ಪ್ರಸ್ತುತ

ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ…

Maha atrocity against women: Man throws inflammable liquid on a ...

ಇಂಗ್ಲೀಷ್ ಮೂಲ:

ಅಜಿತ ಘೋರ್ಪಡೆ

 

ಕನ್ನಡಕ್ಕೆ: ಚಂದ್ರಪ್ರಭ ಬಿ.

ಕೆಲ ಪುರುಷರಿಗೆ ಕಪ್ಪು ಇರುವೆ ತುಂಬಾ ಇಷ್ಟ…

ಹೆಣ್ಣು ಮಕ್ಕಳನ್ನು ಕೆಂಪು ಇರುವೆಗೆ ಹೋಲಿಸುವ ಕೆಲವೇ ಕೆಲವು ಜನ ನಮ್ಮ ನಡುವಿದ್ದಾರೆ ಈ ವ್ಯಕ್ತಿಯಿಂದ ತನಗೆ ಅಪಾಯವಿದೆಯೆಂದು ಅರಿತಾಕ್ಷಣ ಆ ವ್ಯಕ್ತಿ ಯಾರೆಂಬುದನ್ನು ನೋಡದೆ ಅವರನ್ನು ಕೆಂಪು ಇರುವೆ ಕಚ್ಚಿಬಿಡುತ್ತದೆ. ಜನರೂ ಅಷ್ಟೇ, ಕೆಂಪು ಇರುವೆಯನ್ನು ಕಂಡೊಡನೆ ವ್ಯಗ್ರರಾಗಿ ಅದನ್ನು ಮುಗಿಸಿ ಬಿಡಲು ಹಾತೊರೆಯುತ್ತಾರೆ. ಅಷ್ಟೇ ಅಲ್ಲ ಅಕ್ಷರಶಃ ಅದನ್ನು ಹೊಸಕುವ ಮೂಲಕ ತಮ್ಮ ಶಕ್ತಿ, ಸಾಮರ್ಥ್ಯ ತೋರಿಸುವ ಪ್ರಯತ್ನ ಮಾಡುತ್ತಾರೆ.

ಕೆಲವು ಪುರುಷರು ಹೀಗೂ ಇರುತ್ತಾರೆ, ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ,ಪ್ರತಿಕ್ರಿಯಿಸುವ ದಿಟ್ಟತನದಿಂದ ಎದೆಯೊಡ್ಡಿ ನಿಲ್ಲುವ ಹೆಣ್ಣು ಮಕ್ಕಳು ಅವರಿಗೆ ಇಷ್ಟವಾಗುವುದಿಲ್ಲ. ಇಂಥವರನ್ನು  ಅವರು ವ್ಯವಸ್ಥಿತವಾಗಿ ಹತ್ತಿಕ್ಕುವ ಪೂರ್ಣ ಪ್ರಯತ್ನ ಮಾಡುತ್ತಾರೆ. ಅದಕ್ಕಾಗಿ ಅವರು ಹೆಣ್ಣು ಮಕ್ಕಳೆಡೆಗಿನ ತಮ್ಮ ಪೂರ್ವಾಗ್ರಹ ಹಾಗೂ ತಿರಸ್ಕಾರಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಾರೆ. ಥೇಟ್ ಕೆಂಪಿರುವೆಗಳನ್ನು ಹೊಸಕುವ ರೀತಿಯಲ್ಲೇ ಇವರನ್ನೂ ಹೊಸಕಬಯಸುತ್ತಾರೆ.  ಹಾಗಂತ ನಾನು ಹೆಣ್ಣು ಮಕ್ಕಳು ಅಶಕ್ತರು ಅಂತ ಹೇಳುತ್ತಿರುವೆ ಅಂದುಕೊಳ್ಳದಿರಿ. ಇದು ದೈಹಿಕ ಬಲಿಷ್ಠತನದ ಪ್ರಶ್ನೆಯೇ ಅಲ್ಲ‌. ಹೆಣ್ಣು – ಗಂಡು ಹುಟ್ಟುತ್ತಲೇ ದೈಹಿಕವಾಗಿ ವಿಭಿನ್ನತೆ ಪಡೆದು ಬಂದವರು. ಅದರಾಚೆಗಿನ ಕೌಶಲಗಳನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಳವಡಿಸಿಕೊಳ್ತೇವೆ ಎಂಬುದರ ಮೇಲೆ ಅವು ನಮಗೆ ಪ್ರಾಪ್ತವಾಗುತ್ತವೆ.. ಆದರೆ ಕೆಲವು ಗಂಡಸರು ಹೆಣ್ಣು ಮಕ್ಕಳು ಕಪ್ಪು ಇರುವೆಗಳಂತೆ ತಮ್ಮ ಅಧೀನತೆಗೆ ಒಳಗಾಗಿರಬೇಕೆಂದು ಬಯಸುತ್ತಾರೆ.‌ ತಮ್ಮನ್ನು ಹೊಸಕುವ ಪ್ರಯತ್ನ ನಡೆದಾಗಲೂ ಸಹ ಅವರು ಗಂಡಸರಿಗೆ ವಿಧೇಯರಾಗಿ ವಿನಮ್ರತೆಯಿಂದ ನಡೆದುಕೊಳ್ಳಬೇಕು ಎಂದು ಬಯಸುತ್ತಾರೆ.

