ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಅಳಿಸಿ ಹೋಗದಿರಲಿ ಬಾಂಧವ್ಯದ ಆ ಪದಗಳು…

ಚಿತ್ರಕೃಪೆ: ಗೂಗಲ್

ಎನಪಾ ಮಾವ ಚಹಾ ಕುಡಿಸಲ್ವಾ ಮತ್ತೆ, ಬರಿ ನಮ್ಮ ಮನೆಂದು ತಿಂದು ತಿಂದು ಹ್ಯಾಂಗ ದಪ್ಪ ಆಗಿ ನೋಡು…”

“ಅತ್ತೀನ ಕಾಣ್ವಲಲ್ಲೋ ಮಾವ ಊರಿಗೆ ಹೋಗ್ಯಳನ ಮತ್ತ..”

“ಎಷ್ಟಂತ ಹೊತ್ತಂಗ ಬರತೀಬೇ ತಂಗಿ ನಮ್ಮ ಮನ್ಯಾಗಿಂದ…ನಿನ್ನ ಗಂಡಗ ಎಷ್ಟು ಕೊಟ್ಟರೂ ಸಾಲಂಗಿಲ್ಲ ನೋಡವ…”

ಇಂತಹ ವಾತ್ಸಲ್ಯದ ಮಾತುಗಳು ಕೇಳಿದಾಗ ಹೃದಯ ಹಗುರವಾಗುತ್ತದೆ. ಮನಸ್ಸು ಅರಳುತ್ತದೆ. ಬದುಕಿನಲ್ಲಿ ಏನೋ ಒಂದು ತರಹ ಹೊಸ ಚೈತನ್ಯ ಮೂಡುತ್ತದೆ.

ಆದರೆ….

ಇಂದು ಪ್ರತಿಯೊಬ್ಬರ ಬದುಕು ಸಂಕೀರ್ಣಗೊಂಡಂತೆ, ನಗರೀಕರಣದ ಕಡೆ ವಾಲುತ್ತಿರುವುದು ವಾಸ್ತವಿಕ ಸತ್ಯ. ಹಾಗೆಯೇ ಇಂದು ಗ್ರಾಮಗಳು ನಗರದ ಮೋಹಕ್ಕೆ ಸೆಳೆತಗೊಂಡು, ತನ್ನ ಮೂಲ ಸಾಂಸ್ಕೃತಿಕ ಪರಂಪರೆಯನ್ನು ಮರೆಯುತ್ತಿರುವುದು ವಿಷಾದನೀಯವಾಗಿದೆ. ಹಳ್ಳಿಗಳಲ್ಲಿದ್ದ ಸಾಮರಸ್ಯದ ಬದುಕು ಇಂದು ಉಳಿದಿಲ್ಲ. ಅದಕ್ಕೆ ಕಾರಣಗಳು ಹಲವು….

ಹಿಂದೆ ಹಳ್ಳಿಗಳಲ್ಲಿ ಕೂಡಿ ದುಡಿಯುವ, ಕೂಡಿ ಉಣ್ಣುವ, ಕಷ್ಟ – ಸುಖಗಳಿಗೆ ಕೂಡಿ ಜೊತೆಯಾಗುವ, ನೋವು ನಲಿವುಗಳಿಗೆ ಒಂದಾಗುವ ಬಾಂಧವ್ಯದ ಬದುಕು
ಆವತ್ತು ಸಾಮಾನ್ಯವಾಗಿತ್ತು.

