ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ

ಪುಸ್ತಕದ ಸಂಗಾತಿ

ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ

ಸುಮಧುರ ಮುಕ್ತಕಗಳ

ತೋಟದೆಲ್ಲೆಡೆ ವಿಹಾರ”….

ಕವಿಗಳು :ಶ್ರೀಮತಿ ಮಧುರಾ ಮೂರ್ತಿ

ವಿಮರ್ಶಕರು :—ಅಭಿಜ್ಞಾ ಪಿ.ಎಮ್.ಗೌಡ

ಹೃದಯವನು ಅರಳಿಸುತ ಸುಮದಂತೆ

ಕಂಗೊಳಿಸಿ

ಪದಗಳಲಿ ವರ್ಣಿತವು ಈ ಮುಕ್ತಕ

ಮಧುರತೆಯ ಸೂಸುತ್ತ ವಿಷಯಗಳ ಅರಹುತ್ತ

ವದನವನು ನಗಿಸುತಿದೆ ಅಭಿಚೇತನ”….

               ಸಾಹಿತ್ಯ ಪ್ರಕಾರಗಳಲ್ಲಿ ಇತ್ತೀಚೆಗೆ ಓಘವನ್ನು ಕಾಯ್ದು ಕೊಂಡಿರುವ ರಚನೆಗಳಲ್ಲಿ ಮುಕ್ತಕಗಳು ಸಹ ಒಂದಾಗಿವೆ.ಕನ್ನಡ ಪ್ರಾಚೀನ ಕಾಲದಿಂದಲೂ ಸಹ ಮುಕ್ತಕಗಳು ತಮ್ಮ ಪರಂಪರೆಯನ್ನು ಹೊಂದಿವೆ.ಮುಕ್ತ ಎಂದರೆ ವಿಶಾಲ ಅರ್ಥವನ್ನು ನೀಡುತ್ತವೆ. ಆದರೆ, ಮುಕ್ತಕ ಎಂಬುದು ಕಡಿಮೆ ಪದಗಳಿಂದ ವಿಶಾಲ ಅರ್ಥ ನೀಡುತ್ತ ಕವಿಯ ಕಲ್ಪನೆಯ ಭಾವಗಳಿಗೆ ಚಂದದ ಚೌಕಟ್ಟಿನಲ್ಲಿ ಛಂದೋಬದ್ಧ ವಿಧಾನ ಹಾಗು ಚೌಪದಿಯಲ್ಲಿ ಬರೆಯುತ್ತಿರುವ ಅರ್ಥಪೂರ್ಣ ಸಂದೇಶಪೂರ್ಣ ಸಾಲುಗಳಾಗಿವೆ.ಬರಹಗಾರನ ವಿವೇಚನೆಗಳು, ಚಿಂತನ, ಮಂಥನಗಳ ಓರಣದೊಂದಿಗೆ ನುಡಿಮುತ್ತುಗಳಾಗಿ ಪೋಣಿಸುವ ಅರ್ಥಪೂರ್ಣ ಸಾಲುಗಳ ಹೂರಣಗಳಾಗಿವೆ.ನಿಜಕ್ಕೂ ಇವು ಕವಿಯ ಭಾವನಾತ್ಮಕತೆ ಹಾಗು ಸೃಜನಾತ್ಮಕತೆಗೆ ಹಿಡಿದ ಕನ್ನಡಿಯಾಗಿದ್ದು ಸುಂದರ ಹಾಗು ಅದ್ಭುತ ಶಬ್ಧ ಭಂಡಾರದ ನಿಧಿಯಾಗಿದೆ..

“ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು” ಎಂಬ ನಾಣ್ಣುಡಿಯಂತೆ ಕೇವಲ ಚೌಪದಿಯಲ್ಲಿರುವ ಈ ಮುಕ್ತಕಮಾಲೆಯೆಂಬ ನುಡಿಮುತ್ತುಗಳ ಹಾರ ನಿಜಕ್ಕೂ ಸೊಜಿಗವೆ ಸರಿ.ಪ್ರತಿಕ್ಷೇತ್ರಗಳನ್ನು ಒಳಗೊಂಡಂತೆ ರಚಿತವಾಗಿರುವ ಈ ನುಡಿಮುತ್ತುಗಳ ಹಾರ ಅಗಾಧ, ಅಮೂಲ್ಯ, ಅಮೋಘ ,ಅದ್ಭುತ ,ಅರ್ಥಗಳನ್ನೊಳಗೊಂಡ ನಾಲ್ಕು ಸಾಲಿನ ಪದ್ಯವಾಗಿದ್ದು, ಎಲ್ಲರೂ ಅತಿ ಬೇಗ ರಚನೆ ಮಾಡಿ ಇಷ್ಟಪಡುವ ಚೌಪದಿ ಇದಾಗಿದೆ..

 ಕವಯತ್ರಿ ಮಧುರ ಮೂರ್ತಿಯವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆಮಾಡುತ್ತಿರುವುದು ತುಂಬಾ ಖುಷಿಯ ವಿಷಯವಾಗಿದೆ.ಅವರ ‘ಸುಮಧುರ ಮುಕ್ತಕ’ ಸಂಕಲನವನ್ನು ಅದ್ಭುತವಾಗಿ ಛಂದೋಬದ್ಧವಾಗಿ ರಚನೆ ಮಾಡಿದ್ದು ,ಒಮ್ಮೆ ಅವರ ಈ ಮುಕ್ತಕಗಳನ್ನು ಅವಲೋಕಿಸಿದಾಗ ನನಗೆ ಕಾಣಸಿಕ್ಕ ವಿಷಯವಸ್ತುಗಳ ಸಂಪತ್ತು…

             ಕವಯತ್ರಿಯ ಒಟ್ಟು ೭೭೫ ಮುಕ್ತಕಗಳಲ್ಲಿ ಹಲವಾರು ಅಂಶಗಳು  ಘಟನೆಗಳು ಹಾಗು ಪ್ರಸ್ತುತ ವಿಚಾರಧಾರೆಗಳನ್ನು ತಮ್ಮ ಕೈಚಳಕವನ್ನು ತೋರಿರುವುದು ಶ್ಲಾಘನೀಯವಾಗಿದೆ. ಕವಯತ್ರಿಯು ವಿಚಾರಪರತೆಯ ಅಡಿಯಲ್ಲಿ ಕಲಿಕೆಯೆಂಬ ಜ್ಞಾನದೀವಿಗೆಯೊಂದಿಗೆ ಆರಂಭಿಸಿ,ನಂಬಿಕೆ ವಿಶ್ವಾಸಗಳ ಜೋಕಾಲಿಯಾಡಿಸುತ  ಆದರ್ಶಪರತೆಯೊಳಗೆ ಸತ್ಯದ ಪರಾಕಾಷ್ಟೆ ,

ಮಿಥ್ಯದ ಆರ್ಭಟವನ್ನು ಬಿಂಬಿಸಿದ್ದಾರೆ.

ಪ್ರಾಮಾಣಿಕತೆಯ ಏಣಿ ಹತ್ತಿ ಕಾಳಜಿ,

ಮೌಲ್ಯಗಳು,ಸಹನೆ ,ಆದರ್ಶ ,ಸತ್ಯ, ನಿಷ್ಟೆ, ಭಕ್ತಿಭಾವದೊಂದಿಗೆ ತಮ್ಮ ಬರಹದ ಛಾಪನ್ನು ಮೂಡಿಸಿದ್ದಾರೆ. ಮಾನವೀಯತೆಯ

