ಬೆಳಕು ಲವಲವಿಕೆಯ ಸಂಕೇತ

ಬೆಳಕು ಲವಲವಿಕೆಯ ಸಂಕೇತ

ಸುಜಾತ ರವೀಶ್

ಬೆಳಕು ಲವಲವಿಕೆಯ ಸಂಕೇತ

ಬೆಳಗೆಂಬುದು ಸದಾ ಬೆಡಗು.   ಈ ವಿಸ್ಮಯದ   ಪರಿ ಕಾಡಿಸಿಕೊಳ್ಳಸ ಕವಿ ಇಲ್ಲವೇ ಇಲ್ಲವೇನೋ. ಆ ಉಷೆಯ ಸೌಂದರ್ಯವನ್ನು, ಅಂತರ್ಗತ ಚೇತನದ ಜಾಲವನ್ನು ಹಾಡಿ ಹೊಗಳದ ಕವಿಯನ್ನು ನಾ ಕಾಣೆ.  ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಬೆಳಗು ಸೋಜಿಗವಾಗಿ ಕಾಡಿದೆ. ಪ್ರತಿಯೊಬ್ಬರೂ ಕಾಣುವ ಬೆಳಗು ಹೊರಗಿನ ಕಣ್ಣಿನದಾದರೆ ಬೇಂದ್ರೆಯವರದು ಒಳಗಣ್ಣು .

ಬೇಂದ್ರೆಯವರು ಶ್ರಾವಣದ ಕವಿ ಹೇಗೋ ಹಾಗೆ ಬೆಳಕಿನ ಕವಿಯೂ ಹೌದು ಎಂಬುದು ಅಷ್ಟೇ ಸತ್ಯ .ಸಾವಿರದೊಂಬೈನೂರ ಹದಿನೆಂಟರ ಪ್ರಭಾತ ಪತ್ರಿಕೆಯಲ್ಲಿ ಪ್ರಕಟವಾದ ಈ ಬೆಳಗು ಪದ್ಯ ಕನ್ನಡ  ಕಾವ್ಯಾಗಸದಲ್ಲಿ ಬೆಳಗುವ

ರವಿ .ಶತಮಾನದ ಪದ್ಯವೂ ಹೌದು . ಬೇಂದ್ರೆಯವರ ಗರಿ ಸಂಕಲನದಲ್ಲಿದೆ ಇದು.  ಇದನ್ನು ಬರೆದಾಗ ಅವರಿಗೆ ಇಪ್ಪತ್ತೆರಡರ ಹರೆಯವೆಂಬುದೂ ಗಮನಾರ್ಹ .ಇದು ಬರೀ ಮೂಡಲ ಮನೆಯ ಮುತ್ತಿನ ನೀರಿನ ಎರಕವಷ್ಟೇ ಆಗಿ ಉಳಿಯದೆ ನವಜಾಗೃತಿಯ ನವೋನ್ಮೇಷಶಾಲಿನೀ ಯೂ ಆಗಿ ಕಾವ್ಯ ಸಾಹಿತ್ಯದಲ್ಲಿ ವಿಜೃಂಭಿಸುತ್ತದೆ .

ಮೂಡಲ ಮನೆಯಾ ಮುತ್ತಿನ ನೀರಿನ ಎರಕಾಽವಾ ಹೊಯ್ದಾ

ನುಣ್ಣನ್ನೆರಕಾವ ಹೊಯ್ದಾ

ಬಾಗಿಲ ತೆರೆದು ಬೆಳಕು ಹರಿದೂ

ಜಗವೆಲ್ಲಾ ತೊಯ್ದಾ

ಹೋಯ್ತೋ ಜಗವೆಲ್ಲಾ ತೊಯ್ದಾ

ಇಲ್ಲಿ ಪೂರ್ವದಿಕ್ಕು 1ಸಂಕೇತವಾಗಿ ಹೊರಹೊಮ್ಮಿರುವುದನ್ನು ಕಾಣಬಹುದು.. ಅಲ್ಲಿ ಮುತ್ತನ್ನು ಕರಗಿಸಿ ಎರಕ ಆದಂತಹ ಕಾಂತಿಯ ಬೆಳಕು ರಸವಾಗಿ ನೀರಾಗಿ ಬಾಗಿಲನ್ನು ತೆರೆದೊಡನೆ ಹರಿದುಬಂದು ಜಗವನ್ನೇ ತೋಯಿಸಿ ಬೆಳ್ಳನೆ ಬೆಳಕಾಗಿಸುತ್ತದೆ .ಎಂಥ ಸುಂದರ ಕಲ್ಪನೆ ಮುತ್ತಿನ ನೀರಿನ ಅಭಿಷೇಕ. ಧರಣಿಗೆ.

