ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಜನ್ಮಜನ್ಮದ ಅನುಬಂಧವೆಂದರದು..

ದಿಕ್ಕುದಿಕ್ಕಿಗು ಹರಡಿ ಹಬ್ಬಿತು
ಹಸುರು ಹುಚ್ಚನ್ನೆರಚಿತು
ಚಿಗುರು ಚಿಗುರಿಗೆ ಚೆಲುವ ತುಂಬಿಸಿ
ಹೂವು ತೋರಣ ಕಟ್ಟಿತು
ಒಳಗು ಹೊರಗು ಬೆಳಗು ಸಂಜೆಯು
ನಿನ್ನ ಮೊಗವೇ ತೇಲಿತು
ಎಂಟು ದಿಕ್ಕಿನ ಗಾಳಿಯಲ್ಲು
ನಿನ್ನ ದನಿಯೇ ಕೇಳಿತು..


ಜನ್ಮಾಂತರದ ಗೆಳೆಯನೊಬ್ಬ ಸಿಕ್ಕಾಗ ಅವಳ ದಶದಿಕ್ಕುಗಳಿಗೂ ಹಸಿರೇ ಹುಚ್ಚಾಗಿ ವ್ಯಾಪಿಸುತ್ತದೆ. ಚಿಗುರು ಮೊಳೆತು ಹೂವಿನ ತೋರಣವಾಗುತ್ತದೆ. ಎಲ್ಲೆಲ್ಲೂ ಅವನ ದನಿಯೇ ಕೇಳುತ್ತದೆ. ಅವನ ಮುಖವೇ ಎಲ್ಲೆಡೆ ಕಾಣುತ್ತದೆ. ಮಾಗಿ ಮುಗಿವ ಮುನ್ನವೇ ಬೇಸಿಗೆ ಬರುತ್ತದೆ. ಬೇಸಿಗೆಯಲ್ಲೂ ಕಾಣುತ್ತದೆ ಕಾಮನಬಿಲ್ಲಿನ ಬಣ್ಣಗಳು. ಮನಸ್ಸು ಚಿಗುರನ್ನೇ ಉಟ್ಟು ಸಂಭ್ರಮಿಸುತ್ತದೆ. ಒಟ್ಟಿನಲ್ಲಿ ಅವನ ಆಗಮನವೇ ಚೈತ್ರವಾಗುತ್ತದೆ, ಹಬ್ಬವಾಗುತ್ತದೆ.


ಮಾವು ಹೊಂಗೆಗಳಂತೆ ಮನವಿದು
ಹೊಸತು ಚಿಗುರನು ಉಟ್ಟಿದೆ..
ಯಾವ ಜನ್ಮದ ಕೆಳೆಯೋ ಕಾಣೆನು
ಕಂಡ ಕೂಡಲೇ ಒಲಿಸಿತು
ಕಣ್ಗೆ ರೂಪವು ಇಳಿವ ಮುನ್ನವೆ
ಎದೆಗೆ ಪ್ರೇಮವು ಹರಿಯಿತು..

ಪ್ಯಾರ್ ಅಮರ್ ಹೆ ದುನಿಯಾ ಮೆ
ಪ್ಯಾರ್ ಕಭಿ ನಹಿ ಮರ್ ತಾ ಹೆ
ಮೌತ್ ಬದನ್ ಕೋ ಆತಿ ಹೆ
ರೂಹ್ ಕಾ ಜಲವಾ ರೆಹೆತಾ ಹೆ..


ಪ್ರೀತಿ ಎಂದೂ ಮರೆಯದ ಬಂಧ. ಅದೇ ಶಾಶ್ವತ. ದೈಹಿಕವಾದ ಪ್ರೀತಿ ಅಳಿದೇಬಿಡುವುದು. ದೇಹಕ್ಕಷ್ಟೇ ಸಾವಿರುವುದು. ಆತ್ಮದ ಜ್ಯೋತಿ ಬೆಳಗುತ್ತಲೇ ಉಳಿವುದು. ದೈವಿಕ ಪ್ರೀತಿ ಕೊನೆಯಾಗದು. ನಾನು ಎಂಬುದು ನಡೆಯಬೇಕಿರುವ ಪಯಣ. ನೀನು ಎಂಬುದೇ ಜೀವನದ ಗುರಿ. ಗುರಿಯನ್ನು ತಲುಪಲೇ ಬೇಕು. ನಿನ್ನನ್ನು ಪಡೆಯಲೇಬೇಕು. ಈ ಪಯಣ ತಡೆಯುವರಾದರೂ ಯಾರು? ನಾನು ಹೀಗೆ ಮತ್ತೆ ಮತ್ತೆ ಬರುತ್ತಲೇ ಇರುವೆ ನಿನ್ನೆಡೆಗೆ. ಈ ಬಂಧನವೇ ಹಾಗೆ. ಜನ್ಮಾಂತರದವರೆಗೂ ಜೊತೆಯಾಗಿ ನಡೆಯಲೇಬೇಕಾದ ಪ್ರಯಾಣ‌. ಮತ್ತೆ ಮತ್ತೆ ಹುಟ್ಟಿ ಬರುವೆ ನಿನಗೆ ಜೊತೆಯಾಗಲು.


