ಪುಸ್ತಕ ಸಂಗಾತಿ
ಪ್ರೊಫೆಸರ್ ಮಲ್ಲಿಕಾರ್ಜುನ್ ಹುಲಗಬಾಳಿಯವರ ಕವನ ಸಂಕಲನ
ಬಾ ಹತ್ತರ್
ಬಾ ಹತ್ತರ
ಕವನ ಸಂಕಲನ
ಕವಿ- ಪ್ರೊಫೆಸರ್ ಮಲ್ಲಿಕಾರ್ಜುನ್ ಹುಲಗಬಾಳಿ. ಬನಹಟ್ಟಿ.
ಶ್ರೀನಿವಾಸ ಪುಸ್ತಕ ಪ್ರಕಾಶನ. ಬೆಂಗಳೂರು.
ಕನ್ನಡ ಸಾಹಿತ್ಯ ಲೋಕದಲ್ಲಿ ಲಲಿತ ಪ್ರಬಂಧ ಗಳ ಮೂಲಕ ವಿನೋದ ಸಾಹಿತಿಯಂದೆ ಗುರುತಿಸಿಕೊಂಡಿರುವ ಪ್ರೊಫೆಸರ್ ಮಲ್ಲಿಕಾರ್ಜುನ ರುದ್ರಪ್ಪ ಹುಲಗಬಾಳಿ ಅವರು ಕವಿ ಎನ್ನುವ ವಿಚಾರ ಬಹಳ ಜನರಿಗೆ ತಿಳಿದಿರಲಿಲ್ಲ ಅವರ ಬಹತ್ತರ್ ಎಂಬ ಕವನ ಸಂಕಲನ ಬಂದಮೇಲೆ ಎಲ್ಲರಿಗೂ ಆಶ್ಚರ್ಯ ಸರ್ ಯಾವಾಗ ಹತ್ತರು ಎಂದು ಪ್ರಶ್ ಪ್ರಶ್ನಿಸಿದರು ಆದರೆ ಅವರ ಅಣ್ಣನ ಮಗಳಾದ ನನಗೆ ನಾನು ಚಿಕ್ಕವಳಿದ್ದಾಗಲೇ ಗೊತ್ತಿತ್ತು ಅವರೊಬ್ಬ ಕವಿ ಎಂದು. ನನ್ನ ಬಾಲ್ಯದಲ್ಲೇ ನಮ್ಮ ಮುಂದೆ ಪ್ರಾಸ ಬದ್ಧ ಪದಗಳನ್ನು ಜೋಡಿಸಿ ಕವನಗಳನ್ನ ರಚಿಸಿ ನಮ್ಮನ್ನು ನಗಿಸುತ್ತಿದ್ದರು. ಸದಾ ನಗುತ್ತಾ ನಗಿಸುತ್ತ ಮಾತುಗಳನ್ನು ಹೇಳುತ್ತಿದ್ದ ಅವರ ಕುರಿತು ಅವರ ಅಜ್ಜಿ ಅಂದರೆ ನಮ್ಮ ಮುತ್ತಜ್ಜಿ ಲಿಂ. ಗೌರಮ್ಮ 'ನಮ್ಮ ಮಲ್ಲಪ್ಪ ಮಾತು ಬರಲಾರದವರಿಗೆ ಮಾತು ಕಲಸತಾನ' ಅಂತ ಹೇಳುತ್ತಿದ್ದರು ಆ ಮಾತನ್ನು ಇಂದಿಗೂ ನನ್ನ ತಾಯಿ ಪದೇ ಪದೇ ನೆನಪಿಸುತ್ತಾರೆ.