ರತ್ನದ ರಸದ ಕಾರಂಜೀಯೂ

ಪುಟಪುಟನೇ ಪುಟಿದು

ತಾನೇ ಪುಟಪುಟನೇ ಪುಟಿದು

ಮಘಮಘಿಸುವ ಮುಗಿದ ಮೊಗ್ಗೀ

ಪಟಪಟನೆ ಒಡೆದು

ತಾನೇ_ಪಟಪಟನೆ ಒಡೆದು

ರತ್ನದ ಹೊಂಬೆಳಕು ರಸವಾಗಿ ಕಾರಂಜಿಯಂತೆ ಪುಟಿಯುವ ಭಾವ ಪುಟಿಪುಟಿದು ಎಂಬಲ್ಲಿನ ದ್ವಿರುಕ್ತಿಯಲ್ಲಿ ಹೊಮ್ಮುವ ಲಯ ಅಸಾಧಾರಣ ಹೀಗೆ ಮಗಮಗಿಸುವ ಮೊಗ್ಗುಗಳು ಅರಳುವ ಪರಿ ನೋಡಿ ತನ್ನಿಂತಾನೆ ಪಟಪಟನೆ ರೆಕ್ಕೆ ಬಿಚ್ಚಿ ಹೂವಾಗುವ ಅನನ್ಯತೆಯ ಸಿರಿ ಗಮನಿಸಿ ಬೆಳಗಿನ ಜಾವದ ಉತ್ಕಟ ಉತ್ಸಾಹದ ಚಿಲುಮೆಯಾಗಿರುವ ಚೈತನ್ಯದ ವರ್ಣನೆಯ ಪರಾಕಾಷ್ಠತೆ ಇಲ್ಲಿ ಸರಳವಾಗಿ ಬಿಂಬಿತ.

ಎಲೆಗಳ ಮೇಲೆ ಹೂಗಳ ಒಳಗೆ

ಅಮೃತದಾ ಬಿಂದು

ಕಂಡವು ಅಮೃತದ ಬಿಂದು

ಯಾರಿರಿಸಿರುವರು ಮುಗಿಲಽ ಮೇಲಿಂ_

ದಿಲ್ಲಿಗೇ ತಂದು

ಈಗ_ಇಲ್ಲಿಗೆ ತಂದು

ಇಬ್ಬನಿ ಹನಿಗಳನ್ನು ಅಮೃತದ ಬಿಂದುವಿಗೆ ಹೋಲಿಸುವ ಈ ತಾಧ್ಯಾತ್ಮದ ಭಾವನೆಗೆ ಸಾಟಿಯುಂಟೆ ? ಸ್ವರ್ಗದಿಂದ ಇದನ್ನು ತಂದು ಎಲೆಗಳ ಮೇಲೆ ಹೂಗಳ ಒಳಗೆ ಇರಿಸಿದವರು ಯಾರು ಎಂಬ ಪ್ರಶ್ನೆ ಕವಿಯನ್ನು ಕಾಡುತ್ತದೆ.

