ಜಗತ್ತಿನ ಕಾರ್ಮಿಕರ ದ್ರುವತಾರೆ

ವಿಶೇಷ ಲೇಖನ

ಜಗತ್ತಿನ ಕಾರ್ಮಿಕರ ದ್ರುವತಾರೆ

ಆಶಾ ಎಸ್.

ಕಾರ್ಲ್ ಮಾರ್ಕ್ಸ್ (1818-1883)

ಮಹಾನ್ ಮಾನವತಾವಾದಿಯಾದ ಕಾರ್ಲ್‌ಮಾರ್ಕ್ಸ್ ವೈಚಾರಿಕ ಪ್ರಪಂಚದಲ್ಲಿ ಶ್ರೇಷ್ಟ ದ್ರುವತಾರೆಯಾಗಿ ಕಂಗೊಳಿಸುತ್ತಾನೆ. ಅವನ ಹೆಸರನ್ನೆತ್ತಿದರೆ ಬಂಡವಾಳ ಶಾಹಿಗಳು, ಪಟ್ಟಭದ್ರರು, ಪ್ರತಿಗಾಮಿಗಳು ಮತ್ತು ಸಮಾಜ ದ್ರೋಹಿಗಳು ಕನಸಿನಲ್ಲೂ ಬೆಚ್ಚಿಬೀಳುವರು. ಬೆಂಕಿಯ ಇಲೆಯಂತಹ ಅವನ ಅತಿಶ್ರೇಷ್ಟ ಚಿಂತನೆಗಳ ಪ್ರಭಾವವನ್ನು ವಿವರಿಸಲು ಶಬ್ದಗಳೇ ಸಾಲುವುದಿಲ್ಲ.

 `ಜಗತ್ತಿನ ಕಾರ್ಮಿಕರೇ ಒಂದಾಗಿ, ನೀವು ನಿಮ್ಮ ಬಂಧನವನ್ನು ಹೊರತು ಕಳೆದುಕೊಳ್ಳುವುದು ಬೇರೇನೂ ಇಲ್ಲ: ನಿಮಗೆ ಜಯಿಸಲು ಇಡೀ ಜಗತ್ತೇ ಇದೆ’ ಎಂಬ ಅವನ ಸಂದೇಶ ಕಾರ್ಮಿಕ ಹೋರಾಟದ ಪ್ರೇರಕ ಶಕ್ತಿಯಾಗಿದೆ. ಅವನ ಸಂದೇಶ ಅಮರವಾಗಿದೆ. ಸರ್ವಕಾಲಕ್ಕೂ ಮತ್ತು ಸರ್ವ ಪಂಥಕ್ಕೂ ಮಾರ್ಕ್ಸ್‌ನೇ ಶೇಷ್ಠ ಚಿಂತನಾಕಾರ, ಅವನ ಅರ್ಥಿಕ ಚಿಂತನೆ ಅರ್ಥಶಾಸ್ತ್ರದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲು.

ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅಮರನಾಗಿರುವ ಕಾರ್ಲ್ ಹೆನ್ರಿಚ್ ಮಾರ್ಕ್ಸ್ 1818ರ
ಮೇ 5 ರಂದು ಜರ್ಮನಿಯ ಟ್ರಯರಿ ಎಂಬಲ್ಲಿ ಮಧ್ಯಮ ವರ್ಗದ ಯಹೂದಿ ಕುಟುಂಬದಲ್ಲಿ ಜನಿಸಿದನು. ಆತನ ತಂದೆಯಾದ ಹೆನ್ರಿಚ್ ಮಾರ್ಕ್ಸ್ ಒಬ್ಬ ವಕೀಲನಾಗಿದ್ದ. ಯಹೂದಿ ವಿರೋಧಿ ವಾತಾವರಣವಿದ್ದ ಆಗಿನ ಕಾಲದಲ್ಲಿ ಬದುಕುವುದು ದುಸ್ತರವೆನಿಸಿ ಮಾರ್ಕ್ಸ್‌ನ ತಂದೆತಾಯಿಗಳು ಅವನ ಬಾಲ್ಯದಲ್ಲಿಯೇ ಪ್ರಾಟೆಸ್ಟೆಂಟ್ ಪಂಥಕ್ಕೆ ಮತಾಂತರ ಹೊಂದಿದರು.

