ಹೀಗೊಂದು ಸಾರ್ಥಕ ಭಾನುವಾರ

ಅನುಭವ

ಸುಜಾತಾ ರವೀಶ್

ಹೀಗೊಂದು ಸಾರ್ಥಕ ಭಾನುವಾರ

ಇಂದು ನಿಜಕ್ಕೂ ಮರೆಯಲಾಗದ ದಿನಗಳಲ್ಲೊಂದು. ಮೈಸೂರಿನಲ್ಲಿ ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ಸಿ ಎನ್ ಮುಕ್ತ ಅವರು ಆಯೋಜಿಸಿದ್ದ ಬೇಂದ್ರೆ ಬದುಕು ಬರಹದ ವಿಚಾರ ಸಂಕಿರಣದಲ್ಲಿ “ಬೇಂದ್ರೆ ಗೀತೆಗಳಲ್ಲಿ ಶ್ರಾವಣ” ವಿಚಾರವಾಗಿ ನಾನು ಮಾತನಾಡಿದ ದಿನ. ಮುಕ್ತಾ ಮೇಡಂ ಅವರು ಆಯೋಜಿಸಿದ ಎರಡನೇ ಕಾರ್ಯಕ್ರಮ ನಾನು ಭಾಗವಹಿಸುತ್ತಿರುವುದು. ಅಚ್ಚುಕಟ್ಟುತನಕ್ಕೆ ಇನ್ನೊಂದು ಹೆಸರು ಅವರ ಕಾರ್ಯಕ್ರಮಗಳು. ಮಂದಿ ಸೇರಿಸಿ ಗೌಜೆಬ್ಬಿಸದೆ ಆಸಕ್ತ ಸಹೃದಯರನ್ನಷ್ಟೇ ಒಂದುಗೂಡಿಸುತ್ತಾರೆ.ಶಾಂತ ಸಂಯಮಿ ಶಿಸ್ತಿನ ಪ್ರಬುದ್ಧ ಶ್ರೋತೃಗಳ ಮುಂದೆ ವಿಚಾರ ಮಂಡಿಸುವುದೇ ಒಂದು ಸೌಭಾಗ್ಯ

ಸರಿಯಾಗಿ ಘೋಷಿಸಿದಂತೆ ೧೦_೩೦ ಕ್ಕೆ ಕಾರ್ಯಕ್ರಮ ಆರಂಭ. ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತು ಚಂದವಾಗಿ ನಿರ್ವಹಿಸಿದವರು ಶ್ರೀಮತಿ ಮೊದಲಿಗೆ ರೂಪಾ ಅವರಿಂದ ಬೇಂದ್ರೆಯವರ “ತುಂ ತುಂ ತುಂಬಿ ಬಂದಿತ್ತಾ” ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ. ಶುಭಾ ಅವರು ಮೃದು ಮಧುರ ನುಡಿಗಳಲ್ಲಿ ಎಲ್ಲರಿಗೂ ಸ್ವಾಗತ ಕೋರಿದರು.ಶ್ರೀಮತಿ ಮಂಜುಳಾ ಮೇಡಂ ಅವರ ಪ್ರಾಸ್ತಾವಿಕ ನುಡಿಗಳು ಸಭೆಯ ಮುಂದುವರಿಕೆಗೆ ಚಾಲನೆ ನೀಡಿದವು. ಶುಭ ಅವರು ನನ್ನ ಮತ್ತು ನಾಗರತ್ನ ಅವರ ಪರಿಚಯ ಮಾಡಿಕೊಟ್ಟರೆ, ನಾಗರತ್ನ ಅವರು ವೆಂಕಟಾಚಲ ಹಾಗೂ ಇಂದಿನ ಮುಖ್ಯ ಅತಿಥಿ ಕಿರುತೆರೆಯ ಪ್ರಖ್ಯಾತ ನಟಿ ಮತ್ತು ಲೇಖಕಿ ಶ್ರೀಮತಿ ದೀಪಾ ರವಿಶಂಕರ್ ಅವರುಗಳ ಪರಿಚಯ ಮಾಡಿಕೊಟ್ಟರು. ನಂತರ ಶ್ರೀಮತಿ ಲೀಲಾವತಿ ಅವರು ಬೇಂದ್ರೆಯವರ “ನೀ ಹೀಂಗ ನೋಡಬೇಡ ನನ್ನಾ” ಗೀತೆಯನ್ನು ಭಾವಪೂರ್ಣವಾಗಿ ಹಾಡಿದರು.

