ಸ್ವಾತಂತ್ರ್ಯ ಚಳುವಳಿಗೆ ಕನ್ನಡತೀಯರ ಕೊಡುಗೆ  (ಸಂಪುಟ ೧ ) ಯ. ರು ಪಾಟೀಲ. ಸವದತ್ತಿ .

ಪುಸ್ತಕ ಸಂಗಾತಿ

ಸ್ವಾತಂತ್ರ್ಯ ಚಳುವಳಿಗೆ

ಕನ್ನಡತೀಯರ ಕೊಡುಗೆ  (ಸಂಪುಟ ೧ ) 

ಯ. ರು ಪಾಟೀಲ. ಸವದತ್ತಿ .

ಪುಸ್ತಕವಲೋಕನ
ಕೃತಿ :ಸ್ವಾತಂತ್ರ್ಯ ಚಳುವಳಿಗೆ ಕನ್ನಡತೀಯರ ಕೊಡುಗೆ  (ಸಂಪುಟ೧ )
ಲೇಖಕರು: ಯ. ರು ಪಾಟೀಲ. ಸವದತ್ತಿ .
ಪ್ರಕಾಶನ: ಸ್ವಪ್ನ ಬುಕ್ ಹೌಸ್, ಬೆಂಗಳೂರು. 

ಕೆಲವು ಪುಸ್ತಕಗಳು ಸೀಮಿತ ಓದುಗರಿಗೆ ಮಾತ್ರ ಮೀಸಲಾಗಿವೆ ಎಂದೆನಿಸಿದರೂ ಅವು ಭಿನ್ನ-ಭಿನ್ನ ಓದುಗ ಮನಸ್ಸುಗಳಿಗೆ ಹಿಡಿಸುವಂತಹ ಕೃತಿಗಳಾಗಿರುತ್ತವೆ ಬಹುತ್ವದ ನೆಲೆಯಲ್ಲಿ ಕಾಣಿಸಿಕೊಳ್ಳುತ್ತವೆ ಅಂತಹ ಕೃತಿ ಶ್ರೇಣಿಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುವ ಕೃತಿ ನಿವೃತ್ತ ತಹಶೀಲ್ದಾರ್ ಯ ರು ಪಾಟೀಲರ ‘ಸ್ವಾತಂತ್ರ್ಯ ಚಳುವಳಿಗೆ ಕನ್ನಡತಿಯರ ಕೊಡುಗೆ'( ಸಂಪುಟ ೧) ಈ ಕೃತಿಯನ್ನು ಮಹಿಳಾವಾದದ ಹಿನ್ನೆಲೆಯಲ್ಲಿ ಅಮೂಲ್ಯ ಕೃತಿಯೆಂದು ಒಪ್ಪಿಕೊಳ್ಳಲು ಯಾವ ಅಡ್ಡಿಯಿಲ್ಲ. ಐತಿಹಾಸಿಕ ಕೃತಿ ಎಂದು ಸಾಕ್ಷಿಕರಿಸಲು ಮಹಿಳಾ ಹೋರಾಟಗಾರ್ತಿಯರ ಇತಿಹಾಸವನ್ನು ಕಣ್ಮುಂದೆ ತೆರೆದಿಟ್ಟಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕ ಆಗುವ ಸಂಪೂರ್ಣ ಅಂಶಗಳು ಈ ಕೃತಿಯಲ್ಲಿವೆ. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವ ಹಲವಾರು ಮಹಿಳೆಯರ ಜೀವನಗಾಥೆ ಇಲ್ಲಿ ನೋಡುತ್ತೇವೆ. ಎಲ್ಲ ವಯೊಮಾನದ ಓದುಗರು ಓದಬೇಕಾದ ಮಹತ್ವದ ಕೃತಿ.