'ಬಾ ಹತ್ತರ್' 72ರ ಹರೆಯದಲ್ಲಿ ತಾವು 22 ಹರೆಯದಲ್ಲಿ ಬರೆದ ಕವನ ಚುಟುಕುಗಳನ್ನುಸೇರಿಸಿ ಇಂದಿನ ವರೆಗಿನ ರಚನೆಯಾದ ಕವಿತೆಗಳ ಸಂಗ್ರಹ. 37 ಕವನಗಳು 35 ಚುಟುಕುಗಳನ್ನು ಸೇರಿಸಿ ತಮ್ಮ 72 ಕಾಲಘಟ್ಟದ ಅಂದರೆ ಹುಟ್ಟು ಹಬ್ಬದ ನೆನಪು ಎಂದು ಈ ಕವನ ಸಂಕಲನ ಹೊರತಂದಿದ್ದಾರೆ. ಈ ಕವನ ಸಂಕಲನ ಬಿಡುಗಡೆಗೊಂಡು ನನ್ನ ಕೈ ಸೇರಿ ತಿಂಗಳುಗಳಾದರು ನಾನು ಇದರ ಕುರಿತ ಅವಲೋಕನ ಮಾಡಬೇಕೆಂದಿದ್ದರೂ ಆಗಿರಲಿಲ್ಲ. ಆದರೆ ಇಂದು ಬಸವ ಜಯಂತಿ ಈ ಕವನ ಸಂಕಲನದ ಮೊದಲ ಕವನ ನನಗೆ ಪದೇ ಪದೇ ನೆನಪಾಗತೊಡಗಿತು,' ಬಸವನೆಂಬ ಜೆಸಿಬಿ' "ಇದ್ದವರ ಝೇಂಕಾರ, ಬಿದ್ದವರ ಸೀತ್ಕಾರ,
ಬಿಂಕದವನ ಅಹಂಕಾರ, ಅಂತ್ಯಜನ ಚೀತ್ಕಾರ,
ಕಂಡು ಕನಲಿದ, ಕರಗಿದ ಕರುಣಾಳು ತಂದೆ,
ಕಗ್ಗತ್ತಲ ಬಾಳಿಗೆ ಕಾರ್ತಿಕ ದೀಪವಾಗಿ ಬಂದೆ" ಅಪ್ಪ ಬಸವನ ಕಾರ್ಯಗಳನ್ನ ಹೇಳಿ ಕವನದ ಕೊನೆಗೆ 'ಬಸವನೆಂಬ ಜೆಸಿಬಿ ಈಗ ಬೇಕು ' ಎಂಬ ಸಾಲುಗಳು ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಅವಶ್ಯಕತೆ ಇದೆ ಎನ್ನುತ್ತವೆ. 'ಬೇಕು ಆದರೆ ತರುವುದೆಲ್ಲಿಂದ?' ಎನ್ನುವುದು ಕವಿ ಮನದ ನೋವನ್ನು ವ್ಯಕ್ತಪಡಿಸುವ ಸಾಲು ಎಂದೇ ಹೇಳಬಹುದು. ಬಸವಣ್ಣನವರ ವಚನಗಳು ಸಾರ್ವಕಾಲಿಕ ಮೌಲ್ಯಗಳನ್ನು ಸಾರುವ ಸಾಹಿತ್ಯ ಎಂಬುವುದು ನಿತ್ಯ ಸತ್ಯ ಸಂಗತಿ. ಆದರೆ ಅದನ್ನ ಅರಿಯದ ಮೌಢ್ಯಜನ ನಾವು. ಅಂದು ಆತನನ್ನು ಆತನ ಅನುಯಾಯಿಗಳನ್ನು ಹೀಯಾಳಿಸಿ ಅವಮಾನಿಸಿ ಕಲ್ಯಾಣದಿಂದೋಡಿಸಿದವರು ಇಂದು ಆತ ಸಮಾಜಕ್ಕೆ ಬೇಕೆ ಬೇಕು ಎಂಬುದು ಈ ಕವನದ ಆಶಯವಾಗಿದೆ.
