ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಗ್ರಾಮ್ಯ ಬದುಕಿನ ಮನುಷ್ಯತ್ವದ
ಮೌಲ್ಯಗಳ ಹುಡುಕಾಟದಲಿ….
ಅವ ಮಲ್ಲಪ್ಪ ತನ್ನ ಮಕ್ಕಳ್ನ ಬಿಟ್ಟು ಹೋಗಿಬಿಟ್ಟ ಪಾಪ..!! ಹರೆದು ಹುಡುಗಿ ಗಂಡನ್ನ ಕಳಕಂಡ ಜೀವನ ಹ್ಯಾಂಗ ಮಾಡಬೇಕು…?? ಕುಡಿದು ಕುಡಿದು ಹಿಂಗ ಹಾಳಾಗ್ ಹೋಗ್ಬಿಟ್ನೋ ಅವಾ…”
“ದೇವರು ಹಿಂಗ್ ಮಾಡಬಾರದು, ಬಹಳ ಕೆಟ್ಟದಾನ ಅವ ಮೊನ್ನೆ ಬಸ್ಸಿನ ಗಾಡಿಗೆ ಡಿಕ್ಕಿ ಹೊಡೆದು ಊರಿಗೆ ಹೋದವ ಮನೆಗೆ ಬರಲಿಲ್ಲ. ಆ ದೇವರಿಗೆ ಒಳ್ಳೆ ಮಾನಸ ಇಲ್ಲ…!! ದುಡಿಯೋರು ಮನ್ಯಾಗ್ ಇಲ್ಲಾಂದ್ರೆ ಮನೆ ನಡೆಸುವುದು ಹ್ಯಾಂಗ್…??
ನೋಡು ನೋಡು ಕಷ್ಟಪಟ್ಟು ದುಡುದು ದೊಡ್ಡ ಮನೆ ಕಟ್ಟಿಸಿದ, ಕಾರ ತಗಂಡಾನ, ಸಣ್ಣವಿದ್ದಾಗ ತಿನ್ನಾಕ ಅನ್ನ ಇದ್ಯಲ್ಲ ಅವರ ಮನಿಯಾಗ.. ಈಗ ಕೈಗೊಂದಾಳು, ಕಾಲಿಗೊಂದಾಳು ದೇವರು ಕೊಟ್ಟ ಈ ಸುಖ ಅವರ ತಾಯಿ ನಿಂಗವ್ವ ನೋಡ್ಲಿಲ್ಲ, ಎಲ್ಲಿ ಬೇಕಂದರೆ ಕೂಲಿ ಮಾಡಿ ಮಕ್ಕಳ ಜೋಪಾನ ಮಾಡಿದ್ಲು…”
“ಕಲ್ಲವ್ವನ ಮಗಳ ಕಾಲೇಜಿಗಂತ ಹೋಗಿ, ಅವ ಯಾವ್ವನಿಂದ ಓಡಿ ಹೋದ್ಲು..ಥೂ ಬಿಡು ಮಗಾ..”
ಇಂತಹ ಸಂಭಾಷಣೆಗಳನ್ನು ನಾವು ಪ್ರತಿ ಗ್ರಾಮದ ಗ್ರಾಮೀಣ ಭಾಗದಲ್ಲಿ ಕೇಳುತ್ತೇವೆ. ನೌಕರಿ ಮಾಡಲಿಕ್ಕೆ ಬೇರೆ ಊರಿಗೆ ಹೋದ ಮಗನ ಮುಂದೆ, ಗಂಡನ ಮನೆಯಿಂದ ಬಂದ ಮಗಳ ಎದುರು ಇಂತಹ ಸಂಭಾಷಣೆ ಸಾಮಾನ್ಯವಾಗಿರುತ್ತವೆ.
