ಡಾ ಡೋ.ನಾ.ವೆಂಕಟೇಶ ಕವಿತೆ-ಅತಿಥಿ

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಅತಿಥಿ

ಬಾಲ್ಯ ಚೆನ್ನಿತ್ತು
ಅಜ್ಜನ ತಟ್ಟೆಯೂಟ ಅವ
ತೋರಿದ ದೇವರ ಆಟ
ಬೆಳೆದಂತೆ ಅಕ್ಕ ಅಣ್ಣ ಜೊತೆ
ತಮ್ಮ ತಂಗಿಯರ ಸವಾರಿ
ನನ್ನ ಬೆನ್ನೇರಿ
ಎಲ್ಲರ ಮಾತು ಹೊತ್ತು
ಶಿರಸಾ ವಹಿಸಿ
ಧನ್ಯನಾದೆನು

ಅಜ್ಜ
ಹೇಳಿದ ವಿದ್ಯೆ
ಅಪ್ಪ ಹೇಳಿದ, ಅಮ್ಮ ಬಯಸಿದ ವಿದ್ಯೆ ಕಲಿತೆ ಆಗಿ
ವಿದ್ಯಾಧರ

ಬಾನೆತ್ತರಕ್ಕೇರುವ ಮನಸ್ಸು
ಅವರವರ ಕೈ ಚಾಚಿದಾಗ ಅವರವರ ಅವಕಾಶಕ್ಕೆ
ನಿಂತು
ಪ್ರಿಯ ಬಂಧುಗಳ
ಕಬಂಧ ಬಾಹುಗಳ ಬಂದಿ

ಜುಗಲ್ ಬಂದಿ ಹಾಡಲು
ನೀ ಬಂದಿ. ನನ್ನೆತ್ತರಕ್ಕೂ ನಿಂತಿ!
ನಾ ಹಾಡ ಹೊರಟರೆ ನೀ ಶೃತಿ

ಕಡೆಯ ಪಥದಲ್ಲಿದ್ದೇನೆ ಈಗ ಹೇಳುವವಳಿದ್ದಾಳೆ ಇವಳು
ಇಲ್ಲಿ ಬನ್ನಿ ಇದು ಒಳ್ಳೆಯದೆ ತಿನ್ನಿ
ಹೀಗೇ ಬರೆಯಿರಿ
ಇಲ್ಲಿಗೇ ಹೋಗಿರಿ
ಇದು ನಿಮ್ಮಿಂದ ಆಗಲ್ಲ
ನಾನಿಲ್ಲವೇ ಈ ಭಾರ ಹೊರಲು
ಚಿಂತೆ ಬಿಡಿ
ನಾನಲ್ಲವೇ ನಿಮ್ಮರ್ಧ

ಅವನು ಸರಿಯಿಲ್ಲ
ಇವನ ಮೇಳ ನಿಮಗಲ್ಲ
ಆ ಹೊತ್ತು ಈಗಲ್ಲ

ಕೇಳಿ ಕೇಳಿ
ನಾನು ನಾನೋ ಅಥವಾ ಇನ್ಯಾರೋ
ಇಲ್ಲಿಂದಲೇ ಆರ್ಭಟಿಸಿದವನೋ
ಗತನೋ ಪ್ರಸ್ತುತನೋ

ಹೇಳುತ್ತ ಹೇಳುತ್ತ
ಜೀವನವಿಡೀ ಬೋಧಿಸುತ್ತ
ಕಡೆಯ ದಿನಗಳಲ್ಲಿ ಉಳಿಸಿದ್ದು
ಬರೆ ಬರೇ ಪ್ರಶ್ನೆಗಳು
ಜೀವನವಿಡೀ ಪ್ರಶ್ನಾರ್ಥಕಗಳು

ಬದುಕಿದ್ದು ಹೇಗೆ
ಬರಿ ಅತಿಥಿಯಾಗೇ ?


ಡಾ ಡೋ.ನಾ.ವೆಂಕಟೇಶ

Leave a Reply

Back To Top