ತೂ ಮಂಜ಼ಿಲ್ ಮೆ ರಾಹಿ ಹೂ
ಏಕ್ ದಿನ್ ತುಝಕೋ ಪಾವೂಂಗಾ
ಕೌನ್ ಮುಝೆ ಅಬ್ ರೋಕೇಗಾ
ಹರ್ ದಮ್ ಯೂಹಿ ಆವೂಂಗಾ..
ಜನಮ್ ಜನಮ್ ಕಾ ಸಾಥ್ ಹೆ ನಿಭಾನೇಕೋ
ಸೌ ಸೌ ಬಾರ್ ಮೇನೆ ಜನಮ್ ಲಿಯೆ…

ವಿಶ್ವಜೀವನವೊಂದು ಪಾರವಿಲ್ಲದ ಸಿಂಧು
ಮೇಲೆ ತೆರೆನೊರೆಯೆದ್ದು
ಭೋರ್ಗರೆಯುತಿರೆ ರೇಗೆ
ಅದರಂತರಾಳದಲಿ ಗುಪ್ತಗಾಮಿನಿಯಾಗಿ
ಹೃದಯಗಳು ನಲಿಯುತಿವೆ
ಪ್ರೇಮತೀರ್ಥದೆ ಮಿಂದು..


ಪ್ರೀತಿಯ ಪರಾಕಾಷ್ಠೆಯಿದು. ಈ ಜೀವನ, ಸಂಬಂಧಗಳು, ಸ್ನೇಹಗಳು ಎಲ್ಲ ಮಿತಿಯೇ ಇಲ್ಲದ ಭೋರ್ಗರೆವ ಜಲಧಾರೆ. ಅಲ್ಲಿ ಬಂದು ಅಪ್ಪಳಿಸುವ ನೆರೆಯೂ, ಹಾಗೇ ಬೆನ್ನು ತಿರುಗಿಸಿ ನಡೆವ ತೆರೆಯೂ ಇದೆ. ಆದರೆ ಈ ಪ್ರೀತಿಯೆಂಬುದು ಅದರಡಿಯಲ್ಲೆಲ್ಲೋ ನಿಶ್ಯಬ್ದದಿಂದ ಹರಿವ ಗುಪ್ತಗಾಮಿನಿ. ಆ ಪ್ರೇಮತೀರ್ಥದಲ್ಲಿ ಮಿಂದು ಮಡಿಯುಟ್ಟು ಪುನೀತವಾಗಿ ನಕ್ಕು ನಲಿಯುವವು ಈ ಹೃದಯಗಳು. ದೂರವೋ ಹತ್ತಿರವೋ ಎಲ್ಲಿದ್ದರೂ ಯಾವ ವ್ಯತ್ಯಾಸವಿಲ್ಲ. ಮನಸ್ಸಿಗೆ ಹತ್ತಿರವಾಗಿರುವ ಆತ್ಮಬಂಧನವೆಂದರೆ ಅದು ಜನ್ಮಾಂತರದ ಸಂಬಂಧವೇ. ಹಳೆಯ ಜನ್ಮದ ನಂಟು ಮತ್ತೆ ಮತ್ತೆ ಅಂಟಿಬಿಡಬಹುದು…


ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ..

ಸೌ ಬಾರ್ ಜನಮ್ ಲೇಂಗೆ
ಏ ಜಾನೆ ವಫಾ ಫಿರ್ ಭೀ
ಹಂ ತುಮ್ ನ ಜುದಾ ಹೋಂಗೆ..


