ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

“ಕೊಡು ತಾಯೆ ಕುಡುಕನಲ್ಲದ ಗಂಡನ”

ಬೆಳಿಗ್ಗೆ ಎಂಟರ ವೇಳೆಗೆ ಕಾಲೆಳೆದುಕೊಂಡು ತಲೆಗೊಂದು ಬ್ಯಾಂಡೇಜು ಕಟ್ಟಿಕೊಂಡು ಬಾತಿದ ಕಣ್ಣು ಮುಖದಿಂದ ಬಂದ ಕೆಲಸದಾಕೆ ಲೀಲಾಳನ್ನು ಕಂಡು ಪಾಪ ಎನಿಸಿದರೂ ತನ್ನ ಅರ್ಜೆಂಟಿನಲ್ಲಿ ಯಾಕೆ ಹೀಗೆ ಮಾಡ್ತೀಯಾ ಅಂತ ಸ್ವಲ್ಪ ರೇಗು ದನಿಯಲ್ಲೆ ಕೇಳಿದಳು. “ಅಕ್ಕಾ ನಿಮ್ಮ ಹತ್ತಿರದಿಂದ ತಗೊಂಡ್ಹೋಗಿದ್ನಲ್ಲ ಸಾವಿರ ಅದನ್ನು ಹೊಡೆದು ಕಿತ್ತುಕೊಂಡು ಹೋದ ನೋಡಿ ನನ್ನ ಗಂಡ .ಅವನ ಕೈ ಸೇದ್ಹೋಗ . ಮಕ್ಕಳಿಗೆ ಸ್ಕೂಲಿನಲ್ಲಿ ಪಾಠಕ್ಕೆ ಸೇರಿಸೋಣ ಅಂತ ಇಟ್ಟಿದ್ದು. ಇದ್ದಬದ್ದ ಸಾಮಾನು ಚೂರುಪಾರು ಚಿನ್ನ ಮಾರಿಯಾಯಿತು . ಇರೋಬರೋ ದುಡ್ಡು ಹೆದರಿಸಿ ಬೆದರಿಸಿ ಹೊಡೆದು ಕಿತ್ತುಕೊಂಡು ಹೋಗ್ತಾನೆ . ಹೇಗಮ್ಮ ಸಂಸಾರ ಮಾಡಲಿ . ನಿನ್ನೆ ಕೊಡಲ್ಲ ಅಂತ ಜೋರಾಗಿ ರಂಪಾಟ ಮಾಡಿದರೆ ಕೈಗೆ ಸಿಕ್ಕಿದ್ದರಲ್ಲಿ ಚೆಚ್ಚಿ ದುಡ್ಡು ಎತ್ತಿಕೊಂಡು ಹೋದ . ಮತ್ತೆ ಕುಡಿದು ಬಂದು ರಾತ್ರಿ ಎಲ್ಲಾ ಗಲಾಟೆ .ಮಕ್ಕಳಿಗೆ ನನಗೆ ಊಟ ಇಲ್ಲ. ನಿದ್ರೆ ಇಲ್ಲ ಸಾಕಾಗಿಹೋಗಿದೆ ಜೀವನ “. ಬಿಸಿಯಾಗಿ ಕಾಫಿ ಕೊಟ್ಟು 1 ಮಾತ್ರೆ ಕೊಟ್ಟು “ನಿಧಾನಕ್ಕೆ ಕುಡಿ ಆದಷ್ಟು ಕೆಲಸ ಮಾಡು ಇಲ್ಲದಿದ್ದರೆ ಮನೆಗೆ ಹೋಗಿ ರೆಸ್ಟ್ ತೊಗೋ . ಆಗಾಗ ಈ ತರ ನಡೀತಾನೆ ಇರತ್ತಲ್ಲ ಸುಮ್ಮನೆ ಅವನನ್ನು ಬಿಟ್ಟು ಮಕ್ಕಳು ನೀನು ಬೇರೆ ಸುಖವಾಗಿ ಇರಬಾರದೆ ? ಇಲ್ಲ ಸ್ವಲ್ಪ ದೊಡ್ಡವರಿಗೆ ಹೇಳಿ ಅವನ ಚಟವನ್ನಾದರೂ ಬಿಡಿಸು .ಎರಡೂ ಮಾಡಲ್ಲ ಸುಮ್ಮನೆ ಹೀಗೆ ಗೋಳಾಡಿ ಅನುಭವಿಸ್ತೀಯಲ್ಲಾ…” “ಬಿಡಿ ಅಮ್ಮ ನಮ್ ಕಡೆ ಎಲ್ಲಾ ಕುಡಿಯೋರು ಸಾಮಾನ್ಯ. ಅವರು ಬುದ್ಧಿ ಕಲಿಯಲ್ಲ. ನಮ್ಮ ಜನ್ಮಕ್ಕಂಟಿದ ಕರ್ಮ ಅನುಭವಿಸಬೇಕು
ಅಷ್ಟೇ….ಹಂಗಂತ ಗಂಡನ್ನೇ ಬಿಟ್ಟಾರ ನೀವೊಳ್ಳೇ ಸರಿ ” ಅಂತ ಹೇಳಿ ತನ್ನ ಕೆಲಸ ಶುರು ಮಾಡಿಕೊಂಡಳು. ಇವಳಿಗೆ ಎಷ್ಟು ಬುದ್ಧಿ ಹೇಳಿದರೂ ಅಷ್ಟೆ ಅಂದುಕೊಂಡು ಮಮತಾಳೂ ಸುಮ್ಮನಾದಳು .
ಗಾರೆ ಕೆಲಸಕ್ಕೆ ಹೋಗುವ ಲೀಲಾಳ ಗಂಡ ಕೈತುಂಬ ಹಣ ಸಂಪಾದಿಸುತ್ತಾನೆ .ಆದರೆ ಬೆಳಬೆಳಗ್ಗೆ ಕುಡಿದು ಕುಳಿತರೆ ಯಾರು ಕೆಲಸ ಕೊಟ್ಟಾರು? ಮನೆಯಲ್ಲಿ ಕಾಣೋದು ಪಾಪದ ಹೆಂಡತಿ ಅವಳನ್ನು ಪೀಡಿಸಿ ಇರೋ ಬರೋದನ್ನು ಕಿತ್ತುಕೊಂಡು ಹೋಗಿ ಮತ್ತೆ ಕುಡಿದು ಕುಳಿತುಕೊಳ್ಳುವುದು . ಮನೆ ಸಂಸಾರ ಏನೊಂದು ಬಗ್ಗೆಯೂ ಗಮನ ಇರದ ಇಂತಹ ಗಂಡಂದಿರನ್ನು ಕಟ್ಟಿಕೊಂಡು ಬಾಳುವ ದುರವಸ್ಥೆ ಹೆಣ್ಣುಮಕ್ಕಳಿಗೆ . ಎದುರಿಸಿಯೋ ಇಲ್ಲ ಕೊಡುವುದಿಲ್ಲ ಎಂದು ಗಲಾಟೆ ಮಾಡಿದರೋ ಹೊಡೆದು ಬಡೆದು ರಂಪಾಟ ಕಿರುಚಾಟ . ಅದಕ್ಕೆ ಏನೋ ನಮ್ಮ ಜಾನಪದರು ಬೇಡುವುದು “ಕೊಡು ತಾಯೆ ಕುಡುಕನಲ್ಲದ ಗಂಡನ” ಎಂದು.


