ಕಿಕ್ ದ ಕಿಚನ್-ತೆಲುಗು ಕಥೆಯ ಕನ್ನಡಾನುವಾದ ಡಾ.ಶಿವಕುಮಾರ್

ಅನುವಾದ ಕಥಾ ಸಂಗಾತಿ

ಕಿಕ್ ದ ಕಿಚನ್

ತೆಲುಗು ಮೂಲ: ಸಿಂಹಪ್ರಸಾದ್
ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ

ಹಾರಿಕ ಒಂದು ಉರಿಬಿಸಿಲಿನ ಮುಂಜಾನೆ ಬೀದಿಯ ಬಾಗಿಲು ತೆರೆದು ಬೆಳಗಿನ ಪೇಪರ್ ತಂದು ಟಿಪಾಯ್ ಮೇಲೆ ಇಡುತ್ತಿರುವಾಗ ಅದರೊಳಗಿಂದ ಒಂದು ಕರಪತ್ರ ಟಪ್ಪನೇ ಜಾರಿ ಬಿತ್ತು!. ಉತ್ಸುಕತೆಯೊಂದಿಗೆ ಬಾಗಿ ನೋಡಿದಳು.
‘ ಮತ್ತೊಂದು ಮಹಿಳಾ ಬಂಡಾಯ ! ಅಡುಗೆಯ ಮನೆಗೆ ಬೆಂಕಿ ಹಚ್ಚಿರಿ!’
ಸೆಳೆವ ಶೀರ್ಷಿಕೆಯ ಆಕರ್ಷಣೆಯಿಂದ ಓದುತ್ತಾ ಕುಳಿತುಬಿಟ್ಟಳು.
“ ಮಹಿಳೆ ಇನ್ನೂಮುಂದೆಯೂ… ಅಡುಗೆ ಮನೆಯ ಬಂಧಿಯಾಗಿರಬೇಕಾ? ಅಗತ್ಯವಿಲ್ಲ ! ಈ ಪುರುಷರು ‘ಅಡುಗೆ ಮನೆ ಸಾಮ್ರಾಜ್ಞಿ’ ಅಂತ ನಮ್ಮನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆ… ಹೊಗಳಿಕೆಯ ನೇಣುಗಳಿಂದ ಹೊರಗೆ ಬರೋಣ.ಈಗಲೇ..ಅಡುಗೆ ಮನೆಗೆ ಗುಡ್ ಬೈ ಹೇಳಿ, ನಮ್ಮ ಸಮಯವನ್ನು, ನಮ್ಮ ಶಕ್ತಿ ಯುಕ್ತಿಗಳನ್ನು ಸದ್ವಿನಿಯೋಗ ಮಾಡಿಕೊಳ್ಳೋಣ. ಗಂಡಸರಿಗಿಂತ ನಾವು ಯಾವ ವಿಧದಲ್ಲೂ ಕಡಿಮೆ ಇಲ್ಲ. ಆ ಮಾತಿಗೆ ಬಂದರೆ ನಾವು ಹೆಚ್ಚೇ!! ಎಂದು ನಿರೂಪಿಸಿಕೊಳ್ಳೋಣ. ಇನ್ನುಮೇಲೆ ನಾವು ಅಡುಗೆ ಮನೆಯ ಮೊಲಗಳಲ್ಲ, ಬಯಲ ಸಿಂಹಿಣಿರೆಂದು ಸಾಧಿಸೋಣ. ಬನ್ನಿ, ನಾವೆಲ್ಲಾ.. ಸೇರಿ ಒಂದಾಗಿ ಮೊದಲ ಹೆಜ್ಜೆ ಹಾಕೋಣ! ಈ ಬಾರಿ ಹೊಸ ಬಂಡಾಯಕ್ಕೆ, ಮುಂದಿನ ಸಾಲಿನಲ್ಲೇ.. ನಿಂತು ಜೈಕಾರ ಹೇಳಲಿಕ್ಕೆ ನುಗ್ಗೋಣ.ಬನ್ನಿ ಇದೇ ಭಾನುವಾರದ ದಿನ ನಮ್ಮ ಕಮ್ಯುನಿಟಿ ಹಾಲಿನೊಳಗೆ ನಡೆಯಲಿರುವ ಸಮಾವೇಶಕ್ಕೆ ಹಾಜರಾಗಿ! ಅದರ ಪಾಲುದಾರರಾಗಿ ಮಹಿಳಾ ಬಂಡಾಯದ ಶಂಖ ಮೊಳಗಿಸಿ.
ಹಾರಿಕಳಿಗೆ ತನ್ನ ಗಂಡನ ಮೇಲೆಯೇ…ಒಂದು ವಿಧವಾದ ಸಿಡುಕಿನ ಆವಾಹನೆ ಬಂದುಬಿಟ್ಟಿತು. ‘ಇನ್ಮುಂದೆ, ಇನ್ಮೇಲೆ ಗಂಡಸರ ಸವಾರಿ ನಡೆಯಲು ಬಿಡೆನು!’ ಅಂದುಕೊಂಡಳು.
ಆಫೀಸಿನ ಹೊತ್ತಿಗೆ ಸರಿಯಾಗಿ ಆಗಲೇ ಮುಖ ಒರೆಸಿಕೊಳ್ಳುತ್ತಾ ಬಂದನು ಶ್ರೀಪತಿ. “ ಏನಮ್ಮಾ ಅಷ್ಟು ಸೀರಿಯಸ್ ಆಗಿ ಓದಿಕೊಳ್ಳುತ್ತಿರುವೆ” ನಗುತ್ತಾ ಕೇಳಲು.
“ ನೀವೇ ಓದಿಕೊಳ್ಳಿ ” ಬಂದು ಕದಡಿದ ಕರಪತ್ರವನ್ನು ಆತನ ಕಡೆಗೆ ಎಸೆದಳು.
“ಇದೇನಿದು ? ಕೂರಲಾರದೆ ಕುರ ಕೆರಕಂಡಂತೆ ಆಯಿತೆಂದು !,ಸಾವರಿಸಿಕೊಂಡು “ಇಷ್ಟಕ್ಕೂ ನನ್ನ ಕಾಫಿ ಎಲ್ಲೇ!” ಅಂತ ಕೇಳಿದನು.
ಅಷ್ಟೇ ವ್ಯಂಗ್ಯದಿಂದಲೇ.. “ ಅದಕ್ಕೇನು ಕಾಲಿಲ್ಲರೀ… ನಡೆದು ಬರೋಕೆ!,ಯಾಕೆ? ದಿನವೂ ನಾನೇ ಕಾಫೀ ತಯಾರು ಮಾಡಬೇಕಾ? ನೀವೂ ಮಾಡಬಾರದಾ? ನೀವು ನಮ್ಮನ್ನ ಆಜನ್ಮಾಂತರ ಅಡುಗೆ ಮನೆಯ ಖೈದಿಯನ್ನಾಗಿ ಮಾಡಿಬಿಟ್ಟಿದ್ದೀರಿ !” ಆವೇಶಗೊಂಡು ಉಸುರಿದಳು.
“ ಅಸಲು ನಿನಗೆ ಏನಾಗಿದೆಯೇ…!”
“ ನನ್ನ ಓದು, ತಿಳುವಳಿಕೆಗಳು ಇಲ್ಲಿಯ ೬ ಬೈ ೮ ಅಡಿಯ ಅಡುಗೆ ಕೋಣೆಯೊಳೆಗೇ ಹೊಗೆಯಾಗಿ ಹೋಗುತ್ತಿವೆ. ನನ್ನ ಅಸಲೀ… ಶಕ್ತಿ ಸಾಮರ್ಥ್ಯಗಳು ಉಸಿರಾಡದೇ ಪಟ ಪಟನೆ ಹೊಡೆದುಕೊಳ್ಳುತ್ತಿವೆ.ಕನಸುಗಳು ನಿರ್ವೀರ್ಯವಾಗಿ ಹೋಗುತ್ತಿವೆ.ಇನ್ನಾದರೂ ನಮ್ಮನ್ನ ಅಡುಗೆ ಕೋಣೆಯಿಂದ ಹೊರಕ್ಕೆ ಬರಲುಬಿಡಿ. ಸ್ವತಂತ್ರವಾಗಿ ಹೊಸಗಾಳಿ ಸೇವಿಸಲು ಬಿಡಿ! “ ದೃಢವಾಗಿ ಹೇಳಿದಳು.
ಆಗತಾನೇ ತನ್ನ ಧಾರವಾಹಿ ವೀಕ್ಷಣೆಯನ್ನು ಮುಗಿಸಿಬಂದು ಅಡುಗೆ ರಂಗಪ್ರವೇಶ ಮಾಡಿದಳು ಅತ್ತೆ ಜಾನಕಮ್ಮ. “ಇದೇನೋ ನಿನ್ನ ಹೆಂಡತಿ ಯಾವುದೋ ಹೊಸ ವರಸೆ ಶುರುಮಾಡಿದ್ದಾಳಲ್ಲೋ ಮಗನೇ!” ಎಂದಳು.
ಅತ್ತೆಮ್ಮಾ.. “ ನೋಡಿ ಈ ಕರಪತ್ರವನ್ನ, ಇದು ನಮ್ಮ ಮಹಿಳೆಯರೆಲ್ಲರ ಅಸ್ತಿತ್ವದ ಸಮಸ್ಯೆ. ನಿಮ್ಮ ಮಗನಂತಹ ಗಂಡಸರು ತಮ್ಮ ಕುತಂತ್ರದ ಕಾರ್ಯಗಳಿಂದ ನಮ್ಮನ್ನ ಅಡಿಗೆ ಮನೆಯೊಳಗೆ ಬಂಧಿಯನ್ನಾಗಿ ಮಾಡಿಬಿಟ್ಟಿದ್ದಾರೆ. ಇನ್ನುಮೇಲಾದರೂ ನಾವು ಕಣ್ಣು ತೆರೆದು ಆ ಸಂಕೋಲೆಗಳನ್ನು ತೊಡೆದು ಹಾಕಿ ಹೊರಗೆ ಬರಬೇಕು!” ಆವೇಶಬಿದ್ದಳು.
ಮೆಲ್ಲಗೆ ಗಲ್ಲ ತಿವಿದು “ ಅಂದ್ರೆ ಏನು ಮಾಡಬೇಕೇ” ಅಮಾಯಕವಾಗಿ ಕೇಳಿದಳು ಜಾನಕಮ್ಮ.
ಮೊದಲು “ ಈ ಅಡಿಗೆ ಮನೆಗೆ ಬೀಗ ಹಾಕಬೇಕು. ಆ ನಂತರ ಏನು ಮಾಡಬೇಕು, ಹೇಗೆ ಮುಂದಕ್ಕೆ ಹೋಗಬೇಕು ಎನ್ನುವುದನ್ನ ಭಾನುವಾರ ಕಂಪನಿಯವರ ಮೀಟಿಂಗ್ ಗೆ ಹೋಗಿ ತಿಳಿದುಕೊಳ್ಳೋಣ” ಎನ್ನುತ್ತಾ ಅತ್ತೆಯನ್ನ ಪಕ್ಷಾಂತರಿಸಿದಳು.
ತಕ್ಷಣವೇ ನುಗ್ಗಿ ಚಪ್ಪಾಳೆ ಹೊಡೆದನು ಸುಪುತ್ರ ಶ್ಯಾಮ್. “ ಗುಡ್ ಡಿಸಿಷನ್ ಮಮ್ಮಿ. ಈದಿನ ಒಂದೊಳ್ಳೆ ಹೋಟೆಲ್ ಊಟ ತಿನ್ನಬಹುದು!” ಲೊಚಗುಟ್ಟಿದ.
“ ನೀನು ಏನು ತಿನ್ನುತ್ತೀಯೋ ತಿಂದು, ನನಗೆ ಚಿಕನ್ ದಮ್ ಬರ‍್ಯಾನಿ ತೆಗೆದುಕೊಂಡು ಬಾರಣ್ಣಾ” ಎಂದಳು ಕುಳಿತಲ್ಲಿಂದಲೇ…ಸುಪುತ್ರಿ ಶ್ಯಾಮಲ.
ಬದಲಾಗುತ್ತಿರುವ ವಾತಾವರಣವನ್ನು ನೋಡಿ “ ನಿನಗೀದಿನ ಏನಾಗಿದೆಯೇ” ಶ್ರೀಪತಿ ತಲೆ ಚಚ್ಚಿಕೊಂಡನು.
“ರೀ.. ಇವತ್ತಿನಿಂದ ಅಡುಗೆ ಬಂದ್. ಜೈ ಮಹಿಳಾ ಶಕ್ತಿ” ಮುಷ್ಟಿ ಬಿಗಿದು ಹೇಳಿದಳು ಹಾರಿಕ.
ಹೊರಗಿನಿಂದ ಆಗತಾನೇ.. ವಾಕಿಂಗ್ ಮುಗಿಸಿಕೊಂಡು ಬಂದ ಜಗನ್ನಾಥ.ಜರುಗುತ್ತಿರುವ ವಿಷಯವೆಲ್ಲಾ ಕೇಳಿ ತಿಳಿದುಕೊಂಡರು. “ ಭಾನುವಾರ ಮೀಟಿಂಗ್ ಆದಮೇಲೆ ಆ ಕಾರ್ಯಕ್ರಮದ ವಿಧಿ ವಿಧಾನಗಳು ತಿಳಿಯುತ್ತವೆ ಆದ್ದರಿಂದ, ಅಲ್ಲಿಯತನಕ ಯಾಥಾಸ್ಥಿತಿ ಮುಂದುವರೆಸಿರಿ. “ ಎಂದು ಮಧ್ಯಮ ಮಾರ್ಗವನ್ನು ಸೂಚಿಸಿದರು.
ಅವರ ಮಾತನ್ನು ಅಂಗೀಕರಿಸದೆ ವಿಧಿಯಿಲ್ಲ. ಫಲಹಾರ ಕಾಫಿಗಳಾದಮೇಲೆ, ಹಾರಿಕ ಅಡಿಗೆ ಶುರುಮಾಡಿದಾಗ ಜಾನಕಮ್ಮ ಬಂದು ಮೆಲ್ಲಗೆ ಕೇಳಿದಳು “ ಅಡುಗೆ ಅಟ್ಟಕ್ಕೇರಿಸಿದರೆ ನಮ್ಮ ತಿಂಡಿ ಗತಿ ಹೇಗೇ!? ಯಾರು ಬಂದು ನೀಡುತ್ತಾರೆ?”
“ ಅದೆಲ್ಲಾ ಮೀಟಿಂಗ್ ಗಳಲ್ಲಿ ಹೇಳುತ್ತಾರತ್ತೇ.
“ ಬಿಡೇ ಸುಮ್ಮನೇ.. ಉತ್ತಮ ಪರಿಷ್ಕಾರ ತೋರಿಸದಂತೆ ಅಡುಗೆಮನೆ ಮುಚ್ಚಿಬಿಡಿ ಎಂದಿದ್ದಾರಲ್ಲೇ!”. ಬಿಡಿ ಅತ್ತೆಮ್ಮಾ “ಆ ದಿನ ನಾವಿಬ್ಬರೂ ಹೋಗಿ ಎಲ್ಲಾ ಅನುಮಾನಗಳನ್ನೂ ತೀರಿಸಿಕೊಳ್ಳೋಣ.”
“ ಅದೂ ಸರಿಯಾಗೇ ಇದೆ. ಆದರೆ, ಅಡುಗೆ ಬಿಟ್ಟುಬಿಟ್ಟರೆ ಇನ್ನ ನಮಗೆ ಯಾವ ಕೆಲಸವಿರುತ್ತದೆಯೇ?.. ಕೆಲಸವೇ ಇಲ್ಲದಾಗ ಮನೆಯೊಳಗೆ ನಮಗೇನು ಬೆಲೆಯಿರುತ್ತದೆ!”
ಅತ್ತೆಯವರ ಕಡೆಗೆ ಮರುಕದಿಂದ ನೋಡಿದಳು. “ ನಾನು ಹ್ಯಾಪಿಯಾಗಿ ಉದ್ಯೋಗ ಮಾಡುತ್ತೇನೆ. ನೀವು ಪೂಜೆಗಳನ್ನು ಮಾಡಿಕೊಳ್ಳುತ್ತಾ, ಟಿವಿಯೊಳಗೆ ಪ್ರವಚನಗಳನ್ನು ಕೇಳುತ್ತಾ ಕಾಲಕ್ಷೇಪ ಮಾಡುತ್ತಿರಿ”
“ ಮಕ್ಕಳು ಮನೆಯೊಳಗೆ ಇದ್ದರೆ ಚಾನಲ್‌ನ್ನ ಎಲ್ಲಿ ಬದಲಿಸಿಲು ಬಿಡುತ್ತಾರೆ? ನಿನ್ನ ಹುಚ್ಚುತನವೋ!” ಎಂದು ಗೊಣಗುತ್ತಾ ಹೊರಟುಹೋದಳು.
ಭಾನುವಾರದ ದಿನ ಅತ್ತೆಸೊಸೆಯರು ಮನೆಯೊಳಗೆ ಹೇಳಿ, “ ಮೀಟಿಂಗ್ ನವರೇ ನಮಗೆ ಲಂಚ್ ಆರೇಂಜ್ ಮಾಡುತ್ತಾರೆ. ನೀವು ಕೈಗಳನ್ನು ಸುಟ್ಟುಕೊಳ್ಳುತ್ತೀರೋ. ಹೋಟಲ್ ನಿಂದ ತಂದುಕೊಳ್ಳುತ್ತೀರೋ ನಿಮ್ಮ ಇಷ್ಟ ” ಎಂದು ಚಕ ಚಕನೇ ತಯಾರಾಗಿ ಹೋದರು.
ಸಮಾವೇಶಕ್ಕೆ ಆ ಸುತ್ತಮುತ್ತಲ ಮೂರು ಕಾಲೋನಿಯೊಳಗಿನ ಮಹಿಳೆಯರೆಲ್ಲಾ ಹೊರಟು ಬಂದರು. ಕ್ಷಣದೊಳಗೆ ಅದೊಂದು ಆಂದೋಳನವಾಗಿ ಬದಲಾಗಿಹೋಗಿದೆ. ನಿರ್ವಾಹಕರೊಳಗೆ ಗಂಡಸರು ಕೂಡಾ ಇರುವುದನ್ನ ನೋಡಿ ತುಂಬಾ ಆಶ್ಚರ್ಯಪಟ್ಟಳು ಹಾರಿಕ. ಬಹುಶಃ ಅವರು ಬಂಡಾಯವಾದಿಗಳೆಂದುಕೊಂಡಳು.


ಸಮಾವೇಶ ಶುರುವಾಯಿತು. ಕೆಲವರು ಮಹಿಳೆಯರು ಕರಪತ್ರದೊಳಗಿನ ವಿಷಯಗಳನ್ನೇ ತಿರುಗಿ ತಿರುಗಿ ಕಂಠಪಾಠದಂತೆ ಓದತೊಡಿದರು.
“ ಮಹಿಳೆಯರ ಶಕ್ತಿ ಸಾಮರ್ಥ್ಯಗಳು ಅನ್ನೋ ಜೀವನದಿಯ ನೀರು ಉಪ್ಪು ಸಮುದ್ರದಂತಹ ಅಡುಗೆಮನೆಯೊಳಗೆ ಯಾವಕಾಲಕ್ಕೂ ಸೇರಬಾರದೆಂದು ಈಗಲೇ ಪ್ರತಿಜ್ಞೆ ಮಾಡೋಣ.ನಾವು ನಮ್ಮ ಸಮಯದ ಪ್ರತಿ ನಿಮಿಷವು ಎಷ್ಟೋ ಬೆಲೆಯುಳ್ಳದ್ದೆಂದು ಅರಿಯೋಣ.ಇಲ್ಲಿಯತನಕ ನಮ್ಮ ಶ್ರಮಕ್ಕೂ ಚಾಕರಿಗೂ ಬೆಲೆ ಕಟ್ಟುವಂತಹ ಹೋರಾಟಗಳೇ ಹುಟ್ಟಲಿಲ್ಲ. ಆದ್ದರಿಂದ ನಾವು ಕೆಲಸಕ್ಕೆ ಬಾರದ ಅಡುಗೆ ಕೆಲಸದಂತಹ, ಗುರುತಿಸಲಾರದ ಕೆಲಸದಿಂದ ವಿಮುಕ್ತಿಹೊಂದೋಣ. ಆಗಸದೊಳಗೆ ಸಲ್ಪವಲ್ಲ ಇಡೀ ಆಗಸವೇ ನಮ್ಮದೆಂದು ನಿನಾದಿಸೋಣ…!”
“ ನಾನೂ ಸಿದ್ಧ” ಒಬ್ಬ ಮಹಿಳೆ ಎದ್ದು ಘೋಷಿಸಿದಳು. ನಿರ್ವಾಹಕರು ಆಕೆಯನ್ನು ಅಭಿನಂದನೆಗಳಲ್ಲಿ ಮುಳುಗಿಸಿದರು.
“ ಮತ್ತೆ ತಿಂಡಿ ಹೇಗೆ?” ಗಂಡಸರಿಗಷ್ಟೇ ಅಲ್ಲ ನಮಗೂ ಹಸಿವಿರುತ್ತವಲ್ಲವೇ!” ಎಷ್ಟೋ ಕೊರಳುಗಳು ಪ್ರಶ್ನಿಸಿದವು.
ಟೈ ಕಟ್ಟಿಕೊಂಡು ಸ್ಮಾರ್ಟ ಆಗಿದ್ದ ದೊಡ್ಡವನು ಮೈಕ್ ತೆಗೆದುಕೊಂಡ.
ಅಷ್ಟರೊಳಗೆ ಪೊಟ್ಯಾಟೋ, ಬೇಬಿ ಕಾರ್ನ, ಇನ್ನಿತರ ಸ್ಟರ‍್ಬರ‍್ಸ ಬಂದುಬಿಟ್ಟವು.ಎಲ್ಲರೂ ನುಗ್ಗಿ ತೆಗೆದುಕೊಂಡು ತಿನ್ನುತ್ತಾ,ಆತನ ಮಾತುಗಳಿಗೆ ತಮ್ಮ ಕಿವಿಗಳನ್ನು ಅಡವಿಟ್ಟರು.
“ ನಿಮ್ಮ ಎಲ್ಲಾ ಬಗೆಯ ಸಮಸ್ಯೆಗಳಿಗೂ ಪರಿಷ್ಕಾರವಾಗಿ ಕ್ಲೌಡ್ ಕಿಚನ್ ಬೆರಳಿಗೆಟುಕುವಂತೆಯೇ ತರುತ್ತೇವೆ.ಎಂದು ಹೇಳಿದನು ಟೈ ವಾಲಾ.
‘ ಅಡುಗೆ ಮನಿಯನ್ನು ಬೆಂಕಿ ಹಚ್ಚಿರೆಂದು’ ಹೇಳುತ್ತಾ ಮತ್ತೆ ಇವರು ಹೊಸ ಕಿಚನ್‌ನನ್ನ ನಮ್ಮ ನೆತ್ತಿ ಮೇಲೇರಿಸುತ್ತಿದ್ದಾರೇನು! ಅಂತ ಕೆಲವರು ಕೇಳಲಿಲ್ಲ, ಕಿರುಚಿದರು.
“ ಇದು ಹೆಣ್ಣುಮಕ್ಕಳ ಶ್ರಮವನ್ನು ದೋಚಿಕೊಳ್ಳುವ ಕಿಚನ್ ಅಲ್ಲ. ಯಂತ್ರಗಳ ಸಹಾಯದಿಂದ ನಡೆಯೋ ಕಿಚನ್. ರೋಬೋಗಳೊಂದಿಗೆ ನೂರಾರು ಬಗೆಯ ಅಡುಗೆಗಳನ್ನು ನಿಮಷದೊಳಗೇ ತಯಾರು ಮಾಡೋ ಸ್ಮಾರ್ಟ ಕಿಚನ್!”
“ ಅದನ್ನ ನಾವು ಕೊಂಡುಕೊಳ್ಳಬೇಕೇನು. ವಾಷಿಂಗ್ ಮಿಷನ್ ಗಿಂತಾ ಹೆಚ್ಚು ರೇಟು ಇರುತ್ತದೇನೋ ತಿಳಿದುಕೋ” ಎಂದು ಜಾನಕಮ್ಮ ಹಾರಿಕಾಳಿಗೆ ಹೇಳಿದರೆ, ಆಕೆ ಎದ್ದು ಅವರನ್ನು ಕೇಳಿದಳು.
“ ಯಾವುದನ್ನೂ, ಏನನ್ನೂ ಕೊಂಡುಕೊಳ್ಳೋ ಅಗತ್ಯವಿಲ್ಲ.ಅಡುಗೆ ತಯಾರಿಸುವುದಷ್ಟೇ ಅಲ್ಲ ನೀಡುವ ಜವಾಬ್ದಾರಿಯೂ, ಎಂಜಲು ಎತ್ತಿ ಒರೆಸಿ, ಎಂಜಲು ತಟ್ಟೆಗಳನ್ನು ತೊಳೆಯೋ ಚಾಕರಿ, ಯಾವೂ ನಿಮಗೆ ಇರಬಾರದೆಂದೇ, ಅಂತಹ ಕೆಟ್ಟ ಕೆಲಸದಿಂದ ನಿಮ್ಮನ್ನು ಪೂರ್ತಿಯಾಗಿ ವಿಮುಕ್ತಿ ಮಾಡಬೇಕೆಂಬ ಗುರಿಯಿಂದಲೇ ಈ ವಿನೂತನ ಕಾರ್ಯಕ್ರಮವನ್ನು ರೂಪಿಸಿದ್ದೇವೆ!”
ಆತನ ಮಾತುಗಳಿಗೆ ಎಲ್ಲರೂ ಶರಣಾಗತರಾದರು. ತುಂಬಾ ಜನ ಉತ್ಸಾಹದಿಂದ ಚಪ್ಪಾಳೆಗಳನ್ನು ಹೊಡೆದರು.
“ ಇದ್ಯಾವುದೋ ಅದ್ಬುತವಾಗಿಯೇ ಇದೆ. ಅದರ ಕಥೆ, ವ್ಯವಹಾರ ಬೇಗನೇ ಹೇಳಿರಿ” ಎಂದು ಮುಂದಕ್ಕೆ ಹೋಗಿ ಮತ್ತೆ ಕೇಳಿದರು ಕೆಲವು ಗೃಹಿಣಿಯರು.
ಆ ಮನೆಕೆಲಸಗಳಿಂದ ನೀವೆಷ್ಟು ಸಾಕು ಸಾಕಾಗಿ ಹೋಗಿದ್ದೀರೋ.. ನಮಗೆ ತಿಳಿದಿದೆ. “ ಇದು ನಿಮ್ಮೆಲ್ಲರಿಗೂ ಬಂಗಾರದಂತಹ ವರ ಎಂದು ಮನವಿ ಮಾಡಿಕೊಳ್ಳುತಿದ್ದೇನೆ……”
“ ಇವರು ಅಸಲಿ ಪಾಯಿಂಟ್ ಹೇಳುತ್ತಿಲ್ಲವೇಕೆ? ” ಹಾರಿಕ ಅನುಮಾನಿಸಿದಳು.


