ಬಸವ ಜಯಂತಿಯ ವಿಶೇಷ

ಆಶಾ ಎಸ್ ಯಮಕನಮರಡಿ

ಭುವಿಯ ಬೆಳಕು ಬಸವಣ್ಣ

ಸೃಷ್ಟಿಯ ಮಹಾನ್ ಶಕ್ತಿ ಬೆಳಕು.ಗಾಡಾಂಧಕಾರವನು ಸೀಳುವ ಬೆಳಕಿನ ಕಿರಣಗಳು ಮನುಷ್ಯನ ಬದುಕಿಗೆ ಭರವಸೆಯ ಚೈತನ್ಯ ತುಂಬುವ ಜೀವಕಳೆಯಾಗಿವೆ.
ಅಂತಹ ಮಹಾನ್ ಬೆಳಕಿನ ಪ್ರತಿರೂಪವಾಗಿ ಸಂಕುಚಿತ ಸಮಾಜದ ಅನಿಷ್ಟತೆಗಳ ಕತ್ತಲನು ಕರಗಿಸಲು ಮೂಡಿಬಂದ ಬೆಳ್ಳಿಕಿರಣವೆ ಬಸವ. ಯುಗಪುರಷ,ಕ್ರಾಂತಿಕಾರಕ,ಜಗದೋಧ್ಧಾರಕ ,ಮನುಕುಲದ ಸಂತ ಹೀಗೆ ಹತ್ತು ಹಲವು ನಾಮವಿಶೇಷಗಳಿಂದ ಜನಮನದಲ್ಲಿ ಬೆರೆತಿರುವ ಅಣ್ಣ ಬಸವಣ್ಣನವರ ಬದುಕು ಸಾರ್ಥಕತೆಯ ಸಾಧನೆ ಅರಿಯದವರು ಯಾರು ಇಲ್ಲಾ.
ಜನಸಾಮಾನ್ಯರ ಉಧ್ಧಾರಕ್ಕಾಗಿಯೆ ಜನ್ಮವೆತ್ತಿ ಅವರಿಗಾಗಿಯೆ ಬದುಕನ್ನೆ ಹೋರಾಟವಾಗಿಸಿಕೊಂಡು ಸಮಾಜದಲ್ಲಿ
ಮಹತ್ತರ ಬದಲಾವಣೆ ತರಲು ಧರ್ಮಕ್ರಾಂತಿಯನ್ನೆ ಮಾಡಿದ ಗುರುಬಸವಣ್ಣನವರು ಹನ್ನೆರಡನೆ ಶತಮಾನದ ಆದಿಯಲ್ಲಿ ಸಮಾಜ ವ್ಯವಸ್ಥೆಯಲ್ಲಿ ಬೇರೂರಿದ್ದ ವರ್ಗ,ವರ್ಣ,ಲಿಂಗ, ವೃತ್ತಿ ಭೇಧಗಳನ್ನೆಲ್ಲಾ ತೊಡೆದು ಸಂಪೂರ್ಣವಾಗಿ ಮಾನವೀಯ ನೆಲೆಗಟ್ಟಿನ ಮೇಲೆ ರೂಪುಗೊಂಡ ಹೊಸ ಧರ್ಮವನ್ನೆ ಸ್ಥಾಪನೆಮಾಡಲು ತಮ್ಮ ತನು ಮನ ಧನವನ್ನೆ ಪಣಕ್ಕಿಟ್ಟು ತಳವರ್ಗದವರನ್ನು ಮೇಲಕ್ಕೆತ್ತಿದ ಸಂತಮಹಾತ್ಮ ಬಸವಣ್ಣ. ಹುಟ್ಟಿದೂರು ಬಸವನ ಬಾಗೇವಾಡಿಯ ತೊರೆದು ಅಕ್ಕ ನಾಗಾಯಿಯ ಜೊತೆಗೊಡಿ ಕಪ್ಪಡಿ ಸಂಗಮನಾಥನಲ್ಲಿ ಮೊರೆಹೋದ ದಿನಗಳಲ್ಲಿ ಗುರುವಿನಾಜ್ಞೆಯಂತೆ ಕಲ್ಯಾಣಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಅರಸ ಬಿಜ್ಜಳನ ಆಸ್ಥಾನದ ಕರಣಿಕರಾಗಿ ಕಾಯಕಮಾಡುತ್ತಲೆ ಸಮಾಜ ಸುಧಾರಣೆಯ ಕರ್ತವ್ಯವನ್ನು ಮನಮುಟ್ಟಿ ಮಾಡಿದ ಪರಿಣಾಮವೆ ನಡೆದುದೆ ಧರ್ಮಕ್ರಾಂತಿ. ವೃತ್ತಿ ಆಧಾರಿತ ವರ್ಣವ್ಯವಸ್ಥೆಯನ್ನು ಧಿಕ್ಕರಿಸಿ “ಹೊಲಸು ತಿಂಬುವವನೆ ಹೊಲೆಯ”ಎಂಬ ದುರ್ಮಾರ್ಗಿಗಳ ಗುಣಗಳನು ಎತ್ತಿತೋರಿದ ಧೀರ ಅಣ್ಣಬಸವಣ್ಣ. “ದುಡಿದುಣ್ಣುವವನೆ ಅವನಿಯೊಳು ಧನಿಕ
ದುಡಿಯದೆ ಉಣ್ಣುವವ ಕಡು ಬಡವ” ಎಂದು ಹೇಳುತ್ತಲೆ ಸಮಾಜದಲ್ಲಿನ ವರ್ಗವ್ಯವಸ್ಥೆಗೆ ಸವಾಲನ್ನು ಹಾಕುತ್ತ “ಕುಡಿಯುವ ನೀರು ಉಣ್ಣುವ ಅನ್ನ ಎಲ್ಲರಿಗೂ ಒಂದೆ ಎನ್ನುವಲ್ಲಿ ಉಣ್ಣುವ ಬಟ್ಟಲು ನೋಡುವ ಕನ್ನಡಿಯ ಕಂಚೊಂದೆ,ಎಂದು ಸಾರುತ್ತಲೆ
ಸಮಾಜದಲ್ಲಿರುವ ಮೇಲು ಕೀಳಿನ ಅಂತರವನು ತೊಡೆದು ಗಾಳಿ ಬೆಳಕು ನೀರಿಗೆ ಇರದ ಭೇದಭಾವ ಅದನ್ನೆ ಬಳಸಿ ಬದುಕುವ ಮನುಷ್ಯನಿಗೆ ಏಕೆ ಎಂದು ಸಮಾಜವನ್ನೆ ಪ್ರಶ್ನಿಸುತ್ತಾರೆ ಅಣ್ಣ ಬಸವಣ್ಣನ. ಕಾಯಕ ದಾಸೋಹದ ಪರಿಕಲ್ಪನೆಯನ್ನು ಮೊದಲಿಗೆ ನೀಡಿದ ಬಸವಣ್ಣನವರು ಗುರು ಲಿಂಗ ಜಂಗಮ ಸೇವೆಯ ಮಹತ್ವ ಹಾಗೂ ಚಾಚು ತಪ್ಪದೆ ಅವುಗಳನ್ನು ಪಾಲಿಸುವಲ್ಲಿ ದೊರೆಯುವ ಫಲಗಳನ್ನು ತಿಳಿಹೇಳುತ್ತಾರೆ. ಯಾವ ವರ್ಗದವರಾದರೂ ಸತ್ಯಶುದ್ಧ ಕಾಯಕದಿಂದ ದ್ರವ್ಯವ ಗಳಿಸಿ ಅದರಲ್ಲಿ ಗುರು ಲಿಂಗ ಜಂಗಮಕ್ಕೆ ದಾಸೋಹ ಮಾಡುವ ಭಾವದಲ್ಲಿ ಸೋಹಂ ಭಾವವಿರದೆ ಕೇವಲ ನಿಸ್ವಾರ್ಥದ ದಾಸೋಹ ಇದ್ದರೆ ಮಾತ್ರ ಅದು ಗುರುಸೇವೆಯಾಗಿ ಲಿಂಗ ಪೂಜೆಯಾಗಿ ಜಂಗಮಕ್ಕೆ ದಾಸೋಹವಾಗಿ ಅರ್ಪಿತಾ ಗೊಳ್ಳುತ್ತದೆ ಎಂಬುದನ್ನು ತಮ್ಮ ನಡೆನುಡಿಯಲ್ಲಿ ಒಂದಾಗಿಸಿ ಕೊಂಡ ಶರಣ ಶ್ರೇಷ್ಠ ನಮ್ಮ ಬಸವಣ್ಣ. ಸ್ಥಾವರಕ್ಕೆ ಅಳಿವಿದೆ ಜಂಗಮಕ್ಕೆ ಅಳಿವಿಲ್ಲ ಎಂದು ಹೇಳುವಲ್ಲಿ ಬಸವಣ್ಣನವರು ಅವುಗಳಲ್ಲಿ ಇರುವ ಗುಣಾವಗುಣಗಳ ಬಗ್ಗೆ ತಿಳಿ ಹೇಳುತ್ತಾರೆ.