ಸಿದ್ಧಪ್ಪ ಮೋರಟಗಿ”ಅವ್ವನ ಸೀರೆ ಸೆರಗಿನ್ಯಾಗ”

ಪುಸ್ತಕ ಸಂಗಾತಿ

ಸಿದ್ಧಪ್ಪ ಮೋರಟಗಿ

“ಅವ್ವನ ಸೀರೆ ಸೆರಗಿನ್ಯಾಗ”

ಅವ್ವನ ಸೀರೆ ಸೆರಗಿನ್ಯಾಗ ಎಂಬ
ಭಾವನಾತ್ಮಕ ಹೊನಲು”..

ಲೇಖಕರು:—ಬಲವಂತ ಸಿದ್ಧಪ್ಪ ಮೋರಟಗಿ
ವಿಮರ್ಶಕರು:—ಅಭಿಜ್ಞಾ ಪಿ.ಎಮ್.ಗೌಡ

ಕವಿತೆ ಎಂದರೆ….
ಪ್ರಸವ ವೇದನೆಯಲಿ
ಹೆಣ್ಣೊಬ್ಬಳ ಆಕ್ರಂದನದ
ನರಳುವಿಕೆಯ ಚೀತ್ಕಾರ.!
ಆಗ ತಾನೆ ಚಿಗುರೊಡೆಯುತಿಹ
ತರುಲತೆಗಳ ಸದ್ಭಾವದ ಪರ್ಣ
ಕಣ್ಣ ಕೊಳದಲ್ಲಿನ ಓಂಕಾರ
ಮನದಾಳದಲಿ ನೆಲೆ ನಿಂತ
ಹನಿಗಳಿಂದಾದ ಸ್ವಚ್ಛಂದ ಅರ್ಣ…

                 ಹೀಗೆ ಇಲ್ಲಿ ಕವಿಗಳಾದ ಶ್ರೀ ಬಲವಂತ ಸಿದ್ಧಪ್ಪ ಮೋರಟಗಿಯವರ ಕವನಗಳು ಒಂದಕ್ಕೊಂದು ವಿಭಿನ್ನ, ವಿಶೇಷ ,ವಿಶಿಷ್ಟತೆಗಳಿಂದ ಕೂಡಿದ ರಸವತ್ತಾದ ಭಾವಾಭಿವ್ಯಕ್ತಿಗೊಳಿಸುವ, ಸುಂದರ ಸಾಲುಗಳಲ್ಲಿ ಬಿತ್ತರವಾಗಿರುವ, ಹಲವಾರು ವಸ್ತುವಿಷಯಗಳಿಂದ ತುಂಬಿದ ಒಂದು ಕಣಜವೆಂದರೆ ತಪ್ಪಾಗಲಾರದು.

                      ಕಾವ್ಯ ಎಂದರೆ ಪದಗಳನ್ನು ಹೊಸೆಯುವುದಲ್ಲ, ಪ್ರಾಸಗಳನ್ನು ಹೊಂದಿಸಲು ಹೋಗಿ ತ್ರಾಸಕ್ಕೆ ಸಿಲುಕುವುದು ಅಲ್ಲ, ಹಾಗೆಯೆ ಗೇಯವನ್ನು ತುಂಬುವುದು ಅಲ್ಲ, ಕಾವ್ಯವೆಂದರೆ ಆತ್ಮೀಯತೆಯ ತುಣಕು ,ಅದ್ವಿತೀಯವಾದ ಮಹಾ ಬೆಳಕು.ಕವಿಯು ತನ್ನ ಮನದೊಳಗಿನ ನೋವು, ನಲಿವುಗಳ ಹೇಳಿಕೊಳ್ಳಲಾಗದ ಸ್ಥಿತಿಯನ್ನು ಬರೆಹ ರೂಪದಲ್ಲಿ ಬಿತ್ತರಿಸುವುದೆ ಕವನಗಳಾಗಿವೆ. ಇಲ್ಲಿ ಕವಿಯು ತನ್ನ ಅನುಭವ ಅನುಭಾವದೊಂದಿಗಿನ ಬೆಸುಗೆಯನ್ನು ಸ್ಫುಟವಾಗಿ ,ಎಳೆ ,ಎಳೆಯಾಗಿ ಹೋಲಿಕೆಗಳೊಂದಿಗೆ ಪದಪುಂಜಗಳನ್ನು ಜೋಡಿಸಿ ಹೆಣೆದ ಸಾಲುಗಳ ದಿಬ್ಬಣವನ್ನೆ ತಮ್ಮ ಕವನಗಳಲ್ಲಿ ಏರ್ಪಡಿಸಿದ್ದಾರೆ.