ಸೂರಿನಡಿ ಸ್ನೇಹ ,ಪ್ರೀತಿ ,ವಿಶ್ವಾಸ,ಬಂಧ ,

ಸಂಬಂಧಗಳ ಬೆಸೆಯುವಿಕೆಯನ್ನು ಕೂಲಂಕಷವಾಗಿ ವಿವರಿಸುವ ಪರಿ ಅದ್ಭುತ ಅನನ್ಯ. ಹಾಗೆಯೆ ಹಗೆತನದ ಅಟ್ಟಹಾಸ . ಬದುಕು ಬವಣೆಯೊಡನೆ ಸರಿತಪ್ಪುಗಳ ತುಲನೆ , ಮನದೊಳಗಿನ ತಳಮಳ, ಸಂಕಟ, ಸಂಶಯಗಳ ಹೊಗೆಯನ್ನು ಎಳೆಎಳೆಯಾಗಿ ಬಿಡಿಸಿ ಅದರ ಗುಣಾವಗುಣಗಳ ಸುಂದರವಾಗಿ ಬಿಂಬಿಸಿದ್ದಾರೆ.

ಬರಹ ಬದುಕು ಇದರೊಳಗಿನ ನೂರಾರು ಮುಖವಾಡಗಳ ಮೇಲಾಟ. ಮನದ ಹುಚ್ಚುತನಗಳ ಬಗ್ಗೆ ಬರೆದ ಸಂದೇಶಗಳ ಸಾಲು ಅನುಭವ ಅನುಭಾವಗಳೊಂದಿಗಿನ ಮಿಳಿತವಾಗಿವೆ.ಹೆಣ್ಣು,ಹೊನ್ನು, ಬಗೆಗಿನ ಗೌರವ ,ಸಬಲತೆಯ ಪ್ರದರ್ಶನ ,ಹೆಣ್ಣೆಂದು ಹೀಯಾಳಿಸುವವರಿಗೆ ತಿರುಗೇಟು ನೀಡುವ ಚಾಕ್ಯತೆ ಹಾಗು ವರ್ಣಿಸುವ ವೈಖರಿ, ವಿಚಾರಪರತೆ ಅಮೋಘವಾಗಿದೆ.

ಪ್ರಕೃತಿಯೊಳಗಿನ ಸಿರಿ, ಮರಗಿಡಗಳ ವೈಖರಿ ,ಹಾವು ,ಹೂವಿನ ,ವ್ಯತ್ಯಾಸ,

ಸಂಬಂಧ ,ಸತ್ಕೃತಿಗಳ ಪರಿಚಯ, ವಿಷಾದ, ವೈಷಮ್ಯ, ಓಲೈಕೆ ,ವ್ಯರ್ಥ .ಸಾಮಾಜಿಕ ಉಳುಕು ,ತೊಡಕುಗಳು.ಜೀವನದ ಸೋಲು ,ಗೆಲುವು. ಕಪಟತನದಲ್ಲಿ ವಂಚನೆಗಳಿಗೆ ದಾರಿ .ತಾವು ಮಾಡೊ ಘನಕಾರ್ಯದ ಪರಿ.

