ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಎಲ್ಲೆ ಇರದ ಜೀವನ

ಜೀವನ ಅಂದ್ರೆ ಹುಟ್ಟು ಸಾವುಗಳ ನಡುವಿನ ಪಯಣ . ಪಯಣಕ್ಕೆ ಗಮ್ಯ ಇರಬೇಕು . ಗುರಿ ತಲುಪಲಿಕ್ಕೆ ನಿರ್ದಿಷ್ಟತೆ ಇರಬೇಕು . ಈ ಪ್ರಯಾಣವು ಒಂದು ಚೌಕಟ್ಟಿನೊಳಗೆ ಸಾಗಬೇಕು . ಚೌಕಟ್ಟು, ನಿಯಮ, ಎಲ್ಲೆ, ಮೇರೆ ಇಲ್ಲದೆ ಇದ್ದರೆ ಬದುಕು ಅಲೆಮಾರಿ ಆಗುತ್ತದೆ ಗುರಿ ಮುಟ್ಟುವುದು ಅಸಾಧ್ಯದ ಮಾತೇ.

ಮಾನವ ಸಂಘ ಜೀವಿ.  ಶಿಲಾಯುಗದ ಆದಿಮಾನವನಿಂದ ಹಿಡಿದು ಇಂದಿನ ನವನಾಗರಿಕತೆಯ ಇಪ್ಪತ್ತೊಂದನೆಯ ಶತಮಾನದ ಸುಸಂಸ್ಕೃತ ಮಾನವನ ತನಕ ಬಾಳಿನ ಅದೆಷ್ಟೋ ಏಳುಬೀಳುಗಳನ್ನು ಎದುರಿಸಿ ಆಗಿದೆ.  ಒಂದು ಸುವ್ಯವಸ್ಥಿತ ಶಿಸ್ತುಬದ್ಧ ಜೀವನ ಆಗಲು ಅನೇಕ ಚೌಕಟ್ಟುಗಳನ್ನು ನಿರ್ಮಿಸಲಾಗಿದೆ . ಸಾಂಸ್ಕೃತಿಕ, ನೈತಿಕ, ಆರ್ಥಿಕ ಇತ್ಯಾದಿ ಚೌಕಟ್ಟುಗಳನ್ನು ಕಟ್ಟಿ ಆ ಪರಿಧಿಯೊಳಗೆ ಜೀವನವನ್ನು ಸಾಗಿಸುವ ನಿಯಮಗಳನ್ನು ಹೇರಲಾಗಿದೆ ಹಾಗೂ ಈ ರೀತಿಯ ಎಲ್ಲೆ ಗಳಿರುವುದರಿಂದಲೇ ಬದುಕಿನ ಸಾಗರದಲ್ಲಿ ಸುನಾಮಿಗಳು ಏಳದೆ  ಒಂದು ರೀತಿಯ ಶಾಂತ ಪರಿಸ್ಥಿತಿ ಇರಬಲ್ಲದು ಇರುವುದು .

ಈ ರೀತಿಯ ಏನೂ ನಿಯಮಗಳಿಲ್ಲದ ಎಲ್ಲೆ ಇಲ್ಲದ ಮೇರೆ ಮೀರಿದ ಜೀವನದ ಪರಿಸ್ಥಿತಿಗಳು ಏನಾಗುತ್ತವೆ? ಕೊಂಚ ದೃಷ್ಟಿ ಹರಿಸೋಣ ಬನ್ನಿ .

ಮೊದಲಿಗೆ ಸಾಮಾಜಿಕ ಕಟ್ಟುಪಾಡುಗಳು ಎನ್ನುವ ಎಲ್ಲೆ.  ಅದಿಲ್ಲದಿದ್ದರೆ ಬದುಕು ನೈತಿಕ ದಿವಾಳಿ ಎದ್ದು ಹೋಗಿ ಬಿಡುತ್ತದೆ . ಕುಟುಂಬ ಮತ್ತು ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿ ಆಗುಹೋಗುಗಳು ಸಹನೀಯ ಎಂದೆನಿಸುವುದು ಈ ರೀತಿಯ ಕಟ್ಟುಪಾಡುಗಳಿಂದಲೇ . ಮನುಷ್ಯ ಅತಿ ಸ್ವಾರ್ಥಿ ಆಗಿ ಬಿಡುತ್ತಿರುವುದು ಇಂದಿನ ದಿನಗಳಲ್ಲಿ ಈ ಚೌಕಟ್ಟಿನ ಎಲ್ಲೆ ಮೀರಿದುದರಿಂದಲೇ ಅನ್ನಿಸುವುದಿಲ್ಲವೇ .  ತಂದೆ ತಾಯಿಗಳ ಕಡೆಗೆ, ಬಂಧುಗಳ ಕಡೆ, ಸೋದರರ ಕಡೆ ಹಾಗೂ ಜೀವಿಸುವ ಸಮಾಜದ ಕಡೆ ನೈತಿಕ ಜವಾಬ್ದಾರಿ ಹೊತ್ತು ಒಬ್ಬ ಹೊಣೆ ಇರುವ ನಾಗರಿಕನ ಹಾಗೆ ವರ್ತಿಸದೆ ಬರೀ ಸ್ವಾರ್ಥದಿಂದ ತನ್ನೊಬ್ಬನ ಒಳಿತನ್ನು ನೋಡಿಕೊಳ್ಳುತ್ತಿರುವುದು ಈ ಸಾಮಾಜಿಕ ಎಲ್ಲೆ ಮೀರಿದ ಪರಿಣಾಮವೇ ಎಂದೆನಿಸುತ್ತದೆ .

