ಅಂಕಣ ಸಂಗಾತಿ

ಸಿನಿ ಸಂಗಾತಿ

ಕುಸುಮ ಮಂಜುನಾಥ್

ಮೆಹರಂ (MEHRAM)

ಆಕೆ ಸರಿಸುಮಾರು 65 ವರ್ಷದ ಮಹಿಳೆ ಮುಸ್ಲಿಂ ಸಮುದಾಯಕ್ಕೆ ಸೇರಿದವಳು ತನ್ನೊಂದಿಗೆ ಒಂದು ಫೈಲ್ ಹಿಡಿದು ಹಜ್ ಕಮಿಟಿಯ ಮುಖ್ಯ ಕಚೇರಿಯಲ್ಲಿ ಕುಳಿತಿದ್ದಾಳೆ ಅವಳೀಗ ಅಲ್ಲಿಯ ಮೇಲಧಿಕಾರಿಯನ್ನು ಭೇಟಿಯಾಗಿ ತನ್ನ  ಹಜ್ ಯಾತ್ರೆಗೆ ಅವಕಾಶ ಕೇಳಲಿದ್ದಾಳೆ.
        ಆದರೆ ಹಜ್ ಯಾತ್ರಾ ಕಮಿಟಿಯ (ಸಮಿತಿಯ) ನಿಯಮದಂತೆ ಮುಸ್ಲಿಂ ಮಹಿಳೆ ತನ್ನ ಗಂಡ ಅಥವಾ ಪುರುಷ  ರಕ್ತಸಂಬಂಧಿ – ಮೆಹರಂ ಬಂಧುವಿನೊಂದಿಗೆ ಮಾತ್ರ ಹಜ್ ಯಾತ್ರೆ ಮಾಡಬಹುದು ಒಬ್ಬಂಟಿಯಾಗಿ ಅಲ್ಲಿಗೆ ಅವರು ಪಯಣಿಸುವಂತಿಲ್ಲ….!!
        ನಮ್ಮ ಈ ಕಿರು ಚಿತ್ರದ ನಾಯಕಿ ಆಮ್ಮಾ ನಡು ವಯಸ್ಸಿನ ಮಹಿಳೆ, ಆಕೆ ವಿಧವೆ ಹಾಗೂ ಆಕೆಗೆ ಯಾರು ಒಡಹುಟ್ಟಿದವರಾಗಲೀ ಗಂಡು ಮಕ್ಕಳಾಗಲೀ ಇಲ್ಲ. ಆಕೆಗಿರುವುದು ಒಬ್ಬಳು ಹೆಣ್ಣು ಮಗಳು, ಹಾಗಾಗಿ ಅವಳಿಗೆ ಯಾತ್ರೆಯ ಅವಕಾಶ ಲಭ್ಯವಿಲ್ಲವೆಂದು ಅಧಿಕಾರಿ ಖಡಾಖಂಡಿತವಾಗಿ ನಿರಾಕರಿಸುತ್ತಾನೆ..,!
          ನಿರಾಶಳಾಗಿ ಮನೆಗೆ ಬರುವ ಆಕೆಗೆ ಅವಳ ನೆರೆಯಾಕೆ ನೂರ್  ಬೇಬಿ ಭರವಸೆ ಕಳೆದುಕೊಳ್ಳದಂತೆ ತಿಳಿಸುತ್ತಾಳೆ, ಹಾಗೂ ಅಲ್ಲಾಹುವಿನಲ್ಲಿ ಅಚಲ ನಂಬಿಕೆ ಇದ್ದಲ್ಲಿ ಅವನು ಖಂಡಿತ ಅಮ್ಮಾಳ ಬಯಕೆ ಈಡೇರಿಸುತ್ತಾನೆ ಎಂದು ತಿಳಿಸುತ್ತಾಳೆ.
         ಈ ಮಾತುಗಳಿಂದ ಉತ್ಸುಕಳಾಗುವ ಅಮ್ಮಾ ಮತ್ತೆ ಹಜ್ ಕಮಿಟಿಯ ಅಧಿಕಾರಿಯನ್ನು ಭೇಟಿಯಾಗಲು ತೆರಳುತ್ತಾಳೆ ಮತ್ತು ತಾನು ನೋಡಿಕೊಳ್ಳುತ್ತಿರುವ ಮೇಷ್ಟರ ಮಗ ಅಫ್ಜಲನ ಬಗ್ಗೆ ತಿಳಿಸುತ್ತಾಳೆ . ಅಫ್ಜಲ್  ತನ್ನ ಸಾಕು ಮಗನಾದ್ದರಿಂದ ಅವನೊಂದಿಗೆ ಯಾತ್ರೆಯ ಅವಕಾಶ ಮಾಡಿಕೊಡಬೇಕಾಗಿ ಕೇಳುತ್ತಾಳೆ, ಆದರೆ ಆ ಅಧಿಕಾರಿ ಅವಳ ಬೇಡಿಕೆಯನ್ನು ಪುರಸ್ಕರಿಸುವುದಿಲ್ಲ.