“ ಅಲ್ಲಿಗೇ ಬರುತ್ತಿರುವೆ. ನಾವು ಆರ್ಡರ್ ನೀಡಿದರೆ ಸ್ವೀಗಿ,ಜೊಮೋಟೋ ಅವರು ಬಿಸಿ ನೀಡುತ್ತೇವೆ. ಸಿಟಿಯ ನಾಲ್ಕೂ ಭಾಗಗಳಲ್ಲಿ ‘ಕ್ಲೌಡ್ ಕಿಚನ್’ ಏರ್ಪಾಟು ಮಾಡುತ್ತೇವೆ. ಮೂರು ,ನಾಲ್ಕು ಕಾಲನಿಗಳಿಗೆ ಒಂದು ಕಡೆಗೆ ಡೆಲಿವರಿ ಪಾಯಿಂಟ್ ಇರುತ್ತದೆ. ಅಂದ್ರೆ ‘ ಸ್ಮಾರ್ಟ ಕಿಚನ್ ‘ ಏರ್ಪಾಡು ಮಾಡಿ, ಅಲ್ಲಿಂದ ಮನೆ ಮನೆಗೆ ಸಪ್ಲೈ ಮಾಡುತ್ತೇವೆ. ಯಾವ ದಿನಕ್ಕೆ ಯಾವ ಸೊಪ್ಪುಗಳು, ತರಕಾರಿಗಳು,ಅನ್ನ ಚಪಾತಿ, ರೊಟ್ಟಿ ವಗೈರಾ ಏನು ಎಷ್ಟು ಬೇಕಾಗುವುದೋ ಮೊದಲ ದಿನವೇ ಆರ್ಡರ್ ನೀಡಿದರೆ ಸಾಕು, ಆ ಮೆನು ಪ್ರಕಾರ ತಂದುಕೊಡುತ್ತೇವೆ.”
“ ಭೋಜನದ ವಿಷಯ ಸರಿಯಯ್ಯಾ, ಕಾಫೀ ಟಿಫಿನ್ ಗಳ ವಿಷಯವೇನು? ನಮ್ಮ ಮಕ್ಕಳಿಗೆ ಒಬ್ಬರಿಗೆ ಹಿಡಿಸಿದ್ದು ಇನ್ನೊಬ್ಬರಿಗೆ ಹಿಡಿಸದು. ಎರೆಡು ಮೂರು ಬಗೆಗಳನ್ನು ಮಾಡಲಾರದೇ ಸತ್ತುಹೋಗುತಿದ್ದೇನೆ!” ಬೊಬ್ಬೆ ಹೊಡೆದಳು ಒಬ್ಬ ಹೆಂಗಸು.
ಇನ್ನು ನಿಮಗೆ ಆ ಬಗೆಯ ಯಾತನೆಗಳು ಇರವು ಬಿಡಿ. ಅಸಲು ಅಂತಹ ಆಲೋಚನೆಯನ್ನೇ ಮರೆತು ಬಿಡಿ.ಒಬ್ಬೊಬ್ಬರಿಗೆ ಒಂದೊಂದು ಯೂನಿಟ್ ನಂತೆ ಭಾವಿಸುತ್ತೇವೆ. ಯಾರು ಕೇಳಿದ್ದು ಅವರ ಹೆಸರಿನೊಂದಿಗೇ ಪ್ಯಾಕಟ್ ಆಗಿ ಮನೆಗೇ ಬಂದು ಬಿಡುತ್ತದೆ. ತಿಂದು, ಖಾಲಿ ಬಾಕ್ಸಗಳನ್ನು ಡಸ್ಟ ಬಿನ್ ನೊಳಗೆ ಹಾಕುವುದೇ. ವೆರಿ ಸಿಂಪಲ್!”
ಹಾರಿಕಾಳೊಂದಿಗೆ ಎಲ್ಲರ ಮುಖಗಳೂ ಅರಳಿಕೊಂಡವು.
“ ನಿಮ್ಮ ಮಾವನವರಿಗೆ ಉಪ್ಪು ಕಡಿಮೆಯಾಗಿ ಇರಬೇಕು. ನಾನೇನೋ ಸಕ್ಕರೆ ತಿನ್ನಬಾರದು. ಏನು ಮಾಡುತ್ತಾರೋ ತಿಳಿದುಕೊಳ್ಳೇ” ಸೊಸೆಯ ರಟ್ಟೆ ಹಿಡಿದುಕೊಂಡು ಮತ್ತೆ ಏಳಿಸಿದಳು ಜಾನಕಮ್ಮ. ಕೇಳದೇ ವಿಧಿಯಿಲ್ಲ ಆಕೆಗೆ.
ನಕ್ಕನು ಆತ. “ ಇದರೊಳಗೆ ಕನಪ್ಯೂಜನ್ ಗೆ ಅವಕಾಶವೇ ಇಲ್ಲ. ಯಾರಿಗೆ ಹೇಗೆ ಬೇಕಾಗಿದೆಯೋ ಅಕ್ಷರಶಃ ಹಾಗೇ ತಂದುಕೊಡುತ್ತೇವೆ. ಪ್ರತಿಯೊಬ್ಬರ ಟೇಸ್ಟ
ನ್ನು ಗೌರವಿಸುತ್ತೇವೆ. ಇಂಡಿವಿಜಿವಲ್ ಕೇರ್ ಕನ್ಸರ್ನ ಇರುತ್ತದೆಂದು ೧೦೦% ಭರವಸೆ ನೀಡುತ್ತಿದ್ದೇವೆ.
“ ಒಂದುವೇಳೆ ಸಡನ್ ಆಗಿ ಮನೆಗೆ ಬಂಧುಗಳು ಬಂದು ವಕ್ಕರಿಸಿದರೆ?” ಒಬ್ಬರು ಸಂದೇಹ ಬೆಳಗಿಸಿದರು.
“ ಅದಕ್ಕೆ ಎಮರ್ಜೆನ್ಸಿ ಆರ್ಡರ್ ನೀಡಬಹುದು. ಪೀಜ್ ಸ್ವಲ್ಪ ಜಾಸ್ತಿಯಾಗುವುದಷ್ಟೇ. ಮಾರನೇ ದಿನದಿಂದ ಮಾಮೂಲು ಆರ್ಡರ್ ನೊಳಗೇ ಅವರನ್ನು ಸೇರಿಸಿಕೊಳ್ಳಬಹುದು.”
ಒಬ್ಬ ಓತಿನ ಗಡ್ಡದವನು ಮೈಕು ಮುಂದಕ್ಕೆ ಬಂದನು. “ ಚಿಕ್ಕ ಮಗುವಿನ ಹಾಲಿನಿಂದ ಹೊಸ ದಂಪತಿಗಳ ಹಾಲಿನ ತನಕ, ರೋಗಿಗಳಿಂದ ಬಾಣಂತಿಯರ ತನಕ ಎಲ್ಲರಿಗೂ ಎಲ್ಲಾ ವಿಧದ ಆಹಾರವನ್ನು ಆನಂದದಾಯಕ ಧರಗಳಲ್ಲಿ ನೀಡಲಾಗುತ್ತದೆ.” ಅಂದನು.
“ ರುಚಿ ಇಲ್ಲದೇ ಹೋದರೆ ಏನುಮಾಡಬೇಕು” ಧರ್ಮ ಸಂಕಟವನ್ನು ತೋಡಿಕೊಂಡಳೊಬ್ಬಳು.
“ ಅಂತಹ ಭಯ ಬೀಳುವ ಅಗತ್ಯವೇ ಇಲ್ಲ. ಅಸಲು ಅಂತಹ ಸಾಧ್ಯತೆಗಳಿಗೆ ಅವಕಾಶವೇ ಇಲ್ಲ. ಅಡುಗೆ ಮಾಡುವುದು ಮನುಷ್ಯರಲ್ಲ, ರೋಬೋಗಳು. ಯಾರ ಅಭಿರುಚಿಗೆ, ಅಗತ್ಯಗಳಿಗೆ ತಕ್ಕಂತೆ ಅವರಿಗೆ ಪ್ರತ್ಯೇಕವಾಗಿ ತಯಾರಿಮಾಡಲಾಗುತ್ತದೆ. ತಿಂಗಳಿಗೆ ಒಂದು ಸಾರಿ ಬಿಲ್ಲು ಬರುತ್ತದೆ. ಆಸಕ್ತಿ ಇರುವವರು ಈಗಲೇ ಸೇರಿಕೊಳ್ಳಬಹುದು” ಎನ್ನುತ್ತ ಅಪ್ಲಿಕೇಶನ್ ಗಳನ್ನು ಹಂಚುತ್ತಾ ಹೋದನು.
“ ಇದ್ಯಾವುದೋ ಚನ್ನಾಗಿಯೇ ಇದೆಯೇ… ನಿಮ್ಮ ಮಾವನವರು ಹೊಸ ರುಚಿಗಳು ಅಂದ್ರೆ ಬಿದ್ದು ಸಾಯುತ್ತಾರೆ.” ನಕ್ಕಳು ಜಾನಕಮ್ಮ.
“ ನಿಮ್ಮ ಮಗ ಏನಂತಾರೋ!” ಚುಚ್ಚುವ ಅನುಮಾನದಿಂದ ಹೇಳಿದಳು ಹಾರಿಕ.
“ ಅವನ ಮುಖ! ಅಡುಗೆ ಕುರಿತು ಏನಾದರೂ ಅನ್ನಲಿಕ್ಕೆ ಅವನಿಗೆ ಏನುತಿಳಿದಿದೆಯಂತೆ! ಆದರೂ ಅಡುಗೆ ವಿಚಾರ ನಮ್ಮದು. ಗಂಡುಮಕ್ಕಳಿಗೇನು ಸಂಬಂಧವಿಲ್ಲ. ಅಷ್ಟೊಂದು ಗಲಾಟೆ ಮಾಡಿದರೆ ನಾವು ನಾಲ್ವರೊಂದಿಗೆ ನಾರಾಯಣ ಎಂದೆವೆಂದು ಹೇಳಬಹುದು ಬಿಡು. ಬಗೆ ಬಗೆಗಳ ತಿನ್ನದೆಯೇ ಬಾಯಿ ಕಟ್ಟಿಕೊಂಡು ನಾವು ಮಾತ್ರ ಎಷ್ಟುದಿನ ಇರಬಲ್ಲೆವು ಹೇಳು!”
“ ಮನೆಯೊಳಗೆ ಎಲ್ಲರೊಂದಿಗೆ ಆಲೋಚಿಸಿ ನಾಳೆ ಹೇಳೋಣ ಅತ್ತೆಮ್ಮಾ. ಲಂಚ್ ಎಲ್ಲಿ ಅರೇಂಜ್ ಮಾಡಿದ್ದಾರೋ!” ಎಂದು ಸುತ್ತೂ ತಿರುಗಿ ನೋಡಿದಳು.
ಇಷ್ಟರೊಳಗೆ ಓತಿನ ಗಡ್ಡದವನು ಮತ್ತೆ ಮೈಕ್ ತೆಗೆದುಕೊಂಡನು. “ಗಮನೀಯ ಪ್ರಾರ್ಥನೆ. ಈದಿನ ಸೇರಿದವರಿಗೆಲ್ಲಾ ಐದು ಸಾವಿರದ ರೇಷ್ಮೆ ಸೀರೆ ಉಚಿತವಾಗಿ ನೀಡಲಾಗುತ್ತದೆ. ಸ್ಟಾಕ್ ಇರುವತನಕ ನೀಡುವುದು ಎಂದನು.”
ಮರು ಕ್ಷಣವೇ ಮೀಟಿಂಗ್ ಮೇಳವಾಗಿ ಬದಲಾಯಿತು. ಜನ ಅಪ್ಲಿಕೇಷನ್ ಹಂಚುತ್ತಿರುವವರ ಮೇಲೆ ಮೇಲೆ ಬಿದ್ದು ಸೆಳೆದುಕೊಂಡರು.
ನಮಗೆ ಎರಡು ಬರಿಯೇ.. ಹಾರಿಕಾ. ಎರೆಡು ರೇಷ್ಮೆ ಸೀರೆಗಳು ಬರುತ್ತವೆ. ನನಗೆ ಮಾತ್ರ ಕನಕಾಂಬರ ಬಣ್ಣದ್ದು ತೆಗೆದುಕೊಳ್ಳಬೇಕು. ಮೊದಲೇ ಹೇಳುತ್ತಿರುವೆ” ಜಾನಕಮ್ಮ ಷರತ್ತು ವಿಧಿಸಿದಳು.
“ ನಿಮಗೂ ಮಾವಯ್ಯನವರಿಗೂ ಸೇರಿಸಿ ಒಂದು ಪಾರಂ. ನಮ್ಮೆಲ್ಲರಿಗೂ ಇನ್ನೊಂದು.”
“ ಅಮ್ಮೋ ನನ್ನ ಸೊಸೆ ಎಷ್ಟು ತಿಳಿದವಳೋ!” ಕರಗಿಹೋದಳಾಕೆ.
ರೇಷ್ಮೆ ಸೀರೆಗಳನ್ನ ಹಿಡಿದುಕೊಂಡು ಪ್ರಪಂಚವನ್ನು ಜಯಿಸಿದವರಂತೆ ಕೂಗುತ್ತಾ ಮನೆಗೆ ಬಂದು ಇಬ್ಬರೂ..ಸೋಫಾದೊಳಗೆ ಆಸೀನರಾದರು. ಜಗನ್ನಾಥ ಕನ್ನಡಕದ ಒಳಗಿಂದ ನೋಡುತ್ತಾ ಕಣ್ಣೆಗರಿಸಿದರು.
“ ಅಡುಗೆ ಗಿಡುಗೆ ಈ ಒಂದು ದಿನಕ್ಕೇ…! ನಾಳೆಯಿಂದ ಎಲ್ಲಾ ‘ಕ್ಲೌಡ್ ಕಿಚನ್’ ನಿಂದ ನಡೆದು ಬರುತ್ತವೆ. ಯಾರಿಗೆ ಏನು ಬೇಕೋ ಏಳು ಗಂಟೆಗಳೊಳಗೆ ಇಂಡೆಂಟ್ ನೀಡಬೇಕು. ಮಕ್ಕಳೇ ನೀವೂ ಕೂಡಾ.!” ಗಂಡ ಏನನ್ನುತ್ತಾನೋ ಅಂತ ಅತನಿಗೂ ಭಯಪಡುತ್ತಲೇ ಹೇಳಿದಳು ಹಾರಿಕಾ.
“ ವಾವ್! ಏನನ್ನಾದರೂ ಬರೆಯಬಹುದಾ ಮಮ್ಮೀ” ಶ್ಯಾಮ್ ಕೇಳಿದನು. ಹಾರಿಕಾ ತಲೆ ದೂಗಿದಳು.
“ ಇದೆಲ್ಲಾ ಏನು.? ನಿಮಗೆಲ್ಲಾ ಹುಡುಗಾಟವಾದಂತಿದೆ. ಕುಟುಂಬಕ್ಕಾಗಿ ಅಡುಗೆ ಕೂಡಾ ಮಾಡಲಾರದಂತಹ ಕೆಲಸಗಳೇನಿವಿಯೋ.. ನಿಮಗೆ?” ಜೋರು ಧ್ವನಿಯೆತ್ತಿ ಕೇಳಿದ ಶ್ರೀಪತಿ.
“ ಈಗಿಲ್ಲವೆಂದರೆ ಎಂದಿಗೂ ಇರದಂತೆಯೇ ಹೋಗುತ್ತವಾ! ನಾಳೆನೋ ಮುಂದೆಯೋ ನಾನು ಉದ್ಯೋಗಕ್ಕೆ ಸೇರಿಕೊಳ್ಳುತ್ತೇನೆ.” ಅಷ್ಟೇ ದೊಡ್ಡ ಸ್ವರದಲ್ಲಿ ಹೇಳಿದಳು ಹಾರಿಕಾ.