                ಭಾಷೆಯ ಸರಳತೆ, ಅರ್ಥ, ನಾದಗಳ ಜೋಡಿಯನ್ನು ಗಮನಿಸಿದಾಗ ಪ್ರತಿಯೊಂದು ಕವನಗಳ ವಿಷಯವಸ್ತುಗಳು ಕೂಡ ಸೋಜಿಗವೆ.! ಕಣ್ಣಿಗೆ ಕಟ್ಟುವಂತಹ ಚಿತ್ರಣಗಳ ರೀತಿ ನೀತಿಗಳು ಇಲ್ಲಿ ಗಮನಾರ್ಹವಾಗಿವೆ.ಇವರ ಪದ್ಯಗಳಲ್ಲಿನ ಪದಪುಂಜಗಳು ಪ್ರತಿಸಾಲಿನಲ್ಲು ಮೇಳೈಸುವ ಪರಿ ಬಲುಚಂದ.ಹೆಚ್ಚು ಕಡಿಮೆ ಇವರ ಕವನಗಳಲ್ಲಿ ಪ್ರಾಸ ಪದಗಳಿಗೆ ಹಾಗೂ ಹೋಲಿಕೆಗಳಿಗೆ ಹೆಚ್ಚು ಮಹತ್ವ ನೀಡಿರುವುದು ಸಹ ಗಮನಿಸಬಹುದಾಗಿದೆ.ಹಾಗೆಯೆ ಈ ಸಂಕಲನದಲ್ಲಿ ನಿತ್ಯ ಬಳಕೆಯ ಪದಗಳೊಂದಿಗೆ ಕವಿತೆ ಕಟ್ಟಿರುವ ಇವರ ಫ್ರೌಡಿಮೆ ನಿಜಕ್ಕೂ ಮೆಚ್ಚತಕ್ಕದ್ದು.ಇಲ್ಲಿ ಕವಿಗಳು ತಮ್ಮ ಕವನಗಳಲ್ಲಿ ಶಬ್ಧದ ಅರ್ಥ, ನಾದ ,ಅರ್ಥವ್ಯಾಪ್ತಿ ಎಲ್ಲದಕ್ಕೂ ಆದ್ಯತೆಯನ್ನು ನೀಡಿರುವರು.
                ಈ ಕವನಸಂಕಲನವು ಆಡು ಮಾತಿನ ಸೊಗಡು ,ಸೊಗಸಿನೊಂದಿಗೆ ತುಂಬಾ ರಸವತ್ತಾದ ಸತ್ವವನ್ನು ಒಳಗೊಂಡಿದೆ.ಇದರಿಂದಾಗಿ ಇಲ್ಲಿ ಕಾವ್ಯದ ಆಡುನುಡಿಗೆ ಸಮೀಪದ ಭಾಷಾರೂಪವು ಮೇಳೈಸಿದೆ. ಕೆಲವೊಂದಷ್ಟು ಕವಿತೆಗಳನ್ನು ಗಮನಿಸಿದಾಗ ಲಯಬದ್ಧವಾಗಿ ಹಾಡಬಹುದಾಗಿದೆ.ಆದ್ದರಿಂದ ಇವರ ಕವನಗಳನ್ನು ನಾನು ಓದಿದಾಗ ಭಾವಪೂರ್ಣ ಹಾಗು ಅರ್ಥಪೂರ್ಣವೆನಿಸಿದಂತು ಸತ್ಯ.ಕಾವ್ಯ ನಿಜವಾಗಿ ಕಾವ್ಯವೆನಿಸಿಕೊಳ್ಳಬೇಕಾದರೆ ಅದು ಓದುಗರಿಗೆ ಮನಮುಟ್ಟುವಂತಿರಬೇಕು ಆಗಲೆ ಅಂತರ್ಗತವಾಗಲು ಸಾಧ್ಯ. ಈ ಒಂದು ನಿಟ್ಟಿನಲ್ಲಿ ಬಲವಂತ ಸಿದ್ಧಪ್ಪ ಮೋಟರಗಿ ಸರ್ ರವರ ಎಲ್ಲಾ ಕವನಗಳು ಅರ್ಥಪೂರ್ಣವಾಗಿವೆ.ಹಾಗು ಪ್ರತಿಯೊಬ್ಬರು ಕೂಡ ಆಸ್ಥೆಯಿಂದ ಓದುವ ಕೃತಿಯಾಗಿದೆ.

