳ ಛಾಯಾ ಗ್ರಾಹಕ ವಿ.ಕೆ ಮೂರ್ತಿಯವರ ಹೆಸರನ್ನು ಕೇಳದೆ ಇರುವವರು ಯಾರು ಇಲ್ಲ ಎಂದು ಖಂಡಿತವಾಗಿ ಹೇಳಬಹುದು. ಬಹಾರೋ ಫೂಲ್ ಬರ್ಸಾವೊ, ಚೌದವೀಂ ಕಾ ಚಾಂದ್  ಹೊ, ವಕ್ತ್ ನೇ ಕಿಯಾ,  ಸಾಯೊನಾರ, ಹಾಡುಗಳ ರಮ್ಯ ದೃಶ್ಯಗಳು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಮತ್ತೆ ಮತ್ತೆ ನೋಡಿದಷ್ಟೂ ಇನ್ನೂ ನೋಡಬೇಕೆಂಬ ಹಂಬಲ, ಇದರ ರಹಸ್ಯ ಗುರುದತ್ ಫಿಲಮ್ಸ್ .ವಿ.ಕೆ ಮೂರ್ತಿ ಯವರ ಅಧ್ಭುತ ಛಾಯಾಗ್ರಹಣ ಚಮತ್ಕಾರ.

     ಇತ್ತೀಚೆಗೆ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪಡೆದ ವಿ.ಕೆ. ಮೂರ್ತಿಯವರ ಪರಿಚಯ ಎಲ್ಲರಿಗೂ ಇರುವ ಸಂಗತಿ. ಇಷ್ಟು ಪ್ರಸಿದ್ದವಾದ ದೊಡ್ಡ ಪುರಸ್ಕಾರವನ್ನು ಗಳಿಸಿರುವ ಇವರಿಗೆ  ಸಿಂಗಾರಿ ಪರವಾಗಿ ನಮ್ಮ ಅಭಿನಂದನೆಗಳನ್ನು ಸಲ್ಲಿಸೋಣ.  ಈ ಸಣ್ಣ ಲೇಖನವನ್ನು ಬರೆಯುವ ಮುನ್ನ ವಿ.ಕೆ. ಮೂರ್ತಿಯವರ ಮನೋರಂಜಕ, ಸರಳ,  ಆದರ್ಶ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಕನ್ನಡಿಗರಿಗೆ ನೀಡಿರುವ ಶ್ರೀಮತಿ ಉಮಾರಾವ್ ಅವರಿಗೆ ವಂದನೆಗಳನ್ನು ಅರ್ಪಿಸೋಣ.  –ಬಿಸಿಲು ಕೋಲು– ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ಈ ಪುಸ್ತಕವನ್ನು ವಿ.ಕೆ.ಮೂರ್ತಿಯವರ ಕೈನಿಂದಲೇ ಪಡೆದದ್ದು ನನ್ನ ಭಾಗ್ಯ.  “ಕುಟ್ಟಿ ” ಇದು ಬಂಧು ಮಿತ್ರರು ಇವರನ್ನು ಪ್ರೀತಿಯಿಂದ ಕರೆಯುವ ಹೆಸರು.  ಪಾರ್ಥನಾರಾಯಣ ಪಂಡಿತರ ಮಗಳಾದ ಸಂಧ್ಯ ಇವರ ಪತ್ನಿ, ನನ್ನ ಸೋದರತ್ತೆಯ ಮಗಳೆಂದು ಹೇಳಲು ಹೆಮ್ಮೆಯಾಗುತ್ತದೆ. ಇವರ ಏಕಮಾತ್ರ ಪುತ್ರಿ ಛಾಯಾ.    ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ವಿ.ಕೆ. ಮೂರ್ತಿಯವರ ವ್ಯಕ್ತಿತ್ವ.  ಈ ಕೆಳಗಿನ ಸಾಲುಗಳು ಅವರ ಲೇಖನ ದಿಂದ ಸೃಷ್ಠಿಯಾಗಿರುವ  ಸರ್ವಜ್ಞನ ಶೈಲಿ ಯಲ್ಲಿ ಬರೆದಿರುವ ಪದ್ಯ, ಇದೇ ಅವರ ಜೀವನದ ಶೈಲಿ. ಈ ಅರ್ಥ ತುಂಬಿದ ಪದ್ಯ  ಅವರು ಕವಿಗಳೂ ಹೌದು ಎಂದು ಸಾರುತ್ತದೆ.

 

        ಸಾರು ಸಾರೆಂದೇಕೆ ಸೊರಗುವೆ

        ಸಾರಿದರೆ ಸಿರಿ ಸೊರಗುವುದೇ ಸರಿ

        ಸಾರದೆಯೆ ಸಲ್ಲಿಸೊ ಸೇವೆ ಸರ್ವಗ್ನ

   ನನಗೆ ಕುಟ್ಟಿಯವರ ಪರಿಚಯ ನಾನು ಮದುವೆ ಯಾದ ಮೇಲೆ ಮುಂಬಯಿಗೆ ಬಂದಾಗಿಂದ,  “ಸಿಂಪಲ್ ಲಿವಿಂಗ್ ಅಂಡ್  ಹೈ ಥಿಂಕಿಂಗ್” ,  ತತ್ವದ ನನ್ನ ಪತಿ ವೆಂಕಟೇಶ್ ಅವರು ಮುಂಬೈ ನಲ್ಲಿ ಕೆಲಸಕ್ಕೆ ಸೇರಿದಾಗಿನಿಂದ ಅಂದರೆ ೩೦ ವರ್ಷಗಳಿಂದ ಇವರ ಸಂಗದಲ್ಲೆ ಬೆಳೆದವರು. ಏಕೆಂದರೆ ಇಬ್ಬರೂ  ಒಂದೆ  ನಾವೆಯ ಪಯಣಿಕರು, ಹೆಚ್ಚು ಮಾತಿಲ್ಲದ, ಬೂದಿ ಮುಚ್ಚಿದ ಕೆಂಡದಂತಹ ಸ್ವಭಾವದವರು.  ಹೆಸರಾಂತ ನಟ ನಟಿಯರ, ಚಲನಚಿತ್ರ ರಂಗದ ಮಿತ್ರರ ಹುಟ್ಟಿದ ಹಬ್ಬಕ್ಕೆ ಕೊಡಬೇಕಾಗಿದ್ದ ಗಿಫ್ಟ್ ಪ್ಯಾಕೆಟ್ಗಳನ್ನು  ವೆಂಕಟೇಶ್ ಅವರು ತಯಾರಿಸಿದಾಗಲೆ ಕುಟ್ಟಿಗೆ ಸಮಾಧಾನವಾಗುತ್ತಿತ್ತಂತೆ!     