ಮನದ ಗೊಂದಲ ,ನಿರೀಕ್ಷೆ ,ಪರೀಕ್ಷೆಗಳ ಪರಿಷೆ. ಭಯವೆಂಬ ಮಾಯಾ ಜಾಲದೊಳಗೆ ಪಾಪಕೃತ್ಯ, ಚಿಂತೆ, ಬಯಕೆ ,ನಡೆನುಡಿಗಳು.ರೈತನಪರ ಕಾಳಜಿ ಮಮತೆಯುಳ್ಳ ಸಾಲುಗಳ ಮೇಳ.ಹಳ್ಳಿ ಹಾಗು ನಗರಗಳ ಬಗೆಗಿನ ಆಯ್ಕೆಯಲ್ಲಿ ವಿಪರ್ಯಾಸ, ಮಾನವೀಯತೆಯ ಕಣಜದೊಳಗಿನ ಶ್ರದ್ಧೆ ,ಸತ್ಯ, ನಿಷ್ಟೆ, ವಿಶ್ವಾಸ ,ಹಿರಿತನ ,ಗೌರವ ,ಘನತೆ, ಸಮಯಗಳ ರಹದಾರಿಗಳು.ತಂದೆ ತಾಯಿ ಗೃಹಿಣಿಯರ ನೋವು ,ನಲಿವು ,ಸಮಸ್ಯೆ, ಸವಾಲು. ಶರಧಿಯೊಳಗಿನ ವಿಸ್ಮಯ ,ನಾವಿನ್ಯತೆ, ಬೆರಗು, ಬಿನ್ನಾಣ ,ಚೈತನ್ಯ ,ಭರವಸೆಗಳ ಬಗ್ಗೆ ಹರಿದಾಡಿರುವ ಮುಕ್ತಕಗಳ ಸಾಲು ಅದ್ಭುತವಾಗಿವೆ.ಗುರು ,ಗುರುವಿನ ಮಾರ್ಗದರ್ಶನದ ಫಲ, ಪ್ರತಿಫಲ. ಬಡತನ ವಿಧಿಯಾಟಗಳು ,ಸಾಮಾಜಿಕ ಕಾರ್ಯಗಳು, ರಕ್ತದಾನ.ನೆನಪಿನಂಗಳದ ಮಧುರಭಾವ ಸೂಚನೆಗಳ ಹೊರಡಿಸೊ ಸೂಚನ ಫಲಕ.ಅನ್ಯಾಯ ,ಅಕ್ರಮ ,ಕಲಬೆರಕೆ ಭ್ರಷ್ಟತೆಗಳನೊಳಗೊಂಡ ಜಾಲ.ಹಣದ ಮಹತ್ವ ಇದ್ದರೆ, ಇಲ್ಲದಿದ್ದರೆ.ಸರಳತೆ, ಹೊದಿಕೆ, ಅರಿವು ,ಮಳೆಬಿಲ್ಲು ,ಭಾವನೆ ,ನಿದಿರೆ, ಸುಡುಬಿಸಿಲು ,ಸಂಸ್ಕೃತಿ, ಸಂಸ್ಕಾರ ,ಸಂಕಲ್ಪ ,

ಭೂಮಿ, ರಂಗೋಲಿ ,ಒಡವೆ ಅಪಘಾತ, ಶುಭಾಶಯ ಕೋರುವ ಸಾಲುಗಳು.

ಇವುಗಳ ಬಗ್ಗೆ ಇಲ್ಲಿ ಕವಿಗಳು ಸತ್ವಪೂರ್ಣ ವಿವರಣೆಯ ಮೂಲಕ ಬಹಳ ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿರುವರು ಹಾಗು ಇಲ್ಲಿಯ ಮುಕ್ತಕಗಳೆಲ್ಲವೂ ಪದಲಾಲಿತ್ಯದಿಂದ ಕಂಗೊಳಿಸಿ ಮನಸಿಗೆ ಮುದು ನೀಡುವಂತಿದ್ದು ,ಕವಯತ್ರಿಯ ಭಾಷಾ ಫ್ರೌಢಿಮೆಯನ್ನು ಪ್ರತಿಬಿಂಬಿಸಿದೆ.

ಪ್ರತಿ ಮುಕ್ತಕವು ಗೇಯತೆ ,ಲಯ, ಭಾವ, ಶೃತಿ,  ಇತ್ಯಾದಿ ಗಮಕಕಲೆಯೊಂದಿಗೆ

ಹಾಡಬಹುದಾಗಿದೆ .

