ಅಕ್ಕ ತಂಗಿಯರ ಭೇಟಿ ಹಬ್ಬ-ಜಿ. ಹರೀಶ್ ಬೇದ್ರೆ

ವಿಶೇಷ ಲೇಖನ

ಜಿ. ಹರೀಶ್ ಬೇದ್ರೆ

ಅಕ್ಕ ತಂಗಿಯರ ಭೇಟಿ ಹಬ್ಬ

ಚಿತ್ರದುರ್ಗದ ಒಂದೊಂದು ಕಲ್ಲು ಒಂದೊಂದು ಕತೆಯನ್ನು ಹೇಳುತ್ತದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಪೌರಾಣಿಕ, ಐತಿಹಾಸಿಕ, ಜಾನಪದ ಎಲ್ಲಾ ಬಗೆಯ ಕತೆಗಳು, ಆಚರಣೆಗಳು ಇಲ್ಲಿವೆ. ಅದರಲ್ಲೂ, ಯುಗಾದಿ ಹಬ್ಬವಾದ ತಿಂಗಳೊಳಗೆ ಜರುಗುವ ಅಕ್ಕ ತಂಗಿಯರ ಭೇಟಿ ಹಬ್ಬವಂತೂ ಇನ್ನಿಲ್ಲದ ಮಹತ್ವವನ್ನು ಪಡೆದಿದೆ.

ವರ್ಷದಲ್ಲಿ ಒಮ್ಮೆ ಮೂರ್ನಾಲ್ಕು ನಿಮಿಷ ಭೇಟಿಯಾಗುವ ಅಕ್ಕ ತಂಗಿಯರಿಗಾಗಿ ಇಡೀ ನಗರದ ಜನತೆ ಶ್ರದ್ಧಾ ಭಕ್ತಿಯಿಂದ, ಕಾತರದಿಂದ ತುದಿಗಾಲಿನಲ್ಲಿ ನಿಂತು ಕಾಯುತ್ತಾರೆ. ಅವರಿಬ್ಬರೂ ಭೇಟಿಯಾದೊಡನೆ ಭಕ್ತಾದಿಗಳ ಸಂತೋಷ ಮುಗಿಲು ಮುಟ್ಟುತ್ತದೆ. ಹಾಗಾದರೆ ಈ ಅಕ್ಕ ತಂಗಿಯರು ಯಾರು, ಏಕೆ ಇವರು ವರ್ಷದಲ್ಲಿ ಒಮ್ಮೆ ಮಾತ್ರ ಭೇಟಿಯಾಗುತ್ತಾರೆ, ಇದರ ಹಿನ್ನೆಲೆ ಏನು ಮುಂತಾದ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿವೆ ಅಲ್ಲವೇ?