ಯಾವುದೇ ಸ್ವಾರ್ಥದ ಕಾರಣಕ್ಕಾಗಿ ಒಂದುಗೂಡಿರುತ್ತಿರಲಿಲ್ಲ ಆದರೆ ಇವತ್ತು ಏನಾಗಿದೆ..? ಪ್ರತಿಯೊಂದರಲ್ಲಿಯೂ ಸ್ವಾರ್ಥದ ಎಳೆಯನ್ನು ಹುಡುಕುವ, ರಾಜಕಾರಣದ ಕೆಟ್ಟ ಸಂಸ್ಕೃತಿಯನ್ನು ಮೈ ಚಾಚುವ, ಜಾತಿಯ ಕೋರೆ ಹಲ್ಲುಗಳನ್ನು ಚಾಚುವ, ನೆತ್ತಿಗೇರಿಸಿಕೊಂಡ ಧರ್ಮದ ಅಫೀಮನ್ನು ಸಮಾಜದಲ್ಲಿ ಕಾರುವ, ಹತ್ತು ಹಲವಾರು ಕೆಟ್ಟ ಘಟನೆಗಳು ಜರುಗುತ್ತಿರುವುದು ನಮ್ಮ ಭಾವೈಕ್ಯತೆಯ ಬದುಕಿಗೆ ದೊಡ್ಡ ಪೆಟ್ಟು…!!

ಹಾಗಾಗಿಯೇ ನಗರದಲ್ಲಿದ್ದ ಯಾಂತ್ರಿಕ ಬದುಕು, ವಯಕ್ತಿಕ ಸ್ವಾರ್ಥದ ಬದುಕು ಇತ್ತೀಚಿಗೆ ಹಳ್ಳಿಗಳಲ್ಲಿಯೂ ಕಾಲಿಟ್ಟಿರುವುದು ದುರಂತ.

ಹಳ್ಳಿಗಳಲ್ಲಿ ಕೃಷಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಳ್ಳುವ ರೈತಾಪಿ ವರ್ಗವು ದುಡಿಯುವದನ್ನೆ ಉಸಿರಾಗಿಸಿಕೊಂಡಿದ್ದಾರೆ. ಅವರಿಗೆ ಜಾತಿ ಧರ್ಮವನ್ನು ನೋಡುವ ಗೋಜು ಇರುತ್ತಿರಲಿಲ್ಲ. ಕೂಡಿ ‘ಒಕ್ಕಲುತನ ಮಾಡುವ ಪರಂಪರೆ’ ( ಕೂಡಿ ಬಿತ್ತುವ ) ಇಂದಿಗೂ ಇದೆ. ‘ಕೂಡಿ ಒಕ್ಕಲುತನ ಪರಂಪರೆ’ ಎಂದರೆ ಅವರ ಹೊಲವನ್ನು ಇವರು ಬಿತ್ತಿ ಬೆಳೆಯುವಾಗ ಸಹಾಯ ಮಾಡುವ, ಇವರ ಹೊಲವನ್ನು ಅವರು ಬಿತ್ತಿ ಬೆಳೆಯುವಾಗ ಇವರು ಸಹಾಯ ಮಾಡುವ ಅರ್ಥಾತ್ ಒಬ್ಬರಿಗೊಬ್ಬರು ಸಹಕಾರದಿಂದ ದುಡಿಯುತ್ತಾರೆ..!! ಆ ಸಮಯದಲ್ಲಿ ಹುಟ್ಟಿದ ಬಾಂಧವ್ಯ, ಕಷ್ಟದಲ್ಲಿ ಬಂದ ಸಂಬಂಧಗಳು ಅದು ರಕ್ತ ಸಂಬಂಧಕ್ಕಿಂತಲೂ ಮಿಗಿಲಾಗಿರತಕ್ಕಂತಹ ಪದಗಳನ್ನು ಕಟ್ಟಿಕೊಡುತ್ತದೆ..!!

ಒಂದೇ ಒಡಲಲ್ಲಿ ಹುಟ್ಟಿ ಬರದಿದ್ದರೂ, ಒಂದೇ ಕುಟುಂಬದಿಂದ ಬರದಿದ್ದರೂ ಅವರು ಸಂವಾದಿಸುವ ಮಾತುಗಳು ನಿಜಕ್ಕೂ ಬಹುತ್ವ ಪರಂಪರೆಯ ಪ್ರತೀಕವೆಂದು ಹೇಳಬಹುದು. ಅವರ ಪ್ರತಿಯೊಂದು ಮಾತಿನಲ್ಲಿಯೂ ಸಂಬಂಧ ಸೂಚಕ ಪದಗಳೇ ತುಂಬಿರುತ್ತವೆ. ಅಂತಹ ಪದಗಳು ಇವತ್ತು ಉಳಿದುಕೊಂಡಿರುವುದು ತುಂಬಾ ಅಪರೂಪ. ಅದು ಹಳ್ಳಿಗಳಲ್ಲಿ ನಾಲಿಗೆಯ ಮೇಲೆ ಮಾತ್ರ..! ಹೃದಯದೊಡಲನಿಂದ ಇಂದು ಕಾಣೆಯಾಗಿದೆ. ಅಂದು ಪ್ರೀತಿ ಅಕ್ಕರೆಯಿಂದ ಕರೆಯುತ್ತಿದ್ದ ಆ ಬಾಂಧವ್ಯದ ಪದಗಳು…ಮರೆಯುವಂತಿಲ್ಲ.

ಅಕ್ಕ, ಮಾವ, ಕಾಕಾ, ಅಳಿಯ, ಚಿಕ್ಕಪ್ಪ, ದೊಡ್ಡಪ್ಪ ದೊಡ್ಡಮ್ಮ ಅಜ್ಜ, ಅಜ್ಜಿ ಚಿಕ್ಕಮ್ಮ ಸೊಸಿ…. ಇವೆಲ್ಲವೂ ಸಂಬಂಧ ಸೂಚಕ ಪದಗಳೇ..! ಕೇವಲ ರಕ್ತ ಸಂಬಂಧಿಕರಿಗೆ ಬಳಸಲ್ಪಡುತ್ತಿರಲಿಲ್ಲ. ನಮ್ಮ ಮನೆಯ ನೆರೆಹೊರೆಯವರನ್ನು ಸಂಬಂಧಿಗಳಂತೆ ಅವರೊಡನೆ ಬದುಕು ಹಂಚಿಕೊಳ್ಳುವ ಸಂಪ್ರದಾಯ ತುಂಬಾ ಆರೋಗ್ಯಪೂರ್ಣವಾದುದು. ಇದು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಬೇಕಾಗಿತ್ತು. ಯಾರನ್ನು ಏಕವಚನದಿಂದ ಕರೆಯುತ್ತಿರಲಿಲ್ಲ. ಅದು ಕರೆದರೂ ಆತನ ಇಲ್ಲವೇ ಅವಳ ಮೇಲಿನ ಸಲುಗೆಯಿಂದ ಕರೆದು ಗದರಿಸುತ್ತಿದ್ದರು. ಹಾಗಾಗಿ ಪ್ರೀತಿ ಸೂಚಕವಾದ ವಾತ್ಸಲ್ಯದ ಪದಗಳನ್ನೇ ಬಳಸುತ್ತಿದ್ದರು.

ಗ್ರಾಮೀಣ ಭಾಗದಲ್ಲಿ ಮದುವೆ ಇರಲಿ, ತೊಟ್ಟಿಲವೇ ಇರಲಿ, ಯಾವುದೇ ಕಾರ್ಯಕ್ರಮವಿರಲಿ ಅತ್ಯಂತ ಲಗುಬಗೆಯಿಂದ ನಗು ನಗುತ್ತಾ ಹಾಸ್ಯ ಚಟಾಕಿಯೊಂದಿಗೆ ಸಂಬಂಧ ಸೂಚಕ ಪದಗಳನ್ನು ಬಳಸುತ್ತಲೇ ವಾತಾವರಣವನ್ನು ಪ್ರೀತಿಯಿಂದಲೇ ಕಟ್ಟುತ್ತಿದ್ದರು.

