ಅಂಕಣ ಸಂಗಾತಿ
ಒಲವ ಧಾರೆ
ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ
ಮಗನೆಂಬ ಮಾಣಿಕ್ಯದೊಲುಮೆಯ ಪ್ರೀತಿ ಹಂಚಲಿ..
ಮಗನೆಂಬ ಮಾಣಿಕ್ಯದೊಲುಮೆಯ ಪ್ರೀತಿ ಹಂಚಲಿ..
“ಮಗಾ ಹುಟ್ಟ್ಯಾನವ್ವ ಮನೆಗೆ ಕೀರ್ತಿ ತಂದನವ್ವಾ” ಎನ್ನುವ ಗುರುರಾಜ ಹೊಸ್ಕೊಟಿಯವರ ಜಾನಪದ ಶೈಲಿಯ ಹಾಡು ಇವತ್ತಿಗೂ ಜನಮನವನ್ನು ಸೂರೆಗೊಂಡಿದೆ ನಿಜ. ತಲತಲಾಂತರದಿಂದಲೂ ಹೆಣ್ಣು ಗಂಡೆಂಬ ಭೇದ ಭಾವದಿಂದಲೇ ಬಂದಿರುವ ಈ ಸಮಾಜ ಹೆಣ್ಣು ಹುಟ್ಟಿದ ತಕ್ಷಣ ತಿರಸ್ಕಾರ ಮನೋಭಾವ ತೋರಿಸುವ ಸಮಾಜವು ಅದೇ ಗಂಡು ಹುಟ್ಟಿದ ತಕ್ಷಣ ಪ್ರೀತಿ ಆದರದಿಂದ ಹಾರೈಕೆ ಮಾಡಿ ಸಂಭ್ರಮಿಸುತ್ತದೆ ಈ ಸಮಾಜ.
ಯಾವಾಗಲೂ ಪುರುಷ ಪ್ರಧಾನವಾಗಿರುವುದನ್ನು ನಾವು ಗಮನಿಸುತ್ತೇವೆ. ಮಗ ಹುಟ್ಟಿದ ಮನೆಯ ಸಂಭ್ರಮ ಇನ್ನೂ ಆಳೇತ್ತರಕ್ಕೆ ಜಿಗಿಯುತ್ತದೆ ಎನ್ನುವ ಪರಿಕಲ್ಪನೆ ಅಪ್ಪ ಅಮ್ಮನದು. ಅಪ್ಪನಿಗೆ ಅಮ್ಮನಿಗೆ ಎಲ್ಲಿಲ್ಲದ ಸಂಭ್ರಮ. ಮಗನ ಆಟ, ತುಂಟಾಟ, ತೊದಲು ನುಡಿಗಳಿಗೆ, ಪ್ರೀತಿಯಿಂದಲೇ ಎದೆಗೆ ಒದೆಯುವ ಪಿಸುಮಾತಿನ ಹೆಜ್ಜೆಗಳಿಗೆ ಮುಗುಳ್ನಗೆಯ ಸಿಂಚನ. ದಾಳಿಂಬೆಯಂತಹ ಹಲ್ಲುಗಳನ್ನು ತೆಗೆದು ಸ್ನಿಗದ್ದವಾದ ಆ ನಗು ನಕ್ಕರೆ ಮಗನು ಆಕಾಶಕ್ಕೆ ಮುತ್ತಿಟ್ಟ ಸಡಗರ ಸಂಭ್ರಮದ ಹೊನಲು.
“ಹ.. ಹಾ.. ಮಗ ಎಂಥಾ ಚೂಟಿ. ವ್ಹಾ..ಏನು ಅವನ ನಡಿಗೆ..? ತುಂಟಾಟದಿಂದ ಅವನು ಗೀಚುವ ಅಡ್ಡ ಉದ್ದ ಗೆರೆಗಳು ಗೋಡೆಯ ಅಂದವನ್ನು ಪ್ರೀತಿಯನ್ನು, ಹಿಮ್ಮಡಿಗೊಳಿಸುತ್ತವೆ.
