ಇಂದಿರಾ ಮೋಟೆಬೆನ್ನೂರ ಕವಿತೆ-ಮೊದಲ ಮಳೆ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಮೊದಲ ಮಳೆ

ಬಿರಿದು ಬಾಯಿ ಬಿಟ್ಟ ಭೂಮಿ ಒಡಲಿಗೆ
ತಂಪು ಹನಿಹನಿ ಸಿಂಚನ….
ಮಡಿಲ ಬಿಸಿಲಬೇಗೆ ಧಗೆಗೆ
ಮಳೆಯು ಇಳಿಯೆ ಇಳೆಯೇ ರೋಮಾಂಚನ..

ಹೊಸ ಕಳೆ ನವ ಭಾವ ನವ ಜೀವ ಹೊನಲು
ನವ ಸ್ಪರ್ಶ ನವ ಹರ್ಷ ನವ ವರ್ಷದೊಲು
ಮೊದಲ ಮಳೆ ಮಣ್ಣ ವಾಸನೆ ಘಮಲು
ಸಂಜೆ ಮಲ್ಲಿಗೆ ಮೊಗ್ಗ ಮೊಗದಿ ಹಿಗ್ಗಿನಮಲು

ಹಸಿರ ಬಸಿರೊಡಲಲಿ ಉಸಿರ ಜಳಕ ಪುಳಕ
ಬಳುಕುವ ಬಳ್ಳಿಯೊಡಲಲಿ ನಸು ಕಂಪನ ನಡುಕ
ನಾಚಿ ಮುದುಡಿದ ನಲ್ಲೆ ಮೊಗದಿ ಕೆಂಪಿನ ಪದಕ
ಮುಗಿಲಮನೆ ಮಾಡಿನಿಂದ ನೆಲಕಿಳಿದ ತಂಪ ಉದಕ

ಮೊದಲು ಕೊನೆಯಿಲ್ಲದ ಮುಗಿಲ ನೆಲದ ಹಾಡ ಬಂಧನ
ಸೋನೆ ಮಳೆ… ಮುಸಲ ಧಾರೆ ..ಹನಿ ಹನಿ ಸಿಂಚನ
ಭುವಿ ಭಾನು ನಡುವೆ ನೇಯ್ದ ಎಳೆಯ ಕಥೆ ನಂದನ…
ಒಡಲೊಳಗೆ ಕಡಲು ಪ್ರೀತಿ ಸ್ನೇಹ ಚಿಗುರ ಸ್ಪಂದನ..


Leave a Reply

Back To Top