ಕಾವ್ಯ ಸಂಗಾತಿ
ಮಾತಿಗೂ ಅರ್ಥವಿಲ್ಲ
ಡಾ. ಪುಷ್ಪಾ ಶಲವಡಿಮಠ


ಶಬ್ದಗಳು ಉಸಿರುಕಟ್ಟಿ ಸಾಯುತಿವೆ
ಉಸಿರು ನೀಡಬೇಕಿದೆ.
ನಿನ್ನೆದೆಯ ಮೇಲೆ ತಲೆಯಿಟ್ಟು
ಶಬ್ದಗಳಿಗೆ ಮುಕ್ತಿ ನೀಡಬೇಕಿದೆ.
ಕಾಲ ಕಾಯುವುದಿಲ್ಲ ಬದುಕು ನಿಲ್ಲುವುದಿಲ್ಲ
ಬಿಚ್ಚಿಕೊಳ್ಳಬೇಕಿದೆ ಎಲ್ಲವನೂ
ಪ್ರತಿ ಕ್ಷಣವೂ ಭಾರವಾಗುತಿದೆ
ಖಾಲಿ ಮಾಡದೇ ತುಂಬಿಕೊಳ್ಳುವುದಾದರೂ ಹೇಗೆ?
ಮೌನವಾಗಿಯೇ ನೀನು ಉಳಿಯುವುದಾದರೆ
ಮಾತುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ.
ನೀನು ನಾನು ಮೌನವಾದರೆ
ಒಳಗೊಳಗೇ ಭಾವಗಳು ಸಾಯುತಿವೆ
ಬದುಕುವುದೇ ನಿಜವಾದರೆ
ಸತ್ತು ಬದುಕುವುದೇಕೆ?
ನಿನ್ನ ಈ ಮೌನಕೆ ಅರ್ಥವಿಲ್ಲ
ಈಗ ನನ್ನ ಮಾತಿಗೂ ಅರ್ಥವಿಲ್ಲ.