ಇಂದಿರಾ ಮೋಟೆಬೆನ್ನೂರ ಕವಿತೆ-ಹಳದಿ ನೋಟ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಹಳದಿ ನೋಟ

ಒಂದು ಹೃದಯದ ಕಗ್ಗೊಲೆ
ಪುಟ್ಟ ಹೃದಯದ ಕನಸು..
ನಿತ್ಯ ನಿರ್ಮಲ ಸ್ನೇಹ..
ಸ್ವಚ್ಛ ಮನಸಿನ ಕನಸು..
ಬಿರು ಮಾತಿನ ಕಾವಿಗೆ
ಕರಗದಿರಲಿ…

ರಾಡಿ ಗೊಳಿಸಿಹರೆಲ್ಲ….
ಅವರವರ ಭಾವಕೆ
ಅವರವರ ಭಕುತಿಗೆ
ಕಂಡದ್ದು ಅವರವರ ಮಟ್ಟಕ್ಕೆ…
ಸುಡುವ ನೋಟಕೆ ಚಿಗುರು
ಸ್ನೇಹ ಮುದುರದಿರಲಿ…

ಗುರು ಶಿಷ್ಯರ ಜ್ಞಾನ
ದಾಹ…ಗಂಡು ಹೆಣ್ಣಿನ
ಪರಿಧಿಯ ಎಳೆಯಲಿ ಬಂಧಿ..
ಸುಳಿವಾತ್ಮ ಜೀವ ಭಾವ
ಒಂದೇ ಅಲ್ಲವೇ..?
ಹಳದಿ ಕಣ್ಣಿನ ನೋಟ…

ಲೋಕದ ಪರಿವೆ ಬೇಡ..
ಅಕ್ಕನ ಆರಾಧನೆ ಅರಿಯದವರು..
ರಾಧೆಯ ಸ್ನೇಹವ ದೂಷಿಸುವವರು
ಮೀರಾಳ ಭಕ್ತಿಯನೂ…ಸಂಶಯದ
ಆಳದಲೆ ಅಳೆಯುವ ಸಂಕುಚಿತ
ಮನದವರು…..
ಕಾಮಾಲೆ ಕಣ್ಣಿನ ಆಟ….

ಇನ್ನು ಹುಲು ಮಾನವರು
ಯಾವ ಲೆಕ್ಕ?
ಕಾಣದ ಬಾಂಧವ್ಯದ ಎಳೆಯ
ಹೃದಯಕ್ಕೆ ಗೊತ್ತು
ಮನಸಿಗೆ ಗೊತ್ತು
ಅಂತರಂಗದ ಅರಿವಿಗೆ ಗೊತ್ತು
ಮತ್ತೇಕೆ ಭಯ…?
ಕಂಡ ಕನಸು ಕರಗಿ ಹೋಗಲು
ಬಿಡಬೇಡ…

ಮಿಥ್ಯಾರೋಪಕೆ ಅಂಜಿ ಹಿಂದೆ
ಸರಿದೆಯಾದರೆ.. ಮುಂದೆಂದೂ
ಯಾರ ಕಣ್ಣುಗಳಲಿ ಸ್ನೇಹ
ಕನಸಾಗಿ ಮೂಡುವುದೇ ಇಲ್ಲ….
ನನಸಾಗಿ ಈ ಭೂಮಿಯಲ್ಲಿ
ಅರಳುವುದೇ ಇಲ್ಲ….

ಕಾಪಿಟ್ಟಕೊಂಡ ಕನವದು ಕಂಗಳಲಿ
ಬೆಳದಿಂಗಳ ಹೊನಲಾಗಲಿ…
ಕವನ ದವನ ಮಲ್ಲಿಗೆಯಾಗಲಿ..
ನಿರ್ಮಲ ಸ್ನೇಹ ಗಂಗೆ ಹರಿಯಲಿ..
ಹೃದಯ ಸ್ನೇಹ ಚಿಗುರುತಿರಲಿ
ಕನಸು ಕರಗದಿರಲಿ…
ಮನಸು ಮುರಿಯದಿರಲಿ…


4 thoughts on “ಇಂದಿರಾ ಮೋಟೆಬೆನ್ನೂರ ಕವಿತೆ-ಹಳದಿ ನೋಟ

Leave a Reply

Back To Top