ಏಕನಾಥೇಶ್ವರಿ, ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮನ ಅಕ್ಕ ತಂಗಿಯರು. ತಿಪ್ಪಿನಘಟ್ಟಮ್ಮನಿಗೆ ಏಳು ಜನ ಮಕ್ಕಳು ಆದರೆ ಬರಗೇರಮ್ಮನಿಗೆ ಮಕ್ಕಳಿರುವುದಿಲ್ಲ. ಪ್ರತಿದಿನ ತಂಗಿಯ ಮಕ್ಕಳೊಂದಿಗೆ ಬೆರೆತು ತನಗೆ ಮಕ್ಕಳಿಲ್ಲದ ಕೊರಗನ್ನು ಮರೆತಿರುತ್ತಾಳೆ. ತಂಗಿ ತಿಪ್ಪಿನಘಟ್ಟಮ್ಮನು ಇದನ್ನು ಸಂತೋಷದಿಂದಲೇ ಒಪ್ಪಿಕೊಂಡಿರುತ್ತಾಳೆ. ಅಕ್ಕ ತಂಗಿಯರ ನಡುವಿನ ಪ್ರೀತಿಯ ಬಾಂಧವ್ಯವನ್ನು ನೋಡಿ ಸಹಿಸದ ಜನ, ಬರಗೇರಮ್ಮ ಒಬ್ಬಳು ಬಂಜೆ, ಅವಳು ಮಕ್ಕಳನ್ನು ಮುಟ್ಟುವುದು ಮಾತನಾಡಿಸುವುದರಿಂದ ಒಳಿತಾಗುವುದಿಲ್ಲ ಎಂದು ತಿಪ್ಪಿನಘಟ್ಟಮ್ಮನ ಮನದಲ್ಲಿ ವಿಷದ ಬೀಜ ಬಿತ್ತುತ್ತಾರೆ. ಅವರಿವರ ಮಾತು ಕೇಳಿದ ತಿಪ್ಪಿನಘಟ್ಟಮ್ಮ ಒಂದು ದಿನ ಬರಗೇರಮ್ಮ ಬರುವ ಸಮಯದಲ್ಲಿ ತನ್ನ ಮಕ್ಕಳನ್ನು ಬಚ್ಚಿಟ್ಟು, ಅವರಿಲ್ಲ ಎಂದು ಸುಳ್ಳು ಹೇಳುತ್ತಾಳೆ. ತನ್ನ ತಂಗಿ ಹೇಳುತ್ತಿರುವುದು ಸುಳ್ಳು ಎಂದು ಅರಿತ ಬರಗೇರಮ್ಮ, ಸಿಟ್ಟಿನಿಂದ ನಿನ್ನ ಮಕ್ಕಳು ಎಲ್ಲಿದ್ದರೋ ಅಲ್ಲೇ ಕಲ್ಲಾಗಲಿ ಎಂದು ಶಾಪ ಕೊಟ್ಟು, ಇನ್ನೆಂದೂ ನಿನ್ನ ಮುಖವನ್ನು ನೋಡುವುದಿಲ್ಲ ಎಂದು ಹೇಳಿ ಹೋಗುತ್ತಾಳೆ. ಅಕ್ಕನ ಶಾಪದಿಂದ ಮಕ್ಕಳು ನಿಜವಾಗಿಯೂ ಕಲ್ಲಾಗಿ ಬಿಡುತ್ತಾರೆ. ಇದರಿಂದ ಬೇಜಾರಾಗಿ ತಿಪ್ಪಿನಘಟ್ಟಮ್ಮನು ಅಕ್ಕನ ಮುಖವನ್ನು ನೋಡುವುದಿಲ್ಲ ಎಂದು ತೀರ್ಮಾನಿಸುತ್ತಾಳೆ. ಇವರಿಬ್ಬರ ಜಗಳವನ್ನು ನೋಡಿದ ಹಿರಿಯಕ್ಕ ಏಕನಾಥೇಶ್ವರಿ ಇಬ್ಬರನ್ನೂ ಸೇರಿಸುವ ಪ್ರಯತ್ನ ಮಾಡುತ್ತಾಳೆ, ಆ ಪ್ರಯತ್ನದ ಫಲದಿಂದಾಗಿ ಈ ಇಬ್ಬರು ಅಕ್ಕತಂಗಿಯರು ವರ್ಷದಲ್ಲಿ ಒಂದು ದಿನ ಭೇಟಿಯಾಗಲು ಒಪ್ಪಿಕೊಳ್ಳುತ್ತಾರೆ.
ಈ ಹಬ್ಬವು ನಾಯಕರ ಕಾಲದಿಂದಲೂ ನಡೆಯುತ್ತಾ ಬಂದಿದ್ದು ಈಗಲೂ ಹಿಂದಿನಂತೆಯೇ ವಿಜೃಂಭಣೆಯಿಂದ ನಡೆಯುತ್ತಿದೆ. ಯಾವುದೇ ಭೇದಭಾವಗಳಿಲ್ಲದೆ ನಗರದ ಜನತೆ ಹಬ್ಬವನ್ನು ಆಚರಿಸುವುದು ವಿಶೇಷಗಳಲ್ಲಿ ಒಂದು. ಸಸ್ಯಾಹಾರಿಗಳು ಒಬ್ಬಟ್ಟು, ಕಡುಬು ಮುಂತಾದ ಸಿಹಿ ಭಕ್ಷ್ಯಗಳನ್ನು ಮಾಡಿ ಹಬ್ಬವನ್ನು ಆಚರಿಸಿದರೆ ಮಾಂಸಾಹಾರಿಗಳು ತಮ್ಮಿ‌‌ಷ್ಟದ ಕುರಿ, ಕೋಳಿಗಳ ಮಾಂಸದ ನೈವೇದ್ಯ ಮಾಡಿ ಪೂಜಿಸುತ್ತಾರೆ. ಈ ಹಬ್ಬಕ್ಕಾಗಿ ಹತ್ತಿರದ ಬಂಧು ಬಳಗದವರನ್ನು ಕರೆಯುವುದು ಮತ್ತೊಂದು ವಿಶೇಷ. ಇಲ್ಲಿ ಮತ್ತೊಂದು ಹೇಳಬೇಕಾದ ವಿಷಯವೂ ಇದೆ ಏನೆಂದರೆ, ಇಂತಹ ದಿನ ಅಕ್ಕ ತಂಗಿಯರ ಭೇಟಿ ಹಬ್ಬವಿದೆ ಎಂದು ನಗರದಲ್ಲಿ ಸಾರು ಹಾಕುತ್ತಾರೆ ( ಹಿಂದಿನ ಕಾಲದಲ್ಲಿ ರಾಜರು ಪ್ರಮುಖ ವಿಷಯಗಳನ್ನು ಪ್ರಜೆಗಳಿಗೆ ತಿಳಿಸಲು ಡಂಗೂರ ಹೊಡೆಸುತ್ತಿದ್ದ ರೀತಿ). ಆ ಸಂದರ್ಭದಲ್ಲಿ ಊರಲ್ಲಿ ಇದ್ದವರು ಯಾವುದೇ ಕಾರಣಕ್ಕೂ ಹಬ್ಬದ ಆಚರಣೆಯನ್ನು ತಪ್ಪಿಸಿಕೊಳ್ಳಬಾರದು ಎಂಬ ಪ್ರತೀತಿಯೂ ಇದೆ. ತೀರಾ ಅನಿವಾರ್ಯವಾಗಿ ಪರ ಊರಿಗೆ ಹೋಗಿದ್ದರೆ ಅಲ್ಲಿಂದ ಬಂದ ಮೇಲೆ ಈ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು.

ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮನ ಭೇಟಿಯಾಗುವ ಹಲವು ದಿನಗಳ ಮೊದಲು ನಗರದ ಎಲ್ಲಾ ಭಾಗಗಳಿಗೂ ಸಂಚರಿಸುತ್ತಾರೆ. ಹೀಗೆ ಸಂಚರಿಸುವಾಗ ಯಾರಾದರೂ ಭಕ್ತಾದಿಗಳು ಮನೆಗೆ ಕರೆದರೆ ಹೋಗಿ ಪೂಜೆಯನ್ನು ಸ್ವೀಕರಿಸಿ ಆಶೀರ್ವಾದಿಸಿ ಬರುತ್ತಾರೆ. ನಗರ ಪ್ರದಕ್ಷಿಣೆ ಮಾಡುವ ಪ್ರತಿದಿನವೂ ಉತ್ಸವ ಮೂರ್ತಿಗಳಿಗೆ ಮಾಡುವ ಹೂವಿನ ಅಲಂಕಾರ ನೋಡಲು ಎರಡು ಕಣ್ಣುಗಳು ಸಾಲದು. ನಿಜವಾಗಿಯೂ ದೇವಿಯೇ ಎದ್ದು ಬರುತ್ತಿದ್ದಾಳೆ ಎನ್ನುವಷ್ಟು ಸೊಗಸಾದ ಅಲಂಕಾರ ಮಾಡಿರುತ್ತಾರೆ. ಇಬ್ಬರೂ ಭೇಟಿಯಾಗುವ ದಿನವಂತೂ ಅಲಂಕಾರ ಮತ್ತಷ್ಟು ಅದ್ಭುತವಾಗಿರುತ್ತದೆ.


ಭೇಟಿಯ ಹಬ್ಬದ ದಿನ ಚಿತ್ರದುರ್ಗ ನಗರದ ಹೃದಯ ಭಾಗದಲ್ಲಿ ಇರುವ ರಂಗಯ್ಯನ ಬಾಗಿಲಿನಿಂದ ಉಚ್ಚಂಗಿ ಎಲ್ಲಮ್ಮನ ದೇವಸ್ಥಾನದ ರಸ್ತೆಯುದ್ದಕ್ಕೂ ಸಂಜೆ ಐದಾರು ಗಂಟೆಯಿಂದಲೇ ಜನರು ಅಕ್ಕ ತಂಗಿಯರ ಭೇಟಿಗೆ ಸಾಕ್ಷಿಭೂತರಾಗಲು ಸಹಸ್ರಾರು ಸಂಖ್ಯೆಯಲ್ಲಿ ನೆರೆದಿರುತ್ತಾರೆ.
ಹೊತ್ತೇರಿದಂತೆಲ್ಲಾ ನೆರೆದ ಭಕ್ತಾದಿಗಳ ಉತ್ಸಾಹ ಇಮ್ಮಡಿಯಾಗುತ್ತಾ ಹೋಗುತ್ತದೆ. ಇದಕ್ಕೆ ಸರಿಯಾಗಿ ಎರಡು ವಿರುದ್ಧ ದಿಕ್ಕುಗಳಿಂದ ಅಕ್ಕ ತಂಗಿಯರನ್ನು ಹೊತ್ತು ಬರುವ ದೇವಿ ಉಪಾಸಕರು ನಿಧಾನವಾಗಿ, ವೇಗವಾಗಿ, ಓಡುತ್ತಾ, ಅಲ್ಲಲ್ಲಿ ನಿಲ್ಲುತ್ತಾ, ಗಾಳಿಯಲ್ಲಿ ಸುತ್ತು ಹಾಕುತ್ತಾ ನಿಗಧಿತ ಸ್ಥಳಕ್ಕೆ ಬರುವುದು, ಬಂದ ಮೇಲೂ ಇನ್ನೇನು ಇಬ್ಬರೂ ಭೇಟಿಯಾಗೇಬಿಟ್ಟರು ಎನ್ನುವಷ್ಟು ಸಮೀಪ ಬಂದು ಮತ್ತೆ ಮಾರು ದೂರ ಹೋಗಿ ನೋಡುಗರಿಗೆ ಪುಳಕಗೊಳಿಸುತ್ತಾರೆ. ಸಾಕಷ್ಟು ಬಾರಿ ಹತ್ತಿರ ಬಂದು ದೂರ ಹೋಗುವುದು ಮಾಡಿ ಕೊನೆಗೊಮ್ಮೆ ಇಬ್ಬರು ಅಲಂಗಿಸಿದಾಗ ಇದನ್ನು ಕಣ್ತುಂಬಿಕೊಳ್ಳಲು ಬಂದ ಭಕ್ತವೃಂದ ಆನಂದದಿಂದ ಭಾವಪರವಶರಾಗುತ್ತಾರೆ.ಈ ವರ್ಷದ ಅಕ್ಕ ತಂಗಿಯರ ಭೇಟಿ ಹಬ್ಬ ಈಗಾಗಲೇ ದಿನಾಂಕ 11.04.2023ರಂದು ನಡೆದಿದೆ. ನೀವು ನೋಡಬೇಕೆಂದರೆ ಮುಂದಿನ ವರ್ಷದ ವರೆಗೆ ಕಾಯುವುದು ಅನಿವಾರ್ಯ.


