ಯುಗಾದಿ ವಿಶೇಷ

ಜಯಶ್ರೀ ದೇಶಪಾಂಡೆ

ಇಳಕಲ್ ಆಯಿಯ ಯುಗಾದಿ ಹೋಳಿಗೆ

ನಮ್ಮನಿಯೊಳಗ ಈ ಇಂಥಾ ದೊಡ್ಡ ಗೋಣೀ ಚೀಲದ ತುಂಬ ಫಳಾ ಫಳಾ ಅನ್ನುವ ಮುತ್ತು ತುಂಬಿ ಇಟ್ಟಿರತಿದ್ರು” ಅನ್ನುತ್ತಿದ್ದಂತೆ ಚಕಚಕ ಹೊಳೆಯುತ್ತಿದ್ದ ಇಳಕಲ್ ಆಯಿಯ ಕಣ್ಣುಗಳನ್ನೇ ನೋಡುತ್ತ ನಾನೂ ನನ್ನಕ್ಕ ಒಂದು ‘ಗೋಣೀಚೀಲ ಮುತ್ತು!’ ಅಂದರೆ ಎಷ್ಟಿರಬಹುದು ಎಂದು ಲೆಕ್ಕ ಹಾಕಲು ಶತಾಯಗತಾಯ ಪ್ರಯತ್ನಿಸಿ ಕೊನೆಗೂ ಒಂದುಗೋಣಿ ಚೀಲ ಮುತ್ತಿನ ಕಾಳುಗಳ ಅಂದಾಜು ಸಿಗದೇ ಅದಕ್ಕೆ ನಮ್ಮದೇ ಒಂದು ಅಳತೆಯನ್ನು ಹಚ್ಚಿ ಇಷ್ಟಿದ್ದಿರಬಹುದು ಬಿಡು ಅಂತ ತೀರ್ಮಾನಿಸಿ ನಮ್ಮ ಆಟಕ್ಕೆ ಹೋಗುತ್ತಿದ್ದೆವು. ಇಳಕಲ್ ಆಯಿ ತಮ್ಮ ಮನೆಯ ಮುತ್ತಿನ ಚೀಲದ ಕತೆಯನ್ನು ಮುಂದುವರಿಸುತ್ತಲೇ ಅವತ್ತು ತಾವು ಮಾಡಿಟ್ಟ ಹುಳಿಗೆ ಇಂಗಿನ ಒಗ್ಗರಣೆ ಕೊಟ್ಟು ಅದೇ ಸೌಟನ್ನು ಹುಳಿಯ ಪಾತ್ರೆಯೊಳಗಿಳಿಬಿಟ್ಟು ಇನ್ನಷ್ಟು ‘ಚುಂಯ್’ ಅನಿಸಿದಾಗ ನಮ್ಮ ಘ್ರಾಣೇಂದ್ರಿಯ ಡಬಲ್ ಶಿಫ್ಟಿನಲ್ಲಿ ಕೆಲಸ ಮಾಡ್ತಿತ್ತು… ಆಗೆಲ್ಲ ನಮ್ಮಮ್ಮ ತನ್ನ ಸಹಜ ಮುಗುಳುನಗೆಯೊಂದಿಗೆ, ಕಣ್ಣುಗಳ ತುಂಬ ತುಂಬಿದ ಕರುಣೆಯೊಂದಿಗೆ ಇಳಕಲ್ ಆಯಿಯ ಮುತ್ತಿನ ಕಥಾಕಥನಕ್ಕೆ ಒಂದು ‘ಬೆನೆಫಿಟ್ ಆಫ್ ಡೌಟ್’ ನೋಟ ಬೀರುತ್ತ ತನ್ನ ಕಾಯಕದಲ್ಲಿ ಮುಳುಗಿರ್ತಿದ್ಲು…ಅದು ನಮಗೆ ನಿತ್ಯದ ಅಭ್ಯಾಸ. ಬೆರಗು ನಮ್ಮ ಪಾಲಿಗೆ…
ಅಲ್ಲಿ ಅಡುಗೆ ಮನೆಯಲ್ಲಿ ತಪ್ತ ಕಾಂಚನ ಪ್ರಭೆ ಹೊಮ್ಮಿಸಿ ನಿಗಿನಿಗಿ ಅನ್ನುತ್ತಿದ್ದ ಇದ್ದಿಲೊಲೆಯ ಮೇಲೆ ಅವತ್ತಿನ ರಸಪಾಕ ತಯಾರಾಗುತ್ತಿತ್ತು. ಅದರ ಕರ್ತೃ ಇನ್ಯಾರೂ ಅಲ್ಲ, ಅವರೇ ಇಳಕಲ್ ಆಯಿ!
ಉಂಡ ಮೇಲೆ ಬೆರಳುಗಳಲ್ಲಿ ಆ ರಸರುಚಿಯ ಬಹ್ವಂಶವೇ ಅಸ್ಖಲಿತ ಲೇಪನವಾಗಿ ಉಳಿದುಬಿಟ್ಟ ಹಾಗೆ ನಮ್ಮ ಕೈ ಘಮಘಮ…ಯಾವುದೆಲ್ಲದನ್ನೂ ಟೀಕೆ ಮಾಡುವುದೇ ತನ್ನ ಜನ್ಮಸಿದ್ಧ ಹಕ್ಕೆನ್ನುವಂತೆ ಕಾಪಾಡಿಕೊಂಡು ಬಂದಿದ್ದ ನನ್ನೊಬ್ಬ ಅಣ್ಣ ಇಳಕಲ್ ಆಯಿಯ ಅಡುಗೆಗೆ ಹೆಸರಿಟ್ಟರೆ ಕೇಳಿ! ಶಾಂತಂ ಪಾಪಂ!
