ಗಝಲ್

ಉಮೇಶ ಮುನವಳ್ಳಿ

ನೀನು ಬಯಸಿದಂತೆ ಬದಲಾಗಿರುವೆ, ಅದಲುಬದಲಾದದ್ದು ನಿನಗೆ ನೆಮ್ಮದಿಯೇ?
ನೀನು ಅಂದುಕೊಂಡಂತೆ ಸಾಕಾರಗೊಂಡಿರುವೆ, ಗುರಿ ನೆರವೇರಿದ್ದು ನಿನಗೆ ನೆಮ್ಮದಿಯೇ?
“ನಿನ್ನ ಜೊತೆಗಿನ ಕೆಲಸ ಮುಗಿದು ಹಳೆಮಾತಾಗಿದೆ ಮತ್ತೆ ಪೀಡಿಸದಿರು” ಇದು ನಿನ್ನ ಕೋರಿಕೆ
ದುಃಖ ಉಮ್ಮಳಿಸಿ ಕತ್ತು ಹಿಸುಕುತಿದೆ, ಹನಿಯಾಗಿಸದೆ ನಕ್ಕಿದ್ದು ನಿನಗೆ ನೆಮ್ಮದಿಯೇ?
“ಪ್ರೀತಿ ಎಂದರೆ ಇದು ಮಾರುಕಟ್ಟೆಯಲ್ಲ, ನನ್ನಲ್ಲಿ ನಿನಗೆ ನಿರೀಕ್ಷೆ ಬೇಡ” ಇದು ನಿನ್ನ ಅಳಲು
ಪ್ರೀತಿಯಲಿ ಒಂದಿಷ್ಟು ಸಲುಗೆ ಬೇಡವೆ, ನಾನು ಪರಿಷ್ಕರಣಗೊಂಡಿದ್ದು ನಿನಗೆ ನೆಮ್ಮದಿಯೇ?
“ಮಾತು ಮಿತವಾಗಿರಲಿ ಹಿತವಾಗಿರಲಿ, ಬುದ್ದಿವಾದ ನನಗೆ ಇಷ್ಟವಿಲ್ಲ” ಇದು ನಿನ್ನ ಸಂಕಷ್ಟ
ತಿದ್ದಿ ಹೇಳಿದ್ದು ಇಷ್ಟವಾಗದಿದ್ದರೆ, ನಾನೇ ತಿದ್ದಿಕೊಂಡಿದ್ದು ನಿನಗೆ ನೆಮ್ಮದಿಯೇ?
“ಸೈರಣೆ ಇರಲಿ, ನಾನು ಹೇಳುವುದನ್ನು ಸಮಾಧಾನದಿಂದ ಕೇಳು” ಇದು ನಿನ್ನ ಆಜ್ಞೆ
ನನ್ನ ಭಾವನೆ ವ್ಯಕ್ತಪಡಿಸಲಾಗದೇ, ಬಯಕೆ ಬಚ್ಚಿಟ್ಟುಕೊಂಡಿದ್ದು ನಿನಗೆ ನೆಮ್ಮದಿಯೇ?
“ಬಂದಿರುವ ಅತಿಥಿಗಳಿಗೆ ಸಮಯಕೊಡಬೇಕಿದೆ ಸಹನೆಯಿಂದಿರು” ಇದು ನಿನ್ನ ಅಹವಾಲು
ಇಚ್ಛೆಗಳ ಸಹಿಸಿ ದಹಿಸಿಕೊಂಡಿರುವೆ, ಬೂದಿಯಾಗಿ ಬಿದ್ದಿದ್ದು ನಿನಗೆ ನೆಮ್ಮದಿಯೇ?
“ಆರಾಮವಾಗಿರಿ, ಯೋಚಿಸದಿರಿ, ನಿಮ್ಮ ಪಾಡಿಗೆ ನೀವು ಇದ್ದುಬಿಡಿ” ಇದು ನಿನ್ನ ಸವಾಲು
‘ಉಮಿ’ಗೆ ದಿಗಿಲು, ಭುಗಿಲೆದ್ದ ಜ್ವಾಲೆ, ಉರಿ ನಂದಿಸಿ, ವಂದಿಸಿ ನಿಂತದ್ದು ನಿನಗೆ ನೆಮ್ಮದಿಯೇ?
******