ಅವಕ್ಕಾದನು ಶ್ರಿಪತಿ. “ ಮೊದಲು ಸೇರು. ನಂತರ ಏನು ಮಾಡಬೇಕೋ ಆಲೋಚಿಸೋಣ. ಇದು ಅಂದುಕೊಂಡಷ್ಟು ಸುಲಭ ವ್ಯವಹಾರವಲ್ಲ. ಸೀರೆಗಳನ್ನ ನೀಡಿದ್ದಾರೆಂದು ಕಂಕುಳಿಗೆ ಕಟ್ಟಿಕೊಂಡರೆ ಸಾಲದು. ಇದನ್ನ ತುಂಬಾ ಸೂಕ್ಷ್ಮವಾಗಿ ಆಲೋಚಿಸಬೇಕು. ವಿಶ್ಲೇಷಿಸಿಕೊಳ್ಳಬೇಕು!”
“ ಕೇಳಿದಿರಾ ಅತ್ತೆ. ನಾವು ಅಡುಗೆ ಮನೆ ಗೋಡೆಗಳನ್ನೇ ಬಿಗಿಯಾಗಿ ಹಿಡಿದುಕೊಂಡು ಜೂಕಾಡುತ್ತಿರಬೇಕಂತೆ! ಗಂಡು ದುರಹಂಕಾರ!” ಮೂಗಿನ ಕೆಂಡವನ್ನ ಎರಚಲು ನಿಂತಳು ಹಾರಿಕ.
“ ಅದಲ್ಲವೋ ಮಗನೇ. ನಾವೇ ಅಲ್ಲ ಕಾಲನಿಯವರೆಲ್ಲಾ ಸೇರಿರುವರೋ…”
“ ನೀನಿರಮ್ಮಾ. ಅವರ ರೇಟು ಗೀಟುಗಳೇನೋ, ಕಂಡೀಷನ್ ಗಳು ಏನೋ ತಿಳಿದುಕೊಳ್ಳಲಾಗದೇ ಹಿಂದೂ ಮುಂದು ನೋಡದೇ ಆಲೋಚಿಸಸದೇ ದುಬಕ್ಕೆಂದು ಕುರಿಗಳಂತೆ ಸೇರಿಕೊಳ್ಳುವುದೇ!”
ಒಂದು ಬುಕ್ಲೆಟ್ ತೆಗೆದು ಪಟ್ಟನೇ ಆತನ ಕೈಗಳಲ್ಲಿ ಇಟ್ಟಳು ಹಾರಿಕ.
“ ಇದನ್ನ ಓದಿಕೊಳ್ಳಿ. ಎಲ್ಲಾ ವಿವರಗಳು ಇವೆ. ನಮ್ಮನ್ನ ಕೀಳಾಗಿ ಅಳೆಯಬೇಡಿ. ನಿಮಗಿಂತಲೂ ಹೆಚ್ಚಾಗಿ ಲೆಕ್ಕ ಹಾಕಿದ್ದೇವೆ. ಎಷ್ಟು ಹೇಗೆ ತಿಂದರೂ ಖರ್ಚು ಈಗ ಆಗುತ್ತಿರುವುದಕ್ಕಿಂತಾ ತುಂಬಾ ಕಡಿಮೆ ಆಗುತ್ತದೆ. ಕನಿಷ್ಟ ಶೇಕಡ ಮುವತ್ಮೂರು ಖರ್ಚು ಉಳಿಯುತ್ತದೆ. ಏನಕ್ಕಾದರೂ ಇನ್ನೊಂದು ಲೋನು ತೆಗೆದುಕೊಂಡು ಇ.ಎಂ.ಐ. ಕಟ್ಟಿ ಹ್ಯಾಪಿಯಾಗಿ ಇರಬಹುದು.
‘ ಅಷ್ಟು ಚಿಕ್ಕ ಉಳಿತಾಯಕ್ಕೆಲ್ಲಾ ಲೋನು ನೀಡಲಿಕ್ಕೆ ಅದೇನು ಅತ್ತೆ ಮನೆಯೇ!’ ಕೊಂಕುನುಡಿದನು.
“ ಅವರು ಕಡಿಮೆ ಧರಗಳಿಗೆ ಕೊಳ್ಳುತ್ತಾರಂತೋ ಮಗನೇ. ಇನ್ನ ಕೆಲಸದ ಹುಡುಗಿಯ ಅವಶ್ಯಕತೆಯಿಲ್ಲ. ಆ ಖರ್ಚು ಉಳಿದುಬಿಡುತ್ತದೆ. ರೂಮ್ ಕ್ಲೀನರ್ ಕೊಂಡರೆ ಸಾಕು. ಮನೆ ಗುಡಿಸೋ ಕೆಲಸ ಕಡಿಮೆಯಾಗುತ್ತದೆ.” ಸಂಗತಿಗಳನ್ನ ಉಫ್ ಎಂದು ಊದಿಬಿಟ್ಟಳು ಜಾನಕಮ್ಮ.
“ ನನಗೆ ಸ್ಪೆಷಲ್ ಪುಡ್ ಬೇಕೆಂದರೆ ಹೇಗೇ” ಕೇಳಿದರು ಜಗನ್ನಾಥ.
“ ಯಾರಿಗೆ ಏನು ಬೇಕಾಗುತ್ತೋ ಅದನ್ನ ಕಳಿಸುತ್ತಾರೆ ಮಾವಯ್ಯಾ. ನಿಮ್ಮ ಅಡಿಗೆಯೊಳಗೆ ಸಾಲ್ಟ್ ಕಡಿಮೆಯಾಗಿಸಬೇಕೆಂದು ಬೆರೆದುಕೊಡಲೇ !” ಅತ್ತೆಯವರ ಕಡೆಗೆ ನೋಡಲು, ನಗುತ್ತಾ, ಸಂಭ್ರಮದಿಂದ ತಲೆಯಾಡಿಸಿದಳು ಅತ್ತೆ.
“ ಅಡುಗೆ ಕೆಲಸ ಬಿಟ್ಟು ಟಿ.ವಿ.,ಓಟಿಪಿ ಚಾನಲ್ ಗಳನ್ನು ಪೋಷಿಸಬೇಕೆಂದು ಡಿಸೈಡ್ ಆಗಿ ಹೋಗಿದ್ದೀರನ್ನೋ ಮಾತು!” ಕೋಪದಿಂದ ಹೇಳಿದನು ಶ್ರೀಪತಿ.
“ ಉದ್ಯೋಗಳನ್ನ ಮಾಡುತ್ತೇವೆ!” ಠಕ್ಕನೇ ಉತ್ತರ ನೀಡಿದಳು ಹಾರಿಕ.
“ ಅದು ಈಗಲೂ ಮಾಡಬಹುದಲ್ಲವೇ. ನಮ್ಮ ತಮ್ಮನೂ ಸೊಸೆಯೂ ಮಾಡುತ್ತಿಲ್ಲವೇ. ಚಂದಾಗಿ ಎರಡು ಸಂಬಳ ಬರುತ್ತವೆ!”
“ ಮಹಾರಾಜರೇ! ಅಡಿಗೆಮನೆಯೊಳಗೆ ಇಣುಕಿ ನೋಡರಲ್ಲವೇ! ಎರಡು ಕೆಲಸಗಳನ್ನು ಮಾಡುವುದು ನಮ್ಮಿಂದ ಆಗಲ್ಲ. ನಮಗೇನೂ ನೂರು ಕೈಗಳಿಲ್ಲ. ಇದ್ದರೂ ಮಾಡಲಾರೆವು. ಸುದ್ದಿಗಳನ್ನು ಕಟ್ಟಿಟ್ಟು, ಅಮೇರಿಕಾದೊಳಗಿನ ನಮ್ಮ ಅಣ್ಣನಂತೆಯೇ ನೀವೂ ಅಡುಗೆ ಕೆಲಸ, ಮಕ್ಕಳ ಕೆಲಸ, ಬಜಾರು ಕೆಲಸ ಎಲ್ಲಾ ಹಂಚಿಕೊಳ್ಳುತ್ತೇನೆಂದರೆ ನಾನು ಹಾಯಾಗಿ ಉದ್ಯೋವನ್ನು ಮಾಡುವೆನು!” ಹೊಡೆತಕೊಟ್ಟಳು.
“ ಯಾರು ಮಾಡಬೇಡವೆಂದರೇ. ದಿನವೂ ಸಿಟಿ ಬಸ್ಸಿನೊಳಗೆ ಬೀಳುತ್ತಾ ಏಳುತ್ತಾ ಹೋಗಲಾರೆನು. ಮನೆಯನ್ನು ಮಕ್ಕಳನ್ನು ನೋಡಿಕೊಳ್ಳುವುದಕ್ಕಿಂತ ಆ ಮುಷ್ಟಿ ರುಪಾಯಿಗಳು ಹೆಚ್ಚಾ!- ಅಂತಾ ವಿವಾಹವಾದೊಡನೇ ಜಾಬ್’ಗೆ ನೀನೇ ರಿಜೈನ್ ಮಾಡಿಲ್ಲವೇ!”
“ ಆಗ ಬೇರೆ. ಮಕ್ಕಳಿಗೆ ನನ್ನ ಅಗತ್ಯ ಎಷ್ಟೋ ಇತ್ತು. ಈಗ ಮಕ್ಕಳು ಬೆಳೆದಿದ್ದಾರೆ ಅವರಿಗೆ ನನ್ನ ಅಗತ್ಯ ಅಷ್ಟಾಗಿ ಇಲ್ಲ. ತಲೆಯಿಂದ ಅವರ ಭಾರ ಇಳಿದುಹೋಗಿದೆ ಆದ್ದರಿಂದ ಎಲ್ಲೋ ಒಂದು ಕಡೆ ಜಾಬ್ ಮಾಡುತ್ತೇನೆ. ನಿಮ್ಮೊಂದಿಗೆ ಸಮಾನವಾಗಿ ಸಂಪಾದಿಸುವೆ” ಖಚಿತವಾಗಿ ಹೇಳಿದಳು.
“ ಹಾಗೋ.. ಸಂಪಾದಿಸು. ನಾನೂ ಅಡುಗೆಗೆ ಸಹಾಯ ಮಾಡುತ್ತೇನೆ. ಅಷ್ಟೇ ಅಲ್ಲದೆ ಆ ಸ್ಕೀಮುಗಳು ಬೇಡ, ಆ ಫಾಸ್ಟ್ ಪುಡ್ ಗಳೂ ಬೇಡ. ಮನೆಯ ಊಟವೇ ಆರೋಗ್ಯಕ್ಕೆ ಒಳ್ಳೆಯದು ವಿನಃ ಪ್ರಾಸಸ್ಡ ಮೀಲ್ಸ ಅಲ್ಲ. ಈ ಕಾರ್ಪೋರೇಟ್ ಗಳು ಹೆಂಡದ ಕಪ್ಪು ನೀಡಿ ತಾಳೆಮರವನ್ನೇ ಕಿತ್ತುಕೊಳ್ಳುತ್ತಾರೇ. ಲಾಭ ಇಲ್ಲದಂತೆ ಇಷ್ಟು ದೊಡ್ಡ ಉದ್ದಿಮೆ ಪ್ರಾರಂಭಿಸರು. ಹೀಗೆ ಪ್ರಚಾರಗಳಿಂದ ಅಲುಗಾಡಿಸರು. ನಾಳೆಯೋ ನಾಡಿದ್ದೋ ಒಬ್ಬ ಸಿನಿಮಾ ನಟನೊಂದಿಗೆ ಪ್ರಚಾರ ಮಾಡಿಸಿದರೂ ಆಶ್ಚರ್ಯಪಡುವಹಾಗಿಲ್ಲ. ದೊಡ್ಡ ದೊಡ್ಡ ವ್ಯಾಪಾರಿಗಳು ತೋರಿಸುವ ಪ್ರೇಮ ನಿಜವಲ್ಲವೇ. ಅವರು ನಾಜೂಕಾಗಿ ಹೆಣೆದ ಬಣ್ಣ ಬಣ್ಣದ ದಾರಗಳ ನೇಣುಗಳವು….!”
ಹೆಣ್ಣುಮಕ್ಕಳು ಶ್ರೀಪತಿ ಭಯಗಳಿಗೆ ಬಿದ್ದು ಬಿದ್ದು ನಕ್ಕರು. “ ನೀವಿಷ್ಟು ಅಮಾಯಕರೇನು! ಅಷ್ಟೂ ತಿಳಿಯದೇ ಸಾವಿರಾರು ಜನ ಸೇರಿರುವರಾ!”
“ ಏನೋ ಮಾತಿಗಾಗಿ ಅನ್ನುತ್ತಿರುವೆ ಅಲ್ಲದೆ, ಅಡುಗೆ ನಿಮ್ಮಿಂದ ಎಲ್ಲಿ ಆಗುತ್ತದೆಯೋ! ನಿಮ್ಮ ಅಪ್ಪನಿಗೆ ಅಡುಗೆ ಮನೆ ಯಾವ ಮೂಲೆಯಲ್ಲಿದೆ ಎಂಬುದು ಕೂಡಾ ತಿಳಿಯದು.!” ನಕ್ಕಳು ಜಾನಕಮ್ಮ.
“ ಸುಮ್ಮನೇ ನನ್ನನ್ನು ಎತ್ತಿ ಆಡಿಕೊಳ್ಳದಿರು. ನಾನು ಸಂಪಾದಿಸಿ ತಂದಿದ್ದೇನೆ ಆದ್ದರಿಂದ ನೀನು ಅಡುಗೆ ಮಾಡುತ್ತೀಯ. ಕುಟುಂಬಕ್ಕಾಗಿ ನಾನೊಂದು ಕೆಲಸ ಮಾಡಿದರೆ, ನೀನೇ ಕೆಲಸ ಮಾಡಿದ್ದೀಯ. ಯಾರೂ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ, ಅದನ್ನೇ ಡಿವಿಜನ್ ಆಫ್ ಲೇಬರ್ ಅನ್ನುತ್ತಾರೆ ಗೊತ್ತಾ!” ಹರಿಹಾಯ್ದರು ಜಗನ್ನಾಥ.
“ಇಷ್ಟುದಿನ ನಾವು ಅಡುಗೆ ಮಾಡಿದೆವಲ್ಲವೇ, ಇನ್ನ ನೀವು ಮಾಡಿರಿ, ನಾವು ಸಂಪಾದಿಸುತ್ತೇವೆ.” ಹಾರಿಕ ಅಷ್ಟೇ ಜೋರಾಗಿ ಪ್ರತ್ಯುತ್ತರನೀಡಿದಳು.
“ ಹಾರಿಕಾ, ಕಾಲ ಬದಲಾಗುತ್ತಿದೆ ಕಣೇ..!.ನಮ್ಮ ರೋಡ್ ಕಾರ್ನರ್ ನೊಳಗೆ ಇರುವ ಸತೀಷ್ ಪತ್ನಿ ಸಾಪ್ಟವರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ. ಆತನು ಮನೆ ಕೆಲಸವನ್ನು ಮಾಡುತಿದ್ದಾನೆ. ಹೌಸ್ ಹಸ್ಬೆಂಡ್ ಅಂತಾ ಗರ್ವದಿಂದ ಹೇಳುತ್ತಾನೆ. ಅಗತ್ಯಕ್ಕೆ ಅನುಗುಣವಾಗಿ ಕೆಲಸಗಳೂ ಜವಾಬ್ದಾರಿಗಳೂ ಪಾತ್ರಗಳೂ ಬದಲಾಗುತ್ತಿರುತ್ತವೆ!”
