ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಅಬಾಬಿಗಳು
ಭೂತಾಯಿಯ ಮಡಿಲಲ್ಲಿ
ಕುಕೃತ್ಯಗಳ ರಾಶಿ
ಪಾಪಗಳ ಕೊಳಚೆ ಹರಿಯುತಿದೆ
ಬೇಗಂ..
ತೊಳೆಯುವ ಕರಗಳೆಲ್ಲಿ…?
ಬೀದಿ ಬೀದಿಗಳಲಿ ಹಾರುತಿವೆ
ಮತ-ಪಂಥಗಳ ಪತಾಕೆಗಳು
ನಾ ಮುಂದು, ನಾ ಮುಂದೆಂದು
ಬೇಗಂ..
ಶ್ವೇತ ಪತಾಕೆ ಹಾರುವುದು ಯಾವಾಗ ?
ಕ್ರೌರ್ಯ ಮೆರೆದರೂ ಗಡಿಯಾಚೆ
ಶೌರ್ಯ ಉಕ್ಕಿದೆ ಗಡಿಯಲಿ
ತಲೆಯೆತ್ತಿ ನಿಂತ ಹಿಮವಂತ
ಬೇಗಂ..
ಬೆಚ್ಚಿದೆ ಯೋಧನ ಬಿಸಿರಕ್ತಕೆ..
ಮರೆಮಾಡುತಿದೆ ಕಾಳಮಂಜು
ಸೂರ್ಯ ಉದಯಿಸಲು
ಹಗಲೂ ಇರುಳಾಗುತಿದೆ
ಬೇಗಂ..
ಹಗಲುವೇಷದಾರಿಗಳ ಅಟ್ಟಹಾಸಕೆ…!
ವಿಷವಾಗುತಿಹುದು
ತಾಯ ಎದೆ ಹಾಲು
ವ್ಯಸನಗಳ ಮೋಜಿನಲಿ
ಬೇಗಂ..
ಇಂಚಿಂಚು ಕೊಲ್ಲುತಿದೆ ಮುಗ್ಧ ಹಸುಳೆಯನ್ನು.
ಹಮೀದಾಬೇಗಂ ದೇಸಾಯಿ.
ಅರ್ಥಪೂರ್ಣ ಅಬಾಬಿಗಳು..ಅಮ್ಮ. ಅಭಿನಂದನೆಗಳು..
ಧನ್ಯವಾದಗಳು ಮೆಚ್ಚುಗೆಗೆ ಶಮಾ.
ವಾಸ್ತವಕ್ಕೆ ಕನ್ನಡಿ ಮೇಡಂ ತಮ್ಮ ಅಬಾಬಿಗಳು, ಅಭಿನಂದನೆಗಳು ಮೇಡಂ
ತುಂಬಾ ಚೆನ್ನಾಗಿವೆ ಮಾ.