ಅವರ ಮಾತು ಮಧುರ, ಕೈಯಂತೂ ಅನ್ನಪೂರ್ಣಾ ಹಸ್ತವೇ..ಆದರೆ ದೈವ ? ಅದಾರ ಮನೆ ದೇವರು? ಈಗ ಅರವತ್ತು ದಾಟಿ ಮಾಗಿ ಹಣ್ಣಾಗಿ, ಐದೇ ಅಡಿ ಎತ್ತರದ ಆಯಿಯ ದೇಹದ ಚರ್ಮ ಬಣ್ಣದಲ್ಲಿ ಕೈ ತೊಳೆದು ಮುಟ್ಟುವ ಕ್ವಾಲಿಟಿಯದು. ಕಣ್ಣು ಮೂಗು ಆಕೆ ಒಂದಾನೊಂದು ಕಾಲದಲ್ಲಿ ನಿಸ್ಸಂಶಯವಾಗಿ ಸುಂದರಿಯರ ಸಾಲಿಗೆ ಸೇರಿದ್ದರ ಕುರುಹುಗಳಿನ್ನೂ ಬಲು ಸ್ಪಷ್ಟವಿದ್ದುವು…ಅವರ ಸಮೃದ್ಧ. ತುಂಬು ಕುಟುಂಬ ಕಾಲದ ಪ್ರಹಾರದಲ್ಲಿ ಒಡೆದು ಕವಲುಗಳಾಗಿ- ಅಂತಿಂಥ ಕವಲುಗಳಲ್ಲ- ಮಕ್ಕಳ ರೂಪದ ಕವಲುಗಳಾಗಿ.ಅದೂ ದುಶ್ಚಟಕ್ಕೆ ಬಿದ್ದ ಮಕ್ಕಳ ರೂಪದ ಕವಲುಗಳು… ಈ ತಾಯಿ ತಾನು ಅವರಿವರ ಮನೆಯ ಅಡುಗೆ ಕೆಲಸಕ್ಕೆ ಇಳಿದ ವ್ಯಥೆಯನ್ನು ನಮ್ಮಮ್ಮನ ಮುಂದೆ ಹೇಳಿಕೊಳ್ಳುವಾಗ ಎಂದೂ ಕಣ್ಣೀರಿಟ್ಟಲ್ಲದ ಸ್ವಾಭಿಮಾನಿ!…’ಗತಾಸೂ ನಗತಾಸೂಂಶ್ಚ ನನ್ಯ ಶೋಚಂತಿ..’ ಆಯಿಯ ಜನ್ಮದ ಮೋಟೋ ಇದ್ದಿರಲೇಬೇಕು…ಗೋಣಿಚೀಲದ ಮುತ್ತಿನ ಸಿರಿಬಾಹುಳ್ಯದಿಂದ ಅವರಿವರ ಮನೆಯ ಇದ್ದಿಲೊಲೆಯ ಕೆಂಡದಲ್ಲಿ ಸುಟ್ಟು ಕಳೆಯಿಸುತ್ತಿದ್ದ ತನ್ನ ಕರ್ಮಸಿದ್ಧಾಂತದ ಪ್ರಾತ್ಯಕ್ಷಿಕೆ ನಮ್ಮೆದುರು ತೆರೆದಿಟ್ಟ ಯೋಗಿನಿ… ಯುಗಾದಿಯ ಹಬ್ಬಕ್ಕೆ ರೇಶಿಮೆಯಂಥ ಕಣಕದ ಪದರುಗಳಲ್ಲಿ ಘಮಘಮಿಸುವ ಹೂರಣ ಇಟ್ಟು ಮುಚ್ಚಿ ತೀಡಿ ಬೇಯಿಸಿ ಮನೆಯಲ್ಲೇ ಬೆಣ್ಣ ಕಡೆದು ಕಾಸಿದ ಹೆತ್ತುಪ್ಪ ಸುರಿದು ನಮ್ಮೆಲೆಗೆ- ತನ್ನ ಮಡಿಯ ಕಾರಣದಿಂದಾಗಿ, ಇಷ್ಟು ದೂರದಿಂದಲೇ ಬಗ್ಗಿ ಬಡಿಸುತ್ತಿದ್ದ ಆಯಿಯ ಕೈರುಚಿ ನಾಲಿಗೆಯನ್ನು ಇನ್ನೂ ಬಿಟ್ಟಿಲ್ಲದಿರುವಾಗ ಪ್ಯಾಕೆಟ್ ಬಿಳಿಬೆಲ್ಲ, ಪಾಲಿಶ್ ಬೇಳೆ, ಎಂದೋ ಕಾಸಿಕೊಂಡು ಬಾಟ್ಲಿಗೆ ಇಳಿದು, ಲೇಬಲ್ ಬಡಿದುಕೊಂಡು ಊರಿಂದೂರಿಗೆ ಹಾರಿ ಬಂದ ತುಪ್ಪದ ಒಬ್ಬಟ್ಟೆಂಬ ಹೋಳಿಗೆ ರುಚಿಸದೆ ಇದ್ದರೆ ಅದು ಇಲಕಲ್ ಆಯಿಯ ತಪ್ಪು ಅಲ್ಲವಲ್ಲ…ಅದರಲ್ಲೂ ಯುಗಾದಿಯ ಅವರ ಹೋಳಿಗೆಗಳೆಲ್ಲಿ ಈಗ? ಕೇವಲ ನನ್ನ ನೆನಪಿನಲ್ಲಿ!

—————————————–

ಜಯಶ್ರೀ ದೇಶಪಾಂಡೆ

Leave a Reply

Back To Top