“ ಈಗ ಕಂಠ ಶೋಷಣೆ ಯಾಕೆ? ಮಗನೇ ಬಿಡು ಬಿಡು, ಆಗಲೇ ಫಾರಂ’ಗೆ ಸಹಿಯನ್ನು ಹಾಕಿಬಿಟ್ಟಿದ್ದೇವೆ. ಇನ್ನೇನೂ ಮಾಡಲಾರೆವು!” ಕೆನ್ನೆ ಅರಳಿಸಿದಳು ಜಾನಕಮ್ಮ.
“ಸರಿ, ಬರೆದುಕೊಟ್ಟಿದ್ದೀರಂತೀರಾ… ಪ್ರಸ್ತುತಕ್ಕೆ ಹಾಗೆ ಮಾಡೋಣ.ಯಾವಾಗ ತೊಂದರೆ ಬರುತೋ ಆಗ ಕ್ಲೌಡ್ ಕಿಚನ್ ಬಿಟ್ಟುಬಿಡೋಣ.!” ಅಪ್ಪನ ಮಾತುಗಳಿಗೆ ಶ್ರೀಪತಿ ನಿಸ್ಸಹಾಯಕವಾಗಿ ನೋಡಿದರೆ, ಉಳಿದವರೆಲ್ಲಾ ಮಹಾದಾನಂದ ಪಟ್ಟರು.
“ ಒಪ್ಪಿಕೋ ಡ್ಯಾಡಿ “ ಮಕ್ಕಳು ಹಿಂದೆ ಬಿದ್ದರು. ತಲೆಯಾಡಿಸದೇ ತಪ್ಪಲಿಲ್ಲ.
ಆ ಮರುದಿನದಿಂದ ಹೊಸ ಅಧ್ಯಾಯ ಪ್ರಾರಂಭವಾಯಿತು.
ಹಾಯಾಗಿ ಏಳುಗಂಟೆಗೆ ಏಳೋ ವೇಳೆಗೆ ಬಿಸಿ ಬಿಸಿ ಟಿಫಿನ್ ಗಳು, ಕಾಫಿಗಳು ಬಂದುಬಿಟ್ಟವು. ಸ್ಟಾರ್ ಹೋಟಲ್ ಹಾಗೆಯೇ ಇರುವವೆಂದು ಇಷ್ಟಪಡುತ್ತಾ ತಿಂದರು.
ಕೆಲಸದವನನ್ನ ಸಾಗಹಾಕಿದರು. ಹಾಲು ಪ್ಯಾಕೆಟ್ ಬೇಡವೆಂದರು. ಕಿರಾಣಿ ಅಂಗಡಿ ಖಾತೆಗೆ ಮುಕ್ತಾಯ ಹಾಡಿಬಿಟ್ಟರು. ತರಕಾರಿಯವರನ್ನು ತಮ್ಮ ಮನೆ ಕಡೆಗೆ ಬರಬೇಡವೆಂದು ಹೇಳಿಬಿಟ್ಟರು.
ಯಾವ ಬಗೆಯ ಜವಾಬ್ದಾರಿಗಳೂ ಇಲ್ಲದೇ ಇದ್ದರಿಂದ ಮಹಿಳೆಯರ ಜೀವ ಎಷ್ಟೋ ಹಾಯಾಗಿ ಕೈತುಂಬಾ ಬೇಕಾದಂತಹ ಟೈಮ್ ಉಳಿಯತೊಡಗಿತು.
ಹಾರಿಕ ತನ್ನ ಮಕ್ಕಳು ಓದುತ್ತಿರುವ ಸ್ಕೂಲಿಗೆ ಹೋಗಿ ಪ್ರಿನ್ಸಿಪಾಲರನ್ನ ಕಂಡಳು. “ ಇದುವರೆಗೆ ಟೀಚರ್ ಆಗಿ ಸೇರೆಂದು ಆಫರ್ ನೀಡಿದ್ದರು. ಈಗ ಆಕೆಯೇ ಸೇರುತ್ತೇನೆ ಸಾರ್ ಅಂದಳು”
ಅವರು “ ಸಾರಿ ಇದೋ ಇವಿಷ್ಟೂ ಉದ್ಯೋಗಕ್ಕಾಗಿ ನಿಮ್ಮಂತವರು ನೀಡಿದ ಅಪ್ಲಿಕೇ಼ಷನ್ ಗಳೇ!” ಎನ್ನುತ್ತಾ ತಾತ್ಸಾರ ತೋರಿಸಿದರು.
ಯಾವ ಇಂಟ್ರೂö್ಯಗೆ ಹೋದರೂ ಸಾವಿರಾರು ಜನ ಮಹಿಳೆಯರು ಪೈಪೋಟಿಗೆ ಬಿದ್ದು ಬರುತ್ತಿದ್ದಾರೆ.
‘ ಗೃಹಿಣಿಯರೆಲ್ಲಾ ಉದ್ಯೋಗಗಳಿಗೆ ನುಗ್ಗುತ್ತಿರುವುದರಿಂದ ನಿರುದ್ಯೋಗ ಸಮಸ್ಯೆ ಹತ್ತು ಶತ ಬೆಳೆದು ಭೂತವಾಗಿ ನರ್ತಿಸುತ್ತಿದೆ’- ಅಂತಾ ಪೇಪರ್ ನೊಳಗೆ ಟಿ.ವಿ.ಯೊಳಗೆ ವಿಶೇಷ ಸುದ್ಧಿಯ ಕಥನಗಳು ಬರುತ್ತಿವೆ!
ಹೇಗೋ ಕಷ್ಟ ಬಿದ್ದು ಜಾಬ್ ಸಂಪಾದಿಸಿದಳು ಹಾರಿಕ. ಸಂಬಳ ಕಡಿಮಿಯಾದರೇನು ಅಂತೂ ಗೆದ್ದೆನೆಂದು ಪೋಜು ನೀಡಿದಳು.
ಮನೆ ಮನೆಗಳೊಳಗಿನ ಟ್ರಾಷ್ ರಟ್ಟಿನ ಡಬ್ಬಿಗಳು, ಬಾಕ್ಸಗಳು ಇತ್ಯಾದಿಗಳ ಕಸ ಬೆಳೆದಿದ್ದರಿಂದ ಕಸದ ಹುಡುಗ ರೇಟು ಏರಿಸಿದ. ಇಲ್ಲಿಯತನಕ ರಿಕ್ಷಾದೊಳಗೆ ಕಸ ಹಾಕಿಕೊಂಡು ಹೋಗುತ್ತಿದ್ದವನು, ಈಗ ಮಿನಿ ಟ್ರಕ್ ಓಡಿಸುತ್ತಿದ್ದಾನೆ. ಅಷ್ಟು ಬೆಳೆದು ಬಿಟ್ಟಿವೆ!
ಇನ್ನು ಮನೆಗಳವರಿಗೆ ನಾಳಿನ ಮೆನೂ ತಯಾರಿ ಮಾಡಿಕೊಡುವುದು ದಿನವೂ ಒಂದು ಯಜ್ಞ ದಂತಾಗಿ ಹೋಗಿದೆ.ಎಲ್ಲರಿಗೂ.. ಏನು ಬೇಕೋ ಒಂದೇ ಪಟ್ಟಿಯಲ್ಲಿ ನಿರ್ಣಯಿಸಲಾರದಾಗುತಿದ್ದಾರೆ. ಪಾರ್ಸಲ್ ಗಳು ಬಂದಮೇಲೆ, ಯಾರಿಗೆ ಯಾವಾಗ ಹಸಿವಾದರೆ ಆಗ ಅವರ ಪಾಕೇಟ್ ಓಪನ್ ಮಾಡಿ ಬಿಸಿಮಾಡಿಕೊಂಡು, ಅವರ ಕೋಣೆಯೊಳಗೇ ಟಿ.ವಿ. ನೋಡುತ್ತಲೇ ತಿಂದುಬಿಡುತಿದ್ದಾರೆ.ಅವುಗಳ ರುಚಿಯ ಸುದ್ಧಿಗಳ ವಿನಃ ಮನೆಯೊಳಗೆ ಇನ್ನೆಂತಹ ಮಾತುಗಳೂ ಸುಳಿಯುತ್ತಿಲ್ಲ. ಹಾರಿಕಾಳಿಗೆ, ಶ್ರೀಪತಿಗೆ ಲಂಚ್ ಡೈರೆಕ್ಟಾಗಿ ಆಫೀಸಿಗೇ ಕಳಿಸುತ್ತಿದ್ದಾರೆ. ಅದಕ್ಕೆ ಆದರದೇ ಚಾರ್ಜು ಹಾಕುತಿದ್ದಾರೆ. ಒಟ್ಟಾರೆ ಎಲ್ಲರೂ ಹ್ಯಾಪಿಯೇ. ಶ್ರೀಪತಿ ಮಾತ್ರ ರ‍್ಡರ್‌ಗಳನ್ನ ನೋಡಿ ಬಿಲ್ಲು ಎಷ್ಟು ಬರುವುದೋ ಪ್ರತಿದಿನವೂ ಲೆಕ್ಕ ಹಾಕಿಕೊಳ್ಳುತ್ತಾ ಹೈರಾಣಾಗುತ್ತಿದ್ದಾನೆ.
ಕ್ಲೌಡ್ ಕಿಚನ್ ಅವರ ತಿಂಗಳ ಬಿಲ್ಲು ಇಪ್ಪತ್ತುಸಾವಿರದ ನೂರಾ ಐವತ್ತೆರಡು ಬಂದಿತು. ಮನೆಯ ತಿಂಗಳ ಖರ್ಚಿಗಿಂತಾ ಶೇಕಡಾ ಇಪ್ಪತ್ತೊಂದು ಇಳಿದಿದೆ. ಎಲ್ಲಾ ಬ್ರೇಕ್ ಡ್ಯಾನ್ಸ ಮಾಡಿದರು. ಶ್ರೀಪತಿ ಮುಖದಲ್ಲಿ ಗಂಟಾಕಿಕೊಂಡ.
ಆ ತಕ್ಷಣವೇ ಚಕಚಕಾಂತ ಹೊಸ ಕೋರಿಕೆಗಳು ಹುಟ್ಟಿಬಂದವು. ಜಿಮ್’ಗೆ ಹೋಗುತ್ತೇನೆಂದು ಒಬ್ಬರು. ಓಟಿಟಿ ಚಾನಲ್ ಗೆ ಸಬ್ ಸ್ಕೆçöÊಬ್ ಮಾಡೆಂದು ಇನ್ನೊಬ್ಬರು. ವಾರ ವಾರ ಬ್ಯುಟಿ ಪಾರ್ಲರ್’ಗೆ ಹೋಗುತ್ತೇನೆಂದು ಮತ್ತೊಬ್ಬರು ಪ್ರಕಟಿಸಿದರು!
ಶ್ರೀಪತಿ ಹಣೆ, ಬಾಯಿ ಬಡಕೊಂಡರೂ ಯಾರೂ ಆತನ ಒದ್ದಾಟವನ್ನು ಹಚ್ಚಿಕೊಳ್ಳಲಿಲ್ಲ.
ಎರಡು ತಿಂಗಳೊಳಗೆ ಪುಡ್ ಪ್ಯಾಕೆಟ್ ಗಳ ಮೇಲೆ-ಬರ‍್ಗರ್ ಗಳು, ಪಿಜ್ಜಾಗಳು, ಡೋನಟ್ಸ, ಚಿಕನ್ ಜಾಯಿಂಟ್ ಗಳು,ಮೆಕ್ಸಿಕನ್ ಟಾಕೋ,ಸುಷೀ,ಪಾನ್ ಕೇಕ್ಸ, ಚೈನೀಸ್ ನ್ಯೂಡಲ್ಸಗಳ ಹೊಸ ಹೊಸ ಫೋಟೋಗಳು-ಬಾಯಿಯ ನೀರೂರುಸಿವಂತಹ ಆಯಿಲ್ ಕರ‍್ಸಗಳಿಂದ ಪ್ರತ್ಯಕ್ಷವಾದವು!
ಮೆಲ್ಲ ಮೆಲ್ಲಗೆ ಅಲ್ಲ, ವೇಗವಾಗಿಯೇ ಮನೆಯ ಮೆನೂ… ಬದಲಾಗಿಹೋಯಿತು.
‘ ಅದು ಕ್ಲೌಡ್ ಕಿಚನ್ ಅಲ್ಲ, ಕಲ್ಪತರು, ಅಸಲಿಗೆ ಇದೆಲ್ಲಾ ನಮ್ಮ ಮನೆಯೊಳಗೆ ಅಮಲು ಆಗಲಿಕ್ಕೆ ಕಾರಣಕರ್ತೆ ನಾನೇ. ನಾನಾ ಡೇರಿಂಗ್ ಸ್ಟೆಪ್ ಇಟ್ಟಿದ್ದಕ್ಕೇ ಈ ಹೊಸ ಶ್ರೇಷ್ಟ ಬದಲಾವಣೆ ಸಾಧ್ಯವಾಗಿದೆ. “ನೀವೂ ನಿಮ್ಮ ಕಿಚನ್ಗೆ ಗುಡ್ ಬೈ ಹೇಳಿಬಿಟ್ಟು, ತಕ್ಷಣವೇ ಕ್ಲೌಡ್ ಕಿಚನ್ ಗೆ ಬದಲಾಗಿರಿ” ಅಂತ ಕೇಳಿದವರಿಗೂ ಕೇಳದವರಿಗೆ ಉಚಿತ ಸಲಹೆಗಳನ್ನ ನೀಡುತ್ತಾ ಓಡಿಸುತ್ತಿದ್ದಾಳೆ ಹಾರಿಕ.
“ ಜನ್ಮದೊಳಗೆ ನೋಡದ ರುಚಿಗಳು ನೋಡುತ್ತಿದ್ದೇವೆ. ನೀನು ತುಂಬಾ ತಿಳಿದಂತಹ ಸ್ಮಾರ್ಟ ಸೊಸೆ” ದಿನ ದಿನಕ್ಕೆ ಬದಲಾದ ಹಾರಿಕನನ್ನು ಮೆಚ್ಚಿಕೊಂಡರು ಜಗನ್ನಾಥ.
“ ಈ ತಿಂಡಿಗಳು ಆರೋಗ್ಯಕ್ಕೆ ಒಳ್ಳೆಯವಲ್ಲ ಅಪ್ಪಾ, ಎಲ್ಲಾ ಫ್ರಾಜನ್ ಪುಡ್. ಇಲ್ಲದೇ ಹೋದರೆ ಲಕ್ಷ ಲಕ್ಷ ಜನ ಹೇಗೆ ಸಪ್ಲೆöÊ ಮಾಡಬಲ್ಲರು ಹೇಳು” ನೋವಿನಿಂದ ಅವುಗಳ ಸತ್ಯ ಹೇಳಿದನು ಶ್ರೀಪತಿ.
“ ನಮಗೆ ತಿಳಿದಿದೆ ಬಿಡೋ. ಕೆ.ಎಫ್.ಸಿ.ಯೊಳಗೆ ಚಿಕನ್ ಜಾಯಿಂಟ್ ಗಳು ಇಷ್ಟದಿಂದ ತಿನ್ನುತ್ತೇವೆ. ಅವೇನಾದರೂ ಆಗಿಂದಾಗಲೇ ಕೋಳಿಗಳನ್ನು ಕೊಂದು, ಪ್ರೈಮಾಡಿ ನೀಡುತ್ತಾರಾ? ಇಲ್ಲ ಅಲ್ಲವೇ. ಹಾಗೇ ಇವೂ ಕೂಡ. ಕಾಲಕ್ಕೆ ಅನುಗುಣವಾಗಿ ಅಡ್ಜಸ್ಟ ಆಗಿ ಹೋಗಬೇಕು ಕಣೋ ಮಗನೇ. ಕಾಲದೊಂದಿಗೆ ಓಡದಿದ್ದರೆ ಅನಾಮತ್ತಾಗಿ ಹಿಂದೆಯೇ ಬಿದ್ದು ಬಿಡುತ್ತೇವೆ!” ಅಂದರವರು.