ಇನ್ನು ನೈತಿಕ ಎಲ್ಲೆ. ಸಾಮಾಜಿಕದ ಜತೆಜತೆಗೆ ಸಾಗಿದರೂ ಕೆಲವೊಂದು ನಮ್ಮ ಮನಸ್ಸಿನಲ್ಲಿ ಇರಬೇಕಾದಂತಹ ಕಾಳಜಿ ನಡೆಯಬೇಕಾದ ಧರ್ಮ ಹಾಗೂ ರೀತಿರಿವಾಜುಗಳೆಡೆಗಿನ ಭೀತಿ ಅದನ್ನನುಸರಿಸಿ ನಡೆಯಬೇಕಾದಂತಹ ಕರ್ತವ್ಯ ಇವುಗಳು ನೈತಿಕ ಎಲ್ಲೆಯೊಳಗೆ ಬರುತ್ತವೆ . ಸಮಾಜದಿಂದ ನನಗೇನಾಗಬೇಕಿದೆ ನಾನು ನನ್ನಷ್ಟಕ್ಕೆ ಇರುವೆ ಎಂಬ ಅಧಿಕಾರ, ಹಣದ ಮದ ವೇರಿ ಇತ್ತೀಚೆಗೆ ನಡೆಯುತ್ತಿರುವ ವರ್ತನೆಗಳು ಸಮಾಜ ವಿರೋಧಿ ಚಟುವಟಿಕೆಗಳು ನೈತಿಕ ಅಧಃಪತನದ ಲಕ್ಷಣ .

ಇನ್ನೂ ಧರ್ಮ ವಿಧಿಸುವ ಕೆಲವೊಂದು ಎಲ್ಲೆಗಳು ಅದು ನಮ್ಮ ಮನೆಯ 4ಗೋಡೆಗಳ ಮಧ್ಯಕ್ಕೆ ಸೀಮಿತವಾಗಿಸಿ ಇರಿಸಿ ಧಾರ್ಮಿಕ ಎಲ್ಲೆಗಳು ಸಾಮಾಜಿಕ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಭಂಗ ತರದಂತೆ ಅನುಸರಿಸಿ ಕೊಳ್ಳಬೇಕಾಗಿರುವುದು ಇಂದಿನ ಮೊಟ್ಟಮೊದಲ ಕ್ರಮವಾಗಿದೆ . ಹಾಗೆ ನಡೆದರೆ ಮಾತ್ರ ಸಮಾಜ ಪ್ರಬುದ್ಧ ಸಮಾಜ ವೆಂದೆಣಿಸಿ ಮುಂದೆ ಸಾಗಲು ಸಾಧ್ಯ .

ಆರ್ಥಿಕ ಎಲ್ಲೆ.  ಇಂದಿನ ಕೊಳ್ಳುಬಾಕ ಸಂಸ್ಕೃತಿ ಹಾಗೂ ಸಾಲ ಮಿತಿ ಮೀರಿ ತೆಗೆದುಕೊಳ್ಳುವ ಅಭ್ಯಾಸಗಳಿಂದಾಗಿ “ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ನಾಣ್ಣುಡಿ ಅರ್ಥವನ್ನೇ ಕಳೆದುಕೊಂಡಿದೆ . ಪ್ರತಿಯೊಂದನ್ನು ಕಂತಿನ ಮೇಲೆ ಸಾಲದ ಮೇಲೆ ತೆಗೆದುಕೊಳ್ಳುತ್ತಾ ಹೋಗಿ ಒಮ್ಮೆಲೆ ಏನಾದರೂ ಆದಾಯದ ಮೂಲ ನಿಂತಾಗ ಆತ್ಮಹತ್ಯೆಗೆ ಶರಣು ಹೋಗುವಂತಹ ಪರಿಸ್ಥಿತಿ ಉದ್ಭವವಾಗುತ್ತದೆ ಇದು ಆರ್ಥಿಕ ಎಲ್ಲೆ ಮೀರಿದ ದುಷ್ಪರಿಣಾಮದ ಫಲ . “ಸಾಲ ಮಾಡಿಯಾದರೂ ತುಪ್ಪ ತಿನ್ನು” ಎನ್ನುವ ಚಾರ್ವಾಕ ನೀತಿಯ ಅನುಷ್ಠಾನ ಇಂದಿನ ಜನತೆಯ ಅದರಲ್ಲೂ ವಿಶೇಷವಾಗಿ ಯುವಜನತೆಯ ಆರ್ಥಿಕ ತಪ್ಪು ನಡವಳಿಕೆಗಳಿಗೆ ದಾರಿ ಮಾಡಿಕೊಟ್ಟಿದೆ.