             ತನ್ನದೇ ಆದ ಸ್ವಂತ ಬಟ್ಟೆ ಅಂಗಡಿಯನ್ನು ಹೊಂದಿರುವ ಅಮ್ಮಾ ನಿತ್ಯದ ಗಳಿಕೆಯಲ್ಲಿ ಒಂದು ಭಾಗ (ಸ್ವಲ್ಪ ಹಣವನ್ನು) ಹಜ್ ಕಾಣಿಕೆಗಾಗಿ ಹುಂಡಿಯಲ್ಲಿ ಸಂಗ್ರಹಿಸುತ್ತಿರುತ್ತಾಳೆ, ಈ ನಡುವೆ ಅವಳ ಮಗಳು ಆಯೇಶಾ  ಸಹ ತನ್ನ ತಾಯಿಯ ಎಡೆಬಿಡದ ಪ್ರಯತ್ನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಮಹಿಳೆಯರಿಗೆ ಹೆಜ್ಜೆ ಹೆಜ್ಜೆಗೂ ನಿರ್ಬಂಧವಿರುವ ತನ್ನ ಸಮುದಾಯದ ವಿರುದ್ಧ ಇನ್ನೆಷ್ಟು ಹೋರಾಟ ಮಾಡುವೆ?  ಎಂದು ತನ್ನ ತಾಯಿಯನ್ನು ಪ್ರಶ್ನಿಸುತ್ತಾಳೆ ಅವಳು!!!
         ಏನೇ ಆದರೂ ಅಫ್ಜಲ್ನೊಂದಿಗೆ ಹಾಗೂ ಕೆಲವೊಮ್ಮೆ ಒಂಟಿಯಾಗಿ ಹೀಗೆ ನಿತ್ಯವೂ ಹಜ್ ಯಾತ್ರೆಯ ಕಮಿಟಿ ಕಚೇರಿಗೆ ಅಮ್ಮಾ ಓಡಾಡುತ್ತಾಳೆ 17 – 18 ದಿನ ಕಳೆದರೂ ಅವಳ ಬಗ್ಗೆ ಅಧಿಕಾರಿ ಗೆ ಮನಕರಗುವುದಿಲ್ಲ, ಅವನು ಅವಳನ್ನು ಕನಿಷ್ಠ ಒಳಗೂ ಕರೆಯುವುದಿಲ್ಲ, ಆದರೂ ಸಹ ಆಕೆ ಸ್ವಲ್ಪವೂ ಬೇಸರಿಸದೆ ತನ್ನ ನಿತ್ಯ ಯಾತ್ರೆಯನ್ನು ಮನವೊಲಿಕೆಯ ಯತ್ನವನ್ನು ಮುಂದುವರಿಸುತ್ತಾ ಹೋಗುತ್ತಾಳೆ.
          ಹೀಗೊಮ್ಮೆ ಒಂದು ದಿನ ಅನೀರಿಕ್ಷಿತವಾಗಿ ನಡೆಯುವ ಒಂದು ಘಟನೆಯು ಅಮ್ಮಾ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಆ ಅಧಿಕಾರಿಗೆ ಪ್ರೇರಣೆಯಾಗುತ್ತದೆ.
           ತನ್ನದೇ ಸಮುದಾಯದ ಆಕೆಗೆ ಸಹಾಯ ಮಾಡಲು ಮನಸ್ಸು ಮಾಡುವ ಆತ ಅಫ್ಜಲ್ ನನ್ನು ಅಮ್ಮಾಳ ಸ್ವಂತ ಮಗನಂತೆ ಬಿಂಬಿಸಿ ಹಜ್ ಯಾತ್ರೆಗೆ ಪೂರಕ ದಾಖಲೆ ತಯಾರಿಸುವುದಲ್ಲದೆ,
ಪಾಸ್ ಪೋರ್ಟ್ ವೀಸಾಗಳನ್ನು ಸಿದ್ಧಪಡಿಸುತ್ತಾನೆ, ಯಾತ್ರೆಗೆ ಅನುವು ಮಾಡಿಕೊಡುತ್ತಾನೆ.
