ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ಆಧುನಿಕ ಜೀವನ ಶೈಲಿ
ಆಧುನಿಕ ಜೀವನ ಶೈಲಿ
ಇತ್ತೀಚೆಗಂತೂ ಬಹಳ ಜಯಂತಿಗಳು. ಹೆಸರು ಪಡೆದ ಮಹಾನ್ ವ್ಯಕ್ತಿಗಳ ಸಂಖ್ಯೆ ಹೆಚ್ಚಾದ ಕಾರಣ ಮತ್ತು ಭಾರತೀಯ ಪುರಾಣಗಳ ವ್ಯಕ್ತಿಗಳು, ದೇವರು ದೇವತೆಗಳ ಸಂಖ್ಯೆಯೂ ಹೆಚ್ಚಿರುವ ಕಾರಣ , ಅದರ ಜೊತೆ ಜೊತೆಯಲ್ಲಿ ಪ್ರತಿ ದಿನವೂ ಜಾಗತಿಕ ಮಟ್ಟದಲ್ಲಿ ಅಥವಾ ರಾಷ್ಟ್ರೀಯ ಮಟ್ಟದ ಯಾವುದಾದರೂ ದಿನಾಚರಣೆಗಳು..ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿಯೊಂದು ದಿನವೂ ವಿಶೇಷವೇ.
ನಿನ್ನೆ ಬುದ್ಧ ಪೂರ್ಣಿಮ. ಇಂದು ನಾರದರ ಜಯಂತಿ. ನಾಳೆ ವಿಶ್ವ ನಗೆ ದಿನ. ನಾಡಿದ್ದು ಸಂಕಷ್ಟಹರ ಚತುರ್ಥಿ, ವಿಶ್ವ ರೆಡ್ ಕ್ರಾಸ್ ದಿನ. ಪ್ರತಿ ದಿನವೂ ವಿಶೇಷವೇ ಆಗಿರುವುದರಿಂದ ನೆನಪಿಟ್ಟುಕೊಳ್ಳುವುದು ಬಹಳ ಕಷ್ಟ. ಸ್ವಲ್ಪ ಹಬ್ಬ ಹರಿದಿನ, ಒಂದಷ್ಟು ದಿನಾಚರಣೆಗಳು ಇದ್ದಾಗ ನೆನಪಿರಬಹುದು. ಪ್ರತಿ ದಿನವೂ ಒಂದಲ್ಲಾ ಒಂದು ದಿನಾಚರಣೆಯೆ ಆದಾಗ ಅವರವರು ತಮಗೆ ಸಂಬಂಧಿಸಿದ ದಿನಾಚರಣೆಯನ್ನು ಮಾತ್ರ ನೆನಪಿಟ್ಟು ಆಚರಿಸಿಕೊಳ್ಳುವುದು ರೂಡಿ ಆಗಿದೆ.ಮತ್ತೇನು ತಾನೇ ಮಾಡಬಲ್ಲರು? ನಿತ್ಯ ಸಾವಯುವವನಿಗೆ ರೋಧಿಸುವವರು ಯಾರು ಎನ್ನುವ ಮಾತಿನಂತೆ ನಿತ್ಯ ಆಚರಣೆಗಳನ್ನು ಆಚರಿಸುವವರು ಯಾರು? ಇದೆಲ್ಲ ಈಗಿನ ಜಗತ್ತಿನ ಜನ ಜೀವನದ ಟ್ರೆಂಡ್. ಒಂಥರಾ ಹೇಗೆಂದರೆ ತಾನು, ತನ್ನ ಕುಟುಂಬ, ತನಗೆ ಸಂಬಂಧಿಸಿದ್ದು, ತನ್ನ ಕೆಲಸ, ತನ್ನ ಮಡದಿ, ಮಕ್ಕಳು, ಗಂಡ ಅಷ್ಟೇ. ಹೊರಗಿನ ಪ್ರಪಂಚ ನಮಗೆ ಬೇಡ. ನಮ್ಮ ಮಕ್ಕಳನ್ನು ಕೂಡಾ ಪ್ರಪಂಚಕ್ಕೆ ತೆರೆದುಕೊಳ್ಳಲು ನಾವು ಬಿಡಲಾರೆವು. ಕಾರಣ? ಭಯ. ಡಾಕ್ಟರ್, ಇಂಜಿನೀಯರ್ ಆದ ಮಕ್ಕಳಿಗೂ ಮೊದಲ ರ್ಯಾಂಕ್, ಅತ್ಯುತ್ತಮ ಅಂಕ ಪಡೆದರೂ ಪಕ್ಕದಲ್ಲಿ ಇದ್ದವರ ಜೊತೆ, ಹೊಸಬರ ಜೊತೆ ವ್ಯವಹಾರ ಮಾಡಲು ಬಾರದು, ಚೌಕಾಸಿ ಬಗ್ಗೆ ತಿಳಿದೇ ಇಲ್ಲ. ಓದು, ಪರೀಕ್ಷೆ , ಗೆಳೆಯರು ಅಷ್ಟೇ ಅವರ ಪ್ರಪಂಚ. ಹುಟ್ಟುಹಬ್ಬ, ಗೆಳೆಯರ ಜೊತೆ ಪಿಕ್ನಿಕ್, ಕುಟುಂಬದ ಮದುವೆ, ಟೂರ್ , ಉತ್ತಮ ರಿಸಲ್ಟ್ ಇವರು ಖುಷಿ ಪಡುವ ಕ್ಷಣಗಳು. ಅದು ಬಿಟ್ಟರೆ ಗೆಳೆತನ, ಪ್ರೀತಿ, ಪ್ರೇಮ, ಸಹಾಯ ಇಷ್ಟೇ ಪ್ರಪಂಚ. ಇವರನ್ನು ಹೊರ ಪ್ರಪಂಚಕ್ಕೆ ಕೆಲಸಕ್ಕೆ ಕಳುಹಿಸಿದಾಗ ಅವರು ಅನುಭವಿಸುವ ಕಷ್ಟ ಒಂದಾ ಎರಡಾ!
ಮತ್ತೊಂದು ಟ್ರೆಂಡ್ ಈಗಿನ ಮನೆಗಳದ್ದು. ಈಗಂತೂ ಯಾರೂ ಹಂಚಿನ, ಹುಲ್ಲಿನ, ಶೀಟಿನ ಮನಗಳನ್ನು ಕಟ್ಟುವಷ್ಟು ಬಡವರಾಗಿ ಉಳಿದಿಲ್ಲ ಬಿಡಿ. ಮನೆ ಕಟ್ಟಬೇಕು ಎಂದರೆ ಅದು ಟೆರೇಸ್ ಮನೆಯೇ. ಇನ್ನು ಕೆಲವರ ಪ್ಲಾನ್ ಮೇಲೆ ಎರಡು ಬೆಡ್ ರೂಮ್ ಹಾಗೂ ಒಂದು ಹಾಲ್. ಕುಡುಕ ಗಂಡಸು ಆದರೆ ಅವನ ಗೆಳೆಯರೆಲ್ಲ ಬಂದು ಪಾರ್ಟಿ ಮಾಡಲು ಇನ್ನೊಂದು ಕೋಣೆ ಹೆಚ್ಚು! ಈಗಂತೂ ಟ್ರೆಂಡ್ಸ್ ಹೆಚ್ಚುತ್ತಾ ಹೋದಂತೆ ಮನೆಯೊಳಗೆ ಬಾತ್ ಟಬ್, ಜಿಮ್, ಕೆಳಗೆ ಸ್ವಿಮಿಂಗ್ ಪೂಲ್, ಮನೆಯ ಗೋಡೆಗೆ ಅಟ್ಯಾಚ್ ಆಗಿ ಯಾರಿಗೂ ಗೊತ್ತಾಗದ ಹಾಗೆ ಬಾವಿ! ಜಾಗದ ಸದ್ಬಳಕೆ ಕೂಡಾ! ಇನ್ನೂ ವಾರ್ಡ್ ರೋಬ್ ತರ ಬಾತ್ರೂಂ ಡಿಸೈನ್. ಗೋಡೆಗೆ ಅಂಟಿದ ವಾರ್ಡ್ ರೋಬ್ ಡಿಸೈನ್. ಅಬ್ಬಾ! ಹಣವಿದ್ದರೆ ಸಾಕು ಏನು ಬೇಕಾದರೂ ಇಂಟೀರಿಯರ್ ಡಿಸೈನ್ ರೆಡಿ. ಕ್ಯಾಂಡಲ್ ಲೈಟ್ ಡಿನ್ನರ್, ಕಿಡ್ಸ್ ಪ್ಲೇ ರೂಮ್ , ಪ್ರೇಯರ್ ಹಾಲ್ ಹೀಗೆ!