ಎರಡು ಭಾಗಗಳಲ್ಲಿ ಈ ಕೃತಿಯು ಸಾಹಸಿ ಮಹಿಳೆಯರ ಸಾಹಸವನ್ನು ಅನಾವರಣ ಗೊಳಿಸಿದೆ. ಮೊದಲ ಭಾಗದಲ್ಲಿ ಮಹಿಳಾ ಶೂರ ಪರಂಪರೆ ಎಂಬ ಶೀರ್ಷಿಕೆ ಅಡಿಯಲ್ಲಿ 17 ರಾಣಿಯರ ಕೆಚ್ಚೆದೆಯ ಕಾರ್ಯವನ್ನು ಪರಿಚಯಿಸುತ್ತಾರೆ. ವೀರ ರಾಣಿಯರು ಎನ್ನುವ ಪ್ರಾರಂಭದ ಲೇಖನದಲ್ಲಿ ವಚನಾಂಕಿತದಲ್ಲಿ ಮಹಿಳೆಯರಿಲ್ಲ ಎನ್ನುವ ವಿಚಾರವನ್ನು ಚರ್ಚಿಸಿದ್ದಾರೆ. ಮಹಿಳೆಯ ಅಥವಾ ದೇವತೆಗಳ ಹೆಸರುಗಳನ್ನು ‘ತಮ್ಮ ವಚನಾಂಕಿತವಾಗಿ ಯಾರೂ ಬಳಸಿಕೊಳ್ಳಲಿಲ್ಲವಲ್ಲ ! ಏನಿದು ವಿಪರ್ಯಾಸ ?'(ಪುಟ೩) ಎಂಬ ಮಹಿಳಾಪರ ಧ್ವನಿ ಇಲ್ಲಿ ಕೇಳಿ ಬಂದಿದೆ ಕರ್ನಾಟಕವನ್ನು ಆಳಿದ ಅನೇಕ ರಾಜ ಮನೆತನಗಳ ರಾಣಿಯರನ್ನು ಹೆಸರಿಸಿದ್ದಾರೆ. ರಾಷ್ಟ್ರಕೂಟ ರಾಜಕುಮಾರಿ ರೇವಕ್ಕ (ಅಮೋಘವರ್ಷನ ಸುತೆ) ನಾಡನ್ನಾಳುತ್ತಿದ್ದಳು ಎಂದು ಬರೆದಿರುವ ಲೇಖಕರು ಜಕ್ಕಮಬ್ಬೆ, ದೀಧಾ ಮುಂತಾದ ರಾಣಿಯರ ಬಲಿಷ್ಠ ರಾಜ್ಯಾಡಳಿತದ ಕುರಿತು ಶಾಸನಗಳಲ್ಲಿನ ದಾಖಲೆಗಳ ಆಧಾರದಿಂದ ಹೇಳುತ್ತಾರೆ.
ಕರ್ನಾಟಕದಲ್ಲಿ ಆಯಾ ಕಾಲಘಟ್ಟದಲ್ಲಿ ರಾಜಕೀಯ ಪರಿಸ್ಥಿತಿಗಳನ್ನು ಅನುಲಕ್ಷಿಸಿ ರಾಜ್ಯ ಆಡಳಿತದಲ್ಲಿ ಭಾಗಿಗಳಾದ ಸುಗ್ಗಲೆ, ಶಾಂತಲೆಯರನ್ನು ಒಳಗೊಂಡಂತೆ ಅನೇಕ ರಾಣಿಯರನ್ನು ಹೆಸರಿಸಿದ್ದಾರೆ. ತಂದೆ, ಪತಿ ,ಮಗ ಸಹೋದರರೊಡನೆ ಆಡಳಿತ ನಿರ್ವಹಿಸಿದ ದಿಟ್ಟ ಅರಸೀಯರ ಪರಿಚಯ ಓದಿದರೆ ಎಂತಹ ಹೆಣ್ಣು ಮಕ್ಕಳ ಮನದಲ್ಲೂ ದೇಶಾಭಿಮಾನ ಗರಿಗೆದರಿ ನಿಲ್ಲುತ್ತದೆ. ಕಿತ್ತೂರಿನ ರಾಣಿ, ಝಾನ್ಸಿಯ ರಾಣಿಯರಿಂದ ಹಿಡಿದು ಅನೇಕ ರಾಣಿಯರ  ಹೋರಾಟದ ಕಥೆ ಇಲ್ಲಿದೆ. ವಿಕ್ಟೋರಿಯಾ ರಾಣಿಯ ಸಂಗತಿಯನ್ನು ಬರೆಯಲು ಮರೆತಿಲ್ಲ. ಕ್ರಿ. ಶ ೧೦೬೮ರ ಶಾಸನದಲ್ಲಿ ರಟ್ಟ ಸಾಮ್ರಾಜದಯದ ರಾಣಿ ಭಾಗಲಾದೇವಿಯ ಪರಿಚಯ ಇರುವುದನ್ನು ಉಲ್ಲೇಖಿಸಿದ್ದಾರೆ. ಉಳ್ಳಾಲದ ಹಿರಿಯ ಹಾಗೂ ಕಿರಿಯ ರಾಣಿಯ ಇಬ್ಬರ ಸಾಹಸ ಸಾಮಾಜಿಕ ಕಾರ್ಯ ರಾಜಕೀಯ ಚತುರತೆ ಎಲ್ಲವನ್ನು ಓದುವವರಿಗೆ ಪರಿಚಯಿಸಿದ್ದಾರೆ. ಚೆನ್ನಬೈರಾದೇವಿ, ಓಬವ್ವ, ಬೆಳವಡಿ ಮಲ್ಲಮ್ಮ ,ಕೆಳದಿಯ ರಾಣಿ, ನಾಗವ್ವ , ಶಿರಸಂಗಿಯ ರಾಣಿಯರು, ಒಣಕೆ ಕೆಂಪಮ್ಮ, ಲಕ್ಷ್ಮಮ್ಮಣ್ಣಿ ,ಈಶ್ವರಮ್ಮ ,ಚಾಂದ ಬೀಬಿ ,ಕಿತ್ತೂರಿನ ಮಲ್ಲಮ್ಮ, ರುದ್ರಮ್ಮ, ರಾಣಿ ಚೆನ್ನಮ್ಮ ಹೀಗೆ ಇವರೆಲ್ಲರ ಸಾಹಸ ದಾಖಲಿಸಿದ್ದಾರೆ.
ಧೀರೆ ಒನಕೆ ಕೆಂಪಮ್ಮ ಎಂಬ ಲೇಖನ ಮಹತ್ವದ್ದಾಗಿದೆ ನಮಗೆಲ್ಲ ವನಕೆ ಓಬವ್ವ ಗೊತ್ತು ಆದರೆ ಒನಕೆಯನ್ನೇ ಇಟ್ಟುಕೊಂಡು ಹೋರಾಡಿದ ಇನ್ನೊಬ್ಬ ಮಹಿಳೆ ಗೊತ್ತಿಲ್ಲ. ಕೆಂಪಮ್ಮ ಯಾರು ಈಕೆ ಎಂದು ಹುಬ್ಬರಿಸಬೇಡಿ. ಅವರು ಮೈಸೂರು ಭಾಗದ ಮಹಿಳೆ. ಒನಕೆ ಕೆಂಪಮ್ಮ ಎಂದೆ ಈ ಧೀರೆ ಪ್ರಸಿದ್ಧಳಾದದ್ದು ಒನಕೆಯನ್ನ ಆಯುಧ ಮಾಡಿಕೊಂಡು ಶತ್ರು ಸೈನ್ಯ ಸದೆಬಡೆದ ಈ ದಿಟ್ಟ ಹೆಣ್ಣು ಮಗಳ ಕಥೆ ಲಿಖಿತ ದಾಖಲೆಗಳಲ್ಲಿ ಸಿಗದಿದ್ದರೂ ಮೌಖಿಕ ಇತಿಹಾಸದಲ್ಲಿ ಮಾತ್ರ ಸಾಕಷ್ಟು ದೊರೆಯುತ್ತದೆ. ಹಂಪಟ್ಟೆಗೌಡರ ಕಾವಲಿಗೆ ಶತ್ರು ಸೈನ್ಯ ನುಗ್ಗಿದಾಗ ಅಲ್ಲಿನ ಗೌಡರ ಸೊಸೆ ಗಂಡುಗಚ್ಚಿ ಹಾಕಿ ಒನಕೆಯಿಂದ ಸೈನಿಕರನ್ನು ಹೊಡೆದುರುಳಿಸಿದವಳು. ಹೀಗೆ ನಮಗೆ ಗೊತ್ತಿರದ ಎಷ್ಟೋ ಸಾಹಸಿ ಹೆಣ್ಣು ಮಕ್ಕಳ ಪರಿಚಯವನ್ನು ನಾವು ಈ ಕೃತಿ ಓದಿದಾಗ ಅರಿತುಕೊಳ್ಳುತ್ತೇವೆ.