ವರ್ಗ ವ್ಯವಸ್ಥೆಯಲ್ಲಿ ರೂಪುಗೊಂಡಿದ್ದ ದೇವಾಲಯಗಳಲ್ಲಿ ಕೆಳವರ್ಗದವರಿಗೆ ಪ್ರವೇಶವಿರದೆ,ಧಾರ್ಮಿಕ ಕಾರ್ಯಗಳಲ್ಲಿ ಹೆಣ್ಣು ಸೂತಕ ಎನ್ನುವ ಅನರ್ಥದ ಆಚಾರಗಳ ಬೇಡಿಯನ್ನು ಕಿತ್ತೊಗೆಯುವ
ಮೂಲಕ ಸಮಸಮಾಜ ನಿರ್ಮಾಣದ ಹೊಣೆ ಹೊತ್ತಿದ್ದ ಬಸವಣ್ಣನವರು,ಕಲ್ಲುಕಟ್ಟಡದಲ್ಲಿ ಕಲ್ಲ ದೇವರ ಮಾಡಿ ಪೂಜಿಸಿದರೆ ನಿಜ ಮುಕ್ತಿ ದೊರೆಯುವುದೆ ಎಂದು ಪ್ರಶ್ನಿಸುತ್ತ ಕಲ್ಲು ಮಂದಿರ ಮೂರ್ತಿ ಪೂಜೆ ಬಹಿಷ್ಕರಿಸಿ ಜೀವಂತ ದೇಹವೆ ದೇವನ ನಿಜ ವಾಸಸ್ಥಾನ ಅದುವೆ ದೇಗುಲ ತನ್ನ ಅಂತರಾತ್ಮದ ಪ್ರತಿರೂಪವಾದ ಇಷ್ಟ ಅಂಗೈಯಲ್ಲಿರುವ ಲಿಂಗವೆ ನಿಜ ದೈವ
ಎಂಬುದನ್ನು ಜನಸಾಮಾನ್ಯರ ಅರಿವಿಗೆ ನಿಲುಕುವಂತೆ ತಿಳಿಹೇಳಿದರು ಗುರುಬಸವ.ಉಳ್ಳವರ ಅನುಕೂಲ ಸಿಂಧುವಾದ ದೇಗುಲಗಳು ವ್ಯಾಪಾರಿ ಕೇಂದ್ರಗಳು ದೇವರು ಮತ್ತು ಭಕ್ತನ ನಡುವೆ ವೈದಿಕನ ದರ್ಪನಿಜಕ್ಕೂ ದೇವರಕುರಿತು ಭಕ್ತಿಭಾವ ಬರುವ ಬದಲಿ ಭಯವೆ ಮೂಡುತ್ತದೆ.ಮುಗ್ಥ ಜನರ ನಂಬಿಕೆಗಳನ್ನೆ ಬಂಡವಾಳವಾಗಿರಿಸಿಕೊಂಡು ಅವರ ಭಾವನೆಗಳನೆ ಬಳಸಿಕೊಂಡು ಅವರಿಗೆ ಅನ್ಯಾಯ ಮಾಡುವವರ ವಿರುದ್ಧ ದಂಗೆ ಎದ್ದುದರ ಪರಿಣಾಮವೆ ಕಲ್ಯಾಣದ ಕ್ರಾಂತಿ ಆದದ್ದು. ಅಣ್ಣ ಬಸವಣ್ಣನವರ ಮಾರ್ಗದರ್ಶನದಲ್ಲಿ ಲಿಂಗ ಭೇದವಿಲ್ಲದೆ ಎಲ್ಲರೂ ದುಡಿದುಂಡು ಸಿರಿವಂತರಾದಾಗ
