ಮಾಲಾ ಚೆಲುವನಹಳ್ಳಿ-ಯಶೋಧರೆಯ ಅಂತರಾಳ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ಯಶೋಧರೆಯ ಅಂತರಾಳ

ಚಿತ್ರಕೃಪೆ-ಗೂಗಲ್

ಸುಂದರ ಸಾಮ್ರಾಜ್ಯದ ರಾಣಿಯಾದರೇನು
ನಾನೂ ಒಬ್ಬ ಸಾಮಾನ್ಯ ಹೆಣ್ಣಲ್ಲವೇ
ವೈಭೋಗದಿ ಮೆರೆದಿಹ ರಾಜ್ಯದ ರಾಜನಾದರೇನು
ನೀನೂ ಒಬ್ಬ ಸಾಮಾನ್ಯ ಗೃಹಸ್ಥನಲ್ಲವೇ

ಜಗವೆಂಬ ಜೀವನ ಯಾತ್ರೆಯಲಿ
ಸಾವು ನೋವುಗಳು ಸಹಜವೇ ತಾನೇ
ಜನರ ಕಷ್ಟ, ನಷ್ಟ ತೊಂದರೆಗಳೇನಿರಲಿ
ಅವರವರ ಕರ್ಮಗಳಿಗವರೇ ಹೊಣೆ ತಾನೇ

ಪ್ರಜೆ, ಪತ್ನಿ, ಕಂದಮ್ಮಗಳ ತೊರೆದಿಲ್ಲಿ
ರಾಜ್ಯ ಭಾರಕೆ ಹೊಣೆಗೇಡಿಯಾದೆ
ಪರಮಸುಖ ವೈಭೋಗದ ಜಿಗುಪ್ಸೆಯಲಿ
ಯಶೋಧರೆಯ ಅಂತರಂಗವ ಅರಿಯದಾದೆ

ಪತ್ನಿಪ್ರೇಮ ಪುತ್ರ ವ್ಯಾಮೋಹ ನಿರ್ಲಕ್ಷ್ಯ
ಹೃದಯದ ಕೂಗು ಕೇಳದ ಕಠಿಣ ನೀ
ನನ್ನುಚ್ವಾಸ ನಿಶ್ವಾಸಗಳಿಗಿದೆ ಅಂತಃಪುರದಿ ಸಾಕ್ಷ್ಯ
ಜ್ಞಾನದ ಕಣಜವಾದರೇನು ಎನ್ನಜಾತಶತ್ರು ನೀ

ಬಾಹ್ಯ ಅಲಂಕಾರ ಕಂಗೊಳಿಸುತಿಹುದು
ವಜ್ರ ವೈಡೂರ್ಯ ಪೀತಾoಬರಗಳಲಿ
ಎದೆಯೊಳಗೆ ಅಗ್ನಿಕುಂಡ ಉರಿಯುತಿಹುದು
ನಿನ್ನಗಲಿಕೆಯ ವಿರಹತಾಪದ ಜ್ವಾಲೆಯಲಿ

ಮರೆವು ಸುಲಭ ವರದಾನ ನಿನಗೆ
ನಿದ್ರಾವಶವಾದ ಧರೆಯಲಿ ಎದ್ದು ನಿಂದೆ
ಅಂಧತ್ವದ ಪೊರೆ ಸರಿಸಿದೆ ಅಜ್ಞಾನಿಗಳಿಗೆ
ಬುದ್ಧನೆoದು ಕೊಂಡಾಡುವ ಜ್ಞಾನದೀವಿಗೆಯಾದೆ.


Leave a Reply

Back To Top