ಪುಸ್ತಕ ಸಂಗಾತಿ
ಪ್ರಿಯಾ ಭಟ್ ರವರ ಕಥಾ ಸಂಕಲನ
ನಾನೊಂದು ಹುಚ್ಚುಹೊಳೆ,
ಕಥಾಸಂಕಲನ: ನಾನೊಂದು ಹುಚ್ಚು ಹೊಳೆ.
ಲೇಖಕಿ: ಶ್ರೀಮತಿ ಪ್ರಿಯಾ ಭಟ್, (ಉ.ಕ.)
ಪ್ರಕಾಶಕರು: ಸ್ವಸ್ತಿ ಪ್ರಕಾಶನ, ಕುಮಟಾ.
ಪ್ರಕಟಣೆಯ ವರ್ಷ: ಡಿಸೆಂಬರ್, ೨೦೧೮.
ಪರಿಚಯ:ಗಣಪತಿ ಹೆಗಡೆ
ಬೆಲೆ : ರೂ.೧೧೦.೦೦
ನಾನೊಂದು ಹುಚ್ಚುಹೊಳೆ-ಪುಸ್ತಕ ಪರಿಚಯ:
ಶ್ರೀಮತಿ ಪ್ರಿಯಾ ಭಟ್ ಅವರು ಗಂಗಾವಳಿ ನದಿಯ ದಡದ ಕಲ್ಲೇಶ್ವರದಲ್ಲಿ ತಮ್ಮ ಬಾಲ್ಯ ಜೀವನವನ್ನು ಮುಗಿಸಿದವರು ಅಘನಾಶಿನಿ ನದಿಯ ತಟದಲ್ಲಿರುವ ಕಲ್ಲಬ್ಬೆಯ (ನನ್ನ ಊರು) ಶ್ರೀ ಎಮ್.ಆಯ್.ಭಟ್ಟರನ್ನು ವರಿಸಿ ಗಂಗಾವಳಿ ಅಘನಾಶಿನಿ ನದಿಗಳ ಸೇತುವಾಗಿ ನದಿತಟದ ಬೆಟ್ಟ ಗುಡ್ಡಗಳ ನಡುವಿನ ತಮ್ಮ ಜೀವನದ ಅನುಭವಗಳನ್ನು ಈ ಕಥಾಗುಚ್ಚದಲ್ಲಿ ಬಿಚ್ಚಿಟ್ಟಿದ್ದಾರೆ.
ಪ್ರಿಯಾ ಭಟ್ಟರ ಈ ಕಥಾ ಸಂಕಲನದಲ್ಲಿ ಒಟ್ಟೂ ಹನ್ನೆರಡು ಕತೆಗಳಿವೆ.
(ನೀರು ತೋಟದ ಹಸಿರು ಮನೆ:
ನಾನೊಂದು ಹುಚ್ಚು ಹೊಳೆ.
ಸರ್ಕಸ್ಸಿನ ಹುಡುಗಿ.
ಚಾರುಲತೆ.
ಬೆಳಕನರಸಿ.
ಕನ್ನಡಿ.
ದೂರತೀರದಾಚೆಯೆಲ್ಲೋ.
ಗಮ್ಯ.
ಸಂಜೆಯಾಗುತ್ತಿದೆ ನೋಡ.
ಮಳೆಗಾಲದ ಬೆಳದಿಂಗಳು.
ವ್ಯಸ್ತ.
ನಶೆ.)
ಈ ಕಥಾ ಸಂಕಲನದಲ್ಲಿ ಹನ್ನೆರಡು ಕಥೆಗಳಿದ್ದರೂ, ಅವುಗಳಲ್ಲೊಂದಾದ ‘ನಾನೊಂದು ಹುಚ್ಚುಹೊಳೆ’ ಎನ್ನುವ ಕಥೆಯ ಶೀರ್ಷಿಕೆಯನ್ನೇ ಕಥಾಸಂಕಲನಕ್ಕೂ ಇಟ್ಟಿದ್ದು ಈ ಕಥೆಯ ಮಹತ್ವವನ್ನು ತಿಳಿಸುತ್ತದೆ.
