ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಜಾಮಾತೋ ದಶಮಗ್ರಹಃ ನಿಜವೇ?

ಇದು ಒಂದು ಸಾಮಾಜಿಕ ಪ್ರಶ್ನೆ.  ಸಾರ್ವತ್ರೀಕರಣ ಗೊಳಿಸಲಾಗದು
 ಪೂರಕವಾಗಿ ಒಪ್ಪಬಹುದಾದ ಸನ್ನಿವೇಶಗಳು ಕೆಲವಾದರೆ ಅಪವಾದ ಎನಿಸಿಕೊಂಡು ವಿಷಮ ವಾಗಿರುವುದು ಹಲವು . ಆದರೆ ಭಾರತೀಯ ಸಮಾಜ ಪರಂಪರೆಯ ನೆಲೆಗಟ್ಟಿನಲ್ಲಿ ನೋಡಿದಾಗ,  ಪ್ರಸ್ತುತ ಕೆಲ ಸನ್ನಿವೇಶಗಳು ಉದಾಹರಣೆಯಾದಾಗ ಎರಡೂ ತರಹದ ಸಂದರ್ಭಗಳು ಕಾಣಸಿಗುತ್ತವೆ.  

ಭಾರತೀಯ ಸಂಸ್ಕೃತಿಯ ಪ್ರಕಾರ “ಕೊಟ್ಟ ಹೆಣ್ಣು ಕುಲಕ್ಕೆ ಹೊರಗು” .  ಹಿಂದೆಯೂ ಬಹಳ ದೂರ ಪ್ರದೇಶಗಳಿಗೆ ಮದುವೆ ಮಾಡಿ ಕೊಟ್ಟರಂತೂ ತವರಿನ ದರ್ಶನ ಸಂದರ್ಶನ ವಿರಳವೇ.  ಇನ್ನು  ಮಗ ಆಗುವ ಸಂಧರ್ಭ ತಾನೇ  ಎಲ್ಲಿ? ಪಿತೃಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಗಂಡನ ಮನೆಗೆ ಬರುವ ಪದ್ದತಿ ಇದ್ದುದರಿಂದಲೇ ಏನೋ “ಜಾಮಾತೋ ದಶಮಗ್ರಹಃ”  ಎಂದು ಹೇಳಿರುವುದು . ವರಪೂಜೆಯಿಂದ ಮೊದಲುಗೊಂಡು ಕಡೆಯವರೆಗೂ “ಅಳಿಯಂದಿರೇ”  ಎಂಬ ಸಂಬೋಧನೆಯಿಂದ ಅತಿ ಉನ್ನತ ಸ್ತರದ ಉಪಚಾರ ಗೌರವ.  ಅಲ್ಲದೆ ಮತ್ತೆ “ಅಳಿಯದೇವರು”  ಎಂಬ ಹೆಸರು ಬರುತ್ತದೆಯೇ?  ಇದೇ ಸಾಮಾಜಿಕ ಪದ್ದತಿ ಮುಂದುವರಿಯುತ್ತಾ ಬಂದಾಗ ಅಗೋಚರ ಗೆರೆಯೊಂದು ಸಂಬಂಧಗಳ ಮಧ್ಯೆ ಮೂಡಿ ಆತ್ಮೀಯತೆಗಿಂತ  ಔಪಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಂತೆ ಕಂಡುಬಂದಿತು.  ಅಲ್ಲದೆ ವರದಕ್ಷಿಣೆ ವರೋಪಚಾರ ಎಂದೆಲ್ಲಾ ಅನಿಷ್ಟಗಳು ಹುಟ್ಟಿಕೊಂಡು ಅಳಿಯನೆಂದರೆ ನಡುಗುವ ಪರಿಸ್ಥಿತಿ ಬಂದಾಗ ಮಗನಾಗುವುದು ಎಲ್ಲಿ ಬಂತು “ಅಳಿಯ ಮನೆ ತೊಳಿಯ”  ಎಂದಾಗದಿದ್ದರೆ ಸಾಕಿತ್ತು .