Cinematographer V. K. Murthy no more - The Hindu

  ‘ದೇವಿನಿವಾಸ’ ಇವರ ಮುಂಬಯಿ ಮನೆ ಅತಿಥಿ ಸತ್ಕಾರ ಗಳ ದೇಗುಲವಾಗಿತ್ತೆಂದರೆ ಅತಿಶಯೋಕ್ತಿಯಲ್ಲ.  ೧೯೬೮ ರಲ್ಲಿ ನಾವು ಮದುವೆಯಾಗಿ ಮುಂಬಯಿಗೆ ಬಂದಾಗ ಮೈಸೂರಿನಲ್ಲಿ ಹುಟ್ಟಿ ಬೆಳೆದ  ನನಗಂತೂ ಎರಡು ಊರುಗಳ ಅಂತರ ಅಜಗಜಾಂತರವಾಗಿತ್ತು. ಮುಂಬಯಿಗೆ ಬಂದ ದಿನ ಮೊದಲು ನಾವು ಹೋಗಿದ್ದು ಸಂಧ್ಯ ಕುಟ್ಟಿ ಯವರ ಮನೆಗೆ . ಆಲ್ಲಿ ನಮಗೆ ದೊರಕಿದ ಅತಿಥಿ ಸತ್ಕಾರ ಇಂದಿಗೂ ಮರೆತಿಲ್ಲ.

                              ಮುಂದೆ ಕೊಲಾಬ ಮನೆಯಲ್ಲಿ ಇದ್ದಾಗಲೂ ವಾರಕ್ಕೊಮ್ಮೆ ಕುಟ್ಟಿ, ಸಂಧ್ಯಾ ಅವರನ್ನು ನೋಡಲು ತಪ್ಪದೆ ಹೋಗುತ್ತಿದ್ದೆವು. ಕುಟ್ಟಿಯವರು ಸಂಗೀತ ಪ್ರಿಯರು,  ವಯಲಿನ್, ಸಿತಾರ್ ವಾದ್ಯಗಳನ್ನು ಲೀಲಾಜಾಲವಾಗಿ  ನುಡಿಸುತ್ತಾರೆ. ಸಂಗೀತ ಪ್ರೇಮಿ ಯಾದ ವೆಂಕಟೇಶ್, ಇವರು ನುಡಿಸುತ್ತಿದ್ದ ಸಿತಾರ್ ವಾದ್ಯದಿಂದ ಅಲೆಗಳಂತೆ  ಹೊರಬರುತ್ತಿದ್ದ  ಸ್ವರ, ಸಾಹಿತ್ಯವನ್ನು ಅವರ ಜೊತೆ ಆನಂದವಾಗಿ ಕೇಳುತ್ತಿದ್ದರು. ಛಾಯ, ಆಶ್ವಿನಿ, ಭಾರತಿ, ರಾಘು, ಮಾನಸ ಅವರ ವಿಶ್ವಾಸ ಪೂರ್ವಕ, ಹಾಸ್ಯದ ಹೊನಲ  ಮಾತುಕತೆಗಳೊಂದಿಗೆ, ಸಂಧ್ಯಾರವರ ರಸದೌತಣದ ಸವಿ ನೋಡುತ್ತಾ ಕಳೆದ ಗಳಿಗೆಗಳು ಇಂದಿಗೂ ಅಚ್ಚಿನಂತಿದೆ.      

100 Years Of Bollywood - V.K Murthy : A Visionary Behind The ...

                          ಒಂದು ಸಾರಿ  ನಾನು ಶೂಟಿಂಗ್ ನೋಡಬೇಕೆಂದು ಆಸೆಪಟ್ಟಾಗ ಕುಟ್ಟಿ ನಮ್ಮನ್ನು ಸ್ಟುಡಿಯೊ ಗೆ ಕರೆದುಕೊಂಡು ಹೋದರು. ಶಿಕಾರ್ ಹಿಂದಿ ಚಿತ್ರಕ್ಕಾಗಿ ಇಡೀ ರಾತ್ರಿ ಚಿತ್ರೀಕರಣ. ಪ್ರಸಿದ್ಧ ನಟ ಧರ್ಮೇಂದ್ರ, ಪ್ರಸಿದ್ಧ ನಟಿ ಆಶಾಪರೇಖ್ ಅವರನ್ನು ನೋಡಿದ ನಾವೇ ಧನ್ಯರು. ಆಗಿನ ಕಾಲದಲ್ಲಿ ಧರ್ಮೇಂದ್ರ ಎಂದರೆ ನಮ್ಮ ಅಚ್ಚುಮೆಚ್ಚಿನ ನಟ.. ಅವರ ಸಿನಿಮಾ ಬಿಡುಗಡೆಯಾದ ಮೊದಲನೆ ದಿನ ನೋಡುವುದೆಂದರೆ ಜೇವನದಲ್ಲಿ ಏನನ್ನೊ ಸಾಧಿಸಿದಷ್ಟು ಸಂತೋಷ.  ಕಾಲೇಜ್ ತಪ್ಪಿಸಿ ಮಾರ್ನಿಂಗ್ ಶೋ ಗೆ ಓಡುತ್ತಿದ್ದುದು ಇಂದಿಗೂ ನೆನಪು.   ಶೂಟಿಂಗ್ ನೋಡಿದ ಮೇಲೆ  ಹತ್ತಿರ ನಟ ನಟಿಯರನ್ನು ನೋಡಿದ ಅವಕಾಶ, ಅಬ್ಬಾ ಯಾರಿಗುಂಟು ಯಾರಿಗಿಲ್ಲ, ಈ ಸುವರ್ಣಾವಕಾಶ  ಕಲ್ಪಿಸಿದ  ಕುಟ್ಟಿಯವರಿಗೆ ಇಂದಿಗೂ ಚಿರಋಣಿ.