“ ಯಾವುದೋ ದೇಶದೊಳಗೆ ಕೋಳಿಗಳ ಕಾಲು ತಿನ್ನಲ್ಲವಂತೆ. ಅವೆಲ್ಲವನ್ನೂ ಇವರು ಸೊಗಸಾಗಿ ಕೊಯ್ದಾಕಿ ನಮ್ಮ ದೇಶಕ್ಕೆ ತರುತ್ತಿದ್ದಾರಂತೆ. ವಾಟ್ಸಪ್ ನೊಳಗೆ ಓದಿರುವೆನು” ಅಂದನು ಮಗ ಶ್ಯಾಮ್.
“ ಎಲ್ಲಿಂದ ತಂದರೆ, ಹೇಗೆ ತಂದರೆ ನಮಗೇನು?. ಪಾತಾಳ ಭೈರವಿಯ ಹಾಗೆ ‘ ನರನೇ ಏನು ನಿನ್ನ ಕೋರಿಕೆ’ ಅಂತ ಇದು ಕೇಳುತ್ತೆ. ಮತ್ತೆ ತೀರಿಸುತ್ತೆ. ತಿಂದು ಸುಖ ಪಡೋಣ” ಅಂದಳು ಹಾರಿಕ. ಅದಕ್ಕೆ ಸೋ…ಗುಟ್ಟಿದಳು ಜಾನಕಮ್ಮಾ.
ಕೋಣೆಗೆ ಅಡ್ಡವಾಗಿ ಇದೆಯೆಂದು ಮನೆಯವರು ಡೈನಿಂಗ್ ಟೇಬಲ್ ಬಿಚ್ಚಾಕಿ ಸ್ಟಾಕ್ ರೂಮ್ ನೊಳಗೆ ಬಿಸಾಕಿದರು. ಶ್ರೀಪತಿ ಒಬ್ಬನೇ ಅದನ್ನ ನೆನೆಸಿಕೊಂಡು ನೋವು ಪಡುತಿದ್ದಾನೆ. ಕುಟುಂಬ ಸಮಾವೇಶದ ವೇದಿಕೆಯಂತೆ ಉಪಯೋಗವಾಗುತಿದ್ದ ಅದು ಈಗ ಹಳೆ ಸಾಮಾನಾಗಿ ಹೋಗಿದೆ ಅಂತ ಸಂಕಟಪಡುತಿದ್ದಾನೆ!
ವರ್ಷ ತುಂಬುವುದರೊಳಗೇ ಕಿಚನ್ ಬಿಲ್ಲು ಮೂರುಪಟ್ಟು ಬೆಳೆದುಹೋಗಿದೆ.
ಕ್ಲೌಡ್ ಕಿಚನ್‌ನವರು ಮೊದಲೆಲ್ಲಾ ಅವರು ಅಡುಗೆ ಸರಕುಗಳ ಧರಗಳು ಏರಿವೆ ಎಂದರು. ಉದ್ಯೋಗಿಗಳ ಸಂಬಳಗಳು ಏರಿಸದೇ ವಿಧಿಯಿಲ್ಲವೆಂದರು. ಕರೆಂಟು ಚಾರ್ಜುಗಳ ಏರಿಕೆ ಆಗಿದೆಯೆಂದರು. ಆದ್ದರಿಂದ ಬೆಲೆ ಏರಿಸದೇ ವಿಧಿಯಿಲ್ಲ ಎಂದು ಸಮಜಾಯಿಸಿ ನೀಡುತ್ತಾ ಬಂದರು. ಆ ನಂತರ ಏನೂ ಹೇಳದಂತೆಯೇ ಧರಗಳನ್ನು ಏರಿಸುತ್ತಲೇ ಹೋದರು! ಇದೇನೆಂದು ಕೇಳುವವರೂ ಇಲ್ಲವಾದರು!
ಇದಕ್ಕೆ ಜೊತೆಯಾಗಿ ಹೊಸ ಹೊಸ ಬಾಯಿ ಚಪಲಗಳಿಂದ ಶ್ರೀಪತಿ ಮನೆಯ ರ‍್ಡರ್’ಗಳೂ ಏರಿವೆ. ಮೋಜುಗಳ ಮೇಲೆ ಅವರು ದಾಳಿ ಮಾಡುತಿದ್ದಾರೆ.
“ ಕಣ್ಣೆದುರು ಕಾಣಿಸಿ ಗಮಗಮಿಸುತಿದ್ದರೆ ತಿನ್ನದಂತೆ ಇರಲಿಕ್ಕೆ ಸಾಧ್ಯವೇ?, ನಾವು ಮನುಷ್ಯರೇ ವಿನಃ ಹಸಿವು ಬಾಯಾರಿಕೆ ಇಲ್ಲದ ದೇವತೆಗಳಲ್ಲ!” ದಬಾಯಿಸುತಿದ್ದಾಳೆ ಹಾರಿಕ.
ಆದರೆ ಬಿಲ್ಲು ಸಮರ್ಪಿಸಲಿಕ್ಕೇ.. ಆಕೆಯ ಸಂಬಳವೆಲ್ಲಾ ಆಗುತ್ತಿದೆ.ಸಂಬಳಕ್ಕೂ ದೊಡ್ಡದಾಗುತ್ತಿವೆ .. , ಕೋರಿಕೆಗಳು ಇಳಿಯುತ್ತಿಲ್ಲ . ‘ ಇವರಿಗಾಗೆಯೇ ಕಷ್ಟ ಪಡುತ್ತಿರುವಂತಿದೆಯಲ್ಲೋ.. ದೇವರೇ!’ ಅಂದುಕೊಳ್ಳುತ್ತಾಳೆ!ಈಗೀಗ ಹಾರಿಕ.
ಇನ್ನೊಬ್ಬ ನಾರಿ ‘ ಇದೇನು ಮಾಯ’ ಅಂತ ಪ್ರಲಾಪಿಸುತ್ತಿದ್ದಾಳೆ.
“ ಅವರು ಕಾರ್ಪೋರೇಟ್ ಮಾಂತ್ರಿಕರು, ನಮಗೆ ತಿಳಿಯದಂತೆಯೇ ನಮ್ಮ ಸಂಪತ್ತು ಕಿತ್ತುಕೊಂಡು ನಮ್ಮನ್ನ ಮಾಯಾ ಮಾಡುತ್ತಾರೆ. ನಮ್ಮ ಮೆದುಳನ್ನ ಮ್ಯಾನಿಪುಲೇಟ್ ಮಾಡಿಬಿಟ್ಟು, ಇಂಡಿಯಾದಲ್ಲೇ.. ಅಮೇರಿಕನ್ನರಂತೆ ಬದುಕಿ ಅಂತಾರೆ. ನಾವು ಜಾಗ್ರತೆಯಾಗದಿದ್ದರೆ ನಮ್ಮ ನಮ್ಮ ಮನೆ, ದೇಹ ಹಾಳಾಗದೇ ವಿಧಿಯಿಲ್ಲ.” ಇದೇ ಸುಸಮಯವೆಂದು ಉಪನ್ಯಾಸ ನೀಡಿದನು ಶ್ರೀಪತಿ.
ಮನೆಯವರೆಲ್ಲಾ ಒಂಟಿ ಕಾಲಮೇಲೆ ನಿಂತು, ಆತನ ಬಾಯಿ ಮುಚ್ಚಿಸಿದರು. “ ನೀವು ತಿನ್ನಲಾರಿರಿ, ನಮ್ಮನ್ನು ತಿನ್ನಲು ಬಿಡರಿ” ಅಂತ ಸಣ್ಣ ಸನ್ನೆಯ ಗುದ್ದು ಗುದ್ದಿದರು.
ಆ ಮನೆಯೊಳಗೆ ಅಲ್ಲ ಆ ಸುತ್ತು ಮುತ್ತಲೂ.. ಬಹಳ ಬಹಳ ಬದಲಾವಣೆಗಳು ಬಂದುಬಿಟ್ಟವು!
ಮನೆ ಕೆಲಸಮಾಡೋ ವಲಸೆ ಜೀವಿಗಳು ಇಲ್ಲಿಯ ಬದುಕು ಖಾಲಿ ಮಾಡಿ ತಿರುಗಿ ಹಳ್ಳಿಗಳಿಗೆ ಹೋದರು.
ಹಾಲು ಕೇಂದ್ರಗಳು, ಕಿರಾಣೆ ದುಕಾನುಗಳು, ಬಗೆ ಬಗೆಯ ತಿಂಡಿಗಳನ್ನ ಮಾರುವ ಬಂಡಿಗಳು, ತರಕಾರಿ ಮಾರುವ ಶಾಪುಗಳು, ಮೀನು ಮಾಂಸಗಳ ದುಕಾನುಗಳು, ಚಿಕ್ಕ ಹೋಟೆಲ್‌ಗಳು ಮುಚ್ಚಿಹೋದವು.
“ ಎಷ್ಟು ದಾರುಣ …ನೋಡಿ ! ಈಗಲಾದರೂ ಅರ್ಥವಾಯಿತಾ!” ಎಂದನು ಶ್ರೀಪತಿ ವೇದನೆಯಿಂದ.
“ ಇವೆಲ್ಲಾ ಮಾರ್ಕೆಟಿಂಗ್ ಬದಲಾವಣೆಗಳು ಕಣೋ ಮಗನೇ. ನಾವೇನೂ ಮಾಡಲಾಗದು” ಅಂದರು ಜಗನ್ನಾಥ.
ಇಬ್ಬರನ್ನೂ ಸೋಜಿಗವಾಗಿ ನೋಡಿದಳು ಜಾನಕಮ್ಮ.
ಜಗನ್ನಾಥರ ಆರೋಗ್ಯ ಕೆಟ್ಟಿತು.
ಬಿಡದ ಡೀಸೆಂಟ್ರಿಯೋ, ಎಸಿಡಿಟಿಯೋ ಅವರನ್ನು ಬೆನ್ನಟ್ಟಿ ನೋಯಿಸುತ್ತಿವೆ.
ಜಾನಕಮ್ಮನಿಗೆ ಗ್ಯಾಸ್ ಪ್ರಾಬ್ಲಮ್, ಮಂಡಿ ನೋವುಗಳು, ಹೊಟ್ಟೆ ಕಾಯಿಲೆಗಳು ಬರುತ್ತಿವೆ.
ಮಕ್ಕಳಿಗೆ ಸ್ಥೂಲಕಾಯ ಬಂದುಬಿಟ್ಟಿದೆ.
ಉದ್ಯೋಗಕ್ಕೆ ಹೋಗಿ ಬರುತ್ತಿರುವುದಕ್ಕೇನೋ ಹಾರಿಕ ಸ್ಪಲ್ಪ ಚನ್ನಾಗಿದ್ದಾಳೆ.
ಕ್ಲೌಡ್ ಕಿಚನ್ ಹೆಸರೆತ್ತಿದರೆ ಸಾಕು ಶ್ರೀಪತಿ ಉರಿ ಉರಿಯಾಗಿಬಿಡುತ್ತಾನೆ. ಈ ನಡುವೆ ಮನೆಯೊಳಗೆ ಪ್ರತಿಯೊಂದಕ್ಕೂ ಸರ್… ಬರ‍್ರಂತ ಎಗರಾಟ ಹೆಚ್ಚಾಗಿದೆ.
ಇದೇ ಸಮಯಕ್ಕೆ ಆಸ್ಪತ್ರೆ ಖರ್ಚು ಔಷಧಿಗಳ ಖರ್ಚು ವಿಪರೀತವಾಗಿ ಬೆಳದುಬಿಟ್ಟಿದೆ.
“ಈ ವಾರ್ತೆ ನೋಡಿರಿ ನೀವೆಲ್ಲಾ ಈಗಲಾದರೂ ಕಣ್ಣು ತೆರೆದು ನೋಡಿರಿ. ಕ್ಲೌಡ್ ಕಿಚನ್ ಕಂಪನಿಗೆ ಎರಡು ಮೂರುಪಟ್ಟು ಲಾಭಗಳು ಬಂದಿವೆಯಂತೆ. ಎಲ್ಲಾ ಸಿಟಿಗಳಿಗೇ ಅಲ್ಲ ಗ್ರಾಮೀಣ ಸ್ಥಳಗಳಿಗೂ ವಿಸ್ತರಿಸಿದ್ದಾರಂತೆ. ಅದಕ್ಕೆಂದೇ ಹತ್ತು ಸಾವಿರ ಕೋಟಿಗಳ ಇಸ್ಯೂಗೆ ಬರುತ್ತಿದ್ದಾರಂತೆ “ ಒಂದು ದಿನ ಕೋಪದಿಂದ ಹೇಳಿದನು ಶ್ರೀಪತಿ.
“ಅವರ ಲಾಭಗಳನ್ನ ನೋಡಿ ನಾವೇಕೆ ಕಣ್ಣು ಕೆಂಪಗೆ ಮಾಡಿಕೊಳ್ಳಬೇಕೋ ಮಗನೇ!” ಅಂದಳು ಜಾನಕಮ್ಮ.
“ ಅವರು ರಿಸ್ಕ್ ತೆಗೆದುಕೊಂಡು, ಹಠದಿಂದ, ಹೊಸ ಹೊಸ ಐಡಿಯಾಗಳಿಂದ ಬಂದಿದ್ದಾರೆ. ಬೃಹತ್ ಬಿಜಿನೆಸ್ ಮಾಡುತ್ತಿದ್ದಾರೆ.ಅವರ ಕಷ್ಟ ಫಲಿಸಿದೆ. ಕೃಷಿತೋ ನಾಸ್ತಿ ದುರ್ಭಿಕ್ಷಂ ಅಂದಿದ್ದಾರೋ! ನಾವು ನಮ್ಮ ಮೂಲ ವೃತ್ತಿ ಬಿಟ್ಟು ಕೆಟ್ಟೆವು ” ಜಗನ್ನಾಥ ತಾಪದಿಂದ ಹೇಳಿದರು.
“ ಅದು ನಿಜವೇ ವಿನಃ, ಈ ಪಬ್ಲಿಕ್ ಇಷ್ಯೂ ಏನ್ರೀ” ಹಾರಿಕಾ ಸ್ವರ ತೆಗೆದಳು.
“ಜನರಿಗೆ ಅವರ ಕಂಪನಿಯ ಶೇರು ಮಾರುತ್ತಾರಂತೆ. ಆ ಹಣದಿಂದ ದೇಶವೆಲ್ಲಾ ವಿಸ್ತರಿಸುತ್ತಾರಂತೆ. ಈಗಲೇ ಅವರಿಂದಾಗಿ ರೀಟೈಲ್ ರಂಗ ಎಕ್ಕುಟ್ಟಿದೆ. ಎಲ್ಲಾ ಡೈರೆಕ್ಟಾಗಿ ಕೊಳ್ಳುತ್ತಿರುವುದರಿಂದ ಅವರಿಗೆ ಸರಕು ಮಾರಿಕೊಳ್ಳುವುದಕ್ಕೂ.. ಉತ್ಪಾದಕರು ತುಂಬಾ ಮರ‍್ಜಿನ್ ಇಳಿಸಿಕೊಳ್ಳಬೇಕಾಗಿದೆ. ರೈತರು ಇವರಿಗೆ ಬಿಟ್ಟು ಹೊರಗೆ ಮಾರಿಕೊಳ್ಳಲಿಕ್ಕೆ ಅವಕಾಶಗಳು ಬಂಧ್ ಆಗಿರುವುದರಿಂದ ಅವರು ಹೇಳಿದಷ್ಟಕ್ಕೇ ಮಾರಿಕೊಳ್ಳಬೇಕಾಗಿ ಬಂದಿದೆ. ಇನ್ನು ಆ ಕ್ಲೌಡ್ ಕಿಚನ್ ನವರು ಜನರ ಲಾಭಗಳನ್ನು ದುಂಡಗೆಮಾಡಿಕೊಂಡು ಅಮೇರಿಕಾಕ್ಕೆ ಹೋಗಿಬಿಡುತ್ತಾರೆ. ಆಸ್ತಿ ನಮ್ಮದು. ಫಲ ಅವರದು!” ರೋಷಗೊಂಡನು ಶ್ರೀಪತಿ.