ಈಚೆಗೆ ಹತ್ತೊಂಬತ್ತನೆಯ ಶತಮಾನದ ಕೊನೆಯಿಂದ ಈ ಪರಿಸ್ಥಿತಿ ಬದಲಾಗುತ್ತಾ ಬಂದು ಅತಿ ಗೌರವ,  ಆತ್ಮೀಯತೆಗೆ ದಾರಿ ಮಾಡಿಕೊಡುತ್ತಾ ದಶಮಗ್ರಹದಂತೆ ಭೀತಿಕಾರಕನಾಗದೆ ಅಳಿಯ ಮನೆಮಂದಿಗೆಲ್ಲ ಪ್ರೀತಿಧಾಯಕ  ಆಗುತ್ತಿದ್ದ.  ವಿಶಿಷ್ಟ ಸ್ಥಾನಮಾನ ಹೊಂದಿದ ಅವನ ಮಾತುಗಳಿಗೆ ಕುಟುಂಬದ ಆಗು ಹೋಗುಗಳಲ್ಲಿ ಗಮನಾರ್ಹ ಪ್ರಾಶಸ್ತ್ಯವಿರುತ್ತಿತ್ತು ಹಿರಿ ಅಳಿಯನಾದರಂತೂ ಉಳಿದೆಲ್ಲಾ ಭಾವಮೈದುನರ ನಾದಿನಿಯರ ಭವಿಷ್ಯ ನಿರ್ಧಾರಗಳಲ್ಲಿ ಪ್ರಮುಖ ಚರ್ಚೆಗಳಲ್ಲಿ ನಿರ್ಧಾರ ನೀಡಬೇಕಾದ ಅನಿವಾರ್ಯತೆ ಇತ್ತು.  ಎಷ್ಟೋ ಸಂದರ್ಭಗಳಲ್ಲಿ ಅವರ ಓದು ಕೆಲಸ ಮದುವೆಗಳಿಗೆ ಹಿರಿಯ ಅಳಿಯನ ಆರ್ಥಿಕ ಸಹಾಯವೂ ಇರುತ್ತಿತ್ತು.  ಆಗೆಲ್ಲ ಅಳಿಯ ಮನೆಯ ಮಗನೇ ಆಗಿ ಜವಾಬ್ದಾರಿ ತೆಗೆದುಕೊಂಡ ಅದೆಷ್ಟೋ ನಿದರ್ಶನಗಳಿವೆ. ಹೆಣ್ಣುಮಕ್ಕಳ ಮನೆಗೆ ಹೋಗಲೇ ಬಾರದು ಎಂಬ ಶುದ್ಧ ಮೂಢಭಾವ ಕಡಿಮೆಯಾಗುತ್ತ ಬಂದಿದ್ದು ಈ ಕಾಲಘಟ್ಟದ ವಿಶೇಷ .