'ವಾತ್ಸಲ್ಯದ ಸೆಲೆ' ಎಂಬ ಕವನ ಬದುಕಿಗೆ ಮಳೆಯ ಸೊಬಗು ಹೇಗೆ ಮೆರಗು ನೀಡುತ್ತದೆ. ಜಿಟಿಜಿಟಿ ಮಳೆ ,ಜಡಿ ಮಳೆ ವಾತಾವರಣದಲ್ಲಿ ಬೀರುವ ಪ್ರಭಾವವನ್ನು ಕವಿತೆ ಹಿಡಿದಿಟ್ಟಿದೆ. ಮಳೆಗಾಲದಲ್ಲಿ ಮೂಡಿ ಬರುವ ಮಂಡೂಕ ಸಂತತಿಯನ್ನು ಈ ಕವನದಲ್ಲಿ ಸೆರೆಹಿಡಿದಿದ್ದಾರೆ 'ರವಿ ಕಾಣದ್ದನ್ನು ಕವಿ ಕಂಡ' ಎಂಬ ಶ್ರೇಷ್ಠ ಕವಿಯ ಸಾಲುಗಳು ಇಲ್ಲಿ ನೆನಪಾಗುತ್ತವೆ.
ಈ ಕವನ ಸಂಕಲನದಲ್ಲಿ ನನ್ನ ಮನಸ್ಸಿಗೆ ನಾಟಿದ ಇನ್ನೊಂದು ಕವನವೆಂದರೆ ಸಾವಿಲ್ಲದವನು 1985 ಅಕ್ಟೋಬರ್ ನಲ್ಲಿ ಬರೆದ ಈ ಕವನ ನಾನು ಐದನೆಯ ತರಗತಿ ವಿದ್ಯಾರ್ಥಿಯಾಗಿದ್ದಾಗಲೇ ಕೇಳಿದ್ದು ಅಂದಿನಿಂದ ಇಂದಿನವರೆಗೂ ನನ್ನ ನೆನಪಿನಲ್ಲಿ ಉಳಿದ ಕವನ ೇಕೆ ಶಿಕ್ಷಿಸುತ್ತಾರೆ ಗಲ್ಲಿಗೇರಿಸುತ್ತಾರೆ ಎಂಬ ಪ್ರಶ್ನೆ ಅಂದು ನನ್ನ ಎಳೆಯ ಮನದಲ್ಲಿ ದೊಡ್ಡದೊಂದು ಗೊಂದಲವನ್ನೇ ಸೃಷ್ಟಿಸಿತ್ತು ಲೇಖನಿಗೆ ಖಡ್ಗಕ್ಕಿಂತ ಹರಿತವಾದ ಶಕ್ತಿ ಇದೆ ಎಂದು ನನಗೆ ತಿಳಿದದ್ದು ಈ ಕವನದಿಂದಲೇ ದಕ್ಷಿಣ ಆಫ್ರಿಕಾದ ಕಪ್ಪು ಕವಿ ಬೆಂಜಮಿನ್ ಮೊಲಾಯಿಸ್ ಬಿಳಿಯರಿಂದ ಗಲ್ಲಿಗೇರಿಸಿಕೊಂಡ ಕವಿ ತನ್ನವರನ್ನ ಗುಲಾಮಗಿರಿಯಿಂದ ಪಾರು ಮಾಡಲು, ಬಿಳಿಯರ ದೌರ್ಜನ್ಯದಿಂದ ಸ್ವತಂತ್ರಗೊಳಿಸಲು, ಕರಿಯರ ಹಕ್ಕಿಗಾಗಿ ಹೋರಾಡಿದ ಆತ ಪ್ರಾಣವನ್ನೇ ಕಳೆದುಕೊಂಡಿದ್ದ. "ಮೂಡಲ ಹರಿಯುವುದಿತ್ತು ಬೆಳ್ಳ ಬೆಳ್ಳಗೆ ಕಪ್ಪು ಕಂಡವ ಬೆಳಗುವ ದಿತ್ತು ಆದರೆ ಇದು ಹುಟ್ಟುವ ಮುಂಚೆ ಕರಿಯ ರವಿಗೆ ಖಗ್ರಾಸದವರಣ..." ಕವನದ ಸಾಲುಗಳು, 'ಮನ ಮನ ಬೆರೆತಾಗ ತನು ಕರಗದಿದ್ದರೆ ' ಎಂಬ ಬಸವಣ್ಣನವರ ವಚನದ ಸಾಲಿನಂತೆ ಕವಿಮನದ ನೋವು ಇನ್ನೊಬ್ಬ ಕವಿಗೆ ಅರ್ಥವಾಗುತ್ತದೆ ಎಂಬುದನ್ನು ಅರ್ಥೈಸುತ್ತವೆ.