ಮಗನು ತಪ್ಪು ಹೆಜ್ಜೆ ಇಟ್ಟಾಗಲೆಲ್ಲ ತವಕದಿಂದಲೇ ತವಕಿಸುವ ಮನೆಯವರು. ಮೆಲ್ಲ ಮೆಲ್ಲನೆ ಹೆಜ್ಜೆ ಹಾಕುತ್ತಾ ಹೊಸ್ತಿಲು ದಾಟುವಾಗ.. “ಅಯ್ಯೋ ಮಗು ಬಿದ್ದೀತು..? ಎನ್ನುವ ಎಚ್ಚರಿಕೆಯ ಕಾಳಜಿಯ ಆ ಪ್ರೀತಿಯನ್ನು ವರ್ಣಿಸಲು ಅಸಾಧ್ಯ. ಮಗನನ್ನು ಹಾಲು, ತುಪ್ಪ, ಮೊಸರು, ಏನು ಬೇಕೋ ಅದೇಲ್ಲವನ್ನು ಕಲಸಿ ಚಂದಮಾಮನನ್ನು ತೋರಿಸುತ್ತಲೇ ಲಾಲಿಯನ್ನು ಹಾಡುತ್ತಾ, ಒಂದೊಂದು ತುತ್ತನ್ನು ತಿನಿಸುತ್ತಾಳೆ ತಾಯಿ. ಅವನ ಹಠಮಾರಿತನಕ್ಕೆ ಸೋತು “ಅಯ್ಯೋ ಚಿನ್ನು, ಉಣ್ಣು ಇಲ್ಲಂದ್ರೆ ಗುಮ್ಮ ಬಂದಾನೋ.. ತಿನ್ನು.. ಚಿನ್ನು.. ತಿನ್ನು ” ಎನ್ನುತ್ತಾ, ಹೊಟ್ಟೆ ಬಿರಿಯುವಂತೆ ತಿನ್ನಿಸಿ, ನಾಲ್ಕು ಹೆಜ್ಜೆಯನ್ನು ಹಾಕುತ್ತಲೇ ನಿದ್ರಿಗೆ ಜಾರುವ ಮಗುವನ್ನು ತಲೆ ನೇವರಿಸುತ್ತಾ, ಲಾಲಿ ಹಾಡುತ್ತಾ, ತೊಟ್ಟಿಲಿಗೆ ಹಾಕಿ ಸಂಭ್ರಮಿಸುತ್ತಾಳೆ ತಾಯಿ.
“ಆಡಿ ಬಾ ಎನ ಕಂದಾ/ಅಂಗಲು ತೋಳೆದೇನಾ/ತೆಂಗಿನ ತಿಳಿ ನೀರು ತಕ್ಕೊಂಡು ಬಂಗಾರದ ಮಾರಿ ತೋಳೆದೇನ//
ನಮ್ಮ ಜಾನಪದರು ಮಗುವಿನ ಹಾರೈಕೆಗೆ ಹೊಸ ಅರ್ಥವನ್ನು ನೀಡಿದ್ದಾರೆ.
ಮಗ ಶಾಲೆಗೆ ಹೋಗುವಾಗಂತಲೂ ತಾಯಿಯು ಮುಂಜಾನೆ ಎದ್ದ ತಕ್ಷಣವೇ ಅವನನ್ನು ಸಿದ್ಧಗೊಳಿಸಿ, ಬಸ್ಸಿಗೆ ಹತ್ತಿಸಿ, “ಹುಷಾರ್ ಮಗು, ಚೆನ್ನಾಗಿ ಊಟ ಮಾಡು, ಎಲ್ಲಿ ಬೇಕಂದರೆ ಅಲ್ಲಿ ತಿರುಗಾಡಬೇಡ, ಚೆನ್ನಾಗಿ ಓದು” ಎಂದು ಸಂಭ್ರಮಿಸುತ್ತಾ ತಾಯಿ ತನ್ನ ಮಗುವನ್ನು ಶಾಲೆಗೆ ಕಳುಹಿಸುತ್ತಾಳೆ.
ಮಗು ಶಾಲೆಯಿಂದ ಬರುವುದನ್ನೇ ನಿರೀಕ್ಷಿಸುತ್ತಾಳೆ. ಶಾಲೆಯಲ್ಲಿ ಮಗು ಎಲ್ಲರೊಂದಿಗೆ ಓದುತ್ತಾನೋ ಇಲ್ಲವೋ..? ಬರೆಯುತ್ತಾನೋ ಇಲ್ಲವೋ..? ತುಂಟಾಟ ಮಾಡುತ್ತಾನೋ..? ಎನ್ನುವ ತಾಯಿ ತಂದೆಯ ತಾಕಲಾಟಗಳು ಹೆಚ್ಚಾದಗಲೇ.. ಮಗು ಪ್ರಾಥಮಿಕ ಹಂತವನ್ನು ದಾಟಿ ಬಿಟ್ಟಿರುತ್ತಾನೆ.