ಇತ್ತೀಚೆಗೆ ನ್ಯೂಕ್ಲಿಯರ್ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವಾಗ ಒಂದೋ ಎರಡೋ ಮಕ್ಕಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರ ಇರುವ ಮಕ್ಕಳು ಹೆಣ್ಣಾಗಲಿ ಗಂಡಾಗಲಿ ಅವರ ಮೇಲೆಯೇ ಅವಲಂಬಿತರಾಗ ಬೇಕಾದ ಅನಿವಾರ್ಯತೆ . ಕೂಡುಕುಟುಂಬಗಳ ಪರಿಕಲ್ಪನೆಯೇ ಮಾಯವಾಗಿರುವಾಗ ಮಕ್ಕಳು ಮಾತ್ರ ತಂದೆ ತಾಯಿಯ ಜವಾಬ್ದಾರರು.  ಹಾಗಾಗಿ ಮದುವೆಯಾದ ಜೋಡಿಗೆ ಎರಡೂ ಕಡೆಯ ಪೋಷಕರನ್ನು ನೋಡಿಕೊಳ್ಳುವ ಹೊಣೆ ಸರ್ವೇಸಾಮಾನ್ಯವಾಗಿಬಿಟ್ಟಿದೆ.  ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಅತ್ತೆ ಮಾವಂದಿರನ್ನು ತಂದೆ ತಾಯಿಯರೆಂದು ತಿಳಿದು ಸೇವೆ ಮಾಡಬೇಕು ಎಂದಿದೆ.  ಅದನ್ನು ಅವಳಿಂದ ನಿರೀಕ್ಷಿಸಲಾಗುತ್ತದೆ.  ಆದರೆ ಗಂಡಿಗೆ ಆ ಕಟ್ಟುಪಾಡಿಲ್ಲ . “ಹೆಣ್ಣು ಕೊಟ್ಟ ಮಾವ ಕಣ್ಣು ಕೊಟ್ಟ ದೇವ”  ಎಂಬ ಗೌರವ ಮನದಲ್ಲಿದ್ದರೆ ಸಾಕು . ಆದಾಗ್ಯೂ ಈ ತಲೆಮಾರಿನ ಅಳಿಯಂದಿರು  ಅಳಿಯತನದ ಬಿಗುಮಾನ ತೋರದೆ ಮಗನಂತೆ ಆತ್ಮೀಯರಾಗುತ್ತಿರುವುದು ಕಾಲಘಟ್ಟದ ಪರಿಭ್ರಮಣದ ಒಂದು ಹೊಸ ಮನ್ವಂತರ . ಆ ಅಳಿಯತನದ ಉಪಚಾರ ಔಪಚಾರಿಕತೆಯ ಗೌರವ ಬಿಟ್ಟು ಏಕವಚನದಲ್ಲಿ ಸಂಬೋಧನೆ ಆತ್ಮೀಯ ವರ್ತನೆ ಹೊರನೋಟದ ಬದಲಾವಣೆಗಳಾದರೂ ಆಂತರಿಕವಾಗಿಯೂ ಸಾಂಸ್ಕೃತಿಕ ಕ್ರಾಂತಿ ಈ ದಿಶೆಯಲ್ಲಿ ಸಂಭವಿಸಿದೆ ಎನ್ನಬಹುದು.  ಈ ಪರಿವರ್ತನೆಗೆ ಸ್ತ್ರೀ ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಮಾನತೆಯೂ ಒಂದು ಕಾರಣವಿರಬಹುದು . ಮೊದಲಿನಂತೆ ಹೆಣ್ಣು ಹೇಳಿದಂತೆ ಕೇಳಿಕೊಂಡು ಇರುವ ಕೀಲುಗೊಂಬೆಯಾಗಿರದೆ ಸಮಾನ ಹಕ್ಕು ಬಾಧ್ಯತೆ ಹೊಂದಿರುವುದು ಮತ್ತು ಅವಳ ಮಾತಿಗೆ ಬೆಲೆ ಇರುವುದು ಮತ್ತೊಂದು ಕಾರಣವಿರಬಹುದು . ಏನೇ ಆಗಲಿ ಇದೊಂದು ಆರೋಗ್ಯಕಾರಿ ಬೆಳವಣಿಗೆ .

ಮದುವೆ ಎಂದರೆ ಬರೀ ಗಂಡು ಹೆಣ್ಣಿನ ಮಿಲನವಷ್ಟೇ   2 ಕುಟುಂಬಗಳ ಬೆಸುಗೆಯೂ ಹೌದು. ಆದ್ದರಿಂದ ಅಲ್ಲಿ ಪರಸ್ಪರ ಗೌರವ ಹೊಂದಾಣಿಕೆ ಅಪೇಕ್ಷಣೀಯ.  ಮೊದಲಿನಂತೆ ತವರನ್ನು ಮರೆತುಬಿಡಬೇಕು ಅತ್ತೆ ಮನೆಯವರಿಗೆ ಮಾತ್ರ  ಅವಳ ಸೇವೆ ಸೀಮಿತ ಎಂಬ ಕಂದಾಚಾರ ಈಗಿಲ್ಲ.  ಹಾಗಾಗಿ ಗಂಡ ಹೆಂಡತಿ ಇಬ್ಬರೂ ತಮ್ಮ ತಮ್ಮ ತಂದೆ ತಾಯಿ ಹಾಗೂ ಅತ್ತೆ ಮಾವ ಇವರನ್ನು ನೋಡಿಕೊಳ್ಳುವ ಹೊಣೆಯನ್ನು ಸಂತೋಷವಾಗಿಯೇ ಹೊರಬಲ್ಲರು  ಇಂದೀಗ ಹೊರುತ್ತಿದ್ದಾರೆ ಕೂಡ.  ಮೊದಲಿನಂತೆ ಸೊಸೆ ಮಾತ್ರ ಮಗಳಾಗದೆ ಅಳಿಯನೂ ಮಗನಾಗುತ್ತಿದ್ದಾನೆ . ಸನ್ ಇನ್ ಲಾ ದಲ್ಲಿಯಂತೆ ವಾವೆಯಲ್ಲಿ ಮಾತ್ರ ಕಾನೂನಾತ್ಮಕವಾಗಿ ಮಾತ್ರ ಸನ್ ಆಗದೆ ಭಾವನಾತ್ಮಕ ರೀತಿಯಲ್ಲೂ ಕುಟುಂಬಕ್ಕೆ ಸೇರಿಕೊಂಡ ಸನ್ ಆಗಿ ಪರಿಣಮಿಸಿದ್ದಾನೆ.  ಹಾಗಾಗಿಯೇ ಮಗನ ಮದುವೆಯಾದರೆ ಮಗಳು ಸಿಗುತ್ತಾಳೆ . ಮಗಳ ಮದುವೆಯಾದರೆ ಮಗ ಸಿಗುತ್ತಾನೆ.