    ಈ ಸಂಕಲನವನ್ನು ಅವಲೋಕಿಸಲು ಕುಳಿತಾಗ ಭೂತ ವರ್ತಮಾನವು ,ಮೌನ-ಮಾತು, ಶಾಂತಿ- ಅಶಾಂತಿ, ಸಾವು-ಬದುಕಿನ  ಮಧ್ಯೆ  ಸಾಗಿರುವುದನ್ನು ನಾವು ಕಾಣಬಹುದಾಗಿದೆ.
ಹಾಗೆಯೆ ಭೂತ ,ವರ್ತಮಾನ ,ಭವಿಷ್ಯತ್ತುಗಳ, ಸಂಬಂಧ,ಮತ್ತು ಆಯಾಯ ಕಾಲಘಟ್ಟದ ಸ್ವರೂಪ ನೋವು ,ನಲಿವು ,ಬಂಧ ಅನುಬಂಧಗಳ ,ದಿಬ್ಬಣ,ಮನಸ್ಸನ್ನು ಅಲ್ಲೋಲ ಕಲ್ಲೋಲಗೊಳಿಸುವಂತಹ ದುಶ್ಚಟಗಳ ಪಾರುಪತ್ಯ, ಬಾಳಿನ ಅರ್ಥ ,ಬದುಕಿನ ಬಗೆಗಿನ ಕಾಳಜಿ, ಮಾಗಿದ ಮನಸ್ಸು ,ಕಮರಿದ ಕನಸ್ಸುಗಳಿಂದ ತೊಳಲಾಟ, ಅಲೆದಾಟ ,
ಹೊಯ್ದಾಟಗಳನ್ನು ಇಲ್ಲಿ ಕವಿ ತನ್ನ ಸಂಕೀರ್ಣ ಅನುಭವಗಳನ್ನು ನೇರವಾಗಿ ಹೇಳಲಾಗದ ವಸ್ತುವಿಷಯಗಳಿಗೆ ಬರೆಹ ರೂಪ ನೀಡಿ ತಮ್ಮ ಫ್ರೌಡಿಮೆಯನ್ನು ಮೆರೆದಿದ್ದಾರೆ.
ಪ್ರೀತಿಪೂರ್ವಕವಾದ ದೇಶಪ್ರೇಮವನ್ನು ಮೆರೆದು ನಮ್ಮ ನಾಡು, ನುಡಿಯ ಘನತೆಯನ್ನು ತಮ್ಮ ಕವನದೊಳಗೆ ಸಾರಿರುವುದು ಸ್ವಾಗತಾರ್ಹವಾಗಿದೆ.ಭಾರತವನ್ನು ವಿಶ್ವಗುರು ಸ್ಥಾನದಲ್ಲಿರಿಸಿ ಅಖಂಡತೆಯನ್ನು ಎತ್ತಿ ಹಿಡಿದು ಅನೇಕತೆಯಲ್ಲಿ ಏಕತೆಯ ಬಿಂಬವನ್ನು ತಮ್ಮ ಕವನಗಳಲ್ಲಿ ಬಿತ್ತರಿಸಿರುವುದು ಬಲುಚಂದವಾಗಿದೆ.ನಾಡು, ನುಡಿ, ಜಲ ಗಳನ್ನು ಸಂರಕ್ಷಿಸುವ ಮೂಲಕ ಉಳಿಸಿ ಬೆಳೆಸುವ ಸಂದೇಶವನ್ನು ಸಾರಿರುವುದು ಇವರೊಳಗಿನ ದೇಶಭಕ್ತಿಯನ್ನು ಎತ್ತಿತೋರಿಸಿದೆ.ಹಾಗೆಯೆ ನೋವಿನಿಂದಾಗುವ ಹತಾಶೆ ,ನಿರಾಸೆ ದಿಗ್ರ್ಭಮೆಗಳ ಪರಿ ,ಆದರ್ಶ ,ಧೋರಣೆಗಳಲ್ಲಿನ ಅಪನಂಬಿಕೆಗಳ ಸೆರೆ ಸೂಕ್ಷ್ಮವಾಗಿ ತೆರೆದಿದ್ದಾರೆ.
ಜನನ ,ಮರಣ ಇವೆರಡರ ನಡುವಿನ ನಮ್ಮೀ ಮೂರು ದಿನದ ಪಯಣದ ಯಶೋಗಾಥೆ ಹೇಗಿರಬೇಕು.? ಎಂಬುದನ್ನು ವಿವರಿಸಿರುವ ಬಗೆ ಅದ್ಭುತವಾಗಿದೆ.ಭಾವನೆಗಳೆಂಬ ಕಡಲಿನೊಳಗೆ ಈಜುತ್ತ ಯಶಸ್ಸು ಪಡೆಯುವ ಬಗ್ಗೆ ಮತ್ತು ಅದರೊಳಗಿನ ನೆನಪಿನಂಗಳದ ಹಿರಿಮೆ, ಗರಿಮೆ ಅದು ಮತ್ತೆ ,ಮತ್ತೆ ಅಂತಃಪಟಲದೊಳಗೆ ಲಗ್ಗೆ ಇಡುವುದನ್ನು ಬಹಳ ಚನ್ನಾಗಿ ಹೇಳಿರುವರು.
ಮನುಷ್ಯನ ಕ್ಷಣಭಂಗುರ ,ದುಃಖಘನಿತ ಬಾಳಿನ ಚಿತ್ರಣಗಳನ್ನು ಮಾರ್ಮಿಕವಾಗಿ ಕವನಗಳಲ್ಲಿ
ಹೊತ್ತು ತಂದಿರುವರು.ಕಣ್ಣಿಗೆ ಕಾಣುವ ಪ್ರಕೃತಿ  ಸೌಂದರ್ಯದ ವೀಕ್ಷಣೆ ಅನಂತವಾದ ಸೃಷ್ಟಿ ಹಾಗು ಸೃಷ್ಟಿಯ ಹಿಂದಿನ ಶಕ್ತಿಗಳತ್ತ ಈ ಕವನ ಸಾಗಿರುವುದನ್ನು ಕಾಣಬಹುದಾಗಿದೆ.
ಇವರ ಆಶಯ ಅಥವ ಮನೋಭಾವ ಎಲ್ಲಾ ಕ್ಷೇತ್ರಗಳಿಗೂ ಒಳಗೊಂಡಂತೆ ಅವುಗಳ ಉನ್ನತಿಯನ್ನು ಬಯಸುವ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಮೂಲಕ ವಿಡಂಬನೆ, ಹಾಸ್ಯ, ನೋವು, ನಲಿವು, ಕಲಿಕೆ ,
ಪ್ರಕೃತಿ ,ಹೊನ್ನೋಟ, ಮುನ್ನೋಟಗಳನ್ನು ಹೊಂದಿದ್ದು,ನಾಡು ,ನುಡಿ ಹಬ್ಬ ,ತವರು ,
ಹೋರಾಟ ,ಪ್ರಕೃತಿಯ ಸೊಬಗು ಹೀಗೆ ಹಲವಾರು ವಿಷಯವಸ್ತುಗಳನ್ನೊಳಗೊಂಡಂತೆ ಸಾಮಾಜಿಕ, ನೈತಿಕ ,ತಾರ್ಕಿಕ ಚಿಂತನೆಗಳ ಕಣಜವಾಗಿದ್ದು ತಮ್ಮ ಜೀವನದ ಸಾರ್ಥಕತೆಯನ್ನು ಈ ಕವನ ಸಂಕಲನದಲ್ಲಿ ಕಂಡು ಕೊಂಡಿರುವುದು ಶ್ಲಾಘನೀಯವಾಗಿದೆ.ಒಟ್ಟಾರೆ ಹೇಳುವುದಾದರೆ ಇವರ ಕವನಸಂಕಲನ ನಿಜಕ್ಕೂ ವಿದ್ವತ್ಫೂರ್ಣ ಹಾಗು ಅರ್ಥಪೂರ್ಣವಾಗಿದೆ.

ವಾಸ್ತವವಾಗಿ ಇವರು ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದರು ಕೂಡ ಪ್ರವೃತ್ತಿಯಲ್ಲಿ ಸಾಹಿತ್ಯವನ್ನು ಮೈಗೂಡಿಸಿಕೊಂಡಿರುವುದು ತುಂಬ ಹೆಮ್ಮೆಯ ವಿಷಯವಾಗಿದೆ.ಇವರ ಒಂದೊಂದು ಕವನಗಳನ್ನು ಓದುತ್ತಿದ್ದರೆ ಇವರೊಬ್ಬ ಕನ್ನಡ ಸಾಹಿತ್ಯ ಪ್ರೇಮಿ ಹಾಗು ಕನ್ನಡ ಸಾಹಿತ್ಯಾಕ್ಷರು ಎಂಬುದರಲ್ಲಿ ಸಂದೇಹವೆ ಇಲ್ಲ.ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಕವನಗಳ ರಚನೆ ಅವರ ಫ್ರೌಡಿಮೆಗೆ ಹಿಡಿದ ಕನ್ನಡಿಯಾಗಿದೆ.ಇಂತಹ ಸಹೃದಯಿಗಳ ಕವನಗಳನ್ನು ಓದುತ್ತಿದ್ದರೆ ಮತ್ತೊಮ್ಮೆ ಓದಬೇಕೆನ್ನುವ ಹಂಬಲ ಉಂಟಾಗುವುದಂತು ದಿಟ.!ಇವರ ಸುಮಾರು ೮೦ ಕವನಗಳ ಗುಚ್ಛ ಇದೊಂದು ವಿಶಾಲವಾದ ಕಣಜದಂತಿದೆ.ಇಲ್ಲಿ ಕವಿ ಹಲವಾರು ಅತ್ಯುತ್ತಮ ವಸ್ತುವಿಷಯಗಳ ಬಗ್ಗೆ ಅದ್ಭುತವಾಗಿ ಕವನ ಕಟ್ಟಿರುವುದು ಹೆಮ್ಮೆ ಎನಿಸುತಿದೆ.ಇದರೊಳಗಿನ ಪ್ರೀತಿ ,ಸಂಪ್ರೀತಿ, ಸಾಂಗತ್ಯ ಇವುಗಳೆಲ್ಲದರ ಲಾಲಿತ್ಯ ಅದ್ಭುತವಾದ ವರ್ಣನೆಯೆ ಸರಿ…!