ಅದರಲ್ಲೂ ನಾನು ನನ್ನ ಸ್ವಂತ ಊರಿಗೆ ಹೋದರೆ ಸಾಕು ಊರಿನ ಎಲ್ಲಾ ಆಗುಹೋಗುಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾಳೆ ನನ್ನವ್ವ..!! ಪ್ರತಿಯೊಬ್ಬರ ಮನೆಯ ಸುಖ, ದುಃಖ, ನೋವು, ಸಂಕಟ ಆಗಿ ಹೋದ ಎಲ್ಲಾ ಘಟನೆಗಳನ್ನು ನನ್ನೆದುರು ನಮ್ಮವ್ವ ತೆರೆದಿಡುತ್ತಾಳೆ. ಪ್ರತಿಯೊಂದು ವಿಷಯವು ಆಕೆಗೆ ತನ್ನ ಮನೆಯ ವಿಷಯವೇ ಅನ್ನುವಷ್ಟರ ಮಟ್ಟಿಗೆ ಕರುಳು ಚೂರ್ರುಗುಡುವಂತೆ ಹಚ್ಚಿಕೊಂಡಿರುತ್ತಾರೆ.
ಇಂದು ಕೇವಲ ಈ ಯಾಂತ್ರಿಕೃತ ಬದುಕಿನಲ್ಲಿ ಈ ರೀತಿಯ ಸಂಬಂಧಗಳನ್ನು ಹುಡುಕುವುದು ತುಂಬಾ ಅಪರೂಪವಾಗಿದೆ. ಆದರೆ ಹಿಂದಿನಿಂದಲೂ ಉಳಿಸಿಕೊಂಡು ಬಂದಿರುವ ಅವರ ಸ್ನೇಹ ಸಂಬಂಧಗಳು ಸದಾ ಅಚ್ಚಹಸಿರಾಗಿರುವಂತೆ ನೋಡಿಕೊಂಡಿರುತ್ತಾರೆ. ಇಂದಿನ ಪೀಳಿಗೆಯ ಹುಡುಗ ಹುಡುಗಿಯರಿಗೆ ಸಂಬಂಧಗಳ ಬಗ್ಗೆ ತಿಳಿಸಬೇಕೆಂದರೆ ಅವರನ್ನು ಗ್ರಾಮೀಣ ಭಾಗದಲ್ಲಿ ಒಡನಾಟ ಮಾಡಿಸಬೇಕಾಗುತ್ತದೆ. ಇಲ್ಲದೇ ಹೋದರೆ ದೊಡ್ಡ ದೊಡ್ಡ ನಗರ ಪಟ್ಟಣಗಳ ಬದುಕಿಗೆ ತಮ್ಮನ್ನು ತಾವೇ ತೆರೆದುಕೊಂಡು, ಆಡಂಬರದ ಬದುಕಿನಲ್ಲಿ ಮುಳುಗಿಹೋದ ಯುವ ಮನಸ್ಸುಗಳು ಎಲ್ಲರನ್ನೂ ಮರೆತುಬಿಡುತ್ತಾರೆ.
ಕೇವಲ ತಾನು ತನ್ನದಾಯಿತು, ತನ್ನ ಬದುಕು, ತನ್ನ ಹೆಂಡತಿ ಮಕ್ಕಳು ನನ್ನದೇ ಪ್ರಪಂಚ ಎನ್ನುವಷ್ಟರ ಮಟ್ಟಿಗೆ ಸ್ವಾರ್ಥವನ್ನು ಬೆಳೆಸಿಕೊಂಡು ಬಿಡುತ್ತಾರೆ. ಯಾರೊಬ್ಬರ ಬಗ್ಗೆ ಅವರು ಆಲೋಚಿಸುವುದೇ ಇಲ್ಲ. “ಅವರು ನಮಗೆ ; ನಾವು ಅವರಿಗೆ” ಎನ್ನುವ ಕರುಳು ಸಂಬಂಧದ ಒಲವಿನ ಮಾತುಗಳು ಅವರಿಂದ ನಿರೀಕ್ಷಿಸುವುದು ದೂರದ ಮಾತಾದೀತು.