ಪೂಜ್ಯಶಿದ್ದೇಶ್ವರ ಅಪ್ಪಾಜಿಯವರನ್ನ ಕುರಿತು ಬರೆಯದ ಕವಿಗಳೇ ಇಲ್ಲ ಬೇಕು. ಆದರೆ ಪ್ರತಿಯೊಬ್ಬ ಕವಿಯ ಸಾಲುಗಳು ವಿಶಿಷ್ಟ ವಿಭಿನ್ನ. ಬಾಲ್ಯದಲ್ಲಿ ಸಿದ್ದೇಶ್ವರ ಪೂಜ್ಯರ ಕುರಿತು ನಮಗೆ ತಿಳಿಸಿಕೊಟ್ಟವರೇ ಇವರು. ಇವರ ಶ್ರೀ ಸಿದ್ದೇಶ್ವರ ಕವನದ ಸಾಲುಗಳು ಪೂಜ್ಯರ ಘಣವೆತ್ತ ಬದುಕಿನ ದರ್ಶನವನ್ನು ಮಾಡಿಸುತ್ತದೆ." ತಡ ಮಾಡಲೇ ಇಲ್ಲ ಬ್ರಹ್ಮದೇವ ಸಕ್ರತಿಸ್ತನ ತಲೆ, ಬಸವಣ್ಣನ ಹೃದಯ ಮತ್ತೆ ಮಹಾತ್ಮನ ಆತ್ಮ ಒಂದೆಡೆ ಸೇರಿದವು ಜೀವವಾಗಿ ನಿಂತು ಈಶ್ವರನೇ ಸಿದ್ದನಾದ ಗುವಿಗೆ ಅವತರಿಸಿದ್ದ ಸಿದ್ದೇಶ್ವರನಾಗಿ ನಮ್ಮ ನಿಮ್ಮ ಮಧ್ಯ"
ಜಗತ್ತಿನ ಎಲ್ಲ ತತ್ವಜ್ಞಾನಿಗಳ ಜ್ಞಾನವನ್ನು ತುಂಬಿ ಬ್ರಹ್ಮ ಸಿದ್ದೇಶ್ವರರನ್ನ ನಮಗೆ ಕರುಣಿಸಿದ್ದರು ಎನ್ನುವ ಭಕ್ತಿ ಭಾವ ಕವನದಲಿ ಮೂಡಿಬಂದಿದೆ.
ಪತ್ರಿಕಾ ರಂಗದಲ್ಲಿ ನೇರ ದಿಟ್ಟ ಸತ್ಯ ವ್ಯಕ್ತಿತ್ವವನ್ನು ಹೊಂದಿದವರು ಶ್ರೀ ಎಂ ಸಿ ಗೊಂದಿಯವರು ಅವರ ಹಾಗೂ ಬಹು ದಿನಗಳದ್ದು ಗೊಂದಿಯವರ ಕುರಿತಾಗಿ ಸ್ನೇಹ ಸುಗಂಧಿ ಕವನದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ "ಸದ್ಭಾವ ಸದ್ಗುಣಗಳ ಖಣಿಯು ಎಮ್ಸೀ ಗೊಂದಿ" ಒಂದೇ ಸಾಲು ಸಾಕು ಕವಿತೆ ಹೇಗಿದೆ ಎಂದು ತಿಳಿಯಲು.
ಅಂತರಾಳದ ನೋವನ್ನು ಹೊರಹಾಕಿ ಓದುಗರ ಕಣ್ಣಂಚಿನಲ್ಲೂ ಹನಿ ಗೂಡುವಂತೆ ಮಾಡುವ ಕವನ.' ಅವ್ವ' ಸುತ್ತಮುತ್ತಲಿನ ಪ್ರಪಂಚವನ್ನು ಅರಿಯುವ ಮುಂಚೆ ತನ್ನಿಂದ ದೂರಾದ ತಾಯಿಯ ನೆನಪನ್ನು ಈ ಕವಿತೆಯಲ್ಲಿ ಹಂಚಿಕೊಂಡಿದ್ದಾರೆ. ತಾಯಿ ಇಲ್ಲದ ನೋವನ್ನು ಅವರು ಸದಾ ಅನುಭವಿಸುತ್ತಲೇ ಬಂದವರು. ಎಂಟು ತಿಂಗಳ ಮಗುವಾಗಿದ್ದಾಗ ತಾಯಿ ಇವರನ್ನು ತೊರೆದರು. ತಾಯಿಯ ಸ್ಥಾನವನ್ನು ಯಾರೂ ತುಂಬಲಾರರು ಎನ್ನುವ ಲೋಕ ಸತ್ಯವನ್ನು ಈ ಕವನದಲ್ಲಿ ತುಂಬಿದ್ದಾರೆ." ಹೇಳವ್ವ ಹೇಳು ಬದುಕಿನ ಆಸೆಯ ಕೂಡ ಅನ್ಯ ವಾಯಿತೆ ಕರುಳ ಕುಡಿಯು? " ತಾಯಿಯ ಮುಖವನ್ನೇ ನೋಡದ ಮನದ ಭಾವಗಳು ನೋವನ್ನುಂಟು ಮಾಡುವಂಥವುಗಳು ತಾಯಿ ಪ್ರತಿಯೊಬ್ಬರ ಬದುಕಿನಲ್ಲಿ ಬಹುಮುಖ್ಯ ತಾಯಿ ವೃದ್ಧಾಪ್ಯದಲ್ಲೂ ತಾಯಿಯ ನೆನಪು ಕಾಡುತ್ತಿದೆ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಬಾಲ್ಯ ಸ್ನೇಹಿತರಾದ ಮಾಜಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಾದ ಶ್ರೀ ಶಂಕರ್ ಬಿದರಿ ಅವರು ಅಧಿಕಾರ ವಹಿಸಿಕೊಂಡ ಸಂದರ್ಭದಲಿ ಭಾವ ತುಂಬಿ ಅವರ ಕುರಿತು ಬರೆದ ಸಾಲುಗಳು ಸುಜನ ಸಂಪ್ರೀತ ಎಂಬ ಕವನದಲಿ ಒಡ ಮೂಡಿವೆ ಶಂಕರ್ ಬಿದರಿಯವರು ಮಲ್ಲಿಕಾರ್ಜುನ್ ಹುಲಗಬಾಳಿಯವರು ಬಾಲ್ಯದಿಂದಲೂ ಆತ್ಮೀಯ ಸ್ನೇಹಿತರು ಇಂದಿಗೂ ಅವರು ಬನಹಟ್ಟಿ ಗೆ ಬಂದರೆ ಇವರು ಬೆಂಗಳೂರಿಗೆ ಹೋದರೆ ಇವರಿಬ್ಬರ ಭೇಟಿ ಆಗಲೇಬೇಕು ಶಂಕರ್ ಬಿದರಿಯವರಿಗೆ ಮಲ್ಲಿಕಾರ್ಜುನ ಹುಲಗಬಾಳಿಯವರ ಬಗ್ಗೆ ಎಷ್ಟು ಆತ್ಮೀಯತೆ ಎಂದರೆ ಒಂದು ಸಲ ಪತ್ರಿಕೆಯವರೊಬ್ಬರು ನಿಮ್ಮ ಜೀವನದ ಕುರಿತಾಗಿ ನಾವು ಲೇಖನ ಪ್ರಕಟಿಸಬೇಕಾಗಿದೆ ಮಾಹಿತಿ ಕೊಡಿ ಎಂದರಂತೆ. ಆದರೆ ಶಂಕರ್ ಬಿದರಿಯವರು ನೀವು ಮಲ್ಲಿಕಾರ್ಜುನ ಹುಲಗಬಾಳಿಯವರನ್ನು ಕೇಳಿದರೆ ಅವರು ನಿಮಗೆ ಎಲ್ಲ ಮಾಹಿತಿಯನ್ನು ತಿಳಿಸುತ್ತಾರೆ ಎಂದರಂತೆ .