ತಂಗಾಳಿಯಾ ಕೈಯೊಳಗಿರಿಸಿ ಎಸಳಿನ  ಹೂವಿನ ಎಸಳೀನಾ ಚವರೀ

ಹೂವಿನ ಎಸಳೀನಾ ಚವರಿ

ಹಾರಿಸಿಬಿಟ್ಟರು ತುಂಬಿಯ ದಂಡು

ಮೈಯೆಲ್ಲಾ ಸವರಿ

ಗಂಧ_ಮೈಯೆಲ್ಲಾ ಸವರಿ 

ತಂಗಾಳಿ ಹೂಗಳ ಗೊಂಚಲುಗಳನ್ನು ಸವರುತ್ತಿದೆ. ಅವುಗಳ ಗಂಧ ಮೈಯೆಲ್ಲಾ ಸವರಿ ದುಂಬಿಗಳಿಗೆ  ನಿಮಂತ್ರಣ ಹೋಗಿ ಭ್ರಮರ ಗಡಣ ಹಾರಿಬರುವುದು ಮುಂಜಾವಿನ ಮಬ್ಬಿನ ಮತ್ತಿನ ಹೊತ್ತಿನಲ್ಲೇ ತಾನೆ?

ಗಿಡಗಂಟೆಗಳಾ ಕೊರಳೊಳಗಿಂದ

ಹಕ್ಕಿಗಳ ಹಾಡು

ಹೊರಟಿತು ಹಕ್ಕಿಗಳ ಹಾಡು

ಗಂಧರ್ವರ ಸೀಮೆಯಾಯಿತು

ಕಾಡಿನಾ ನಾಡು

ಕ್ಷಣದೊಳು ಕಾಡಿನಾ ನಾಡು

ಇಲ್ಲಿಯೇ ರವಿ ಕಾಣದ ವಿಸ್ಮಯ ಕವಿ ಕಣ್ಣಿಗೆ ಕಂಡುಬರುವುದು. ಈ ಸುಂದರ ಪ್ರತಿಮೆ ನೋಡಿ ಹಕ್ಕಿ ಗೂಡುಗಳಿರುವ ಗಿಡ ಪೊದೆಗಳು ಚಿಲಿಪಿಲಿಯ  ಹೊರಹೊಮ್ಮಿಸುವ ಕೊರಳುಗಳು ಕವಿ . ಆ ಹಾಡಿನಿಂದ ವಿಮರ್ಶೆ ಭೂಮಿ ಕಾಡಿನ ನಾಡು ಕ್ಷಣದಲ್ಲಿ ಗಂಧರ್ವರ ಸೀಮೆಯಾಗಿ ಮಾರ್ಪಡುತ್ತದಂತೆ .

ಕಂಡಿತು ಕಣ್ಣು ಸವಿದಿತು ನಾಲಗೆ

ಪಡೆದೀತೀ ದೇಹ

ಸ್ಪರ್ಶಾ ಪಡೆದೀತೀ ದೇಹ

ಕೇಳಿತು ಕಿವಿಯು ಮೂಸಿತು ಮೂಗು ತನ್ಮಯವೀ ಗೇಹಾ

ದೇವರ ದೀ ಮನಸಿನ ಗೇಹಾ

ಈ ಭಾಗದಲ್ಲಿ ಕವಿ ಪಂಚೇಂದ್ರಿಯಗಳಿಗೆ ದಕ್ಕಿದ ಬೆಳಗಿನ ಅನುಭವದ ಸಾರವನ್ನು ವರ್ಣಿಸುತ್ತಾರೆ. ತನ್ಮಯವಾಗುವ ದೇವರ  ಗೇಹವಾದ ಮನಸ ಬಗ್ಗೆಯೂ ತಿಳಿಸುತ್ತಾರೆ .ಇಂದ್ರಿಯಗಳಿಗೆ ಗೋಚರವಾದ ಅನುಭವಗಳನ್ನು ಪದಗಳಲ್ಲಿ ಹಿಡಿದಿಡುತ್ತಾರೆ .