  ನನ್ನ ಅಭಿಮಾನ  ಕುಟ್ಟಿಯವರ ಜೀವನದ ಬಗ್ಗೆ, ಅವರ ಚಿತ್ರ ರಂಗದ ಪ್ರವೇಶ, ಕಡಲ ಉಬ್ಬರವಿಳಿತಗಳಂತೆ ಹಾಸು ಹೊಕ್ಕಾಗಿ ಬಂದ ಇವರ ಪ್ರವೃತ್ತಿಯ ಬಗ್ಗೆ ಬರೆಯಲು ಆಶಿಸುತ್ತಿದೆ. ಈ ಕೆಳಗಿನ ಸಾಲುಗಳನ್ನು ಬರೆಯಲು ಆಧಾರ ಉಮಾರಾವ್ ಅವರ ಬಿಸಿಲು ಕೋಲು ಪುಸ್ತಕ.

New Delhi Film Society: फाल्के अवॉर्ड विजेता ...

ಶ್ರೀ ವೆಂಕಟರಾಮ್ ಪಂಡಿತ್ ಕೃಷ್ಣ ಮೂರ್ತಿಯವರ ಜನನ ೧೯೨೨ ನೇ ಇಸವಿ ನವೆಂಬರ್ ೨೬ ನೇ ತೇದಿ. ಹುಟ್ಟಿದ ಊರು ಗಂಧದ ಗುಡಿ ಮೈಸೂರು. ತಂದೆ ವೆಂಕಟರಾಮ ಪಂಡಿತ್ ಆಯುರ್ವೇದ ದ ವೈದ್ಯರಾಗಿದ್ದರು. ತಾಯಿಯವರ ಹೆಸರು ನಾಗಮ್ಮ.  ಐದು ಜನ ಮಕ್ಕಳ ಈ  ದಂಪತಿಗಳಿಗೆ ವಿ.ಕೆ. ಮೂರ್ತಿ ಯವರು ಮೂರನೆ ಮಗ. ಇವರ ಬಾಲ್ಯ ಸಂಪಿಗೆ ಮರಗಳ ನಡುವೆ ಇದ್ದ ಒಂದು ಸುಂದರ ಮನೆಯ ವಾತಾವರಣದಲ್ಲಿ. ಒಬ್ಬರು ಆಣ್ಣ ಮೂರು ಜನ ತಂಗಿಯರ ಜೊತೆ ತಂದೆ ತಾಯಿಯ ಅಕ್ಕರೆಯಲ್ಲಿ. ಬೆಳೆಯುತ್ತಿದ್ದಂತೆ ಬರಸಿಡಿಲು ಬಡಿದಂತೆ ಇವರ ತಾಯಿ ಚಿಕ್ಕವಯಸ್ಸಿನಲ್ಲೆ ಸಾವನ್ನೊಪ್ಪಿದರು. ಅವರ ತಂಗಿಯರು ದೊಡ್ಡಮ್ಮನ ಮನೆ ಸೇರಿದರು.  ಹೀಗಾಗಿ ಕುಟ್ಟಿ ತಂದೆಯ ಆಸರೆಯಲ್ಲೆ ಬೆಳೆದವರು. ಪುಟ್ಟ ಮೂರ್ತಿಯವರಿಗೆ ಮನೆಯಲ್ಲಿ ಹೆಂಗಸರಿಲ್ಲದಿದ್ದ ಕಾರಣ ದೊಡ್ಡ ಅಡುಗೆ ಜವಾಬ್ದಾರಿ. ಬೆಳೆಯುವ ಸಸಿ ಮೊಳಕೆಯಲ್ಲೆ ಎಂಬಂತೆ ತಾವೆ ಪ್ರೆಶರ್ ಕುಕರ್ ತಯಾರಿಸಿ ಕೊಂಡಿದ್ದರಂತೆ!

  ಚಿತ್ರರಂಗದ ಕಡೆ ಮನಸ್ಸು ಹರಿಯಲು ಕಾರಣ ಅವರ ನೆಂಟರೊಬ್ಬರಾದ ಸುಬ್ಬರಾಮಯ್ಯ ಅನ್ನುವವರಿಂದ. ಆಗಿನ ಕಾಲದಲ್ಲಿ ಮೂಕಿ ಚಿತ್ರಗಳು ಇದ್ದಿದ್ದರಿಂದ ಸಿನಿಮ ಸನ್ನಿವೇಶಗಳಿಗೆ ಕಳೆ ತುಂಬಲು ತೆರೆಯ ಹಿಂದೆ ವಾದ್ಯ ಸಂಗೀತ ನುಡಿಸುತ್ತಿದ್ದರಂತೆ.  ಇದರಲ್ಲಿ ಸುಬ್ಬ ರಾಮಯ್ಯ ವಾದ್ಯಗಳನ್ನು ನುಡಿಸುತ್ತಿದ್ದವರು.  ಚಿತ್ರ ನೋಡಲು ಇವರ ಆಹ್ವಾನ ಕುಟ್ಟಿಯವರಿಗೆ ಬಹಳ ಸಂತಸದ ಸುದ್ದಿ. ಈ ಆಹ್ವಾನವೆ ಇವರ ಜೀವನದ ಹಾದಿಗೆ ನಾಂದಿಯಾಯಿತೇನೊ!  ಚಿತ್ರರಂಗ, ಮೂಕಿಯಿಂದ ಟಾಕಿಗೆ ಬದಲಾಯಿಸಿದಾಗ ರಾಜಕೀಯ, ಸಾಮಾಜಿಕ, ಆಕ್ಶನ್ ಸಿನಿಮಾಗಳನ್ನು ನೋಡುವ ಅವಕಾಶ ಬಾಲಕ ಕುಟ್ಟಿಯವರಿಗೆ ಲಭಿಸುತ್ತಿತ್ತಂತೆ.  