“ ನಾವು ನಿಮ್ಮ ಕಣ್ಣಿಗೆ ಕಸಾಯಿಯವನನ್ನ ನಂಬಿದ ದಡ್ಡ ಪಶುಗಳಂತೆ ಕಾಣುತ್ತಿದ್ದೇವಾ!..” ಅಂತೇನೋ ಅನ್ನಬೇಕೆಂದು ನೋಡಿದಳು ಹಾರಿಕ. ಆದರೆ ಹೇಳಲು ಆಗಲಿಲ್ಲ.
“ಅಮೇರಿಕಾಕ್ಕೆ ಯಾಕೆ ಹೋಗುತ್ತಾರೋ ಜಲ್ಸ ಮಾಡಲಿಕ್ಕಾ !” ಜಗನ್ನಾಥ ಕುತೂಹಲದಿಂದ ಕೇಳಿದರು.
“ಕ್ಲೌಡ್ ಕಿಚನ್ ಅಮೇರಿಕಾ ಕಂಪನಿ. ಎಂ.ಎನ್.ಸಿ. ಕಂಪನಿಯ ಬಾಲ” ಅಪ್ಪಯ್ಯಾ.
“ ಅರೇ ಹಾಗಾ. ನನಗೆ ವಿದೇಶೀ ಅಂತ ತಿಳಿಯದು !” ಇಲ್ಲದಿದ್ದರೆ ನಿಷೇಧಿಸೋಣ ಎನ್ನುತಿದ್ದೆ ಎಂದಳು ಹಾರಿಕಾ.
“ ಎಲ್ಲಿಯವರಾದರೇನು ಏನೂ ಇಲ್ಲಪ್ಪಾ, ಎಲ್ಲಾ ವ್ಯಾಪಾರಿಗಳೇ. ಯಾವ ಕಲ್ಲಾದರೂ ಒಂದೇ… ಹಣ್ಣು ಕೆಡವಲಿಕ್ಕೆ. ಆದರೂ ಪ್ರಪಂಚವೆಲ್ಲಾ ಒಂದು ದಾರಿಯಲ್ಲಿ ಹೋಗುತಿದ್ದರೆ ದುರುಳರಂತೆ ಬೇರೆ ದಾರಿಯಲ್ಲಿ ಹೇಗೆ ಹೋಗುತ್ತೇವೆ !” ಜಾನಕಮ್ಮ ವಿವರವನ್ನು ವಿಸ್ತರಿಸಿದಳು.
“ ಇಲ್ಲದಿದ್ದರೆ ನಮ್ಮ ಮನೆ ಆರ್ಥಿಕ ಪರಿಸ್ಥಿತಿ ಕೈಮೀರಿ ಹೋಗಿ ಸಾಲದೊಳಗೆ ಮುಳುಗಿ ಬಿಡುತ್ತೇವೆ. ಈಗಾಗಲೇ ಅರ್ಧ ಮುಳುಗಿದ್ದೇವೆ. ಇದೋನೋಡು ಈ ತಿಂಗಳ ಬಿಲ್ಲು ನೋಡಿರಿ. ಎಭತ್ತೆಂಟು ಸಾವಿರದ ನಾಲ್ಕುನೂರಾ ಅರವತ್ತು. ಆಸ್ಪತ್ರೆ ಖರ್ಚು ನಾಲ್ಕು ಪಟ್ಟು ಬೆಳದಿದೆ. ಮಕ್ಕಳನ್ನ ನೋಡಿದರೆ ಗುಂಡಿಗೆ ಗುಬಲ್ ಎನ್ನುತ್ತದೆ. ಹಾರಿಕ ಕಷ್ಟ ಪಡುತ್ತಿರುವ ಒಂದು ರೂಪಾಯಿಯೂ ಉಳಿಯುತ್ತಿಲ್ಲ. ಆರೋಗ್ಯಗಳು ದಿನ ದಿನಕ್ಕೆ ಕೈ ಮೀರುತ್ತಿವೆ. ಇಷ್ಟು ಅನರ್ಥ ಜರುಗಿದ ಮೇಲೂ ಕೂಡಾ ಕಣ್ಣು ತೆರೆಯದೆ ಹೋದರೆ ಹೇಗೆ!” ಆಕ್ರೋಶ ಪಟ್ಟನು ಶ್ರೀಪತಿ.
ಆತನ ಮಾತುಗಳು ಸರಿಯೆಂದೇ ಎನಿಸಿದವು ಹಾರಿಕಾಳಿಗೆ.” ತಿರುಗಿ ಹಿಂದಿನ ದಿನಗಳಿಗೆ ಹೋದರೆ?” ಅಂದಳು.
“ ಅನ್ನದೊಳಗೆ ಎಷ್ಟು ನೀರು ಹಾಕಬೇಕೋ ಮರೆತೇ ಹೋಗಿದ್ದೇನೇ!” ಅಂದಳು ಜಾನಕಮ್ಮ ಚಿತ್ರವತ್ತಾಗಿ ಕೈ ತಿರುಗಿಸುತ್ತಾ.
“ ನಾನು ಅನ್ನವನ್ನು ತಿನ್ನೆನು” ಸುಪುತ್ರ ಎಂದರೆ,”
“ಬರಿ ಅನ್ನ ವೆಂದರೆ ನನಗೆ ಅರ‍್ಜಿ” ಮುಖ ಕಿವುಚಿದಳು ಸುಪುತ್ರಿಕ.
“ ಇಡ್ಲಿಗಳು, ದೋಸೆಗಳು ಬೇಡವೇ ಬೇಡ. ರ‍್ಗಗಳು, ಶಾಂಡ್ವಿಜ್ ಗಳು ನಮಗೆ ಎಷ್ಟೋ ಮುದ್ದು” ಎಂದರು ಅವರು ಕೋರಸ್ ನಂತೆ.
ಹಾರಿಕ “ ನಮ್ಮ ತರಕಾರಿಗಳು ನಮ್ಮ ರುಚಿಗಳು ಪೂರ್ತಿಯಾಗಿ ಮರೆತು ಹೋಗಿವೆ. ಅಮೇರಿಕಾ, ಮೆಕ್ಸಿಕನ್ ಆಹಾರಗಳಿಗೆ ಅಭ್ಯಾಸ ಬಿದ್ದು ಹೋಗಿದ್ದೇವೆ.!” ಒಳಗೆ ಅಂದುಕೋಬಾರದೆಂದುಕೊಂಡರೂ ಹೊರಗೆ ಅಂದುಬಿಟ್ಟಳು.
“ ಈಗ ಹಿಂದಕ್ಕೆ ಹೋಗೋಣವೆಂದರೂ ಕಷ್ಟವೇ. ನಾವು ಮಾರ್ಕೆಟ್‌ನ್ನ ಹಾಳುಮಾಡಿದ್ದೇವೆ. ಹಾಲು,ತರಕಾರಿಗಳು, ಮಾಂಸ, ಅಕ್ಕಿ, ಏನೂ ರೀಟೈಲಾಗಿ ಸಿಗುತ್ತಿಲ್ಲ. ಅವನ್ನ ಕೊಳ್ಳಬೇಕೆಂದರೆ ಮೆಟ್ರೋ ದಂತಹ ಮಾರ್ಕೆಟ್ ಗೆ ಹೋಗಬೇಕು. ಅವರು ಐದು, ಹತ್ತು ಗುಂಪು ಕಟ್ಟಿ ಕಟ್ಟಿ ಮಾರುತ್ತಾರೆ. ಒಂದು ಬೇಕಾದರೂ, ಅರ್ಧ ಬೇಕಾದರೂ ಕಟ್ಟೆಲ್ಲಾ ಕೊಳ್ಳಲೇಬೇಕು. ರೇಟು ತುಂಬಾನೇ ! ಅವೂ.. ವಿದೇಶಗಳವೇ.ಮೈ ಗಾಡ್. ನಾವು ಕಣ್ಣು ತೆರೆಯೋ ವೇಳೆಗೆ ಪೂರ್ತಿಯಾಗಿ ವಿದೇಶಿ ಮಾರ್ಕೆಟ್ ಎಂಬ ಹೆಬ್ಬಾವಿನ ಬಾಯಿಯೊಳಗೆ ಹೋಗಿಬಿಟ್ಟಿದ್ದೇವೆ!” ಕೋಲಾಹಲಗೊಂಡ ಶ್ರೀಪತಿ.
“ ನೀ.. ಹೇಳುತಿದ್ದರೆ ನಿಜವೇ ಅನಿಸುತ್ತದೆಯೋ ಮಗನೇ.ಅವರು ಜಾದೂಗಾರರಂತ ತಿಳಿದುಕೊಳ್ಳಲಾರದೇ ಹೋದೆವು!” ಸಮರ್ಥಿಸಿದರು ಜಗನ್ನಾಥ.
“ ಆದರೆ ನಮಗೆ ಅಡುಗೆ ನೋವು ತಪ್ಪಿದೆಯಲ್ಲೋ. ಸೊಸೆ ಕೂಡಾ ಉದ್ಯೋಗ ಮಾಡಿ ಸಂಪಾದಿಸುತ್ತಿದ್ದಾಳಲ್ಲೋ!” ಜಾನಕಮ್ಮ ಎಂದಳು ಸ್ವರ ತಗ್ಗಿಸಿ.
“ ಅದಕ್ಕಾಗಿ ಹೀಗೆ ಸರೆಂಡರ್ ಆಗಬೇಕಿಲ್ಲ. ಅಮೇರಿಕಾದೊಳಗೆ ನಮ್ಮ ಬಾವಂದಿರು ಇತರ ಇಂಡಿಯಾದವರ ಹಾಗೆ ಗಂಡುಮಕ್ಕಳು ಅಡುಗೆ ಕೆಲಸ, ಮಕ್ಕಳ ಜವಾಬ್ದಾರಿ ಹಂಚಿಕೊಂಡರೆ, ಗಂಡ ಮಕ್ಕಳೂ ಇಬ್ಬರೂ ಸೊಗಸಾಗಿ ಉದ್ಯೋಗಗಳನ್ನು ಮಾಡಿಕೊಳ್ಳಬಹುದು. ಮನೆ ಅಡುಗೆ ತಿಂದು ಆರೋಗ್ಯವಾಗಿ ಇರಬಹುದು. ನಾಳೆಗಾಗಿ ಉಳಿಸಲೂ ಬಹುದು. ಆಗ ನಮ್ಮದೇ ಅಲ್ಲ. ದೇಶದ ಆರ್ಥಿಕ ಪರಿಸ್ಥಿತಿಯೂ ವರ್ಧಿಸುತ್ತಿದೆ” ಅಂದನು ಶ್ರೀಪತಿ.
“ ನೀವು ಅಡುಗೆ ಮಾಡುತ್ತೀರಾ!” ಹಾರಿಕ ಆಶ್ಚರ್ಯಬಿದ್ದಳು.”
“ ಹಾಗಾದರೆ ನಾನೂ..ಹಾಡುತ್ತಾ ಪಾಡುತ್ತಾ ಕೆಲಸಗಳನ್ನು ಮಾಡಿಕೊಳ್ಳಬಹುದುರೀ..” ಸಂತೋಷದಿಂದ ಹೇಳಿದಳು ಹಾರಿಕ.
“ ಅಡುಗೆ ಮಾಡಿ ನೀಡುವುದರೊಳಗೆ ಇರುವ ಆಪ್ಯಾಯತೆಯೇ… ಬೇರೆ. ಎಲ್ಲರೂ ಕೂಡಿ ಯಾರಿಗಿಷ್ಟವಾದವು ಅವರಿಗೆ ಮಾಡಿ ಇಡುವುದರೊಳಗೆ ಇರುವ ತೃಪ್ತಿಯೇ.. ಬೇರೆ!” ಜಾನಕಮ್ಮ ಅಂದಳು ಸಾಲೋಚನೆಯಿಂದ.
ದೀರ್ಘವಾಗಿ ನಿಟ್ಟುಸಿರುಡುತ್ತಾ “ ಯಾರಿಗೆ ಅವರೇ.. ಅನಾಥರಂತೆ ಒಂಟಿಯಾಗಿ ಪೊಟ್ಟಣಗಳನ್ನ ಬಿಚ್ಚಿಕೊಂಡು ತಿನ್ನುತ್ತಿದ್ದೇವೆ. ಎಲ್ಲಾ ಸೇರಿ ಒಂದೇ ಕಡೆ ಸುದ್ದಿಗಳನ್ನು ಹೇಳಿಕೊಳ್ಳುತ್ತಾ ತಿನ್ನೋ ದೃಶ್ಯ ಎಷ್ಟು ಚನ್ನಾಗಿರುತ್ತದೆ!” ಅಂದಳು ಹಾರಿಕ.
“ ಅದೂ ಪಾಯಿಂಟೇ. ಹಾಡಿದ್ದೇ ಹಾಡೋ ದಾಸಯ್ಯ ಅಂದಂತೆ ಈ ಕಂಪನಿ ರುಚಿಗಳು. ದಿನವೂ ಅದೇ ವಾಸನೆ, ಅದೇ ರುಚಿ!, ಇವುಗಳಿಗಿಂತಾ ನಾವು ಐದು ಬೆರಳುಗಳಿಂದ ತಿನ್ನೋ ರುಚಿ ಎಷ್ಟೋ ಸೊಗಸಾಗಿರುತ್ತದೆ.!” ಮಾತು ಕದಲಿಸಿದರು ಜಗನ್ನಾಥ.
“ ಈಗಲಾದರೂ ಹೆಬ್ಬಾವ ನಾಲಿಗೆಗೆ ಔಷಧಿ ಹಾಕೋಣ. ಅಡುಗೆ ಕೆಲಸ, ಮನೆಯ ಕೆಲಸ, ಉಳಿದ ಜವಾಬ್ದಾರಿ ಮಾಡಿಕೊಳ್ಳೋಣ” ಎಂದು ಪ್ರತಿಪಾದಿಸಿದನು ಶ್ರೀಪತಿ.
ಚಪ್ಪಾಳೆ ಹೊಡೆದಳು ಹಾರಿಕ . “ ಇದೇ ನಾವು ಕೋರಿಕೊಳ್ಳುತ್ತಿರುವ ಬದಲಾವಣೆ. ಇನ್ನು ನಮ್ಮ ಸ್ಲೋಗನ್ ಕಿಕ್ ದ ಕಿಚನ್ ಅಲ್ಲ, ಷೇರ್ ದ ಕಿಚನ್. ಸೇವ್ ‘ದ ಫ್ಯಾಮಿಲಿ!”
“ ಮನೆಯ ಯಜಮಾನನಾಗಿ ಹೇಳುತ್ತಿರುವೆನು ಕೇಳಿರಿ. ಓಪೆನ್ ದ ಕಿಚನ್. ಮಾಮುಲು ಕಿಚನ್ ಅಲ್ಲ, ಕ್ಲೌಡ್ ಕಿಚನ್ನೂ ಅಲ್ಲ, ಕಪಲ್ಸ ಕಿಚನ್! ಗಂಡಾ ಹೆಂಡತಿ ಸೇರಿ ಕೆಲಸಮಾಡೋ ಅಡುಗೆಮನೆಗೆ ಜೈ!ಜೈಜೈ!!ಎನ್ನಿ” ಎಂದರು ಜಗನ್ನಾಥ.
ಹೊಸ ಯೋಜನೆ ಅಂಗೀಕರಿಸುವಂತೆ ಎಲ್ಲರೂ ಚಪ್ಪಾಳೆಗಳನ್ನ ಹೊಡೆದರು.

