ಬಸವಣ್ಣನವರ ಬದುಕು ನಮಗೆ ಬೆಳಕು-ಜಯಶ್ರೀ .ಜೆ. ಅಬ್ಬಿಗೇರಿ

ವಿಶೇಷ ಲೇಖನ

ಜಯಶ್ರೀ .ಜೆ. ಅಬ್ಬಿಗೇರಿ

ಬಸವಣ್ಣನವರ ಬದುಕು ನಮಗೆ ಬೆಳಕು

ಬದುಕಿನ ರೀತಿಯನ್ನು ಸರಳಗೊಳಿಸಿದರೆ ಸಮಸ್ಯೆಗಳು ಅರ್ಧದಷ್ಟು ಕಡಿಮೆಯಾಗುತ್ತವೆ. ಸರಳತೆಯನ್ನು ಅಳವಡಿಸಿಕೊಂಡರೆ ಬದುಕಿನ
ಸೊಬಗು ಹೆಚ್ಚುತ್ತದೆ ಎನ್ನುವುದಕ್ಕೆ ಸಾಕ್ಷಿಯೆಂದರೆ ೧೨ನೇ ಶತಮಾನದಲ್ಲಿ ಬಾಳಿ ಬದುಕಿದ ಜಗಜ್ಯೋತಿ ಬಸವಣ್ಣನವರು.
ಶತಶತಮಾನಗಳಿಂದ ಶೋಷಿತರಾಗಿದ್ದವರಿಗೆ, ಸಮಾಜದಲ್ಲಿ ತುಳಿತಕ್ಕೊಳಾಗದವರಿಗೆ ಮೌಢ್ಯಕ್ಕೆ ಒಳಗಾದವರ ಶಕ್ತಿಯಾಗಿ, ನೊಂದವರ
ಧ್ವನಿಯಾಗಿ ಸಿಕ್ಕರು. ಋಷಿಮುನಿಗಳು ‘ವೇದೋ ಧರ್ಮ ಮೂಲಂ’ ಎಂದು ಹೇಳಿದ್ದು ವೇದ ಉಪನಿಷತ್ತು ಆಗಮಗಳು ಮಾನ್ಯವಾದ
ಸಾರ್ವಕಾಲಿಕ ಸತ್ಯಗಳಾದರೂ ಜನಸಾಮಾನ್ಯರಿಗೆ ಅವು ಗಗನದ ಕುಸುಮಗಳೇ ಸರಿ. ಈ ಸಂಗತಿಯನ್ನು ಅರಿತ ಬಸವಣ್ಣನವರು ಬದುಕಿಗೆ
ಹತ್ತಿರವಾಗುವ ಸರಳ ವಚನ ಸಾಹಿತ್ಯದ ಮೂಲಕ ಜನಜೀವನವನ್ನು ಸುಧಾರಿಸಲು ಶ್ರಮಿಸಿದರು. ‘ಸರಳ ವಚನ ಸಾಹಿತ್ಯ ಓದುವ ಮೂಲಕ
ಮಾನವ ಜೀವನ ಧರ್ಮವನ್ನು ಪಾಲಿಸಿ. ಅಮೂಲ್ಯವಾದ ಜೀವನದ ಸಾರಂಶ ತಿಳಿದುಕೊಳ್ಳಿ.’ ಎಂದು ಹೇಳಿದ್ದಾರೆ.
ಆದ್ಯರ ವಚನ ಪರುಷ ಕಂಡಯ್ಯ
ಸದಾಶಿವನೆಬ ಲಿಂಗವ ನಂಬುದು ,
ನಂಬಿದೊಡನೆ ನೀ ವಿಜಯ ಕಂಡಯ್ಯ
ಅಧರಕ್ಕೆ ಕಹಿ ಉದರಕ್ಕೆ ಸಿಹಿ.

ಕೂಡಲ ಸಂಗನ ಶರಣರ ವಚನ ಬೇವ ಸವಿದಂತೆ ಎಂದು ವಚನಗಳ ಮಹತ್ವವನ್ನು ತಿಳಿಸಿದ್ದಾರೆ.