ಕೆಲವು ಸಲ ಯಾರದೇ ಮನೆಯಲ್ಲಿ ಸಾವು ನೋವು ಸಂಭವಿಸಿದಾಗಂತಲೂ ಅದು ತಮ್ಮ ಮನೆಯ ನೋವೇ ಎನ್ನುವ ರೀತಿಯಲ್ಲಿ ಅಂತಃಕರಣದಿಂದ ಸ್ಪಂದಿಸುತ್ತಿದ್ದರು. ನೋವಿನಲ್ಲಿರುವವರಿಗೆ ಹಣಕಾಸಿನ ನೆರವು ನೀಡುವುದರ ಜೊತೆಗೆ ಆಸ್ಪತ್ರೆ, ಔಷಧಿ, ಗುಳಿಗೆ.. ಎಲ್ಲದರಲ್ಲಿಯೂ ಜೊತೆಯಾಗಿ ಸ್ವತಃ ತಾವೇ ನಿಂತು ಉಪಚಾರ ಮಾಡುವುದನ್ನು ನಾವು ಗ್ರಾಮೀಣ ಭಾಗದಲ್ಲಿ ನೋಡುತ್ತೇವೆ. ಕೆಲವು ಸಲ ರಕ್ತ ಸಂಬಂಧಿಗಳು ಕಷ್ಟವಿದ್ದಾಗ ಕೈ ಕೊಡಬಹುದು..! ಬೆನ್ನು ತೋರಿಸಬಹುದು..!! ಅಥವಾ ಸ್ಪಂದಿಸದೆ ಹೋಗಬಹುದು ಆದರೆ ಬಾಂಧವ್ಯದಿಂದ, ಸ್ನೇಹದಿಂದ ಹುಟ್ಟಿದ ಈ ಸಂಬಂಧಗಳು ಯಾವತ್ತೂ ಕೈ ಬಿಡುವುದಿಲ್ಲ.

“ನಿನ್ನ ಕಷ್ಟಕ್ಕೆ ನಾನು ; ನನ್ನ ಕಷ್ಟಕ್ಕೆ ನೀನು ಅಥವಾ ನಮ್ಮ ಕಷ್ಟಕ್ಕೆ ನೀವು ; ನಿಮ್ಮ ಕಷ್ಟಕ್ಕೆ ನಾವು” ಎನ್ನುವ ಔದಾರ್ಯಪೂರಕವಾಗಿರುವ ಮಾತುಗಳು, ಸಹಾಯ ಸಹಕಾರಗಳು, ಸಂಬಂಧ ಸೂಚಕ ಪದಗಳನ್ನು ಬಳಸುವ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಇಲ್ಲದೆ ಹೋದರೆ ಆ ಸಂಬಂಧ ಸೂಚಕ ಪದಗಳ ಬಳಕೆ ಕೇವಲ ಬಾಲಿಶತನವನ್ನು ವ್ಯಕ್ತಪಡಿಸಿದಂತಾಗುತ್ತದೆ. ಆದರೆ ಗ್ರಾಮೀಣ ಭಾಗದಲ್ಲಿ ಬಾಲಿಶತನಕ್ಕೆ ಜಾಗವಿಲ್ಲ. ಅಲ್ಲಿ ವಾತ್ಸಲ್ಯಕ್ಕೆ, ಪ್ರೀತಿಗೆ, ಸ್ನೇಹಕ್ಕೆ, ಮಾತ್ರ ಜಾಗ…!!