       ಪ್ರಸ್ತುತ ಸಂದರ್ಭಗಳಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನಾಧರಿಸಿ ಹಾಗು ವಿಷಯಧಾರಿತ ಅಂಶಗಳ ಮೇಲೆ ಕವಯತ್ರಿ

ಇಲ್ಲಿ ಬೆಳಕು ಚೆಲ್ಲಿದ್ದಾರೆ.ಏಕೆ.? ಹೇಗೆ .?ಯಾವುದು.? ಯಾವಾಗ.? ಎಲ್ಲಿ.? ಏನು.? ಯಾರಿಂದ.?ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಾಗಿರುವುದು ಇವರ ಬರಹಗಳ ಚಮತ್ಕಾರವಾಗಿದೆ.ಹಾಗೆಯೆ ಈ ವಿಷಯವಸ್ತು ಹಾಗು ಪರಿಣಾಮಗಳ ಬಗ್ಗೆ ಮುಕ್ತಕದಲ್ಲಿ ಪ್ರಸ್ತುತ ಪಡಿಸಿರುವ ಕವಯತ್ರಿಯ ಆಶಯ ಹಾಗು ಅವರ ಭಾಷಾ ಫ್ರೌಢಿಮೆ, ಕಲ್ಪನಾಶಕ್ತಿ, ಕಾವ್ಯ ಹೆಣೆಯುವ ಶೈಲಿ ನಿಜಕ್ಕೂ ಅದ್ಭುತವಾಗಿದೆ.

ಮಧುರ ಮೂರ್ತಿಯವರ ಹೆಚ್ಚು ಕಡಿಮೆ ಎಲ್ಲಾ ಮುಕ್ತಕಗಳು ಕೂಡ ಓದುಗರಿಗೆ ಉತ್ತಮ ಸಂದೇಶ ಹಾಗು ಜನರಿಗೆ ಎಚ್ಚರಿಕೆಯ ಗಂಟೆಯಂತಿವೆ.ಪ್ರತಿಯೊಂದು ಬರಹಗಳು ಸಹ ಅತ್ಯಂತ ಸಾರಯುಕ್ತ ಹಾಗು ಅರ್ಥಪೂರ್ಣ ಪದಲಾಲಿತ್ಯಗಳಿಂದ ಶೋಭಿಸಿವೆ.

ಕವಯತ್ರಿಯ ಕೆಲವು ಮುಕ್ತಕಗಳೊಂದಿಗೆ

ಮಾಡದಯೆ ಕೃತಿಚೌರ್ಯ ನಿನ್ನತನವುಳಿಸುತ

ತೀಡುತಿರು ನಿನ್ನೊಳಿಹ ಕೊಳೆತಿರುವ ಮನಸು

ಜಾಡುಗಳ ಹಿಡಿದಿರಲು ಕಳ್ಳತನವನುಸರಿಸೆ

ನೋಡುವಗೆ ತಿಳಿಯುವುದು ಮಧುರಮನವೆ..

              ಇದೊಂದು ಮುಕ್ತಕ ನೋಡಿ ಅದೆಷ್ಟು ಮಾರ್ಮಿಕವಾಗಿ ಬಿಂಬಿತವಾಗಿದೆ ಹಾಗೆಯೆ ಕೃತಿಚೌರ್ಯ ಮಾಡುವವರಿಗೆ ನಯವಾದ ಛಾಟಿಯೇಟು ಅಬ್ಬಬ್ಬಾ.! ನಿಜ ಒಂದೊಂದು ಸಾಲುಗಳು ಸಹ ಅರ್ಥಪೂರ್ಣವಾಗಿವೆ.

ಯಾವುದೆ ಬರಹಗಾರನಾದವನು ಸ್ವತಃ ಬರೆಯಬೇಕು.ಹಾಗು ತನ್ನ ವಿಷಯವಸ್ತುಗಳಿಗೆ ತಮ್ಮದೆ ಭಾವವನ್ನು ತುಂಬಿ ಬರೆಯಬೇಕು ಅದನ್ನ ಬಿಟ್ಟು ಬೇರೆಯವರ ಬರಹಗಳನ್ನು ಬರೆದು ನನ್ನದು ಎಂದು ಹೆಸರು ಬದಲಿಸಿದರೆ ಅದು ಎಷ್ಟರ ಮಟ್ಟಿಗೆ ಸರಿಯಾಗುವುದು.