ಕಾರ್ ಗಳ ಒಳಗೂ ದುಡ್ಡು ಹೆಚ್ಚು ಕೊಟ್ಟಷ್ಟು ಫೆಸಿಲಿಟಿ ಹೆಚ್ಚು ಅಲ್ಲವೇ! ಕಂಫರ್ಟ್ ಹೆಚ್ಚು. ಒಟ್ಟಿನಲ್ಲಿ ದುಡ್ಡೇ ದೊಡ್ಡಪ್ಪ, ಖಾಲಿ ವಿದ್ಯೆಯಿಂದ ಏನೂ ನಡೆಯದಪ್ಪ! ಹಣ ಇದ್ದವನ ಬಾಳು ಸುಗಮವಪ್ಪ! ಅದಕ್ಕೆಂದೇ ಮಂತ್ರಿ ಮಹೋದಯರು ನಾಲ್ಕಾರು ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಕಲೆ ಹಾಕುವುದು! ದೊಡ್ಡ ದೊಡ್ಡ ಮಾಲ್ ಗಳು, ಫೈವ್ ಸ್ಟಾರ್, ಸೆವೆನ್ ಸ್ಟಾರ್ ಹೋಟೆಲ್, ಬಾರ್, ಪಬ್ ಗಳ ನಿರ್ಮಾಣ, ಬಾಡಿಗೆ ಮನೆಗಳು, ಫ್ಲಾಟ್ ಗಳು,ಕಾರ್ಖಾನೆಗಳು, ಮಲ್ಟಿಪ್ಲೆಕ್ಸ್ ಗಳು ಉತ್ತಮ ಹಾಗೂ ಹಲವಾರು ವರ್ಷ ಆದಾಯ ತರುವ ಮೂಲಕ ಜೀವನ ಮೇಲ್ಮಟ್ಟಕ್ಕೆ ಏರುತ್ತದೆ.
ಹೊಸ ಮನೆಯಲ್ಲಿ ಒಳಗೆ ವೆಸ್ಟರ್ನ್ ಕಮೊಡ್. ನೋಡಲು ಬಾರೀ ಅಂದ. ಆದರೆ ಬಳಸುವ ಹಾಗಿಲ್ಲ! ಮನೆಯ ಹೊರಗೆ ಇರುವ ಇಂಡಿಯನ್ ಕಮೋಡ್ ಎಲ್ಲರೂ ಬಳಸಬೇಕು. ಮನೆಯಲ್ಲಿ ಇರುವ ಕಾಲು ಮಡಚಲು ಆಗದ ಅಜ್ಜಿ ಕೂಡಾ! ಮನೆಯೊಳಗೆ ದುರ್ವಾಸನೆ ಬರಬಾರದು! ಮತ್ತೆ ಆ ತರಹ ಮಾಡಿದ್ದೇಕೆ? ಶೋ..ಅಷ್ಟೇ! ಬೇರೆಯವರು ನೋಡಲು! ನಮಗಾಗಿ ಅಲ್ಲ! ಉಪಯೋಗಕ್ಕೂ ಅಲ್ಲ!
ಮನೆಯಲ್ಲಿ ಹಳೆಯ ಬಟ್ಟೆ , ಯಾರಾದರೂ ಬಂದರೆ ಅವರ ಸಾಮಾನುಗಳನ್ನು, ಬ್ಯಾಗ್ ಗಳ ಇಡಲು ಸ್ಥಳ ಇಲ್ಲ! ಇಬ್ಬರೇ ಇರುವುದು ಮನೆಯಲ್ಲಿ. ಎರಡು ಜನಕ್ಕೆ ಎರಡು ಬೆಡ್ ರೂಮಿನ ಮನೆ. ಬಂದವರನ್ನು ಎಲ್ಲಿ ಮಲಗಿಸುವುದು? ಹಾಲ್ ತುಂಬಿದೆ. ಅಡುಗೆ ಮನೆಯಲ್ಲೇ? ಮನೆ ದೊಡ್ಡದಾಗಿದೆ! ಮನಸ್ಸು?