ಈ ಮಾತುಗಳನ್ನು ನೆನಪಿಸಿಕೊಳ್ಳುತ್ತ ಹುಲಗಬಾಳಿಯವರು ತಮ್ಮ ಹಾಗೂ ಬಿದರಿಯವರ ಆತ್ಮೀಯತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಅಂತಹ ಆತ್ಮೀಯ ಸ್ನೇಹಿತ ಉನ್ನತ ಹುದ್ದೆಗೆರಿದಾಗ ಶಿವನಿಗಿರುವ ಅನೇಕ ಹೆಸರುಗಳನ್ನು ಉಲ್ಲೇಖಿಸುತ್ತ ಬಿದರಿಯವರ ಕಾರ್ಯ ಸೃಷ್ಟಿಕರ್ತನ ಕಾರ್ಯಕ್ಕೆ ಸಮ ಎಂಬ ಭಾವ ತಮ್ಮ ಕವನದಲ್ಲಿ ತಂದಿದ್ದಾರೆ.
ತಮ್ಮ ಸಹೋದ್ಯೋಗಿ ಮಿತ್ರರಲ್ಲೂ ಇರುವ ಗುಣಗಳನ್ನು ಕವಿತೆಯ ರೂಪದಲ್ಲಿ ಎಲ್ಲರಿಗೆ ತಿಳಿಸಿದವರು 'ಕೊಟ್ನಿಸ್ ಟಿಕೆ' ಕವನದ ಮೂಲಕ. ಪ್ರೊ ಟಿ.ಕೆ ಕೊಟ್ನಿಸ್ ಕನ್ನಡ ಉಪನ್ಯಾಸಕರು ಅಪಾರಜ್ಞಾನ ಉಳ್ಳವರು ಅವರ ಪಾಂಡಿತ್ಯ ಹಾಗೂ ಸ್ವಭಾವದ ಚಿತ್ರಣ ಇಲ್ಲಿದೆ. "ಮರುಗಳಿಗೆ ಮಗುವಿನನಗೆ ಅರಳಿತು ಮಲ್ಲಿಗೆ ಬಾಳಭಾರ ಹಗುರವಾಗಿಸುವ ಹಂಬಲ 'ಟೀಕೆ'ಗೆ"
ಹಿಂದಿ ಉಪನ್ಯಾಸಕರಾದ ಪ್ರೊ ಮೃತ್ಯುಂಜಯ ರಾಮದುರ್ಗ್ ಅವರ ಕುರಿತಾಗಿಯೂ ಕವನ ರಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು ಆ ಕವನದ ಶೀರ್ಷಿಕೆ 'ಚತುರ ಮಾತಿಗ'.
ಸಂಬಂಧಿಕರ ಅಕಾಲಿಕ ಅಗಲಿಕೆಯ ಸಂದರ್ಭದಲ್ಲಿ ಅವರ ಗುಣಗಳನ್ನು ಸ್ಮರಿಸಿಕೊಂಡು ಬರೆದ ಕವನ 'ಶಿವನ ಜಡೆಯ ನೀರಿದ ಚಂದಿರ'
"ಸಾಲದ ಶೂಲಕ ಸಣ್ಣಾಗಿದ್ದನೊ
ಹೊಳಿಸಾಲದ ರೈತ
ಹೆಂಡಿರು ಮಕ್ಕಳು ಹೊಲದಲ್ಲಿ ಕೂಡಿ
ದುಡಿದರು ಸೈತ"
ನೀರಿಲ್ಲದ ರೈತನ ಭವಾನಿ ಹೊಳೆ ಸಾಲಿನ ಭೂಮಿಯನ್ನ ಹೊಂದಿದ್ದರು ರೈತನ ನೋವು ತಪ್ಪಿದ್ದಲ್ಲ ಎಂದು 'ಚಿಕ್ಕದಲ್ಲ ಈ ಪಡಸಲಗಿ' ಚಿಕ್ಕಪಡಸಲಗಿ ಬ್ಯಾರೇಜ್ ನಿರ್ಮಾಣದ ಹೋರಾಟದ ಸಂದರ್ಭದಲ್ಲಿ ಬರೆದ ಕವಿತೆ ಇಲ್ಲಿ ನಾನು ಲೇಖಿಸಿದ ಸಾಲುಗಳು ಇಂದಿಗೂ ನನ್ನ ನಾಲಿಗೆಯ ಮೇಲೆ ಉಳಿದಿವೆ.