‘ನಾನೊಂದು ಹುಚ್ಚುಹೊಳೆಯ ನಾಯಕ ‘ಕರ್ಣ’. ಇಪ್ಪತ್ತು ವರ್ಷ ಕಳೆದರೂ ಇವನೊಬ್ಬ ಮಾನಸಿಕವಾಗಿ ಬೆಳವಣಿಗೆಯನ್ನು ಕಾಣದೇ ಕೇವಲ ದೈಹಿಕ ಬೆಳವಣಿಗೆ ಹೊಂದಿದವ. ಕಥಾ ನಾಯಕಿ ‘ವಿಶಾಖಾ’ ಅನಾಥಳು. ಹೇಗೊ ಕುಮಟಾ ಪೇಟೆ ಸೇರಿ ಒಡತಿ ಅಶ್ವಿನಿಯ ಮನೆ ಸೇರಿ ಒಡತಿಯ ಗೆಳತಿಯರ ಪೈಕಿ ಕೆಲವರ ಮನೆಗೆಲಸದಲ್ಲಿ ನಿರತಳಾದವಳು. ಅವರಲ್ಲೊಬ್ಬನ ಮನೆ ಅನಂತಜ್ಜನದು. ಅವನ ಜೊತೆ ವಾಕಿಂಗ್ ಹೋಗುವದೂ ಕೂಡಿ ಅವನ ಶುಶ್ರೂಷೆ ವಿಶಾಖಾಳ ಕೆಲಸ. ಕರ್ಣ ಅನಂತಜ್ಜನ ಮೊಮ್ಮಗ. ಅವನ ಪುಷ್ಟ ದೇಹಕ್ಕೆ, ಬೆಳೆಯುತ್ತಿರುವ ಅನಾಥ ಹೆಣ್ಣು ಮಗಳು ವಿಶಾಖ ಆಕರ್ಷಣೆ ಹೊಂದುತ್ತಾಳೆ. ಕರ್ಣನೂ ಅವಳ ಸಾಮಿಪ್ಯವನ್ನು ಬಯಸುತ್ತಾನೆ. ಇದಕ್ಕೆ ಅಜ್ಜನ ಬೆಂಬಲವಿದೆ. ಬಹುಶಃ ಯಾರೂ ಮದುವೆಯಾಗಲು ಒಲ್ಲದ ಮೊಮ್ಮಗನಿಗೆ ಅನಾಥಳಾದ ವಿಶಾಖಾ, ಹೆಂಡತಿಯಾಗಲು ಒಪ್ಪಿದಲ್ಲಿ ತನ್ನ ವಂಶ ಬೆಳೆಯಬಹುದೆಂದೋ ಅಥವಾ ತನ್ನ ಸುಪ್ತವಾದ ಚಾಪಲ್ಯ ಫಲಕಾರಿಯಾದೀತು ಅಂತಲೊ ಅನಂತಜ್ಜನ ಮನಸ್ಸು. ಆದರೆ ವಿಶಾಖಾಳ ಒಳ ಮನಸ್ಸು ಸಾಮಾಜಿಕವಾಗಿ ಹಿಂಜರಿದು ಮನೆಯನ್ನೇ ಬಿಡುತ್ತಾಳೆ. ಮಗುವನ್ನು ಬಗಲಿನಲ್ಲಿ ಇಟ್ಟುಕೊಂಡು ಬಂದು ಬೇಡುವ ಭಿಕ್ಷುಕಿಯನ್ನು ಕಂಡಾಗ ತಾನು ಕರ್ಣನಿಂದ ಪಡೆದಿರಬಹುದಾದ ಮಗುವೇ ಕಣ್ಣೆದುರಿಗೆ ಬರುತ್ತದೆ. ಕೊನೆಗೆ ಕರ್ಣ ಹೃದಯಾಘಾತದಿಂದ ಮರಣ ಹೊಂದುತ್ತಾನೆ. ಆಗ ವಿಶಾಖಳಿಗಾದ ಮಾನಸಿಕ ವೇದನೆಯನ್ನು ಪ್ರಿಯಾ ಭಟ್ಟರವರು ಸಹಜವಾಗಿ ಚಿತ್ರಿಸಿದ್ದಾರೆ. ಕಥೆಯ ಕೊನೆಯ ವಾಕ್ಯ ‘ಇನ್ನು ಕನಸೂ ಕಾಣುವ ಹಾಗಿಲ್ಲ. ನೋವಿಗೂ ಅರ್ಥವಿಲ್ಲ, ಎನ್ನುವಲ್ಲಿ ವಿಶಾಖಳ ಮಾನಸಿಕ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
ಪ್ರಿಯಾ ಭಟ್ಟರ ಕಥೆಗಳಲ್ಲಿ ಏಕತಾನತೆಯಾಗಲೀ, ಏಕಶೈಲಿಯಾಗಲೀ ಇಲ್ಲ. ಪ್ರತಿಯೊಂದು ಕತೆಯೂ ವಿಭಿನ್ನವಾಗಿಯೇ ತೋರುತ್ತದೆ. ‘ನೀರು ತೋಟದ ಹಸಿರುಮನೆ’ಯಲ್ಲಿ ಸಾಮಾಜಿಕ ಕಳಕಳಿಯಿದ್ದ ಹಾಗೆ ‘ಸರ್ಕಸ್ಸಿನ ಹುಡುಗಿ’ಯಲ್ಲಿ ಸಣ್ಣ ಹುಡುಗ ತನ್ನ ಕಳೆದು ಹೋದ ತಂಗಿ ವಿಜೇತಳನ್ನು ಸರ್ಕಸ್ಸಿನ ಹುಡುಗಿಯ ಜೊತೆ ಸಮೀಕರಿಸಿ ಪಡುವ ವೇದನೆ ಮಾನವೀಯ ಸಂಬಂಧಗಳನ್ನು ಸೂಚಿಸುತ್ತದೆ. ಇಲ್ಲಿ ಸರ್ಕಸ್ಸಿನ ಹುಡುಗಿಯೇ ವಿಜೇತಳಾಗಿರಬಹುದಾದ ಸಂಭಾವ್ಯತೆಯನ್ನು ಓದುಗರ ತೀರ್ಮಾನಕ್ಕೇ ಬಿಟ್ಟು ಗಲಿಬಿಲಿಮಾಡುವದು ಲೇಖಕಿಯ ಪ್ರೌಢ ನಿರೂಪಣಾ ಶೈಲಿಯನ್ನು ಸಾರುತ್ತದೆ.
‘ಚಾರುಲತೆ ಹಾಗೂ ಕನ್ನಡಿ’ಯಲ್ಲಿ ವೈವಾಹಿಕ ಜೀವನದಲ್ಲಿಯ ಹೆಣ್ಣಿನ ಮನಸ್ಸಿನ ಒಳತೋಟಿಗಳನ್ನು ವಿಸ್ತರಿಸಿದರೂ ಚಾರುಲತೆ ಹಾಗೂ ಸಾತ್ವಿಕಾರ ವಿಭಿನ್ನ ವ್ಯಕ್ತಿತ್ವಗಳನ್ನು ಎರಡು ಕತೆಗಳ ಮೂಲಕ ಬಿಚ್ಚಿಟ್ಟಿದ್ದಾರೆ. ಚಾರುಲತೆ ಕಲಿತವಳಾದರೂ ಆದರ್ಶದ ಮೊರೆಹೊಕ್ಕು, ಧಾರೇಶ್ವರದಂತಹ ಹಳ್ಳಿಯಲ್ಲಿ ಅಂಗಡಿನಡೆಸುವ ಗಂಡನನ್ನು ಆಯ್ದುಕೊಳ್ಳುತ್ತಾಳೆ. ಇಲ್ಲಿ ಧಾರೇಶ್ವರದ ರಥಬೀದಿ, ಕುಮಟಾ ಪೇಟೆ, ಮುಂತಾದ ಗ್ರಾಮೀಣ ಪ್ರದೇಶಗಳ ಪರಿಚಯ ಮಾಡಿಸುತ್ತಾ ಮಕ್ಕಳಾಗದ ಹೆಣ್ಣು, ಅತ್ತೆ ಹಾಗೂ ಅತ್ತೆಯ ಗೆಳತಿಯರ ಹಂಗಿಸುವಿಕೆ, ಅದರಲ್ಲೂ ಗಂಡ ನಪುಂಸಕನಾದಾಗ, ಅನುಭವಿಸುವ ಮಾನಸಿಕ ಹಿಂಸೆಯನ್ನು ತಿಳಿಸುವದರಲ್ಲಿ ಸಮರ್ಥರಾಗಿದ್ದಾರೆ. ಕೊನೆಗೆ ತನ್ನ ಆದರ್ಶವನ್ನು ಬದಿಗೊತ್ತಿ ಹಳೆಯ ಮಿತ್ರ ಸಮೀರನ ಜೊತೆ ಜೀವನ ನಡೆಸುವ ಸಹಜತೆಯನ್ನು ತಿಳಿಸಿದ್ದಾಳೆ.
ಆದರೆ ‘ಕನ್ನಡಿ’ಯಲ್ಲಿಯ ಸಾತ್ವಿಕಾ ಬೇರೆಯದೇ ಸ್ವಭಾವದ ಹೆಣ್ಣು. ನೌಕರಿಯ ವೃತ್ತಿಯನ್ನು ಆಯ್ದುಕೊಂಡು ಮಕ್ಕಳೇ ಬೇಡ ಎನ್ನುವ ಹಂತವನ್ನೂ ತಲುಪಿದವಳು. ಗಂಡನ ಒತ್ತಾಯದಿಂದಲೋ ಎನ್ನುವ ಹಾಗೆ ಮಗಳನ್ನು ಪಡೆದರೂ ಗಂಡನ ಪೂರ್ತಿ ಸಹಕಾರ ಇಲ್ಲದೇ ಸಣ್ಣ ಮಗು ಸ್ಮೃತಿಯನ್ನು ಬೆಳೆಸುವಾಗ ಪಟ್ಟ ಕಷ್ಟಗಳಿಂದಾಗಿ ಮಗಳನ್ನು ಬೋರ್ಡಿಂಗ್ನಲ್ಲಿ ಇಡಬೇಕಾದ ಪರಿಸ್ಥಿತಿ ಎದುರಿಸಿದಳು. ವೃತ್ತಿಯ ಭವಿಷ್ಯದ ಕಾರಣಕ್ಕಾಗಿ ವಿಚ್ಛೇದನ ಹೊಂದಬೇಕಾಗಿ ಬಂದು ತಾನೂ ವೈವಾಹಿಕ ಜೀವನವನ್ನು ನಡೆಸಲು ಸಾಧ್ಯವಾಗದೇ ಮಗಳಿಗೂ ಸುಂದರ ಭವಿಷ್ಯವನ್ನು ಕೊಡದೇ ‘ ತಾಯಿ ತನಗೆ ಕೊಟ್ಟ ಪ್ರೀತಿ ತಾನು ಮಗಳಿಗೆ ಕೊಡಲು ಸಾಧ್ಯವಾಗಲಿಲ್ಲ’ ಎನ್ನುವ ಹೇಳಿಕೆಯಲ್ಲಿ ಪ್ರಸಕ್ತ ನೌಕರಿ ಮಾಡುವ ಹೆಣ್ಣುಮಕ್ಕಳ ಜೀವನವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ.