ನನಗೆ ಅತ್ಯಂತ ಆತ್ಮೀಯರಾಗಿರುವ ಒಬ್ಬರ ಉದಾಹರಣೆ ಮೂಲಕ ಇದನ್ನು ಹೇಳಬಯಸುವೆ. ನನ್ನ ಒಬ್ಬ ಗೆಳತಿಗೆ ಒಬ್ಬ ಆಪ್ತ ಮಿತ್ರನಿದ್ದ. ಅವ ತನಗೆ ಮೋಸ ಮಾಡುತ್ತಿದ್ದಾನೆ ಅಂತ ಅನ್ನಿಸಿದಾಗ ಆಕೆ ಅದನ್ನು ಪ್ರಶ್ನಿಸಿದಳು. ಅದಕ್ಕೆ ಆತ ತಪ್ಪೊಪ್ಪಿಕೊಂಡು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಲು ಕೇಳಿದ. ಈಕೆ ಒಪ್ಪಿದಳು. ಆದರೆ ಅದಕ್ಕೆ ಮುನ್ನ ಆತ, ಆಕೆ ಸಕ್ರಿಯವಾಗಿದ್ದ ಎಲ್ಲಾ ಸಾಮಾಜಿಕ, ಜಾಲತಾಣಗಳ ಚಾಟ್ ಮಾಡುವ ಇನ್ ಬಾಕ್ಸುಗಳನ್ನು ಜಾಲಾಡಿ ನೋಡಿದ ಆಕೆ ತನಗೆ ‌ಮೋಸ ಮಾಡುತ್ತಿಲ್ಲವಷ್ಟೇ ಎಂದು ಖಾತ್ರಿ ಪಡಿಸಿಕೊಳ್ಳಲು. ಎಲ್ಲೂ ಅಂಥದು ಅವನಿಗೆ ಸಿಗಲಿಲ್ಲ. ಆದರೆ ಇನ್ನೊಬ್ಬ ಆಕೆಯ ಆಪ್ತ ಗೆಳೆಯ ಒಂದೆಡೆ ಆಕೆಯನ್ನು ಡಿಯರ್ ಅಂತ ಸಂಭೋಧಿಸಿದ್ದ. ಹಾಗೆ ಸಂಭೋಧಿಸಲು ಆಕೆ ಆ ಇನ್ನೊಬ್ಬನಿಗೆ ಅದ್ಹೇಗೆ ಅವಕಾಶ ಕೊಟ್ಟಳೆಂದು ಕೇಳಿದ. ಅಷ್ಟೇ ಅಲ್ಲ ಮತ್ತೆ ಮತ್ತೆ ಆಕೆಗೆ ವಿಶ್ವಾಸದ್ರೋಹ ಮಾಡಿದ. ಇಷ್ಟೆಲ್ಲಾ ಆದ ಬಳಿಕ ಆಕೆ ಇವನನ್ನು ತೊರೆದು ಇನ್ನೊಬ್ಬ ಗೆಳೆಯನೊಂದಿಗೆ ಆಪ್ತವಾದಳು. ಆದರೆ ಆಕೆಯ ಮಾಜಿ ಗೆಳೆಯನಿಗೆ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಅವನೊಬ್ಬ ವಿಕೃತ ಮನಸ್ಸಿನವನಾಗಿದ್ದ. ಆಕೆಯ ಹೊಸ ಗೆಳೆಯನಿಗೆ ಅನಾಮಧೇಯವಾಗಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಅವಳನ್ನು ಕುರಿತು ಸಂದೇಶ ಕಳಿಸಿದ. ಆಕೆ ಕನ್ಯತ್ವ ಕಳೆದುಕೊಂಡವಳೆಂಬ ಕೀಳು ಮಾತನ್ನು ಬರೆದ. ಆಕೆ ಕಳಂಕಿನಿ ಅಂದ. ಸಿಕ್ಕ ಸಿಕ್ಕ ಸಾರ್ವಜನಿಕ ಶೌಚಾಲಯಗಳ ಗೋಡೆಗಳ ಮೇಲೆ ಆಕೆಯ ಫೋನ್ ನಂಬರ್ ಬರೆಯುತ್ತೇನೆಂದು ಬೆದರಿಸಿದ. ಅವಳನ್ನು ಹೀನಾಯಗೊಳಿಸುವ ಎಲ್ಲ ಅವಕಾಶಗಳನ್ನೂ ಬಳಸಿಕೊಂಡ. ಇದಾವುದಕ್ಕೂ ಸೊಪ್ಪು ಹಾಕದ ಹುಡುಗಿ ತನ್ನ ದಾರಿಯಲ್ಲಿ ತಾ ಮುಂದೆ ಸಾಗಿದಳು. ಇಲ್ಲಿ ಹುಟ್ಟುವ ಪ್ರಶ್ನೆ ಏನೆಂದರೆ ತಾನು ಇನ್ನೊಬ್ಬ ಹುಡುಗಿ ಜೊತೆ ಹೋದ ಬಳಿಕ ಮೊದಲಿನ ತನ್ನ ಗೆಳತಿ ಯಾರೊಂದಿಗೆ ಹೋದರೆ ಇವನಿಗೆ ಏನಾಗಬೇಕು? ಅದನ್ನು ನೋಡಿ ಸಹಿಸುವುದು ಅವನಿಗೆ ಸಾಧ್ಯವಿರಲಿಲ್ಲ ಎಂಬುದು ಬಹು ಮುಖ್ಯ ಸಂಗತಿ.  ತನ್ನ ಗೆಳತಿ ಕೈಯಲ್ಲಿ ತಾನೇ ಪುರಾವೆ ಸಹಿತ ಸಿಕ್ಕಿ ಹಾಕಿಕೊಂಡ ಮೇಲೂ ಆತನ ವರ್ತನೆಯೇಕೆ ಹೀಗಿತ್ತು ಎಂಬುದು ಗಮನಿಸಬೇಕಾದ ಅಂಶ.