1830ರಲ್ಲಿ ತನ್ನ ಜಿಮ್ಮೇಶಿಯಂ ಶಾಲೆಗೆ ಸೇರಿದ ಮಾರ್ಕ್ 1835ರಲ್ಲಿ ಶಾರೀರಿಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ. ನಂತರ ಬಾನ್ ಮತ್ತು ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ಆತ ಕಾನೂನು ಇತಿಹಾಸ ಮತ್ತು ತತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಿ ಪದವಿ ಪಡೆದನು. ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿ ಅಂದರೆ 1841ರಲ್ಲಿ ಹೆಗಲ್‌ನ ತತ್ವಗಳ ಆಧಾರಿತ ವಿಷಯವಾದ ಸಂತೋಷವೇ ಸರ್ವಸ್ವ ಎಂಬ ಪ್ರೌಢ ಪ್ರಬಂಧಕ್ಕಾಗಿ ಜೆನಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ.

ತನ್ನ ಶಿಕ್ಷಣದ ತರುವಾಯ ಕಾರ್ಲ್‌ಮಾರ್ಕ್ಸ್ ಬಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ವೃತ್ತಿಗಾಗಿ ಅರ್ಜಿ ಸಲ್ಲಿಸಿದನು. ಆದರೆ ಆತನ ಮೂಲಭೂತ ಪರಿವರ್ತನವಾದ ಮತ್ತು ಕ್ರಾಂತಿಕಾರಿ ನಿಲುವುಗಳ ಕಾರಣದಿಂದಾಗಿ ಆತನಿಗೆ ಬಾನ್ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ ಹುದ್ದೆ ದೊರೆಯದೇ ಹೋಯಿತು. ಜರ್ಮನಿಯಲ್ಲಿ ಆಗ ಅಸ್ತಿತ್ವದಲ್ಲಿದ್ದ ಪ್ರತಿಕ್ರಿಯಾವಾದಿ ಸನ್ನಿವೇಶದಲ್ಲಿ ತನಗೆ ಹುದ್ದೆ ದೊರಕುವುದು ಅಸಂಭವ ಎಂದು ಅರಿತ ಮಾರ್ಕ್ಸ್ ನಂತರ ಪತ್ರಿಕೋದ್ಯಮದಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದ.

1842ರಲ್ಲಿ ಆತ ದ ರೆನಿಶ್ ಟೈಮ್ಸ್ ಪತ್ರಿಕೆಯ ಸಂಪಾದಕನಾಗಿ ನೇಮಕಗೊಂಡ. ಮಾರ್ಕ್ಸ್ ಈ ಪತ್ರಿಕೆಯಲ್ಲಿ ತನ್ನ ಕ್ರಾಂತಿಕಾರಿ ಸಂಪಾದಕೀಯಗಳನ್ನು ಬರೆದು ಶ್ರಮಿಕರು ಸರ್ಕಾರದ ವಿರುದ್ಧ ಬಂಡೇಳುವಂತೆ ಪ್ರಚೋದಿಸಿದನು. ಇದರಿಂದಾಗಿ ಸರ್ಕಾರ ಈ ಪತ್ರಿಕೆಯನ್ನು 1843ರಲ್ಲಿ ರದ್ದುಗೊಳಿಸಿ ಮಾರ್ಕ್ಸ್‌ನನ್ನು ಪ್ಯಾರಿಸ್ತಿಗೆ ಗಡಿಪಾರು ಮಾಡಿತು. ಇಲ್ಲಿ ಮಾರ್ಕ್ಸ್ ಫ್ರೆಂಚ್ ಸಮಾಜವಾದದ ಬಗ್ಗೆ ಅಧ್ಯಯನ ನಡೆಸಿದ.