  ಇವರ ವಿದ್ಯಾಭ್ಯಾಸ ಬನುಮಯ್ಯ ಮಾಧ್ಯಮಿಕ ಶಾಲೆ ಮತ್ತೆ ಶಾರದಾವಿಲಾಸ ಹೈಸ್ಕೂಲಿನಲ್ಲಿ. ಕ್ರಿಕೆಟ್, ಫುಟ್ ಬಾಲ್, ಚಿಣ್ಣೀ ದಾಂಡು ಇವರ ಮೆಚ್ಚಿನ ಆಟಗಳು. ಜೊತೆಗೆ ಈಜು ಕೂಡ ಇವರಿಗೆ ಪ್ರಿಯ. ಹೆಂಗಸರ ಜೊತೆ ಮಾತಾಡುವುದಕ್ಕೆ ನಾಚುತ್ತಿದ್ದ ಮೂರ್ತಿ ಯವರು ಮುಂದೆ ಪ್ರಸಿದ್ಧ ಹೆಸರಾದ ನಟಿಯರ ಜೊತೆ ಕೆಲಸ, ಅಬ್ಬ ಇದಕ್ಕೆ ಹೇಳುವುದು –ಲೈಫ್ ಈಸ್ ಎ ಮಿಸ್ಟರಿ– ಅಂತ.

  ಕಲಾವಿದ ಮೂರ್ತಿಯವರಿಗೆ ಸಂಗೀತ ಕಲಿಯಲು ಆಸೆ ಮೂಡಿದ್ದರಿಂದ ಪಿಟೀಲು ವಾದ್ಯ ಕಲಿಯಲು ಆರಂಭ, ಮತ್ತೆ ಸ್ನೇಹಿತರನ್ನೆಲ್ಲ ಕೂಡಿಸಿ ಆರ್ಕೆಸ್ಟ್ರಾ ಆರಂಭ ಮಾಡಿದರಂತೆ. ಒಂದು ಸಾರಿ ಪ್ರಸಿದ್ಧ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಇರುವಿನಲ್ಲಿ ವಾದ್ಯ ಸಂಗೀತ ನುಡಿಸುವ ಅವಕಾಶ, ರಾಮನ್ ಅವರ ಹೊಗಳಿಕೆ ಇವರ ಸಂಗೀತದ ಆಸಕ್ತಿಯನ್ನು ಇಮ್ಮಡಿಸಿತ್ತು.

  ಮುಂದೆ ಒಂದು ಪತ್ರಿಕೆಯ ಸಣ್ಣ ಜಾಹೀರಾತು ಇವರನ್ನು ಮುಂಬಯಿ ಕಡೆಗೆ ಸೆಳೆಯಿತಂತೆ.  ಆ ಜಾಹಿರಾತು ಅಲ್ಲಿ ಮೂವೀ ಟೋನ್ ಕಾಲೇಜಿನವರು ಛಾಯಾ ಗ್ರಹಣದಲ್ಲಿ ತರಬೇತು ನೀಡುತ್ತೇವೆ  ಎಂದು  ಸಾರಿದ್ದರಂತೆ. ಚಿತ್ರರಂಗದ ಆಕರ್ಷಣೆ  ಮುಂಚಿಂದಲೆ ಇದ್ದ ಕುಟ್ಟಿ ಯವರಿಗೆ ಇದು ಕಬ್ಬಿಣ ಅಯಸ್ಕಾಂತವನ್ನು ಆಕರ್ಷಿಸಿದಂತೆ  ಎಂದು ಬೇರೆ ಹೇಳಬೇಕಿಲ್ಲ. ಮುಂಬಯಿಗೆ ಅಣ್ಣಾ ಅತ್ತಿಗೆಯವರ ಉತ್ತೇಜನದಿಂದ ಹೊರಟರೆ ಅಲ್ಲಿ ಮುಂದೆ ಆಗಿದ್ದು ದೊಡ್ಡ ನಿರಾಸೆ, ಅದು ಒಂದು ಮೋಸದ ಜಾಹೀರಾತು. ಮುಂಬಯಿನಲ್ಲಿ ನೆಂಟರ ಮನೆಯಲ್ಲಿ ಮೂರು ತಿಂಗಳು ವಾಸದ ನಂತರ ಮೈಸೂರಿಗೆ ವಾಪಸ್ಸು ಬಂದಾಗ ಆಗಲೆ ಕ್ವಿಟ್ ಇಂಡಿಯ ಚಳುವಳಿ ಆರಂಭ. ದೇಶಪ್ರೇಮದಿಂದ ಚಳುವಳಿಯಲ್ಲಿ ಭಾಗವಹಿಸಿದಾಗ ಮೂರು ತಿಂಗಳು ಜೈಲು ವಾಸದ ಅನುಭವ. ಅಲ್ಲೂ ಕೂಡ ಲೀಡರ್ ಆಗಿ ಎಷ್ಥೋ ಖೈದಿಗಳಿಗೆ ಸಹಾಯ ಮಾಡುತ್ತಿದ್ದರಂತೆ.

प्रसिद्ध चलचित्रकार व्ही.के.मूर्ती ...

  ಇವರ ಮುಂದಿನ ಹೆಜ್ಜೆ ಜಯಚಾಮರಾಜೇಂದ್ರ ಆಕ್ಯುಪೇಷನಲ್ ಇನ್ಸ್ಟಿಟ್ಯೂಟ್ ಗೆ ಮೈಸೂರಿಂದ ಬೆಂಗಳೂರಿಗೆ ಪಯಣ, ಕಾರಣ ಅಲ್ಲಿ ಇವರಿಗೆ ಪ್ರಿಯವಾದ ಸಿನಿಮಟೋಗ್ರಫಿಯಲ್ಲಿ ತರಬೇತು ನೀಡುತ್ತಿದ್ದರು. ಒಂದು ಸಣ್ಣ ಕ್ಯಾಮರ ಮೂಲಕ ಪಾಠ ಹೇಳುತ್ತಿದ್ದರಂತೆ. ಆ ಕ್ಯಾಮರಾನ ವಿದ್ಯಾರ್ಥಿಗಳು ದೂರದಿಂದಲೆ ನೋಡಬೇಕಾಗಿತ್ತು ಅನ್ನುತ್ತಾರೆ  ಕುಟ್ಟಿಯವರು, ಆದರೆ ಮುಂದೆ ದೊಡ್ಡ ದೊಡ್ಡ ಕ್ಯಾಮರಾ ಗಳು ಕಪ್ಪು ಬಿಳುಪು ಗಳಿಂದ ಮುಂದೆ ಸೌಂದರ್ಯ ಬಣ್ಣ ಗಳಿಂದ ಅವರ ಕೈಚಳಕದಿಂದಲೇ ಮೆರೆದವು. ಆಬ್ಬ ಆ ಕ್ಯಾಮರಗಳ ಅದೃಷ್ಟ ಯಾರಿಗಿದೆ!.