‘ಬೆಳಕನರಸಿ’ ಎನ್ನುವ ಕತೆಯಲ್ಲಿ ಹಳ್ಳಿಯ ಸಿದ್ದಪ್ಪ ಡಾ.ಸಿದ್ದು ಆಗಿ ಅವನ ಗೆಳತಿ ಊರಿಗೆ ಹೋಗಿ ತಂದೆತಾಯಿಯರ ಸೇವೆ ಮಾಡಿ ಹಳ್ಳಿಯಲ್ಲಿಯೆ ನೆಲೆಸಿ ಅತ್ತೆಯ ಮಗಳನ್ನು ಮದುವೆಯಾಗು ಎನ್ನುವ ಮಾತನ್ನು ತಿರಸ್ಕರಿಸಿ ನಗರಜೀವನವನ್ನು ಅರಸಿ ಬೆಂಗಳೂರು ಸೇರುತ್ತಾನೆ. ಆದರೆ ಕೊನೆಗೆ ನಗರ ಜೀವನವೇ ಶುಷ್ಕವೆನಿಸಿ ಊರಿಗೆ ಹೋಗಿ ನೆಲೆಸಲು ಮನಸ್ಸು ಮಾಡುತ್ತಾನೆ. ಆದರೆ ತನ್ನವರು ಎನ್ನುವವರು ಯಾರೂ ಇರುವದಿಲ್ಲ. ಕೊನೆಯಲ್ಲಿ ‘ಇರುವದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎನ್ನುವ ಪ್ರಿಯಾ ಭಟ್ಟರ ನುಡಿ ಸಾರ್ವಕಾಲಿಕವಾಗಿ ಸತ್ಯವಾದದ್ದು.
‘ಮಳೆಗಾಲದ ಬೆಳದಿಂಗಳು’ ಪ್ರಿಯಾ ಭಟ್ಟರಿಂದ ಮೂಡಿಬಂದ ಹೊಸ ಆಲೋಚನೆಗೆ ಸಾಕ್ಷಿ. ಇಲ್ಲಿ ರಾಜಿ ಹಾಗೂ ಸೂರಿ ಪರಸ್ಪರ ಅತೀವವಾಗಿ ಪ್ರೀತಿಸುವವರು. ಹೆಂಡತಿಗೆ ತೊಂದರೆ ಆದೀತು ಅಂತ ಗಂಡ, ತನ್ನ ಸಹಾಯವನ್ನು ಗಂಡ ಅಪೇಕ್ಷಿಸುತ್ತಿಲ್ಲ ಎನ್ನುವ ಹೆಂಡತಿ ಹೀಗೆ ಮಾನಸಿಕವಾಗಿ ದೂರ ದೂರ ಇರುವ ದಂಪತಿಗಳು ಹೇಳಿಕೊಳ್ಳಲಾಗದೇ ಚಡಪಡಿಸುವದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಪ್ರಿಯಾ ಭಟ್ಟರು. ಕೊನೆಗೆ ಎಚ್ಚೆತ್ತಿಕೊಂಡ ಸೂರಿಯ ನಡವಳಿಕೆಯಿಂದಾಗಿ ಕತೆ ಸುಖಾಂತ್ಯವಾಗುತ್ತದೆ.
ಹೀಗೆ ಕತೆಯನ್ನು ಗಂಡ-ಹೆಂಡತಿಯರ ಪರಸ್ಪರ ಸ್ವಗತದ ಮೂಲಕ ಬೆಳೆಸುವ ಕ್ರಮ ನಿಜಕ್ಕೂ ಬೆರಗು ಗೊಳಿಸುತ್ತದೆ. ಮಳೆಗಾಲದಲ್ಲಿ ಬೆಳದಿಂಗಳು ಇದ್ದರೂ ಅನುಭವಕ್ಕೆ ಬಾರದೆಂತಲೂ, ಮಳೆಗಾಲದ ಅಂತ್ಯದಲ್ಲಿ ಬರುವ ಶರದೃತುವಿನಲ್ಲಿಯ ಬೆಳದಿಂಗಳಂತೆ ಸಂಸಾರ ಸುಗಮವಾಯಿತೆಂತಲೂ ಪ್ರತಿಮಾರೂಪದಲ್ಲಿ ಹೇಳಿದ್ದಾರೆ.