ಪ್ರತಿಯೊಂದು ಧರ್ಮಗಳ, ಜಾತಿಗಳ, ಹಬ್ಬ – ಹರಿದಿನಗಳನ್ನು ಕೂಡಿ ಮಾಡುವ ಸಂಪ್ರದಾಯ ಮೊದಲಿನಿಂದಲೂ ಇದೆ. ಊರ ಹಿರಿಯರು ಗ್ರಾಮದ ಎಲ್ಲಾ ಉಸ್ತುವಾರಿಯನ್ನು ತೆಗೆದುಕೊಂಡು ಉತ್ಸವವನ್ನು ಮಾಡುತ್ತಿದ್ದರು. ಆದರೆ ಇಂದು ‘ತಲೆಗೊಬ್ಬರು ಹಿರಿಯರು’ ಎನ್ನುವ ಮಾತಿನಂತೆ ಪ್ರತಿಯೊಬ್ಬರೂ “ನಾನೂ ಹಿರಿಯತನ ಮಾಡುತ್ತೇನೆ” ಎನ್ನುವ ಹುಂಬುತನದಿಂದ ಎಷ್ಟೋ ಗ್ರಾಮೀಣ ಭಾಗದಲ್ಲಿ ಜಾತ್ರೆಗಳು ನಿಂತು ಹೋಗಿವೆ.

ಈಗೀಗ….

ಊರಿನಲ್ಲಿ ಜಾತಿ ಸೂಚಕ ಫಲಕಗಳು ಬಂದುಬಿಟ್ಟಿವೆ..! ಧರ್ಮದ ಅಫೀಮು ತಲೆಗೇರಿಸಿಕೊಂಡ ಹಲವರು ವಿಷಮಪೂರಿತ ಮನಸ್ಸುಗಳು ಸಮಾಜದ ತಿಳಿಯನ್ನು ಕದಲಿ ಬಿಟ್ಟಿವೆ..!! ಜಾತಿಯ ಬಾವುಟಗಳು ರಾರಾಜಿಸುತ್ತವೆ..!! ಎಲ್ಲಾ ಜನರ ಏಳ್ಗೆಯನ್ನು ಬಯಸಬೇಕಾದ ಸ್ವಾಮಿಜಿಗಳು ತಮ್ಮ ಜಾತಿಗೆ ಜೋತು ಬಿದ್ದಿದ್ದಾರೆ…!!

ಇಂದಿಗೂ ಗ್ರಾಮೀಣ ಭಾರತದಲ್ಲಿ ಮುಸ್ಲಿಮರೇ ಇಲ್ಲದ ಊರುಗಳಲ್ಲಿ ಹಿಂದೂಗಳೇ ಸೇರಿಕೊಂಡು ಮೊಹರಂ ಆಚರಿಸುವ ಭಾವೈಕ್ಯತೆಯ ಪರಂಪರೆಯನ್ನು ನೋಡುತ್ತೇವೆ. ಅಂತಹ ಬಹುತ್ವ ಪರಂಪರೆ ಬಿತ್ತರಿಸುವ ಸಂಬಂಧ ಸೂಚಕ ಪದಗಳು ನಾವೆಂದೂ ಮರೆಯುವಂತಿಲ್ಲ.

ಕನ್ನಡ ನೆಲ ಸಾಮರಸ್ಯದ ಸಂಸ್ಕೃತಿಕತಿಯ ನೆಲ. ಗುರು ಗೋವಿಂದ ಭಟ್ಟರು, ಶರೀಫ, ಕನಕ, ಪುರಂದರ, ತಿಂಥಣಿಯ ಮೌನಪ್ಪ, ಜುಂಜಪ್ಪ, ಮಲೆ ಮಾದೇಶ್ವರ, ಕೊರಗಜ್ಜನಂತಹ ಮುಂತಾದ ಮಹನೀಯರು ಸಾಮರಸ್ಯದ ಎಳೆಯನ್ನು ಬಿಟ್ಟು ಹೋಗಿದ್ದಾರೆ. ಆ ಎಳೆಯನ್ನೇ ನಾವು ಒಂದೊಂದಾಗಿ ನೂಲಿಕೊಂಡು ಹೊಸತನದ ಬದುಕ ಬಟ್ಟೆಯನ್ನು ಹುಡುಕಬೇಕಾಗಿದೆ.

