ಪ್ರಭಾ ಬೋರಗಾಂವಕರ-ಸುಸಂಸ್ಕೃತ ಸಮಾಜ ನಿರ್ಮಾಣ….

ಕಾವ್ಯ ಸಂಗಾತಿ

ಪ್ರಭಾ ಬೋರಗಾಂವಕರ

ಸುಸಂಸ್ಕೃತ ಸಮಾಜ ನಿರ್ಮಾಣ….

ಈ ಕರುನಾಡ ಮಣ್ಣಲಿ ಸಿರಿಗಂಧದ ಬೀಡಲಿ
ಶರಣರು ಜನಿಸಿ , ಬಾಳಿ ಬದುಕಿದ ಈ ಪವಿತ್ರ ನಾಡಲಿ
ಜನ್ಮತಳೆದ ಧನ್ಯತಾ ಭಾವ ನನ್ನ ಹೃದಯದಲಿ
ಹಣೆಮನಿದು ಜೀವಿಸುವೆ ಅವರ ತತ್ವಾದರ್ಶಗಳ ಬೆಳಕಲಿ

ಅಂದು..

ಮೌಢ್ಯತೆ , ಕಂದಾಚಾರಗಳ ಸುಳಿಗೆ ಸಿಲುಕಿ ಬಳಲುವವರ
ಹೆಣ್ಣು – ಗಂಡೆಂಬ ಭೇದಭಾವದಿ ತೊಳಲುವವರ
ಜಾತಿ- ವಿಜಾತಿ, ಬಡವ-ಸಿರಿವಂತರೆಂದು ಮೆರೆಯುವವರ
ನೆನೆವೆ ಹೆರಿಮುಡಿಗೆ ಕಟ್ಟಿ ಸಮಾನತೆ ಅರುಹಿದ ಶರಣರ

ಅನುಭವ ಮಂಟಪದಿ ಅನುಭಾವದ ವಿಚಾರದೌತಣ
ಮೇಲು- ಕೀಳು ಭಾವವನಳಿಸಲು ವರ್ಣಸಂಕರದ ದಿಬ್ಬಣ
ವೈಚಾರಿಕತೆಯ ಸಮಾಜ ನಿರ್ಮಾಣಕೆ ತೊಟ್ಟರು ಕಂಕಣ
ಮೊಳಗಿ ಬೆಳಗಿತು ಎಲ್ಲೆಲ್ಲೂ ನವ ಕ್ರಾಂತಿಯ ಕಲ್ಯಾಣ

ಇಂದು..

ಮತ್ತೆ ಗರಿಬಿಚ್ಚಿ ಏರುತಿದೆ ಮೂಢನಂಬಿಕೆಯ ಹಂದರ
ಅತ್ತ ಭ್ರೂಣ ಹತ್ಯೆ ಇತ್ತ ಜಾತೀಯತೆಯ ಹುನ್ನಾರ
ಎಂಜಲೆಲೆಯ ಮಡೆಸ್ನಾನ,ದೇವರೂಟಕೆ ವಿಷಪ್ರಾಶನ
ಭಗವಂತನ ಹುಂಡಿಯನ್ನೆ ಲಪಟಾಯಿಸುವ ಭಂಡತನ

ಎತ್ತ ನೋಡಿದತ್ತ ಕೇಸರಿ ನೀಲಿ ಹಿಜಾಬುಗಳ ರಿಂಗಣ
ಧರ್ಮ ಧರ್ಮಗಳ ನಡುವೆ ಮನುಜ ಬೆಂಕಿ ಹಚ್ಚಿದ ಕಾರಣ
ಕೊರಗುತಿದೆ ಶರಣರ ಕರುನಾಡು ಹೊತ್ತಿ ಉರಿವ ಕಾಡ್ಗಿಚ್ಚಿಗೆ
ಸುಸಂಸ್ಕೃತ ಸಮಾಜ ನಿರ್ಮಾಣದ ಕಿಚ್ಚು ಉಕ್ಕಲಿ ಯುವಜನತೆಗೆ……


One thought on “ಪ್ರಭಾ ಬೋರಗಾಂವಕರ-ಸುಸಂಸ್ಕೃತ ಸಮಾಜ ನಿರ್ಮಾಣ….

Leave a Reply

Back To Top