ಅರಿಯದು ಆಳವು ತಿಳಿಯದು ಮನವು ಕಾಣದೋ ಬಣ್ಣ

ಕಣ್ಣಿಗೆ ಕಾಣದೊ ಬಣ್ಣ

ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣ ಇದು ಬರಿ ಬೆಳಗಲ್ಲೋ ಅಣ್ಣಾ

ಇಲ್ಲಿಯವರೆಗೆ ಅವರವರ ಹೊರ ಅನುಭವಗಳ

ಸವಿಸಾರದ ಸಂಗ್ರಹವಾಗಿದ್ದು ಪ್ರಕೃತಿ ವರ್ಣನೆ ಯಾಗಿದ್ದ ಪದ್ಯದ ಭಾವ ಅನುಭಾವದ ಆಧ್ಯಾತ್ಮದ ಮಗ್ಗುಲಿಗೆ ಹೊರಳಿ ಕೊಳ್ಳುವುದು ಇಲ್ಲೇ . ಈ ಸೌಂದರ್ಯದ ಆಳ ಮನಸ್ಸಿಗೆ ಅರ್ಥವಾಗದೆ ಬರಿಯ ಕಣ್ಣಿನ ಭಾವದ ಬಣ್ಣವಾಗಿ ಉಳಿಯದೆ ಬರಿಯ ಬೆಳಗಲ್ಲೋ ಅಣ್ಣಾ ಎಂಬ ಅನುಭಾವ ಮೈದೋರುತ್ತಾ ಶಾಂತಿರಸವೇ ಪ್ರೀತಿಯಿಂದ ಮೈದೋರಿತು ಎನ್ನುವಲ್ಲಿಗೆ ಕವಿಯ ಕಣ್ಣಿಗೆ ಕಾಣದ ಸೌಂದರ್ಯ ಕವಿಯ ಕಣ್ಣುಗಳಿಗೆ ಮಾತ್ರ ಗೋಚರಿಸದೆ ಆಂತರ್ಯಕ್ಕಿಳಿದು ಸತ್ಯದ ಅರಿವು ಮೂಡಿಸುವ ಅನನ್ಯತೆ ಬೆಳಗನ್ನು ಚೈತನ್ಯದ ಬೆಳಕನ್ನಾಗಿಸುವಲ್ಲಿ ಸಫಲತೆ ಹೊಂದುತ್ತದೆ. ಪಂಚೇಂದ್ರಿಯಗಳ ಸಂವೇದನೆ ಉನ್ನತಸ್ತರ ವಾದಂತೆ ಆಧ್ಯಾತ್ಮಿಕತೆಯ ಅಲೌಕಿಕತೆಯ ಅನಾವರಣ ವಿಶಿಷ್ಟತೆಯನ್ನು ತಂದುಕೊಟ್ಟಿದೆ.  ಮುಂಜಾವಿನ ಪ್ರಕ್ರಿಯೆ ಸಾಕ್ಷಿಭೂತವಾಗಿ ಸ್ಥಾಯಿಯಾಗಿ ನಿಂತು ಅಂತರ್ಗತ ಭಾವ ತಲ್ಲೀನತೆ ಧ್ಯಾನ ಆಂತರಿಕ  ರಸಾನುಭೂತಿಗಳ ಮಜಲುಗಳಲ್ಲಿ ಮೇಲೇರಿಸುತ್ತಾ ವಿಶಿಷ್ಟ ಅನುಭೂತಿಯ ಶಿಖರಕ್ಕೆ ಮುಟ್ಟಿಸುವುದು ಇಲ್ಲಿ ತನ್ನಂತಾನೆ ಸಹಜವಾಗಿ ಮೊಗ್ಗರಳಿದಂತೆ, ಬೆಳಕು ಹೊಡೆದಂತೆ ಆಗುವ ಸಹಜಾತಿ ಸಹಜ ಕ್ರಿಯೆಯಂತೆ ಭಾಸವಾಗಿ ಬೆಳಗು ವೈಶಿಷ್ಟ್ಯಪೂರ್ಣವಾಗಿ ವಿಭಿನ್ನವಾಗಿ ಸೆಳೆಯುತ್ತದೆ . ಕವನ ಮತ್ತಷ್ಟು ಮೇಲೆರುತ್ತಾ ಹೋಗಿ ಆತ್ಮೀಯತೆ  ಆಪ್ತತೆ ಳೊಂದಿಗೆ ಆಧ್ಯಾತ್ಮಿಕತೆಯ  ತಾದ್ಯಾತ್ಮತೆಯಿಂದ ಸಾರ್ಥಕವಾಗುತ್ತದೆ.


ಸುಜಾತಾ ರವೀಶ್

Leave a Reply

Back To Top