ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಆತ್ಮಸ್ಥೈರ್ಯ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನವು ಕೂಡ ಒತ್ತಡದ ಅಲೆಗಳೊಂದಿಗೆಅತಿ ವೇಗವಾಗಿ ಚಲಿಸುವ ಗಡಿಯಾರದ ಮುಳ್ಳುಗಳಂತೆ ಓಡುತ್ತಿರುತ್ತದೆ. ಅದರಂತೆ ತಲೆಯಲ್ಲಿಯೂ ಮಾಡಬೇಕಾದ ಕರ್ತವ್ಯಗಳು ತನ್ನದೇ ಮಾರ್ಗದಲ್ಲಿ ಗಿರಕಿ ಹೊಡೆಯುತ್ತಲಿರುತ್ತವೆ. ಲಕ್ಷಗಟ್ಟಲೇ ಸಂಬಳ ಪಡೆಯುವ ವ್ಯಕ್ತಿಗೆ ಸರಿಯಾಗಿ ಸರಿಯಾದ ವೇಳೆಗೆ ಊಟ ಮಾಡಲು ನಿದ್ದೆ ಮಾಡಲು ಸಮಯವಿಲ್ಲ.ವಿದ್ಯಾರ್ಥಿಗಳ ಜೀವನವು ಯಂತ್ರದಂತೆ ಶಾಲೆ ಕಾಲೇಜು ನಂತರ ಟ್ಯೂಷನ್ ನ ಭರಾಟೆಯಲ್ಲಿ ಲೀಲಾಜಾಲವಾಗಿಸಾಗುತ್ತಿದೆ.ಕಡಿಮೆ ಅಂಕ ಪಡೆದರೆ ಭೂಮಿಯೇ ಬಾಯಿ ಬಿಟ್ಟಂತೆ ಆತ್ಮವಿಶ್ವಾಸದ ಅವಸಾನವಾದಂತೆ ವರ್ತಿಸುವ ನಮ್ಮ ಮಕ್ಕಳ ಮುಂದಿನ ಭವಿತವ್ಯದ ಭವ್ಯ ದಿನಗಳನ್ನು  ನೆನೆದರೆ ಭಯವಾಗುತ್ತದೆ. ವೇದಗಳ ಕಾಲದಲ್ಲಿ ಶಿಕ್ಷಣ ಕೇವಲಜ್ಞಾನಕ್ಕಾಗಿ ಇತ್ತು ಆದರೆ ಕಾಲ ಬದಲಾದಂತೆ ಶಿಕ್ಷಣದ ಗುರಿ ಉದ್ದೇಶಗಳು ಬದಲಾಗುತ್ತಿರುತ್ತವೆ. ಜೀವನೋಪಾಯಕ್ಕಾಗಿ ಶಿಕ್ಷಣವೆಂದಾಗಿದೆ.ತಾವು ಕೃಷಿಕರು, ಕೂಲಿಕಾರ್ಮಿಕರು ಆಗಿದ್ದರೂ ತಮ್ಮ ಮಕ್ಕಳನ್ನು ಚನ್ನಾಗಿ ಓದಿಸಬೇಕೆಂಬ ಮಹದಾಸೆಯನ್ನು ಹೊತ್ತ ಹೆತ್ತವರು ನಿಲುಕದ ನಕ್ಷತ್ರವನ್ನು ಹಿಡಿಯುವ ಛಲದ ನುಡಿಗಳನ್ನಾಡುವಾಗ ಅವರ ಮುಖದ ತೇಜಸ್ಸು ಸಾಧನೆ ದೃಢತೆಯನ್ನು ಸಾರಿಹೇಳುತ್ತದೆ.ಆದರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದ ಮಕ್ಕಳು ಸೂತ್ರವಿಲ್ಲದ ಗಾಳಿಪಟಗಳಂತೆ ತಮ್ಮದೇ ದಾರಿಯಲ್ಲಿ ಸಾಗುತ್ತಿರುತ್ತಾರೆ.

“ನೀನು ದೊಡ್ಡವನಾದ ಮೇಲೆ ಏನಾಗುತ್ತಿಯ? ಯಾವ ಉದ್ಯೋಗವನ್ನು ಇಷ್ಟ ಪಡುತ್ತೀಯ?” ಎಂದಾಗ ನಿರುತ್ತರ.ಕೆಲವರು ಮಾತ್ರ ಅದರಲ್ಲೂಹೆಚ್ಚಾಗಿ ಹುಡುಗಿಯರು ತಮ್ಮ ಗುರಿಯನ್ನು ತಿಳಿಸುತ್ತಾರೆ.