ಸಾಹಿತ್ಯವೆಂಬುದು ಸಿರಿವಂತರಿಗೆ ಮಾತ್ರ ಎನ್ನುವ ಕಾಲದಲ್ಲಿ ಕಬ್ಬಿಣದ ಕಡಲೆಯಂತಹ ಸಂಸ್ಕೃತದ ಸಾಹಿತ್ಯದ ಕಾಲಘಟ್ಟದಲ್ಲಿ ವಚನ
ಸಾಹಿತ್ಯದ ಮೂಲಕ ಕ್ರಾಂತಿಯನ್ನೇ ತಂದರು. ಜನರ ಆಡುಭಾಷೆಯಲ್ಲಿ ತಮ್ಮ ಪ್ರಖರ ವಿಚಾರಗಳನ್ನು ಅಭಿವ್ಯಕ್ತಪಡಿಸಿದರು.
ಸಮಾಜದಲ್ಲಿದ್ದ ಕುರುಡು ನಂಬಿಕೆಯ ವಿರುದ್ಧ ವೈಚಾರಿಕ ಕಹಳೆ ಊದಿದರು.
ಮಹಿಳೆಯರಿಗೆ ಸಮಾನ ಗೌರವ
ಹೆಣ್ಣು ಕೇವಲ ಭೋಗದ ವಸ್ತುವಲ್ಲ. ಪುರುಷರು ಸರಿಯಲ್ಲದ್ದನ್ನು ಹೇಳಿದರೆ ಕೇಳಬೇಕಂತಿಲ್ಲ. ಪುರುಷರು ಹೇಳಿದಂತೆ ಮಹಿಳೆ
ಕೇಳಿಕೊಂಡಿರಬೇಕತಿಲ್ಲ ಎಂಬ ನಿಲುವಿನ ಅಣ್ಣ ಬಸವಣ್ಣ ಹೆಣ್ಣು ಕೇವಲ ಭೋಗದ ವಸ್ತು ಎಂದು ನಂಬಿಕೊಂಡಿದ್ದ ಕಾಲದಲ್ಲಿ
ಸಮಾಜದ ಕಣ್ಣು ತೆರೆಸುವಲ್ಲಿ ಯಶಸ್ವಿಯಾದರು. ಬಾಲ್ಯದಲ್ಲಿ ತನಗೆ ಉಪನಯನ ಮಾಡುವಾಗ ಅಕ್ಕ ನಾಗಮ್ಮನಿಗೂ ಜನಿವಾರ
ನೀಡುವಂತೆ ಕೇಳಿಕೊಂಡಿದ್ದರು. ಪಾಲಕರು ಇದಕ್ಕೊಪ್ಪದೇ ಇದ್ದಾಗ ಮನೆಬಿಟ್ಟು ಹೊರನಡೆದರು. ಈ ಘಟನೆ ಬಸವಣ್ಣನವರು ತೀರ
ಚಿಕ್ಕವರಿದ್ದಾಗಲೇ ಲಿಂಗ ಸಮಾನತೆಗಾಗಿ ದನಿ ಎತ್ತಿದವರು ಎಂಬುದನ್ನು ಎತ್ತಿ ತೋರಿಸುತ್ತದೆ. ಸಮಾಜದಲ್ಲಿ ಸ್ತಿಗೆ ಸಮಾನ ಗೌರವ
ದೊರೆಯಬೇಕೆಂಬ ಉದ್ದೇಶದಿಂದ ಅವರು ಶರಣೆಯರು ಅನುಭವ ಮಂಟಪದಲ್ಲಿ ಪಾಲ್ಗೊಂಡು ಚರ್ಚಿಸಲು ತಮ್ಮ ಅಭಿಪ್ರಾಯಗಳನ್ನು
ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸ್ವಾತಂತ್ರ್ಯ ದೊರಕಿಸಿದ್ದರು. ಅನೇಕ ಕಟ್ಟುಪಾಡುಗಳಿದ್ದ ಕಾಲಘಟ್ಟದಲ್ಲೂ
ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ, ಗೊಗ್ಗೆವ್ವ, ಬಾಳವ್ವ, ನೀಲವ್ವ ಆದಿಯಾಗಿ ಅನೇಕ ಮಹಿಳೆಯರು ವಚನಕಾರ್ತಿಯರಾದರು.
ಸಾವಿರಾರು ವಚನಗಳನ್ನು ರಚಿಸುವ ಮೂಲಕ ಬುದ್ಧಿಮತ್ತೆ ಮೆರೆಯುವುದಷ್ಟೇ ಅಲ್ಲ ಪುರಷರಿಗೆ ಸರಿಸಮಾನವಾಗಿ ನಿರ್ವಹಿಸಿದರು.
‘ಹೆಣ್ಣು ಮಾಯೆಯಲ್ಲ, ಮನದ ಮುಂದಿರುವ ಆಸೆಯೇ ಮಾಯೆ…….’ ಎಂಬಂತಹ ಹಲವಾರು ವಚನಗಳ ಮೂಲಕ ಸ್ತ್ರೀಪರ ನಿಲುವನ್ನು
ಲೋಕಕ್ಕೆ ತಿಳಿಸಿದ್ದಾರೆ. ಮುಂದುವರೆದು ಆಸೆಯೆಂಬುದು ಅರಸಂಗಲ್ಲದೇ ಶರಣಂಗಲ್ಲೆಂಬ ಮಾತಿಗೆ ಬಸವಣ್ಣನವರು ಬದ್ಧರಾಗಿದ್ದರು.

ಕಾಯಕ ದಾಸೋಹ
ಕಾಯಕವೆಂದರೆ ಕೇವಲ ಕೆಲಸವಲ್ಲ. ಕೆಲಸದಲ್ಲಿ ಮೇಲು ಕೀಳೆಂಬ ಭೇದ ಮಾಡದೆ ಶ್ರದ್ಧಾ ಭಕ್ತಿಯಿಂದ ಕಾಯಕ ನಿರ್ವಹಿಸಬೇಕು.
ದೇಹವನ್ನು ದೇವಾಲಯವನ್ನಾಗಿ ಮಾಡಿ ಮೋಕ್ಷ ಹೊಂದುವುದು ಕಾಯಕ. ಅಲ್ಲೆಲ್ಲಿಯೋ ಇದೆ ಎನ್ನುವ ಸ್ವರ್ಗವನ್ನು ‘ಕಾಯಕವೇ
ಕೈಲಾಸ.’ ಎನ್ನುವ ಎರಡೇ ಎರಡು ಪದಗಳಲ್ಲಿ ಬಣ್ಣಿಸಿದ್ದಾರೆ. ವಿಶ್ವಗುರು ಬಸವಣ್ಣ ಕ್ಷೌರಿಕ ಕೆಲಸದಲ್ಲಿದ್ದ ಹಡಪದ ಅಪ್ಪಣ್ಣ ಬಟ್ಟೆ
ತೊಳೆಯುವ ಕಾಯಕದಲ್ಲಿದ್ದ ಮಡಿವಾಳ ಮಾಚಿದೇವ, ತುಳಿತಕ್ಕೆ ಒಳಗಾದ ಸರ್ವರಿಗೂ ಸಮಾನ ಅವಕಾಶ ನೀಡಿದರು. ಕಾಯಕ ತತ್ವದಡಿ
ಎಲ್ಲರನ್ನೂ ಒಗ್ಗೂಡಿಸಿದರು. ಆದರೆ ಇಂದು ಕಾಯಕದ ಆಧಾರದಿಂದ ಹುಟ್ಟಿಕೊಂಡ ಜಾತಿಗಳ ಪ್ರಭಾವ ಸಮಾಜದ ಸ್ವಾಸ್ಥö್ಯ
ಕೆಡಿಸುತ್ತಿವೆ. ಮತ್ತು ಸಾಮಾಜಿಕ ಸಾಮರಸ್ಯವನ್ನು ಹದಗೆಡಿಸುತ್ತಿವೆ. ಬಸವಣ್ಣನವರು ವಚನಗಳ ಮೂಲಕ ನೀಡಿದ ಸಮಾಜ ಸುಧಾರಣಾ
ಸಂದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಂತರಂಗ ಶುದ್ಧಿ ಪ್ರಕ್ರಿಯೆಗೆ ಮುಂದಾಗಬೇಕಿದೆ. ಅವರ ವಿಚಾರಧಾರೆ ಕಾಯಕ
ದಾಸೋಹದ ಚಿಂತನೆ ಸಂದೇಶಗಳನ್ನು ಭಾಷಣಗಳಲ್ಲಿ ಮಾತಿನಲ್ಲಿ ನೆನೆಯುತ್ತೇವೆ. ಆದರೆ ಅವುಗಳನ್ನು ಜೀವನದಲ್ಲಿ
ಅಳವಡಿಸಿಕೊಳ್ಳುವಲ್ಲಿ ವಿಮುಖರಾಗಿದ್ದೇವೆ. ನಡೆ ನುಡಿ ಎರಡೂ ಒಂದೇ ಆಗಿದ್ದ ಬಸವಣ್ಣ ಮಹಾನ ಸಾಧಕ. ಅವರ ವಿಚಾರಗಳು
ಕೇವಲ ೧೨ನೇ ಶತಮಾನಕ್ಕೆ ಸೀಮಿತವಲ್ಲ. ಅವು ಅನಾದಿ ಮತ್ತು ಅನಂತ. ಕಾಯಕದಲ್ಲಿ ಕೈಲಾಸವನ್ನು ಕಾಣುವ ಆದರ್ಶ ಇಂದಿಗೂ
ಪ್ರಸ್ತುತ. ಎಂದೆಂದಿಗೂ ಅಜರಾಮರ.
ವಚನ ಸಂವಿಧಾನ
ಬಸವಣ್ಣನೆಂದರೆ ಒಂದು ಸಂವಿಧಾನ ಜಗತ್ತಿಗೆ ಮೊಟ್ಟಮೊದಲ ಬಾರಿಗೆ ಸಂಸತ್ತಿನ ಪರಿಕಲ್ಪನೆ ಕೊಟ್ಟವರು. ಪ್ರಪ್ರಥಮ ಬಾರಿಗೆ
ಸಮಾಜದಲ್ಲಿ ಪ್ರಜಾಪ್ರಭುತ್ವದ ಬೀಜ ಬಿತ್ತಿದವರು. ಬಸವಾದಿ ಶರಣರ ಅನುಭವ ಮಂಟಪ ಸೃಷ್ಟಿ ಮಾಡಿದವರು.ಅನುಭವ
ಮಂಟಪದಲ್ಲಿದ್ದ ೭೭೦ ಅಮರಗಣಂಗಳಲ್ಲಿ ಆಚಾರ ವಿಚಾರದ ಶುದ್ಧಿ ಇದ್ದ ಪರಿಣಾಮವಾಗಿ ಸಾಮಾಜಿಕ ಕೊಡುಗೆ ನೀಡಲು
ಸಾಧ್ಯವಾಯಿತು.ಅವರು ರÀಚಿಸಿದ ಅನುಭವ ಮಂಟಪವು ಸತ್ಯ, ನಿಷ್ಟೆ ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಕೂಡಿತ್ತು. ಅನುಭವ
