ದಿನಕರ ಸಿ ಕೋರಿಶೆಟ್ಟರ ಕವಿತೆ-ಧರೆಗಿಳಿದ ಸ್ವರ್ಗ.

ಕಾವ್ಯ ಸಂಗಾತಿ

ದಿನಕರ ಸಿ ಕೋರಿಶೆಟ್ಟರ.

ಧರೆಗಿಳಿದ ಸ್ವರ್ಗ.

ಅವನಿಯ ಮೇಲಿಹ ಅರಣ್ಯದಲಿ
ಅಪರೂಪದ ಸುಂದರ ಸರೋವರ
ಮನದುಂಬಿ ಆಸ್ವಾದಿಸಲದುವೆ
ನಯನ ಮನೋಹರ ಸ್ವರ್ಗ.

ಸ್ವಚ್ಛ ಶುದ್ಧ ತಿಳಿ ನೀರಿನಲಿ
ನೀಲಾಗಸವು ಪ್ರತಿಫಲಿಸುತಿರಲು
ಸೂರ್ಯ ಚಂದ್ರ ಗ್ರಹ ತಾರೆಗಳ
ಇಂದ್ರನೊಡ್ಡೋಲಗದ ರಾಜ್ಯಬಾರ.

ಸುತ್ತ ಮುತ್ತ ಹಚ್ಚ ಹಸುರಿನ
ಗಿಡ ಮರ ಲತೆಗಳ ಮದ್ಯದಲಿ
ಹಾಡುತಿಹವು ಇಂಪಾದ ಸ್ವರದಲಿ
ಕೋಗಿಲೆಗಳು ಹಕ್ಕಿ ಪಕ್ಕಿಗಳು.

ವನ್ಯಜೀವಿಗಳ ನೀರಾಟದ ಸದ್ದಿನಲಿ
ಶುಕಗಳ ಸುಶ್ರಾವ್ಯ ಕಾವ್ಯ ವಾಚನದಲಿ
ಮಂಡೂಕಗಳ ವಟಗುಟ್ಟುವಿಕೆಯಲಿ
ಬೃಂಗ ಕ್ರಿಮಿ ಕೀಟಗಳ ವಾದ್ಯಗೋಷ್ಠಿ.

ವಾಯುದೇವನ ಇಚ್ಛೆಯನುಸಾರ
ದಣಿವಿಲ್ಲದೆ ಅತ್ತಲಿತ್ತ ನೃತ್ಯ ಮಾಡುತಿಹ
ಅರಳಿ ನಿಂತಿಹ ಕಮಲಗಳು ಆಗಿಹವು
ರಂಭೆ ಊರ್ವಶಿ ಮೇನಕೆ ತಿಲೋತ್ತಮೆ.

ಕಂಡೆಡೆ ಜಿಹ್ವೆಯಲಿ ಜಲ ಜಿನಗುವ
ರುಚಿಕರ ಹಣ್ಣು ಹಂಪಲಗಳಿರಲು
ಸ್ವರ್ಗವಿಳಿದು ಧರೆಗೆ ಬಂದಿಹುದು
ಇಂದ್ರೀಯಗಳ ದಾಹ ತಣಿದಿಹುದು.


ದಿನಕರ ಸಿ ಕೋರಿಶೆಟ್ಟರ.



Leave a Reply

Back To Top