ಸಮಕಾಲೀನ ಸಮಸ್ಯೆಯಾದ ಡ್ರಗ್ಸ್ ಮಾಯಾಜಾಲ, ‘ನಶೆ’ ಎನ್ನುವ ಕತೆಯ ಕೇಂದ್ರಬಿಂದು. ಈ ಕತೆ ಮೂರು ವ್ಯಕ್ತಿಗಳ ಜೋಡಣೆಯಿಂದ ಓಡುತ್ತದೆ. ಗುತ್ತಿಲ್ಲದೇ ಡ್ರಗ್ಸ್ ಮಾರಾಟವಾಗುವ ‘ಅಜ್ಜನ’ ಹೋಟೇಲಿಗೆ ಹೋದ ಪಾವನಿ ಅಲ್ಲಿಯ ಹುಡುಗರು ಉದ್ದೇಶಪೂರ್ವಕವಾಗಿ ಮಾಡಿದ ಎಕ್ಸಿಡೆಂಟ್ ನಿಂದ ಎರಡೂ ಕಾಲುಗಳನ್ನು ಕಳೆದುಕೊಂಡು ಕೋಣೆಯಲ್ಲಿ ಬಂಧಿಯಾಗಿ ಜೀವನ ಕಳೆಯುತ್ತಾಳೆ. ಕೋಣೆಯ ಎದುರಿಗೇ ಬೈರಾಗಿಯಂತೆ ಕಾಣುವ ಒಬ್ಬ ಬಿಹಾರೀ ಹುಡುಗ ಡ್ರಗ್ಸ್ ಎಡಿಕ್ಟ್ ಆದ ಹುಡುಗರನ್ನು ಸರಿ ದಾರಿಗೆ ತರುವವನ ಹಾಗೆ ನಟಿಸುತ್ತಾನೆ. ಆ ಕೂಪದಲ್ಲಿ ಇನ್ನೂ ನೂಕುವ ಸನ್ನಿವೇಶವನ್ನು, ೨೦ ವರ್ಷದ ಮಗ ಸುದೀಪನ ಸಲುವಾಗಿ ತಾಯಿ ಜಾಗ್ರತಿ ಬಂದ ಪರಿಸ್ಥಿತಿಯನ್ನು ಮೌನವಾಗಿಯೇ ಅನುಭವೀಸಬೇಕಾದ ಪಾವನಿಯ ಅಂತರಾಳವನ್ನು ಯಶಸ್ವಿಯಾಗಿ ಚಿತ್ರಿಸಿದ್ದಾರೆ ಲೇಖಕಿ.
ಮೊದಲೇ ಮುಂಬಯಿಯಲ್ಲಿ ಕೆಲಸದಲ್ಲಿರುವ ಹುಡುಗಿ ರೇಣೂ, ಕುಮಟಾದ ದೀವಗಿ ಎನ್ನುವ ಊರಿನಲ್ಲಿ ತನ್ನ ಜೊತೆಯಲ್ಲಿ ಶಾಲಾ ಜೀವನ ನಡೆಸಿದ ಶಿವನನ್ನು ಆಕಸ್ಮಿಕವಾಗಿ ಕುಮಟಾ ರೇಲ್ವೇ ಸ್ಟೇಶನ್ನಿನಲ್ಲಿ ಭೇಟಿಯಾಗುವಲ್ಲಿಂದ ಕತೆ ಶುರುವಾಗುತ್ತದೆ. ಮುಂಬಯಿಯಲ್ಲಿ ತಾನೊಬ್ಬನೇ ಒಂದು ಸಣ್ಣ ಮನೆಯಲ್ಲಿರುವದು, ಊರಿನಲ್ಲಿ ತನ್ನ ಜೊತೆಗೇ ಬೆಳೆದ ಶಿವನ ನೌಕರಿಯ ಅನಿವಾರ್ಯತೆ, ಆ ಕಾರಣಕ್ಕಾಗಿ ತನ್ನ ಚಿಕ್ಕದಾದ ಮನೆಯಲ್ಲಿಯೇ ಆಶ್ರಯಕೊಡಬೇಕಾದ ಪರಿಸ್ಥಿತಿ, ಆ ಸಂದರ್ಭದಲ್ಲಿ ಅಕ್ಕ ಪಕ್ಕದವರು ತನ್ನನ್ನು ಹೀನಾಯವಾಗಿ ನೋಡಬಹುದಾದ ಅನಿಸಿಕೆ ಇವುಗಳನ್ನೆಲ್ಲಾ ರೇಣೂ ಅನುಭವಿಸುವ ಭಾವನೆಗಳ ಒಳತೋಟಿಗಳು ಪ್ರಿಯಾ ಭಟ್ಟರ ಪೆನ್ನಿನ ಮೂಸೆಯಿಂದ ಚೆನ್ನಾಗಿ ಇಳಿದು ಬಂದಿದೆ. ಇದರ ಜೊತೆ ಅನಾಥಾಲಯದ ಮಕ್ಕಳ ಮುಂದೆ ಶ್ರೀಮಂತ ಮಕ್ಕಳ ಅದ್ದೂರಿಯ ಜನ್ಮದಿನಾಚರಣೆಯ ದುಷ್ಪರಿಣಾಮಗಳನ್ನೂ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೂರತೀರದಾಚೆಯೆಲ್ಲೋ ಕತೆಯಲ್ಲಿ ಮೀರಾ ನಾಯರ್ ಎನ್ನುವ ಮಧ್ಯವಯಸ್ಸಿನ ಹೆಣ್ಣೊಬ್ಬಳು ದೂರದ ಓನ್ ಲೈನಿನಲ್ಲಿ ಅಭಿ ಎನ್ನುವ ಒಬ್ಬ ಹುಡುಗನ ಜೊತೆ ಫ್ಲರ್ಟ್ ಮಾಡಿ ಕೊನೆಯಲ್ಲಿ ಇಬ್ಬರೂ ದೂರವಾಗಲು ಪಡುವ ಪಾಡನ್ನು ತಿಳಿಸುತ್ತಾ ಹೋಗುತ್ತಾರೆ ಪ್ರಿಯಾ ಭಟ್ಟರು. ಈ ಮಧ್ಯೆ ರೋಶನಿ ಎನ್ನುವ ಹೆಣ್ಣಿನ ಪ್ರವೇಶವೂ ಆಗಿ ಗಂಡು ಹೆಣ್ಣಿನ ಸಂಬಂಧಗಳ ತೀಕ್ಷ್ಣ ಕ್ರಿಯೆ ಪ್ರತಿಕ್ರೀಯೆಗಳನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಜೆಯಾಗುತ್ತಿದೆ ನೋಡ ಎನ್ನುವ ಕತೆ ಮೊಮ್ಮಗನಲ್ಲಿ ಅತೀವವಾದ ಪ್ರೀತಿಯಿರುವ ಅಜ್ಜಿ ತಾನು ಒಂದು ಹರಳಿನ ಉಂಗುರವನ್ನು ಪಡೆಯಲು ಪಟ್ಟ ಬವಣೆ ಹಾಗೂ ಅವಳ ಅಂತ್ಯಕಾಲದಲ್ಲಿ ಆ ಉಂಗುರವನ್ನು ತಾಯಿಯ ಕೈಯಲ್ಲಿ ಕಂಡ ಮಗ ಜಂಗನ ಮನಸ್ಥಿತಿ ಕಾಣಲು ಸಿಗುತ್ತದೆ. ಮೈಲಾರನ ಹೆಂಡತಿಯ ಮೂಲಕ ಆ ಉಂಗುರವನ್ನು ತರಿಸಿಕೊಂಡಿರಬಹುದೆಂದು ಊಹಿಸಬಹುದು. ಮಗ ಜಂಗನಿಗೆ ತಾಯಿಯ ಮೇಲೆ ಬೇಸರ ಇಲ್ಲದಿದ್ದರೂ ಸಾಮಾನ್ಯ ಜೀವನವನ್ನು ಸಾಗಿಸುವ ಮಗ ಜಂಗ ಹಾಗೂ ಉಂಗುರವನ್ನು ಪಡೆದೇ ತೀರಬೇಕು ಎನ್ನುವ ತಾಯಿಯ ಅಪೇಕ್ಷೆಯ ನಡುವೆ ತಾಯಿಯ ಬಯಕೆ ಹೇಗೆ ತೀರಿತು ಎನ್ನುವ ಕುತೂಹಲವು ಕೊನೆಯ ತನಕವೂ ಮುಂದುವರಿದಿದೆ. ಸಂಜೆಯಾಗುತಿದೆ ನೋಡ ಎನ್ನುವ ಮಾತು ಅಜ್ಜಿಯ ಮರಣದಲ್ಲಿ ಪ್ರತಿಫಲಿತವಾಗಿದೆ.