1885ರಲ್ಲಿ ಮಾರ್ಕ್ಸ್‌ನನ್ನು ಫ್ರಾನ್ಸಿನಿಂದಲೂ ಗಡಿಪಾರು ಮಾಡಲಾಯಿತು. ಆಗ ಆತ ಬ್ರಸ್ಸೆಲ್ಸ್‌ನಲ್ಲಿ ಬಂದು ನೆಲೆಸಿದನು. ಅಲ್ಲಿ ಅವನು 1848ರವರೆಗೂ ಇದ್ದ. ಈ ವೇಳೆಯಲ್ಲಿ ಮಾರ್ಕ್ಸ್ ತನ್ನ ಜೀವನದುದ್ದಕ್ಕೂ ಆಪ್ತ ಮಿತ್ರನಾಗಿ, ಜೊತೆಗಾರನಾಗಿ ಮತ್ತು ಸಹಯೋಗಿಯಾಗಿ ಉಳಿದ ಫ್ರೆಡೆರಿಕ್ ಏಂಜೆಲ್ಸ್‌ನ ಸಂಪರ್ಕ ಬೆಳೆಸಿದ. ಮಾರ್ಕ್ಸ್ 1848ರ ಜರ್ಮನಿಯ ಕ್ರಾಂತಿಯಲ್ಲಿ ಸಕ್ರೀಯವಾಗಿ ಪಾಲ್ಗೊಂಡನು. ಇದರಿಂದಾಗಿ ಆತನನ್ನು ಪುನಃ 1849ರಲ್ಲಿ ಜರ್ಮನಿಯಿಂದ ಗಡಿಪಾರು ಮಾಡಲಾಯಿತು. ಹೀಗೆ ತನ್ನ ಕ್ರಾಂತಿಕಾರಿ ನಿಲುವುಗಳಿಂದಾಗಿ ಹಲವಾರು ಬಾರಿ ಗಡಿಪಾರು ಶಿಕ್ಷೆಗೆ ಒಳಗಾಗಿ ಬವಣೆ ಅನುಭವಿಸಿದ ಮಾರ್ಕ್ಸ್ ಅಂತಿಮವಾಗಿ ಲಂಡನ್ನಿಗೆ ಬಂದು ನೆಲೆಯೂರಿದ. ಮಾರ್ಕ್ಸ್ ತನ್ನ ಕಾಲವಾಗುವವರೆಗೆ ಅಂದರೆ 14, ಮಾರ್ಚ್ 1883ರ ವರೆಗೆ ಲಂಡನ್ನಿನಲ್ಲೇ ಜೀವಿಸಿದ್ದ.

ಮಾರ್ಕ್ಸ್ ಸರ್ಕಾರದ ಉನ್ನತ ಅಧಿಕಾರಿಯ ಮಗಳಾಗಿದ್ದ ಜೆನ್ನಿ ವೊನ್ ವೆಸ್ಟ್‌ಫಾಲೆನ್‌ ಎಂಬಾಕೆಯನ್ನು ವಿವಾಹ ಮಾಡಿಕೊಂಡಿದ್ದ. ಈಕೆ ಮಾರ್ಕ್ಸ್‌ನ ಜೀವನದುದ್ದಕ್ಕೂ ಎಂಥಹ ಕಷ್ಟದ ದಿನಗಳಲ್ಲೂ ಜೊತೆಗಾರಳಾಗಿಯೇ ಉಳಿದು ಅವನ ನೋವು ನಲಿವುಗಳಲ್ಲಿ ಭಾಗಿಯಾಗಿದ್ದಳು. ಲಂಡನ್ನಿನಲ್ಲಿನ ಮಾರ್ಕ್ಸ್‌ನ ಜೀವನ ಅತ್ಯಂತ ಹೀನಾಯವಾಗಿತ್ತು. ಅವನು ಅಲ್ಲಿ ಪಡಬಾರದ ಕಷ್ಟಗಳನ್ನು ಪಟ್ಟು ಬಡತನದ ಬೇಗೆಯಲ್ಲಿ ಜೀವನ ಸಾಗಿಸಿದ. ಅವನು ಬ್ರಿಟೀಷ್ ಮ್ಯೂಸಿಯಂ ಲೈಬ್ರರಿಯಲ್ಲಿ ರಾಜಕೀಯ ಅರ್ಥಶಾಸ್ತ್ರದ ಆಳ ಅಧ್ಯಯನ ಮಾಡುತ್ತ ತನ್ನ ಹೆಚ್ಚಿನ ಸಮಯವನ್ನು ಕಳೆದನು.