ಮಂಟಪಕ್ಕೆ ಅಲ್ಲಮಪ್ರಭುಗಳನ್ನು ಅಧ್ಯಕ್ಷರನ್ನಾಗಿ ನೇಮಿಸಿದರು. ಆ ಮೂಲಕ ಜ್ಞಾನಕ್ಕೆ ಬೆಲೆ ನೀಡಲಾಗುತ್ತದೆ ಹೊರತು ಜಾತಿಗಲ್ಲ
ಎಂಬ ಸ್ಪಷ್ಟ ಸಂದೇಶ ಸಾರಿದರು. ಮಾನವೀಯ ಮೌಲ್ಯಗಳನ್ನೇ ಪ್ರಧಾನವಾಗಿ ಇಟ್ಟುಕೊಂಡಿದ್ದ ಎಲ್ಲ ಶರಣ ಶರಣೆಯರಿಗೂ ವಚನ
ಸಂವಿಧಾನದಡಿಯಲ್ಲಿ ಸಮಾನ ಅವಕಾಶವನ್ನು ಕಲ್ಪಿಸಿದ್ದಲ್ಲದೇ ಸಮಾನ ಗೌರವವನ್ನು ನೀಡುತ್ತಿದ್ದರು. ‘ಅಪ್ಪನು ನಮ್ಮ ಮಾದರ
ಚೆನ್ನಯ್ಯ, ಬೊಪ್ಪನು ನಮ್ಮ ಡೋಹರ ಕಕ್ಕಯ್ಯ, ಚಿಕ್ಕಯ್ಯ ನೆಮ್ಮಯ್ಯ ಕಾಣಯ್ಯ,ಅಣ್ಣನು ನಮ್ಮ ಕಿನ್ನರ ಬೊಮ್ಮಯ್ಯ’ ಎಂಬ
ನಿಲುವಿನ ಬಸವಣ್ಣನವರಿಗೆ ಜಾತಿ ಆಧಾರಿತ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದು. ಮುಖ್ಯವಾಗಿತ್ತು. ಜಾತಿ, ಜನಾಂಗ, ವರ್ಣ,
ವರ್ಗ ಮರೆತು ಸರ್ವೋದಯದ ಪರಿಕಲ್ಪನೆ ಅನುಷ್ಟಾನಕ್ಕೆ ತಂದಿದ್ದರು. ಯಾವುದೇ ವಿಚಾರ ಅಥವಾ ವಚನ ಮಂಡನೆಗೆ ಮೊದಲು
ಪರಿಶೀಲಿಸುವ ಜವಾಬ್ದಾರಿಯನ್ನು ಚನ್ನಬಸವಣ್ಣನವರಿಗೆ ಹೊರಿಸಲಾಗಿತ್ತು. ತನ್ನಿಮಿತ್ತ ಶ್ರೇಷ್ಠ ವಿಚಾರಗಳ ಕುರಿತು ಸೈದ್ಧಾಂತಿಕ
ಮತ್ತು ತಳ ಸಮುದಾಯ ಪರವಾದ ಆಲೋಚನೆಗಳು ಹೇರಳವಾಗಿದ್ದವು.ಚರ್ಚೆ ಮಾಡಲು, ಉತ್ತರ ಪಡೆಯಲು ಸರ್ವರಿಗೂ
ಸ್ವಾತಂತ್ರ್ಯವಿತ್ತು.
