ಮೇ-ದಿನದ ವಿಶೇಷ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಹಾದಿಯಲ್ಲಿ ಹೆಣವಾದವರು..

ಸುಗ್ಗಿಯಲ್ಲಿ ಹಿಗ್ಗಿಕೊಂಡು
ಹುಗ್ಗಿ ತುಪ್ಪ ಸಿಕ್ಕಿತೆಂದುಕೊಂಡು
ಹಿರಿ – ಹಿರಿ ಹಿಗ್ಗಿ, ಹೆಜ್ಜೆ ಹಾಕಿದೆವು.

ಅವರ ಹೊಲದಲ್ಲಿ
ಹದವಾಗಿ ದುಡಿದು
ಎತ್ತಿನಂತೆ ಹೆಗಲು ಕೊಟ್ಟು
ರಂಟೆ – ಕುಂಟೆಯನೊಡೆದು
ಗಂಜಿಗಾಗಿ ಬೆವರು ಬಸಿದರೂ
ತುತ್ತನ್ನ ಸಿಗದೆ ಅತ್ತವರು !!

ಉರಿವ ಬಿಸಿಲಿಗೆ
ಎಲಬು ಹಂದರ ಚಕ್ಕಳವಾಗಿ
ಹಸಿದೊಡಲ ಉರಿಯಲಿ ಬೆಂದವರು
ಹಮಾಲಿ…ಜಾಡಿಮಾಲಿ…
ಕಮ್ಮಾರಿಕೆ ಕುಂಬಾರಿಕೆಯ
ಕುಲುಮೆಯಲ್ಲಿ ಮತ್ತೆ ಮತ್ತೆ ಬೆಂದವರು !!
ಕೂಲಿಗಾಗಿ ತರಗಲೆಯಂತೆ ಅಲೆದವರು ನಾವು !!

ಅತ್ತ ಕಂದಮ್ಮಗಳಿಗೆ
ಸತ್ತ ಧ್ವನಿಯಲ್ಲಿ
ಜೋಗುಳವಾಡಿ
ಮರದ ನೆರಳಿಗೆ ಮಕ್ಕಳ
ಮೈಹಾಸಿದವರು
ಬೆವರು ಕಣ್ಣೀರು ರಕ್ತವನ್ನೇ
ಬಸಿದು ಕುಡಿಸಿದವರು
ಗಂಡನೆದುರೇ ಮಾನಶೀಲ
ಕಳೆದುಕೊಂಡವರು
ಎತ್ತರೆತ್ತರದ ಅಂತಸ್ತು
ಕುಸಿದು ಬಿದ್ದಾಗ
ಕೈಕಾಲು ಕಳೆದುಕೊಂಡವರು.

ಮಟ – ಮಟ ಮಧ್ಯಾಹ್ನದ
ಹಗಲಿನಲ್ಲಿ
ಅವ್ವ ಅಪ್ಪನಿಲ್ಲದ ಹೊತ್ತಿನಲ್ಲಿ
ಬಿದ್ದ ಮಹಡಿಯ
ಅವಶೇಷಗಳಡಿ
ಹಾದಿಯಲ್ಲಿ ಹೆಣವಾದವರು ನಾವು…!!


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

Leave a Reply

Back To Top