ಆಂತರ್ಯದ ಕೊಳಕುತನವನ್ನು ಕಿತ್ತೊಗೆದು ಶುದ್ಧ ಮನಸ್ಸೊಂದಿಗೆ ಹಾಗೂ ಸ್ವಂತಿಕೆಯ ಬರಹಗಳೊಂದಿಗೆ ಮುನ್ನುಗ್ಗಬೇಕು ಎನ್ನುವ ಇವರ ನುಡಿಮುತ್ತಿನ ಹಾರ ಎಲ್ಲಾ ಕೃತಿಚೌರ್ಯರಿಗೂ ಪಾಠಕಲಿಸಿದಂತಿದೆ..

ಇವರ ಮತ್ತೊಂದು ಮುಕ್ತಕ ಅದೆಷ್ಟು ಸತ್ಯವಿದೆ ಇದರ ಒಳಹೊಕ್ಕಾಗ

ಹಳ್ಳಿಯಲಿ ಸೌಲಭ್ಯ ಕಡಿಮೆಯಿಹ ಕಾರಣಕೆ

ಹಳ್ಳಿಯನು ತೊರೆಯುವರು ನಗರದಲಿ ನೆಲೆಸಿ

ಹಳ್ಳಿಯಲಿ ಬೆಳೆದಿರುವ ತರಕಾರಿ ಹಣ್ಣುಗಳ

ಕೊಳ್ಳಲಿಕೆ ಹೆಣಗುವರು ಮಧುರಮನವೆ”

            ನೋಡಿ ಗ್ರಾಮೀಣ ಸೊಬಗು ಸೊಗಡನ್ನು ಬಿಟ್ಟು ಇತ್ತೀಚೆಗೆ ಎಲ್ಲರೂ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.ನಗರಗಳಲ್ಲಿ ಒಪ್ಪತ್ತಿನ ಊಟಕ್ಕೂ ಕಷ್ಟ. ವಸತಿಗಳಿಗೆ ಸಹ ದುಪ್ಪಟ್ಟು ಬಾಡಿಗೆಗಳು ಆದರು ಕೂಲಿ ಮಾಡಿಯಾದರು ಸರಿ ನಗರಗಳೆ ಬೇಕೆಂದು ಹಳ್ಳಿಯನ್ನು ಬಿಡುತ್ತಿರುವವರ ಬಗ್ಗೆ ಅದೆಷ್ಟು ಚಂದವಾಗಿ ಹೇಳಿದ್ದಾರೆ.

ತಾವೆ ಹಳ್ಳಿಯ ಜಮೀನಿನಲ್ಲಿ ಬೆಳೆದು ತಿನ್ನಬೇಕಾದ ಹಣ್ಣು ಹಂಪಲುಗಳನ್ನು ಕೊಳ್ಳಲಿಕ್ಕೂ ಆಗದೆ ಪ್ರತಿದಿನ ಎಣಗುತಿರುವರು.

ಕಾರಣವಿಷ್ಟೆ ಅವರಿಗೆ ಹಣ ಎಲ್ಲಿಂದ ಬರಬೇಕು ಹೇಳಿ.ಕೂಲಿ ಮಾಡಿದರೆ ಉಂಟು ಇಲ್ಲದಿದ್ದರೆ ತುತ್ತು ಕೂಳಿಗೂ ಹಪಹಪಿಸುವ ಸ್ಥಿತಿಯನ್ನು ತುಂಬ ಸುಂದರವಾಗಿ ವಿವರಿಸುವ ಪರಿ ಚನ್ನಾಗಿದೆ.