ಇಲ್ಲಿನ ಕೆಲವು ಗೀತೆಗಳು ಸಂಗೀತ ಸಂಯೋಜನೆಯನ್ನುಮಾಡಿ ಹಾಡಿದಂಥವುಗಳು ಹಾಡಲು ಬರುವಂತವುಗಳು.
'ಕಿರಿದರೊಳ್ ಪಿರಿದು' ಎನ್ನುವಂತೆ ಚುಟುಕುಗಳಲ್ಲಿ ಅರ್ಥಪೂರ್ಣ ವಿಚಾರಗಳನ್ನು ತಿಳಿಸಿದ್ದನ್ನು ಕಾಣುತ್ತೇವೆ.
'ನಾನೇ
ಮೊದಲನೆಯ ನಂಬರು,
ಪರೀಕ್ಷೆಲಿ,
ಅಂತಂದ್ರೂ ಮನೇಲಿ
ಯಾರೂ ನಂಬರು!' ಈ ಚುಟುಕಿನಲ್ಲಿಯೇ ಶಬ್ದ ಪ್ರಯೋಗ ಗಮನಿಸುವಂಥದ್ದು .
ಹೀಗೆ ಅನೇಕ ಇಲ್ಲಿನ ಕವನಗಳು ಚುಟುಕುಗಳು 70ರ ದಶಕದಿಂದ ಹಿಡಿದು ಇಂದಿನವರೆಗಿನ ಅನೇಕ ವಿಷಯಗಳು ವಿಚಾರಗಳನ್ನ ಹೊಂದಿದವುಗಳಾಗಿವೆ. ಎಲ್ಲವಿಷಯ ನಾನೇ ಹೇಳಿದರೆ ಹೇಗೆ ಓದುಗರಿಗೂ ಒಂದಿಷ್ಟು ಉಳಿಸುವೆ. ಈ ಕೃತಿಗೆ ಮುನ್ನುಡಿಯನ್ನು ಖ್ಯಾತ ಕವಿ ಸಿದ್ದರಾಜ ಪೂಜಾರಿ ಅವರು ಬರೆದಿದ್ದಾರೆ. ಬೆನ್ನುಡಿಯಾಗಿ ಎಚ್ ದುಂಡಿರಾಜರು ತಮ್ಮ ಕವನದ ಮೂಲಕ ಹುಲಗಬಾಳಿಯವರ ವ್ಯಕ್ತಿತ್ವವನ್ನ ಬಿಂಬಿಸಿದ್ದಾರೆ. ಯುವಕವಿ ಆನಂದ ಕುಂಚನೂರ ಮಾತುಗಳು, ಖ್ಯಾತ ಕಥೆಗಾರರಾದ ಪ್ರೇಮ್ ಕುಮಾರ್ ಹರಿಯಬ್ಬೆ ಅವರ ನಲ್ನುಡಿಗಳು ಕೃತಿಗೊಂದು ಮೆರಗನ್ನು ತಂದುಕೊಟ್ಟಿವೆ.