೮೦ಕವನಗಳನ್ನು ಅವಲೋಕನ ಮಾಡಿದರು ಎಲ್ಲವೂ ಒಂದಕ್ಕಿಂತ ಒಂದು ವಿಶೇಷವಾಗಿವೆ.ಇವುಗಳಲ್ಲಿ ಈ ಸಂಕಲನದ ಶೀರ್ಷಿಕೆಯೆ ಅಷ್ಟು ರೋಮಾಂಚನ ಹಾಗು ಹೆಣ್ಣಿನ ಮನದ ತುಮುಲಗಳು, ಅವ್ವನ ತ್ಯಾಗ, ನಿಸ್ವಾರ್ಥ ಸೇವಾ ಮನೋಭಾವವನ್ನು ಸಾರುವ ಸಾಲುಗಳು ಪ್ರತಿಯೊಬ್ಬ ಓದುಗನನ್ನು ಮನ ಸೂರೆಗೊಳ್ಳುವುದರಲ್ಲಿ ಸಂದೇಶವೇ ಇಲ್ಲ..

ಅವ್ವನ ಸೀರೆ ಸೆರಗಿನ್ಯಾಗ”

ಅವ್ವನ ಸೀರೆಯ ಸೆರಗಿನ್ಯಾಗ
ಹಾಲುಂಡ ಹಸುಗೂಸಿನ ನಗೆಯ ಹೊನಲಿದೆ
ಹಸಿವನ್ನು ತಣಿಸುವ ಅಮೃತ ಕಳಶವಿದೆ
ಬೆಚ್ಚನೆಯ ಬಿಸಿಯ ಸ್ವರ್ಗ ಸುಖವಿದೆ.!

ಅವ್ವ ಮಮತೆಯೆಂಬ ಒಡಲು ಭಾವದ ಕಡಲು
ಅವಳುಟ್ಟ ಸೀರೆಯ ಹಿಂದೆ ನೂರಾರು ಕಥೆಗಳ ಹಂದರವಿಹುದು.ಈ ಸೀರೆಯ ಸೆರಗು ಹೆಣ್ಣಿಗೆ ಬಹು ವಿಧಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂಬುದನ್ನು ಅತ್ಯಂತ ಸುಂದರವಾಗಿ ವರ್ಣಿಸಿರುವರು.ಅಮ್ಮನ ಸೆರಗಿನೊಳಗೆ ಮುಖ ಅಡಗಿಸಿ ಹಸುಗೂಸು ಹಾಲುಕುಡಿದು ಸಂಭ್ರಮ ಪಡೆವ ಸುಂದರ ಕ್ಷಣಗಳು,ಮಗು ತನ್ನ ಹಸಿವ ಬೇಗೆ ತೀರಿಸಿಕೊಂಡು ಬೆಚ್ಚನೆ ಮಲಗುವ ದೃಶ್ಯಾವಳಿಗಳನ್ನು ತಮ್ಮ ಲೇಖನಿಯಿಂದ ಅದ್ಭುತವಾಗಿ ವಿವರಿಸಿರುವುದನ್ನು ಇಲ್ಲಿ ನೋಡಬಹುದಾಗಿದೆ ಅಷ್ಟೆ ಅಲ್ಲ ಸೀರೆಯ ಸೆರಗನ್ನು ಯಾವುದಕ್ಕೆಲ್ಲ ಅವ್ವ ಬಳಸಿಕೊಳ್ಳುತಿದ್ದಳು ಎಂಬುದನ್ನೂ ಸಹ ಸುಂದರವಾಗಿ ವರ್ಣಿಸಿದ್ದಾರೆ. ಅವ್ವನಂತೆಯೇ ಸೀರೆ ಉಡುವ ಕನಸು ಹುಡುಗಿಯರು ಕಾಣುತಿರುವರು.ತಾನು ಉಟ್ಟ ಸೀರೆಯ ಸೆರಗನ್ನು ಹಲವಾರು ಕಾರ್ಯಗಳಿಗೆ ಉಪಯೋಗಿಸುವ ಪರಿಯನ್ನು ಬಿಂಬಿಸುವಳು.ಎಲ್ಲೆಲ್ಲೋ ಸಿಕ್ಕಿ ಗೊಂದಲ ಸೃಷ್ಟಿಸಿ, ಅದನ್ನು ಸಂಭಾಳಿಸುವುದರಲ್ಲಿ ಪಟ್ಟ ಕಷ್ಟ ಪ್ರತಿ ಹೆಣ್ಣಿಗೂ ನೆನಪಿರುತ್ತದೆ. ಇಲ್ಲಿ ಅವ್ವನ ಬದುಕಿನ ಬವಣೆ ,ಅವಳ ಮಾತೃ ವಾತ್ಸಲ್ಯವನ್ನೂ ಎಳೆ ಎಳೆಯಾಗಿ ತೋರಿಸಿರುವ ಪರಿ ಅದ್ಭುತವಾಗಿದೆ.