ಇತಿಹಾಸದಲ್ಲಿ ಮುನ್ನಲೆಗೆ ಬರದೆ ಉಳಿದಿರುವ ಅನೇಕ ಕನ್ನಡತಿಯರನ್ನು ಲೇಖಕರು ಪರಿಚಯಿಸಿದ್ದಾರೆ ಇನ್ನು ಎರಡನೇ ಭಾಗ ಎರಡನೆಯ ಭಾಗದ ಶರ್ಷಿಕೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕನ್ನಡತಿಯರ ಕೊಡುಗೆ ಇಲ್ಲಿ 145 ಜನ ಕನ್ನಡತಿಯರ ದೇಶಭಕ್ತಿಯಿಂದ ಹೋರಾಡಿದ ಕಥೆ ಇದೆ.
ಅಂಬಾಬಾಯಿಯವರಿಂದ ಹಿಡಿದು ಹನುಮಕ್ಕನ ಅವರವರೆಗೆ ಪಾಪಮ್ಮ, ಬಾಳವ್ವ ,ಮಹಾದೇವ ,ಮೀನಾಕ್ಷಿ,ಪಾರವ್ವ,ಕೊಡಗಿನ ಗೌರಮ್ಮ‌ ಮುಂತಾದವರ ಹೊರಾಟದ ಚಿತ್ರಣ ಇಲ್ಲಿದೆ. ಕೊಡಗಿನ ಗೌರಮ್ಮ, ಟಿ ಸುನಂದಮ್ಮ ಇಂತಹ ಮಹಿಳಾ ಸಾಹಿತಿಗಳು ಕೂಡಾ ಹೋರಾಟಗಾರ್ತಿಯರು. ಸ್ವತಂತ್ರ ಹೋರಾಟಕ್ಕೆ ಇವರ ಕೊಡುಗೆಯೂ ಇದೆ ಎಂಬುದನ್ನು ಹೇಳುತ್ತಾ ಬರಹಗಾರ್ತಿಯರ ಜೀವನದ ಇನ್ನೊಂದು ಮಗ್ಗುಲನ್ನು ಪರಿಚಯಿಸಿದ್ದಾರೆ. ವೀರರಮಣಿಯರ ಕಥೆಯನ್ನು ಒಳಗೊಂಡ ಮಹಾ ಗ್ರಂಥವಿದು ನಮ್ಮೂರಿನ ಹೋರಾಟಗಾರ್ತಿಯರು ಯಾರು ಎಂಬುದನ್ನು ನಾವೇ ತಿಳಿದುಕೊಂಡಿಲ್ಲ ಆದರೆ ಲೇಖಕರು ಸಂಶೋಧನಾತ್ಮಕವಾಗಿ ಅವರೆಲ್ಲರ ಹೆಸರು ಇಲ್ಲಿ ದಾಖಲಿಸಿದ್ದಾರೆ. ಈ ಕೃತಿ ಓದಿದಾಗ ನಮ್ಮೂರಿನ ಮಾತೆಯರು ದೇಶ ರಕ್ಷಣೆಯ ಹೊಣೆ ಹೊತ್ತವರು ಎಂಬ ಸತ್ಯ ತಿಳಿಯುತ್ತದೆ. ಹಲವರು ಮನೆಯ ವಾತಾವರಣದ ಪ್ರೇರಣೆಯಿಂದ ಹೋರಾಟಕ್ಕಿಳಿದರೆ ಇನ್ನು ಹಲವರು ಸ್ವಪ್ರೇರಣೆಯಿಂದ ಮತ್ತೆ ಕೆಲವರು ತಮ್ಮ ಧೈರ್ಯ ಕೆಚ್ಚಿನಿಂದ ಹೋರಾಡಿದ್ದಾರೆ ವರ್ಗ,ವರ್ಣ,ಲಿಂಗ ಸಮಾನತೆ ಸಾಧಿಸುವಲ್ಲಿ ಈ ಹೋರಾಟಗಾರ್ತಿಯರ ಪಾತ್ರ ಬಹುದೊಡ್ಡದಾಗಿದೆ ಬ್ರಿಟಿಷರ ಸತ್ವದಿಂದ ಭರತ ಮಾತೆಯನ್ನು ಕಾಪಾಡುವಲ್ಲಿ ನಮ್ಮ ಮಾತೆಯರ ತ್ಯಾಗ ಬಲಿದಾನಗಳ ಸತ್ಯಕತೆಯುಳ್ಳ ಕೃತಿ ಇದಾಗಿದೆ ಸ್ವತಂತ್ರ ಹೋರಾಟದ ಭಾಗವಾದ ಧ್ವಜ ಸತ್ಯಾಗ್ರಹ ಸ್ವದೇಶಿ ಚಳುವಳಿ ಎಲ್ಲದರಲ್ಲೂ ಈ ಮಹಿಳಾ ಮಣಿಯರ ಪಾತ್ರ ಮುಖ್ಯವಾಗಿದೆ.
ಈ ಹೋರಾಟದಲ್ಲಿ ಬಾಲಕಿಯರು, ಗೃಹಿಣಿಯರು, ವಿಧವೆಯರು ಸೇರಿದಂತೆ ಎಲ್ಲವಯೋಮಾನದ ಮಹಿಳೆಯರಿದ್ದಾರೆ. ಎಲ್ಲ ಜಾತಿ ಪಂಗಡಗಳ ಹೆಣ್ಣು ಮಕ್ಕಳು ದೇಶದ ವಿಷಯ ಬಂದಾಗ ಒಂದೇ ಎನ್ನುವ ಅಂಶ ಈ ಕೃತಿಯಿಂದ ಸ್ಪಷ್ಟವಾಗುತ್ತದೆ. ಇವರ ಧ್ಯೇಯ ದೇಶ ರಕ್ಷಣೆಯೊಂದೇ ಎನ್ನುವುದನ್ನು ಇಲ್ಲಿ ಅರಿಯುತ್ತೇವೆ. ಈ ಕೃತಿ ಸಂಶೋಧನಾತ್ಮಕವಾಗಿ ರಚನೆಯಾಗಿರುವುದರಿಂದ, ಇದು ಮುಂದಿನ ಅನೇಕ ಸಂಶೋಧನೆಗಳಿಗೆ ಆಕರ ಗ್ರಂಥವಾಗಿಯೂ ಅಮೂಲ್ಯ ಮಾಹಿತಿಗಳನ್ನ ಒದಗಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಹಾಯಕ ಆಗುವ ಇತಿಹಾಸದ ಸಂಗತಿಗಳು ಇಲ್ಲಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಯುವ ಜನಾಂಗಕ್ಕೆ ಉಪಯುಕ್ತ ಕೃತಿ ಇದಾಗಿದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