ಬಸವಣ್ಣನವರು “ಬೇಡುವವರಿಲ್ಲದೆ ಬಡವನಾದೆನು ಎಂದು” ಕೊರಗುತ್ತಾರೆ.ವಚನಗಳ ರಚನೆ ಅನುಭಾವಗಳನ್ನು ಹಂಚುವ ಕೇಂದ್ರ ಅನುಭಾವ ಮಂಡ್ಯಕ್ಕೆ ತಿಲಕ್ ಪ್ರಾಯರಾದ ಪ್ರಭು ಅಲ್ಲಮರ ನೇತ್ರತ್ವದಲ್ಲಿ ಕಲ್ಯಾಣ ಪಟ್ಟಣ ಬೆಳಗಿ ಅದರ ಪ್ರಭೆ ಜಗದಗಲಕ್ಕೆ ಬೀರಿದಾಗ ಬೇರೆ ಬೇರೆ ರಾಜ್ಯಗಳಿಂದ ಅನೇಕ ಶರಣರು ಅಣ್ಣಬಸವಣ್ಣರ ಕರುಣ ಬಯಸಿ ಕಲ್ಯಾಣಕ್ಕೆ ಬಂದಾಗ ಎಲ್ಲಾ ಶರಣರನ್ನು ಅವರವರ ಜ್ಞಾನದಿಂದಲೆ ಗುರುತಿಸಿದ ಬರುವೆ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಅವತ್ತಿನ ದಿನಗಳಲ್ಲಿಕಲ್ಯಾಣದತ್ತ ಹರಿದುಬಂದಿರುವುದೆ ಸಾಕ್ಷಿಯಾಗಿದೆ.
“ಇವನಾರವ ಇವನಾರವ ಎನ್ನದೆ ಇವ ನಮ್ಮವನೆಂಬ ಅನಿಕೇತನ ಭಾವದಲ್ಲಿ ಮಾನವೀಯತೆಯ ನೆಲೆಯಲ್ಲಿ ಎಲ್ಲರನ್ನು ಒಂದಾಗಿಸಿದ ಗುರುಬಸವ ಅನ್ಯರಿಗೆ ಉಪದೇಶ ಮಾಡದೆ ನುಡಿದುದನ್ನು ನಡೆದು ತೋರಿ ಜಗಕೆ ಮಾದರಿಯಾದರು.
ಓದು ವಿದ್ಯೆ ಅಧಿಕಾರ ಅಂತಸ್ತುಗಳ ಕ್ಷಣಿಕ ಮೌಲ್ಯಗಳ ಕುರಿತು ಹೇಳುತ್ತಾ “ನೂರನೋದಿ ನೂರ ಕೇಳಿದರೇನು ಆಸೆ ಅಳಿಯದೆ ರೋಷ ಬಿಡದು” ಎಂಬ ಸತ್ಯವನ್ನು ಜಗದೆದಿರು ತೆರೆದಿಡುತ “ತನ್ನ ತಾ ಅರಿಯದೆ ಅನ್ಯರನು ದೂಷಿಸುತ ಲೋಕದ ಡೊಂಕ ತಿದ್ದುವಲ್ಲಿ ಶ್ರಮಿಸುವವರಿಗೂ ವಚನದಲಿ ಕಿವಿಮಾತು ಹೇಳಿರುವುದು ತುಂಬಾ ಅರ್ಥಪೂರ್ಣ ಎನ್ನಿಸುತ್ತದೆ. ಎಲ್ಲವನು ಬಲ್ಲವ ನಾನಲ್ಲ
ಎಲ್ಲ ಶರಣರ ಮನೆಮನೆಗೆ ತಿರುಗಿ ಜ್ಞಾನ ಪಡೆದೆನು ಎಂದರುಹುವ ಬಸವಣ್ಣನವರು
“ಎನಗಿಂತ ಕಿರಿಯರಿಲ್ಲ ಶಿವಭಕ್ತಿರಿ ಗಿಂತ ಹಿರಿಯರಿಲ್ಲ” ಎನ್ನುವ ಕಿಂಕರ ಭಾವದಲ್ಲಿ
ಬಾಗಿದ ಶಿರ ಮುಗಿದ ಕೈ ನಮ್ರತೆಯ ಸಾಕಾರ ಮೂರ್ತಿ ಯಾಗಿಯೆ ಜಗದಗಲಕೆ ಗುರುವಾದ ಘನತೆ ಅಣ್ಣ ಬಸವಣ್ಣನವರ ದ್ದು.