ಆದರೆ ಹೆಚ್ಚಿನಾಂಶ ಹೆಣ್ಣುಮಕ್ಕಳು ಅನುಭವಿಸುತ್ತಾ ಸಂಸಾರದೊಳಗೆ ಹೆಣಗಾಡುತ್ತಾರೆಯೇ ವಿನಃ ಗಂಡನನ್ನು ಬಿಡುವಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಅವರನ್ನು ತಿದ್ದಲೂ ಸಾಧ್ಯವಿರುವುದಿಲ್ಲ ಹೀಗೆ ಹೆಣ್ಣಿನ ಬವಣೆಗೆ ಗಂಡಿನ ಕುಡಿತ ಎಷ್ಟೊಂದು ಕಾರಣವಾಗುತ್ತದೆ; ಸುಖೀ ಸಂಸಾರಗಳು ಬೀದಿಪಾಲಾಗುತ್ತದೆ . ಕೊನೆಗೊಮ್ಮೆ ಸಂಪಾದನೆಯನ್ನೆಲ್ಲಾ ಕುಡಿತಕ್ಕೆ ಪೋಲು ಮಾಡಿ ಹೆಂಡತಿ ಹಣವನ್ನು ಕದ್ದುಕೊಂಡು ಕಿತ್ತುಕೊಂಡು ಹೆಂಡತಿ ಮಕ್ಕಳನ್ನು ಮಾರೇಬಿಡುವ ಭೂಪರು ಸುತ್ತಮುತ್ತಲೇ ಇದ್ದಾರೆ. ಪಾನನಿಷೇಧ ಕಾಯಿದೆಗಳು ಬಂದರೆ ಕಳ್ಳಬಟ್ಟಿ ಸಾರಾಯಿ ಕುಡಿದು ಮತ್ತಷ್ಟು ಆರೋಗ್ಯ ಹಾಳುಮಾಡಿಕೊಂಡು ಹಾಸಿಗೆ ಹಿಡಿಯುವ ಇವರ ಉಪಚಾರದ ಹೊಣೆಯೂ ಆ ಬಡಪಾಯಿ ಹೆಂಡಂದಿರಿಗೇ……ಎಂದಿಗೆ ಈ ಶಾಪದಿಂದ ಹೆಣ್ಣುಮಕ್ಕಳಿಗೆ ವಿಮುಕ್ತಿ ? ಸರ್ವೇಸಾಮಾನ್ಯ ಎನ್ನುತ್ತಾ ಒಪ್ಪಿಕೊಂಡೇ ನಡೆಯುವ ಹೆಣ್ಣುಮಕ್ಕಳದು ಇದರಲ್ಲಿ ತಪ್ಪಿಲ್ಲವೇ? ಶತಾಯಗತಾಯ ಕುಡಿತ ಬಿಡಿಸಬೇಕೆಂದು ಪ್ರಯತ್ನ ಪಟ್ಟರೂ ಸಾಧ್ಯವಾಗದಿದ್ದಾಗ ಮುಂದೇನು ದಾರಿ? ಮುಖ್ಯ ಕುಡಿಯುವ ಗಂಡಂದರಿಗೆ ಬುದ್ಧಿ ಬರಬೇಕು .ಅಲ್ಲಿಯತನಕ ಹೆಣ್ಣಿನ ಬಾಳು ದಿನವೂ ಕಣ್ಣೀರಿನ ಗೋಳೇ….
ಇದಕ್ಕೆಲ್ಲಾ ಪರಿಹಾರ ಎಂದು ಹೇಗೆ ?


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

Leave a Reply

Back To Top