ಮೇ-ದಿನದ ವಿಶೇಷ

ಪ್ರೊ ರಾಜನಂದಾ ಘಾರ್ಗಿ

ಕಾರ್ಮಿಕ ದಿನಾಚರಣೆ

[ ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯ ಎನ್ನುವುದು ಈ ವರ್ಷದ ಕಾರ್ಮಿಕ ದಿನಾಚರಣೆಯ ಸಂದೇಶ. ಪ್ರತಿ ವರ್ಷ ಮೇ ತಿಂಗಳ ದಿನಾಂಕ 1 ರಂದು ಕಾರ್ಮಿಕರ ಶ್ರಮವನ್ನು ಗೌರವಿಸುವ ಉದ್ದೇಶದಿಂದ ಅಂತರ್ರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಒಂದು ವಿಶೇಷವಾದ ಸಂದೇಶದೊಂದಿಗೆ ಈ ದಿನವನ್ನು ಕಾರ್ಮಿಕ ದಿನ, ಲೇಬರ್ ಡೆ ಅಥವಾ ಮೇ ಡೆ ಎಂದು ಆಚರಿಸಲಾಗುತ್ತದೆ. ಜಗತ್ತಿನ ವಿವಿಧ ಕ್ಷೇತ್ರಗಳಲ್ಲಿ ಕಾರ್ಮಿಕರು ದುಡಿಯುತ್ತಿದ್ದಾರೆ. ಸಮಾಜದಲ್ಲಿ ಅವರ ಪಾತ್ರ ಬಹಳ ದೊಡ್ಡದು. ಪ್ರಪಂಚದಾದ್ಯಂತ ಕಾರ್ಮಿಕರಿಗೆ ಸಮಾನತೆ ಮತ್ತು ನ್ಯಾಯವನ್ನು ಒದಗಿಸಲು ನಡೆದ ಐತಿಹಾಸಿಕ ತ್ಯಾಗ ಮತ್ತು ಹೋರಾಟವನ್ನು ನೆನಪಿಸುವದೇ ಈ ಆಚರಣೆಯ ಮೂಲ ಉದ್ದೇಶ. ಕಾರ್ಮಿಕ ಸಮುದಾಯದ ಕೊಡುಗೆಗೆ ಸ್ಪಂದಿಸುವ ಜೊತೆಗೆ ಇನ್ನಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ, ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ, ಸಾಮಾಜಿಕ ರಕ್ಷಣೆಗಳನ್ನು ನೀಡುವ ಮತ್ತು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶ ಕೂಡ ಇದರಲ್ಲಿ ಅಡಗಿದೆ.
ಕಾರ್ಮಿಕ ಚಳುವಳಿ ಪ್ರಾರಂಭವಾಗಿದ್ದು 1860 ರಲ್ಲಿ. ಅಮೆರಿಕ ಹಾಗೂ ಕೆನಡಾ ದೇಶಗಳಲ್ಲಿ ಅನೇಕ ಕಾರ್ಮಿಕ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ದಿನವೊಂದಕ್ಕೆ 15 ಗಂಟೆಗಳ ಕಾಲ ಒತ್ತಾಯದಿಂದ ದುಡಿಸಿಕೊಳ್ಳುವುದನ್ನು ಈ ಸಂಘಟನೆಗಳು ವಿರೋಧಿಸಿದವು. ದಿನದ 15 ಗಂಟೆಗಳ ಕೆಲಸದ ಸಮಯವನ್ನು 8  ಗಂಟೆಗಳ ಅವಧಿಗೆ ಕಡಿತಗೊಳಿಸಬೇಕು ಎಂಬ ಬೇಡಿಕೆಯನ್ನ ಇಟ್ಟುಕೊಂಡು ಅಮೇರಿಕದ ಶಿಕಾಗೋ ನಗರದಲ್ಲಿ ಮೇ 1, 1886 ರಂದು ಕಾರ್ಮಿಕರು ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ನಡೆಸಿದ್ದರು. ಅದನ್ನು ಹತ್ತಿಕ್ಕುವುದಕ್ಕಾಗಿ ಪೊಲೀಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಅದರ ಫಲವಾಗಿ 30 ಕಾರ್ಮಿಕರು ಸಾವಿಗೆ ಈಡಾದರು. ನಂತರ 12 ಜನರು ಗಲ್ಲು ಶಿಕ್ಷೆಗೆ ಗುರಿಯಾದರು . 