ಜಿ. ಹರೀಶ್ ಬೇದ್ರೆ

15 thoughts on “ಅಕ್ಕ ತಂಗಿಯರ ಭೇಟಿ ಹಬ್ಬ-ಜಿ. ಹರೀಶ್ ಬೇದ್ರೆ

  1. ತುಂಬಾ ಚೆನ್ನಾಗಿ ಒಂದು ಊರಿನ ಹಬ್ಬವನ್ನು ವರ್ಣಿಸಿರುವಿ,ನಾನು ಚಿಕ್ಕವಳಿರುವಾಗ ಬೇಟಿ ನೋಡಿದ್ದೇನು ನಾನೇ ನೋಡಿದ ಹಾಗಾಯ್ತು ನೀವು ಕಳಿಸಿದ ಲಿಂಕ್ ನ ಸಹಾಯದಿಂದ ಧನ್ಯವಾದಗಳು

  2. ಸರ್ ,
    ತುಂಬಾ ಚೆನ್ನಾಗಿದೆ ಧನ್ಯವಾದಗಳು

  3. ಬಾಂಧವ್ಯಗಳ ಬೆಚ್ಚಗಿಡುವ ಇಂತಹ ಆಚರಣೆಯ ಸವಿವರ ಮಾಹಿತಿಯನ್ನು ನೀಡಿದ ತಮಗೆ ವಂದನೆಗಳು.

    1. ಹೃದಯಪೂರ್ವಕ ಧನ್ಯವಾದಗಳು ಮೇಡಂ

  4. Historical event explained in a nice way. In fact ,i didn’t understand it fully at the first reading . I used Google translator and understood the full story. Nice it is… All the best Hareesh.

    1. ನಿಮ್ಮ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಗಳು ಸರ್

  5. ತುಂಬಾ ಸೊಗಸಾದ ಬರಹ ಈ ಬಗೆಯ ಸಾಂಸ್ಕೃತಿಕ ಕಥನಗಳು ನಮ್ಮ ಅರಿವಿನ ವಿಸ್ತಾರದ ಕಥನಗಳೂ ಹೌದು. ಹಾರ್ಧಿಕ ಶುಭಾಶಯಗಳು ಗೆಳೆಯ

  6. ತುಂಬಾ ಸಂತೋಷವಾಯ್ತು ಹರೀಶ.ಮಿತಿ ಮೀರಿದ ವೇಗದ ಬದುಕಿನಲ್ಲಿ ಚಿತ್ರದುರ್ಗದ ಸ್ಥಳೀಯ ಆಚರಣೆ ಮತ್ತು ಅದರ ವಿಶ್ಲೇಷಣೆ ನಮಗೆಲ್ಲಾ ಒಂದು ನೆನಪಿನ ಝಳಕು ನೀಡುವುದರ ಜೊತೆಗೆ ಮುಂದಿನ ತಲೆಮಾರಿಗೆ ವಿಚಾರ ರವಾನಿಸಿರುವೆ.ಸ್ಥಳೀಯ ಸೊಗಡನ್ನು ವಿನಿಮಯಗೊಳಿಸುವ ಇಂಥಹ ನಿನ್ನ ಲೇಖನಗಳು ಮುಂದುವರೆಯಲಿ.

Leave a Reply

Back To Top