ಸ್ಮಿತಾ ರಾಘವೇಂದ್ರ ಕವಿತೆ-ವೃತ್ತ ಬರೆದ ಚಿತ್ರ

ಕಾವ್ಯ ಸಂಗಾತಿ

ಸ್ಮಿತಾ ರಾಘವೇಂದ್ರ

ವೃತ್ತಬರೆದ ಚಿತ್ರ

ನೋಡು ಪ್ರೀತಿಗೆ ಎಷ್ಟೆಲ್ಲ ಆಯಾಮಗಳಿವೆ
ಚಿತ್ರ ಬರೆಯ ತೊಡಗಿದ.

ಮೊದಲೆರಡು ಚುಕ್ಕಿ ಇಟ್ಟ
ಒಂದಕ್ಕೊಂದು ಬೆಸೆದ
ಚಂದ್ರನ ಬೆಳಕು ಚೆಲ್ಲಿದ
ಪುಟ್ಟ ಮಗು
ರಂಗವಲ್ಲಿ
ತುಳಸಿ ಗಿಡ
ಗೆಜ್ಜೆ ಕಟ್ಟಿದ ಕರು
ಜೋಕಾಲಿ
ಏನಿತ್ತು ಏನಿಲ್ಲ ಅಲ್ಲಿ.

ತನ್ನ ಮಾಂತ್ರಿಕ ಬೆರಳಿನಲಿ
ಬಿಟ್ಟ ಜಾಗದಲ್ಲೆಲ್ಲ ಬಣ್ಣ ತುಂಬಿ
ಬೆರಗಾಗಿಸಿದ.
ಚೌಕ ಆಯತ ತ್ರಿಕೋನ
ಒಂದೊಂದು ಮೂಲೆಗೂ
ಚಂದದ ಹೆಸರು.
ಬಿಂದು ಬಿಂದುವಿಗೂ
ಭಾವ ತುಂಬಿ
ಇದು ಪ್ರೀತಿ
ಇದು ಒಲವು
ಇದು ಚೆಲುವು
ಇದು ಕಾಮ
ಇದು ಕವನ
ಇದು ಕನಸು.
ಎಳೆದ ಗೆರೆಗಳಲ್ಲಿವ್ಯತ್ಯಾಸವಿಲ್ಲ
ಸ್ಥಾನ ಕೊಂಚ
ಆಚೀಚೆ ಆಗಬಹುದು ಅಷ್ಟೇ
ಮತ್ತೆ ಮತ್ತೆ ಹೊಂದಿಸುತ್ತಿರು ಎಂದ.

ಮತ್ತೆ ನೀನು ಎಂದೆ
ಚಿತ್ರಕ್ಕೊಂದು ವೃತ್ತ ಬರೆದ
ಅವನು ಹೊರಗುಳಿದ.


ಸ್ಮಿತಾ ರಾಘವೇಂದ್ರ

Leave a Reply

Back To Top