ಆದರೆ ಭಾರತದಂತ ದೇಶದಲ್ಲಿ ಕೃಷಿ ಪ್ರಧಾನವಾಗಿದ್ದು, ಗ್ರಾಮೀಣ ಬದುಕಿನಲ್ಲಿ ಎಲ್ಲದಕ್ಕಿಂತಲೂ ಸಂಬಂಧಗಳಿಗೆ ಹೆಚ್ಚು ಬೆಲೆ ಕೊಡುವ ಪರಂಪರೆಯನ್ನು ಇವತ್ತಿಗೂ ನಾವು ಕಾಣುತ್ತೇವೆ. ಬೇಸಿಗೆಯ ರಜೆಯಲ್ಲಿ ಊರಿಗೆ ಹೋದರೆ ಸಾಕು ಅವ್ವ ಇಲ್ಲವೇ ಅಜ್ಜಿ ಇಡೀ ಊರಿನ ಒಂದು ವರ್ಷದ ಚರಿತ್ರೆಯನ್ನು ನಮಗೆ ತೆರೆದಿಡುತ್ತಾರೆ. ಪ್ರತಿಯೊಬ್ಬರ ಮನೆಯ ಸಾವುಗಳು, ನೋವುಗಳು, ಸಂತೋಷದ ಕ್ಷಣಗಳು, ನಮ್ಮ ಕಣ್ಮುಂದೆ ಬಂದು ಹೋಗುತ್ತವೆ.
ಅವನು ನೌಕರಿ ಪಡೆದ ಸಂತೋಷವಿರಬಹುದು, ಅವಳು ಓದಿ ಪದವಿ ಪಡೆದ ಹೆಮ್ಮೆಯ ವಿಷಯಗಳಿರಬಹುದು, ಅವನು ರೋಗಕ್ಕೆ ತುತ್ತಾಗಿ ಹೋದ ಅನಾಥವಾಗಿ ಮನೆಯಲ್ಲಿ ಬಿದ್ದಿರಬಹುದು ಅಥವಾ ಇನ್ನೊಬ್ಬ ಶ್ರೀಮಂತಿಕೆಯನ್ನು ಪಡೆದು ಉತ್ತುಂಗದ ಶಿಖರಕ್ಕೆ ಏರಿರಬಹುದು, ಅವನಿಗೆ ಮದುವೆಯಾಗಿರಬಹುದು, ಅವನ ಮಗ ಅಥವಾ ಮಗಳು ಓಡಿ ಹೋಗಿರಬಹುದು.
ಹೀಗೆ.. ವಿಷಯ ಯಾವುದೇ ಇರಲಿ ಅವೆಲ್ಲವನ್ನೂ ತೇಟ್ ಪತ್ರಿಕ ವರದಿಗಾರರಂತೆ ಅವುಗಳನ್ನು ನಮ್ಮೆದುರು ತೆರೆದು ಬಿಡುತ್ತಾರೆ. ಇದು ಪ್ರೀತಿಯ ಸಂಬಂಧಗಳ ಬೆಸುಗೆಯ ಮಾತುಗಳು. ಒಲವಿನ ಮಾತುಗಳು. ಇಲ್ಲಿ ದ್ವೇಷವಾಗಲಿ,ಅಸೂಯೆಯಾಗಲಲಿ ಇರುವುದಿಲ್ಲ. ಎಲ್ಲರ ಮನೆಯ ಆಗುಹೋಗುಗಳ ಬಗ್ಗೆ ಸದಾ ಮಿಡಿಯುವ ಮನಸ್ಸು ಮಾತ್ರ ಇರುತ್ತದೆ.
ಗ್ರಾಮದ ಪ್ರತಿ ಕುಟುಂಬವು ತಮ್ಮ ಕುಟುಂಬವೇ ಎನ್ನುವಷ್ಟರ ಮಟ್ಟಿಗೆ ಹಚ್ಚಿಕೊಂಡಿರುತ್ತಾರೆ. ಎಲ್ಲವನ್ನು ಗಮನಿಸುತ್ತಾರೆ. ಪ್ರತಿಯೊಂದರಲ್ಲೂ ಭಾಗಿಯಾಗುತ್ತಾರೆ. ಅಕ್ಕ, ಅಣ್ಣ, ಮಾವ, ಕಾಕಾ, ಅತ್ತಿ….ಇಂತಹ ಸಂಬಂಧ ಸೂಚಕ ಪದಗಳಿಗೆ ಜೀವ ತುಂಬಿದ್ದಾರೆ.