‘ವ್ಯಸ್ತ’ ಎನ್ನುವ ಕತೆ ನಿರಂಜನ ಎನ್ನುವ ವ್ಯಕ್ತಿ ಹೇಗೆ ವಿಚಿತ್ರವಾದ ಸ್ವಭಾವವನ್ನು ಹೊಂದಿದ್ದಾನೆ ಎನ್ನುವದನ್ನು ಅವನ ನಡವಳಿಕೆಯಿಂದ ತಿಳಿಸುತ್ತಾರೆ ಲೇಖಕಿ. ನಿರಂಜನನ ಅಮ್ಮನ ಡೈರಿಯಲ್ಲಿ ತಾನು ಓದಿದ ವಾಕ್ಯ ‘ಹೆಣ್ಮಕ್ಕಳಿಗೆ ಹಾಗೇ ಪುಟ್ಟ, ಬಗೆಬಗೆಯ ಬಟ್ಟೆಗಳ ಇಷ್ಟವಿರುತ್ತೆ. ನಿನಗಿದೆಲ್ಲ ತಿಳಿಯದು ಬಿಡು’. ಎನ್ನುವ ವಾಕ್ಯದಲ್ಲಿ ತನಗೆ ದುಬಾರಿಯಾದ ಒಳ ಉಡುಪುಗಳನ್ನು ಖರೀದಿಸಿ ತಂದ ಗಂಡನ ವಿಚಿತ್ರವಾದ ಸ್ವಭಾವವನ್ನು ಗುರುತಿಸಿದಳು ಮೀರಾ. ಇದರಿಂದ ಅವಳಿಗೇನೂ ಬೇಸರವಾಗಲಿಲ್ಲ. ‘ಮುಂದಿನ ಪುಟಕ್ಕೆ ಮುಂದುವರಿದಿತ್ತು’ ಎನ್ನುವ ವಾಕ್ಯವನ್ನು ಕತೆಯ ಕೊನೆಯಲ್ಲಿ ಬರೆಯುತ್ತಾ ಜೀವನದ ಮುಂದುವರಿಕೆಯನ್ನು ಸೂಚಿಸಿದ್ದಾರೆ.
ಪ್ರಿಯಾ ಭಟ್ಟರು ಕುಮಟಾದ ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ಕತೆಗಳಲ್ಲಿ ಬಳಸುತ್ತಾ ಗ್ರಾಮಜೀವನದಲ್ಲಿ ಬಳಸುವ ಭಾಷೆಯ ಸೊಗಡಿನ ರುಚಿಯನ್ನು ಆಗಾಗ ಉಣಬಡಿಸಿದ್ದಾರೆ. ಪುಸ್ತಕ ಹಿಡಿದಾಗ ಓದಲು ತೊಡಗುವ ಮೊದಲ ಪುಟದಿಂದಲೇ ಓದುಗನನ್ನು ಸೆರೆಹಿಡಿಯಲು ‘ನಾನೊಂದು ಹುಚ್ಚುಹೊಳೆ’ ಯಶಸ್ವಿಯಾಗಿದ್ದು ಸುಳ್ಳಲ್ಲ.
ಗಣಪತಿ ಹೆಗಡೆ ಮೂರೂರು