ಸಂಕ್ರಾಂತಿ ವಿಶೇಷ-ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

ಸುಗ್ಗಿಯ ಹಿಗ್ಗಿನ ಸಂಕ್ರಾಂತಿ

ಸೋಮಲಿಂಗ ಬೇಡರ ಆಳೂರ

ಸುಗ್ಗಿಯ ಹಿಗ್ಗನು ತುಂಬಲು ಬಂದಿದೆ
ಸಡಗರದಿಂದಲಿ ಸಂಕ್ರಾಂತಿ
ಧರೆಯಲಿ ಸಗ್ಗದ ಸಿರಿಯನು ಹೊಮ್ಮಿ
ಸಂಭ್ರಮ ಸೂಸಿದೆ ಸಂಕ್ರಾಂತಿ

ಜೋಳದ ತೆನೆಗಳ ತೂಗಲು ಹಚ್ಚಿ
ಕಳೆಯನು ತುಂಬಿದೆ ಸಂಕ್ರಾಂತಿ
ಕಬ್ಬು ಕಡಲೆ ಅವರೆಯ ಹೊಲದೊಳು
ಫಸಲನು ಹೆಚ್ಚಿದೆ ಸಂಕ್ರಾಂತಿ

ರಾಗಿ ನವಣೆ ತೊಗರೀ ಹುರಳೀ
ಫಳಫಳ ಹೊಳೆಸಿದೆ ಸಂಕ್ರಾಂತಿ
ವರ್ಷದುದ್ದಕೂ ದುಡಿದಾ ರೈತಗೆ
ಹುರುಪನು ಕೊಟ್ಟಿದೆ ಸಂಕ್ರಾಂತಿ

ರೈತರು ಸಾಕಿದ ದನಕರುಗಳಿಗೆ
ಮೇವನು ಒದಗಿದೆ ಸಂಕ್ರಾಂತಿ
ಚಳಿಯನು ತೊಲಗಿಸಿ ಬೆಚ್ಚಗೆ ಮಾಡಿ
ಚೇತನಗೊಳಿಸಿದೆ ಸಂಕ್ರಾಂತಿ

ಉತ್ತರಾಯಣ ಪುಣ್ಯ ಕಾಲದಿ
ಬಂದಿದೆ ಮತ್ತೆ ಸಂಕ್ರಾಂತಿ
ಸಂಗಮ ಸ್ಥಳದಲಿ ಪವಿತ್ರ ಸ್ನಾನ
ಮಾಡಲು ಹಚ್ಚಿದೆ ಸಂಕ್ರಾಂತಿ

ಪಾವನ ಹೊಂದಿದ ಜನರಿಗೆ ದೇವರ
ದರುಶನ ಒದಗಿದೆ ಸಂಕ್ರಾಂತಿ
ಇಷ್ಟದ ಹಾಗೆ ಹಬ್ಬವ ಮಾಡಲು
ಶುಭವನು ಕೋರಿದೆ ಸಂಕ್ರಾಂತಿ

ಎಳ್ಳು ಬೆಲ್ಲವ ಸವಿದು ಒಳ್ಳೆಯ
ಮಾತುಗಳಾಡಿರಿ ಎನ್ನುತಲಿ
ಸಕ್ಕರೆ ಅಚ್ಚು ಕಬ್ಬು ಕೊಬ್ಬರಿ
ಹಂಚಿರಿ ಎಂದಿದೆ ಸಂಕ್ರಾಂತಿ.
—————————-


Leave a Reply

Back To Top