ಬಸವ ಜಯಂತಿ ವಿಶೇಷ

ಲಲಿತಾ ಪ್ರಭು ಅಂಗಡಿ

ಸಾಂಸ್ಕೃತಿಕ ರೂವಾರಿ

ವಿಶ್ವಗುರು ಬಸವಣ್ಣ.

ಹನ್ನೆರಡನೆಯ ಶತಮಾನದ ಶಿವಶರಣ ಶರಣೆಯರ ಕಲ್ಯಾಣ ಕ್ರಾಂತಿ ಕರ್ನಾಟಕದ ಇತಿಹಾಸದಲ್ಲಿಯಷ್ಟೆ ಅಲ್ಲ, ಭಾರತಕ್ಕಷ್ಟೆ ಅಲ್ಲ, ಇಡೀ ವಿಶ್ವಕ್ಕೆ ಒಂದು ಗುರುತರವಾದ ಅರ್ಥಪೂರ್ಣವಾದ ಅಮೂಲ್ಯವಾದ ಚಾರಿತ್ರಿಕ ಕಾಲ, ವಚನ ಎಂಬ ಮೂರಕ್ಷರ ಜಗತ್ತು ಎಂಬ ಮೂರು ಅಕ್ಷರಕ್ಕೆ ವಿಸ್ತಾರವಾದುದು.
ವಚನಕಾರರು ತಮ್ಮ ಅನುಭವಗದ ನುಡಿಗಳನ್ನು ಕಾಯಕದ ಮೂಲಕ ಆಡುಭಾಷೆಯಲ್ಲಿ ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ಬರೆದು ಅನುಭವ ಮಂಟಪದಲ್ಲಿ ಚರ್ಚಿಸಿ,ಕಾಯಕ ದಾಸೋಹದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಅಪರೂಪದ ಶಿವಶರಣರ ಪಾರ್ಲಿಮೆಂಟ್ ಅನುಭವ ಮಂಟಪ ಕಲ್ಯಾಣವಾಗಿತ್ತು.
ಈ ಪಾರ್ಲಿಮೆಂಟಿನ ವಿಚಾರದ ರೂವಾರಿ ಬಸವಣ್ಣ , ಪ್ರಜಾಪ್ರಭುತ್ವದ ಕನಸು ಕಂಡ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಮಾಡಿದ್ದು ಬಸವಣ್ಣ, ಸಮಾನತೆಗಾಗಿ ವಚನಗಳ ಮುಖಾಂತರ ಐತಿಹಾಸಿಕ ದಾಖಲೆಯ ಕ್ರಾಂತಿಯನ್ನೇ ಮಾಡಿದ್ದು ಅಮೋಘ ಅಪ್ರತಿಮ ವೈಚಾರಿಕ ತಳಹದಿ ಮೇಲೆ ಆದ ಕ್ರಾಂತಿ ಇಂದು ವಿಶ್ವ ಮಟ್ಟದಲ್ಲಿ ಹೆಸರುಗಳಿಸಿದೆ.
21ನೇಯ ಶತಮಾನಕ್ಕೂ ಸಹ ಅವರ ನಡೆ ನುಡಿಗಳು ಆಚಾರ ವಿಚಾರ,ಕಾಯಕ ದಾಸೋಹ, ಕಾಯಕವೇ ಕೈಲಾಸ ಎಂಬ ಶರಣರ ಅಂದಿನ ವಾಣಿ ಪ್ರಸ್ತುತದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಇನ್ನೂ ಅನೇಕ ವಲಯಗಳಲ್ಲಿ ಚಿಂತನ ಮಂಥನ ಮಾಡುವಂತ ವೈಚಾರಿಕ ತಳಹದಿ ಮೇಲೆ ನಿಂತಿವೆ.