ಒಂದು ವಿಷಯ ಇಲ್ಲಿ ಹೇಳುವುದೆಂದರೆ ಒಂದೇ ತರದ ಬರವಣಿಗೆಗೆ ಅಂಟಿಕೊಂಡು ಕುಳಿತುಕೊಳ್ಳದೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನ ತೊಡಗಿಸಿಕೊಂಡಿರುವ ಪ್ರೊ ಮಲ್ಲಿಕಾರ್ಜುನ ಮಲ್ಲಿಕಾರ್ಜುನ ಕುಲಗಬಾಳಿಯವರ ಮೊದಲ ಕೃತಿ 'ಟೊಂಯ್ ಟೊಂಯ್ ಮಾತು' . ನಂತರ 'ಉದರೋಪನಿಷತ್', 'ಗುಡ್ ಬೈ ಬಿಜಾಪುರ್', 'ಚಷ್ಮಾ- ಚರಿಷ್ಮಾ', 'ನಾಲಿಗೆಯ ಮೇಲೊಂದಿಷ್ಟು' ಅನುಕೂಲಕ್ಕೊಂದು ಅವತಾರ' 'ಜನರಲ್ ಬೋಗಿ' ಇವು ನಗೆಬರಹ, ಹಗುರ ಬರಹ,ಲಲಿತ ಪ್ರಬಂಧಗಳ ಕೃತಿಗಳಾಗಿ ಓದುಗರ ಕೈ ಸೇರಿದವು. 'ಪರಂ ಜ್ಯೋತಿ 'ವ್ಯಕ್ತಿ ಚಿತ್ರಣ ಆದರೆ 'ಬೆಳಗಿನ ಒಳಗೆ ಬೆರೆದು 'ವಚನ ವ್ಯಾಖ್ಯಾನ ಅಂದರೆ 41 ಅಲಕ್ಷಿತ ಶರಣ- ಶರಣೀಯರ ವಚನ ಚಿಂತನ ಕುರಿತ ಕೃತಿಯಾಗಿದೆ. 'ಸನ್ನಿಧಾನ' ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ತಮ್ಮ ಅನುಭವ ಹೇಗಿತ್ತು ಹಾಗೂ ಶ್ರೀಗಳ ಮಹಾನ್ ವ್ಯಕ್ತಿತ್ವದ ಕುರಿತ ಬರಹಗಳನ್ನು ಹೊಂದಿದ ಕೃತಿಯಾಗಿದೆ. 'ವೃತ್ತಾಂತ 'ಎಂಬುದು ಮಲ್ಲಿಕಾರ್ಜುನ ಹುಲಗಬಾಳಿಯವರು ಪತ್ರಿಕೆಗಳಿಗೆ ಬರೆದ ಅಂಕಣ ಬರಹಗಳ ಸಂಗ್ರಹದ ಕೃತಿಯಾಗಿದೆ. 'ಬಾಬಾ ಅಮ್ಟೆ' ಮಕ್ಕಳಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಕೃತಿ ಸರಣಿಯಲ್ಲಿ ಬರೆದಿದ್ದಾರೆ. ಅಲ್ಲದೆ ಇನ್ನೂ ಅನೇಕ ಕೃತಿಗಳು ಲೇಖಕರಿಂದ ಅರಚಿಸಲ್ಪಟ್ಟಿವೆ ಅವರ ಬರವಣಿಗೆ ಹೀಗೆ ಮುಂದುವರೆಯಲಿ ಕನ್ನಡ ಸರಸ್ವತ ಲೋಕಕ್ಕೆ ಇನ್ನು ವಿಶಿಷ್ಟವಾದ ಸಾಹಿತ್ಯ ಅವರಿಂದ ನಮಗೆ ದೊರೆಯುವಂತಾಗಲಿ ಎಂದು ಆಶಿಸುತ್ತಾ' ಬಾ ಹತ್ತರ್ ' ಕವಿತೆಗಳ ಅವಲೋಕನದೊಂದಿಗೆ
ಕೃತಿಕಾರ ಕಿರು ಪರಿಚಯಕದಕ್ಕೆ ಇಲ್ಲಿ ವಿರಾಮ ನೀಡುತ್ತೇನೆ.
.--------------------------
ಡಾ. ಪ್ರಿಯಂವದಾ ಮ ಅಣೆಪ್ಪನವರ.
ಡಾ. ಪ್ರಿಯಂವದಾ ಮ ಅಣೆಪ್ಪನವರ.