  ಇಲ್ಲಿಯ ಕೋರ್ಸ್ ಮುಗಿಯುತ್ತಿದ್ದಂತೆ ಸರ್ಟಿಫಿಕೇಟ್ ಪಡೆಯಲು ಟ್ರೈನಿಂಗ್ ಗಾಗಿ ಮುಂಬಯಿಗೆ ಪ್ರಯಾಣ. ಅಲ್ಲಿ ಕೆಲಸ ಕಲಿಯಲು ಸೇರಿದ್ದು  ಪ್ರಕಾಶ್ ಸ್ಟುಡಿಯೊ. ಅಲ್ಲಿಂದ ಮುಂದಿನ ಹೆಜ್ಜೆ ಫಲಿಮಿಸ್ತ್ರಿ ಗೆ ಸಹಾಯಕರಾಗಿ ಕೆಲಸ ಮಾಡಿದ್ದು.

  ಚಿತ್ರರಂಗದ ಜೊತೆಯಲ್ಲಿ ರಂಗ ಭೂಮಿ ಆಕರ್ಷಣೆ ಕೂಡ! ಇದಕ್ಕೆ ನಾಂದಿ ಮೈಸೂರ್ ಅಸೊಸಿಯೇಶನ್ ನಲ್ಲಿ ಗಗ್ಗಯ್ಯನ ಗಡಿಬಿಡಿ ನಾಟಕ ನಿರ್ದೇಶಿಸಿದ್ದು. ಹಾಗೆಯೆ ಕನ್ನಡ ಗೀತೆಗಳನ್ನು ಹಾಡುವ ಆಸಕ್ತಿ. ಒಂದು ಸಾರಿ ದ.ರ. ಬೇಂದ್ರೆ ಯವರ ಸನ್ನಿಹದಲ್ಲಿ ಮುಂಬಯಿ ಪೋದಾರ್ ಕಾಲೇಜಿನಲ್ಲಿ, ಆ ಕವಿಯೇ ಬರೆದ ಕವಿತೆ ಮೂಡಲ ಮನೆಯ ಮುತ್ತಿನ ನೀರಿನ, ಹಾಡುವ ಅವಕಾಶ. ನಿಜಕ್ಕು ಕುಟ್ಟಿಯವರು ಜಾಕ್ ಆಫ್ ಆಲ್ ಟ್ರೇಡ್ಸ್ಲ್!

  ನವೆಂಬರ್ ೨೬, ೧೯೬೧ ಇಸವಿಯಲ್ಲಿ ಪಾರ್ಥನಾರಾಯಣ ಪಂಡಿತ್, ನಮ್ಮ ತಂದೆಯವರ ಸಹೋದರಿ ರತ್ನಮ್ಮ ಅವರ ಮಗಳಾದ ಸಂಧ್ಯ ಅವರೊಡನೆ ತಿರುಪತಿಯಲ್ಲಿ ವಿವಾಹ, ಮತ್ತೆ ಮುಂಬಯಿ ಯ ಗಡಿ ಬಿಡಿ ಜೀವನ. ಕುಟ್ಟಿಯವರಷ್ಟೇ ಕಲೆಯಲ್ಲಿ ಆಸಕ್ತಿ ಇದ್ದ ಸಂಧ್ಯಾಗೆ ಅವರೇ ಹೇಳಿರುವಂತೆ ಯಾವ ತರಹ ಲಕ್ಶ್ಮಣ ರೇಖೆಗಳಿಲ್ಲದ ಕಲಾಜೀವನಕ್ಕೆ ಕುಟ್ಟಿಯವರ ಉತ್ತೇಜನ ಇತ್ತಂತೆ. ಬಂಧು ಮಿತ್ರರಿಗೆಲ್ಲಾ ಸಂಧ್ಯಾ  ಎಂದರೆ ಬಹಳ ಗೌರವ ಹಾಗೂ ಪ್ರೀತಿ, ನನ್ನ ಪತಿ ವೆಂಕಟೇಶ್ ಇವರನ್ನು ಪ್ರೀತಿ ಇಂದ ದೀದಿ ಎಂದೆ ಕರೆಯುತ್ತಿದ್ದರು. ಇಬ್ಬರೂ ಕಣ್ಮರೆಯಾಗಿದ್ದು  ನಮ್ಮ ದುರಾದೃಷ್ಟ.

  ೧೯೫೦ ನೆ ಇಸವಿಯಲ್ಲಿ ಗುರುದತ್ ಮತ್ತು ಕುಟ್ಟಿ ಯವರ ಮೊದಲ ಭೇಟಿ, ಅದು ಅವರು ಅಫ್ಸರ್ ಅನ್ನುವ ಚಿತ್ರದಲ್ಲಿ ಕ್ಯಾಮರಾಮನ್ ಆಗಿ ಕೆಲಸ ಮಾಡುತ್ತಿದ್ದಾಗ, ಇವರಿಬ್ಬರ ಪರಿಚಯ ಮಾಡಿಸಿದವರು ಪ್ರಸಿದ್ಧ ನಟ ದೇವಾನಂದ್ ಅವರು, ಗುರುದತ್ ಮತ್ತು  ದೇವಾನಂದ್ ಮೆಚ್ಚಿನ ಗೆಳೆಯರಾಗಿದ್ದರಂತೆ. ಕುಟ್ಟಿಯವರ ಕೆಲಸ ಗಮನಿಸುತ್ತಿದ್ದ ಹಾಗೆ ಗುರುದತ್ ಹೇಳಿದರಂತೆ,

-“ಮೂರ್ತಿ ನನ್ನ ಮುಂದಿನ ಚಿತ್ರದಲ್ಲಿ ನಾವಿಬ್ಬರೂ ಸೇರಿ ಒಟ್ಟಿಗೆ ಕೆಲಸ ಮಾಡೋಣ” ಎಂದು,  ಗುರುದತ್ ನನ್ನ ಬಾಳಿನಲ್ಲಿ ಬಂದದ್ದು ಹಾಗೆ ಎಂದು ವಿ.ಕೆ. ಮೂರ್ತಿಯವರೇ ಹೇಳುತ್ತಾರೆ—..