ಅಷ್ಟೇ ಅಲ್ಲದೆ…
ಯಾವುದಾದರೂ ಸಂತೋಷದ ಸಂದರ್ಭಗಳಲ್ಲಿ, ಶುಭ ಸಮಾರಂಭಗಳಲ್ಲಿ ಕರೆಯದಿದ್ದರೆ ಸಿಟ್ಟು ಮಾಡಿಕೊಂಡು ಹೋಗುವುದೇ ಇಲ್ಲ. ಅದು ಅವರಿಗೆ ಸ್ವಾಭಿಮಾನದ ಪ್ರಶ್ನೆಯಾಗಿರುತ್ತದೆ.
ಆದರೆ…
ನೋವಾದರೆ, ಸಾವಾದರೆ, ಎಲ್ಲರಿಗಿಂತ ಮೊದಲು ನಿಂತು ಎಲ್ಲವನ್ನೂ ನಿರ್ವಹಣೆ ಮಾಡಿ, ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನ ಪಡುತ್ತಾರೆ. ಸಾಂತ್ವನದ ಮಾತುಗಳು, ಧೈರ್ಯದ ಮಾತುಗಳು, ಭರವಸೆಯ ಮಾತುಗಳು ಅವರಲ್ಲಿ ತುಂಬಿ ಮತ್ತೆ ಬದುಕಿನಲ್ಲಿ ಹೊಸ ಚೈತನ್ಯ ಮೂಡವಲ್ಲಿ ಮುಂದಾಗಿರುತ್ತಾರೆ. ಇದು ಗ್ರಾಮೀಣ ಭಾಗದ ಜನರ ಬದುಕಿನ ತಾಕತ್ತು..!!
ಇಂತಹ ಸಂಬಂಧಗಳನ್ನು ನಮ್ಮ ಮಕ್ಕಳಿಗೆ ನೈತಿಕ ಮೌಲ್ಯಗಳ ಚೌಕಟ್ಟಿನಲ್ಲಿ ಹೇಳಿಕೊಡದೆ ಹೋದರೆ, ಮುಂದಿನ ಪೀಳಿಗೆಯಿಂದ ಅವರ ಪ್ರೀತಿಯನ್ನು ನಿರೀಕ್ಷಿಸುವದಾದರು ಹೇಗೆ…? ಮುಂದಿನ ಪೀಳಿಗೆಯ ಮಕ್ಕಳನ್ನು ರಜೆಯಲ್ಲಿ ಗ್ರಾಮೀಣ ಭಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿಯ ಬದುಕನ್ನು ತೋರಿಸಬೇಕು.
ಆಗ…
ಗ್ರಾಮೀಣ ಭಾಗದ ಮನುಷ್ಯತ್ವದ ಮಾನವೀಯ ಮೌಲ್ಯಗಳು ಅನಾವರಣ ಅವರಿಗೆ ಪರಿಚಯವಾಗುತ್ತದೆ. ಅಂತಹ ಪ್ರೀತಿಯ ಹುಡುಕಾಟದಲ್ಲಿ ಸದಾ ಇರೋಣ. ಮನುಷ್ಯ ಸಂಬಂಧಿಗಳನ್ನು ಬೆಸೆಯೋಣ.
ರಮೇಶ ಸಿ ಬನ್ನಿಕೊಪ್ಪ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ
ಗ್ರಾಮೀಣ ಜೀವನದ ಚಿತ್ರಣ ಯಥಾವತ್ತಾಗಿ ಮೂಡಿ ಬಂದಿದೆ. ಅಭಿನಂದನೆಗಳು.