          ತನ್ನ ಬಹುದಿನದ ಕನಸು ಈಡೇರುವ ಸಂಭ್ರಮದಲ್ಲಿ, ತನ್ನಯಾತ್ರೆಯ ತಯಾರಿ ನಡೆಸಲು ಹೊರಡುವ ಅಮ್ಮಾ ಗೆ ಆಘಾತ ಒಂದು ಎದುರಾಗುತ್ತದೆ, ಮಗಳು ಆಯೀಷಳಿಂದ ತಿಳಿಯಲ್ಪಡುವ ಸುದ್ದಿ ಅವಳ ಯಾತ್ರೆಯ ಕನಸನ್ನು ನುಚ್ಚುನೂರಾಗಿಸುತ್ತದೆ, ನಿರಾಶೆಯಿಂದ ದಾರಿ ಕಾಣದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತ ತನ್ನ ಸ್ಥಿತಿಗೆ ಮರುಗುತ್ತಾ ಹತಾಶಳಾಗುತ್ತಾಳೆ ಅಮ್ಮಾ, ಹಾಗಾದ್ರೆ ಆ ಮಗಳು ತಂದ ಸುದ್ದಿಯಾದರು ಯಾವುದು ?ಅವಳ ಹಜ್  ಯಾತ್ರೆಯ ಕನಸನ್ನು  ತಡೆದ ಆ ವಿಷಯ ಯಾವುದು? ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.
        ಒಮ್ಮೆ ಈ ಕಿರು ಚಿತ್ರ ನೋಡಿ ಮುಗಿಸಿದಾಗ ವಿಷಾದದ ಒಂದು  ಎಳೆ ಸುಳಿಯದಿರದು, ಜೀವಮಾನದ ಕನಸಿನ ಯಾತ್ರೆ ಈಡೇರದಿದ್ದಾಗ ನಿರಾಶೆ ಎಷ್ಟೆಂಬುದನ್ನು ಸಿನಿಮಾ ಚೆನ್ನಾಗಿ ತೋರಿಸಿದೆ.
         ತೀರ್ಥಯಾತ್ರೆಯ ಹಂಬಲದ ತೀವ್ರತೆ ಎಷ್ಟು? ಹೇಗೆ? ಎಂಬುದನ್ನು ಈ ಕಿರು ಚಿತ್ರ ತೋರಿಸುತ್ತದೆ ಮುಸ್ಲಿಂ ಸಮುದಾಯದಲ್ಲಿ ಹಜ್  ಯಾತ್ರೆಯ ಮಹತ್ವ ಹಾಗೂ ತಮ್ಮ ಜೀವಮಾನದಲ್ಲಿ ಒಮ್ಮೆಯಾತ್ರೆ ಕೈಗೊಳ್ಳಬೇಕೆಂಬ ಅವರ ಹಂಬಲ ಈ ಕಥೆಯ ತಿರುಳು. ಈ ಸಿನಿಮಾದ ಮೂಲಕ ತಮ್ಮ ಸಮುದಾಯದ ಹೆಣ್ಣು ಮಕ್ಕಳಿಗೆ ಇರುವ ನಿರ್ಬಂಧಗಳ ಬಗ್ಗೆ ಸೂಚ್ಯವಾಗಿ ಇಲ್ಲಿನ ಹೆಣ್ಣು ಪಾತ್ರಗಳು ವಿರೋಧ ವ್ಯಕ್ತಪಡಿಸುತ್ತವೆ, ಅಸಮಾಧಾನ ವ್ಯಕ್ತಪಡಿಸುತ್ತವೆ, ಹೆಣ್ಣು ಮಕ್ಕಳ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಈ ಕಿರುಚಿತ್ರ ಬೆಳಕು ಚೆಲ್ಲಿದೆ  ಎಂದು ಸಹ ಹೇಳಬಹುದು.