ಹಾಗೆಯೇ…

ಮರೆಯಾದ ಬಾಲ್ಯದಾ ಸಿಹಿಯಾದ ಘಟನೆಗಳು

ತೆರೆಯುವವು ನವಿರಾದ ಹೊಸತೊಂದು ಭಾವ

ಅರಿಯುತಿರು ನೆನಪುಗಳು ಆನಂದ ನೆನಪುಗಳು

ಮರೆಯದಿರು ಹಳೆದಿನವ ಮಧುರಮನವ”

ಮರೆಯಲಾಗದ ಬಾಲ್ಯದ ನವಿರಾದ ನೆನಪುಗಳ ಪಲುಕು ತುಂಬಾ ಚನ್ನಾಗಿದೆ.

ಪ್ರತಿಯೊಬ್ಬರ ಜೀವನದಲ್ಲೂ ತಾವು ಕಳೆದ ಬಾಲ್ಯದ ನೆನಪುಗಳ ಮಧುರತೀತ ಭಾವದಲೆಗಳು ಮಾತ್ರ ನಮ್ಮೊಳಗೆ ಹಚ್ಚ ಹಸಿರಾಗಿ ಉಳಿದುಬಿಟ್ಟಿರುವ ಆ ದಿನಗಳ ಸೊಬಗು ಸೊಗಸು. ಅದ್ರಲ್ಲೂ ಕೆಲವೊಂದು ಸಿಹಿ ನೆನಪುಗಳು ಆದ್ರೆ ಇನ್ನು ಕೆಲವು ಕಹಿ ಆಗಿರುತ್ತೆ. ಬಾಲ್ಯದ ಆ ದಿನಗಳು ಅದೆಷ್ಟು ಸುಂದರ ಹಾಗೂ ಸಂಭ್ರಮವೆ ಮನೆಮಾಡಿರುವಂತದ್ದು ಇದು ಸವಿನೆನಪುನಪುಗಳ ಸುಂದರವಾದ ತೋಟ. ನೆನೆದಷ್ಟು ಸವೆಯದ ಮಧುರವಾದ ಈ ಪಯಣವನ್ನು ಮಧುರ ಮೂರ್ತಿಯವರು ಅಮೋಘವಾಗಿ ವಿವರಿಸಿದ್ದಾರೆ. ನಲಿವು,ಒಲವು ಚಿಕ್ಕ ಚಿಕ್ಕ ಕಾರಣಕ್ಕೂ ಹುಸಿಮುನಿಸು, ಜಗಳ , ಸಂಭ್ರಮಗಳು, ಗೆಲುವು ಹೀಗೆ ಇದೊಂದು ಮುಗ್ದತೆಯ ಚೆಲುವು ಬಾಳ ಪಯಣದಲ್ಲಿ ಬರುವ ಸುಂದರವಾದ ಮಜಲಿದು ಇಂತಹ ಒಂದು ಚಂದದ ಬಾಲ್ಯದ ಬಗ್ಗೆ ತುಂಬಾ ಚನ್ನಾಗಿ ವರ್ಣಿಸಿದ್ದಾರೆ..

ಮತ್ತೊಂದು….

ಮಳೆಬಿಲ್ಲು ಸಿಂಗಾರ ಆಗಸದಿ ತುಂಬಿರಲು

ಇಳೆಯಲ್ಲಿ ಸಂಭ್ರಮವು ಸಂತೋಷದಿಂದ

ಸುಳಿಯುತ್ತ ಹಲವು ಬಗ್ಗೆ ಬಯಕೆಗಳು ಆಸೆಯಲಿ

ಬಳಿಯಲ್ಲಿ ಸೇರುವವು ಮಧುರಮನವೆ..

ಪ್ರಕೃತಿಯ ಸುಂದರ ದೃಶ್ಯ ಅದು ಅಂಬರದೊಳಗೆ ಚಿತ್ತಾರ ಮೂಡಿಸಿರುವ ಮಳೆಬಿಲ್ಲು

ಪ್ರಕೃತಿಯಲ್ಲಿ ಮಳೆಬಿಲ್ಲಿನ ಆಗಮನ ಇಳೆಯಲ್ಲಿ ಅದರಿಂದಾಗಿ ಸಡಗರ ಸಂತಸಗಳ ಸುರಿಮಳೆ..