ಒಮ್ಮೆ ಬೆಸೆದ ಬಂಧ ದೂರಾಗುವ ಮಾತೇ ಆಡದು. ಈ ಜನ್ಮಕ್ಕಷ್ಟೇ ಅಲ್ಲ. ನೂರು ಜನ್ಮದಲ್ಲೂ ಮುಂದುವರೆಯುವುದು. ಹಣೆಯ ಬರಹವಾದರೂ ಎಲ್ಲಿಯವರೆಗೆ ತಡೆದೀತು ಪ್ರೇಮಿಗಳ ಮಿಲನವನ್ನು? ದೂರದೂರವಿದ್ದರೂ ಹತ್ತಿರವಾಗಿರುವ ಹೃದಯಗಳು ಸೇರದೆ ಹೇಗೆ ಉಳಿಯಬಹುದು? ಈ ಪ್ರೇಮದ ದಾರಿಯಲ್ಲಿ ಪ್ರೇಮನಿಷ್ಠೆಯೆಂಬುದು ಇನ್ನೆಷ್ಟು ಕಾಲ ಅಲೆಯುತ್ತಿರಬಹುದು? ಹೆಜ್ಜೆ ಗುರುತುಗಳೇ ಸ್ವತಃ ತಲುಪಬೇಕಾದ ಗುರಿಯವರೆಗೆ ದಾರಿ ತೋರಿಸಿಬಿಡಬಹುದು!!


ಕಿಸ್ಮತ್ ಹಮೆ ಮಿಲಾನೆ ಸೆ
ರೋಕೇಗಿ ಭಲಾ ಕಬ್ ತಕ್
ಇನ್ ಪ್ಯಾರ್ ಕಿ ರಾಹೋ ಮೆ
ಭಟಕೇಗಿ ವಫಾ ಕಬ್ ತಕ್
ಕದಮೋಂಕೆ ನಿಶಾನ್ ಖುದ್ ಹೀ
ಮಂಜ಼ಿಲ್ ಕ ಪತಾ ಹೋಂಗೆ..

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ ಚಿತ್ತಾರ ಬರೆದವಳೇ
ಸುತ್ತೇಳು ಲೋಕದಲಿ ಮತ್ತೆಲ್ಲೂ ಸಿಗದವಳೇ
ನನ್ನೊಳಗೆ ಹಾಡಾಗಿ ಹರಿದವಳೇ..


ಅವನ ಪಾಲಿಗೆ ಅವಳು ಹಾಡಾಗಿ ಹರಿದವಳು, ಎದೆಯ ಆಗಸದಲ್ಲಿ ಚಿತ್ರ ಬರೆದವಳು, ಎಲ್ಲೂ ಕಾಣದ ಅಪರೂಪ ಗುಣದವಳು. ಅವಳು ಬಂದ ಮೇಲೆ ಬದುಕು ಒಂದು ಪ್ರಣಯಕವಿತೆಯಾದದ್ದು. ಆತ್ಮಗಳು ಬೆಸೆದು ಜನ್ಮಾಂತರದ ಸಂಧಾನವಾದದ್ದು. ಅವಳ ನೆನಪು ಬಣ್ಣದ ಕಾಮನಬಿಲ್ಲಾದದ್ದು. ಅವಳಿಗೆ ಎಲ್ಲಾ ಸುಖಗಳು ಸಿಗಲೆಂದು ಅವ ಹಾರೈಸಿದ್ದು. ಅವಳ ದುಃಖವೆಲ್ಲ ತಾನೇ ಉಣಲು ತಯಾರಾದದ್ದು. ಅವಳಿಗಾಗಿ ಕೊನೆಯವರೆಗೂ ಕಾಯಲು ಬಯಸಿದ್ದು.


ನೂರು ಜನ್ಮಕೂ ನೂರಾರು ಜನ್ಮಕೂ
ಒಲವಾ ಧಾರೆಯೇ ಒಲಿದೊಲಿದು ಬಾರೆಯೇ
ನನ್ನ ಆತ್ಮ ನನ್ನ ಪ್ರಾಣ ನೀನೆಂದೂ..

ಮೇರಾ ಗಮ್ ರಹಾ ಹೆ ಶಾಮಿಲ್
ತೇರೆ ದುಃಖ್ ಮೆ ತೇರೆ ಗಮ್ ಮೆ
ಮೇರೆ ಪ್ಯಾರ್ ನೆ ದಿಯಾ ಹೆ
ತೇರೆ ಸಾಥ್ ಹರ್ ಜನಮ್ ಮೆ
ತೂ ಕೋಯಿ ಜನಮ್ ಭಿ ಲೇಗಾ
ಮೇರಾ ಸಾಯಾ ಸಾಥ್ ಹೋಗಾ..