ಇನ್ನು ಬದುಕಿನ ಶೈಲಿ. ಮನೆಯಲ್ಲಿ ಇರುವವರ ಎಲ್ಲರ ಆಹಾರ ಪದ್ಧತಿಗಳು ಬೇರೆ ಬೇರೆ. ಯಜಮಾನನಿಗೆ ಬೆಳಗ್ಗೆ ರಾತ್ರಿ ಚಪಾತಿ, ಮಧ್ಯಾಹ್ನ ಊಟ, ಯಜಮಾನಿಗೆ ಬೆಳಗ್ಗೆ ಫ್ರೂಟ್ ಸಲಾಡ್, ಮಧ್ಯಾನ ಲೈಟ್ ಮುದ್ದೆ ಊಟ, ರಾತ್ರಿ ಉಪವಾಸ, ಸಾಯಂಕಾಲ ಮತ್ತೆ ಹಣ್ಣು ಹಂಪಲು. ಮಗಳಿಗೆ ಬೆಳಿಗ್ಗೆ ಎನರ್ಜಿ ಜ್ಯೂಸ್, ಮಧ್ಯಾಹ್ನ ಡ್ರೈ ಫ್ರೂಟ್ಸ್ ಸಲಾಡ್, ಫ್ರೆಂಚ್ ಫ್ರೈ, ರಾತ್ರಿ ಒಂದೇ ಚಪಾತಿ, ಮಗನಿಗೆ ಮೂರು ಹೊತ್ತಿಗೂ ಬೇಯಿಸಿದ ಹತ್ತತ್ತು ಮೊಟ್ಟೆ, ಚಪಾತಿ, ಪಲ್ಯ, ಪಾಯಸ, ಚಿಕನ್, ದೇಹ ದಾರ್ಡ್ಯತೆಗೆ ಒತ್ತು ಕೊಡುವ ಕಾರಣ ಜ್ಯೂಸ್, ಒಂದಷ್ಟು ಎನರ್ಜಿ ಡ್ರಿಂಕ್ಸ್, ಮತ್ತೆ ಸಾಯಂಕಾಲ ಊಟಕ್ಕೆ ಮುಂಚೆ ಬಿಯರ್. ಸಿದ್ಧಪಡಿಸುವ ಕೈಗಳು ಎರಡೇ! ಬಟ್ಟೆ ಒಗೆಯಲು ಯಂತ್ರ. ನೆಲ ಸ್ವಚ್ಛಗೊಳಿಸಲು ಯಂತ್ರ, ಅಡುಗೆ ಮಾಡಲು ಹೊಸ ಹೊಸ ತಂತ್ರ, ಮಲಗಲು ಆಧುನಿಕ ಶೈಲಿಯ ಬೆಡ್. ಆದರೆ ನಿದ್ರೆ ಮಾತ್ರ ಬಾರದು! ಇಬ್ಬರೂ ಎರಡು ಕೋಣೆಗಳಲ್ಲಿ ಮೊಬೈಲ್ ಹಿಡಿದು ಅರ್ಧ ರಾತ್ರಿಯ ವರೆಗೂ ನೋಡಿ ಕೊನೆಗೆ ಯಾವಾಗ ನಿದ್ದೆ ಬಂತೋ ತಿಳಿಯದು. ಬೆಳಗ್ಗೆ ಹತ್ತು ಗಂಟೆಯವರೆಗೂ ಏಳಲು ಆಗದು, ಆದಷ್ಟು ಬೇಗ ಎದ್ದು ಒಂದಷ್ಟು ವಾಕಿಂಗ್, ಎಕ್ಸಸೈಜ್. ಮತ್ತೆ ಅಡುಗೆ ಮಾಡಲು ಸಮಯ ಇಲ್ಲ! ರೆಡಿ ಮೇಡ್ ಪಾರ್ಸೆಲ್ ಇಲ್ಲಾಂದ್ರೆ ಬೇಗ ಆಗುವ ತಿಂಡಿ, ಊಟ ತರಿಸುವುದು. ಸ್ವಿಗ್ಗಿ, ಜೊಮ್ಯಾಟೋಗಳು ಬೆಳೆದದ್ದಾದರೂ ಹೇಗೆ? ಈಗಂತೂ ತರಕಾರಿ ಕತ್ತರಿಸಿದ್ದೂ ಸಿಗುತ್ತದೆ! ಹೆಚ್ಚು ದುಡ್ಡು ಕೊಟ್ಟರೆ ಆಯ್ತು ಅಷ್ಟೇ!