ಮಗು ಪ್ರೌಢಾವಸ್ಥೆಗೆ ಬಂದು ಬಿಟ್ಟಿರುತ್ತಾನೆ. ಪ್ರೌಢಾವಸ್ಥೆಗೆ ಬಂದ ಮಗು ಮೊದಲಿನಂತೆ ತಂದೆ-ತಾಯಿಗಳ ಮಾತನ್ನು ಕೇಳುವುದಿಲ್ಲ. ತನ್ನ ಗೆಳೆಯರ ಜೊತೆಗೆ ತನ್ನದೇ ಲೋಕದೊಳಗೆ ಅವನು ವರ್ತಿಸುತ್ತಾನೆ. ಹೈಸ್ಕೂಲ್ ಹಂತವು ಅವನಿಗೆ ಕನಸುಗಳು ಮೂಡುವ ಹಂತ. ಆ ಹಂತದಲ್ಲಿಯೇ ಒಳ್ಳೆಯ ಸಂಸ್ಕಾರ ಸಿಕ್ಕರೆ ಮಗನ ಅಭಿವೃದ್ಧಿಯ ಏಳಿಗೆ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.
ಆನಂತರದ ಮುಖ್ಯಘಟ್ಟ ಕಾಲೇಜು ಹಂತ ಕನಸುಗಳ ರಂಗು ರಂಗಿನ ಹಂತ. ಅದು ಕನಸಿನ ಜೊತೆಗೆ ಜೂಜಾಡುವ, ಕನಸಿನೊಂದಿಗೆ ಹೋರಾಡುವ, ಕೆಲವು ಸಲ ಕನಸನ್ನೇ ನುಚ್ಚುನೂರು ಮಾಡುವ ಮಹತ್ತರ ಘಟ್ಟವಾಗಿದೆ. ತಂದೆ – ತಾಯಿಗಳು ಪಾಲಕರು ಎಷ್ಟೇ ಎಚ್ಚರಿಕೆಯ ಮಾತುಗಳನ್ನಾಡಿದರೂ ಆಳೆತರಕ್ಕೆ ಬೆಳೆದ ಮಗ ಎದುರು ಮಾತನಾಡುತ್ತಲೇ ಹೋಗುತ್ತಾನೆ. “ನನ್ನ ಆಯ್ಕೆ, ನನ್ನ ಇಷ್ಟ” ಎನ್ನುವ ಮಾತು ಕಠೋರವಾಗಿ ಆಡುತ್ತಾನೆ. ಆಗಲೇ ತಂದೆ ತಾಯಿಗಳಿಗೆ ಮಗನನ್ನು ಸ್ನೇಹಿತನಂತೆ ಕಾಣಬೇಕೆನ್ನುವ ಸಂಗತಿ ತಿಳಿಯದೆ ಹೋದರೆ ಅವನು ಅವರ ಕೈ ಬಿಟ್ಟಾನು. ಮಗನನ್ನು ಸ್ನೇಹಿತನಂತೆ ಕಾಣಬೇಕು. ಆತನ ಆಸೆಗಳನ್ನು ಈಡೇರಿಸಬೇಕು. ಗೆಳೆಯರ ಜೊತೆಗೆ ಹೊರಗಡೆ ಹೋಗಲು ಅನುಮತಿಸಬೇಕು.
ಆದರೆ…
ಅನುಮತಿಸುವುದರ ಜೊತೆಗೆ ಎಚ್ಚರಿಕೆಯ ಮಾತುಗಳನ್ನು ತಿಳಿ ಹೇಳಬೇಕು. ಗೆಳೆಯರ ಜೊತೆಗೆ ಔಟಿಂಗ್ ಹೋಗುವಾಗ ನಾಲ್ಕು ಕಿವಿ ಮಾತುಗಳನ್ನು ಹೇಳಬೇಕು. ಸಾಧ್ಯವಾದಷ್ಟು ಅವರ ಚಲನವಲನವನ್ನು ಪರೋಕ್ಷವಾಗಿ ಗಮನಿಸಬೇಕು. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಲೆನೆವರಿಸಿ ಅವರ ಮನವೊಲಿಸಿ, ಸರಿದಾರಿ ತೋರಬೇಕು. ರಾಕ್ಷಸರಂತೆ ಅವನ ಮೇಲೆ ಏಗರಿ ಮನಬಂದಂತೆ ಅವನ ಮೇಲೆ ಅಧಿಕಾರ ಚಲಾಯಿಸಿದರೆ.. ಮಗ ತನ್ನ ಹಠವನ್ನು ಮುಂದುವರಿಸಿ, ತನ್ನ ಬಾಳನ್ನೇ ನಾಶ ಮಾಡಿಕೊಳ್ಳುತ್ತಾನೆ.