ಮಹಾ ಮಾನವತಾವಾದಿ
ಬ್ರಹ್ಮ ಪದವಿಯನೊಲ್ಲೆ
ವಿಷ್ಣು ಪದವಿಯನೊಲ್ಲೆ
ರುದ್ರ ಪದವಿನೊಲ್ಲೆ
ಸದಾ ಕೂಡಲಸಂಗಮದೇವನ
ಸದ್ಭಕ್ತರ ಪಾದದಲ್ಲಿರುವ ಅವಕಾಶ ಕಲ್ಪಿಸು

ಎಂದು ಬಸವಣ್ಣನವರು ಬೇಡಿಕೊಳ್ಳುತ್ತಾರೆ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ತಮ್ಮ ಇಡೀ ಜೀವನವನ್ನು ಪ್ರಜಾಪ್ರಭುತ್ವ
ವ್ಯವಸ್ಥೆಗೆ ಮೀಸಲಿಟ್ಟಿದ್ದರು. ವಿಶ್ವದಲ್ಲೇ ಪ್ರಥಮ ಸಂಸತ್ತು ಎಂಬ ಹೆಗ್ಗಳಿಕೆಗೆ ಪಾತ್ರವಾದ ಅನುಭವ ಮಂಟಪವನ್ನು ರಚಿಸುವ
ಮೂಲಕ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಲು ಹಗಲಿರುಳೆನ್ನದೇ ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಅಷ್ಟೇ ಅಲ್ಲ
ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಮುಕ್ತ ವಾತಾವರಣ ನಿರ್ಮಿಸಿದ್ದರು. ಅನುಭವ ಮಂಟಪದಲ್ಲಿ ಮೇಲು-ಕೀಳೆಂಬ

ಭೇದಭಾವವಿರಲಿಲ್ಲ. ಯಾವುದೇ ತಾರತಮ್ಯವಿರಲಿಲ್ಲ. ಎಲ್ಲರೂ ಒಂದೇ ಕುಟುಂಬದವರಂತೆ ಕೂಡಿ ಬದುಕು ಸಾಗಿಸುತ್ತಿದ್ದರು. ಆ
ಜೀವನ ರೀತಿ ಅನುಕರಣೀಯವಾಗಿತ್ತು. ಈಗಿನ ಪ್ರಜಾಪ್ರಭುತ್ವದ ರೀತಿಯ ವ್ಯವಸ್ಥೆಯನ್ನು ಆಗಿನ ಕಾಲದಲ್ಲೇ ಜನರಿಂದ ಜನರಿಗಾಗಿ
ಜನರಿಗೋಸ್ಕರ ಒಂದು ಮಾದರಿ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರಚಿಸಿ ಜಾರಿಗೊಳಿಸಿ ನಾಡಿಗೆ ತೋರಿಸಿದವರು ಮಹಾ ಮಾನವತಾದಿ
ಎಂದೇ ಹೆಸರಾಗಿರುವ ಬಸವೇಶ್ವರರು. ಯಾವತ್ತೂ ಅಧಿಕಾರದ ಮೋಹಕ್ಕೆ ಸಿಲುಕಿಕೊಳ್ಳದೇ ಸರಳ ಸಾತ್ವಿಕ ಜೀವನ ನಡೆಸಿದ್ದರು.
ಎಂಬುದಕ್ಕೆ ಇಂತಹ ಅನೇಕ ಘಟನೆಗಳು ನಮಗೆ ಸಾಕ್ಷಿಯಾಗಿ ಸಿಗುತ್ತವೆ.
‘ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂಬ ಮಾತು ನಮ್ಮಲ್ಲಿ ಅತೀ ಹೆಚ್ಚು ಉಲ್ಲೇಖವಾಗಿರುವ ಹೇಳಿಕೆ ಎಂದು
ಹೇಳಬೇಕು. ವಚನದ ಈ ಸಾಲು ಅವರ ಸರಳ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ರಾಜ ಬೀದಿಯಲ್ಲಿ ಎದುರಾದ ಬಸವಣ್ಣನವರಿಗೆ ಹರಳಯ್ಯ
‘ಶರಣು’ ಎಂದು ಕೈ ಮುಗಿದರೆ, ಬಸವಣ್ಣನವರು ‘ಶರಣು ಶರಣಾರ್ಥಿ’ಎಂದು ತಲೆಬಾಗಿ ನಮಸ್ಕರಿಸಿದರು. ನನಗೆ ಮತ್ತು ನನ್ನ
ಕುಲಬಾಂಧವರಿಗೆ ಸವರ್ಣಿಯರು ನಮಸ್ಕಾರ ಮಾಡುವುದಿರಲಿ ನಮ್ಮ ನೆರಳು ತಾಕಿಸಿಕೊಳ್ಳಲು ಕೂಡ ಹಿಂದೇಟು ಹಾಕುತ್ತಾರೆ.