ನ್ಯೂಯಾರ್ಕ್ ಟ್ರಿಬ್ಯೂನಿಗೆ ಬರೆಯುತ್ತಿದ್ದ ಲೇಖನಗಳಿಗೆ ಬರುತ್ತಿದ್ದ ಅಲ್ಪಸ್ವಲ್ಪ ಸಂಭಾವನೆ ಮತ್ತು ಆಪ್ತ ಮಿತ್ರ ಏಂಜೆಲ್ಸ್ ನೀಡುತ್ತಿದ್ದ ಹಣಕಾಸಿನ ಸಹಾಯದಿಂದ ಹೇಗೋ ತನ್ನ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದ. ಆದಾಗ್ಯೂ ಲಂಡನ್ನಿನಲ್ಲಿನ ಅವನ ಮತ್ತು ಅವನ ಕುಟುಂಬದ ಜೀವನ ಖಾಯಿಲೆ, ನರಳಾಟ ಮತ್ತು ಬಡತನದ ಬೇಗೆಯಲ್ಲಿ ಸಾಗುತ್ತಿತ್ತು. ಅವನ ಜೀವನದ ಅಂತಿಮ ಮೂರು ಅಥವಾ ನಾಲ್ಕು ವರ್ಷಗಳ ಕಾಲ ಹೇಳತೀರದಷ್ಟು ಬವಣೆ ಅನುಭವಿಸಿದ.

 ಅವನ ಪತ್ನಿ ಜೆನ್ನಿ ಮತ್ತು ಮಕ್ಕಳು ಅನಾರೋಗ್ಯದಿಂದ ನರಳುತ್ತಿದ್ದ ಸಂದರ್ಭದಲ್ಲಿ ಅವನು ಏಂಜೆಲ್ಸ್‌ಗೆ ಬರೆದ ಪತ್ರದಲ್ಲಿ ವೈದ್ಯನಿಗೆ ಕೊಡಲು ನನ್ನ ಬಳಿ ಹಣವೇ ಇಲ್ಲವಾದ್ದರಿಂದ ನಾನು ವೈದ್ಯನನ್ನು ಕರೆಸಲಿಲ್ಲ. ಸುಮಾರು 8-10 ದಿನಗಳಿಂದ ನಾವು ಕೇವಲ ಬ್ರೆಡ್ಡು ಮತ್ತು ಆಲೂಗಡ್ಡೆಗಳನ್ನು ತಿಂದು ಜೀವಿಸುತ್ತಿದ್ದೇವೆ; ಆದರೆ ಮುಂದೆ ಇವನ್ನು ಕೊಳ್ಳುವುದೂ ಸಾಧ್ಯವಾಗುವುದಿಲ್ಲವೇನೋ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ….. ನನ್ನ ಬಳಿ ವೃತ್ತ ಪತ್ರಿಕೆಗಳನ್ನು ಕೊಳ್ಳಲು ಹಣವೇ ಇಲ್ಲವಾದ್ದರಿಂದ ದಾನಾಕ್ಕೆ ನಾನು ಏನನ್ನೂ ಬರೆದಿಲ್ಲ…… ಕಳೆದ ಒಂದೆರಡು ವಾರದ ಅವಧಿಯಲ್ಲಿ ನಾನು ಕಾರ್ಮಿಕರಿಂದ ಕೆಲ ಪಿಲ್ಲಿಂಗ್ ಮತ್ತು ಪೆನ್ಸ್‌ಗಳನ್ನು ಸಾಲ ಪಡೆದಿದ್ದೇನೆ. ಇದು ತುಂಬಾ ಘೋರ; ಆದಾಗ್ಯೂ ಇದು ಅನಿವಾರ್ಯ, ಏಕೆಂದರೆ ನಾವು ಹಸಿವಿನಿಂದ ನರಳ ಬೇಕಿತ್ತು” ಎಂದು ತಿಳಿಸಿದ್ದಾನೆ.