ಬಾಳಿನುದ್ದಕ್ಕೂ ಹೊಂದಾಣಿಕೊಂಡು ಬದುಕುವಾಗ ವಾತ್ಸಲ್ಯದ ಪದಗಳು ಬದುಕಿನ ಜಂಜಾಟವನ್ನು ಕಡಿಮೆಗೊಳಿಸಿ, ಹೃದಯವನ್ನು ಹಗುರು ಮಾಡುತ್ತವೆ. ಕೆಲವು ಸಲ ರಕ್ತ ಸಂಬಂಧಗಳಲ್ಲಿ ಸಂಬಂಧ ಸೂಚಕ ಪದಗಳಿಗೆ ಅರ್ಥವೇ ಕಳೆದುಕೊಂಡು ಬಿಡುತ್ತವೆ. ಅದಕ್ಕೆ ಆಸ್ತಿ ಪಾಸ್ತಿಯಲ್ಲಿ ಹಂಚಿಕೆಯ ಜಗಳ, ಸಂಶಯ, ಕೊಡುಕೊಳ್ಳುವ ಭರದಲ್ಲಿ ಸಂಬಂಧಗಳು ವ್ಯಾಪಾರಿಕರಣಗೊಂಡು ಸಂಬಂಧ ಸೂಚಕ ಪದಗಳು ಅರ್ಥ ಕಳೆದುಕೊಂಡಿರುತ್ತವೆ. ಆಗ, ನಮ್ಮ ಹೃದಯ ಕಠೋರವೆನಿಸಿದರೂ ಮನದ ಮೂಲೆಯಲ್ಲಿ ನೋವು ತುಂಬಿದರೂ ಯಾರಿಗೂ ಹೇಳಿಕೊಳ್ಳಲಾರದ ಚಡಪಡಿಕೆಯ ಬದುಕು ವಿಷಾದಗೂಡಿಗೆ ಸೇರಿ ಬಿಟ್ಟಿರುತ್ತದೆ. ಅಂತಹ ಸಮಯದಲ್ಲಿಯೇ ಸ್ನೇಹ ಸಂಬಂಧಗಳು ಸಂಬಂಧ ಸೂಚಕ ಪದಗಳಿಗೆ ಹೊಸ ಅರ್ಥವನ್ನು ಕಲ್ಪಿಸಿ ಬಿಡುತ್ತವೆ. ಮನಸ್ಸನ್ನು ಹಗುರಗೊಳಿಸಿ ಹೃದಯದ ನೋವುಗಳಿಗೆ ಮುಲಾಮಾಗುತ್ತವೆ.

ವಾತ್ಸಲ್ಯವೆಂದರೆ ಜಾತಿ, ಧರ್ಮ, ರಕ್ತ, ಆಸ್ತಿ, ಆಸ್ತಿ ಅಂತಸ್ತು, ಅಧಿಕಾರ, ಪದವಿ ಎಲ್ಲವನ್ನೂ ಮೀರಿದ್ದು. ಅಂತಹ ವಾತ್ಸಲ್ಯದ ಪದಗಳು ನಮ್ಮ ಸಮಾಜದಲ್ಲಿ ಸದಾ ಜೀವಂತವಾಗಿರಲೆಂದು ಆಶೀಸೋಣ.


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ

ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ

ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ
 ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಲೇಖನಗಳ ಪ್ರಕಟ

2 thoughts on “

  1. ಸಭಾಂದಗಳು ಇನ್ನಷ್ಟು ಗಟ್ಟಿಯಾಗಲಿ ಸರ್ ಲೇಖನ ತುಂಬಾ ಚನ್ನಾಗಿದೆ

  2. ಸಂಬಂಧಗಳು ಬಾಂಧವ್ಯಗಳು ಎಲ್ಲ ಕಾಲಕ್ಕೆ ಉಳಿಯುವಂತಾಗಲಿ ಎನ್ನುವ ಸದಾಶಯದ ಲೇಖನ ಚೆನ್ನಾಗಿದೆ. ಅಭಿನಂದನೆಗಳು

Leave a Reply

Back To Top