ಮನೆಯಲ್ಲಿ ನಾಲ್ಕು ಜನರಿಗೆ ನಾಲ್ಕು ಗಾಡಿಗಳು. ವೇಗದ ಬದುಕಿಗೆ. ಬಸ್ಸು ಕಾದು, ಹಿಡಿದು ಹೋಗುವ ತಾಳ್ಮೆ ಯಾರಿಗೂ ಇಲ್ಲ. ಸಮಯ ಬೇಕಲ್ಲ! ಇನ್ನು ಟ್ರಾಫಿಕ್ ನಲ್ಲಿ ಗಂಟೆಗಟ್ಟಲೆ ಕಳೆದರೂ ಪರವಾಗಿಲ್ಲ! ಅದು ಮಾಮೂಲಿ ಬಿಡಿ! ಎಲ್ಲರೂ ಕಾಯುವುದೇ ಅಲ್ಲವೇ!ಸರಿಯಾಗಿ ತಿನ್ನಲು ಸಮಯವಿಲ್ಲ. ಟ್ರಾಫಿಕ್ ನಲ್ಲಿ ಮಾಡಲು ಕೆಲಸ ಇಲ್ಲ, ಕಾಯುವುದು ಬಿಟ್ಟು ಬೇರೆ ದಾರಿ ಇಲ್ಲ. ಅಲ್ಲೇ ಫೋನಿನಲ್ಲೇ ಕೆಲಸ. ಮತ್ತೆ ಇದೇ ರೀತಿ ಮನೆಗೆ ಬರುವಾಗ ರಾತ್ರಿ ಒಂಭತ್ತು ಗಂಟೆ. ಹಸಿವಾದರೆ ಹೊರಗೆ ಚಾಟ್ಸ್. ಮತ್ತೆ ಮನೆಯಲ್ಲಿ ಮಾತ್ರ ಡಯೆಟ್!
ವಿಷಯುಕ್ತ ಆಹಾರ. ಬಲವಂತದ ದೇಹ ಪ್ರಹಾರ ವ್ಯಾಯಾಮ. ಆಫೀಸ್ ಗಳಲ್ಲಿ ಕುಳಿತು ಕಳೆಯುವ ಕೆಲಸ, ಬೇರೆಯವರು ಸ್ಟ್ಯಾಂಡರ್ಡ್ ಇದ್ದಾರೆ ಎಂದು ಹೇಳುವ ಹಾಗೆ ಪರರಿಗಾಗಿ ಬದುಕು! ತನಗಾಗಿ ತನ್ನಿಷ್ಟದ ಹಾಗೆ ಬದುಕುವ ಗಾಂಧಿ! ದುರಭ್ಯಾಸ ಚಟಗಳು ಇಲ್ಲದವ ಓಲ್ಡ್ ಬ್ರುಟ್! ಮಾಡರ್ನ್ ಹೆಸರಲ್ಲಿ ಎಲ್ಲಾ ಅಯೋಮಯ. ಮತ್ತೆ ಸರಳ ಬದುಕು? ಆಗದು! ಎಕ್ಸ್ ಪ್ರೆಸ್ ಬಸ್, ಟ್ರೈನ್, ಪಾಶ್ ಗಾಡಿ ಇವೆಲ್ಲ ಬೇಕೇ ಬೇಕು. ಬದುಕು ಬದಲಾಯಿಸಲು ಆಗದು. ಕಾಲಕ್ಕೆ ತಕ್ಕಂತೆ ಓಡಬೇಕು, ಓಡುತ್ತಲೇ ಇರಬೇಕು ಅಲ್ಲವೇ? ನೀವೇನಂತೀರಿ!
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.