ನಾನು ಮನೆಗೆ ಹಿರಿಮಗಳು ಅಲ್ಲದೇ ನಮ್ಮದು ಪ್ರೇಮ ವಿವಾಹ ಬೇರೆ . ಅಷ್ಟೆಲ್ಲಾ  ವಿಷಮ ಪರಿಸ್ಥಿತಿ ವಿರೋಧ ಪೂರ್ವಾಗ್ರಹ ಸಂದರ್ಭಗಳಲ್ಲಿಯೂ ನನ್ನ ಪತಿ ಅಳಿಯನಾಗದೆ ನನ್ನ ತವರಿಗೆ ಹಿರಿಮಗನಾದರು.  ನನ್ನ ಇಬ್ಬರು ತಂಗಿಯರ ವಿವಾಹ ಸಂದರ್ಭ,  ನಮ್ಮ ತಂದೆಯ ಅರವತ್ತನೆಯ ವರ್ಷದ ಶಾಂತಿ ಮೊದಲಾದ ಸಂದರ್ಭಗಳಲ್ಲಿ ಮುಂದೆ ನಿಂತು ಓಡಾಡಿದರು.  ನಮ್ಮ ತಾಯಿಯ ಅನಾರೋಗ್ಯ,  ದೇಹಾಂತ ನಂತರ ನಮ್ಮ ತಂದೆಯ ಅನಾರೋಗ್ಯ ದೇಹಾಂತಗಳಲ್ಲಿ ಅವರು ಕೊಟ್ಟ ಮಾನಸಿಕ ಬೆಂಬಲ ಸಹಕಾರ ಅತ್ಯಂತ ಶ್ಲಾಘನೀಯ.  ನಮ್ಮ ತಾಯಿಯಂತೂ ನನಗೆ ಗಂಡು ಮಕ್ಕಳಿಲ್ಲ ಅನ್ನಿಸುವಂತೆ ನನ್ನ ಮೂವರ ಅಳಿಯಂದಿರು ಎಂದೂ ಮಾಡಿಲ್ಲ ಎಂದು ಬಾಯ್ತುಂಬ ಹೊಗಳಿ ಹರಸಿದರು.  ಆ ಆಶೀರ್ವಾದವೇ ಈಗಲೂ ನಮ್ಮನ್ನು ಕಾಯುತ್ತಿರುವುದು .

ಯಾವುದೇ ಸಂಬಂಧಗಳಾಗಲಿ ನಾವು ಭಾವಿಸಿದಂತೆ. ಹಾಗಾಗಿಯೇ ಅತ್ತೆ ಮಾವರನ್ನು ತಂದೆ ತಾಯಿಯಂತೆ ಎಂದುಕೊಳ್ಳುವ ಭಾವವಿದ್ದರೆ ಸಾಕು ಪ್ರೀತಿಯ ಸರಿತೆ ತಾನಾಗೆ ಹರಿಯುತ್ತದೆ . ಅಲ್ಲಿ ಜನಪ್ರಿಯ ಚಿತ್ರಗೀತೆಯ ಹಾಡಿನಂತೆ

ಅಳಿಯ ಮಗನಾದನು ಮಾವ ಮಗುವಾದನು

ಎಂಬ ಭಾವ ತಾನೇತಾನಾಗಿ ಮೂಡುತ್ತದೆ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top