ಮೊದಲೇ ಹೇಳಿದಂತೆ ನಾನು “ಬೇಂದ್ರೆ ಗೀತೆಗಳಲ್ಲಿ ಶ್ರಾವಣ” , ವಿಷಯದ ಬಗ್ಗೆ ಮಾತನಾಡಿದೆ. ಶ್ರೀಮತಿ ನಾಗರತ್ನ ಅವರು “ಬೇಂದ್ರೆ ಕಾವ್ಯದಲ್ಲಿ ಸಾಮಾಜಿಕ ಕಳಕಳಿ” ಈ ವಿಷಯದ ಬಗ್ಗೆ ಹಾಗೂ ವೆಂಕಟಾಚಲ ಅವರು ಬೇಂದ್ರೆಯವರ “ಸಖೀಗೀತ” ಕವನ ಸಂಕಲನದ ಬಗ್ಗೆ ಮಾತನಾಡಿದರು.
ಸಭಿಕರಲ್ಲಿ ಕೆಲವರು ಬೇಂದ್ರೆಯವರ ಬಗ್ಗೆ ಕೆಲ ಸಂಗತಿಗಳನ್ನು ಹಂಚಿಕೊಂಡರು. ಮುಕ್ತಾ ಮೇಡಂ ಅವರು ಬೇಂದ್ರೆಯವರ ನಿಕಟವರ್ತಿ ಶ್ರೀ ರಾಜಪುರೋಹಿತ ಅವರು ತಮ್ಮೊಡನೆ ಹಂಚಿಕೊಂಡ ಬೇಂದ್ರೆಯವರ ಜೊತೆಗಿನ ನೆನಪಿನ ಬುತ್ತಿಗಂಟನ್ನು ನಮ್ಮ ಮುಂದೆ ಬಿಚ್ಚಿಟ್ಟರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ದೀಪಾ ಅವರು ಕಾವ್ಯಾಸ್ವಾದನೆ ತಮಗೆ ಕಷ್ಟ ಆದರೆ ಇಂದಿನ ಕಾರ್ಯಕ್ರಮ ಅದನ್ನು ಸುಲಭ ಮಾಡಿಸಿತು ಎಂದರು. ತಮ್ಮದು ಸೃಜನೇತರ ಸಾಹಿತ್ಯವೆಂದು ವಿನಯದಿಂದಲೇ ಹೇಳಿಕೊಂಡರೂ ಅವರು ಪ್ರಾಸ್ತಾವಿಕ ನುಡಿಗಳು ಮತ್ತು ಪ್ರಬಂಧ ಮಂಡನೆಯ ವಿಚಾರಗಳನ್ನು ವಿಶ್ಲೇಷಿಸಿ ಅನ್ನಿಸಿಕೆಗಳನ್ನು ಹೇಳಿದ್ದು ಅವರ ಪ್ರಬುದ್ದತೆ ಮತ್ತು ವಿಸ್ತಾರ ಓದಿನ ಸಾಕ್ಷಿಯಾಗಿತ್ತು. ಇನ್ನೂ ಕೇಳಬೇಕು ಅನ್ನಿಸುವಂತಿದ್ದ ಚಿಕ್ಕ ಚೊಕ್ಕ ಭಾಷಣ ಅವರದು.

ಕಾರ್ಯಕ್ರಮದ ಮಧ್ಯೆ ವೆಂಕಟಾಚಲ ಅವರು ಸುಮಧುರವಾಗಿ “ನಾನು ಬಡವಿ ಆತ ಬಡವ” ಹಾಡನ್ನು ಹಾಡಿ ರಂಜಿಸಿದರು. ರೂಪಾ ಅವರು “ಕುರುಡು ಕಾಂಚಾಣ” ಗೀತೆ ತಾವು ಮಾತ್ರ ಹಾಡದೆ ಪ್ರೇಕ್ಷಕರನ್ನೂ ಸಹ ಗಾಯಕರಾಗುವಂತೆ ಮಾಡಿ ಸಭೆಯಲ್ಲಿ ಮಿಂಚಿನ ಸಂಚಲನ ತಂದುಬಿಟ್ಟರು.

ಮುಕ್ತಾ ಮೇಡಂ ಅವರು ವೇದಿಕೆಯಲ್ಲಿದ್ದ ಎಲ್ಲರಿಗೂ ಗೌರವ ಸಮರ್ಪಣೆ ಮಾಡಿಸಿದ ನಂತರ ವಂದನಾರ್ಪಣೆ ಮಾಡಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಕೆಲವರು ತಮ್ಮ ಹೆಸರು ಹೇಳಬಾರದೆಂದು ತಮಗೆ ಹೇಳಿದ್ದಾರೆಂದು ಕೇಳಿದಾಗ ಆಶ್ಚರ್ಯವಾಯಿತು. ಕಿಂಚಿತ್ ಮಾಡಿದರೂ ಡಂಗುರ ಸಾರಿಕೊಳ್ಳುವ ಸಮಾಜದಲ್ಲಿ ಇಂತಹವರು ಇದ್ದಾರೆಯೇ ಎನಿಸಿತು.

ನಂತರ ಹೆಸರಿಗೆ ಲಘು ಉಪಹಾರವೆಂದರೂ ಪುಳಿಯೋಗರೆ,ಮೊಸರುಬಜ್ಜಿ,ಹಯಗ್ರೀವ, ಚಂಪಾಕಲಿ, ಬೊಂಬಾಯಿ ಬೋಂಡ, ಪಕೋಡ ಮೊಸರನ್ನಗಳ ಪುಷ್ಕಳ ಭೋಜನ. ಬೀಡಾ ಬಾಳೆಹಣ್ಣುಗಳೊಂದಿಗೆ ಮುಕ್ತಾಯ.

ರಜೆಯ ರವಿದಿನ ಸುಸಂಪನ್ನವಾದ ಸಾರ್ಥಕತೆಯ ಭಾವ ನನ್ನದಾಯಿತು. ಮುಕ್ತಾ ಮೇಡಂ ಅವರ ಸ್ನೇಹವಲಯದಲ್ಲಿ ಒಂದಾಗುವ ಭಾಗ್ಯ ದೊರೆತದ್ದು ಸುಕೃತವೇ ಎಂದು ಭಾವಿಸುವೆ.


2 thoughts on “ಹೀಗೊಂದು ಸಾರ್ಥಕ ಭಾನುವಾರ

  1. ಅನಭವದ ಅಭಿವ್ಯಕ್ತಿ ಸೊಗಸಾಗಿದೆ ಸೋದರಿ.

Leave a Reply

Back To Top