  ಬಿಸಿಲು ಕೋಲು ಪುಸ್ತಕದ ಬರಹಗಾರ್ತಿ ಉಮಾರಾವ್ ಬರೆದಿರುವಂತೆ —–ನಂತರ ಈ ಜಾದೂಗಾರರಿಬ್ಬರೂ ಕೂಡಿ ಸೃಷ್ಟಿಸಿದ  ಮಾಯಾಜಗತ್ತು ಈಗ ಸಿನಿ ಇತಿಹಾಸ—-..

  ೧೯೫೨ ರಲ್ಲಿ ಜಾಲ್ ಚಿತ್ರದಲ್ಲಿ ಸ್ವತಂತ್ರ ಕ್ಯಾಮರಾಮನ್, ಮೊದಲನೇ ಚಿತ್ರಕ್ಕೆ ಫಿಲ್ಮ್ ಫೇರ್ ಪ್ರಶಸ್ತಿ. “ಬೆಳೆಯುವ ಸಸಿ ಮೊಳಕೆಯಲ್ಲೆ” ಅಂದಂತೆ ಕುಟ್ಟಿಯವರ ಛಾಯಾಗ್ರಹಣ ಮೂರ್ತಿ ಸಾಬ್ ಕ ನಯಾ ಟ್ರೆಂಡ್ ಎಂದು ಚಲನಚಿತ್ರ ಜಗತ್ತಿನಲ್ಲಿ ತಾರೆಯಂತೆ ಹೊಳೆದಿದ್ದಲ್ಲದೆ, ನದಿಯು ಹುಟ್ಟಿ ಸಾವಿರಾರು ಮೈಲಿಗಳು ಹರಿದು ಕವಲೊಡೆಡು ಕಡಲು ಸೇರುವಂತೆ, ಮೂರ್ತಿಯವರು ತಮ್ಮ ವೃತ್ತಿಯಲ್ಲಿ ಪ್ರವೃತ್ತಿ ಗಳಿಸಿ ಅನೇಕ ಪ್ರಶಸ್ತಿಗಳನ್ನು ಗಳಿಸಿ, ಚಿತ್ರರಂಗದಲ್ಲೆ ಅಲ್ಲ, ಬಾಹ್ಯ ಜಗತ್ತಿನಲ್ಲಿ ಕೂಡ ಎಲ್ಲರಿಗೂ ವಿಶ್ವಾಸಿ. ವಿಧಿ ನಿಯಮದಂತೆ ಬಾಳಿನಲ್ಲಿ ಎಶ್ಟೊ ಕಷ್ಟದ ಸಂದರ್ಭಗಳನ್ನು ಎದುರಿಸಿ ಛಾಯಾಗ್ರಹಣದಲ್ಲಿ ಉನ್ನತ  ಮಟ್ಟಕ್ಕೆ ಏರಿದ ಸಂಕೇತ ಉನ್ನತ ಪುರಸ್ಕಾರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದದ್ದು.

•    ಇವರು ರಾಶ್ತ್ರಪತಿಯವರಿಂದ ಬಹುಮಾನ ಸ್ವೀಕರಿಸಿದ ಫೋಟೊ ನೋಡಿ ಸಂತಸದಿಂದ ನಾನು ದೂರವಾಣಿ ಕರೆಮಾಡಿ ಅಭಿನಂದಿಸಿದಾಗ ಅವರು ಹೇಳಿದ್ದು -“ನೀನು ಫೋನು ಮಾಡಿದ್ದು ಸಂತೋಷ ಕಣಮ್ಮ” ಇದು ತುಂಬಿದ ಕೊಡ ತುಳುಕುವುದಿಲ್ಲ ಅನ್ನುವಂತೆ ಅವರ ಸರಳ  ವ್ಯಕ್ತಿತ್ವ ಮತ್ತು ವಿಶ್ವಾಸದ ಸಂಕೇತ.                        

    ಕುಟ್ಟಿ  ಕಾಣಿಕೆ ಮುಂದೆ ಕನ್ನಡ  ಚಿತ್ರರಂಗಕ್ಕೆ ಕೂಡ ಲಭ್ಯ.  ಕನ್ನಡ ಸಿನಿಮ ಹೂವು ಹಣ್ಣು  ಇವರ  ಛಾಯಾಗ್ರಹಣದಲ್ಲಿ   ಮೂಡಿ ಬಂದ ಚಿತ್ರ..

ಇದರ ಬಗ್ಗೆ ಬರಹಗಾರ್ತಿ ಶ್ರೀಮತಿ ಉಮಾರಾವ್ ರವರು ಬಿಸಿಲು ಕೋಲು ಪುಸ್ತಕದಲ್ಲಿ ಈ ಕೆಳಕಂಡಂತೆ  ಬರೆಯುತ್ತಾರೆ.

         —-೧೯೯೨, ಎಸ್.ವಿ. ರಾಜೀಂದ್ರ ಸಿಂಗ್ ಅವರ ನಿರ್ದೇಶನದಲ್ಲಿ ತ್ರಿವೇಣಿ ಅವರ ಕಾದಂಬರಿ ಹೂವು-ಹಣ್ಣು ತೆರೆ ಕಂಡಿತು. ಭಾರತೀಯ ಚಿತ್ರ ರಂಗದ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರು ಎಂದು  ಹೆಸರಾದ ಕನ್ನಡಿಗ ವಿ.ಕೆ. ಮೂರ್ತಿ ಹೂವು-ಹಣ್ಣು ಛಾಯಾಗ್ರಹಣಾ ನಿರ್ದೇಶನ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕನ್ನಡ ಚಿತ್ರರಂಗ ಹೆಮ್ಮೆ ಪಡುವಂತಹ ವಿಷಯ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕುಟ್ಟಿಯವರ ಬಗ್ಗೆ ಜಿ.ಎಸ್.ಭಾಸ್ಕರ್ ಈ ಕೆಳಕಂಡಂತೆ ಹೇಳುತ್ತಾರೆ,

