ಕಾವ್ಯ ಸಂಗಾತಿ
ಲಲಿತಾ ಪ್ರಭು ಅಂಗಡಿ
ಕೋತಿಗಳು ಸರ್ ಕೋತಿಗಳು
ಕೋತಿಗಳು ಸರ್ ಕೋತಿಗಳು
ನಾವು ನೀವು ಇವರು ಅವರು
ಎಲ್ಲರೂ ಕೋತಿಗಳು ಸಾರ್ ಕೋತಿಗಳು
ಜಿಗಿದಾಡುವ ಕೋತಿಗಳಿಗೆ
ಮನೆಯೆಂಬ ಜೈಲಿನಲಿ
ಪರದಾಟ ಒದ್ದಾಟವಯ್ಯ
ಕೊರೊನಾದಿಂದ ತುಂಬಿ ತುಳುಕಿ ಮೆರೆವ
ಇದು ಎಂಥಾ ಮಹಾ ಮಾರಿಯಾಟವಯ್ಯ
ಗಾಂಧಿ ತಾತನ ಸನ್ನಿಧಿಯಲ್ಲಿದ್ದ
ಮೂರು ಕೋತಿಗಳು ಕಣ್ಬಿಟ್ಟು
ಬಾಯಿಬಿಟ್ಟು ಕಿವಿಕೊಟ್ಟು ಕೇಳುವ ಸಮಯವಯ್ಯ
ಗಿಳಿ ಪಂಜರದಿಂದ ಹೊರಗೆ ಬಂದು
ಮಾನವರ ಭವಿಷ್ಯ ನುಡಿದು
ಹಾರಾಡುವ ಕಾಲವಿದು
ಮಂಗ್ಯಾನಾಟ ಆಡಿಸುವ ಮಾನವನಿಗೆ
ಮಂಗಗಳು ಚೇಷ್ಟೆ ಮಾಡುವ ಈ ಸಮಯ
ದೈತ್ಯ ಮಾನವನ ಮಿತಿ ಮೀರಿದ ಹಾರಾಟಕೆ
ಕೊರೊನಾವೆಂಬ ಸೂಕ್ಷ್ಮಾಣು
ಹಕ್ಕಿಯಂತೆ ಹಾರಾಡುವದನು ಕೆಲಕಾಲ ನಿಲ್ಲಿಸಿತು
ಮೀನಿನಂತೆ ಈಜುವದನು ಚಿಗರೆಯಂತೆ
ಓಡುವುದನು ಸಹ ತಡೆಯಿತು
ಭೂಮಿಯಲಿ ಮನುಷ್ಯ ಮನುಷ್ಯನಂತೆ
ಬಾಳಲು ಪಾಠ ಕಲಿಸಿತು
ನಿಸರ್ಗದ ದುರ್ಬಳಕೆಗೆ ಕಡಿವಾಣ ಹಾಕಿ
ನಾನೆಂಬ ಅಹಂಕಾರಕೆ ಅರಿವು ತಂದ ಕಾಲ
ನೋಡಿ ಸರ್
ಮಂಗನಿಂದ ಮಾನವ ಆದರೂ ಮಾನವರು ಕೋತಿಗಳು ಸಾರ್ ಕೋತಿಗಳು.
ಲಲಿತಾ ಪ್ರಭು ಅಂಗಡಿ