ಆಗಸದಲ್ಲಿ ಮಳೆಯ ಹರಿವಿನಿಂದಾಗಿನ ಸಮಯದಲ್ಲಿ ಕಾಣಿಸಿಕೊಳ್ಳುವ ಈ ಸುಸಂದರ್ಭದ ದೃಶ್ಯಾವಳಿಯ ವಿವರವನ್ನು ನೀಡಿರುವ ರೀತಿ ಚನ್ನಾಗಿದೆ.ಈ  ಭವ್ಯವಾದ ದೃಶ್ಯದ ಬಗ್ಗೆ ತುಂಬ ಸೊಗಸಾಗಿ ಕವಯತ್ರಿ ಮಧುರಮೂರ್ತಿಯವರು ವರ್ಣಿಸಿದ್ದಾರೆ.

ಹೀಗೆ ಕವಯತ್ರಿಯವರು ಸುಮಾರು ೭೭೫ಕ್ಕೂ ಮುಕ್ತಕಗಳನ್ನು ರಚನೆ ಮಾಡಿ ಓದುಗರಿಗೆ ಶಬ್ಧಸಂಪತ್ತಿನ ಮೇಳನ್ನೆ ಸೃಷ್ಟಿಸಿದ್ದಾರೆ.

“ಮಧುರವೆ ಮನವೆ” ಕಾವ್ಯನಾಮದಿಂದ ಕೂಡಿರುವ ಇವರ ಎಲ್ಲಾ ಮುಕ್ತಕಗಳು ಒಂದಕ್ಕಿಂತ ಒಂದು ವಿಭಿನ್ನ, ವಿಶಿಷ್ಟ ,ವಿಶೇಷವಾಗಿ ಬಿಂಬಿತವಾಗಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ.ಖಂಡಿತವಾಗಿಯೂ ಎಲ್ಲರೂ ಓದಬಹುದಾಗಿರುವ ಮುಕ್ತಕಮಾಲೆ ಇದಾಗಿದೆ. ಹಾಗೂ ಅರ್ಥಪೂರ್ಣ ಈ ನುಡಿಮುತ್ತುಗಳ ಹಾರವನ್ನು ಹೊಂದಿರುವ ಈ ಒಂದು ಸಂಕಲನ ಕುತೂಹಲವನ್ನು ಕಾಯ್ದುಕೊಂಡಿದೆ.ಹಾಗಾಗಿ ಎಲ್ಲರೂ ಪ್ರೋತ್ಸಾಹಿಸಿ ಹಾರೈಸಿ ಎಂಬ ಆಶಯದೊಂದಿಗೆ…..

ಮೇಡಮ್ ನಿಮ್ಮ ಹಲವಾರು ಸಂಕಲನಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ರಾರಾಜಿಸಲೆಂದು ಹೃದಯಪೂರ್ವಕವಾಗಿ ಹಾರೈಸುತ ನಿಮಗೆ ಶುಭವಾಗಲಿ ಸದಾ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿರಿ ಎಂಬ ಆಂತರ್ಯದ ಅಭಿಲಾಷೆಯೊಂದಿಗೆ…


ಅಭಿಜ್ಞಾ .ಪಿ.ಎಮ್.ಗೌಡ

One thought on “ಸುಮಧುರ ಮುಕ್ತಕಗಳ ತೋಟದೆಲ್ಲೆಡೆ ವಿಹಾರ

  1. ಪೂರ್ತಿ ಪುಸ್ತಕದ ಸಾರಾಂಶವೇ ನೀಡಿದ್ದೀರಿ, ವಿಮರ್ಶಿಸಿದ ರೀತಿ ಅಮೋಘ. ಧನ್ಯವಾದಗಳು ಅಭಿಜ್ಞಾ

Leave a Reply

Back To Top