ಬಸವಣ್ಣನವರ ಮುಂದಾಳತ್ವದಲ್ಲಿ ನಡೆದ ಸಮಾಜೋದ್ಧಾರದ ಪ್ರತಿಪಾದನೆ ಅಂದಿಗೂ, ಇಂದಿಗೂ,ಮುಂದೆಯೂ ಬೇಕಾಗಿದೆಯೆಂದರೆ ಬಸವಣ್ಣನ ವಿಚಾರ ಶಕ್ತಿಗೆ ತಲೆಬಾಗಲೇ ಬೇಕು. ಸಮಾನತೆ, ಶ್ರದ್ಧೆ, ಶ್ರಮ,ಮೇಲು ಕೀಳು, ಜಾತೀಯತೆ,ಆಚಾರ ವಿಚಾರ, ಮೂಢನಂಬಿಕೆ, ಕಂದಾಚಾರ, ಸಂಸ್ಕೃತಿ, ಸೌಹಾರ್ಧ,ದಯೆ,ಕರುಣೆ, ಭಕ್ತಿ, ನಿಷ್ಟೆ,ವಿನಯ ,ನಡೆ,ನುಡಿ, ದುಡಿಮೆ, ಸ್ತ್ರೀ ಸಮಾನತೆ ಇತ್ಯಾದಿ ಪ್ರತಿಯೊಂದು ಬದುಕಿನ ವಿಷಯದಲ್ಲಿ ಬಸವಣ್ಣ ತನ್ನ ಗಾರುಡಿಗತನದಿಂದ ಸಮಸ್ತ ಮಾನವ ಕುಲದ ಏಳಿಗೆಗಾಗಿ ಹೋರಾಡಿ, ಕೇಂದ್ರಬಿಂದುವಾಗಿ,ವಿಶ್ವಗುರುವಾಗಿ, ಜಗಜ್ಯೋತಿಯಾಗಿ ಬೆಳೆದ,ಬೆಳಗಿದ, ನಡೆದಂತೆ ನುಡಿದು, ನುಡಿದಂತೆ ನಡೆದು ತೋರಿಸಿ ವಿಶ್ವಕ್ಕೆ, ಕರ್ನಾಟಕದ ಘನತೆ ಗೌರವದ ಗೌರವಕ್ಕೆ ಕಿರೀಟಪ್ರಾಯನಾದ ಬಸವ ಸಮನ್ವಯದ ಹರಿಕಾರ, ಸಾಂಸ್ಕೃತಿಕ ಪ್ರತಿರೂಪದ ನೆಲೆಗಾರ,12ನೇಯ ಶತಮಾನದಲ್ಲಿ ಕಲ್ಯಾಣಕ್ಕೆ ಆಗಮಿಸಿದ್ದ ಬೇರೆ ಬೇರೆ ರಾಜ್ಯಗಳಿಂದ ದೇಶಗಳಿಂದ ಬಂದು ನೆಲೆಸಿದ ಶಿವಶರಣರ ವಚನಗಳೆ ಸಾಕ್ಷಿ
ಬಸವಣ್ಣನವರ ಕಾಲ ಕಳೆದು ನೂರಾರು ವರ್ಷಗಳಾದರೂ ಇಪ್ಪತ್ತೊಂದನೆಯ ಶತಮಾನಕೆ ಅವರ ನುಡಿಗಳ ಆಚರಣೆ ಅತ್ಯಗತ್ಯವಾಗಿವೆ, ದ್ವೇಷ,ಜಾತೀಯತೆ,ಮೌಡ್ಯತೆಯಲಿ, ಮಾನವೀಯತೆ ಮರೆಯಾಗುತ್ತಿರುವ ಇಂತಹ ಸಮಯದಲ್ಲಿ ಬಸವನ ನುಡಿಯ ಸಾಕಾರತ್ವ ಅತ್ಯವಶ್ಯವಾಗಿದೆ,ಅರಿಯಬೇಕಾಗಿದೆ,ಅರಿತು ಬಾಳಬೇಕಾಗಿದೆ ಬಸವಣ್ಣನವರ ನುಡಿಗಟ್ಟಿನಂತೆ, ವಿಶ್ವಸಂದೇಶವನ್ನು ಕೊಟ್ಟ ವಿಶ್ವ ಗುರು ಮಾನವತಾವಾದಿ ಜಗಜ್ಯೋತಿ ಬಸವೇಶ್ವರರು ಕರ್ನಾಟಕದ ಸಾಂಸ್ಕೃತಿಕ ನಾಯಕರಷ್ಟೆ ಅಲ್ಲ ಇಡೀ ವಿಶ್ವಕ್ಕೆ ಸಾಂಸ್ಕೃತಿಕ ನಾಯಕ , ಎಂತಲೆ ಸಿದ್ಧಯ್ಯಪುರಾಣಿಕರು ಹೇಳಿದ್ದು,ಬಸವನ ಬೆಳಕೆ ಎಲ್ಲಾಡಿಬಂದೆ,ಭಾರತವೆಲ್ಲಾ ಸುತ್ತಾಡಿ ಬಂದೆ ,ಮುಂದುವರಿಯುತ್ತಾ ಬಸವನ ಬೆಳಕೆ ಎಲ್ಲಿಗೆ ಮುಂದೆ, ವಿಶ್ವವೆಲ್ಲವೆ ನನದೆಎಂದೆ ಎನ್ನುವ ರೀತಿಯಲ್ಲಿ ಬಸವಣ್ಣನನ್ನು democracy of heart ಎಂದು ಗುರುತಿಸುವಷ್ಟು ಬೆಳಕು ಮೂಡಿಸಿದ್ದಾರೆ,
ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತತ್ತ ಸಂಬಂಧವಯ್ಯಾ ಎನ್ನುವ ಅಲ್ಲಮರ ನುಡಿಗಳಿಗೆ ಎಲ್ಲಿಯ ಕೂಡಲಸಂಗಮ ಎಲ್ಲಿಯ ಲಂಡನ್ ,ಬಸವನ ಬೆಳಕು ಕರ್ನಾಟಕದ ಕೀರ್ತಿಯು ಪ್ರಾಚೀನ ಪ್ರಜಾಪ್ರಭುತ್ವದ ನೆಲದಲ್ಲಿ ಬಸವನ ಪ್ರತಿಮೆ ಅನಾವರಣಗೊಂಡಿದ್ದು ಕರ್ನಾಟಕದ ಸಾಂಸ್ಕೃತಿಕ ನಾಯಕನ ಧೀಮಂತ ವ್ಯಕ್ತಿತ್ವದಿಂದ, ಡೆಮಾಕ್ರಸಿ ಎಂದರೆ ನಾವು ಅಬ್ರಹಾಂ ಲಿಂಕನ್ನ ಹೆಸರು ಕೋಟ್ ಮಾಡುತ್ತೇವೆ,ಮೆಗ್ನಾಕಾರ್ಟರ್ ಬಗ್ಗೆ ಹೇಳುತ್ತೇನೆ,ಆದರೆ ಅದಕ್ಕಿಂತಲೂ ಮೊದಲೆ ಎಂಟುನೂರು ವರ್ಷಗಳ ಮೊದಲೇ ಮಹಾತ್ಮ ಬಸವೇಶ್ವರರು Gender Equality,Women Empowerment, Democracy , ಬಗ್ಗೆ ಹೇಳಿದ್ದಾರೆ ಇಂತಹ ಮಹಾನ್ ಶಕ್ತಿ ಕರ್ನಾಟಕದ ಸಾಂಸ್ಕೃತಿಕ ರೂವಾರಿ, Mother of Hall Democracy ಲಂಡನ್ ಗೆ ಹೇಳಿದರೆ Father of Hall Democracy ಬಸವಣ್ಣ.
ಬಸವೇಶ್ವರ ಎಂಬ ಕನ್ನಡದ ಕರ್ನಾಟಕದ ಸುವರ್ಣಾಕ್ಷರವನ್ನು ಪ್ರಾಚೀನ ಪ್ರಜಾಪ್ರಭುತ್ವದ ಐತಿಹಾಸಿಕ ಹಿನ್ನೆಲೆ ಸಾರುವ ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲೆ ವಿಶ್ವಮಾನವತೆಯ ಕನ್ನಡದ ಕಲರವ ಮೊಳಗಿಸಲು ಕರ್ನಾಟಕದ ಸಾಂಸ್ಕೃತಿಕ ಬಳ್ಳಿಯ ಮಿಂಚು ಕಾರಣ.
ಅದಕ್ಕಾಗಿಯೇ ಜಗದಗಲ ಮುಗಿಲಗಲ,ಮಿಗೆಯಗಲ,ನಿಮ್ಮಗಲ ಪಾತಾಳದಿಂದತ್ತತ್ತ,,,,,,,,,,,. ವಿಶ್ವವ್ಯಾಪಿಯಾಗಿರುವ ಅವರ ಶ್ರಮಜೀವನದ, ಕಾಯಕ ದಾಸೋಹದಿಂದ ಎತ್ತೆತ್ತ ನೋಡಿದಡೆ ಬಸವನೆಂಬ ಬಳ್ಳಿ,ಒತ್ತಿ ಹಿಡಿದೊಡೆ ಭಕ್ತಿ ಎಂಬ ರಸವಯ್ಯಾ ಎಂಬ ಮಡಿವಾಳ ಮಾಚಿದೇವ ದೇವರ ನುಡಿಗಳು ಬಸವಣ್ಣನೆ ಸಾಂಸ್ಕೃತಿಕ ನಾಯಕ ಎಂಬುದಕ್ಕೆ ಘನತೆಗೆ ಪರಿಪೂರ್ಣವಾದ ಭಕ್ತಿಯ ನುಡಿಗಳೆ ಸಾಕ್ಷಿ,