“ನೋಡ್ ಮಗಾ, ನೀನು ನೀನು ಚೆನ್ನಾಗಿ ಓದಬೇಕು. ಒಳ್ಳೆಯ ಗುರಿಯನ್ನು ಇಟ್ಟುಕೊಳ್ಳಬೇಕು. ಒಳ್ಳೆಯ ಸ್ನೇಹಿತರೊಡನೆ ಇರು. ಎಂತಹದೇ ಕಷ್ಟಗಳು ಬಂದರೆ ಸಹಿಸಿಕೊಳ್ಳಬೇಕು. ನಿನಗೆ ಸರಿ ಅನ್ನುವುದನ್ನು ಮಾಡಿ ಮುಗಿಸು. ಎಚ್ಚರ…ಆ ರೀತಿಯ ದಾರಿಯಲ್ಲಿ ಗುರಿಯ ಹೆಜ್ಜೆಯನ್ನು ಇಡುವಾಗ ಕಲ್ಲು ಮುಳ್ಳುಗಳು ಬಂದಾವು..!! ಬಂದರೂ ಚಿಂತೆ ಮಾಡಬೇಡ ಮಗು. ಮೆಲ್ಲಗೆ ಅವುಗಳನ್ನು ಎತ್ತಿ ಪಕ್ಕಕ್ಕೆ ಎಸೆದು, ನೀನು ದಾರಿಯನ್ನು ಮಾಡಿಕೊಂಡು ಗುರಿಯನ್ನು ತಲುಪಬೇಕು. ಯಾವುದೇ ಕಾರಣಕ್ಕೂ ನಿನ್ನ ಬದುಕನ್ನು ಹಾಳು ಮಾಡಿಕೊಳ್ಳಬೇಡ. ಯೌವ್ವನ ಒಂದು ಸುಂದರ ಲೋಕ. ಆ ಸುಂದರ ಲೋಕದಲ್ಲಿ ಪಕ್ಷಿಗಳಂತೆ ಸ್ವಚ್ಛಂದವಾಗಿ ಹಾರುವದರ ಜೊತೆಗೆ ಒಳ್ಳೆಯ ದೃಷ್ಟಿಯನ್ನು ಸೃಷ್ಟಿಯೊಡನೆ ಬೆರೆಸು” ಎಂದು ಮಗನ ಮನಸ್ಸನ್ನು ಹದಗೊಳಿಸುವ ತಂದೆ ತಾಯಿಯ ಕರ್ತವ್ಯ ಮಹತ್ವವಾದುದು.
ಮಗ ಕಾಲೇಜಿನಲ್ಲಿ ವಿಷಯವನ್ನು ಆಯ್ಕೆ ಮಾಡುವಾಗಲೋ ಅಥವಾ ಕಾಲೇಜು ಮುಗಿಸಿ ಉದ್ಯೋಗವನ್ನು ಅರಸುವಾಗಲೋ ಅವರಿಗೆ ಸ್ವಾತಂತ್ರ್ಯವನ್ನು ಕೊಟ್ಟುಬಿಡಿ. ಅದು ಅವನಿಷ್ಟ ಅವನ ಅಭಿರುಚಿ ಆಸಕ್ತಿ ತಕ್ಕಂತೆ ಅವನ ಆಯ್ಕೆ ಅವನಿಗೆ. ಅದರಲ್ಲಿ ಪಾಲಕರಾದ ನಾವುಗಳು ಮೂಗು ತೂರಿಸುವುದು ಒಳಿತಲ್ಲ.
ಆಳೆತರಕ್ಕೆ ಬೆಳೆದ ಮಗನು ತನ್ನ ತಂದೆ ತಾಯಿಗಳ ತ್ಯಾಗವನ್ನು ಸದಾ ಸ್ಮರಿಸಬೇಕು.