————————


*

6 thoughts on “ಕಿಕ್ ದ ಕಿಚನ್-ತೆಲುಗು ಕಥೆಯ ಕನ್ನಡಾನುವಾದ ಡಾ.ಶಿವಕುಮಾರ್

  1. ಅದ್ಭುತವಾದ ಕತೆ…. ಅಬ್ಬಾ ಭಾರತದ ಕೈ ಕೆಸರಾದರೆ ಬಾಯಿ ಮೊಸರು….. ಗಾದೆ ಮಾತೇ ಸರಿ ಹೆಣ್ಮಕ್ಕಳು ಸೋಮಾರಿಗಳಾದ್ರೆ…. ಕಥೆನೇ ಮುಗಿದು … ಹೋದಂತೆ ಇದಕ್ಕೂ ಸ್ತ್ರೀವಾದಿಗಳು ಕಥೆಯಅಂತಿಮ ಕ್ಕೆ ಸಿಡಕಬಹುದು …. ನವಿಲೇನೋ ಕುಣಿ ಬೇಕು…. ಗಂಡಾನೋ ದುಡಿಬೇಕು …. ಅನ್ನೋ ತರ ಸಖತ್ ಆಗಿದೆ…. ಧನ್ಯವಾದ ಅನುವಾದಕರಿಗೆ

  2. ಕತೆ ಮಾಮ್ರಿಕವಾಗಿದೆ ನನ್ನ ಮಟ್ಟಿಗೆ ಊಟಮತ್ತಉಉಪಹಾರ ದೊಡ್ಡ ಸಮಸ್ಯೆಯೇ ಅಲ್ಲ ನನ್ನ ಸೈನಿಕ ಸೇವೆಯಲ್ಲಿ ಪಾಕಶಾಸ್ತ್ರ ದ ಅನುಭವ ಆಗಿದೆ

  3. ವಾಮನನಂತೆ ಅಡುಗೆ ಮನೆಗೆ ಕಾಲಿಟ್ಟು ತ್ರಿವಿಕ್ರಮನಂತೆ ಬೆಳೆದು ಇಡೀ ಸಮಾಜವನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಂಡು ನಮ್ಮನ್ನು ಗುಲಾಮರಾಗಿಸಿಕೊಳ್ಳುವ ಕತೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿದಂತೆ ಸೊಗಸಾಗಿ ಚಿತ್ರಿತವಾಗಿದೆ. ಯಾವುದಾದರೂ ಹೊಸತನ್ನು ಒಪ್ಪಿಕೊಳ್ಳುವ ಮುನ್ನ ಖಂಡಿತಾ ಅದರ ಪೂರ್ವಾಪರ ಯೋಚಿಸಬೇಕು ಎನ್ನುವ ಉತ್ತಮ ಸಂದೇಶ ಹೊಂದಿದೆ.

    ನನಗೆ ತುಂಬಾ ಇಷ್ಟವಾಯಿತು ಗೆಳೆಯ.

    1. ಥ್ಯಾಂಕ್ಯು ಗೆಳೆಯ ನಿನ್ನ ಓದಿನ ಪ್ರೀತಿ ಹಾಗೂ ಕಾಳಜಿಗೆ ಸದಾ ಶರಣು

Leave a Reply

Back To Top