 ——-ಗಿರೀಶ್ ಕಾರ್ನಾಡರು ಒಂದು  ಒಳ್ಳೇ ಪದ ಉಪಯೋಗಿಸುತ್ತಾರೆ ಅದು ಸಂಯೋಗ ಅಂತ.. ಅದೊಂದು ತರಹ  ಅಧ್ಭುತ ಆಕ್ಸಿಡೆಂಟ್ ಎನ್ನಬಹುದು. ಎಲ್ಲ ಸರಿಯಾಗಿ ಒಂದಕ್ಕೊಂದು ತಾಳೆ ಹಾಕಿಕೊಳ್ಳುವುದು. ವಹೀದಾರಂತಹ ಚೆಲುವೆ, ಗುರುದತ್ರಂಥಾ  ನಿರ್ದೇಶಕ, ವಿ.ಕೆ.ಮೂರ್ತಿಯವರಂಥಾ ಛಾಯಾಗ್ರಾಹಕ, ಅಂತಂಥಾ ವಸ್ತುಗಳು ಅದು ತುಂಬ ಅಪರೂಪ.————-

  ಚಿತ್ರರಂಗದ ಅಭಿವೃದ್ಧಿಗೆ ಜನಗಳ ಉತ್ತೇಜನ ಇಟಾಲಿಯನ್ನಲ್ಲಿ ಹೇಳುತ್ತಾರೆ “ಚಿಲಿಎಜಿನ ಸುಲ್ಲ ತೋರ್ತ” ಅಂದರೆ ಒಂದು ಕೇಕಿನ ಮೇಲೆ ಹಣ್ಣಿನ ಚೂರು ಇಟ್ಟರೆ ಅದರ ಸೊಬಗು ಇಮ್ಮಡಿಯಾಗುತ್ತದಂತೆ ಅಂತ. ಅದೇ ರೀತಿ. ಇದೇ ಉತ್ತೇಜನ ಅಂದಿನಿಂದ ಇಂದಿನವರೆಗೂ ಒಂದೇ ಸಮ ಇರುವುದಲ್ಲದೆ ಅದು ಭಾರತದ ಗಡಿಯನ್ನು ದಾಟಿ, ಪಾಶ್ಚಾತ್ಯರ ಒಲುಮೆಗೆ ಪಾತ್ರವಾಗಿದೆ. . ಬಾಲಿವುಡ್ ಬಗ್ಗೆ ಎರಡು ಮಾತುಗಳನ್ನು ಬರೆದು ವಿ.ಕೆ. ಮೂರ್ತಿಯವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸೋಣ.        

    ಹೌದು, ಭಾರತದ ಸಂಸ್ಕೃತಿ, ಭವ್ಯ ಚರಿತ್ರೆ, ನಮ್ಮ ಹಿಂದೂ ಮತ ಹೊರದೇಶಗಳಲ್ಲಿ ಕೂಡ ತನ್ನದೇ ಹೆಸರು ಗಳಿಸಿದೆ. ಇದು ಚಿತ್ರರಂಗಕ್ಕೆ ಕೂಡ ಅನ್ವಯಿಸುತ್ತದೆ. ಬಾಲಿವುಡ್ ಎಂದು ನಾಮಕರಣ ಮಾಡಿರುವ ನಮ್ಮ ಹಿಂದಿ ಸಿನಿಮಾಗಳು ಎಂದರೆ ಹೊರದೇಶದವರಿಗೆ ಬಹಳ ಆಸೆ. ಕುಟ್ಟಿಯವರ ಛಾಯಾ ಗ್ರಹಣದಲ್ಲಿ ಮೂಡಿ ಬಂದಿರುವ ಕಾಗಜ್ ಕೆ ಫೂಲ್ ಅಮೆರಿಕ ದಲ್ಲಿ ಇಂದಿಗೂ ಪ್ರದರ್ಶನವಾಗುತ್ತದಂತೆ. ಇಟಾಲಿಯನ್ ಟಿ.ವಿ ಯವರು ವರ್ಷಕ್ಕೊಮ್ಮೆ  “ಅಮೊರಿ ಕೊನ್  ತುರ್ಬಾನ್ತಿ”  ಅಂತ ಒಂದು ಸಿೊರಿಯಲ್ ನಲ್ಲಿ ವಾರಕ್ಕೊಂದು ಹಿಂದಿ ಸಿನಿಮಾ ತೋರಿಸುತ್ತಾರೆ. ಈ ಪ್ರೊಗ್ರಾಮ್ ಎಲ್ಲರಿಗೂ ಮೆಚ್ಚುಗೆಯಾದದ್ದು. ಕಲೆಗೆ ಜನಗಳ ಉತ್ತೇಜನ  ಮುಖ್ಯ. ಸಿನಿಮಾ ನೋಡುವ ಆಸೆ ಭಾರತೀಯರಿಗೆ ಮುಂಚಿಂದ ಅವರ ಜೀವನದಲ್ಲಿ ಹಾಸುಹೊಕ್ಕಾಗಿ ಬಂದಿದೆ. ಈ ತತ್ವಕ್ಕೆ ನಾನೂ ಏನು ಹೊರತಾಗಿರಲಿಲ್ಲ. ಇದು ನನ್ನ ಜೀವನದಲ್ಲಿ ನಡೆದ ಒಂದು ಘಟನೆ.  