ಕನ್ನಡನಾಡಿನ ಹೆಮ್ಮೆಯ ಪುತ್ರ ಬಸವ ಮೌಡ್ಯಗಳ ವಿರುದ್ಧ ಜಾಗ್ರತೆ ಮೂಡಿಸಿದ್ದು ಬಸವ,ಜೀವನದ ಸಾರವನ್ನು ವಚನಗಳ ಮೂಲಕ ಅರುಹಿದ ಸಾಂಸ್ಕೃತಿಕ ರೂವಾರಿ ಬಸವ ಇಂತಹ ಬಸವಾಕ್ಷರದ ಬಸವನ ಕುರಿತು ದೇಶ ವಿದೇಶಗಳ ನಾಯಕರು ನುಡಿದದ್ದು ಮೆಲುಕು ಹಾಕುವದಾದರೆ

ಬಸವಣ್ಣನವರು ಎಂಟುನೂರು ವರ್ಷಗಳ ಹಿಂದೆ ತಿಳಿಸಿದ ಆಚರಿಸಿದ,,, ತತ್ವಗಳನ್ನು ಆಚರಣೆಗೆ ತಂದರೆ ಭಾರತವಷ್ಟೆ ಅಲ್ಲ, ಇಡೀ ಜಗತ್ತನ್ನೇ ಮೇಲಕ್ಕೆತ್ತಬಲ್ಲಿರಿ ,,,. ಗಾಂಧೀಜಿ.

ಬಸವಣ್ಣನವರು ಓರ್ವ ಉನ್ನತಮಟ್ಟದ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದರು,ಅವರ ಅಮೂಲ್ಯವಾದ ಬೋಧನೆಗಳನ್ನು ಹೊಗಳುವದಕ್ಕಿಂತ ಅವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸುವುದು ಅಗತ್ಯವಾಗಿದೆ,,,..
ಡಾ.ಎಸ್ ರಾಧಾಕ್ರೃಷ್ಣನ್.

ಭಾರತದಲ್ಲಿ ಆಧ್ಯಾತ್ಮಿಕ ಜಾಗ್ರತೆಯನ್ನುಂಟು ಮಾಡಿದ ಬಸವೇಶ್ವರರು ಓರ್ವ ಶ್ರೇಷ್ಠ ಸಮಾಜ ಸುಧಾರಕರಾಗಿದ್ದಾರೆ,ಅವರಿಂದ ನಾನು ಪ್ರೇರಣೆ ಪಡೆದಿದ್ದೇನೆ.
ಡಾ,ಎ,ಪಿ,ಜೆ, ಅಬ್ದುಲ್ ಕಲಾಂ.

ಬಸವಣ್ಣನವರ ಹಾಗೆ ಜಾತೀಯತೆಯ ಮೇಲುಕೀಳುಗಳ ಬಗ್ಗೆ ಕುದಿದವರು, ನೊಂದವರು,ಬೆಂದವರು,
ಮತ್ತೊಬ್ಬರಿಲ್ಲ,ಅವರು ಸಾಧಿಸಿದ ಸಿದ್ಧಿ ಪವಾಡ ಸದ್ರುಶವಾಗಿದುದರಲ್ಲಿ ಸಂದೇಹವಿಲ್ಲ.
ರಾಷ್ಟ್ರಕವಿ ಕುವೆಂಪು.

ಇನ್ನೂ ಒಂದೆರಡು ಶತಮಾನಗಳಲ್ಲಿಯೆ ಹಿಂದೂಗಳು ಬಸವೇಶನ ಹೆಸರನ್ನು ಹೇಳದಿದ್ದರೂ ಆತನ ತತ್ವಗಳನ್ನು ಬಹುಪ್ರೇಮಾದರಗಳಿಂದಲೆ ಆಚರಿಸುವರೆಂದು ಖಂಡಿತವಾಗಿ ತಿಳಿಯಬೇಕು.
ಹರ್ಡೇಕರ್ ಮಂಜಪ್ಪನವರು.