ಪರೀಕ್ಷೆ ಇದ್ದಾಗ ಮಾತ್ರ ನಿದ್ದೆಗೆಟ್ಟು ಓದುವದನ್ನು ಬಿಟ್ಟು ನಿರಂತರ ಅಧ್ಯಯನಶೀಲರಾಗುವಂತೆ ಅವರನ್ನು ಗಮನಿಸುವದು ಕೂಡ ತಮ್ಮ ಕರ್ತವ್ಯ ಎಂಬುದನ್ನು  ತಿಳಿದು ಪ್ರೋತ್ಸಾಹ ನೀಡಬೇಕಿದೆ.

ನಿರಂತರ ಪ್ರಯತ್ನ ಪಟ್ಟರೂ ಮಗುವಿನ ಅಂಕಗಳು ನಿರೀಕ್ಷೆಗಿಂತ ಕಡಿಮೆಯಾದರೆ ಮರಳಿ ಯತ್ನಿಸುವಂತೆ ಧನಾತ್ಮಕವಾಗಿ ಸ್ಪಂದಿಸಬೇಕೆ ಹೊರತು ಪ್ರತಿಷ್ಠೆಗಾಗಿ ನಿಂದಿಸಬಾರದು. ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಿದೆ.

ಇದಕ್ಕೆ ಪೂರಕವಾದ ಒಂದು ಇತಿಹಾಸದ ಘಟನೆ ನೋಡುವದಾದರೆ ಸಕಲ ಯುದ್ಧ ಕಲೆಗಳನ್ನು ಕರಗತವಾಗುವ ನಿಟ್ಟಿನಲ್ಲಿ ಶಿವಾಜಿಯ ಮಾತೆ ಜೀಜಾಬಾಯಿ ಅವನನ್ನು ಸಿದ್ದಗೊಳಿಸುತ್ತಾಳೆ.ಒಮ್ಮೆ ತಾಯಿ ಮಗ ಪಗಡೆಯಾಡುತ್ತಿರಲು ಅದರಲ್ಲಿ ಮಾತೆ ಜೀಜಾಬಾಯಿ ಗೆದ್ದು ಮಗ ಶಿವಾಜಿ ಸೋಲುತ್ತಾನೆ. ಆಗ ಶಿವಾಜಿಗೆ ತಾನು ಸೋತಿದ್ದರಿಂದ ಗೆದ್ದ ಮಾತೆಗೆ ಏನು ಬೇಕು ಎಂದು ಕೇಳಿದಾಗ ಕೈ ಮಾಡಿ ದೂರದಿ ಕಾಣುವ ರಾಯಘಡದ ಕೋಟೆಯನ್ನು ತೋರಿಸುತ್ತಾಳೆ.ಹೀಗೆ ಅವನಲ್ಲಿ ಆ ಕೋಟೆ ಗೆಲ್ಲುವ ಛಲ ಮತ್ತು ಆತ್ಮಸ್ಥೈರ್ಯವನ್ನು ತುಂಬಿದ್ದರಿಂದ ಹಿಂದೂವಿ ಸಾಮ್ರಾಜ್ಯದ ಉದಯವಾಗಿ ಇತಿಹಾಸದಲಿ ದಾಖಲೆಯ  ನಿರ್ಮಾಣವಾಯಿತು.ಅದರಂತೆ ಬಾಲಕ ನರೇಂದ್ರ ಚಿಕ್ಕವನಿದ್ದಾಗ ಟಾಂಗಾ ಗಾಡಿಯಿಂದ ಇಳಿದು ಓಡಿಬಂದು ತನ್ನ ತಾಯಿಗೆ ತನಗೂ ಟಾಂಗಾ ಓಡಿಸುವ ಚಾಲಕನ ಕೆಲಸಮಾಡುವ ಆಸೆ ಎಂದು ಹೇಳಿದಾಗ ಅವಳು ಅವನಿಗೆ ಗೋಡೆಯ ಮೇಲೆ ತೂಗು ಹಾಕಿದ ಶ್ರೀಕೃಷ್ಣನು ಸಾರಥಿಯಾಗಿಅರ್ಜುನನಿಗೆ ಭಗವದ್ಗಿತೆಯನು ಬೋಧಿಸುವ ಚಿತ್ರ ತೋರಿಸಿ ಶ್ರೀಕೃಷ್ಣನಂತೆ ಆಗು ಎಂದಿದ್ದರ ಪರಿಣಾಮದಿಂದಭಾರತದ  ಸನಾತನಸಂಸ್ಕ್ರತಿಯನ್ನು ಜಗತ್ತಿಗೆ ಪರಿಚಯಿಸಿದ ಸ್ವಾಮಿ ವಿವೇಕಾನಂದನಾಗಿ ಸನಾತನ ಸಾರಥಿಯಾಗಲು ಸಾಧ್ಯವಾಯಿತು. “ಬೆಳೆವ ಸಿರಿ ಮೊಳಕೆಯಲ್ಲಿ “ಎಂಬಂತೆ  ಮೊದಲ ಪಾಠಶಾಲೆಯಾದ ಮನೆಯಿಂದಲೆ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವಾಗಬೇಕು.ಇತ್ತೀಚಿನ ಘಟನೆಯನ್ನು ಗಮನಿಸಲಾಗಿ ಒಬ್ಬ ಪ್ರೌಢಶಾಲೆಯ ವಿದ್ಯಾರ್ಥಿನಿ ನಕಲು ಮಾಡಿದ್ದನ್ನು ಶಿಕ್ಷಕಿಯೊಬ್ಬರು  ಪ್ರಶ್ನಿಸಿದ್ದರಿಂದ ತಾಳ್ಮೆ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಸಂಗತಿ ಕರುಳ ಕಿವುಚಿದಂತಾಗುತ್ತೆ.