       ಸಿನಿಮಾ ನೋಡುವುದಕ್ಕಾಗಿ ಎಂತಹ ತ್ಯಾಗ ಮಾಡಲು ಸಿದ್ಧ. ಈ ಸಂದರ್ಭದಲ್ಲಿ ೪೫ ವರ್ಷಗಳ ಹಿಂದೆ ನಡೆದ ಒಂದು ಘಟನೆ ನೆನಪಿಗೆ ಬರುತ್ತದೆ. ಆಗ ತಾನೆ ಶಮ್ಮಿ ಕಪೂರ್ ಅವರ ಜಂಗ್ಲಿ ಸಿನಿಮ ಬಿಡುಗಡೆ ಯಾಗಿತ್ತು. ನಾನು ನನ್ನ ಸೋದರ ಮಾವನ ಮಗಳು ಲಲಿತ ಒಟ್ಟಿಗೆ ಕಾಲೇಜಿನಲ್ಲಿ ಓದುತ್ತಿದ್ದೆವು. ಜಂಗ್ಲಿ ನೋಡಲು ಎರಡು ತರಹ  ಆಸೆ. ಒಂದು, ಮೆಚ್ಚಿನ ನಟ ಶಮ್ಮಿ ಕಪೂರ್ ನಟಿಸಿರುವುದು, ಇನ್ನೊಂದು, ಉಮ ಟಾಕೀಸ್ ನಲ್ಲಿ ಕೆಲಸ ಮಾಡುವವರು ನಮ್ಮ ತಾತ ಅವರಿಗೆ ಪರಿಚಯ ವಿದ್ದಿದ್ದರಿಂದ ಬಿಟ್ಟೀ ಸಿನಿಮ ನೋಡುವ ಅವಕಾಶ. ಹೀಗಾಗಿ ಮಧ್ಯಾಹ್ನದ ಬಿಸಿಲನ್ನು ಲೆಕ್ಕಿಸದೆ ಕಾಲೇಜಿನಿಂದ ಮ್ಯಾಟನೀ ಗೆ ತಡವಾಗುತ್ತದೆಂದು ಮನೆಗೆ ಬಂದೆವು. ನಮ್ಮ ತಾತ ಅದೇ ತಾನೆ ಊಟ ಮುಗಿಸಿದ್ದವರು  “ನನಗಂತೂ ಈಗಲೆ ಹೊರಡಲು ಸಾಧ್ಯವಿಲ್ಲ, ಸ್ವಲ್ಪ ಹೊತ್ತು ವಿರಾಮದ ನಂತರ ನೋಡೋಣ ” ಎಂದು ನಿದ್ರಾದೇವಿಯ ಮೊರೆ ಹೊಕ್ಕರು. ಆಗಲೆ ಎರಡು ಗಂಟೆ. ಮೂರು ಗಂಟೆಗೆ ಸಿನಿಮ ಆರಂಭ. ನಾನು, ಲಲಿತ ಒಬ್ಬರನ್ನೊಬ್ಬರು ಮಿಕ ಮಿಕ ನೋಡುತ್ತ ನಿರಾಶೆಯಿಂದ ತಾತ ಅವರಿಗೆ ಎಚ್ಚರ ವಾಗುವುದೇ ಕಾಯುತ್ತ ಕುಳಿತೆವು. ಅಂತೂ ಕೊನೆಗೆ ಥಿಯೇಟರ್ ತಲುಪಿ ನಮ್ಮ ತಾತ ಮತ್ತು ಅವರ ಸ್ನೇಹಿತರ ಉಭಯ ಕುಶಲೋಪರಿ ಯ ನಂತರ ಒಳಗೆ ಹೋದರೆ ಅರ್ಧ ಸಿನಿಮ ಮುಗಿದು ತೆರೆಯ ಮೇಲೆ ವಿರಾಮ ನಮ್ಮನ್ನು ಸುಸ್ವಾಗಿಸಿತು. ಬಿಟ್ಟಿ ಅರ್ಧ ಸಿನಿಮ ನೋಡಿದ್ದಾಯಿತು. ಆಗಿನ ಕಾಲದಲ್ಲಿ ಹಿರಿಯರ ಮಾತು ಮೀರುವುದೆಂದರೆ ಲಕ್ಷ್ಮಣ ರೇಖೆ ಎಂದೇ ಅರ್ಥವಿತ್ತು. ಅವರಿಗೆ ಎದುರು ಹೇಳಿ ಸಿನಿಮಾಗೆ ಓಡುವ ಉದ್ದೇಶ ನಮ್ಮದಾಗಿರಲಿಲ್ಲ.

ಇಂಥ ಅಧ್ಭುತ ವಿ.ಕೆ ಮೂರ್ತಿಯವರು ದೇವರ ಕೊಡುಗೆ ಭಾರತಕ್ಕೆ ಮಾತ್ರಾ ಅಲ್ಲ, ಇದು ಜಗಕ್ಕೆ ದೇವರು ನೀಡಿರುವ ಕಾಣಿಕೆ. ಇವರಿಗೆ ನಮ್ಮ ದೇಶದಿಂದ ಅನೇಕ ಪ್ರಶಸ್ತಿಗಳು, ಕರ್ಣಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇವರ ಪ್ರತಿಭೆ ಗಾಗಿ  ಭಾರತದಲ್ಲಿ ಅಷ್ಥೇ ಅಲ್ಲದೆ ಭಾರತೀಯ ಚಿತ್ರರಂಗಕ್ಕೆ ಅಧ್ಭುತ ಕೊಡುಗೆಯಾಗಿ ಆಂಸ್ಟೆರ್ ಡ್ಯಾಂ ನಲ್ಲಿ ಐಫಾ ಪ್ರಶಸ್ತಿ ಇವರಿಗೆ ನೀಡಿದ್ದಾರೆ. ಲಾಸ್ಟ್ ಬಟ್ ನಾಟ್ ಲೀಸ್ಟ್ ರಾಷ್ಟ್ರಾಧ್ಯಕ್ಷರಿಂದ  ಪಡೆದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ನಿಜಕ್ಕೂ ಹೆಮ್ಮೆಪಡುವಂತಹ ಸಂಗತಿ.  ಇಂತಹ ಮಹಾ ವ್ಯಕ್ತಿ ಯಾದ ಕುಟ್ಟೀ ಯವರಿಗೆ ಮತ್ತೊಮ್ಮೆ ಸಿಂಗಾರಿ ಪರವಾಗಿ ಶುಭಾಶಯಗಳನ್ನು ಕೋರುತ್ತಾ, ಉಮಾರಾವ್ ರವರ ಬಿಸಿಲು ಕೋಲು ಪುಸ್ತಕ ಎಲ್ಲರ ಕೈ ಸೇರಲಿ ಎಂದು ಆಶಿಸುತ್ತಾ

**************************************

                                    ಜಯ ಮೂರ್ತಿ          

                        .           ಪೀಸಾ

                                    ಇಟಲಿ

*************

One thought on “ನೆನಪು

Leave a Reply

Back To Top