ಬಸವಣ್ಣನವರನ್ನು ಕುರಿತು
ಪೌರಾಣಿಕ ಕಥೆ ಏನೇ ಹೇಳಲಿ,ಅವರು ಭಾರತ ದೇಶದ ಮೊಟ್ಟ ಮೊದಲನೆಯ ಸ್ವತಂತ್ರ ವಿಚಾರವಾದಿ ಆಗಿದ್ದರೆಂಬ ವಿಷಯ ಅತ್ಯಂತ ಸ್ಪಷ್ಟವಾಗಿದೆ.
ಆರ್ಥರ್ ಮೈಲ್ಸ್, ಪ್ರಾನ್ಸ್ ದೇಶದ ಅರ್ಥ ಶಾಸ್ತ್ರಜ್ಞ.

ಬಸವಣ್ಣನವರು ಅತ್ಯಂತ ಪ್ರಭಾವಿ ತತ್ವಜ್ಞರಾಗಿದ್ದು ಅವರು ಇಂದಿನ ಆರ್ಥಿಕ ವಿಚಾರಗಳಿಗೆ ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ,
ಅನ್ ಕ್ರಿಸ್ ಕಾರ್ಟರ್, ನ್ಯೂಜಿಲೆಂಡ್ ಮಂತ್ರಿ.

ಹೀಗೆ ದೇಶ ವಿದೇಶಗಳ ನಾಯಕರು ಕರ್ನಾಟಕದ ಬಾಗೇವಾಡಿಯ ಬೆಳಕು ಕಲ್ಯಾಣಕ್ರಾಂತಿಯ ವೈಚಾರಿಕ ತಳಹದಿಯ ರೂವಾರಿ ಜ್ಞಾನ ಭಂಡಾರದಿಂದ ಮಾನವನ ಏಳಿಗೆಗಾಗಿ ಹೋರಾಡಿದ್ದಕ್ಕೆ ವ್ಯಕ್ತಪಡಿಸಿದ ಉಕ್ತಿಗಳು..

ಸಾತ್ವಿಕ ಗುಣದಿಂದ ತಾತ್ವಿಕ ನೆಲೆಗಟ್ಟನ್ನು ತೋರಿಸಿದ ಬಸವ,,,, ಅರಿವೇ ಗುರು ಎಂದು ದಯವೇ ಧರ್ಮದ ಮೂಲವಯ್ಯ ,
ಅರಿತರೆ ಶರಣು, ಮರೆತರೆ ಮಾನವ.
ಅಯ್ಯಾ ಎಂದರೆ ಸ್ವರ್ಗ,ಎಲವೋ ಎಂದರೆ ನರಕ,
ಎನಗಿಂತ ಕಿರಿಯರಿಲ್ಲ,
ನುಡಿದರೆ ಮುತ್ತಿನ ಹಾರದಂತಿರಬೇಕು,
ಛಲಬೇಕು ಶರಣಂಗೆ ಪರಧನವನೊಲ್ಲೆನೆಂದು,
ಎಮ್ಮವರು ಬೆಸಗೊಂಡರೆ
ಶುಭಲಗ್ನವೆನ್ನಿರಿ,
ಇವನಾರವ ಇವನಾರವ ಎಂದೆನಿಸದಿರಯ್ಯಾ,
ಲೋಕದ ಡೊಂಕು ನೀವೇಕೆ ತಿದ್ದುವಿರಿ,
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ,
ದೇಹವೇ ದೇಗುಲವೆಂದು
ಸಾವಿರಾರು ವಚನಗಳ ಮೂಲಕ ಮಾನವರ ಜೀವಪರ ಮೌಲ್ಯಗಳ ಬೆಲೆ ತಿಳಿಸಿ ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಬಗ್ಗೆ ಅರಿವು ಮೂಡಿಸಿ ಮಾನವನ ಬದುಕಿನ ಸೊಗಡಿನ ಸಾರವನು, ಸ್ತ್ರೀ ಶಕ್ತಿಯ ಸಾಮರ್ಥ್ಯವನ್ನು ಅವಳಿಗೂ ಸಮಾನತೆಯ ಸ್ವಾತಂತ್ರ್ಯ ಕೊಟ್ಟ ಹರಿಕಾರ, ಸಾಂಸ್ಕೃತಿಕ ರೂವಾರಿ ಬಸವ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವ ಮಟ್ಟದಲ್ಲಿ ಶಾಂತಿಯ ರೂವಾರಿ ಬಸವ, ಬಸವಣ್ಣ, ವಿಶ್ವಗುರು.


Leave a Reply

Back To Top