ಒಬ್ಬರ ಸುಖದುಃಖಗಳಲ್ಲಿ ಮತ್ತೊಬ್ಬರು ಜೊತೆ ಕೊಡುವುದೇ ಸಾಂಗತ್ಯವಲ್ಲವೇ? ಪ್ರತಿ ಜನುಮದಲ್ಲೂ ಜೊತೆಯಾಗಿರುವುದೇ ಪ್ರೇಮವಲ್ಲವೇ? ಎಷ್ಟು ಜನ್ಮಗಳಲ್ಲಿ ಹುಟ್ಟಿ ಬಂದರೂ ಒಬ್ಬರು ಇನ್ನೊಬ್ಬರ ನೆರಳಾಗಿರುವುದೇ ಅನುಬಂಧವಲ್ಲವೇ? ಪ್ರಾಣವೇ ಹೋದರೂ ತನಗಾಗಿ ಅವನೆಂದೂ ನೋಯದಿರಲಿ, ತನಗಾಗಿ ಕಣ್ಣು ತೋಯದಿರಲಿ ಎಂಬುದೇ ಅವಳ ಹಾರೈಕೆ. ಕಣ್ಣಿಗೆ ಕಾಣದೇ ಹೋದರೂ ಹತ್ತಿರವೇ ಉಳಿದಿರುವೆ ಎಂಬುದು ಅವಳ ನಂಬಿಕೆ. ಅವನು ಎಲ್ಲೇ ನಿಲ್ಲಲಿ, ಅವನು ಯಾವ ತಿರುವಿನಲ್ಲೇ ತಿರುಗಿ ನೋಡಲಿ, ಎಲ್ಲಿಗೇ ನಡೆಯುತ್ತಿರಲಿ ತಾನವನ ನೆರಳಾಗಿರುವೆ ಎಂಬುದೇ ಅವಳ ವಾಗ್ದಾನ.


ತೂ ಜಿಧರ್ ಕಾ ರುಕ್ ಕರೇಗಾ
ತೂ ಜೋ ಮುಡ್ ಕೆ ದೇಖ್ ಲೇಗಾ
ಮೇರಾ ಸಾಯಾ ಸಾಥ್ ಹೋಗಾ
ತೂ ಜಹಾ ಜಹಾ ಚಲೇಗಾ
ಮೇರಾ ಸಾಯಾ ಸಾಥ್ ಹೋಗಾ..

ಶ್ರೀಗಂಧ ಸೀಮೆಯ ತಂಗಾಳಿಯಂತೆ
ಬಂಗಾರ ಭೂಮಿಯ ಹೊಂಬಾಳಿನಂತೆ
ಪುಣ್ಯಪುರುಷರ ಇತಿಹಾಸದಂತೆ
ಕನ್ನಡ ಜನರ ಔದಾರ್ಯದಂತೆ..


ಹೃದಯಗಳ ವಿಷಯವೇ ಹಾಗೆ. ಅತಿ ಭಾವುಕ, ಅತಿ ರಂಜಿತ. ಅತಿ ಮೋಹಕ. ಇರುವ ಜನ್ಮದ್ದಷ್ಟೇ ಅಲ್ಲ, ಹಿಂದಿನ, ಮುಂದಿನ ಜನ್ಮದ ಬಗ್ಗೆಯೂ ಯೋಚನೆ, ಯೋಜನೆ. ಅದನ್ನು ವರ್ಣಿಸಲು ಪದಗಳಿಲ್ಲ. ಅಳೆಯಲು ಮಾಪಕವಿಲ್ಲ. ಅಮರವಾಗಿ ಉಳಿಯಬಹುದಾದ  ಪ್ರಕೃತಿಯ ಹಾಗೆ, ಮನಮೋಹಕಗೊಳಿಸುವ ಹೆಣ್ಣಿನ ಸೌಂದರ್ಯದ ಹಾಗೆ, ಶೃಂಗಾರ ಕಾವ್ಯದ ಹಾಗೆ.


ಅನಂತ ಪ್ರಕೃತಿಯ ಲಾವಣ್ಯದಂತೆ
ಲಾವಣ್ಯವತಿಯರ ವೈಯ್ಯಾರದಂತೆ
ಶೃಂಗಾರ ಕಾವ್ಯದ ರಸಲಹರಿಯಂತೆ
ತುಂಗಭದ್ರ ಸಂಗಮದಂತೆ..


ಅಷ್ಟೇ ಯಾಕೆ? ನಮ್ಮ ಇತಿಹಾಸ, ಭೂಗೋಳ, ನಾಡುನುಡಿ, ಭೂಮಿ, ಆಕಾಶ, ತಂಗಾಳಿ, ನದಿ, ಕಡಲು ಎಲ್ಲಕ್ಕೂ ಸರಿಸಮನಾದ ಸಂಬಂಧವಿದು. ಅನುಬಂಧವೆಂದರೇ ಹಾಗೆ, ಶಾಶ್ವತವಾದುದು.


ಜನ್ಮಜನ್ಮದ ಅನುಬಂಧ
ಹೃದಯ ಹೃದಯಗಳ ಪ್ರೇಮಾನುಬಂಧ..


ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top