ಪುರುಷ ರಕ್ತ ಸಂಬಂಧಿಯ ಸಹಾಯವಿಲ್ಲದೆ ಹೆಣ್ಣು ಮಕ್ಕಳುಹಜ್ ಯಾತ್ರೆ ಮಾಡಬಾರದೆಂಬ ನಿಯಮ ತಂದಿರುವ ಸಂಕಟವನ್ನು ಚಿತ್ರದಲ್ಲಿ ಕಾಣಬಹುದು ಇಲ್ಲಿ ಆಕೆಯ ಸಾತ್ವಿಕ ಹೋರಾಟ ತನ್ನ ಸಮುದಾಯದ ನಿಬಂಧನೆಗಳ ವಿರುದ್ಧ ಆಗಿರುತ್ತದೆ.
              ಮನುಷ್ಯ ತನ್ನ ಧರ್ಮ, ದೇವರು ಇವುಗಳ ಮೇಲೆ ಇಡುವ ನಂಬಿಕೆ ತನ್ನ ಧಾರ್ಮಿಕ ಯಾತ್ರೆಯ ತುಡಿತವನ್ನು ಈಡೇರಿಸಿಕೊಳ್ಳಲು ಬರುವ ಅಡ್ಡಿ ಗಳನ್ನು ಈ ಕಿರು ಚಿತ್ರದಲ್ಲಿ ಬಹಳ ಸಹಜವಾಗಿ ಚಿತ್ರಿಸಿದ್ದಾರೆ ಬಹಳ ಸರಳವಾಗಿ ಮೂಡಿಬಂದಿರುವ ಕಥೆಯು ಮನಸ್ಸಿಗೆ ತಟ್ಟುವಂತಿದೆ
      ಶಬರಿಯು ರಾಮನಿಗೆ ಕಾಯುವಂತೆ, ತಬರನ ಕಥೆಯ ತಬರ ತನ್ನ ಪಿಂಚಣಿಗಾಗಿ ಎಡಬಿಡದೆ ಅಲೆಯುವಂತೆ ಇಲ್ಲಿಯ ಪಾತ್ರ ಅಮ್ಮಾ ಕಚೇರಿಗೆ ಅಲೆಯುವಾಗ ಆಕೆಯ ಗಟ್ಟಿತನಕ್ಕೆ ಒಂದು ಮೆಚ್ಚುಗೆ ವ್ಯಕ್ತವಾಗುತ್ತದೆ.
               ಯಾವ ಮಾತಿಗೂ ಜಗ್ಗದ ಅಧಿಕಾರಿ ಅಮ್ಮಾಳಿಗೆ ಕನಿಕರ ತೋರಿಸುವ ವಿಷಯ ಅಚ್ಚರಿಯನ್ನೇ ತರಿಸುತ್ತದೆ ಒಂದು ಪ್ರಾರ್ಥನೆ -ನಮಾಜ್ ಅವಳ ಆಸೆಯನ್ನು ಈಡೇರಿಸುವ ಅಧಿಕಾರಿಯ ಮನ ಪರಿವರ್ತನೆಗೆ ಕಾರಣವಾಗುವ ಪರಿ ಅಚ್ಚರಿ ತರಿಸುತ್ತದೆ.
           ಚಿತ್ರದ ಹಿನ್ನೆಲೆಯಲ್ಲಿ ಬರುವ ಗೀತೆಗಳು ಬಹಳ ಇಂಪಾಗಿದ್ದು ಅರ್ಥಪೂರ್ಣವಾಗಿವೆ. ಕೊನೆಯ ದೃಶ್ಯದಲ್ಲಿ ಅಂದಿನ ದುಡಿಮೆಯ ಸ್ವಲ್ಪ ಪಾಲನ್ನು ಹುಂಡಿಗೆ ಅಮ್ಮಾ ಹಾಕುವುದು ನಿರಾಶೆಯ ನಡುವೆಯೂ ಮತ್ತೊಮ್ಮೆ ಅವಳ ಹಜ್ ಯಾತ್ರೆಯನ್ನು ನಡೆಸಲೇಬೇಕೆಂಬ ತನ್ನಛಲಕ್ಕೆ ನಾಂದಿ ಹಾಡಿದಂತಿದೆ.