‘ಅಮೃತಧಾರೆ’

ಬೆಟ್ಟ ಗುಡ್ಡಗಳನ್ನು ಸೇರಿ
ಮುಳ್ಳುಕಂಟಿಗಳನ್ನು ಹೋಳಿ
ನೀ ಬಂದೆ ದೇವಿ
ಪ್ರಾಣಿ ಪಕ್ಷಿಗಳಿಗೆ ಜೀವನದುಸಿರಾಗಿ
ಮನುಕುಲಕೆ ಮಾತೆಯಾಗಿ.!

ಜೀವಜಲ ಅದುವೆ ಸಲಿಲ ಇದು ಜೀವಸಂಕುಲಕ್ಕೆ ಜೀವದುಸಿರು.ಮಾನವ ಕುಲಕ್ಕಷ್ಟೆಯಲ್ಲ ಇಡಿ ಜೀವಸಂಕುಲಕ್ಕೆ ಜೀವಹನಿ ಈ ಅಮೃತಧಾರೆ.
ಎಂತಹ ಬೆಟ್ಟ ಗುಡ್ಡಗಳನ್ನಾಗಲಿ ಸೀಳಿಕೊಂಡು ಭೇದಿಸಿ ಹರಿದು ಬರುವಳು.ಯಾವುದೆ ಕಲ್ಲು ಮುಳ್ಳುಗಳಿಗೆ ಹೆದರದೆ ಹರಿಯುವಳು ಜೀವಜಲವಾಗಿ ಗಂಗೆ.ಕವಿ ಇಲ್ಲಿ ಜೀವಜಲವಾದ ಅಮೃತಧಾರೆಯ ಮಹತ್ವ ಅವಳಿರುವಿಕೆ ಇಲ್ಲದಿದ್ದರೆ ಏನಾಗುವುದು ಎಂಬುದನ್ನೂ ತಮ್ಮ ಈ ಕವನದಲ್ಲಿ ತುಂಬಾ ಚನ್ನಾಗಿ ವಿವರಿಸಿದ್ದಾರೆ..

“ಮಾದಕ-ಮಾರಕ”

ಕ್ಷಣದ ಸುಖಕ್ಕಾಗಿ
ತೃಣ ನೆಮ್ಮದಿಯಾಗಿ
ಕ್ಷಣಿಕ ಮೋಜಿಗಾಗಿ
ಮಾಡುವ ಕೆಟ್ಟಚಟಗಳ
ಕ್ರೂರ ಕಾಯಿಲೆ ಕಸಾಲೆಗಳಿಗೆ
ಆಹ್ವಾನ ಪತ್ರಿಕೆಗಳು…