ಅಂಥದರಲ್ಲಿ ಪ್ರಧಾನಿಯಾದ ಬಸವಣ್ಣ, ಕಲ್ಯಾಣ ರಾಜ್ಯದ ಬಿಜ್ಜಳ ರಾಜನ ಅಳಿಯನಾದ ಬಸವಣ್ಣ ನನಗೆ ಎರಡು ಸಲ ಶರಣು
ಅನ್ನುವುದೇ? ಈ ಹೊರೆಯನ್ನು ಇಳಿಸಬೇಕೆಂದು ಹರಳಯ್ಯ ಮತ್ತು ಕಲ್ಯಾಣಮ್ಮ ದಂಪತಿ, ತಮ್ಮ ತೊಡೆಯ ಚರ್ಮ ಸೇರಿಸಿ ಪಾದರಕ್ಷೆ
ತಯಾರಿಸಿ ಬಸವಣ್ಣನವರ ಮನೆಗೆ ಒಯ್ದು ಕೊಡುತ್ತಾರೆ. ಅವುಗಳನ್ನು ಮೆಟ್ಟಿಕೊಳ್ಳದ ಬಸವಣ್ಣ ಇವು ಸಾಕ್ಷಾತ್ ದೇವರ
ಪಾದರಕ್ಷೆಗಳೆಂದು ತಲೆಯ ಮೇಲೆ ಹೊತ್ತು ಮೆರೆಯುತ್ತಾನೆ.
ಬದುಕು-ಬೆಳಕು
ಅಜ್ಞಾನದ ಮನೆಯಲ್ಲಿ ವಾಸಿಸುತ್ತಿರುವ ಬಹುತೇಕರ ತಿಳುವಳಿಕೆಯಲ್ಲಿ ಬದುಕು ಕೇವಲ ಹಣ ಗಳಿಸುವುದರತ್ತ ಆಸ್ತಿ ಗುಡ್ಡೆ
ಹಾಕಕುವುದರತ್ತ್ತ ಅಂತಸ್ತು ಹೆಚ್ಚಿಸುವುದರತ್ತ ಅಧಿಕಾರ ಅಮಲಿನಲ್ಲಿ ಇರುವುದರತ್ತ ಸುಳ್ಳು ಸುಖದ ಸುತ್ತ ತಿರುಗುತ್ತದೆ. ಭ್ರಮಾ
ಲೋಕದಲ್ಲಿರುತ್ತವೆ. ವಾಸ್ತವತೆಯ ಸ್ಪಷ್ಟ ಅರಿವಿದ್ದವರು.ಹತ್ತು ಹಲವು ಕ್ಷೇತ್ರಗಳಲ್ಲಿ ಅನುಭವ ಹೊಂದಿದ್ದ ಮಹಾಪುರುಷ ಬಸವಣ್ಣ
ಒಬ್ಬ ದೊಡ್ಡ ಅನುಭಾವಿ. ಮಾನವತೆಯ ಹರಿಕಾರ ಮಹಾನುಭಾವಿ ಬಸವೇಶ್ವರ ಸರ್ವರನ್ನು ಸಮಾನವಾಗಿ ಕಾಣುವ, ಸಮ ಸಮಾಜ
ಕಟ್ಟುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ತತ್ವಾದಶರ್ಶಗಳು ಸಾರ್ವಕಾಲಿಕವಾಗಿವೆ. ಹೀಗಾಗಿಯೇ ಬಸವಣ್ಣನವರ
ಬದುಕು ನಮಗೆ ಬೆಳಕಾಗಿದೆ. ಅವರ ಆದರ್ಶಗಳನ್ನು ಜೌನದಲ್ಲಿ ಮೈಗೂಡಿಸಿಕೊಂಡರೆ ಆಹಾ! ಈ ಬದುಕು ಎಷ್ಟು ಸೊಗಸು ಎಂಬ ಭಾವ
ಚಿಗುರೊಡೆಯುತ್ತದೆ.


Leave a Reply

Back To Top