1916 ರಲ್ಲಿ ಅಮೇರಿಕಾ ಸರ್ಕಾರ 8 ಗಂಟೆಗಳ ಕೆಲಸದ ಸಮಯವನ್ನು ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಆಂದೋಲನದ ನೆನಪಿಗಾಗಿ ಹಾಗೂ ಮೃತ ಕಾರ್ಮಿಕರ ಗೌರವಾರ್ಥ ಅನೇಕ ದೇಶಗಳಲ್ಲಿ ಈ ದಿನವನ್ನು ಕಾರ್ಮಿಕ ದಿನವಾಗಿ ಆಚರಿಸಲಾಗುತ್ತದೆ ಹಾಗೂ ಅದನ್ನು ರಜಾ ದಿನವಾಗಿ ಘೋಷಿಸಲಾಗಿದೆ. ಭಾರತದಲ್ಲಿ ಮೊಟ್ಟ ಮೊದಲು ಕಾರ್ಮಿಕ ದಿನಾಚರಣೆ ನಡೆದಿದ್ದು ಮದ್ರಾಸ್ ನಲ್ಲಿ. 1927 ರಲ್ಲಿ ಲೇಬರ್ ಕಿಸಾನ್ ಪಾರ್ಟಿ ಇದನ್ನು ಆರಂಭಿಸಿತ್ತು.
ವಿ. ಐ. ಲೆನಿನ್ ಅವರು ಮೇ ದಿನಾಚರಣೆಯನ್ನು ಕುರಿತು ಹೇಳಿದ ಮಾತುಗಳು ಅತ್ಯಂತ ಅರ್ಥಪೂರ್ಣವಾಗಿವೆ  
  “ಕಾರ್ಮಿಕರು ತಮ್ಮ ದಿನನಿತ್ಯದ ಸಮಸ್ಯೆಗಳನ್ನು ಕುರಿತು ಚಿಂತಿಸಲು ಹಾಗೂ ಬೇಡಿಕೆಗಳನ್ನು ರೂಪಿಸಿ ಹೋರಾಡಲು ವರ್ಷವೆಲ್ಲಾ ತೆರವಾಗಿರುತ್ತದೆ. ಆದರೆ, ವಿಶ್ವದಲ್ಲಿ ಬಂಡವಾಳಶಾಹಿಯು ನಡೆಸುತ್ತಿರುವ ಶೋಷಣೆ ಮತ್ತು ದಬ್ಬಾಳಿಕೆಗಳನ್ನು ಅಂತ್ಯಗೊಳಿಸಿ, ಶೋಷಣಾರಹಿತ ಸರಿಸಾಮಾನತೆಯ, ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ನಡೆಸಬೇಕಾದ ಹೋರಾಟಗಳ ಬಗ್ಗೆ ಹಾಗೂ ಮಾಡಬೇಕಾದ ಯೋಜನೆಗಳ ಬಗ್ಗೆ ಚಿಂತನೆ ಮಾಡಲು ಹಾಗೂ ನಿರ್ಣಯಗಳನ್ನು ಕೈಗೊಳ್ಳಲು ‘ಮೇ ದಿನ’ ವನ್ನು ಮೀಸಲಾಗಿಡಬೇಕು”
     ಉತ್ತಮ ಕೆಲಸದ ವಾತಾವರಣಕ್ಕಾಗಿ ಕೆಲಸಗಾರರ ಬೇಡಿಕೆ,ಸಂಘಟನೆಗೆ ಹಕ್ಕುಗಳು  ಕಾರ್ಮಿಕ ಕಾನೂನು ಹುಟ್ಟಲು ಕಾರಣವಾದವು.   ಕಾರ್ಮಿಕ ಕಾನೂನಿನ ಅಡಿಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ ಆದರೆ ಆ ಸೌಲಭ್ಯಗಳ ಅರಿವನ್ನು ಕಾರ್ಮಿಕರಿಗೆ ತಲುಪಿಸುವ ಅವಶ್ಯಕತೆ ಇದೆ. ಕಾರ್ಮಿಕ ದಿನಾಚರಣೆ ಬರೀ ಸಭೆ ಸಮಾರಂಭಗಳಿಗೆ, ಮೆರವಣಿಗೆಗಳಿಗೆ ಮಾತ್ರ ಸೀಮಿತವಾಗದೆ ಕಾರ್ಮಿಕರಿಗೆ ತಮ್ಮ ಹಕ್ಕುಗಳ ಹಾಗೂ ಸೌಲಭ್ಯಗಳ ಅರಿವನ್ನ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವ ಅವಶ್ಯಕತೆ ಇದೆ. ಈ ರೀತಿಯ ಅರಿವು ಮೂಡಿದಾಗ ಮಾತ್ರ ಎಲ್ಲಾ ಸೌಲಭ್ಯಗಳು ಅವರಿಗೆ ತಲುಪಲು ಸಾಧ್ಯ ಹಾಗೂ ಕಾರ್ಮಿಕ ದಿನಾಚರಣೆಗೆ ಸಾರ್ಥಕತೆಯನ್ನು ನೀಡಲು ಸಾಧ್ಯ.
ಎಲ್ಲ ಕಾರ್ಮಿಕ ಬಂಧುಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು


ಪ್ರೊ ರಾಜನಂದಾ ಘಾರ್ಗಿ

Leave a Reply

Back To Top