ಹುಚ್ಚು ಮನಸ್ಸು ಹದಿಹರೆಯದ ವಯಸ್ಸು ಮಾಡಬಾರದ್ದು ಮಾಡಿ ಇರುವ ಬುದ್ಧಿಯನ್ನು ಹಾಳುಮಾಡಿಕೊಂಡರೆ ಒಂದೇ ಕ್ಷಣದಲ್ಲಿ ಸೋಲನ್ನು ಅನುಭವಿಸುವಿರಿ. ಆದರೆ ಮಾದಕ ವ್ಯಸನ  ಎನ್ನುವುದು ಬೆಂಕಿ ಕಡ್ಡಿಯಂತೆ. ಇದನ್ನೂ ನಿತ್ಯ ಉಪಯೋಗಿಸಿದರೆ ಇಡೀ ಕುಟುಂಬ ಜೀವನವೇ ಬೆಂಕಿ ಗಾಹುತಿಯಾಗುವ ಅಪಾಯ ಹೆಚ್ಚಾಗುವುದು. ಅದಕ್ಕಾಗಿ ತಮ್ಮ ಮೋಜು, ಮಸ್ತಿಗಾಗಿ ದುಶ್ಚಟಗಳ ದಾಸರಾಗದೆ ಒಳ್ಳೆಯ ದಾರಿಯಲ್ಲಿ ನಡೆಯಿರಿ ಇಲ್ಲದಿದ್ದರೆ ನಿಮ್ಮ ಬಾಳು ಪ್ರಾಣಿಪಕ್ಷಿಗಳಿಗಿಂತಲೂ ಕಡೆಯಾಗುವುದು.
ಏಕೆಂದರೆ ಪ್ರಾಣಿ ಪಕ್ಷಿಗಳು ಸತ್ತ ನಂತರವೂ ಬೆಲೆ ಬಾಳುತ್ತವೆ. ಆದರೆ ಮನುಷ್ಯನಿಗೆ ಬದುಕಿರುವಾಗ ಮಾತ್ರ ಬೆಲೆಯಿದೆ. ಹಾಗಾಗಿ ಚಂಚಲವಾಗಿರುವ ಮನಸ್ಸು, ಬುದ್ಧಿಯ ಹತೋಟಿ ಮತ್ತು ನಿರ್ವಹಣೆ ಮಾಡುವುದು ಮುಖ್ಯ.ಇಲ್ಲಿ ಕವಿ ಸಾಮಾಜಿಕ ಕಳಕಳಿಯ ಬಗ್ಗೆ ಮನವರಿಕೆ ಮಾಡಿದ್ದಾರೆ.

“ಗುರುವಿನ ಮಹಿಮೆ”……

ಶಿಕ್ಷಕ ಸಮೃದ್ಧ ಸಮಾಜದ ನಿರ್ಮಾಪಕ
ಸದೃಢವಾದ ರಾಷ್ರ್ಟದ ನೈಜ ನಾಯಕ
ಪರೋಪಕಾರ ಸದಾಚಾರಗಳಿಗೆ ಪ್ರೇರಕ
ಸಭ್ಯಸಂಪನ್ನ ಸಂಸ್ಕೃತಿಗೆ ನೀವೆ ಪ್ರತೀಕ…

ಶಿಕ್ಷಕರು ನಿಜವಾದ ಸಮಾಜ ನಿರ್ಮಾತೃಗಳು.
ಶಿಕ್ಷಕ ಆರ್ಥಿಕವಾಗಿ ಎಷ್ಟೇ ಕಷ್ಟದಲ್ಲಿದ್ದರು ಸಹ ಶೈಕ್ಷಣಿಕವಾಗಿ ಪ್ರಗತಿ ಪಥದಲ್ಲಿ ಶಿಕ್ಷಕ ಸದಾ ಮುಂದಿರುತ್ತಾನೆ. ಸದೃಢವಾದ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕನೂ ತೆರೆಯ ಹಿಂದೆ ನಿಂತು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವನು.ಇಂದು ಭಾರತ ವೈಜ್ಞಾನಿಕವಾಗಿ, ಆರ್ಥಿಕವಾಗಿ, ತಾಂತ್ರಿಕವಾಗಿ ಜಗತ್ತಿನ ಮುಂದೆ ತಲೆ ಎತ್ತಿ ನಿಂತಿದೆ ಎಂದರೆ ಅದಕ್ಕೆ ಮುಖ್ಯ ಕಾರಣ ಕರ್ತೃ ಶಿಕ್ಷಕನೆ. ಅದು ಹೆಮ್ಮೆಯ ವಿಷಯ.
ಸಮಾಜದ ಅಂಕುಡೊಂಕು ತಿದ್ದುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸುವಲ್ಲಿ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ.ಮಣ್ಣಿನ ಮುದ್ದೆಯಂತಿದ್ದ ಮಗುವನ್ನು ಉತ್ತಮ ಶಿಲೆಯನ್ನಾಗಿ ಅರಳಿಸೋ ಕಲೆಯ ರುವಾರಿ ಈ ಶಿಕ್ಷಕರು.ಉತ್ತಮ  ಪ್ರಜೆಯಾಗಿ ಬೆಳೆಯಲು ಮಾರ್ಗದರ್ಶನ ನೀಡುವನು.ಮಕ್ಕಳಿಗೆ ಪಾಠದ ಜೊತೆಗೆ ನೀತಿಯನ್ನು ಕಲಿಸಿ ಸತ್ರ್ಪಜೆಯಾಗಲು ಅದ್ಭುತ ಕಾರ್ಯವನ್ನು ಎಸಗುವನು..