ಕೆಲವೊಮ್ಮೆ ಮಕ್ಕಳಲ್ಲಿ ಕಾಣುವ ಒಂಟಿತನ ಅವರ ಭವಿಷ್ಯಕ್ಕೆ ಮಾರಕ ಹಿರಿಯರ ಪ್ರೀತಿ,ವಾತ್ಸಲ್ಯ,ಕರುಣೆಗಳ ಛಾಯೆಯಲ್ಲಿಸಂತಸದ ಸವಿಯನ್ನು ಅನುಭವಿಸುವ ಭಾವಜೀವಿಗಳಾದ  ಮಕ್ಕಳು ತಂದೆತಾಯಿಗಳ ಅಗಲಿಕೆ,ದಿನಂಪ್ರತಿ ಜಗಳ ಇವುಗಳಿಂದ ಬೇಸತ್ತು ಏಕಾಂಗಿಯಾಗಿ ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದ ಅಪಕ್ವ ಮನ ಉತ್ಸಾಹವನ್ನು ಮೊಟಕುಗೊಳಿಸಿ ಕಲಿಕೆಯ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ದರ ಪ್ರತಿಫಲವಾಗಿ ಮಕ್ಕಳಲ್ಲಿ ತಾಳ್ಮೆ,ಅಧ್ಯಯನ ಶೀಲತೆ ಕಡಿಮೆಯಾಗಿ ತಂತ್ರಜ್ಞಾನ ಜಾಲದಿ ಮೇಲೇಳದ ಮನಸ್ಥಿತಿ ಎದುರಾಗಿದೆ.ನಗರದಲ್ಲಿ ತನ್ನ ಮಗನೊಂದಿಗೆ ವಾಸಿಸುತ್ತಿದ್ದ ಹಿರಿಯರೊಬ್ಬರು ತಮ್ಮ ಮೊಮ್ಮಗನೊಂದಿಗೆ ಶಾಲೆಯಿಂದ ಬಂದ ಮೇಲೆ ತಮ್ಮ ಅನುಭವಗಳನ್ನು ಹೀಗೆ ಹಂಚಿ ಕೊಂಡದ್ದಿದೆ.  “ನಮ್ಮ ಕಾಲದಲ್ಲಿ ಬಸ್ಸಿನ ವ್ಯವಸ್ಥೆ ಇರಲಿಲ್ಲ ನಾವು 5ಕಿಲೋ ಮೀಟರುಗಳಷ್ಟು ನಡೆದುಕೊಂಡು ಹೋಗಿ ಬಂದು ಪುನಃ ಗದ್ದೆಗೆ ಹೋಗಿ ಸಾಕಿದ ಆಕಳು ಎಮ್ಮೆಗಳಿಗೆ ಮೇವನ್ನು ತಂದುಹಾಕಿ  ಹಾಲು ಕರೆದು ನಾಲ್ಕಾರು ಮನೆಗಳಿಗೆ ಒಯ್ದು ಕೊಟ್ಟು ನಂತರ ಅಭ್ಯಾಸ ಮಾಡುತ್ತಿದ್ದೆವು” ಎಂದಾಗ