ಯಾವುದೇ ರಾಷ್ಟ್ರದ, ಧರ್ಮದ, ಜನಾಂಗದ ರೀತಿನೀತಿಗಳಲ್ಲಿ ಕೆಲವೊಂದು ಸಾಂಸ್ಕೃತಿಕ ಎಲ್ಲೆಗಳು ಇರುತ್ತದೆ ಅದು ಕಾಲ ದೇಶ ಹಾಗೂ ಸಮಯಾನುಸಾರವಾಗಿ ಬದಲಾವಣೆಯಾಗುತ್ತಿರುತ್ತದೆ . ಪ್ರಸ್ತುತ ನಾವಿರುವ ಸಮಾಜದ ಸಾಂಸ್ಕೃತಿಕ ನಡವಳಿಕೆಗಳಿಗೆ ಬದ್ಧರಾಗಿ ಅನುಗುಣವಾಗಿ ನಡೆಯಬೇಕಾದುದು ನಮ್ಮ ಕರ್ತವ್ಯ ಅದನ್ನು ಮೀರಿ ಆ ಎಲ್ಲೆಯನ್ನು ದಾಟಲು ಹೋದಾಗ ಮತ್ತೆ ನಮಗೆ ಅದರ ಪರಿಣಾಮಗಳನ್ನು ಎದುರಿಸುವ ದುಃಸ್ಥಿತಿ ಎದುರಾಗುತ್ತದೆ .

ಬದುಕು ಒಂದು ಫಲಭರಿತ ಮರದಂತೆ . ಅದಕ್ಕೆ ಎಲ್ಲೆ ಎನ್ನುವ ರೀತಿ ನೀತಿಗಳ ರಿವಾಜುಗಳ ಬೇಲಿ ತುಂಬಾ ಅವಶ್ಯಕ.  ಇಲ್ಲದಿದ್ದರೆ ಕಳ್ಳಕಾಕರ ದಾರಿಹೋಕರ ಕಣ್ಣುಗಳಿಗೆ ಬಿದ್ದು ಕಲ್ಲೇಟು ತಿನ್ನುವಂತೆ ಆಗುತ್ತದೆ . ಅದಕ್ಕೆ ನಮಗೆ ವಿಧಿಸಿರುವ ಕಟ್ಟುಪಾಡುಗಳ ಜತೆಗೆ ನಮ್ಮ ಅಂತಸ್ಸಾಕ್ಷಿಗೆ ಕೆಲವೊಂದು ಎಲ್ಲೆಗಳನ್ನು ನಮಗೆ ನಾವೇ ವಿಧಿಸಿಕೊಳ್ಳಬೇಕಾಗುತ್ತದೆ . ಅದರ ಮೇರೆ ಮೀರದಂತೆ ನಡೆದಾಗ ಅಂತರಂಗಕ್ಕೆ ನಾವು ಪ್ರಾಮಾಣಿಕರಾಗಿ ಎಲ್ಲೆ ಮೀರದ ಜೀವನ ನಡೆಸಿದಾಗ ಜೀವನವು ಸಫಲ! ಸಾರ್ಥಕತೆಯ ಭಾವ !

“ಬಾನಿಗೊಂದು ಎಲ್ಲೆ ಎಲ್ಲಿದೆ ?ನಿನ್ನಾಸೆಗೆಲ್ಲಿ ಕೊನೆಯಿದೆ ” ಎಂಬ ಹಾಡೇ ಇದೆ

  ಹಾಗೆ ನಮ್ಮ ಆಸೆ ಆಕಾಂಕ್ಷೆಗಳಿಗೂ ಸಹ 1ಮಿತಿಯ, ಸಂತೃಪ್ತಿಯ, ಸಾಕೆನಿಸುವ ಭಾವದ ಎಲ್ಲೆ ನಮಗೆ ನಾವೇ ಹಾಕಿಕೊಳ್ಳಬೇಕು.  ಕಂಡದ್ದೆಲ್ಲಾ ನಮಗೆ ಬೇಕು ಎನ್ನುವ ದುರಾಸೆ ಸಲ್ಲ. ಅದನ್ನು ಮನದಿಂದ ತೊಡೆದು ಇತಿಮಿತಿಯ ಮೇರೆಯ

ಪರಿಧಿಯೊಳಗೆ ಇರಬೇಕು.  ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪರಂಪರಾನುಗತ ನಂಬಿಕೆಗಳು ಹೇಳುವುದು ಇದನ್ನೇ .

ಎಲ್ಲೆ ದಾಟದ, ಮೇರೆ ಮೀರದ ತುಂಬು ಬಾಳಿನ ಕನಸು; ಅದನ್ನು ನನಸಾಗಿಸುವ ಸೊಗಸು ನಮ್ಮದಾಗಿರಲಿ

——————————

.ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top