ಶತಶತಮಾನಗಳು ಉರುಳಿದರು ಬಸವ ಧರ್ಮದ ಕೀರ್ತಿ ಇಂದಿಗೂ ಅಳಿಯದೆ ಉಳಿಯಲು ಕಾರಣ ಅವರ ಬದುಕಿನ ಪರಿಯನ್ನು ಪರಿಣಾಮಕಾರಿಯಾಗಿ ತಿಳಿಸುವ ಅವರ ಅಮುಲ್ಯ ವಚನ ಭಂಢಾರವಾಗಿದೆ. ಸರ್ವ ಕಾಲಕ್ಕೂ ಪ್ರಸ್ತುತವಾಗುವ ಅವರ ವಚನಗಳು ಪ್ರಸ್ತುತ ಸಮಾಜದ ಎಲ್ಲಾ ರಂಗಗಳ ಆಗುಹೋಗುಗಳಿಗೆ ಮಾರ್ಗದರ್ಶನ ನೀಡುವ ಬೆಳಕಿನ ಕಿರಣಗಳಾಗಿವೆ.
ಇಂದಿಗೂ ಬಸವ ಭಕ್ತರ ಹಾಗೂ ಜನಸಾಮಾನ್ಯರ ಮನದಮೇಲೆ ಅತ್ಯಂತ ಪ್ರಭಾವ ಬೀರಿದ ನಿಜ ಅರ್ಥದಲ್ಲಿ ನಿಜ ಬದುಕಿನ ಸಪ್ತಸೂತ್ರ ತಿಳಿಸುವ ಅವರ ಜನಪ್ರಿಯ ವಚನ
” ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ
ಮುನಿಯ ಬೇಡಾ ಅನ್ಯರಿಗೆ ಅಸಯ್ಯ ಪಡಬೇಡಾ
ತನ್ನ ಬಣ್ಣಿಸಬೇಡ ಇದಿರು ಹಳಿಯಲು ಬೇಡ
ಇದೆ ಅಂತರಂಗ ಶುದ್ದಿ ಇದೆ ಬಹಿರಂಗ ಶುದ್ದಿ
ಇದೆ ನಮ್ಮ ಕೂಡಲ ಸಂಗಮ ದೇವನ ಒಲಿಸುವಾ ಪರಿ”

ಸಪ್ತಸೂತ್ರದ ಈ ವಚನವನ್ನು ಎಲ್ಲರೂ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಕು ವ್ಯಕ್ತಿಯೊಂದಿಗೆ ಸಮಾಜ ದೇಶ ಎಲ್ಲವೂ ಪರಿಪೂರ್ಣತೆಯನ್ನು ನಿಸ್ಸಂದೇಹವಾಗಿ ಸಾಧಿಸಬಹುದು ಎಂಬುದನ್ನು ನಾವೆಲ್ಲ ಅರಿತು ಈ ಬಸವ ಜಯಂತಿಯನ್ನು ಆಚರಿಸಿದರೆ ಅದಕ್ಕೊಂದು ಅರ್ಥಹಾಗೂ ಸಾರ್ಥಕತೆ ದೊರೆಯುತ್ತದೆ.
———————————————

Leave a Reply

Back To Top