ಸಾಧ್ಯವಾದಷ್ಟು…
ಅವರ ಅಭಿಪ್ರಾಯದಂತೆ ಬದುಕಲು ಪ್ರಯತ್ನಿಸಬೇಕು. ಅವರಿಂದಲೇ ನಾನು ಎನ್ನುವ ಒಲವನ್ನು ಎದೆಯೊಳಗೆ ತುಂಬಿಕೊಳ್ಳಬೇಕು. ಶಿಕ್ಷಣವೇ ಇರಲಿ, ಉದ್ಯೋಗವೇ ಇರಲಿ, ಸಂಗಾತಿಯ ಆಯ್ಕೆಯೇ ಇರಲಿ ಮಗನು ಪಾಲಕರ ಅಭಿಪ್ರಾಯದೊಂದಿಗೆ ವಿವೇಚನೆ ಮಾಡಿ, ಹೆಜ್ಜೆ ಹಾಕಬೇಕು. “ನಾನು ಹೇಳಿದ್ದೆ ಸರಿ ನಾನು ಮಾಡಿದ್ದೆ ಸರಿ” ಎನ್ನುವ ಹಠಮಾರಿತನ ಮಗನಾದವನಿಗೆ ಯಾವತ್ತೂ ಒಳ್ಳೆಯದಲ್ಲ. ಹಿರಿಯರಾದವರಿಗೆ ಅನುಭವದ ಅಮೃತ ದಕ್ಕಿರುತ್ತದೆ. ಆ ಅಮೃತದ ಮಾತುಗಳಿಗೆ ಮಗ ಕಿವಿಗೊಟ್ಟಾಗಲೇ ಬದುಕು ಕೂಡ ಸಾರ್ಥಕವಾಗುತ್ತದೆ ಎನ್ನುವ ಮಾತು ಮಗನಿಗೆ ಗೊತ್ತಾಗಬೇಕು.
ಆಗ ಮಗನೆಂಬ ಮಾಣಿಕ್ಯ ತಂದೆ ತಾಯಿಗಳಿಗೆ ತನ್ನನ್ನು ನಂಬಿದವರಿಗೆ ಪ್ರೀತಿಯನ್ನು ಹಂಚಬಲ್ಲರು. ಕೇವಲ ಸ್ವಾರ್ಥಕ್ಕಾಗಿ, ತನ್ನ ಹಿತಕ್ಕಾಗಿ ಪಾಲಕರ ಮಾತನ್ನು ತಿರಸ್ಕರಿಸಿ ತನಗೆ ಅನಿಸಿದ್ದನ್ನು ತಾನು ಮಾಡಿ ಬದುಕನ್ನು ಕಟ್ಟಿಕೊಳ್ಳುವಾಗ ಎಡವಿ ಬಿದ್ದಾಗ ನೊಂದುಕೊಂಡರೆ ಬದುಕಿಗೆ ಅರ್ಥವೇನು? ತನ್ನ ಮನದಾಸೆಯನ್ನು ತನ್ನ ಆಯ್ಕೆಗಳನ್ನು ತನ್ನ ಬದುಕನ್ನು ತಂದೆ ತಾಯಿಗಳೊಂದಿಗೆ ಹಂಚಿಕೊಂಡು ಅವರ ಅಭಿಪ್ರಾಯವನ್ನು ಕ್ರೋಢೀಕರಿಸಿ ಒಂದು ನಿರ್ಧಾರಕ್ಕೆ ಬಂದಾಗಲೇ ಬದುಕಿಗೊಂದು ಹೊಸ ಅರ್ಥ ಬರುತ್ತದೆ.
ಇಂದು ಮಗನಾದವನು ಮುಂದೆ ತಂದೆ..!! ಎಂಬ ಭವಿಷ್ಯತ್ತಿನ ಬದುಕನ್ನು ಅರ್ಥ ಮಾಡಿಕೊಂಡಾಗಲೇ ಒಲವ ಧಾರೆಯೊಳಗೆ ಕರ್ತವ್ಯಗಳು ನೆನಪಾಗುತ್ತವೆ. ತಂದೆ ತಾಯಿಗಳ ಕನಸಿನೊಂದಿಗೆ ಮಗನ ಆಶಯಗಳು ಈಡೇರಲೆಂದು ಮಕರ ಸಂಕ್ರಮಣದ ನೂತನ ಶುಭಾರಂಭದಲ್ಲಿ ಹಾರೈಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