ಹೀಗೆ ಮಾರ್ಕ್ಸ್ ಲಂಡನ್ನಿನಲ್ಲಿ ಅತ್ಯಂತ ಘೋರವಾದ ಸನ್ನಿವೇಶಗಳನ್ನು ಎದುರಿಸಿ ಹೀನಾಯವಾದ ಜೀವನ ಸಾಗಿಸಿದ. ಆದಾಗ್ಯೂ ಅವನು ಓದುವುದು, ಬರೆಯುವುದು ಮತ್ತು ಕಾರ್ಮಿಕರನ್ನು ಸಂಘಟಿಸುವ ಚಟುವಟಿಕೆಯನ್ನು ಕೈಬಿಡಲಿಲ್ಲ. ಆತ ಅಂತರರಾಷ್ಟ್ರೀಯ ಕಾರ್ಯನಿರತ ಜನರ ಸಂಘಟನೆಯಾದ The First International ನ್ನು ಸಂಘಟಿಸಿದನು.

ಫ್ರೆಡರಿಕ್ ಏಂಜೆಲ್ಸ್‌ನು ಮಾರ್ಕ್ಸ್‌ನ ಆಪ್ತ ಮಿತ್ರನಾಗಿ ಆತನ ಜೀವನದುದ್ದಕ್ಕೂ ಸಹಕರಿಸಿದನು. ಬಹುಶಃ ಏಂಜೆಲ್ಸ್‌ನ ಹಣಕಾಸಿನ ನೆರವು ಮತ್ತು ಬೆಂಬಲ ಸಿಗದಿದ್ದಲ್ಲಿ ಮಾರ್ಕ್ಸ್‌ನ ಕುಟುಂಬ ಎಂದೋ ಬೀದಿ ಪಾಲಾಗಿ ನಶಿಸಿ ಹೋಗುತ್ತಿತ್ತು. ಹೀಗೆ ಮಾರ್ಕ್ಸ್‌ನಷ್ಟು ಬಡತನ, ನೋವು, ನರಳಾಟ ಮತ್ತು ಮಾನಸಿಕ ಚಿತ್ರಹಿಂಸೆಯನ್ನು ಅನುಭವಿಸಿದ ವ್ಯಕ್ತಿ ಮತ್ತು ಚಿಂತಕ ಮತ್ತೊಬ್ಬನಿಲ್ಲ ಎಂದು ಹೇಳಬಹುದು. ಇಷ್ಟಾಗಿಯೂ ಬಂಡವಾಳಶಾಹಿ ವಿರುದ್ಧದ ಅವನ ಸಮರ ಅಭಾದಿತವಾಗಿ ಮುಂದುವರಿದುದು ಅವನ ದೃಡ ಹೋರಾಟಕ್ಕೆ ಸಾಕ್ಷಿ


ಆಶಾ ಎಸ್.

One thought on “ಜಗತ್ತಿನ ಕಾರ್ಮಿಕರ ದ್ರುವತಾರೆ

  1. ಕಾರ್ಲ್ ಮಾರ್ಕ್ಸಸ್ ಒಬ್ಬ ಶ್ರೇಷ್ಠ ಚಿಂತಕ.ಆದರೆ ಆತನ ಬಡತನದ ನೋವು ಹೇಳತೀರದು.
    ಒಳ್ಳೆಯ ಬರಹವನು ಓದಲು ನೀಡಿದಿರಿ.ಆದರೆ ಓದಿದ ತರುವಾಯ ನೋವು ಕಾಡಿದ್ದು ಸತ್ಯ.

Leave a Reply

Back To Top