“ಸೊಬಗು”….

ಸೃಷ್ಟಿಯ ಸೌಂದರ್ಯಕ್ಕೆ ಸರಿಸಾಟಿಯಿಲ್ಲ
ಸೊಬಗು ಧರೆಗಿಳಿದು ಬಂದಿದೆಯಲ್ಲ
ಮನವನ್ನು ತಣಿಸುವ ಪೂರ್ಣಚಂದಿರ
ನಳನಳಿಸುವ ಹಚ್ಚ ಹಸಿರಿನ ಹಂದರ

ಹೌದು ಸೃಷ್ಟಿಯ ಸೌಂದರ್ಯದ ಮುಂದೆ ಎಲ್ಲವೂ ಶೂನ್ಯ..ಅದಕ್ಕೆ ಸರಿಸಾಟಿ ಯಾರು.? ಯಾವುದೂ ಕೂಡ ಇಲ್ಲ.ಮನಸ್ಸಿಗೆ ಸುಖ, ನೆಮ್ಮದಿ ತರುವಂತಹ ಮನಮೋಹಕ ದೃಶ್ಯಗಳ ರಾಶಿ ಮತ್ತೆ ,ಮತ್ತೆ ನೋಡಬೇಕೆನ್ನುವ ನಿಸರ್ಗದ ಕಾಡು ,ಝರಿ ,ಜಲಪಾತ ,ಬೆಟ್ಟ ಗುಡ್ಡಗಳು
ಕಣಿವೆಗಳು ಇತ್ಯಾದಿ..ನೋಡುಗರ ನೋಟಕ್ಕೊಂದು ಮೆರಗು ಸೃಷ್ಟಿಸಿದ ಸೃಷ್ಟಿಕರ್ತನಿಗೊಂದು ಬೆರಗು.ಇಲ್ಲಿ ಕವಿಯು ಪ್ರಕೃತಿಯ ಸೌಂದರ್ಯ ಹಾಗು ಸೃಷ್ಟಿಯ ವೈಭವವನ್ನು ಸೊಗಸಾಗಿ ವಿವರಿಸಿದ್ದಾರೆ..

ಇಲ್ಲಿ ಕವಿ ಹಲವಾರು ಕವನಗಳನ್ನು ಬರೆದದ್ದು ನಾನು ಓದಿರುವ ಹಲವಾರು ಕವನಗಳಲ್ಲಿ ಕೆಲವಂದಷ್ಟನ್ನು ಮೇಲೆ ವಿವರಿಸಿದ್ದೇನೆ.ಖಂಡಿತ ಎಲ್ಲರೂ ಓದಲು ಯೋಗ್ಯವಾದ ಪುಸ್ತಕವಾಗಿದೆ.ಈ ಒಂದು ಕವನಸಂಕಲನಕ್ಕೆ ಮುನ್ನುಡಿಯನ್ನು ಡಾ.ವೈ.ಎಮ್.
ಯಾಕೊಳ್ಳಿಯವರು ಅದ್ಭುತವಾದ ಶುಭಾರಂಭವನ್ನು ಮಾಡಿರುವರು.ಹಾಗೆಯೆ ಇದಕ್ಕೆ ಬೆನ್ನುಡಿಯನ್ನು ಶ್ರೀಮತಿ ಅರುಣಾ ನರೇಂದ್ರ ಮೇಡಮ್ ರವರು ಉತ್ತಮವಾಗಿ ಬರೆದು  ಹರಸಿದ ಹಾರೈಕೆಯು ಈ ಸಂಕಲನಕ್ಕೆ ಶೋಭೆತರುತ್ತಿದೆ.

ಈ ಕವನ ಸಂಕಲನದಲ್ಲಿ ಕವಿಗಳ ಪ್ರಬುದ್ಧತೆ, ಪ್ರತಿಭೆ ,ಕ್ರಿಯಾಶೀಲತೆಯು  ಸೊಗಸಾಗಿ ಮೂಡಿ ಬಂದಿದೆ. ಇವರ ಕವನ ರಚನಾ ಕೌಶಲ್ಯ ಮತ್ತಷ್ಟು ಮಗದಷ್ಟು ಹೆಚ್ಚಲಿ. ಸೃಜನಶೀಲ ಗುಣ ಬೆಳೆಯುತ್ತಲೇ ಸಾಗಲಿ ಎಂದು ಹಾರೈಸುತ್ತಾ. ಸಾಹಿತ್ಯ ಪ್ರಿಯರು ಈ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯೊಂದಿಗೆ…ಶುಭಹಾರೈಸುವೆ…


ಅಭಿಜ್ಞಾ ಪಿ.ಎಮ್. ಗೌಡ

Leave a Reply

Back To Top