ಹೆಣ್ಣಿರಲಿ ಗಂಡಿರಲಿ ಕೆಲವು ಸೂಕ್ಷ್ಮ ನಿಷೇಧ, ಬಹಿಷ್ಕಾರಗಳನ್ನು,ಲಿಂಗ ಸಮಾನತೆಯನ್ನು ಕುರಿತು ಅವರಿಗೆ ಕಡ್ಡಾಯವಾಗಿ ಒಂದಿಷ್ಟು ಶಿಕ್ಷಣವನ್ನು ಪಾಲಕರು, ಪೋಷಕರು, ಶಿಕ್ಷಕರು ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳು, ಪುಸ್ತಕಗಳ ಮೂಲಕ ದೊರಕುವಂತಾಗಬೇಕು.  ಆ ಗೆಳೆಯನ ವಿಷಯದಲ್ಲಿ ಬಹುಶಃ ತಂದೆ ತಾಯಿ, ‌ಶಿಕ್ಷಕರು, ಸ್ನೇಹಿತರು, ಮಾಧ್ಯಮ, ಪುಸ್ತಕಗಳು ಯಾರೊಬ್ಬರಿಂದಲೂ ಆತನಿಗೆ ಇಂಥದೊಂದು ಶಿಕ್ಷಣ ಸಿಕ್ಕಿರಲಿಕ್ಕಿಲ್ಲ. ಅಂತೆಯೇ ಆತನ ವರ್ತನೆ‌ ದೋಷಪೂರಿತವಾಗಿದೆ. ಕೆಲವು ಗಂಡಸರು ಬಳಸುವ ದೈಹಿಕ ಬಲ ಪ್ರದರ್ಶನದ ಕುರಿತು ನಾನಿಲ್ಲಿ ಹೇಳುತ್ತಿಲ್ಲ. ಬದಲಾಗಿ ಮಾಧ್ಯಮಗಳಲ್ಲಿ ದಿನವೂ ಇಂಥ ಮೋಸ, ತಟವಟಗಳ ಕತೆಯನ್ನು ಪುಂಖಾನುಪುಂಖವಾಗಿ ನೋಡುತ್ತಲೇ ಇರುತ್ತೇವೆ. ಇವನಿಂದ ಮೋಸ ಹೋದಳು.. ಅವನಿಂದ ಮೋಸವಾಯಿತು ಇತ್ಯಾದಿ ಇತ್ಯಾದಿ. ಇಂತಹ ಸುದ್ದಿ ಬಿತ್ತರಗಳು ಸಾಧಿಸುವುದು ಏನನ್ನು!!

ಮುಗಿಸುವ ಮುನ್ನ ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಈ ಬರಹಕ್ಕೆ ಕೊಡುವ ಶೀರ್ಷಿಕೆ ಹೀಗಿರಲಿ ಎಂದು ಬಯಸುತ್ತೇನೆ ಅಷ್ಟೇ :

ಕೆಲ ಪುರುಷರಿಗೆ ಕಪ್ಪು  ಇರುವೆ ಎಂದರೆ ತುಂಬಾ ಇಷ್ಟ

*******************

.

Leave a Reply

Back To Top