           ಅಮ್ಮಾಳ ಪಾತ್ರದಲ್ಲಿ ಫರೀದಾ ಜಲಾಲ ಅಭಿನಯಿಸಿದ್ದು ಪಾತ್ರಕ್ಕೆ ಮತ್ತಷ್ಟು ತೂಕ ಹೆಚ್ಚಿಸಿದ್ದಾರೆ ಕೇವಲ 35 ನಿಮಿಷದ ಈ ಕಿರು ಚಿತ್ರ – ಮೆಹರ್’ಮ್’ mehram ವಿಭಿನ್ನ ಕಥಾ ವಸ್ತುವಿನಿಂದ ಉತ್ತಮ ಕಿರುಚಿತ್ರ ವಾಗಿದೆ ಪ್ರಶಸ್ತಿಗೆ ಭಾಜನವಾಗಿದೆ 2018ರಲ್ಲಿ ಚಿತ್ರ ಬಿಡುಗಡೆಯಾಗಿದೆ.
        ಜೀ ಫೈವ್ (Zee-5)ನಲ್ಲಿ ಕಿರುಚಿತ್ರ ಉಚಿತವಾಗಿ ಲಭ್ಯವಿದೆ ಭಿನ್ನಕಥ ಪ್ರಯೋಗಕ್ಕಾಗಿ ಈ ಸಿನಿಮಾವನ್ನು ನೋಡಬಹುದಾಗಿದೆ.

 ತಾರಾಗಣ -ಫರೀದಾ ಜಲಾಲ್, ರಜಿತ್ ಕಪೂರ್ ,ಸುಷ್ಮಾ ಸೇಟ್ ,ಸತ್ಯೇಂದ್ರ ಮಲಿಕ್, ಅಭಿಷೇಕ್ ಅರೋರ, ಆರತಿ
ಕಥೆ -ಚಿತ್ರಕಥೆ -ನಿರ್ದೇಶನ -ಜೈನ್  ಅನ್ವರ್
ಪ್ರೊಡಕ್ಷನ್- ಡ್ರೀಮ್ ಮೀಡಿಯಾ
ನಿರ್ಮಾಪಕರು -ಗೌರವ ಭಾರದ್ವಾಜ್, ಶ್ವೇತಾ ಸೇಟಿ ಬೂಚರ್.


ಕುಸುಮ ಮಂಜುನಾಥ್

ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.

Leave a Reply

Back To Top