445 ಪುಟದ ಮೊದಲ ಸಂಪುಟಕ್ಕೆ ಹುಕ್ಕೇರಿಯ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಶುಭಾಶಿರ್ವಾದ ಕರುಣಿಸಿದ್ದಾರೆ. ಕರ್ನಾಟಕ ಗಾಂಧಿ ಸ್ಮಾರಕನಿಧಿ ಕಾರ್ಯದರ್ಶಿಗಳಾದ ಶ್ರೀಮತಿ ಇಂದಿರಾ ಕೃಷ್ಣಪ್ಪ ಅವರು ಮುನ್ನುಡಿ ಬರೆದದ್ದು ಕೃತಿಗೆ ಕಳೆತಂದಿದೆ. ‘ಮಹಿಳೆಯರ ದ್ವನಿಯಾಗಿ ಅವರ ಘನತೆಯ ಬದುಕನ್ನು ಸ್ಮರಿಸಿದ ಶ್ರೀ ಪಾಟೀಲರು’ ಎಂದು ಲೇಖಕರ ಬಗ್ಗೆ ಗೌರವದಿಂದ ಮುನ್ನುಡಿಯನ್ನು ಆರಂಭಿಸಿದ್ದಾರೆ.
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಆಯಾ ಜಿಲ್ಲೆಗಳ ಕೊಡುಗೆ ಏನು? ಎಂಬುದನ್ನು  ನಕಾಶೆ ಸಮೇತ ಮಾಹಿತಿ ನೀಡಿದ್ದಾರೆ. ಪ್ರೊ ಕಮಲ ಹಂಪನಾ ಅವರ ಬೆನ್ನುಡಿ ನೀಡಿ ಹರಸಿದ್ದಾರೆ. ನಾಡಿನ ಓದುಗರ ಓದಿನ ಹಂಬಲಕ್ಕೆ ಕೃತಿ ನ್ಯಾಯ ಒದಗಿಸಿದೆ. ಸದಾ ಓದುಗರ ಮನಸ್ಸನ್ನರಿತು ಹೊಸ ಮಾದರಿಯ ಕೃತಿಗಳನ್ನು ನೀಡುತ್ತಾ ಬಂದ ಸ್ವಪ್ನ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿಯೊಬ್ಬ ಭಾರತೀಯನೂ ಒದಲೇಬೇಕಾದ ಕೃತಿ ಇದಾಗಿದೆ. ಭಾರತೀಯ ಇತರ ಭಾಷೆಗಳಿಗೆ ಈ ಕೃತಿ ಭಾಷಾಂತರಗೊಳ್ಳಲಿ ಎಂಬ ಆಶಯ ಹೊತ್ತು ಕೃತಿಕಾರರದ ಪಾಟೀಲರನ್ನು ಮತ್ತೊಮ್ಮೆ ಅಭಿನಂದಿಸುವೆ. ಈ ಕೃತಿ ಓದದಿದ್ದರೆ ನಾವು ನಮ್ಮ ಇತಿಹಾಸವನ್ನು ಪೂರ್ಣ ಅರಿತುಕೊಳ್ಳಲು ಸಾಧ್ಯವಿಲ್ಲ ಎಂಬ ಮಾತನ್ನು ಮತ್ತೆ ಮತ್ತೆ ಹೇಳಬಯಸುತ್ತೇನೆ. ಉಳಿದಂತೆ ನೀವೇ ಓದಿ ಅಭಿಪ್ರಾಯ ತಿಳಿಸಿರಿ. ಮುಂದಿನ ಸಂಪುಟದ ನೀರಿಕ್ಷೇಯಲ್ಲಿದ್ದೇವೆ. 


ಡಾ.ಪ್ರಿಯಂವದಾ ಮ ಹುಲಗಬಾಳಿ.


Leave a Reply

Back To Top