ಮೊಮ್ಮಗ” ನಾನು ಸ್ಕೂಲ್ ಬಸ್ನಲ್ಲಿಹೋಗಿ ಬಂದು ಬರೀ ಹೋಂ ವರ್ಕ ಮಾಡಿ ಟ್ಯೂಷನ್ ಹೋಗುವುದರಲ್ಲೆ ಸುಸ್ತಾಗುತ್ತೆ ತಾತ  ನೀವು ಅದ್ಹೇಗೆ ಇಷ್ಟು ಕೆಲಸ ಮಾಡುತ್ತಿದ್ದಿರಿ? ಅಬ್ಬಾ ನನ್ನಿಂದಾಗದು” ಎಂದು ಖಡಾಖಂಡಿತವಾಗಿ ಹೇಳುವ ಮೊಮ್ಮಗನ ತಲೆಮಾರಿನ ಕಥೆಯೇ ಗಂಭೀರವಾಗಿದೆ. ಇದನ್ನು ಗಮನಿಸಿದಾಗ ಪಾಲಕರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ  ಎಲ್ಲೋ ಒಂದು ಕಡೆ ಎಡವುತಿದ್ದಾರೆಂದೆನಿಸದೇ ಇರದು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಆತ್ಮಸ್ಥೈರ್ಯವನ್ನೇ ಆಭರಣವನ್ನಾಗಿಸುವ ಗುರುತರ ಜವಾಬ್ದಾರಿಯನ್ನು ಮೈಗೂಡಿಸುವಂತ ಕಾರ್ಯಕ್ಕೆ ಪೂರಕವಾಗಿ ಸಾಧಕರ ಸಂದರ್ಶನ, ಯಶೋಗಾಥೆಗಳನ್ನು ಮಕ್ಕಳಿಗೆ ಮನಗಾಣಿಸುವದುಅವಶ್ಯವಾಗಿದೆ. ಮಕ್ಕಳನ್ನು ಬರೀ ಪುಸ್ತಕದ ಹುಳುಗಳನ್ನಾಗಿಸದೆ ಸಮಾಜದಲ್ಲಿ ಹೊಂದಿಕೊಂಡು ಬಾಳಲು ಬೇಕಾದ ನಂಬಿಕೆ, ಕರುಣೆ ,ಪರಿಶ್ರಮ ಶೃದ್ಧೆ ಈ ಎಲ್ಲ ಮೌಲ್ಯಗಳನ್ನು ಬೆಳೆಸಬೇಕಿದೆ.ಮಾನವೀಯತೆಯ ಗುಣವಿರದ ವಿದ್ಯೆ ಎಷ್ಟಿದ್ದರೇನು? ಅದರಂತೆ ಆತ್ಮಸೊಥೈರ್ಯವೂ ತುಂಬಾಮುಖ್ಯವಾಗಿದೆ.

ಆತ್ಮಸ್ಥೈರ್ಯವಿಲ್ಲದ ವಿದ್ಯೆ ನಿರರ್ಥಕ.”ಧೈರ್ಯಂ ಸರ್ವತ್ರ ಸಾಧನಂ”ಎಂಬ ಮಾತು ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬಂತೆ ಪರೀಕ್ಷೆಯಲ್ಲಿ ಸೋತರೂ ನಿಜಜೀವನದಲ್ಲಿ ಗೆಲ್ಲುವ  ಬದುಕ ನಡೆಸುವ ದಾರಿದೀಪವಾಗುತ್ತದೆ ಅಲ್ಲವೇ?


ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

4 thoughts on “

  1. ತುಂಬಾ ಚೆನ್ನಾಗಿ ಲೇಕನ ಮೂಡಿ ಬಂದಿದೆ ಟೀಚರ್

Leave a Reply

Back To Top