ಕಾವ್ಯ ಸಂಗಾತಿ
ಗಜಲ್
ಹಮೀದಾ ಬೇಗಂ ದೇಸಾಯಿ
ಕಾಡುತಿದೆ ಬೆಂಬತ್ತಿ ಭೂತವಾಗಿ ರಿವಾಜು ನನ್ನ
ದೂಡುತಿದೆ ತಿರುಗಣಿಗೂ ಶತ್ರುವಾಗಿ ರಿವಾಜು ನನ್ನ
ನೇತಾಡುತಿದೆ ತೂಗು ಕತ್ತಿ ನೆತ್ತಿಯ ಮೇಲಲ್ಲವೇ
ಉಣಿಸುತಿದೆ ತುತ್ತನು ವಿಷವಾಗಿ ರಿವಾಜು ನನ್ನ
ಮೊಗದ ನಗುವೆಲ್ಲ ಒಣಗಿ ಬಿರಿದು ಕಂದಿದೆ
ಸುರಿಸುತಿದೆ ಕಂಬನಿಯನು ರಕ್ತವಾಗಿ ರಿವಾಜು ನನ್ನ
ಎದೆಯ ಭಾವಗಳೆಲ್ಲ ಹುಳಿಯಾಗಿ ಹೋಗಿವೆ ಹೆಪ್ಪಿಟ್ಟು
ಘನಿಸುತಿದೆ ಮನವನು ಹಿಮವಾಗಿ ರಿವಾಜು ನನ್ನ
ಉಸಿರು ಕಟ್ಟುತಿದೆ ರೇಶ್ಮೆ ಪರದೆಯಲಿ ಬೇಗಂ
ಉರಿಸುತಿದೆ ಒಲವನು ಕಿಡಿಯಾಗಿ ರಿವಾಜು ನನ್ನ.
ವಿಷಾದವ ಹೊರಹಾಕುವ ಗಝಲ್ ಬಹಳ ಚೆಂದ ಇದೆ ಮೇಡಂ
ಮೆಚ್ಚುಗೆಗೆ ಧನ್ಯವಾದಗಳು ಮಮತಾ. ಹಮೀದಾ
ರೀತಿ ರಿವಾಜುಗಳ ನಗ್ನ ಸತ್ಯವನ್ನು ನಿರ್ಭಿಡೆಯಿಂದ ವ್ಯಕ್ತಪಡಿಸಿದ ರೀತಿಗೆ ಶರಣು ಶರಣು. ಮಾರ್ಮಿಕ ಗಝಲ್.
ಧನ್ಯವಾದಗಳು ಮೆಚ್ಚುಗೆಗೆ.. ಹಮೀದಾ ಬೇಗಂ ದೇಸಾಯಿ ಸಂಕೇಶ್ವರ.